ಬಿಕರಿಯಾಗುವ ದೇಹ, ಬದುಕ ಈಜುವ ಪರಿ

 ಪ್ರದೀಪ.ಟಿ.ಕೆ

ಆಕೆಗಾಗ ಇನ್ನೂ ಹದಿನೆಂಟರ ಹರೆಯ. ಹೆತ್ತವರ ಕಣ್ಣಲ್ಲಿ ಮಗಳ ಭವ್ಯಭವಿತವ್ಯದ ಕನಸು, ಕಾಡುವ ಬಡತನ. ಈಕೆಗೋ ಚೆನ್ನಾಗಿ ಓದಿ, ಒಂದೊಳ್ಳೆ ನೌಕರಿ ಹಿಡಿದು ಅಪ್ಪ- ಅಮ್ಮ, ತಮ್ಮನ್ನ ನೋಡಿಕೊಳ್ಳುವ ಹಂಬಲ. ಗುರಿಮುಟ್ಟುವ ತವಕದಲ್ಲಿ ಈಕೆ ಚೆನ್ನಾಗಿಯೇ ಓದುತ್ತಿದ್ದಳು. ಇಂತಿಪ್ಪ ಸಮಯದಲ್ಲೇ ಅದೊಬ್ಬ ಹುಡುಗ ಈಕೆಗೆ ಹಿಡಿಸಿದ. ವಯೋಸಹಜ ಆಕರ್ಷಣೆ ಪ್ರೀತಿಯ ಹೆಸರು ಪಡೆಯಿತು. ಈಕೆ ಕನಸು ಕಂಡಳು. ಓದು, ಆಮೇಲೆ ಕೆಲಸ. ಈತನೊಟ್ಟಿಗೆ ಮದುವೆ, ಸುಂದರ ಸಂಸಾರ ಎಂದು.

ಈತ ಪ್ರೀತಿಸುವ ನಾಟಕವಾಡಿದ. ಆಕೆಯನ್ನ ನಂಬಿಸಿದ. ಎರಡು ದೇಹಗಳೊಂದಾದ ಆ ಹೊತ್ತು ಈಕೆ ಭಯದಿಂದ ಕಂಪಿಸಿದಳು. ಆತ ಭರಪೂರ ಭರವಸೆ ನೀಡಿ ಮುಂದುವರಿದ. ಅದೊಂದು ಬಿಸಿಲು ಮಧ್ಯಾಹ್ನ ಈತ ಆಕೆಯನ್ನು ಕರೆದುಕೊಂಡು ಹೊರಟ. ಮನೆಯವರು ಮದುವೆಗೆ ಒಪ್ಪುವುದಿಲ್ಲವೆಂದೂ, ಓಡಿ ಹೋಗಿ ಮದುವೆಯಾಗಿ ಬಂದರೆ ಇವರೇನೂ ಮಾಡಲಾಗುವುದಿಲ್ಲವೆಂದೂ ನಂಬಿಸಿದ. ಬೆಂಗಳೂರಿಗೆ ಬಂದಂತೆ ದೇವಸ್ಥಾನವೊಂದರಲ್ಲಿ ಅರಿಶಿಣದ ಕೊಂಬೊಂದನ್ನು ಈಕೆಯ ಕುತ್ತಿಗೆಗೆ ಬಿಗಿದು, ಚಿಕ್ಕ ಕೋಣೆಯೊಂದರಲ್ಲಿ ಸಂಸಾರ ಹೂಡಿದ. ಈಕೆ ಓದು, ಕುಟುಂಬದ ಮಾತು ತೆಗೆದರೆ ದಂಡಿ ಉಪದೇಶ ನೀಡಿ ಸುಮ್ಮನಾಗಿಸಿದ.

ಕೆಲದಿನಗಳಷ್ಟೆ. ಈತ ಯಾರು ಯಾರನ್ನೋ ಕರೆತಂದ. ಅವರೊಟ್ಟಿಗೆ ಮಲಗಲು ಹೇಳಿದ. ಆಕೆಗೆ ನಂಬಲಾಗಲಿಲ್ಲ. ‘ಇದು ಕ್ರೂರ, ನಿನ್ನ ತಂಗಿಯಂತೆ ನಾನು ಮತ್ತೊಬ್ಬನಿಗೆ ಅಕ್ಕ. ಮಿಗಿಲಾಗಿ ನಿನ್ನ ಹೆಂಡತಿ. ಬೇಡ ಕಣೊ’; ಬೇಡಿಕೊಂಡಳು ಹುಡುಗಿ. ಈ ಯಾವುದಕ್ಕೂ ಮಣಿಯದ ಆತ ಅಕ್ಷರಶಃ ಆಕೆಯನ್ನ ಹಲವರಿಗೆ ಮಾರಿದ. ಸಂಧಿಗ್ಧದಲ್ಲಿ ಸಿಕ್ಕಿಕೊಂಡ ಆಕೆ ಪಾತಕತನವನ್ನು ಅರಿಯುವ ಬಗೆ ತಿಳಿಯದಾದಳು. ಆ ಸಮಯಕ್ಕಾಗಲೇ ಆತ ತೊರೆದುಹೋದ. ಆದ ಆಘಾತದಿಂದ ಜರ್ಝರಿತಳಾದ ಆಕೆ ಇನ್ನಿಲ್ಲದಂತೆ ಕುಗ್ಗಿ ಹೋದಳು. ಅಪಾತ್ರನನ್ನು ಪ್ರೀತಿಸಿದ ತನ್ನ ಪರಿಯನ್ನು ಹಳಿದಳು. ಇನ್ನಿರುವುದೊಂದೇ ಹಾದಿ, ಸಾವು. ಸತ್ತು ಬಿಡಲು ನಿರ್ಧರಿಸಿ ಕುಣಿಕೆಗೆ ಕೊರಳೊಡ್ಡಲು ಎದ್ದಳು. ಇವಿಷ್ಟನ್ನು ನೆನೆದಾಗ ಸಾವಿತ್ರಿಯವರ (ನಿಜನಾಮವಲ್ಲ) ಗಂಟಲುಬ್ಬಿ ಬಂತು.

ಬದುಕಿನ ಕಂತೆ ಒಗೆದು ನಡೆದು ಬಿಡುವುದು ಸುಲಭ. ಸಾವಿತ್ರಿ ಹಾಗೇನೂ ಮಾಡಲಿಲ್ಲ. ಹೇಗಾದರೂ ತಾನು ಬದುಕಲೇಬೇಕು. ಈ ಒಡಲ ಹಸಿವ ನೀಗಿಕೊಳ್ಳಬೇಕು. ಕಾಣದೂರಿನಲ್ಲಿ ಅದು ಎಷ್ಟು ಕಷ್ಟದ್ದು ಎಂದು ಬಹುಬೇಗ ಅರಿತಳು. ಆದರೆ ಆದ ಅನ್ಯಾಯದಿಂದ ಆಕೆಯ ಮೈಮನಗಳು ಹೇಸಿಗೆಯಾದ ಭಾವ. ಈಕೆಯ ಪಕ್ಕದ ಮನೆಯ ಗಿರಿಜಾ(ನಿಜನಾಮವಲ್ಲ), ಸಾವಿತ್ರಿಯನ್ನು ಅದೊಂದು ಮನೆಗೆ ಕರೆದೊಯ್ದಳು. ಅಲ್ಲಿ ಹಲವು ಕೋಣೆಗಳು. ನರಳುವ, ಮೆಲ್ಲಗೆ ಚೀರುವ ದನಿಗಳು. ಅದು ಲೈಂಗಿಕ ಕಾರ್ಯಕರ್ತೆಯರ ತಾವು. ಅಲ್ಲಿ ಕೆಲವು ಪೈಸೆಗೆ ಮೈ ಬಿಕರಿಯಾಗುತ್ತಿದ್ದವು.

ಅಪ್ಪಟ ಸಿನಿಮೀಯ ದೃಶ್ಯವೊಂದು ನನ್ನ ಕಣ್ಮುಂದೆ ಸುಳಿಯಿತು. ಆದರಿದು ನಿಜದ ಸಂಗತಿ. ಸಾವಿತ್ರಿ, ಗಿರಿಜೆಯರ ಈ ಕ್ಷಣದ ಸತ್ಯದ ಬದುಕು. ತುತ್ತಿನ ಚೀಲಕ್ಕೆ  ವಿಟಪುರುಷರ ತೊತ್ತಾಗುವ ಈ ಪರಿಸ್ಥಿತಿಗೆ ಆತ ತಳ್ಳಿ, ಎದ್ದು ನಡೆದಿದ್ದ. ನಾನೆಂದೆ, ‘ಅಷ್ಟಕ್ಕೂ ಈ ದಾರಿಯೇಕೆ ಆಯ್ದುಕೊಂಡಿರಿ. ಬದುಕಲು ಎಷ್ಟು ಹಾದಿ, ಕೆಲಸಗಳಿವೆ.’ ಆಕೆಯ ಉತ್ತರ ನನ್ನ ಬಾಯಿ ಕಟ್ಟಿತು. ‘ಇದೂ ಕೆಲಸವೇ ಅಲ್ಲವೇ. ಇದರಲ್ಲೇನು ದೋಷ. ತೆವಲು ಹೆಚ್ಚಾದವರ ತೀಟೆಗೆ ನಾನು ಸಾಧನ. ನಾನಲ್ಲದಿದ್ದರೆ ಇನ್ನೊಬ್ಬಳು. ಆ ಇನ್ನೊಬ್ಬಳು ನನ್ನಾಂತಾಗುವುದು ಬೇಡ.’ ಮುಂದುವರಿದು ಆಕೆ ಹೇಳಿದರು. ‘ಆತ ಪರಮಪಾತಕ ಕೃತ್ಯವೆಸಗಿ ಹೋದಾಗ ಬದುಕು ಕೊನೆಗಾಣಿಸಲು ಮುಂದಾದೆ. ಧೈರ್ಯ ಸಾಲಲಿಲ್ಲ. ಮನೆಗೆ ಮುಖ ತೋರಿಸುವುದೆಂತು ಎಂದು ಚಿಂತೆಯಾಯಿತು.

ಹಾಗೆ ನೋಡಿದರೆ ನಾನು ತಪ್ಪೇ ಮಾಡಿರಲಿಲ್ಲ. ಕೆಲದಿನಗಳು ನಾ ಖಿನ್ನಳಾಗಿದ್ದೆ. ಯಾವುದರಲ್ಲೂ ಆಸಕ್ತಿ ಇಲ್ಲ. ಬದುಕು ಹಾಗೂ ಗಂಡಸಿನ ಬಗ್ಗೆ ಹೇಳತೀರದ ಜಿಗುಪ್ಸೆ. ಇವೆಲ್ಲ ನನ್ನ ಇನ್ನಿಲ್ಲದಂತೆ ಕಾಡಿ ಈ ಕೆಲಸಕ್ಕೆ ದೂಡಿದವು’ ಎಂದಾಗ ಆಕೆ ಹನಿಗಣ್ಣಾದರು. ನಾ ಸಂದರ್ಶಿಸುವುದಕ್ಕೂ ಮುನ್ನಾದಿನ ಆಕೆ ಮತ್ತು ಆಕೆಯ ಗೆಳತಿಯರನ್ನು ಪೊಲೀಸರು ಥಳಿಸಿದ್ದರು. ಕಣ್ಣಿನ ಹುಬ್ಬು ಹಾಗೂ ಮಂಡಿಚಿಪ್ಪಿನ ಬಳಿ ಗಾಯ ನೀಲಿಗಟ್ಟಿಕೊಂಡಿತ್ತು.

ಆಕೆ ಹೇಳಿದರು. ‘ಇದು ನಿತ್ಯದ ಹೊಡೆತ ಸರ್. ಬದುಕಿನ ಅನಿವಾರ್ಯ ನೋವಿದು. ಆತ ಎಣಿಸಿದ ಮೋಸದೆದುರು ಇದು ಕಡಿಮೆ. ಇದ ಬಿಟ್ಟು ಬೇರೆ ಬದುಕಿದೆ ಎಂದೂ ನನಗನ್ನಿಸುವುದಿಲ್ಲ. ಹೊಟ್ಟೆಹೊರೆಯಲಷ್ಟೆ ಈ ಕೆಲಸ. ಅಷ್ಟಕ್ಕೂ ನಮ್ಮ ಮನಸ್ಸು ಬಿಕರಿಯಾಗುವುದಿಲ್ಲ. ಈ ಕೆಲಸದ ಬಗ್ಗೆ ನನಗೆ ಯಾವುದೇ ಕೊರಗಿಲ್ಲ, ಅಸಹ್ಯವಿಲ್ಲ, ಖುಷಿಯೂ ಇಲ್ಲ. ಹಗಲಲ್ಲಿ ಹೊಡೆವವರು, ಜರೆವವರು ರಾತ್ರಿ ನಮ್ಮ ಸೀರೆಯಲ್ಲಿ ಪೇಟ ಕಟ್ಟಿಕೊಳ್ಳುತ್ತಾರೆ. ಇದು ಬದುಕು, ಬದುಕಬೇಕಷ್ಟೆ’ ಎಂದಾಗ ಎಂತದೋ ನಿರ್ಲಿಪ್ತತೆ ಅವರಲ್ಲಿ.

ಒಮ್ಮೆ ಹೀಗಾಯಿತು. ಮುಂಗಾರಿನ ಜಡಿಮಳೆ. ಮೋರಿಗಳಲ್ಲೆಲ್ಲ ತುಂಬಿ ಹರಿದ ಕೆಂಪು, ಕಪ್ಪುನೀರು. ಸಾವಿತ್ರಿ ಮೆಜೆಸ್ಟಿಕ್ ನಿಂದ ಹೊರಟಂತೆ ಎಲ್ಲೋ ಮಗು ಕಿರಿಚುವ, ಅಳುವ ಸದ್ದು. ನಿಂತು, ಕಿವಿಯಾನಿಸಿ ಕೇಳಿದರೆ ಆ ಮೋರಿಯೆಡೆಯಿಂದ ಶಬ್ದ. ಇವರು ಇಳಿದು ನೋಡಿದರೆ ಮೋರಿಯ ಆ ಕಬ್ಬಿಣದ ಸರಳಿಗೆ ಈ ಮಗು ಸಿಕ್ಕಿಕೊಂಡಿದೆ. ಅಷ್ಟೆತ್ತರದ ನೀರಿನಲ್ಲಿ ಮಗು ಉಳಿದಿದ್ದೇ ಹೆಚ್ಚು. ಕುತ್ತಿಗೆ ಮಟ್ಟದ ಆ ಕೊಳಕು ನೀರಿನಲ್ಲಿ ಹೋದ ಇವರು ಮಗುವನ್ನು ಎತ್ತಿ ತಂದರು. ಮಾರನೇಗೆ ಮಗುವಿಗೆ ಜ್ವರ, ಮೈಯ್ಯಲ್ಲೆಲ್ಲ ಬೊಬ್ಬೆ. ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿ, ಅದರ ರೋಗವನ್ನೆಲ್ಲ ವಾಸಿ ಮಾಡಿ, ಅದನ್ನು ಸಾಕಿದರು. ಈಗ ಮಗು ಮಗನಾಗಿ, ಕಾಲೇಜಿಗೂ ಹೋಗುತ್ತಿದೆ. ತನ್ನ ಅನ್ನಕ್ಕೇ ಪಾಡು ಪಡುವ ಸಮಯದಲ್ಲೂ ಈಕೆ ಮಗುವನ್ನು ಎತ್ತಿತಂದು ಬೆಳೆಸಿದರು, ತಾಯಿಯಾದರು.

ಬದುಕಿನಲ್ಲಿ ಕೆಲವು ಕ್ಷಣಗಳಿರುತ್ತವೆ. ದುರಂತವನ್ನೇ ಹೊತ್ತು ತರುವ ಕ್ಷಣಗಳವು. ಅದನ್ನು ದಾಟುವಲ್ಲಿ ಕೆಲವರು ನೋಯುತ್ತಾರೆ, ಕೆಲವರದು ಸಾವು. ಯೋಚಿಸಿ ನೋಡಿ, ಸುರಕ್ಷಿತ ವಲಯದಲ್ಲಿ ಕೂತ ನಾವು ಆಕೆಯ ಬಗ್ಗೆ ವ್ಯಾಖ್ಯೆ ಬರೆಯುತ್ತೇವೆ. ಈಕೆ ಇನ್ನೇನೋ ಮಾಡಬಹುದಿತ್ತು; ಉದ್ದುದ್ದಕ್ಕೆ ಉಪದೇಶಿಸುತ್ತೇವೆ. ಕಾನೂನು, ವ್ಯವಸ್ಥೆ ಅದನ್ನು ತೊಡಕೆನ್ನುತ್ತದೆ. ಜನರು ಅದಕ್ಕೆ ಇಂಬು ನೀಡುತ್ತಾರೆ, ಮರ್ಯಾದೆಯೇ ಮೈವೆತ್ತು ಅದು ಪರಮಾವಧಿ ತಲುಪುತ್ತದೆ. ಅದೇ ವಿಟನೊಬ್ಬ ಅದನ್ನು ಸಾರಾಸಗಟಾಗಿ ದಾಟಿ ಬಿಡಬಲ್ಲ. ಭಾರತೀಯ ಸಮಾಜದಲ್ಲಿ ಹೆಣ್ಣು ತಾನೇ ಸಂಪ್ರದಾಯದ ಗುತ್ತಿಗೆದಾರಳು!! ನಮ್ಮ ಕನ್ನಡಕದಲ್ಲಿ ಕಂಡ ನೋಟಗಳಷ್ಟೆ ಸತ್ಯವಲ್ಲ. ಅದರ ಹಿಂದಿನ ಕಾರಣಗಳೆಷ್ಟೋ ನಮ್ಮದೇ ನಡವಳಿಕೆ, ವ್ಯವಸ್ಥೆಯ ಫಲ. ಲೈಂಗಿಕ ಕಾರ್ಯಕರ್ತೆಯರೆಂದರೆ ಮನುಷ್ಯರಷ್ಟೇ, ಜೀವಗಳವು. ಜೀವಪರ ನಿಲುವು ನಮ್ಮದಾದಾಗ ನಾವು ಮನುಷ್ಯರಾಗುತ್ತೇವೆ. ಮನುಷ್ಯರಾಗೇ ಇರೋಣ.

‍ಲೇಖಕರು nalike

May 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: