ಬಿ ಎ ವಿವೇಕ ರೈ ಕಂಡಂತೆ ‘ತುಳು ಬೆಳ್ಳಿ ತೆರೆಯ ಸುವರ್ಣ ಯಾನ’

ಬಿ ಎ ವಿವೇಕ ರೈ

ತಮ್ಮ ಲಕ್ಷ್ಮಣ ಅವರ ‘ ತುಳು ಬೆಳ್ಳಿ ತೆರೆಯ ಸುವರ್ಣ ಯಾನ’ ತುಳು ಸಿನಿಮಾ ರಂಗಕ್ಕೆ ಮತ್ತು ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ಒಂದು ಮಹೋನ್ನತ ಕೊಡುಗೆ. ವಿಶ್ವವಿದ್ಯಾಲಯಗಳು ಮಾಡಬೇಕಾದ ಅಪೂರ್ವ ದಾಖಲಾತಿಗಳ ಮೂಲಕದ ಸಮಗ್ರ ಅಧ್ಯಯನದ ಸಂಪುಟ ಒಂದನ್ನು ತಮ್ಮ ಲಕ್ಷ್ಮಣ ಅವರು ಏಕಾಂಗಿಯಾಗಿ ತುಳು ಅಭಿಮಾನ ಮತ್ತು ಮಾಹೇಶ್ವರ ನಿಷ್ಠೆಯಿಂದ ಸಮರ್ಪಕವಾಗಿ ಪೂರ್ಣಗೊಳಿಸಿದ್ದಾರೆ.ಇದು ಅವರ ಐವತ್ತು ವರ್ಷಗಳ ಸತತ ತಪಸ್ಸಿನ ಪೂರ್ಣಾಹುತಿ.

ಐವತ್ತು ವರ್ಷಗಳ ತುಳು ಸಿನೆಮಾ ರಂಗದ ಸಾಹಸಗಾಥೆಯನ್ನು ತಮ್ಮ ಲಕ್ಷ್ಮಣ ಬಿಟ್ಟರೆ ಬೇರೆ ಯಾರೂ ಅಧಿಕೃತವಾಗಿ ಬರೆಯಲು ಸಾಧ್ಯವಿಲ್ಲ. ಸಂಶೋಧಕರು ಮಾಹಿತಿಗಳನ್ನು ಸಂಗ್ರಹಿಸಿ, ಈಗ ಬದುಕಿ ಉಳಿದ ಹಿರಿಯ ಕಲಾವಿದರನ್ನು ಸಂದರ್ಶನ ಮಾಡಿ ಗ್ರಂಥ ರಚಿಸಬಹುದು. ಆದರೆ ಲಕ್ಷ್ಮಣ ಅವರು ಕಳೆದ ಐವತ್ತು ವರ್ಷಗಳಿಂದ ತುಳು ಸಿನೆಮಾ ರಂಗದ ಜೊತೆಗೆ, ಅದರ ಮೂಲಚೂಲಗಳ ಸಂಗಡ ಒದ್ದಾಡಿದವರು, ಒಡನಾಡಿದವರು.
ತಮ್ಮ ಲಕ್ಷ್ಮಣ ಅವರು ಸುಮಾರು ೮೦ ಅಧ್ಯಾಯಗಳ ಹರಹಿನಲ್ಲಿ ತುಳು ಚಲನಚಿತ್ರ ಜಗತ್ತಿನ ಇತಿಹಾಸ ಮತ್ತು ವರ್ತಮಾನಗಳನ್ನು ಅನಾವರಣ ಮಾಡಿರುವುದರ ಜೊತೆಗೆ ಐವತ್ತು ವರ್ಷಗಳ ತುಳು ಚಿತ್ರರಂಗದ ಬಹುರೂಪಿ ಕ್ಷೇತ್ರಗಳ ಸಾಧಕರಿಗೆ ಒಂದೊಂದು ಅಧ್ಯಾಯವನ್ನು ಮೀಸಲಾಗಿ ಇರಿಸಿ , ಹೊಸ ಇತಿಹಾಸವೊಂದನ್ನು ನಿರ್ಮಿಸಿದ್ದಾರೆ. ಅವರ ಅಧ್ಯಯನಶೀಲತೆ, ಕಲಾವಿದರರ ಬಗೆಗಿನ ಆದರ ಅಭಿಮಾನ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಹಬಾಳ್ವೆಯ ಮನೋಧರ್ಮ ಈ ಗ್ರಂಥದ ಪುಟಪುಟಗಳಲ್ಲಿ ಗೋಚರಿಸುತ್ತದೆ . ತುಳು ಸಿನೆಮಾದ ಐವತ್ತು ವರ್ಷಗಳ ಸಮಗ್ರ ನೋಟದ ವಿಶ್ವಕೋಶವೊಂದರ ವಿಶ್ವಾಮಿತ್ರ ಸೃಷ್ಟಿಯಂತೆ ಕಾಣಿಸುತ್ತದೆ ತಮ್ಮ ಲಕ್ಷ್ಮಣರ ಈ ಗ್ರಂಥ.

ತಮ್ಮ ಲಕ್ಷ್ಮಣರು ತಮ್ಮ ಅಧ್ಯಾಯಗಳಿಗೆ ಕೊಡುವ ಶೀರ್ಷಿಕೆಗಳದ್ದೇ ಒಂದು ಸೊಗಸು, ಒಂದು ಸೃಜನಶೀಲ ಚಂದ . ಆರಂಭದ ಐದು ಅಧ್ಯಾಯಗಳು ಈ ಗ್ರಂಥದ ಭದ್ರ ಬುನಾದಿಯನ್ನು ತೋರಿಸುತ್ತವೆ. ತುಳು ಭಾಷೆಯನ್ನು ಮೊದಲು ಪರಿಚಯಿಸಿ, ಬಳಿಕ ಚಲನಚಿತ್ರದ ಆರಂಭದ ಕಥನವನ್ನು ಹೇಳುವ ಲಕ್ಷ್ಮಣರು ತುಳುನಾಡಿನ ಚಲನಚಿತ್ರಮಂದಿರಗಳ ಚರಿತ್ರೆಯನ್ನು ಕಟ್ಟಿಕೊಡುತ್ತಾರೆ. ಬಳಿಕ ಡಾ .ಶಿವರಾಮ ಕಾರಂತರ ಆರಂಭಿಕ ಚಲನಚಿತ್ರದ ಅಪೂರ್ವ ಸಾಹಸದ ಬಗ್ಗೆ ಬೆಳಕು ಚೆಲ್ಲುತ್ತಾರೆ. ತುಳು ಭಾಷೆಯ ಸಿನೆಮಾ ಆರಂಭದ ಮಾಹಿತಿ ವಿಶಿಷ್ಟವಾಗಿದೆ .

ಆರನೇ ಅಧ್ಯಾಯದ ಬಳಿಕದ ತಮ್ಮ ಲಕ್ಷ್ಮಣರ ಸಂಪುಟದ ಪ್ರತಿಯೊಂದು ಅಧ್ಯಾಯವೂ ಸಿನೆಮಾದ ಒಂದೊಂದು ವರ್ಣರಂಜಿತ ರೀಲಿನಂತೆ ಬಿಚ್ಚುತ್ತಾ ಹೋಗುತ್ತದೆ. ಎಸ್ ಆರ್ ರಾಜನ್, ಕೆ ಎನ್ ಟೇಲರ್, ಟಿ ಎ ಶ್ರೀನಿವಾಸ, ಸಂಜೀವ ದಂಡೆಕೇರಿ, ರಿಚರ್ಡ್ ಕ್ಯಾಸ್ಟಲಿನೋ ರಿಂದ ಮುಂದುವರಿಯುವ ಕಲಾವಿದರ ಸರಣಿ ಪರಿಚಯದಲ್ಲಿ ಆಯಾ ಕಲಾವಿದರು ಹಾಕಿಕೊಟ್ಟ ಹೊಸ ಹೆಜ್ಜೆಗಳ ಗುರುತುಗಳು ಇವೆ. ಪ್ರತಿಯೊಬ್ಬ ಕಲಾವಿದರ ಅನನ್ಯತೆಯನ್ನು ಅವರ ಸಾಧನೆಯ ಹೆಗ್ಗುರುತುಗಳ ಮೂಲಕ ಎತ್ತಿ ಹಿಡಿಯುವ ನವೀನ ಮಾದರಿಯನ್ನು ಲಕ್ಷ್ಮಣರು ಇಲ್ಲಿ ರೂಪಿಸಿದ್ದಾರೆ. ಅಧ್ಯಾಯ ಆರರಿಂದ ತೊಡಗಿ ಸುಮಾರು ಅಧ್ಯಾಯ ೬೫ ರ ವರೆಗೆ ತುಳು ಚಿತ್ರ ರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ ನಿರ್ಮಾಪಕರು, ನಿರ್ದೇಶಕರು, ನಟನಟಿಯರು, ಕತೆ ಚಿತ್ರಕತೆ ಹಾಡು ಸಂಭಾಷಣೆ ಬರೆದವರು, ಸಂಗೀತ ನಿರ್ದೇಶಕರು, ಗೀತಾ ಸಾಹಿತ್ಯದ ಕವಿಗಳು, ಹಿನ್ನೆಲೆ ಗಾಯಕ ಗಾಯಕಿಯರು, ಚಲನಚಿತ್ರ ತಂತ್ರಜ್ಞರು, ತಾರಾ ನಟರು, ತಾರಾಮಣಿಯರು , ಹಾಸ್ಯಕಲಾವಿದರು: ಹೀಗೆ ನೂರಾರು ಸಾಧಕರ ಕಲಾಸೇವೆಯ ಗಟ್ಟಿ ಹೆಜ್ಜೆಗಳು ದಾಖಲಾಗಿವೆ.

ಲಕ್ಷ್ಮಣರು ಐವತ್ತು ವರ್ಷಗಳ ತುಳು ಸಿನೆಮಾದ ಬೆಳೆವಣಿಗೆಯಲ್ಲಿ ಜೊತೆಗಿದ್ದ ಚಿತ್ರ ನಿರ್ಮಾಪಕರ ಸಂಘ, ಪತ್ರಿಕಾ ಮಾಧ್ಯಮಗಳ ಬೆಂಬಲ ಮತ್ತು ಸಹಕಾರವನ್ನು ಸ್ಮರಿಸಿಕೊಳ್ಳಲು ಪ್ರತ್ಯೇಕ ಅಧ್ಯಾಯಗಳನ್ನೇ ಬರೆದಿದ್ದಾರೆ. ತಾಂತ್ರಿಕ ನೆಲೆಯಲ್ಲಿ ತುಳು ಸಿನೆಮಾ ಬೆಳೆದ ಬಗೆಯನ್ನು ತಿಳಿಸುತ್ತಾ ಡಿಜಿಟಲ್ ಮೀಡಿಯಾದ ಸ್ವರೂಪದ ಬಗ್ಗೆ ಟಿಪ್ಪಣಿಯನ್ನು ಬರೆದಿದ್ದಾರೆ.

ಲಕ್ಷ್ಮಣರು ಈ ಗ್ರಂಥದಲ್ಲಿ ತುಳು ಭಾಷೆಯ ಸಿನೆಮಾಗಳು ಮಾಡಿದ ವಿಶಿಷ್ಟ ಸಾಧನೆಗಳನ್ನು ವಿವರಿಸುತ್ತಾ, ರಾಷ್ಟೀಯ ಮಟ್ಟದಲ್ಲಿ ಪ್ರಶಸ್ತಿ ಮತ್ತು ಪದಕ ಪಡೆದ ಸಿನೆಮಾಗಳ ಹೆಗ್ಗುರುತುಗಳನ್ನು ಪ್ರಕಟಿಸಿದ್ದಾರೆ. ಈವರೆಗೆ ನಡೆದಿರುವ ತುಳು ಸಿನೆಮಾ ಉತ್ಸವಗಳ ಅಪೂರ್ವ ಮಾಹಿತಿಯ ಜೊತೆಗೆ ತುಳು ಸಿನೆಮಾ ಸಾಧನೆಯ ಪಥವನ್ನು ನಮಗೆ ತೆರೆದು ತೋರಿಸಿದ್ದಾರೆ. ತುಳು ಸಿನೆಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಆಗುತ್ತಿರುವಾಗ ವಹಿಸಬೇಕಾದ ಎಚ್ಚರ ಮತ್ತು ಗುಣಮಟ್ಟದ ಕಾಳಜಿಯ ಬಗ್ಗೆ ತಮ್ಮ ಅನುಭವಪ್ರೇರಿತ ಸಲಹೆಗಳನ್ನು ನೀಡಿದ್ದಾರೆ.

‘ಸುವರ್ಣ ಯಾನ ‘ ಗ್ರಂಥದ ಕೊನೆಯ ಆರು ಅಧ್ಯಾಯಗಳು ಹೊರಜಗತ್ತಿಗೆ ಅನಾವರಣ ಆಗದ ತುಳು ಸಿನೆಮಾ ರಂಗದ ಅಂತರಂಗದ ಕತೆಗಳನ್ನು ಹೇಳುತ್ತವೆ. ಅವುಗಳಲ್ಲಿ ಆರಂಭದ ಎರಡು ಅಧ್ಯಾಯಗಳು ಪರಿಪೂರ್ಣ ಮಾಹಿತಿಗಳು -‘ ೫೦ ವರ್ಷಗಳಲ್ಲಿ ತೆರೆ ಕಂಡ ಚಿತ್ರಗಳು ‘ ಮತ್ತು’ ೨೦೨೧ ಮಾರ್ಚ್ ನಂತರ ತೆರೆ ಕಂಡ ಚಿತ್ರಗಳು .’ ಬಹಳ ಕುತೂಹಲಕಾರಿಯಾದ ಭಾಗಗಳು : ‘ ಅಪೂರ್ಣ ಚಿತ್ರಗಳ ಪೂರ್ಣ ಕಥೆ ‘ ಮತ್ತು ‘ ೨೦೨೧ರ ನಿರ್ಮಾಣ ಪೂರ್ಣವಾಗದ ಚಿತ್ರಗಳು’. ಈ ಮಾಹಿತಿಯು ನಮಗೆ ಬೇರೆಲ್ಲೂ ದೊರೆಯುವುದಿಲ್ಲ. ‘ನಾಟಕ ಆಧಾರಿತ ಕಥೆಯ ತುಳು ಸಿನೆಮಾಗಳು’ ಪಟ್ಟಿಯನ್ನು ನೋಡಿದಾಗ ತುಳು ನಾಟಕಗಳ ಪ್ರಭಾವವು ತುಳು ಸಿನೆಮಾಗಳ ಮೇಲೆ ವಿಶೇಷವಾಗಿ ಆಗಿರುವುದು ಗೊತ್ತಾಗುತ್ತದೆ. ‘ಪ್ರಾದೇಶಿಕ ಸಹ ಭಾಷಾ ಚಿತ್ರಗಳು ‘ ಪಟ್ಟಿಯಲ್ಲಿ ಕ್ಯಾಥಲಿಕ್ ಕೊಂಕಣಿ ಭಾಷೆಯಲ್ಲಿ ನಿರ್ಮಾಣವಾದ ೧೩ ಸಿನೆಮಾಗಳು, ಸಾರಸ್ವತ ಕೊಂಕಣಿ ಭಾಷೆಯಲ್ಲಿ ನಿರ್ಮಾಣವಾದ ೭ ಸಿನೆಮಾಗಳು ಮತ್ತು ಬ್ಯಾರಿ ಭಾಷೆಯಲ್ಲಿ ನಿರ್ಮಾಣವಾದ ನಾಲ್ಕು ಸಿನೆಮಾಗಳ ಹೆಸರುಗಳು ದೊರೆಯುತ್ತವೆ. ಗ್ರಂಥದ ಕೊನೆಯಲ್ಲಿ ಈ ಎಲ್ಲ ಪೂರಕ ಮಾಹಿತಿಗಳನ್ನು ಕೊಟ್ಟಿರುವುದು ಗ್ರಂಥದ ಸಮಗ್ರತೆಗೆ ಪೂರಕವಾಗಿದೆ.

‘ತುಳು ಬೆಳ್ಳಿತೆರೆಯ ಸುವರ್ಣ ಯಾನ ‘ ಸಂಪುಟದ ಇನ್ನೊಂದು ವಿಶೇಷ ಆಕರ್ಷಣೆಯೆಂದರೆ ಲಕ್ಷ್ಮಣರು ಕಲೆಹಾಕಿ ಪ್ರಕಟಿಸಿದ ಫೋಟೋಗಳ ಅಪೂರ್ವ ಸಂಗ್ರಹ. ಈ ಗ್ರಂಥದಲ್ಲಿ ಉಲ್ಲೇಖಗೊಂಡ ತುಳು ಸಿನೆಮಾರಂಗದ ಎಲ್ಲ ಸಾಧಕರ ಬಿಡಿಬಿಡಿ ಭಾವಚಿತ್ರಗಳನ್ನು ನೋಡುವುದೇ ಒಂದು ಸಂಭ್ರಮ. ಇವುಗಳ ಜೊತೆಗೆ ಸಿನೆಮಾದ ಶೂಟಿಂಗ್ ನ ದೃಶ್ಯಗಳು, ಸಿನೆಮಾದ ಭಿನ್ನ ದೃಶ್ಯಗಳು, ಸಿನೆಮಾದ ಪೋಸ್ಟರ್ ಗಳು, ಸಿನೆಮಾ ಕಾಯಕ್ರಮಗಳ ಫೋಟೋಗಳು, ಹಾಡುಗಳ ರೆಕಾರ್ಡಿಂಗ್, ವಾದನಗಳು, ಸೆಟ್ಟಿಂಗ್ ಗಳ ಸಿದ್ಧತೆ – ಹೀಗೆ ಚಿತ್ರಗಳ ಮೂಲಕವೂ ತುಳು ಚಲನಚಿತ್ರದ ಕಥನದ ತುಣುಕುಗಳು ಈ ಗ್ರಂಥದ ಉದ್ದಕ್ಕೂ ಹರಡಿಕೊಂಡಿವೆ.

ತುಳು ಸಿನೆಮಾ ಜಗತ್ತಿನ ಅವಿಭಾಜ್ಯ ಭಾಗವಾಗಿ ಬೆಳೆದು ಬಂದ ತಮ್ಮ ಲಕ್ಷ್ಮಣರು ತಮ್ಮ ಜೀವಮಾನ ಸಾಧನೆಯ ಗ್ರಂಥವೊಂದನ್ನು ತುಳು -ಕನ್ನಡ ಸಾರಸ್ವತ ಮತ್ತು ಕಲಾ ಜಗತ್ತಿಗೆ ಅರ್ಪಿಸಿದ್ದಾರೆ. ಬಹಳ ದೀರ್ಘಕಾಲದಿಂದ ನನಗೆ ಆತ್ಮೀಯರಾಗಿರುವ ತಮ್ಮ ಲಕ್ಷ್ಮಣರು ತಮ್ಮ ಸಜ್ಜನಿಕೆ, ಸ್ನೇಹಪರತೆ , ಪ್ರಾಮಾಣಿಕತೆ, ನಿರಂತರ ದುಡಿಮೆ ಮತ್ತು ಕಲಾಪ್ರೇಮದಿಂದ ಕರ್ನಾಟಕದ ಕರಾವಳಿಯ ಜನಮಾನಸದಲ್ಲಿ ನೆಲೆನಿಂತವರು. ಅವರ ಈ ಮಹಾನ್ ಸಾಧನೆಗಾಗಿ ಅವರನ್ನು ಅಭಿನಂದಿಸಲು ಅಭಿಮಾನಪಡುತ್ತೇನೆ.

ಅವರ ಕಲಾ ತಪಸ್ಸಿನ ಫಲವಾದ ಈ ಅಪೂರ್ವ ಗ್ರಂಥವನ್ನು ಕನ್ನಡ -ತುಳು ಕಲಾ ಬಂಧುಗಳು ಆದರದಿಂದ ಬರಮಾಡಿಕೊಳ್ಳುವರೆಂದು ಆಶಿಸುತ್ತೇನೆ.

‍ಲೇಖಕರು avadhi

March 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: