ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಡದೆ ಕಾಡಿದ ಮೂಗಮ್ಮ

ಚಿನ್ನಸ್ವಾಮಿ ವಡ್ಡಗೆರೆ

ಅವಳು ಎಂಬತ್ತು ವರ್ಷ ದಾಟಿದ ಹಣ್ಣು ಹಣ್ಣು ಮುದುಕಿ. ಅವಳ ಹೆಸರು ಮೂಗಮ್ಮ.ಹೌದು ಅವಳಿಗೆ ಹೆಸರಿಟ್ಟವರು ಯಾರಿರಬಹುದು ? ಯಾರಿಗೂ ಗೊತ್ತಿಲ್ಲ.

ಕೇಳಿ ತಿಳಿದುಕೊಳ್ಳೋಣ ಅಂದರೆ ಅವಳಿಗೆ ಮಾತೇ ಬರುವುದಿಲ್ಲ.
ಈಕೆ ದಲಿತರ ಹೆಣ್ಣು ಮಗಳು. ನಮಗೆ ಬುದ್ಧಿ ತಿಳಿದಂದಿನಿಂದಲ್ಲೂ ನಮ್ಮ ಮನೆಯವರಲ್ಲಿ ಒಬ್ಬಳಾಗಿದ್ದಾಳೆ. ಜೊತೆಯಲ್ಲೇ ಕುಳಿತು ಊಟ ತಿಂಡಿ ಮಾಡುತ್ತಾಳೆ ಸಣ್ಣಪುಟ್ಟ ಕೆಲಸಮಾಡಿಕೊಂಡು ನಮ್ಮ ತಾಯಿಗೆ ಜೊತೆಯಾಗಿ ನಮ್ಮೊಂದಿಗೆ ಇದ್ದಾಳೆ.

ಹಿಂದೆ ನಮ್ಮ ಮನೆಯಲ್ಲಿ ಎಪ್ಪತ್ತು ಎಂಭತ್ತು ರಾಸು ಎಮ್ಮೆಗಳಿದ್ದವು. ಅವುಗಳನ್ನು ಮೇಯಿಸುತ್ತಿದ್ದಳು ಮೂಗಮ್ಮ.
ಈಗ ಎಮ್ಮೆ, ದನಕರುಗಳೂ ಇಲ್ಲ. ಬೆಳಗ್ಗೆ ಎದ್ದು ನಮ್ಮ ಮನೆಗೆ ಬಂದು ಬಿಡುತ್ತಾಳೆ. ನಮ್ಮ ಮನೆಯಲ್ಲಿ ತಿಂಡಿ ತಿಂದುಕೊಂಡು ತಾಯಿ ಲಲಿತಮ್ಮ ಅವರೊಂದಿಗೆ ಜೊತೆಯಾಗಿ ಮೂರು ಕಿ.ಮೀ.ದೂರ ನಡೆದುಕೊಂಡೇ ತೋಟಕ್ಕೆ ಬರುತ್ತಾಳೆ.

ನಮ್ಮ ಜೊತೆ ಕುಳಿತು ಊಟ ತಿಂಡಿ ಮಾಡಲು ಮೊದಮೊದಲು ಸಂಕೋಚ ಪಟ್ಟುಕೊಳ್ಳುತ್ತಿದ್ದಳು.ನಾವೇ ಬೈದು ಜಾತಿಗೀತಿ ಎಲ್ಲ ನಮ್ಮತ್ರ ನಡೆಯಲ್ಲ ಅಂತ ಗದರಿಸಿದೆವು. ಜೊತೆಯಲ್ಲಿ ಕುಳಿರಿಸಿಕೊಂಡು ಊಟ ಮಾಡಲು ಶುರುಮಾಡಿದೆವು. ಆಮೇಲೆ ಎಲ್ಲವೂ ಸರಿಯಾಯಿತು.ಮೂಗಮ್ಮ ಸಂಕೋಚ ಬಿಟ್ಟು ನಮ್ಮಲ್ಲಿ ಒಬ್ಬಳಾಗಿ ಇರತೊಡಗಿದಳು.

ಮೊನ್ನೆ ಮೊನ್ನೆ ಮೈಸೂರಿಗೆ ಕರೆದುಕೊಂಡು ಹೋಗಿ ಕಣ್ಣಿಗೆ ಅಪರೇಷನ್ ಮಾಡಿಸಿಕೊಂಡು ಬಂದೆವು. ಈಗ ಕಣ್ಣು ಚೆನ್ನಾಗಿ ಕಾಣುತ್ತದೆ.

ಮೂಗಮ್ಮಳ ಬಗ್ಗೆ ಕುತೂಹಲದಿಂದ ನಾನು ಕೇಳಿದ್ದನ್ನು ನೋಡಿ ಕಡಕೊಳದ ತೋಟದ ಮಾಲೀಕ ಹರೀಶ್ ಹೇಳುತ್ತಾ ಹೋದರು. ಇದನ್ನೆಲ್ಲ ಎದುರಿಗೆ ನಿಂತು ಕೇಳಿಸಿಕೊಳ್ಳುತ್ತಿದ್ದ ಮೂಗಮ್ಮ ತುಟಿ ಅಂಚಿನಲ್ಲೇ ನಕ್ಕರು. ಆ ನಗುವಿಗೆ ನಾನಾ ಅರ್ಥಗಳು ಇರಬಹುದೇ!?.

ಅವಳಿಗೆ ಮಕ್ಕಳು ಮರಿ ಇಲ್ಲವೇ ಅಂದೆ. ಮದುವೆ ಆಗಿದ್ರೆ ತಾನೇ ಮಕ್ಕಳು ಮರಿ.ಅವಳಿಗೆ ಮದುವೆಯೇ ಆಗಿಲ್ಲ ಎಂದು ನಿರ್ಲಿಪ್ತವಾಗಿ ಹೇಳಿದರು.
ಮೊದಲ ನೋಟದಲ್ಲಿ ಮೂಗಮ್ಮಳನ್ನು ನೋಡಿದ ನಾನು ಆಕೆಯ ಮುಖದ ಮೇಲಿನ ಮಂದಹಾಸ ನೋಡಿ ಬೆರಗಾದೆ. ಇಂತಹ ಇಳಿ ವಯಸ್ಸಿನಲ್ಲೂ ಹುಲ್ಲು ಕೀಳುತ್ತಾ ತೋಟದಲ್ಲಿ ತಿರುಗಾಡುತ್ತಿದ್ದ ಆಕೆಯ ಚೈತನ್ಯ ಕಂಡು ಮೂಕವಿಸ್ಮಿತನಾದೆ. ಮೂಗಮ್ಮಳನ್ನು ನೋಡುತ್ತಿದ್ದರೆ ಆಕೆಯಲ್ಲಿರುವ ಯಾವುದೋ ಪಾಸಿಟಿವ್ ಎನರ್ಜಿ ನಮ್ಮ ಗಮನವನ್ನು ಆಕೆಯ ಕಡೆಗೆ ಸೆಳೆಯುತ್ತಿತ್ತು.

ಯಾಕೆ ? ನನ್ನ ಕಣ್ಣಲ್ಲಿ ನೀರು ಬಂತು. ಈಗಲೂ ಗೊತ್ತಿಲ್ಲ. ಮೂಗಮ್ಮನಂತಹ ಅಜ್ಜಿ ಇದ್ದಿದ್ದರೆ ಅಂತ ಆ ಕ್ಷಣದಲ್ಲಿ ಅನಿಸಿ ಹಳೆಯದೆಲ್ಲ ನೆನಪಾಯಿತು.

ಕೆಲವು ಮುದುಕಿಯರಿಗೆ ಸಾಕವ್ವನಂತಹ ಗುಣ ರಕ್ತಗತವಾಗಿ ಬಂದು ಬಿಟ್ಟಿರುತ್ತದೆ. ಅಂತಹವರ ಸಾಲಿನಲ್ಲಿ ನಿಲ್ಲಬಲ್ಲ ಶಕ್ತಿಯನ್ನು ಮೂಗಮ್ಮ ಪಡೆದು ಬಂದಿರುವಂತೆ ಕಂಡಿತು.

ಮನುಷ್ಯನಿಗೆ ಮಾತೇ ಬಾರದಿದ್ದರೆ ಬದುಕು ಎಷ್ಟೊಂದು ಅರ್ಥಪೂರ್ಣವಾಗಿರುತ್ತಿತ್ತು. ಕೇವಲ ಮಾತಿನಿಂದಲ್ಲೇ ಹುಟ್ಟಿಕೊಳ್ಳುವ ಅಸೂಯೆ,ದ್ವೇಷ ಮನುಷ್ಯರನ್ನು ಎಷ್ಟೊಂದು ಸಣ್ಣವರನ್ನಾಗಿಸಿಬಿಡುತ್ತದೆ. ಅದಕ್ಕೆ ಪ್ರೀತಿಯ ಭಾಷೆ ಮೌನ ಅಂತ ಅರಿತವರು ಕರೆದಿರುವುದು.

ಅರ್ಥಪೂರ್ಣ ಮೌನದಿಂದ ಜಗತ್ತನ್ನೆ ಗೆದ್ದ ಬುದ್ಧ. ಸುಮ್ಮನಿದ್ದರೆ ಚಳಿಯೂ ನಡಗುವುದು ಎಂದ ಸಂತರು. ಯಾಕೋ ಕಾಣೆ ತೋಟದಲ್ಲಿ ಕಂಡ ಮೂಗಮ್ಮ ಈ ಕ್ಷಣದಲ್ಲೂ ಬಿಡದೆ ಕಾಡುತ್ತಿದ್ದಾಳೆ. ಆಕೆಯ ಸಹಜ ಮೌನ ನನ್ನಲ್ಲಿರುವ ನೂರಾರು ಪ್ರಶ್ನೆಗಳಿಗೆ ಉತ್ತರವಾಗಿ ಕಾಡುತ್ತಿದೆ. ಸಾವಿರ ಮಾತುಗಳು ಹೇಳುವುದನ್ನು ಆಕೆಯ ಮೌನ ಕ್ಷಣದಲ್ಲಿ ಹೇಳಿ ಮುಂದೆಹೋದಂತೆ ಅನಿಸುತ್ತಿದೆ.

ಜಾತಿಯನ್ನು ಮೀರಿದ ಅವರ ಪ್ರೇಮ.ತಾವು ಜಾತಿ ಮೀರಿದವರು ಎಂಬ ಪ್ರಜ್ಞೆಯೇ ಇರದೆ ಸಹಜವಾಗಿ ಮಾನವೀಯವಾಗಿ ಬದುಕು ಕಟ್ಟಿಕೊಂಡಿರುವ ಮಣ್ಣಿನ ಮಕ್ಕಳು. ಹಸಿರು, ಬಣ್ಣ ಬಣ್ಣದ ಹಕ್ಕಿಪಕ್ಷಿಗಳು, ಹಣ್ಣು ಹೊತ್ತು ನಿಂತ ಗಿಡಮರಗಳು. ತೋಟದ ಮಾಲೀಕರ ಸಹಜ ಮುಗ್ಧ ಮಾತುಗಳು. ಮಾತುಮಾತಿಗೂ “ಹಕ್ಕಿಪಕ್ಷಿಗಳಿಗೂ ಊಟ ಬ್ಯಾಡ್ವಾ ಸಾ. ಅದಕ್ಕೆ ನಾವೂ ಗಿಡದಿಂದ ಹಣ್ಣು ಕಿತ್ತು ಮಾರುವುದಿಲ್ಲ” ಎಂಬ ಅವರ ವಿಶಾಲ ಹೃದಯದ ಅಂತರಾಳದ ಮಾತುಗಳು.
ತುಂಬಾ ತೋಟದಲ್ಲಿ ಕಂಡ ಹತ್ತಾರು ಮುಖಗಳು ಹೀಗೆ ಬಿಡದೆ ಕಾಡಿವೆ.

ಎಲ್ಲವೂ ನಿಸರ್ಗದಂತೆ, ಗಾಳಿಯಂತೆ,ನೀರಿನಂತೆ, ಗಿಡದಂತೆ ಯಾವ ನೆನಪಿನ ಹಂಗು ಇರದೆ ಸಹಜವಾಗಿ ಕಂಡವು. ಇದರ ನಡುವೆ ಮೂಗಮ್ಮ ಕಾಡುವ ಅಜ್ಜಿಯಾದಳು. ಇದೆಲ್ಲ ಅನಿಸಿದ್ದು. ನೆನ್ನೆ ನಾನು ಕಡಕೊಳದ ಜಯಪ್ಪನವರ ತೋಟಕ್ಕೆ ಹೋಗಿದ್ದಾಗ. ಮೂಗಮ್ಮಳನ್ನು ನೋಡಿದಾಗ. ಯಾಕೋ ಇದನ್ನು ನಿಮಗೆ ಹೇಳದೆ ಇರಲು ಮನಸ್ಸಿಗೆ ಸಾಧ್ಯವೇ ಆಗಲಿಲ್ಲ. ಈಗ ಮನಸ್ಸು ಹಗುರದಂತೆ ಅನಿಸುತ್ತಿದೆ. ಮೂಗಮ್ಮ ಮೂಕ ಭಾಷೆಯಲ್ಲಿ ಹೇಳಿದ್ದನ್ನು ನಿಮಗೆ ದಾಟಿಸಿ ನಿರಾಳವಾಗಿದ್ದೇನೆ.ಉಳಿದದ್ದು ನಿಮಗೇ ಬಿಟ್ಟಿರುವೆ……

‍ಲೇಖಕರು admin

25 April, 2017

2 Comments

  1. Prasad

    Beautiful write-up! Inspiring souls…

    – Prasad, Republic of Angola

  2. Godlabeelu Parameshwara

    Good one Chinnaswamy ji.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading