ಬಿ ಎಸ್ ಲಿಂಗದೇವರು ಓದಿದ ‘ಬಿಂಬದೊಳಗೊಂದು ಬಿಂಬ’

ಡಾ. ರೇಶ್ಮಾ ಉಳ್ಳಾಲ್ ಅವರ ಸಂಶೋಧನಾ ಕೃತಿ ಈ ತಿಂಗಳ 19 ರಂದು ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

ಈ ಕೃತಿಗೆ ಚಲನಚಿತ್ರ ನಿರ್ದೇಶಕರಾದ ಬಿ ಎಸ್ ಲಿಂಗದೇವರು ಅವರು ಬರೆದ ಮುನ್ನುಡಿ ಇಲ್ಲಿದೆ-

ಬಿ. ಎಸ್. ಲಿಂಗದೇವರು
—-

ಮೊಲೆ, ಮುಡಿ ಬಂದಡೆ ಹೆಣ್ಣೆಂಬರು
ಗಡ್ಡ-ಮೀಸೆ ಬಂದಡೆ ಗಂಡೆಂಬರು
ಒಳಗೆ ಸುಳಿವಾತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ರಾಮನಾಥ

ಎಂಬುದನ್ನು ಶರಣ ದೇವರ ದಾಸಿಮಯ್ಯನವರು ಹೇಳಿದ್ದಾರೆ. ಹಾಗೆಯೇ

ಗಂಡು ಮೋಹಿಸಿ ಹೆಣ್ಣು ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು
ಹೆಣ್ಣು ಮೋಹಿಸಿ ಗಂಡು ಹಿಡಿದಡೆ
ಉತ್ತರವಾವುದದೆಂದರಿಯಬೇಕು?
ಈ ಎರಡರ ಉಭಯವ ಕಳೆದು ಸುಖಿತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ

ಎಂಬುದನ್ನು ಶರಣೆ ಗೊಗ್ಗೆವ್ವೆಯ ಇನ್ನೊಂದು ವಚನವು ಲಿಂಗತಾರತಮ್ಯ ನೀತಿಯನ್ನು ನೀಗಿಕೊಳ್ಳುವ ಮನಸ್ಸಿಗೆ ಸಂಬಂಧಿಸಿದಂತೆ ಹೇಳುತ್ತದೆ.

ಸಲಿಂಗ ಮದುವೆಗೆ ಮಾನ್ಯತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ “ಬಿಂಬದೊಳಗೊಂದು ಬಿಂಬ – ತೃತೀಯ ಲಿಂಗಿಗಳ ಅಸ್ತಿತ್ವ ಮತ್ತು ಸಾಮಾಜಿಕ ಸಂಘರ್ಷ’’ದ ಕುರಿತಾಗಿ ಭಾರತೀಯ ಹಿನ್ನೆಲೆ ಮತ್ತು ದೃಷ್ಟಿಕೋನದಲ್ಲಿನ ಡಾ. ರೇಶ್ಮಾ ಉಳ್ಳಾಲ್ ಅವರ ಈ ಸಂಶೋಧನೆಯು ತೃತೀಯ ಲಿಂಗಿ ಸಮುದಾಯದ ಬದುಕನ್ನು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಸಾರ್ವಜನಿಕ ವಲಯವು ಚರ್ಚಿಸುವುದು ಬಹುಮುಖ್ಯವಾದದ್ದು ಎಂಬ ಭಾವನೆ ನನ್ನದು.

ಏಪ್ರಿಲ್ ೧೫, ೨೦೧೪ರಲ್ಲಿ ಸುಪ್ರೀಂ ಕೋರ್ಟ್ ನಿಂದ ‘ತೃತೀಯ ಲಿಂಗಿ ಸಮುದಾಯ ಇನ್ನು ಮುಂದೆ ತಮ್ಮನ್ನು ಪುರುಷ, ಸ್ತ್ರೀ ಅಥವಾ ತೃತೀಯ ಲಿಂಗಿ ಎಂದು ಸ್ವಯಂ ಗುರುತಿಸಿಕೊಳ್ಳುವ ಮತ್ತು ಇದನ್ನು ಯಾವುದೇ ರೀತಿಯಲ್ಲೂ ಪ್ರಮಾಣೀಕರಿಸಿಕೊಳ್ಳುವ ಅವಶ್ಯಕತೆಯಿಲ್ಲ’ ಎಂಬ ಚಾರಿತ್ರಿಕ ತೀರ್ಪು ಬಂದ ನಂತರ ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಸಾರ್ವಜನಿಕರು ಸ್ವಲ್ಪಮಟ್ಟಿಗಾದರೂ ಚರ್ಚಿಸಲು ಆರಂಭಿಸಿದರು ಎನ್ನಬಹುದು.

ಇದಕ್ಕೆ ಪೂರಕವಾಗಿ ತಂತ್ರಜ್ಞಾನದ ಸಹಾಯವು ಇವರಿಗೆ ಬೆಂಬಲವಾಗಿ ಬಂದಿದೆ. ತೃತೀಯ ಲಿಂಗಿಗಳ ಬದುಕನ್ನು ಆಧರಿಸಿದ ಸಾಹಿತ್ಯವನ್ನು ಓದುವ ಸಾಕ್ಷ್ಯ ಚಿತ್ರ ಮತ್ತು ಚರ್ಚೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುವಂತಾಗಿದೆ. ಇದರಿಂದಾಗಿ ತೃತೀಯ ಲಿಂಗಿ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಾಗಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಆದರೂ ಈ ಎಲ್ಲದರಿಂದ ಕೆಲವೊಂದು ವಿವರಗಳು ಮಾತ್ರ ಲಭ್ಯವಾಗುತ್ತಿತ್ತೇ ವಿನಾ ಸಮಗ್ರವಾಗಿ ನಮಗೆ ಎಲ್ಲಿಯೂ ಏನೂ ಕೂಡಾ ಲಭ್ಯವಿರಲಿಲ್ಲ.

ನಾನು ಕೂಡಾ ತೃತೀಯ ಲಿಂಗಿಗಳು ಎದುರಾದರೆ ಬೇರೊಂದು ಕಡೆ ಮುಖ ಮಾಡಿ ಹೋಗುತ್ತಿದ್ದವನು. ಆದರೆ, ೨೦೦೮ರಲ್ಲಿ ಬೆಂಗಳೂರಿನಲ್ಲಿ ಆದ ಒಂದು ಘಟನೆ ನಾನು ಈ ಸಮುದಾಯವನ್ನು ಅರಿಯಲು ಪ್ರೇರಣೆ ನೀಡಿತು. ಅದರ ಫಲಶ್ರುತಿಯಾಗಿ ಲಿವಿಂಗ್ ಸ್ಮೈಲ್ ವಿದ್ಯಾರವರ ಜೀವನ ಚರಿತ್ರೆ ಆಧರಿಸಿದ ಡಾ. ತಮಿಳ್ ಸೆಲ್ವಿಯವರು ಕನ್ನಡಕ್ಕೆ ಅನುವಾದ ಮಾಡಿದ್ದ ‘ನಾನು ಅವನಲ್ಲ ಅವಳು’ ಎಂಬ ಕನ್ನಡ ಕೃತಿಯನ್ನು ೨೦೧೫ರಲ್ಲಿ ನಾನು ನಿರ್ದೇಶಿಸಿ ಚಲನಚಿತ್ರ ಮಾಡುವಂತಾಯಿತು. ಚಿತ್ರದ ನಾಯಕ ನಟ ಸಂಚಾರಿ ವಿಜಯ್‌ಗೆ ರಾಷ್ಟ್ರ ಪ್ರಶಸ್ತಿಯೂ ಬಂತು, ಬಿಡುಗಡೆಯಾದ ಕಡೆಯೆಲ್ಲಾ ಆಶ್ಚರ್ಯವೆಂಬಂತೆ ಯಶಸ್ವಿಯೂ ಆಯಿತು.

ತೃತೀಯ ಲಿಂಗಿಗಳು ಈ ಶತಮಾನದ ಸೃಷ್ಟಿಯಲ್ಲ ಎಂಬುದು ನಮಗೆ ತಿಳಿದಿದ್ದರೂ ಈ ಚಿತ್ರದ ಮೂಲಕ ಸಮುದಾಯವನ್ನು ನಾವು ಮುಖ್ಯವಾಹಿನಿಯಿಂದ ಹೊರಗೆ ಇಟ್ಟಿರುವ ಕುರಿತು ಆತ್ಮಾವಲೋಕನ ನಡೆ ಆರಂಭಗೊಂಡಿದ್ದರ ಜೊತೆಗೆ ಹಲವರಲ್ಲಿ ಈ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಾದದ್ದು ನೋಡುವಾಗ ಚಿತ್ರದ ನಿರ್ದೇಶಕನಾಗಿ ನನಗೆ ಹೆಮ್ಮೆ ಮತ್ತು ಸಾತ್ವಿಕ ಗರ್ವವನ್ನು ಮೂಡಿಸಿದೆ.

ಈ ಹಿನ್ನೆಲೆಯಲ್ಲಿ ಸದರಿ ಸಂಶೋಧನೆಯಲ್ಲಿ ತೃತೀಯ ಲಿಂಗಿಗಳ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ಮತ್ತು ಮಾನಸಿಕ ಸಂಘರ್ಷವನ್ನು ಜಾಗತಿಕ ಮಟ್ಟದಲ್ಲಿ ನಿಂತು ಅವಲೋಕನ ಮಾಡಿರುವುದು ಸ್ತುತ್ಯರ್ಹ. ಇದು ಕನ್ನಡದ ಸಂದರ್ಭಕ್ಕೆ ತೃತೀಯ ಲಿಂಗಿಗಳ ಬದುಕಿನ ಬಗ್ಗೆ ಮಾಡಿರುವ ಮೊದಲ ಸಂಶೋಧನೆಯಾಗಿದ್ದು ನಮಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತದೆ.

ಡಾ. ಆರ್. ಇಂದಿರಾರವರು ಹೇಳಿರುವ “ಸಂಘಜೀವಿಯಾದ ಮನುಷ್ಯ ಒಬ್ಬಂಟಿಯಾಗಿರುವುದೆಂದರೆ ತನಗೆ ತಾನೇ ಶಿಕ್ಷೆಯನ್ನು ವಿಧಿಸಿಕೊಂಡಂತೆ” ಎಂಬ ಮಾತುಗಳು ನಾವುಗಳು ತೃತೀಯ ಲಿಂಗಿಗಳನ್ನು ಮಾನವೀಯ ದೃಷ್ಟಿಯಲ್ಲಿ ನೋಡುವಂತೆ ಮಾಡುತ್ತದೆ. ಪುರಾಣ ಗ್ರಂಥಗಳಲ್ಲಿ ದ್ವಿಲಿಂಗಿಗಳಿರುವ ದೇಹದ ಪರಿಕಲ್ಪನೆಯ ವಿವರಣೆ ನೀಡಲಾಗಿದೆ. ಉದಾಹರಣೆಗೆ ಶಿವ ಅರ್ಧನಾರೀಶ್ವರ ಆಗಿರುವುದು ಹಾಗೆಯೇ ಶಿವ ಮತ್ತು ವಿಷ್ಣುವಿನ ಸಮಾಗಮದಲ್ಲಿ ಹರಿಹರ ಸುತ ಅಯ್ಯಪ್ಪನ ಜನನ. ಪೌರಾಣಿಕ ಕಥೆಯಲ್ಲಿನ ಭೀಷ್ಮಾರ್ಜುನರ ಕಾಳಗದಲ್ಲಿ ಶಿಖಂಡಿಯ ಆಗಮನ. ಇದಲ್ಲದೆ ಬೌದ್ಧ ಮತ್ತು ಇಸ್ಲಾಂ ಧರ್ಮಗಳಲ್ಲೂ ಮತ್ತು ಬೇರೆ ಬೇರೆ ಧರ್ಮದಲ್ಲಿ ತೃತೀಯ ಲಿಂಗಿಗಳ ಸ್ಥಿತಿ ಗತಿಗಳನ್ನು ದಾಖಲಿಸಲಾಗಿದೆ.

ಲಿಂಗ ಮತ್ತು ಲೈಂಗಿಕತೆ ಮನುಷ್ಯ ಜೀವನದ ವೈಯಕ್ತಿಕ, ಭಾವನಾತ್ಮಕ ಅಂಶ. ಮನುಷ್ಯನ ಸುಖಕರ ಜೀವನಕ್ಕೆ ಇದೇ ಮೂಲಾಧಾರ. ಇದರ ಜೊತೆಗೆ ಮನುಷ್ಯನ ಮಾನಸಿಕ ಸ್ವಾಸ್ಥ್ಯವು ಸಮಾಜದ ಸ್ಥಿತ್ಯಂತರದ ಹೊರತಾಗಿ ರಕ್ಷಿಸಲ್ಪಡುವುದು ಮತ್ತು ಸ್ವಸ್ಥ ಸಮಾಜ ನಿರ್ಮಿಸುವುದು ಕರ್ತವ್ಯವೂ ಆಗಿರುತ್ತದೆ ಎಂಬುದನ್ನು ವೈದ್ಯಕೀಯ ಪರಿಭಾಷೆಯ ಹಿನ್ನೆಲೆಯಲ್ಲಿ ಮತ್ತು ನಿಖರವಾದ ಸಂಪೂರ್ಣ ಮಾಹಿತಿಯ ರೂಪದಲ್ಲಿ ಈ ಸಂಶೋಧನೆ ನೀಡಿದೆ.

ಮದುವೆ ಎಂಬುದು ಮಹಿಳೆ ಹಾಗೂ ಪುರುಷನ ನಡುವಿನ ಬಂಧ. ಅದು ಸಲಿಂಗಿಗಳಿಗೆ ಸಂಬಂಧಿಸಿದ್ದಲ್ಲ. ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಿದರೆ ದೇಶದ ಸಾಂಸ್ಕೃತಿಕ ತಳಹದಿಯೇ ಕಂಪಿಸಲಿದೆ. ಹಿಂದೂ ವಿವಾಹ ಕಾಯ್ದೆಯ ಮೂಲ ಆಶಯಗಳಿಗೆ ಧಕ್ಕೆ ಎದುರಾಗಲಿದೆ. ಹಿಂದೂ ಧರ್ಮದ ಸ್ವರೂಪಕ್ಕೆ ಕುಂದುಂಟಾಗಲಿದೆ ಎನ್ನುವ ವಾದ ಮುಂದಿಟ್ಟುಕೊಂಡಿರುವ ಸಮಾಜಕ್ಕೆ ತಮಿಳುನಾಡಿನ ಕೂವಗಂ ದೇವಾಲಯದಲ್ಲಿ ನಡೆಯುವ ಕೂತಂಡವರ್ ಹಬ್ಬದಲ್ಲಿ ಹರಕೆ ಹೊತ್ತು ಪುರುಷರು ಸ್ತ್ರೀ ವೇಷ ಧರಿಸಿ ಅರವನ್ ವಿವಾಹವಾಗುವ ಸಂಪ್ರದಾಯ ಈಗಾಗಲೇ ರೂಢಿಯಲ್ಲಿದೆ ಎಂಬುದನ್ನೂ ಸಹ ದಾಖಲೀಕರಿಸಲಾಗಿದೆ.

ದೇಶವು ಈಗ ಮಾತೃತ್ವದ ಪರಿಕಲ್ಪನೆಯನ್ನು ದಾಟಿ ಬಹಳ ಮುಂದಕ್ಕೆ ಸಾಗಿದೆ ಮತ್ತು ಪಾಲಕತ್ವದ (ಗಾರ್ಡಿಯನ್) ಪರಿಕಲ್ಪನೆಯೆಡೆಗೂ ಹೆಜ್ಜೆ ಇಟ್ಟಿದೆ. ತಂದೆ ಅಥವಾ ತಾಯಿ (ಸಿಂಗಲ್ ಪೇರೆಂಟ್) ಮಗುವನ್ನು ಸಲಹುತ್ತಿರುವ ಅನೇಕ ಉದಾಹರಣೆಗಳು ನಮ್ಮ ಎದುರಿಗಿದೆ. ವೈವಾಹಿಕ ಸ್ಥಾನಮಾನ ಏನೇ ಇದ್ದರೂ ವ್ಯಕ್ತಿಯೊಬ್ಬ ಮಗುವನ್ನು ದತ್ತು ತೆಗೆದುಕೊಳ್ಳು ವುದಕ್ಕೆ ಭಾರತೀಯ ಕಾನೂನು ಅವಕಾಶ ನೀಡುತ್ತದೆ ಎಂಬುವುದನ್ನು ಸುಪ್ರೀಂ ಕೋರ್ಟ್ ಹೇಳಿದೆ.

ಸದರಿ ಕೃತಿಯು ತೃತೀಯ ಲಿಂಗಿಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಸ್ಫೂರ್ತಿಯಾಗುತ್ತದೆ ಮತ್ತು ಸರಕಾರವು ಈ ಸಮುದಾಯಕ್ಕೆ ಸಿಗಬೇಕಾದ ಸವಲತ್ತು, ಹಕ್ಕುಗಳನ್ನು ನೀಡಲು ಮತ್ತು ಸ್ವಸ್ಥ ಸಮಾಜ ನಿರ್ಮಾಣ ಮಾಡಲು “ಬಿಂಬದೊಳಗೊಂದು ಬಿಂಬ-ತೃತೀಯ ಲಿಂಗಿಗಳ ಅಸ್ತಿತ್ವ ಮತ್ತು ಸಾಮಾಜಿಕ ಸಂಘರ್ಷ” ಕೃತಿಯು ಸಹಾಯಕವಾಗುತ್ತದೆ ಎಂಬ ನಂಬಿಕೆ ನನ್ನದು.

‍ಲೇಖಕರು avadhi

October 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: