ಲಾಂಗ್ಸ್ಟನ್ ಹ್ಯೂಸ್

ಕನ್ನಡಕ್ಕೆ : ಪ್ರಮೋದ ಮುತಾಲಿಕ್
ಮನೆ ಮಾಲೀಕನ ಹಾಡು
ಮಾಲಕರೆ, ಮಾಲಕರೇ
ಸೋರುತಿದೆ ನನ್ನ ಸೂರು
ಹೇಳಿದ್ದೆ ಕಳೆದ ವಾರವೇ
ಇಲ್ಲವೆ ನೆನಪು ನಿಮಗೆ?
ಮಾಲಕರೆ, ಮಾಲಕರೇ
ನೋಡಿ ನೀವೇ ಮುರಿದ
ಮೆಟ್ಟಿಲುಗಳ, ಬನ್ನಿ ಮೇಲೆ
ಪವಾಡ ಮುಗ್ಗರಿಸದಿದ್ದರೆ.
ಹತ್ತು ಡಾಲರ್ ಕೊಡಬೇಕೆ?
ಕೊಡುವೆ ಇನ್ನೂ ಹತ್ತು, ಸರಿ
ಮಾಡಿ ಇದನು ಮೊದಲು.

ಏನು, ಖಾಲಿ ಮಾಡಿಸುವಿರಾ?
ಕತ್ತರಿಸುವಿರಾ ನನ್ನ ಬಾಲ, ಆದೇಶ
ತರುವಿರಾ ಈಗಲೇ? ಎಸೆಯುವಿರಾ
ಬೀದಿಗೆ ಎಲ್ಲ ನನ್ನ ಸರಂಜಾಮನ್ನ?
ಜೋರು ನಿಮ್ಮ ಮಾತು, ಅರಚಿ ಇನ್ನೂ
ನಾ ಅಲ್ಲಿ ಬರುವವರೆಗೂ,
ಎತ್ತಲಾರಿರಿ ನೀವು ಉಸಿರು
ನನ್ನ ಹೊಡೆತಕ್ಕೆ.
ಪೊಲೀಸ್, ಪೊಲೀಸ್ ಬನ್ನಿ
ಶೀಘ್ರ, ನೋಡಿ ಇವನನ್ನ
ಬಂದು ನಮ್ಮ ನಾಡಿಗೆ
ಹಾಳು ಮಾಡುತ್ತಿದ್ದಾನೆ ಎಲ್ಲ!

ಪೊಲೀಸ್ ಪೀಪಿಯ ಶಬ್ದ,
ಗಂಟೆಯ ಶಬ್ದ, ಕೈಗೆ ಕೋಳ
ಪ್ರೆಸೆಂಟ್ ಠಾಣೆಯಲ್ಲಿ
ಕಬ್ಬಿಣದ ಸಲಾಕೆಯ ಹಿಂದೆ.
ಪತ್ರಿಕೆಗಳ ಸುದ್ದಿ ಮರುದಿನ
ಮಾಲೀಕನ ಮೇಲೆ ಹಲ್ಲೆ
ಬಾಡಿಗೆದಾರನಿಗೆ ಇಲ್ಲ ಜಾಮೀನು
ನೀಡಿದ್ದಾರೆ ಕರಿಯನಿಗೆ ಮೂರು
ತಿಂಗಳು ಸೆರೆವಾಸ ನ್ಯಾಯಾಧೀಷರು!
ಕನಸುಗಳ ಶೇಖರಿಸುವವ
ತನ್ನಿ ನಿಮ್ಮೆಲ್ಲ ಕನಸುಗಳ
ಕನಸುಗಾರರೆ.
ನೀಡಿ ನನಗೆ ನಿಮ್ಮ
ಮನದಾಳದ ಹಾಡುಗಳ,

ಕಟ್ಟಿಡುವೆ ನಾ ಭದ್ರ
ನೀಲಿ ಆಗಸದ ಬಟ್ಟೆಯಲಿ
ಜಗದ ಕ್ರೂರ ಕೈಗಳ
ಅಳತೆ ಮೀರಿ.
ಶಾಂತಿ
ದಾಟಿದೆವು ಅವರ ಸಮಾಧಿಗಳ
ಹೌದು, ಸತ್ತವರು ಅವರೆಲ್ಲ.
ಗೆದ್ದವರ, ಸೋತವರ
ಇಲ್ಲ ದರಕಾರ ಅವರಿಗೆ.
ಗೊತ್ತಾಗಲಿಲ್ಲ ಕತ್ತಲಲ್ಲಿ
ಅವರಿಗೆ ಗೆದ್ದವರು ಯಾರೆಂದು!






0 Comments