ಎಚ್.ಎಸ್.ವಿ ಓದಿದ ‘ಹೆಣ್ಣಾಲದ ಮರ’

ಸುಮತಿ ಕೃಷ್ಣಮೂರ್ತಿ ಅವರ ನೂತನ ಕವನ ಸಂಕಲನ ‘ಹೆಣ್ಣಾಲದ ಮರ’ ಈ ತಿಂಗಳ 22 ರಂದು ಬಿಡುಗಡೆಯಾಗಲಿದೆ.

ಸಂಕಲನಕ್ಕೆ ಡಾ ಎಚ್ಎಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ-

ಎಚ್.ಎಸ್. ವೆಂಕಟೇಶಮೂರ್ತಿ

—–
ಸುಮತಿ ಕೃಷ್ಣಮೂರ್ತಿ ತಮ್ಮ ಅಪಾರವಾದ ಕಾವ್ಯ ಪ್ರೀತಿಯಿಂದ ನನಗೆ ಪ್ರಿಯರಾದವರು. ಹಿಂದಿನಿಂದ ಗೊತ್ತಾದದ್ದು ಅವರು ಸ್ವತಃ
ಒಳ್ಳೆಯ ಕವಿ ಎಂಬುದು. ತಮ್ಮ ಕವಿತೆಗಳ ಹಸ್ತ ಪ್ರತಿ ಕಳಿಸಿ ಮುನ್ನುಡಿಯಾಗಿ ಕೆಲವು ಮಾತು ಬರೆದುಕೊಡುವಿರಾ ಎಂದು ಅವರು ಕೇಳಿದಾಗ, ಕವಿತೆಗಳನ್ನು ಓದಿ ಆ ಬಗ್ಗೆ ಹೇಳುತ್ತೇನೆ ಎಂದೆ. ಕವಿತೆ ಕಳಿಸಿದರು. ಮನಸ್ಸಿಟ್ಟು ಅವನ್ನು ಓದಿದ್ದೇನೆ. ಓರ್ವ ನಿಜವಾದ ಕವಿಯ ಎದೆಮಿಡಿತಗಳನ್ನು ಅಲ್ಲಿ ಕಂಡು ಸಂತೋಷಪಟ್ಟಿದ್ದೇನೆ. ಆ ಸಂತೋಷವನ್ನು ಓದುಗರಿಗೂ ಸೂಚಿಸುವದಕ್ಕಾಗಿ ಕೆಲವು ಮಾತುಗಳು.
ಒಂದು ಸಾಮಾನ್ಯ ಸಂದರ್ಭವನ್ನು ಕವಿತೆಯ ನೆಲೆಗೆ ಎತ್ತುವ ಶಕ್ತಿಯನ್ನು ಸುಮತಿ ಪಡೆದಿದ್ದಾರೆ. ಅವರ ಭಾಷೆಯಲ್ಲಿ ಹಿಂದಿನ ಮತ್ತು ಇಂದಿನ ಪದಗಳ ಹದವಾದ ಸಂಯೋಗವಿದೆ. ಈಚಿನ ದಿನಗಳಲ್ಲಿ ಅಪರೂಪವಾಗಿರುವ ಲಯ ಅವರ ಕವಿತೆಗಳಲ್ಲಿ ಎದ್ದು ಕಾಣುವಂತಿದೆ. ಸಹಜವಾಗಿ ಅವರು ಚಿತ್ರಗಳನ್ನು ಕಟ್ಟಬಲ್ಲರು. ಇವೆಲ್ಲಾ ಓರ್ವ ಕವಿಗೆ ಅಗತ್ಯವಾದ ಕಾವ್ಯಾಂಶಗಳು. ಹೀಗಾಗಿ ಕವಿಯ ಭವಿಷ್ಯದ ಬಗ್ಗೆ ಭರವಸೆ ಸಹಜವಾಗಿಯೇ ಮೂಡುತ್ತಿದೆ.

ಹೆಣ್ಣಾಲದ ಮರ ಸುಮತಿ ತಾಯಿಯ ಬಗ್ಗೆ ಬರೆದ ಒಂದು ಪದ್ಯ. ತಂದೆಯೊಂದಿಗೆ ಮುಖಾಮುಖಿಯಾಗಿಸಿ ಈ ಪದ್ಯವನ್ನು ರಚಿಸಿರುವುದರಿಂದ ಕವಿತೆಗೆ ನವೀನವಾದ ಪಾಕ ಸಿದ್ಧಿಸಿದೆ. ಬೆರಗು ಪದ್ಯದಲ್ಲಿ ವಯಸ್ಸಾದ ವೃದ್ಧ ತನ್ನ ಬಾಲ್ಯದ ನೆನಪುಗಳಿಂದ ಮುಪ್ಪನ್ನು ಅರೆಗಳಿಗೆ ಮರೆತು ಮತ್ತೆ ಬಾಲಕನಾಗುವ ಚೋದ್ಯದ ವರ್ಣನೆ ಹೃದಯಂಗಮವಾಗಿ ಬಂದಿದೆ. ಗೋಕುಲದಲ್ಲಿ ಪುರಾಣವಸ್ತುವನ್ನು ಅತ್ಯಾಧುನಿಕಗೊಳಿಸುವ ಬೆರಗಿದೆ.
ಪಂಚಭೂತ ಎನ್ನುವ ಕಿರುಗವಿತೆ ತನ್ನ ಕಲ್ಪಕತೆಯ ನಾವೀಣ್ಯದಿಂದ ನಮ್ಮನ್ನು ಆಕರ್ಷಿಸುತ್ತದೆ:

ನಿನ್ನ ನೆನೆದೊಡನೆ ಬೀಸುವುದು ಮಂದಾನಿಲ
ಗಾಳಿಗೂ ನಿನ್ನೊಡನೆ ಒಪ್ಪಂದವೇನು?

ನಿನ್ನಗಲಿಕೆ ಯೋಚನೆಯೇ ದಾವಾನಲ
ಅಗ್ನಿಗಟ್ಟುವ ನೀನು ಶ್ರೀರಾಮನೇನು?

ಪರಿಮಿತಿಯ ಮಿತಿ ಇರದ ನೀಲಿ ನಭದಂತೆ
ಅಮೂಲಾಗ್ರ ಆವರಿಸೋ ಚಪ್ಪರವೇ ನೀನು?

ಕಾದು ಬಸವಳಿದಿರುವ ಅಸಹಾಯ ಇಳೆಯಂತೆ
ಸೊರಗಿರುವೆ ನಾನು ಕರುಣೆ ಬಾರದೇನು?

ಝಲ್ಲೆಂದು ಇಳಿ ಜಲಲ ಧಾರೆಯಂತೆ
ಗರಿಗೆದರುವೆನು ನವಿಲಿನಂತೆ

ನಿನ್ನೊಡನೆ ಈ ಜೀವ ಬೆರೆತಾಗಿದೆ
ನೀನಿರದೆ ನನ್ನ ಗುರುತೆಲ್ಲಿದೆ?

ಕವಿತೆಯಲ್ಲಿ ಪುರುಷನ ಬಗೆಗೆ ಇರುವ ಮಿಶ್ರಭಾವ ಹೊಸರೀತಿಯಲ್ಲಿ ಪ್ರಕಟಗೊಂಡಿದೆ. ಪಂಚಭೂತಗಳನ್ನು ಹಿನ್ನೆಲೆಯಲ್ಲಿ ಇರಿಸಿಕೊಂಡು ಸ್ತ್ರೀ ಪುರುಷ ಸಂಬಂಧವನ್ನು ಜಟಿಲವಾದ ನೆಲೆಯಲ್ಲೇ ಬಿಡಿಸಿಡುವ ಪದ್ಯ ಸೂಕ್ಷ್ಮ ಓದುಗರನ್ನು ಸಹಜವಾಗಿಯೇ ಆಕರ್ಷಿಸುತ್ತದೆ.
ವಾಸ್ತವವಾಗಿ ಅವರ ದೀರ್ಘ ಪದ್ಯಗಳಿಗಿಂತ ಅಡಕವಾದ ಕಿರುಗಾತ್ರದ ಕವಿತೆಗಳು ಹೆಚ್ಚು ಸಾಂದ್ರವಾಗಿವೆ. ಬೊಗಸೆ ಎಂಬ ಪದ್ಯವನ್ನು ಗಮನಿಸಿ:

ಬೊಗಸೆಯಷ್ಟು ಬಾಣು ಮಾತ್ರ ನನಗೆ ಬೇಕಿದೆ
ಅಲ್ಲಿ ನಾನು ಕನಸ ಬೀಜ ಬಿತ್ತಬೇಕಿದೆ

ತಾರೆಗಳನ್ನು ತುದಿಬೆರಳಲ್ಲಿ ಮುಟ್ಟಬೇಕಿದೆ
ಚಂದಿರನ ಕೆನ್ನೆ ಸೋಂಕಿ ಹೊಳೆಯಬೇಕಿದೆ

ನಿತ್ಯ ನವ್ಯಮೋಡಗಳ ಸೀರೆ ಉಟ್ಟು
ಅಂಗಳದ ಸುತ್ತ ನೀರು ಚಿಮುಕಿಸಿಟ್ಟು

ಏಳು ಬಣ್ಣಗಳ ಎಳೆಯನೆಳೆಯ ಬೇಕಾಗಿದೆ
ಬೆಳಕ ಹಾದಿ ಹಿಡಿದು ಮನಸು ಬೆಳಗಬೇಕಿದೆ.

ಬಯಕೆ ಎನ್ನುವ ಪದ್ಯದಲ್ಲಿ ಪ್ರೇಮಿಯ ತನ್ನ ಪ್ರೇಯಸಿಗೆ ಕೊಡುವ ಭರವಸೆಗಳು ತೀರ ಹೊಸ ಬಗೆಯಲ್ಲಿವೆ. ಅನುರಾಗ ಎಂಬ ಪದ್ಯದಲ್ಲಿ ಕೃಷ್ಣ ರಾಧೆಯೊಂದಿಗೆ ನಡೆಸುವ ಪ್ರಣಯ ಸಲ್ಲಾಪ ಆಕರ್ಷಕವಾಗಿದೆ.

ಹೆರಳಲ್ಲಿ ಮಾರುದ್ದ ಅರಳು ಮಲ್ಲಿಗೆ ಮಾಲೆ
ಮುಡಿಸುವ ನೆಪದಲ್ಲಿ ನಿನ್ನ ಸೋಕಿಬಿಡಲೆ?
ಬೆನ್ನಲ್ಲಿ ಅವಿತಿರುವ ಪುಟ್ಟ ಮಚ್ಚೆಯೊಂದಕ್ಕೆ
ಸಿಹಿಯಾದ ಮುತ್ತೊಂದ ಪಟ್ಟಂತ ಕೊಡಲೆ?

ರಾಧಾಕೃಷ್ಣರ ಪ್ರಣಯ ಇಲ್ಲಿ ಹೊಸ ನುಡಿಗಟ್ಟೊಂದನ್ನು ಸಾಧಿಸಿದೆ.
ಬಂಧು, ಪ್ರಣಯ, ಹುಣ್ಣಿಮೆ (ಇಲ್ಲಿ ವರ್ತಮಾನ ಮತ್ತು ಪುರಾಣವನ್ನು ಬೆಸೆಯುವ ಎರಕ ಮನಸೆಳೆಯುತ್ತದೆ), ಅಯ್ಯೋಪಾಪ(ಈ ಪದ್ಯದ ಐರನಿ ಕವಿತೆಯನ್ನು ಹೊಸ ದೆಸೆಗೆ ಒಯ್ಯುತ್ತದೆ)- ಸಂಗ್ರಹದ ಇತರ ಆಕರ್ಷಕ ಕವಿತೆಗಳು. ಸುಮತಿ ನಿಜಕ್ಕೂ ಭರವಸೆ ನೀಡುತ್ತಿರುವ ಪ್ರತಿಭಾವಂತ ಕವಿ.. ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಕಾವ್ಯಶ್ರದ್ಧೆ ಮತ್ತು ಪೂರ್ವಾಕಾವ್ಯಾಭ್ಯಾಸ ಅವರನ್ನು ಬಹು ದೂರಕ್ಕೆ ಕರೆದೊಯ್ಯಬಲ್ಲುದು.

‍ಲೇಖಕರು avadhi

October 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: