'ಲೋಹಿಯಾ ಮತ್ತು ಭಗತ್ ಸಿಂಗ್’ – ಜಿ ಪಿ ಬಸವರಾಜು

 

ಜಿ ಪಿ ಬಸವರಾಜು

ಮಾರ್ಚ್  23 ಭಾರತೀಯ ಮನಸ್ಸುಗಳಿಗೆ ಬಹುದೊಡ್ಡ ದಿನ. ಮಹಾನ್ ಮಾನವತಾವಾದಿ, ಸಮಾಜವಾದಿ ಚಿಂತಕ ರಾಮ ಮನೋಹರ ಲೋಹಿಯಾ ಅವರು ಹುಟ್ಟಿದ್ದು ಮಾಚ್ 23ರಂದು. ಹುತಾತ್ಮ ಭಗತ್ಸಿಂಗ್ ಗಲ್ಲಿಗೇರಿದ್ದು ಮಾರ್ಚ್ 23 ರಂದು. ಈ ಇಬ್ಬರೂ ಮುಕ್ತ ಸಮಾಜಕ್ಕಾಗಿ ಹಂಬಲಿಸಿದವರು. ಎಲ್ಲ ಗುಲಾಮಗಿರಿಗಳನ್ನೂ ತೆಗೆದೆಸೆದು ಮನುಷ್ಯ ಮುಕ್ತವಾಗಿ ಬದುಕಬೇಕೆಂದು ಬಯಸಿ, ಅದಕ್ಕಾಗಿಯೇ ತಮ್ಮ ಬದುಕನ್ನು ಒಂದು ಹೋರಾಟವಾಗಿ ಪರಿವರ್ತಿಸಿದ ಮಹಾನ್ ಹೋರಾಟಗಾರರು ಇವರು. ಭಗತ್ಸಿಂಗ್ ಲೋಹಿಯಾ ಅವರಿಗಿಂತ ಮೂರು ವರ್ಷ ದೊಡ್ಡವನು. ಕೇವಲ 24 ವರ್ಷಗಳ ಕಾಲ ಬದುಕಿದ್ದ ಭಗತ್ಸಿಂಗ್, ಬ್ರಿಟಿಷರ ಆಳ್ವಿಕೆಯನ್ನು ಕಿತ್ತೊಗೆಯುವ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಅಗತ್ಯವಾದಲ್ಲಿ ಕನಿಷ್ಠ ಪ್ರಮಾಣದ ಹಿಂಸೆಯನ್ನು ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂಬ ಮಾರ್ಗವನ್ನು ಒಪ್ಪಿಕೊಂಡಿದ್ದ ಭಗತ್ಸಿಂಗ್ ತನ್ನ ನಂಬಿಕೆಗೆ ನಿಷ್ಠನಾಗಿದ್ದ. ಅದಕ್ಕಾಗಿಯೇ ಆತ ಗಲ್ಲಿಗೇರಿ ಇತಿಹಾಸದಲ್ಲಿ ಉಳಿದು ಹೋದ. ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಎಂಬುದು ಕನಸಾಗಿದ್ದ ದಿನಗಳಲ್ಲಿಯೇ ಆತ ಗಲ್ಲಿಗೇರಬೇಕಾಯಿತು (1931ರ ಮಾರ್ಚ್ 23). ಈ ತರುಣನ ತ್ಯಾಗ ಆಗ ಬ್ರಿಟಿಷ್ ಮುಷ್ಠಿಯಲ್ಲಿದ್ದ ಭಾರತದಲ್ಲಿ ಎಂಥ ಅಲೆಗಳನ್ನು ಏಳಿಸಿತು ಎಂದರೆ ಸೂರ್ಯಮುಳುಗದ ಸಾಮ್ರಾಜ್ಯವೂ ಒಂದು ಕ್ಷಣ ಬೆಚ್ಚಿತು. ಭಾರತೀಯ ತರುಣರಿಗೆ ಈ ತ್ಯಾಗ ಆದರ್ಶವಾಗಿ ಕಾಣಿಸಿತು. ರಾಷ್ಟ್ರಪ್ರೇಮ ಎಂದರೆ ಇದೇ ಎನ್ನಿಸಿತು. ಹೋರಾಟದ ಕೆಚ್ಚನ್ನು, ಸ್ವಾತಂತ್ರ್ಯದ ಹುಚ್ಚನ್ನು ಹಬ್ಬಿಸಿದ ಭಗತ್ಸಿಂಗ್ ಬದುಕಿಗೆ ಹೊಸ ಅರ್ಥವನ್ನು ತಂದುಕೊಡುವವನಂತೆ ಕಾಣಿಸಿದ.

ರಾಷ್ಟ್ರಪ್ರೇಮದ ವಿಚಾರದಲ್ಲಿ ಲೋಹಿಯಾ ಅವರ ಚಿಂತನೆ ಸಣ್ಣದೇನೂ ಅಲ್ಲ. ಅವರು ಮಹಾನ್ ರಾಷ್ಟ್ರೀಯವಾದಿ; ಮಹಾನ್ ಮಾನವತಾವಾದಿ. ಅನೇಕ ಬಂಧನಗಳಿಂದ ಮನುಷ್ಯನ ಮನಸ್ಸು ಬಿಡುಗಡೆ ಪಡೆಯಬೇಕೆಂದು ಚಿಂತಿಸಿದವರು ಲೋಹಿಯಾ. ಗುಲಾಮಗಿರಿ ಎನ್ನುವುದು ಕೇವಲ ಬ್ರಿಟಿಷರ ಆಳ್ವಿಕೆಯಲ್ಲಿ ಮಾತ್ರ ಇಲ್ಲ, ಅನೇಕ ಮುಖಗಳಲ್ಲಿ ಅದು ನಮ್ಮನ್ನು ಸುತ್ತಿಕೊಂಡಿದೆ ಎಂಬುದನ್ನು ಲೋಹಿಯಾ ಚಿಂತನೆ ತೋರಿಸಿಕೊಡುತ್ತದೆ. ಬ್ರಿಟಿಷರು ಭಾರತವನ್ನು ಬಿಟ್ಟುಹೋದರೂ, ಅವರ ಭಾಷೆ, ಭಾಷೆಯ ಮೂಲಕ ಅವರು ಹೇರಿದ ಮೇಲರಿಮೆ, ಆಡಳಿತದ ಮೂಲಕ ಬಿಟ್ಟುಹೋದ ಅಧಿಕಾರ ಶಾಹಿಯ ದರ್ಪ-ಇವೆಲ್ಲವೂ ಭಾರತೀಯರನ್ನು ಗುಲಾಮಗಿರಿಗೆ ತಳ್ಳುತ್ತಿವೆ ಎಂಬುದನ್ನು ಲೋಹಿಯಾ ತೋರಿಸಿಕೊಟ್ಟರು. ಭಾರತದಂಥ ದೇಶದಲ್ಲಿ ಸಾವಿರಾರು ವರ್ಷಗಳಿಂದ ಉಳಿದುಬಂದ ಜಾತಿಪದ್ಧತಿ ಹೇಗೆ ಮನುಷ್ಯರ ಸಮಾನತೆಗೆ ಅಡ್ಡಿಯಾಗಿ ಬಂಡೆಗಲ್ಲಿನಂತೆ ಕುಳಿತಿದೆ ಎಂಬುದೂ ಅವರ ಚಿಂತನೆಯ ಬೆಳಕಿನಲ್ಲಿ ಕಂಡ ಸತ್ಯ. ಮಾಕ್ಸರ್್ ಹೇಳಿದ ವರ್ಗ ಎಂಬುದು ಭಾರತದಲ್ಲಿ ಜಾತಿಯಾಗಿ ಬದಲಾಗುತ್ತದೆ; ಜಾತಿ ಮತ್ತು ವರ್ಗಗಳು ಒಂದರೊಳಗೊಂದು ತಳುಕು ಹಾಕಿಕೊಂಡು ರೂಪ ಬದಲಾಯಿಸುತ್ತವೆ; ಮಾನವತಾವಾದಿಗಳು ಇದನ್ನು ಗುರುತಿಸಿಕೊಳ್ಳಬೇಕಾದದ್ದು ಎಷ್ಟು ಮುಖ್ಯ ಎಂಬುದನ್ನೂ ಲೋಹಿಯಾ ಹೇಳಿದರು. ಮನುಷ್ಯ ಮನುಷ್ಯರ ಹೃದಯಗಳನ್ನು ಬೆಸೆಯಬೇಕಾದ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾದ ತುತರ್ಿನಲ್ಲಿರುವ ಮನುಷ್ಯರಿಗೆ ರಾಷ್ಟ್ರದ ಗಡಿಗಳೂ ಹೇಗೆ ಅಡ್ಡಿಯನ್ನುಂಟು ಮಾಡುತ್ತವೆ; ಗಡಿಗಳನ್ನೇ ಅಳಿಸಿಹಾಕಿ ಬದುಕುವುದನ್ನು ಕಲಿತರೆ ಎಷ್ಟೊಂದು ಹಿತ ಎನ್ನುವುದು ಲೋಹಿಯಾ ಚಿಂತನೆಯ ಇನ್ನೊಂದು ಮಗ್ಗುಲು. ನಮ್ಮ ಇತಿಹಾಸವನ್ನು ನೋಡಬೇಕಾದ ಕ್ರಮ, ಪುರಾಣಗಳನ್ನು ಗ್ರಹಿಸಬೇಕಾದ ರೀತಿ, ಶಿಕ್ಷಣ, ಆಡಳಿತ, ನ್ಯಾಯಾಂಗಗಳಲ್ಲಿ ನಾವು ಸ್ಥಾಪಿಸಬೇಕಾಗಿರುವ ಭಾಷೆಯನ್ನು ಕಟ್ಟಿಕೊಳ್ಳುವ ಬಗೆ ಇತ್ಯಾದಿ ಹಲವಾರು ಸಂಗತಿಗಳನ್ನು ತಮ್ಮ ಗಂಭೀರ ಚಿಂತನೆಯಲ್ಲಿ ಪರೀಕ್ಷಿಸಿದವರು ಲೋಹಿಯಾ. ಗಾಂಧಿಗೆ ಹತ್ತಿರದವರಂತೆ, ದೂರದವರಂತೆ, ಸಖನಂತೆ, ವಿರೋಧಿಯಂತೆ ಕಾಣಿಸುತ್ತಲೇ ಲೋಹಿಯಾ, ಗಾಂಧೀ ಚಿಂತನೆಯನ್ನು ಬೆಳಸಿದರು. ಅದಕ್ಕೆ ಹೊಸ ಚಲನೆಯನ್ನು ನೀಡಿದರು. ಒಂದು ಕಾಲಕ್ಕೆ ನೆಹರೂ ಅವರನ್ನು ಅಭಿಮಾನದಿಂದ ನೋಡುತ್ತಿದ್ದ ಲೋಹಿಯಾ, ಮುಂದೆ ನೆಹರೂ ಅವರ ಕಡು ವಿರೋಧಿಯಾದರು. ಈ ನೆಹರೂ ಚಿಂತನೆ ಭಾರತವನ್ನು ಮುನ್ನಡೆಸುವ ಬದಲು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದು ಸಾರಿದರು. ಶೂದ್ರ-ಬ್ರಾಹ್ಮಣ ಎನ್ನುವುದು ಈ ದೇಶಕ್ಕಂಟಿದ ಬಹುದೊಡ್ಡ ರೋಗ ಎನ್ನುವುದನ್ನು ಕಂಡುಕೊಂಡ ಲೋಹಿಯಾ ಬ್ಯಾಹ್ಮಣ್ಯದ ವಿರುದ್ಧ ದೊಡ್ಡ ಸಮರವನ್ನೇ ಸಾರಿದರು. ಲೋಹಿಯಾ ರೂಪಿಸಿದ ಈ ಚಿಂತನೆ ಬಹುದೊಡ್ಡ ಚಿಂತನೆಯಾಗಿ ಭಾರತೀಯ ಮನಸ್ಸುಗಳನ್ನು ಬಹುಕಾಲ ಆವರಿಸಿತು. ಈಗಲೂ ಆ ಚಿಂತನೆಯ ಸಣ್ಣ ಸಣ್ಣ ಅಲೆಗಳು ದಡಕ್ಕಪ್ಪಳಿಸುತ್ತಿರುವುದನ್ನು ಕಾಣಬಹುದು.

ಭಗತ್ ಚಿಂತನೆಗಳು ರೂಪ ಪಡೆಯುವ ಮುನ್ನವೇ ಆತ ಗಲ್ಲಿಗೇರಬೇಕಾಯಿತು. ಕೇವಲ 24 ವರ್ಷಗಳ ಬದುಕು ಎಂದರೆ ಎಷ್ಟು ಚಿಕ್ಕ ಕಾಲಾವಧಿ. ತನ್ನ ಧೀರ, ದಿಟ್ಟ ನಡೆಯಿಂದ ಆತ ಚರಿತ್ರೆಯಲ್ಲಿ ಉಳಿದು ಹೋದ. ಏರು ಜವ್ವನ ಸಹಜವಾಗಿಯೇ ಪ್ರತೀಕಾರಕ್ಕೆ ಹಾತೊರೆಯುತ್ತದೆ. ತನ್ನ 12ನೇ ವಯಸ್ಸಿನಲ್ಲಿಯೇ ಭಗತ್ ಜಲಿಯನ್ವಾಲಾ ಬಾಗ್ಗೆ ಹೋಗಿಬಂದಿದ್ದ. ಅಲ್ಲಿನ ಮಣ್ಣನ್ನು ಬಹಳ ಕಾಲ ತನ್ನ ಜೇಬಿನಲ್ಲಿಯೇ ಇರಿಸಿಕೊಂಡಿದ್ದ. ನೂರಾರು ಜನ ಅಮಾಯಕರನ್ನು ಗುಂಡಿಕ್ಕಿ ಕೊಂದ ಬ್ರಿಟಿಷರ ವಿರುದ್ಧ ಅವನ ಮನಸ್ಸು ಕುದಿಯುತ್ತಿತ್ತು. ಸೈಮನ್ ಕಮೀಷನ್ ಸದಸ್ಯರು ಲಾಹೋರಿಗೆ ಬಂದಾಗ ನಡೆದ ದೊಡ್ಡ ಪ್ರತಿಭಟನೆಯಲ್ಲಿ ಭಗತ್ ಭಾಗವಹಿಸಿದ್ದ. ಅಲ್ಲಿ ಲಾಲಾ ಲಜಪತರಾಯ್ ಅವರನ್ನು ಪೊಲೀಸರು ಅಮಾನುಷವಾಗಿ, ರಕ್ತ ಕಾರುವಂತೆ ಹೊಡೆದ ರೀತಿ ಅವನ ಎದೆಯೊಳಗಿನ ಕೋಪದ ಜ್ವಾಲೆಯನ್ನು ಹೆಚ್ಚುಮಾಡಿತ್ತು. ಬ್ರಿಟಿಷ್ ಪೊಲೀಸ್ ಅಧಿಕಾರಿ ಸ್ಯಾಂಡಸರ್್ ಸ್ವತಃ ಲಾಲಾ ಲಜಪತರಾಯ್ ಅವರನ್ನು ಭೀಕರವಾಗಿ ಥಳಿಸಿದ್ದನ್ನು ಭಗತ್ ನೋಡಿದ್ದ. ಅವನ ಕ್ರಾಂತಿಕಾರಿ ಪಕ್ಷ ಇದಕ್ಕೆ ಪ್ರತೀಕಾರವನ್ನು ತೆಗೆದುಕೊಳ್ಳಲು ನಿರ್ಧರಿಸಿದಾಗ ಸ್ಯಾಂಡಸರ್್ಗೆ ಗುಂಡಿಕ್ಕುವ ನಿರ್ಣಯ ಮಾಡಲಾಯಿತು. ಈ ಕೆಲಸವನ್ನು ಮೂವರಿಗೆ ಒಪ್ಪಿಸಲಾಯಿತು. ಅದರಲ್ಲಿ ಭಗತ್ಸಿಂಗ್ ಒಬ್ಬ. ಭಗತ್ ಇದನ್ನು ಪಕ್ಷ ತನಗೊಪ್ಪಿಸಿದ ಕೆಲಸ ಎಂದು ನಿಷ್ಠೆಯಿಂದ, ಶ್ರದ್ಧೆಯಿಂದ ಮಾಡಿದ. ತನ್ನ ಪ್ರಾಣವನ್ನು ಫಣವಾಗಿ ಒಡ್ಡಲೂ ಆತ ಹಿಂದುಮುಂದು ನೋಡಲಿಲ್ಲ.
ಭಗತ್ ಭಾಗವಹಿಸಿದ ಇನ್ನೊಂದು ಸಂದರ್ಭವೆಂದರೆ ಅಸೆಂಬ್ಲಿ ಹಾಲ್ನಲ್ಲಿ ಬಾಂಬನ್ನು ಸಿಡಿಸಿದ್ದು. ‘ಕಿವುಡರಿಗೆ ಕೇಳಬೇಕಾದರೆ ದೊಡ್ಡ ಸದ್ದನ್ನೇ ಮಾಡಬೇಕಾಗುತ್ತದೆ’ ಎಂಬ ನಂಬಿಕೆಯಲ್ಲಿ ಈ ಬಾಂಬನ್ನು ಕ್ರಾಂತಿಕಾರಿಗಳು ಸಿಡಿಸಿದರು. ಯಾರೊಬ್ಬರೂ ಕುಳಿತಿರದ ಜಾಗವನ್ನು ನೋಡಿ, ಎಚ್ಚರಿಕೆಯಿಂದ ಬಾಂಬನ್ನು ಸಿಡಿಸಿದ್ದರೆಂಬುದು ಅವರ ಉದ್ದೇಶವನ್ನು ನಿಚ್ಚಳವಾಗಿ ಕಾಣಿಸುವಂತಿತ್ತು. ಜೀವಗಳನ್ನು ಬಲಿಗೊಳ್ಳದೆ, ಹಿಂಸೆಗೆ ದಾರಿಮಾಡದೆ, ಆಳುವವರ ಗಮನವನ್ನು ಸೆಳೆಯುವುದು ಮತ್ತು ಈ ಸನ್ನಿವೇಶವನ್ನು ಬಳಸಿಕೊಂಡು, ಕರಪತ್ರವನ್ನು ತೂರಿ ತಮ್ಮ ಕ್ರಾಂತಿಕಾರಿ ಪಕ್ಷದ ಉದ್ದೇಶವನ್ನು ಜನರಿಗೆ ತಿಳಿಸುವುದು ಕ್ರಾಂತಿಕಾರಿಗಳ ಕಾರ್ಯಸೂಚಿಯಾಗಿತ್ತು. ದತ್ ಮತ್ತು ಭಗತ್ ಈ ಕಾರ್ಯವನ್ನು ಮಾಡಿ ಮುಗಿಸಿ, ಅಲ್ಲಿಯೇ ನಿಂತಿದ್ದರು. ತಪ್ಪಿಸಿಕೊಳ್ಳುವ ಅವಕಾಶವಿದ್ದರೂ, ಅವರು ಅದಕ್ಕೆ ಮುಂದಾಗದೆ, ತಮ್ಮನ್ನು ಬಂಧಿಸುವಂತೆ ಪೊಲೀಸರಿಗೆ ವಿನಂತಿಸಿದರು. ತಮ್ಮ ಬಳಿ ಶಸ್ತ್ರಾಸ್ತ್ರಗಳಿಲ್ಲ ಎಂಬುದನ್ನೂ ಅವರು ಪೊಲೀಸರಿಗೆ ಹೇಳಬೇಕಾಯಿತು.
ಭಗತ್ಸಿಂಗ್ ಕಿರಿಯ ವಯಸ್ಸಿನಲ್ಲಿಯೇ ಕ್ರಾಂತಿಕಾರಿ ಮಾರ್ಗದತ್ತ ಆಕಷರ್ಿತನಾದವನು. ಯೂರೋಪಿನ ಕ್ರಾಂತಿಕಾರಿ ಚಳವಳಿಗಳನ್ನು ಆತ ಶ್ರದ್ಧೆಯಿಂದ ಓದಿ, ತಿಳಿದುಕೊಂಡಿದ್ದ. ಅರಾಜಕವಾದ ಮತ್ತು ಮಾರ್ಕ್ಸ್ ಸಿದ್ಧಾಂತಗಳನ್ನು ಆತ ಅಧ್ಯಯನ ಮಾಡಿದ್ದ. ಮಾಕ್ಸರ್್, ಲೆನಿನ್, ಟ್ರಾಟ್ಸ್ಕಿ, ಬಕುನಿನ್, ಬಟ್ರ್ರಂಡ್ ರಸೆಲ್, ಏಂಗೆಲ್ಸ್, ಅರಿಸ್ಟಾಟಲ್, ಪ್ಲೆಟೊ ಮೊದಲಾದವರ ಚಿಂತನೆಗಳಲ್ಲದೆ ಹಲವರ ಕಾವ್ಯವನ್ನೂ ಆತ ಇಷ್ಟಪಡುತ್ತಿದ್ದ. ಭಗತ್ನ ಓದಿನ ದಾಹಕ್ಕೆ ಪುಸ್ತಕಗಳನ್ನು ಒದಗಿಸುವುದೇ ದೊಡ್ಡ ಸಮಸ್ಯೆಯಾದದ್ದೂ ಇದೆ.
ಭಗತ್ ನಿರೀಶ್ವರವಾದಿಯಾಗಿ ರೂಪಗೊಂಡದ್ದು ಕೂಡಾ ಕುತೂಹಲದ ಸಂಗತಿಯೇ. ಭಗತ್ನ ತಂದೆ ಧರ್ಮದಲ್ಲಿ ಆಳವಾದ ನಂಬಿಕೆ ಇಟ್ಟವರು. ಅಜ್ಜ ನಂಬಿದ್ದು ದಯಾನಂದ ಸರಸ್ವತಿ ಅವರ ಆರ್ಯ ಸಮಾಜದ ತತ್ವಗಳನ್ನು. ಬಾಲ್ಯದಲ್ಲಿ ಪ್ರಾರ್ಥನೆ, ಗಾಯತ್ರಿ ಮಂತ್ರಗಳ ಮಡಿಲಲ್ಲೇ ಬೆಳೆದ ಭಗತ್, ಓದಿನ ನೆರವಿನಿಂದ ವೈಚಾರಿಕತೆಯತ್ತ ಹೊರಳಿದ. ದೇವರ ಅಸ್ತಿತ್ವವೂ ಸೇರಿದಂತೆ ಪರಂಪರಾಗತ ನಂಬಿಕೆಗಳನ್ನು ಪ್ರಶ್ನೆಮಾಡಿದ. ಅನೇಕ ಪೊಳ್ಳುತನಗಳು ಬಯಲಾದವು.
ಭಾರತವನ್ನು ಧರ್ಮಗಳ ಆಧಾರದ ಮೇಲೆ ಒಡೆಯುವುದನ್ನು ಭಗತ್ ಎಂದೂ ಒಪ್ಪಲಿಲ್ಲ. ಈ ಕಾರಣಕ್ಕಾಗಿಯೇ ಆತ ಲಾಲಾ ಲಜಪತರಾಯ್ ಅವರ ವಿಚಾರಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದ. ಹಿಂದೂ ಮುಸ್ಲಿಮರು ಸೋದರರಂತೆ ಬಾಳಿ ಬದುಕುತ್ತಿದ್ದುದನ್ನು ಆತ ಅನುಭವದಿಂದ ಕಂಡುಕೊಂಡಿದ್ದ. ಭಾರತ ಅಖಂಡವಾಗಿಯೇ ಉಳಿಯಬೇಕು, ಸ್ವತಂತ್ರ ರಾಷ್ಟ್ರವಾಗಿ ತಲೆ ಎತ್ತಬೇಕು ಎಂಬುದು ಅವನ ಕನಸಾಗಿತ್ತು. ಭಾರತ ಸ್ವತಂತ್ರವಾಯಿತು; ಆದರೆ ದೇಶ ತುಂಡಾಯಿತು.
 

‍ಲೇಖಕರು G

March 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. NS Shankar

    ಅಷ್ಟೇ ಅಲ್ಲ, ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈಗಳ ಜನ್ಮದಿನವೂ ಮಾರ್ಚಿ 23. ಜೊತೆಗೆ ಜಗತ್ತಿನ ಸರ್ವಶ್ರೇಷ್ಠ ಚಿತ್ರನಿರ್ದೇಶಕರಲ್ಲೊಬ್ಬರಾದ ಅಕಿರ ಕುರೊಸವ ಹುಟ್ಟಿದ್ದೂ ಮಾರ್ಚಿ 23ರಂದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: