ಇಷ್ಟಕ್ಕೆಲ್ಲ ಕಾರಣ ಎದೆಗೆ ಬಿದ್ದ ಅಕ್ಷರ…..

ದೇವನೂರು ಮಹದೇವ ಯೋಗ ನಿದ್ರೆಯಿಂದ ಎದ್ದಿದ್ದಾರೆ..

– ನಾಗರಾಜ್ ಹೆತ್ತೂರ್

“ಕಿ.ರಂ, ದೇವನೂರು ಇವರನ್ನು ನೋಡಿದರೆ ಗಾಂಧಿ ಇಲ್ಲೆಲ್ಲೋ ಓಡಾಡಿದ್ದರು ಅನಿಸುತ್ತದೆ. ಇಂದು ಜಾತಿಗಳು ಗುಂಪುಗಳಾಗಿ ವಿಕಾರತೆ ತೋರಿಸುತ್ತಿವೆ. ಎದೆಗೆ ಬಿದ್ದ ಅಕ್ಷರ ಎಲ್ಲರನ್ನು ಸೇರಿಸುತ್ತಿದೆ” ಹೀಗೆಂದವರು ಚಿಂತಕ ನಟರಾಜ್ ಹುಳಿಯಾರ್.
ಬಹುಶಃ ಕಳೆದ 3 ರಂದು ಗಾಂಧಿ ಭವನದಲ್ಲಿ ನಡೆದ ದೇವನೂರರ ಎದೆಗೆ ಬಿದ್ದ ಅಕ್ಷರ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದರೆ ಗಾಂಧಿ ಇಲ್ಲೇ ಓಡಾಡುತ್ತಿದ್ದನೇನೋ ಎಂದನಿಸುತ್ತಿತ್ತು.
ಇಡೀ ದಲಿತ ಚಳವಳಿ ನಾಯಕರು ಮಾಡಬೇಕಾದ ಆ ಒಂದು ಕೆಲಸವನ್ನು ಅದೊಂದು ಪುಸ್ತಕ ಮಾಡುತ್ತಿದೆ, ಸಮುದಾಯದ ಪ್ರಜ್ಞೆಯಾಗಿ ಎಲ್ಲರನ್ನು ಎಚ್ಚರಿಸುತ್ತಿದೆ ಎಚ್ಚರಿಸಿದೆ.
ಯಾರಿಗೆ ಏನನ್ನಿಸಿದೆಯೋ ಏನೋ ಗೊತ್ತಿಲ್ಲ!
ಆದರೆ ದಲಿತರನ್ನು ಮತ್ತೆ ಮತ್ತೆ ಚಡಪಡಿಕೆ ಹುಟ್ಟಿಸಿವೆ ದೇವನೂರು ಮಹಾದೇವರ ಬರಹಗಳು. ಬಹುಶಃ ಅವರು ಸಂತನಂತೆ ಬದುಕುತ್ತಿರುವುದಕ್ಕೂ ಆವರ ಬರವಣಿಗೆ ಓದುವುದ್ಕಕೂ ಒಂಚೂರು ವ್ಯತ್ಯಾಸವಿಲ್ಲ. ಸಹಿಸಿಕೊಳ್ಳುವಿಕೆಯಲ್ಲಿ ಯಾವ ಗಾಂಧಿಗೂ ಕಡಿಮೆ ಇಲ್ಲ. ಆ ಸರಳತೆ ಬರೆದುಕೊಂಡು ಒಪ್ಪಿಸುವ ಭಾಷಣದ ಆ ಮುಗ್ಧತೆ ಬಾಯಿಬಡುಕ ಸಂಸ್ಕೃತಿಗೆ ಎಲ್ಲಿಂದ ಬರಬೇಕು.

ಆ ಕಾರಣಕ್ಕಾಗಿಯೇ ನಮ್ಮ ಕವಿ ಸಿದ್ದಲಿಂಗಯ್ಯನವರು ಅದೇ ವೇದಿಕೆಯಲ್ಲಿ ಹೇಳಿದ್ದು “ನಮ್ಮ ಮಹದೇವ ಎಷ್ಟು ಒಳ್ಳೆಯವರು ಎಂದರೆ ಅವರ ಒಳ್ಳೆತನ ನೋಡಿ ನೋಡಿ ಬೇಜಾರಾಗಿದೆ’ ಎಂದು. ಈ ರೀತಿ ಯಾರು ಬದುಕುತಿದ್ದಾರೆ..?
ಹೀಗೂ ಮಹದೇವರ ಸಂಯಮ ಎಂತಾದ್ದು ಎಂದು ಘಟನೆ ಹೇಳುತ್ತೇನೆ.
ಬೆಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಹದೇವ ಮಾತನಾಡುತ್ತಾ.. ದಲಿತ ಚಿಂತಕ ಆಶೀಶ್ ನಂದಿ ಬಗ್ಗೆ ಮಾತನಾಡಿ ಆತನನ್ನು ಸಮರ್ಥಿಸಿಕೊಂಡರು. ಬೆಳಗಿನ ಪತ್ರಿಕೆಯಲ್ಲಿ ಇದನ್ನು ಓದಿ ಕೆರಳಿದ್ದ ನಮ್ಮ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ` `ಏನೋ ಅವನಿಗೆ ಮರ್ಯಾದಿ ಇಲ್ಲವೇನೋ ದಲಿತರನ್ನು ಭ್ರಷ್ಟಚಾರಿ ಎನ್ನುವನನ್ನು ಸಮರ್ಥಿಸಿಕೊಳ್ಳುತ್ತಾನಲ್ಲೋ.. ಎಂದು ಕಿಡಿ ಕಾರಿದರು. ಖುದ್ದು ನಾನೆ ಮಹದೇವರಿಗೆ ಫೋನ್ ಮಾಡಿ ಏನ್ ಸಾರ್ ನಿಮ್ಮ ಸ್ನೇಹಿತರು ನಿಮ್ಮನ್ನು ಬೈಯ್ಯುತ್ತಿದ್ದಾರಲ್ಲಾ..? ನೀವು ಹೇಳಿದ್ದು ತಪ್ಪಲ್ಲಾಎಂದು ಪ್ರಶ್ನಿಸಿದೆ. ಅದಕ್ಕವರು ಹೇಳಿದ್ದು ` ಆಶೀಶ್ ನಂದಿ ಹಿಂದೆ ಎಲ್ಲಾ ನಮ್ಮ ಪರ ಮಾತನಾಡಿದ್ದಾನೆ. ಅವನು ಯಾವ ಕಾರಣಕ್ಕೆ ಹಾಗೆ ಹೇಳಿದ್ದಾನೆ ನೋಡೋಣ ಅವಸರ ಯಾಕೆ ಪಡುತ್ತೀರಿ..? ಸತ್ಯಾಸತ್ಯತೆ ಕಂಡುಕೊಳ್ಳೋಣ ಎಂದು ಸಂಯಮದಿಂದಲೇ ಹೇಳಿದ್ದು ಹೌದಲ್ಲವಾ ಎನಿಸಿತು. ಹಾಗೆ ಪತ್ರಿಕೆ ಯೊಂದರಲ್ಲಿ ಅಂಬೇಡ್ಕರ್ ಬಸವನಹುಳುವಿನ ಮೇಲೆ ಕುಳಿತು ಚಾಟಿ ಬೀಸುತ್ತಿರುವ ವ್ಯಂಗ್ಯ ಚಿತ್ರ ಬಗ್ಗೆ ಚರ್ಚಿಸುತ್ತಾ.. ನಾವು ನೋಡುವ ದೃಷ್ಟೀಕೋನದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ಎಲ್ಲವನ್ನೂ ನೆಗೆಟಿವ್ ಆಗಿ ಚಿಂತಿಸುವುದನ್ನು ನಿಲ್ಲಿಸಬೇಕು. ಮಾಧ್ಯಮಗಳಲ್ಲಿ ಬೈಟ್ ಸಂಸ್ಕೃತಿ ನಿಲ್ಲಲಿ ನನ್ನ ಪ್ರಕಾರ ಬೈಟ್ ಎಂದರೆ ಕಚ್ಚುವುದು. ಅದಷ್ಟೆ ಗೊತ್ತು. ಅದ್ಯಾಕೆ ಹಿಂಗಾಡ್ತಾರೆ ನಂಗಂತೂ ಗೊತ್ತಿಲ್ಲ. ಮಹದೇವರನ್ನು ಟೀಕಿಸುವರಿಗೆ ಇದಕ್ಕಿಂತ ಉತ್ತರ ಬೇಕೆ..?
ಅವರ ಸಾಕ್ಷಿ ಪ್ರಜ್ಞೆ ಹೇಗಿದೆ ಎಂದರೆ ದಲಿತ ಯುವಕರಿಗೆ ಎಚ್ಚರಿಸಿದ್ದು, ಇಂದಿನ ವಿದ್ಯಾವಂತ ದಲಿತ ಮಕ್ಕಳು ಅಂಬೇಡ್ಕರ್ ಭಾವಚಿತ್ರ ಪೂಜೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಎಷ್ಟು ಬೇಕೋ ಅದಕ್ಕಿಂತ ಹೆಚ್ಚಾಗಿ ಅಂಬೇಡ್ಕರ್ ಭಕ್ತರಾಗುತ್ತಿದ್ದಾರೆ. ಅಂಬೇಡ್ಕರ್ ರನ್ನು ನಮ್ಮೊಳಗೆ ನೋಡಿಕೊಳ್ಳಬೇಕಿದೆ. ಪುಟ್ಟ ಪುಟ್ಟ ಅಂಬೇಡ್ಕರ್ಗಳಾಗಬೇಕಿದೆ ಎಂದಿದ್ದು ಎಷ್ಟು ದೊಡ್ಡ ಮಾತಲ್ಲವೇ..?
ಕೊನೆಗೆ ಸಭಿಕರೊಬ್ಬರು ನಿಮ್ಮ ಮಹತ್ವಾಕಾಂಕ್ಷೆಯ ಕೃತಿ ಅಲ್ಲಮ ಎಲ್ಲಿಗೆ ನಿಂತಿದೆ..? ಎಂದು ಕೇಳಿದಕ್ಕೆ, ಅಲ್ಲಮ ಈಗ ಅಲ್ಲಯ್ಯ ಆಗಿದ್ದಾನೆ ಕಾಯಿರಿ.. ಎಂದು ಕುತೂಹಲ ಹೆಚ್ಚಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕವಿ ಸಿದ್ದಲಿಂಗಯ್ಯ ಹೇಳಿದ ಮಾತು ಇನ್ನೂ ನೆನಪಿದೆ. “ಆತ ಒಬ್ಬ ಕವಿ. ಹೀಗೆ ಒಮ್ಮೆ ನಂಜುಂಡೆಶ್ವರನನ್ನು ನೋಡಲೆಂದು ಹೊರಟ. ಪಾಪ ಅವನ ದುರಾದೃಷ್ಷವೋ ಏನೋ ನಂಜುಂಡೇಶ್ವರನ ದರ್ಶನ ಆಗಲೇ ಇಲ್ಲ. ಕೊನೆಗೆ ಆ ಕವಿ ಬರೆದನಂತೆ `ನಂಜುಂಡೇಶ್ವರನನ್ನು ನೋಡುವ ಭಾಗ್ಯ ನನಗೆ ಸಿಗಲಿಲ್ಲ. ನನ್ನ ದರ್ಶನ ಮಾಡು ಭಾಗ್ಯ ನಂಜುಂಡೇಶ್ವರನಿಗೂ ಸಿಕ್ಕಲಿಲ್ಲ’ ಹಾಗೆ ನಮ್ಮ ದಲಿತರು ನಾವೇ ದೇವರುಗಳು ಎಂದರು.
ಭಾನುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ದಲಿತ ಸಂಘಟನೆಗಳ ಒಂದು ಅಪರೂಪದ ಸಂಗಮವಾಗಿತ್ತು ಈ ಮೂಲಕ ನಾವೆಲ್ಲ ಒಂದಾಗುವ ಕಾಲ ಬಂದಿದೆ ಎಂದು ಇರುವಿಕೆಯನ್ನು ಭದ್ರಗೊಳಿಸುವ ಕಾರ್ಯಕ್ರಮ ನಡೆಯಿತು. ಅದನ್ನು ಒಂದು ಕೃತಿ ಮಾಡಿದೆ ಎಂದರೆ ಹ್ಯಾಸ್ಟ್ ಆಫ್ ಎನ್ನಲೇಬೇಕು. ಒಡೆದು ಹೋಗಿರುವ ಚಳವಳಿಯನ್ನು ಮತ್ತೆ ಒಂದು ವೇದಿಕೆ ಸೇರಿಸಿದ್ದು ಅದೊಂದು ಪುಸ್ತಕ.
ಕೇವಲ ಒಂದೂವರೆ ತಿಂಗಳಲ್ಲಿ ಮೂರನೆ ಮುದ್ರಣ ಕಾಣುತ್ತಿದ್ದು, ಎರಡು ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡು ಚಳವಳಿಯಂತೆ ನುಗ್ಗುತ್ತಿದೆ.
ಸಮಾನತೆಯೆ ಕನಸನ್ನು ಎಲ್ಲರೂ ಕಾಣಬೇಕು ಎಂದು ಹೊರಟಿರುವರಿಗೆ ಹೊಸ ಸಾಧ್ಯತೆಯನ್ನು ಹುಟ್ಟು ಹಾಕಿದೆ.
ಕೊನೆಯದಾಗಿ ಸಿದ್ದಲಿಂಗಯ್ಯ ಹೇಳಿದಂತೆ `ಎದೆಗೆ ಬಿದ್ದ ಅಕ್ಷರ ಶೋಷಿತ ವರ್ಗದ ಕಣ್ಣು ತೆರೆಸುವ ಕೃತಿ’ ಇಂದು ನಾವೆಲ್ಲಾ ದಲಿತೇತರರ ಬಡವರನ್ನು ಕಟ್ಟಿಕೊಂಡು ಹೋರಾಡಬೇಕಿದೆ. ದಸಂಸ ಬೇರೆ ಗುಂಪುಗಳಾಗಿದ್ದರೂ ಆಶಯ ಮಾತ್ರ ಒಂದೇ. ಈ ನಿಟ್ಟಿನಲ್ಲಿ ದಸಂಸ ಒಂದಾಗಲೇಬೇಕು. ಮಾನವೀಯ ಉದಾರವಾದಿಗಳ ಶಕ್ತಿಯಾಗಬೇಕಿದೆ. ಆ ಕಾಲ ಈಗ ಬಂದಿದೆ. `ಒಟ್ಟಾರೆ ಹೇಳುವುದಾದರೆ ದಲಿತ ಸಂಘಟನೆಗಳನ್ನು ಒಗ್ಗೂಡಿಸುವಲ್ಲಿ ನಿಜಕ್ಕೂ ಇದೊಂದು ಅಪರೂಪದ ಪುಸ್ತಕ. ಕಾರ್ಯಕ್ರಮದ ನಂತರ ದಲಿತ ನಾಯಕರಾದ ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಗುರು ಪ್ರಸಾದ್ ಕೆರಗೂಡ ಮುಂತಾದವರು ಒಗ್ಗೂಡುವ ಭರವಸೆ ಮಾತನಾಡಿದ್ದಾರೆ. ದಸಂಸ ಒಂದಾಗಲಿದೆ. ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿದೆ.
ಇಷ್ಟಕ್ಕೆಲ್ಲ ಕಾರಣ ಎದೆಗೆ ಬಿದ್ದ ಅಕ್ಷರ…..
 
 

‍ಲೇಖಕರು G

February 14, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mahesh

    ನಾಗ, ನಿನ್ನ ಲೇಖನ ಓದಿ ತುಂಬಾ ಖುಷಿಯಾಯಿತು.ಓದಿದಷ್ಟು ಮತ್ತೊಮ್ಮೆ ಓದಿಸಿಕೊಂಡು ಹೋಗುವ ಕಲೆ ಈ ಲೇಖನಕ್ಕಿದೆ. ಇಂದಿನ ವಿದ್ಯಾವಂತ ದಲಿತ ಮಕ್ಕಳು ಅಂಬೇಡ್ಕರ್ ಭಾವಚಿತ್ರ ಪೂಜೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಎಷ್ಟು ಬೇಕೋ ಅದಕ್ಕಿಂತ ಹೆಚ್ಚಾಗಿ ಅಂಬೇಡ್ಕರ್ ಭಕ್ತರಾಗುತ್ತಿದ್ದಾರೆ. ಅಂಬೇಡ್ಕರ್ ರನ್ನು ನಮ್ಮೊಳಗೆ ನೋಡಿಕೊಳ್ಳಬೇಕಿದೆ. ಪುಟ್ಟ ಪುಟ್ಟ ಅಂಬೇಡ್ಕರ್ ಗಳಾಗಬೇಕಿದೆ ಎಂದಿದ್ದು ಎಷ್ಟು ದೊಡ್ಡ ಮಾತಲ್ಲವೇ..? ಇದಿಷ್ಟು ಸಾಕು ,ದೇವನೂರು ಮಹಾದೇವ ಅವರ ನಿಷ್ಕಳಂಕ ಕಾಳಜಿ ಒಪ್ಪಿಕೊಳ್ಳಲು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: