ಅಹವಿ ಎಂದರೆ ಜಿಂಕೆಯಂತೆ!
ಅಹವಿ ಎಂದರೆ ಜೀವನೋತ್ಸಾಹದ ಸಂಕೇತ.
ಬದುಕಿನ ಎಲ್ಲ ಸಂದಿಗೊಂದಿಗಳಲ್ಲೂ ಅಡ್ಡಾಡಬಯಸುವ, ಎಲ್ಲವನ್ನೂ ಮಗು ಬೆರಗಿನಿಂದ ನೋಡುವ ಅಹವಿ ಇನ್ನು ಮುಂದೆ ಕಂಡದ್ದನ್ನೆಲ್ಲ ನಿಮ್ಮ ಮುಂದೆ ಸುರಿಯುತ್ತಾಳೆ …
ಬಿ ವಿ ಭಾರತಿ
ಮದುವೆಯಾಗಿ 25 ವರ್ಷಗಳೇ ಕಳೆದಿವೆ. ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಸಂಸಾರ ಸಾಗುತ್ತಿದೆ .. ಎಲ್ಲ ಸಂಸಾರದ ಹಾಗೆ…ಮೂರಕ್ಕಿಳಿಯದೇ, ಆರಕ್ಕೇರದೇ. ಅವಳು ಕೆಲಸಕ್ಕೆ ಹೋಗುತ್ತಾಳೆ, ಬರುತ್ತಾಳೆ. ಬದುಕು ಸುಮ್ಮನೆ ತಣ್ಣಗೆ ಹಾವಿನ ಹಾಗೆ ಹರಿಯುತ್ತದೆ … ಹಾಗಿರುವ ದಿನಗಳಲ್ಲೇ ಅವಳಿಂದ ಒಂದು ಫೋನ್. ಅವಳ ದನಿ ಕೇಳುವಾಗಲೇ ಅದರಲ್ಲಿನ ಸಂತೋಷ ಗೊತ್ತಾಗುತ್ತಿತ್ತು. ಅವಳು ಸಂತೋಷ ಅದುಮಿಡುವ ಯಾವ ಪ್ರಯತ್ನ ಕೂಡ ನಡೆಸದೆ ಬಡಬಡಿಸುತ್ತಿದ್ದಳು ‘ಮೊತ್ತ ಮೊದಲ ಬಾರಿಗೆ ನನ್ನ ಎದೆಯಲ್ಲಿ ಪ್ರೇಮ ಅಂತ ಹುಟ್ಟು ಹಾಕಿದವನು ಅವನು. ಆಗ ನಾನು ಕಾಲೇಜಿನಲ್ಲಿದ್ದೆ. ಎಷ್ಟೊಂದು ವರ್ಷಗಳು ಕಳೆದುಹೋಗಿವೆ ಈ ಮಧ್ಯದಲ್ಲಿ. ಅವನನ್ನು ಈಗಲೂ ಮನಸ್ಸು ಹುಡುಕುತ್ತಲೇ ಇತ್ತು. ಎಷ್ಟೆಲ್ಲಾ ಪ್ರಯತ್ನ ಮಾಡಿಬಿಟ್ಟಿದ್ದೆ ಗೊತ್ತಾ ಅವನೆಲ್ಲಿದ್ದಾನೆ ಅಂತ ಹುಡುಕೋದಿಕ್ಕೆ? ಒಂದೊಂದು ಸಲ ಅನ್ನಿಸ್ತಿತ್ತು ಅದು ನಿಜಕ್ಕೂ ಪ್ರೇಮವೋ ಅಥವಾ ಸುಮ್ಮನೆ ಕ್ರಷ್ ಆಗಿತ್ತೋ ಅಂತ. ಕ್ರಷ್ ಆಗಿದ್ದರೆ ಇಷ್ಟೆಲ್ಲ ವರ್ಷ ಯಾಕೆ ಅವ ನೆನಪಿನಲ್ಲಿರ್ತಿದ್ದ ಅಲ್ಲವಾ? ಮೊನ್ನೆ ಮೊನ್ನೆ ಅಚಾನಕ್ ಅವ ಎಲ್ಲಿದ್ದಾನೆ ಅನ್ನೋದು ತಿಳಿಯಿತು .. ಅವನ ಫೋನ್ ನಂಬರ್ ಕೂಡಾ ಸಿಕ್ಕಿದೆ. ಅವನ ಜೊತೆ ಮಾತಾಡಲಾ, ಬೇಡವಾ ಅಂತ ದ್ವಂದ್ವ ಮನಸ್ಸಿಗೆ. ಏನು ಮಾಡಲಿ ಅಂತಲೇ ತೋಚುತ್ತಿಲ್ಲ. ಅವ ನಾನು ಯಾರು ಅಂತ ನೆನಪಾಗದೇ ಸ್ನಬ್ ಮಾಡಿದರೆ? ಆಗ ಇನ್ನೂ ಹರ್ಟ್ ಆಗ್ತೀನೋ ಏನೋ …’ ಒಬ್ಬಳೇ ಹೇಳಿಕೊಳ್ತಿದ್ದಳು ಅವಳಿಗೆ ಅವಳೇ ಮಾತಾಡಿಕೊಳ್ತಿದ್ದಾಳೋ ಅನ್ನುವ ಥರ. ಅದಾದ ಮೇಲೆ ಅಳೆದೂ, ಸುರಿದೂ ನಡುಗುವ ಕೈಗಳಿಂದ ಅವನ ನಂಬರ್ ಒತ್ತಿ ಬಿಟ್ಟಿದ್ದಳು. ಅವನು ಸಿಕ್ಕಿಯೂ ಬಿಟ್ಟಿದ್ದ! ಮೊದಲ ದಿನ ಅವ ‘ಹೌದಾ? ನೀನು ಯಾರೋ ನನಗೆ ನೆನಪಿಲ್ಲ’ ಅಂತ ತಣ್ಣಗೆ ಮಾತಾಡಿದಾಗ ತುಂಬ ಗಲಿಬಿಲಿಯಾಗಿದ್ದಳು. ‘ಥೂ ಯಾಕಾದರೂ ಅವನನ್ನು ಮಾತಾಡಿಸಿದೆನೋ. ಹಳೆಯದರ ನೆನಪೇ ಚಂದವಿತ್ತು …’ಅಂತ ಹಳಹಳಿಸಿದ್ದಳು. ಆಮೇಲೆ ಮರುದಿನ ಅವನದ್ದೊಂದು ಗುಡ್ ಮಾರ್ನಿಂಗ್ ಮೊಬೈಲಿಗೆ ಬಂದು ಕೂತಾಗ ಜಗತ್ತು ಬೆಳ್ಳನೆ ಬೆಳಕಾದ ಅನಿಸಿಕೆಯಲ್ಲಿ ಮತ್ತೆ ನನಗೆ ಫೋನ್ ಹಚ್ಚಿದ್ದಳು. ಅವನಿಗೆ ಕೂಡಾ ಯಾವುದೂ ಮರೆತಿರಲಿಲ್ಲ. ಯಾಕೆ ಹಾಗಂದನೋ ಅನ್ನೋದಿಕ್ಕೆ ನಮ್ಮ ನಮ್ಮದೇ ವ್ಯಾಖ್ಯೆ ಕೊಟ್ಟುಕೊಂಡೆವು. ಅದಾದಮೇಲೆ ಅವರಿಬ್ಬರೂ ಫೋನಿನಲ್ಲಿ ತುಂಬ ಹರಟುತ್ತಾರೆ ಸಂಬಂಧಕ್ಕೊಂದು ಹೆಸರು ಇಡದೇ ಕೂಡಾ. ಅವನೊಡನೆ ಮಾತಾಡುವಾಗ ನೆನ್ನೆ ಮೊನ್ನೆ ಲಂಗದ ನೆರಿಗೆ ಸರಿಮಾಡಿಕೊಳ್ಳುತ್ತ ನಿಂತಿದ್ದಳಲ್ಲಾ, ಆ ಹದಿಹರೆಯದ ಹೆಣ್ಣಾಗುತ್ತಾಳೆ … ನಾನು ಅವಳ ಸಂಭ್ರಮಕ್ಕೆ ಮೂಕ ಸಾಕ್ಷಿ …

ಅವರಿಬ್ಬರದ್ದೂ ಪ್ರೇಮವಿವಾಹ. ಮದುವೆ ಆದಾಗ ತುಂಬ ಪ್ರೀತಿಯಲ್ಲಿ ಬಿದ್ದಿದ್ದರು. ಆಮೇಲೆ ಅವನು ಇದ್ದಬದ್ದ ಹಣವನ್ನು ಯಾವ್ಯಾವುದೋ ಬಿಸಿನೆಸ್ ಅಂತ ಹಾಕಿಟ್ಟ. ಕೂಡಿಸಿದ್ದನ್ನೆಲ್ಲ ಕಳೆದ. ಅವಳು ಆಣೆ ಪ್ರಮಾಣ ಮಾಡಿಸಿಕೊಂಡಳು ಇಂಥದ್ದಕ್ಕೆಲ್ಲ ಇನ್ನು ಮುಂದೆ ಕೈ ಹಾಕುವುದಿಲ್ಲ ಅಂತ. ಅವನೂ ಶಿಸ್ತಾಗಿ ಆಣೆ ಇಟ್ಟ. ಆಮೇಲೆ ಇನ್ಯಾವತ್ತೋ ಮತ್ತೆ ತಲೆಯ ಮೇಲೆ ಕೈ ಹೊತ್ತು ಕೂತಾಗ ಅವಳಿಗೆ ಗೊತ್ತಾಗುತ್ತಿತ್ತು ಮತ್ತೆ ಯಾವುದರಲ್ಲೋ ಹಣ ಕಳೆದಿದ್ದಾನೆ ಅಂತ. ಅವಳು ಉಸಿರುಕಟ್ಟಿ ಕೆಲಸ ಮಾಡಿ ಗಳಿಸಿದ್ದೆಲ್ಲ ಅವ ಖಾಲಿ ಮಾಡಿದಾಗ ವ್ಯಗ್ರಳಾಗುತ್ತಿದ್ದಳು, ದುಃಖಿಸುತ್ತಿದ್ದಳು … ಆಮೇಲಾಮೇಲೆ ಅಸಹಾಯಕತೆಯಲ್ಲಿ ಸುಮ್ಮನಾಗಿಬಿಟ್ಟಳು. ಆ ದಿನಗಳಲ್ಲೇ ‘ಅವನು’ ಅವಳಿಗೆ ಪರಿಚಯವಾಗಿದ್ದು! ಸುಮ್ಮನೆ ಎದೆಯ ನೋವನ್ನೆಲ್ಲ ಅವನೆದುರು ಸುರಿದುಬಿಟ್ಟಳು. ಅವನು ಅವಳ ಬದುಕಲ್ಲಿ ನೆಲೆಯೂರಿಬಿಟ್ಟ. ಇದೆಲ್ಲ ಅವಳು ಮೊದಲ ಸಲ ಹೇಳಿದಾಗ ನಾನು ತಬ್ಬಿಬ್ಬಾಗಿ ‘ಅಲ್ಲಾ ಅವನ ಜೊತೆ ಪ್ರೇಮಿಸಿ ಮದುವೆಯಾಗಿದ್ದೆ ಅಲ್ಲವಾ?? ಈಗ … ಹೀಗೆ ….’ ಮಾತು ತಡವರಿಸುತ್ತ ಹೊರಟಾಗ ‘ಹೌದು .. ‘ಅವತ್ತು’ ಪ್ರೇಮಿಸಿದ್ದೆ …’ ಅಂದಿದ್ದಳು ತಣ್ಣಗೆ …
ನೋವು ಎದೆಯಲ್ಲಿನ ಮುಳ್ಳಾದಾಗ ಅವಳು ಅವನಿಗೆ ಫೋನ್ ಹಚ್ಚುತ್ತಿದ್ದಳು. ಆ ಕೂಡಲೇ ಅವನು ಅವಳ ಲ್ಯಾಪ್ಟಾಪಿನಲ್ಲಿ ಪ್ರತ್ಯಕ್ಷವಾಗುತ್ತಿದ್ದ. ಅಲ್ಲೆಲ್ಲೋ ಕೂತಿರುತ್ತಿದ್ದ ಅವನು, ಇಲ್ಲಿ ರೂಮಿನಲ್ಲಿ ಕೂತ ಇವಳು. ಅವಳು ವೀಡಿಯೋ ಆನ್ ಮಾಡುವಾಗಲೇ ಅವನು ತಾಕೀತು ಮಾಡುತ್ತಿದ್ದ ‘ನನ್ನದೇನೋ ಕೆಲಸ ನಾನು ಮಾಡಿಕೊಳ್ತೇನೆ. ನೀನು ಕೂಡಾ ಜಾಣೆಯ ಹಾಗೆ ನಿನ್ನ ಕೆಲಸ ಮಾಡಿಕೋ ಗೊತ್ತಾಯ್ತಾ?’ ಅಂತ. ಅವಳು ಕಣ್ಣಹನಿ ತೊಡೆಯುತ್ತ ತಲೆಯಾಡಿಸುತ್ತಿದ್ದಳು. ಎದುರಿಗೇ ಕೂತ ಅವನನ್ನು ಆಗಾಗ ನೋಡಿ ನಗುವುದು, ಅವನು ಪ್ರತಿಯಾಗಿ ನಗುವುದು … ಅವ ತನ್ನ ಜೊತೆಯಲ್ಲೇ ಇದ್ದಂತ ಬೆಚ್ಚಗಿನ ಭಾವನೆ ಅವಳಿಗೆ. ಮಧ್ಯೆ ಮಧ್ಯೆ ಮೂರು ಮಾತು ಇಬ್ಬರ ಮಧ್ಯೆ ಹರಿದಾಡುತ್ತಿತ್ತು. ಅವನ ಕತ್ತಿಯಂಥ ಕಣ್ಣು ಕೆಲವೊಮ್ಮೆ ಪ್ರಖರತೆಯಿಂದ ಸೂರ್ಯನಂತಾಗುವಾಗ ಮತ್ತೆ ಕೆಲವೊಮ್ಮೆ ಜೇನಿನಲ್ಲಿ ಅದ್ದಿ ತೆಗೆದಂತೆ ಮುದ್ದು ಮುದ್ದಾಗುವಾಗ, ಮತ್ತೂ ಕೆಲವೊಮ್ಮೆ ತುಂಟತನದಲ್ಲಿ ಕಣ್ಣಲ್ಲೆಲ್ಲ ಚಿಟ್ಟೆ ಓಡಾಡುವಾಗ ಅವಳು ಮತ್ತೂ ಗಾಢವಾಗಿ ಅವನ ಇರುವನ್ನು ಅನುಭವಿಸುತ್ತಿದ್ದಳು …
ಪ್ರೇಮಿಗಳ ದಿನ ಇವತ್ತು. ಎಲ್ಲ ನೆನಪಾಯಿತು. ಎಂದೋ ಪ್ರೇಮಿಸಿದವಳ ಆ ಕಾಯುವಿಕೆ, ಪ್ರೇಮಿಸಿ ನಂತರ ನಂಬಿಕೆ ಕಳೆದುಕೊಂಡವಳು ಮತ್ತೆ ಪ್ರೇಮದಲ್ಲಿ ಬಿದ್ದಿದ್ದು, ಇದ್ದೂ ಇಲ್ಲದಂತಾದವನ ಜೊತೆಯಲ್ಲಿದ್ದು ಈಗ ‘ಅವನಲ್ಲಿ’ ಸಾಂತ್ವನ ಕಂಡವಳು ಎಲ್ಲರೂ ನೆನಪಾದರೂ ಇವತ್ತು. ಯಾವುದನ್ನು ಪ್ರೇಮವೆನ್ನಲಿ? ಯಾವುದು ಪ್ರೇಮವಲ್ಲವೆನ್ನಲಿ? … ಯಾವುದನ್ನು ಇದು ‘ಇದೇ’ ಅಂತ ವರ್ಣಿಸಲಿ … ಬದುಕಿನ ಈ ಬದಿಯಲ್ಲಿ ಕುಳಿತ ಕುರುಡಿ ನಾನು …





bhaaaaaaaaa……..maretaddeella nenapige bandante aaitu kaneeeeeeee
ಅಹವಿ, ನಿನ್ನ ದಾರಿಯನ್ನು ಕಾಯುತ್ತಲಿರುವೆ, ಹೆಜ್ಜೆಯ ಮೇಲೋಂದ್ ಹೆಜ್ಜೆಯನಿಕ್ಕುತಾ, ಗೆಜ್ಜೆ ಕಾಲ್ಗಳ ಧ್ವನಿಯ ತೋರುತಾ, ಶಾರದೆ ಅಹವಿ ಬಾರಮ್ಮಾ… 🙂
ನಾನು ಅವಳ ಗಂಡ…ಗಂಡನೇನೋ ಸರಿ ಆದರೆ…..?ಆಕೆ ನನ್ನ ಹೆಂಡತಿ…ಹೆಂಡತಿಯೇನೋ ಸರಿ ಆದರೆ…..?
ನಮಗೆ ಬೇಕಾಗುವುದು ದಿನದಿಂದ ದಿನಕ್ಕೆ ಬದಲಾಗುತ್ತದೆ ಅಂತಾ ಒಪ್ಪಿಕೊಳ್ಳುವುದಕ್ಕೆ ನಮ್ಮ ಸುದಾರಿತ ಪ್ರಾಮಾಣಿಕತೆಯ ಮನಸ್ಸು ನಿರಾಕರಿಸುತ್ತದೆ.ಕಟ್ಟುಪಾಡುಗಳನ್ನು ಮೀರುವುದರಲ್ಲಿ ನಮ್ಮ ನಿಜವಾದ ಅಸ್ತಿತ್ವವಿರುತ್ತದೆ.ಈ ಲೇಖನದಿಂದ ಒಂದು ನಿರ್ದಾರ………ಅವರ ಕಣ್ಣುಗಳಲ್ಲಿ ನಾನು ವ್ಯಭಿಚಾರಿ ಆದರೂ ಚಿಂತೆಯಿಲ್ಲ…ನನ್ನ ಅಸ್ತಿತ್ವ ನನಗೆ ಮುಖ್ಯ….ಅದನ್ನು ನಾನು ನಿರ್ಧರಿಸುತ್ತೇನೆ.
ಹೀಗೆ ಮಾತಿಗಿಲ್ಲದ ಅರ್ಥ ಏನೂ ಹೇಳದಿರುವುದರಲ್ಲೇ, ಸುಮ್ಮನೇ ಅನುಭವಿಸಿಕೊಳ್ಳುವುದರಲ್ಲೇ ಇದೆ….ನೆನಪುಗಳೇ ಹೀಗೆ ಹಂಗಿಲ್ಲದೆ ಕಾಡುತ್ತಿರುತ್ತವೆ. ಆಪ್ತವಾಗಿದೆ ಭಾರತೀ….
ಸಾಗರದಲ್ಲಿನ ಮೀನಿನ ಹೆಜ್ಜೆಗಳನ್ನು ಹುಡುಕುವಷ್ಟು ಧ್ಯಾನ ಬೇಕಂತೆ ಪ್ರೀತಿಯ ಪಲುಕುಗಳನ್ನು ಹೆಕ್ಕಲು! ಬಹಳ ಚಂದದ ನಿರೂಪಣೆ, ಭಾವುಕತೆಯಲ್ಲಿ ಅದ್ದಿ ಸೀದಾ ಎದೆಗೇ ಇಳಿಸುತ್ತೀರಿ. ಅಹವಿಯ ವಿಹಾರ ಮುಂದುವರೆಯಲಿ ಬದುಕಿನ ಬಣ್ಣಗಳೊಂದಿಗೆ 🙂
– ಪ್ರಸಾದ್.ಡಿ.ವಿ.
ಅಹವಿಯ ಹಾಡು – ಜಾಡು ಬರಹ ತುಂಬ ತಾಜಾ ಆಗಿದೆ. ಹೀಗೆ ಬರೆಯಿರಿ…. ಅಭಿನಂದನೆ.
kathe tumba chennagi bandide bharathi,. heege baritair. namage voduva khushi koduthiri
adbhuta mam tumba chendavide.ahaaaaa ahavi kayuttene.