ಕವಿ ಮತ್ತು ಆತನ ಕಾವ್ಯ ಬೇರೆ ಬೇರೆಯೇ?..

ವಸಂತ ಬನ್ನಾಡಿ ಬಿ

ಜುಗಾರಿ ಕ್ರಾಸ್ ಅಂಕಣ ಚರ್ಚೆ/ಸಂವಾದ ಬೆಳೆಸುವುದಕ್ಕೆ ಇರುವ ಅಂಕಣ.

ಇಂದಿನ ಜ್ವಲಂತ ಸಮಸ್ಯೆಗಳಾಗಲೀ, ಬೆಳಕಿಗೆ ಹಿಡಿದು ನೋಡಬೇಕಾದ ವಿಷಯಗಳಾಗಲೀ ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತದೆ. ಸಂವಾದ ‘ಹೀಗೇ..’ ಎಂದು ಅಂತ್ಯಗೊಳ್ಳಬೇಕಾಗಿಲ್ಲ. ಆದರೆ ಒಂದು ವಿಷಯದ ಹಲವು ಮಗ್ಗುಲುಗಳನ್ನಾದರೂ ಜುಗಾರಿ ಕ್ರಾಸ್ ತಡವುವಂತಾಗಬೇಕು ಎಂಬುದು ನಮ್ಮ ಆಶಯ.

ಇಲ್ಲಿನ ಬರಹ ನಮ್ಮ ತಾಣದ ಅಧಿಕೃತ ನಿಲುವಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ನೋಟವನ್ನು ರೂಪಿಸಲು ಇಲ್ಲಿ ಚರ್ಚೆಗೆ ತೆರೆದಿಡಲಾಗಿದೆ.

‘ಕವಿ ಬೇರೆ ಕಾವ್ಯ ಬೇರೆ; ಕವಿ ಬೇರೆ ಆತನ ವಿಚಾರಗಳು ಬೇರೆ’ ಎಂಬ ಮಾತು ಸಾಹಿತ್ಯ ವಲಯದಲ್ಲಿ ಚಾಲ್ತಿಯಲ್ಲಿದೆ. ಇದನ್ನು ಈಚೆಗೆ ಮತ್ತೆ ಮತ್ತೆ ಪ್ರತಿಪಾದಿಸಲಾಗುತ್ತಿದೆ. ಇದು ಸರಿಯಾದ ಚಿಂತನೆ ಅಲ್ಲ.ಕೆಲವರು ತಮ್ಮ ಅನುಕೂಲಕ್ಕಾಗಿ ಮಾಡಿಕೊಂಡ ಸಮಜಾಯಿಸಿ. ಕೃತಿಯೊಂದನ್ನು ಓದುವಾಗ ಲೇಖಕನ ವೈಯಕ್ತಿಕ ಬದುಕು ಮುಖ್ಯವಾಗದೇ ಇರಬಹುದು. ಆದರೆ ವಿಚಾರಗಳು ಮುಖ್ಯ ಆಗುವುದಿಲ್ಲ ಅಂದರೆ ಹೇಗೆ? ಅದು ಆತನ ಕಾವ್ಯದಲ್ಲಿ ಪ್ರತಿಫಲಿಸುವುದಿಲ್ಲ ಎಂದರೆ ಹೇಗೆ? ಒಬ್ಬ ಲೇಖಕನ ವಿಚಾರ ಆತನ ಕಾವ್ಯದಲ್ಲಿಯೂ ಖಂಡಿತ ಪ್ರತಿಫಲಿಸುತ್ತದೆ. ಫ್ಯಾಸಿಸ್ಟ್ ರ ಸಮರ್ಥನೆಗೆ ನಿಂತ ಲೇಖಕ ಮತ್ತು ಕಲಾವಿದರ ಬಗ್ಗೆ ಪ್ರಸ್ತಾಪಿಸುತ್ತಾ ಈ ಮಾತನ್ನು ನಾನು ಹೇಳುತ್ತಿದ್ದೇನೆ. ಕೃತಿ ರಚಿಸಿ ಮೌನವಾಗಿ ಕೂತವರಲ್ಲವೇ ಅವರು?

ಇಲ್ಲಿನ ಸಮರ್ಥನೆಯನ್ನು ನೋಡಿ. ಫ್ಯಾಸಿಸ್ಟರ ಪಕ್ಕದಲ್ಲಿ ನಿಂತೂ ಒಬ್ಬ ಅತ್ಯುತ್ತಮ ಕವಿಯಾಗಿರುವ ಸಾಧ್ಯತೆ ಇದೆ ಎಂಬುದು ಹಾಗೆ ಹೇಳುವವರ ಮಾತಿನ ಹಿಂದಿರುವ ಮರ್ಮ.ಇರಬಹುದು.ಆದರೆ ಒಳ್ಳೆಯ ಕವಿ ಎನ್ನುವುದಕ್ಕೆ ಮಾನದಂಡ ಯಾವುದು? ಆತನ ಕಾವ್ಯ ವಾಚ್ಯವಾಗಿಲ್ಲ ಎಂಬುದೇ? ಒಳ್ಳೆಯ ಕಾವ್ಯದ ಮಾನದಂಡ ಯಾವುದು?
ಅದು ಸಾರ್ವಕಾಲಿಕ ಸತ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದೇ? ಯಾವುದು ವಾಚ್ಯ ಯಾವುದು ವಾಚ್ಯ ಅಲ್ಲ? ವಾಚ್ಯ ಅಂದರೆ ಹೇಗೆ ವಾಚ್ಯ? ಯಾವುದು ಸಾರ್ವಕಾಲಿಕ ಸತ್ಯ? ಇದನ್ನೆಲ್ಲ ನಿರ್ಧರಿಸುವವರು ಯಾರು? ಆ ಕವಿಯ ಮನಸ್ಥಿತಿಯನ್ನೇ ಹೊಂದಿರುವವರು ಅಲ್ಲವೇ? ಆತನ ಆಪ್ತ ವಲಯಕ್ಕೂ ಸೇರಿದವರಲ್ಲವೇ? ತಾವು ರೂಪಿಸಿದ ಮಾನದಂಡಗಳಿಗೆ ತಕ್ಕ ಹಾಗೆ ಇದ್ದರೆ ಮಾತ್ರ ಅದು ಕಾವ್ಯ ಎನ್ನುವವರಲ್ಲವೇ? ವಿಮರ್ಶೆಯ ಸೂತ್ರಗಳೂ ಅವರದೇ ಅಲ್ಲವೇ? ಅಂತಿಮ ತೀರ್ಮಾನವೂ ಅವರದೇ ಅಲ್ಲವೇ?


ಇಲ್ಲಿ ಇನ್ನೂ ಒಂದು ವಿಷಯವನ್ನು ಗಮನಿಸಬೇಕು. ಒಂದು ವೇಳೆ ಆ ಕವಿಯ ಕಾವ್ಯವನ್ನು ಮೆಚ್ಚಿಕೊಂಡರೂ ಹಾಗೆ ಮೆಚ್ಚಿಕೊಳ್ಳುತ್ತಲೇ ಆತನ ಫ್ಯಾಸಿಸ್ಟ್ ಹಿನ್ನೆಲೆಯ ಬಗ್ಗೆಯೂ ಹೇಳಬೇಕಲ್ಲವೇ? ಆತನ ನಿಲುವನ್ನು ತಾನು ಒಪ್ಪುವುದಿಲ್ಲ ಎಂದಾದರೂ ದಾಖಲಿಸಬೇಕಲ್ಲವೇ? ಇಲ್ಲಿಯೇ ಸಮಸ್ಯೆ ಇರುವುದು. ಹಾಗೆ ಮಾಡುವುದೇ ಇಲ್ಲ ಅವರನ್ನು ಸಮರ್ಥಿಸುವ ಮಹಾನ್ ಸಹಲೇಖಕರು ಮತ್ತು ವಿಮರ್ಶಕರು. ಪೆಡಸಾಗಿರುವ ‘ಶ್ರೇಷ್ಠ ಕವಿ’ಯ ಮೆದುಳನ್ನು ಬಿಟ್ಟು ಅವನ ಕಾವ್ಯವನ್ನು ಮಾತ್ರ ನೋಡುವವರು! ಕನ್ನಡ ಲೇಖಕರನ್ನೇ ತೆಗೆದುಕೊಳ್ಳಿ. ಪಾಶ್ಚ್ಯಾತ್ಯ ಲೇಖಕನೊಬ್ಬನನ್ನು ಕನ್ನಡಕ್ಕೆ ತರುವಾಗ ಅವರ ಅಂತಹ ಹಿನ್ನೆಲೆಯನ್ನು ಇವರು ಮರೆಮಾಚಿದ್ದೇ ಹೆಚ್ಚು. ‘ಶ್ರೇಷ್ಠ ಕವಿ’ಗಳೆಂದು ಯಾರೋ ಹೇಳಿದ್ದ ಮಾತನ್ನು ಇಲ್ಲಿಯೂ ಹೇಳಿ ಅಂತಹ ಲೇಖಕರನ್ನು ಪಾರುಮಾಡುವ ಘನ ಸಾಹಸವನ್ನು ಮಾಡಿದ್ದೇ ಹೆಚ್ಚು. ಈ ಚಿಂತನೆಯನ್ನು ಮುಂದಿನ ಪೀಳಿಗೆಗೆ ದಾಟಿಸಿದರು ಕೂಡ. ಇದು ಇಂದಿನ ಕಾವ್ಯ ಪ್ರಪಂಚದಲ್ಲಿ ಚಾಲ್ತಿಯಲ್ಲಿರುವ ಗೊಂದಲಮಯ ವಾತಾವರಣಕ್ಕೆ ಕಾರಣ.

ತಾವು ಕೂಡ ಒಂದು ಸಾಂಸ್ಕೃತಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಮೌನವಾಗಿರಬಹುದು ಅಥವಾ ಪ್ರಭುತ್ವದ ಓಲೈಕೆಯಲ್ಲಿ ತೊಡಗಿರಬಹುದು ಮತ್ತು ಹಾಗಿದ್ದೂ ಕವಿ ಎನಿಸಿಕೊಳ್ಳಬಹುದು ಎಂಬ ಯೋಚನೆಯನ್ನು ಇದು ಬೆಳೆಸಿತು. ನಮ್ಮ ಲೇಖಕರು ಯಾವುದೇ ಅಳುಕೂ ಇಲ್ಲದೆ ಸರ್ವಾಧಿಕಾರಿ ಧೋರಣೆಯ ಸರಕಾರವೊಂದು ನೀಡುವ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುತ್ತಿರುವುದೂ ಈ ಧೋರಣೆಯಿಂದಾಗಿಯೇ. ಇಲ್ಲಿನ ವೈಚಿತ್ರವನ್ನು ನೋಡಿ. ತಮ್ಮ ಮೆಚ್ಚಿನ ಲೇಖಕರು ಹಾಗೆ ಸರ್ವಾಧಿಕಾರಿ ಧೋರಣೆ ಹೊಂದಿರುವ ಸರಕಾರವನ್ನು ಸಮರ್ಥಿಸಿಯೂ ತಾವು ಒಳ್ಳೆಯ ಮನುಷ್ಯನೂ ಲೇಖಕನೂ ಆಗಿ ಉಳಿಯಬಹುದು ಎಂಬ ಯೋಚನಾಕ್ರಮ ಸಾಹಿತ್ಯದಲ್ಲಿ ಅಲ್ಲದೆ ಬೇರೆ ಯಾವ ಕ್ಷೇತ್ರದಲ್ಲಾದರೂ ಇರಲು ಸಾಧ್ಯವೇ? ಒಬ್ಬ ಸರ್ವಾಧಿಕಾರಿ ರಾಜಕಾರಣಿಯೂ ಕಾಲಕ್ರಮೇಣ ಮಣ್ಣುಮುಕ್ಕುವುದಿದೆ.

ಫ್ಯಾಸಿಸ್ಟ್ ಲೇಖಕ ಮಾತ್ರ ಕಾಲಾನಂತರವೂ ಸಕಲ ಗೌರವಕ್ಕೆ ಪಾತ್ರನಾಗುತ್ತಲೇ ಇರುತ್ತಾನೆ. ಮತ್ತೆ ಹೇಳಬೇಕೆಂದರೆ ಈ ಮಾನದಂಡವನ್ನು ರೂಪಿಸಿದವರು ಅವಕಾಶವಾದಿ ಸಾಹಿತಿಗಳೇ. ಸಾಹಿತಿಗಳು ಎಂದರೆ ಬೇರೆಯೇ ಒಂದು ವರ್ಗ ಮತ್ತು ಅವರು ಎಲ್ಲ ಕಾಲಕ್ಕೂ ಎಲ್ಲಾ ಗೌರವಕ್ಕೂ ಅರ್ಹರು ಎಂಬ ತಮ್ಮ ಪರವಾದ ನಿಲುವನ್ನು ಸಾಹಿತಿಗಳೇ ರೂಪಿಸಿಕೊಂಡಿರುವುದಕ್ಕೆ ಉದಾಹರಣೆ ಇದು. ಇದರಿಂದಾಗಿಯೇ ಕನ್ನಡದ ಒಬ್ಬ ಲೇಖಕ ತನ್ನ ಸಾಮಾಜಿಕ ಜವಾಬ್ದಾರಿಯಿಂದ ತಪ್ಪಿಸಿಕೊಂಡೂ ತಾನೊಬ್ಬ ಮುಖ್ಯ ಸಾಹಿತಿಯೆಂದು ಬೀಗಲು ಸಾಧ್ಯವಾಗಿರುವುದು. ಈ ಹಿನ್ನೆಲೆಯಲ್ಲಿ, ಜಾತಿ, ಪಂಗಡ, ಗುಂಪುಗಾರಿಕೆ, ಪ್ರಶಸ್ತಿ ಸನ್ಮಾನ ಗಳಲ್ಲಿ ಮುಳುಗಿರುವ ನಮ್ಮ ಲೇಖಕರ ವರ್ತನೆಯ ಹಿಂದಿನ ಕಾರಣಗಳನ್ನು ನಾವು ಸ್ಪಷ್ಟವಾಗಿ ಗ್ರಹಿಸಬಹುದು. ಇವರಿಗೆ ಯಾವ ಮಾತುಗಳೂ ಅಂಟಿಕೊಳ್ಳುವುದಿಲ್ಲ. ಎಲ್ಲ ಉಪದ್ವ್ಯಾಪಗಳಲ್ಲಿ ಮುಳುಗಿರುತ್ತಲೇ ಪುರೋಹಿತಶಾಹಿ ಮತ್ತು ಫ್ಯಾಸಿಸಂ ಅನ್ನು ಸಮರ್ಥಿಸುವ ಕವಿಯನ್ನು ಕೂಡ ತಮ್ಮ ‘ಶ್ರೇಷ್ಠ ಕವಿ’ ಎಂದು ಪ್ರತಿಷ್ಠಾಪಿಸಿ ಸಂಭ್ರಮಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂಬುದೇ ಇವರ ಮನಸ್ಥಿತಿ.

ಇದು ಕನ್ನಡದ ದುಸ್ಥಿತಿ ಕೂಡ.

‍ಲೇಖಕರು avadhi

March 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: