ಅಮೃತಾ ಹೆಗಡೆ ಅಂಕಣ- ನಿಜವಾಗುವುದೇ ಅನುಮಾನ..?

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

ನಮಗೇ ಅರಿವಿರದಂತೆ ಎದೆಯಲ್ಲೊಂದು ಸಣ್ಣ ನಡುಕ

ನಮ್ಮ ಪಾಲಿಗೆ ಅದೊಂದು ಅಪರಿಚಿತ ಲೋಕ. ಯಾಕೋ ಎದೆ ಢವ ಢವ ಅನ್ನುತ್ತಿತ್ತು. ಅಪ್ಪನ ಎದೆಗೊರಗಿಕೊಂಡು ಬಟ್ಟಲುಗಣ್ಣಿನಿಂದ ಎಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದ ಪುಟಾಣಿ ಅಥರ್ವ ಖುಷಿಯಲ್ಲಿದ್ದ. ನಗುವ ಅವನ ಮುಖ ನೋಡಿ, ನಾವೂ ಮುಖದಲ್ಲಿ ಸ್ವಲ್ಪ ನಗು ತುಂಬಿಕೊಂಡು ಮುಂದಡಿ ಇಟ್ಟೆವು.

‘ಡಾ. ಎಸ್‌.ಆರ್‌ ಚಂದ್ರಶೇಖರ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೀಚ್‌ ಆಂಡ್‌ ಹಿಯರಿಂಗ್’ ನ ಕಟ್ಟಡವದು. ಇನ್‌ಸ್ಟಿಟ್ಯೂಟ್‌ನ ಒಳಗೆ ಪ್ರವೇಶ ಮಾಡುತ್ತಿದ್ದಂತೆ, ಎದುರಾದ ರಿಸೆಪ್ಶನ್‌ಲ್ಲಿ ವಿಚಾರಿಸಿ, ಅವರ ಸಲಹೆಯ ಪ್ರಕಾರ ಅಥರ್ವನ ಹೆಸರು ನೊಂದಾಯಿಸಿ ದಾಖಲಾತಿ ಕಾರ್ಡ್‌ಮಾಡಿಸಿಕೊಂಡು ಕಾಯುತ್ತಾ ಕೂತಿದ್ದೆವು. ನಮಗಿಂತ ಮುಂಚೆ ಬಂದು ಕುಳಿತು ಕಾಯುತ್ತಾ ಇದ್ದ ನಾಲ್ಕೈದು ಜನ ಅಲ್ಲಿದ್ದರು.

ಸದಾ ನನ್ನ ಬ್ಯಾಗ್‌ನಲ್ಲಿರುತ್ತಿದ್ದ ಯಾವುದೋ ಒಂದು ಆಟಿಕೆ ತೆಗೆದು ಅಥರ್ವನ ಕೈಲಿತ್ತಿದ್ದೇ, ಅಥರ್ವ ಖುಷಿಯಿಂದ ಜೋರಾಗಿ ನಕ್ಕ. ಅವನ ನಗುವಿನ ಶಬ್ಧ ಕೇಳಿ, ನಮ್ಮ ಮುಂದಿನ ಕುರ್ಚಿಯಲ್ಲಿ ತನ್ನ ನಾಲ್ಕೈದು ವರ್ಷದ ಮೊಮ್ಮಗಳನ್ನ ಕೂರಿಸಿಕೊಂಡು ಕುಳಿತಿದ್ದ ಅಜ್ಜಿ ಒಬ್ಬರು, ತಿರುಗಿ ನಮ್ಮೆಲ್ಲರನ್ನ ನೋಡಿದರು. ಎಷ್ಟು ವರ್ಷ ಮಗೂಗೆ..? ಕೇಳಿದರು. ‘ಒಂದೂವರೆ ವರ್ಷ’ ಅಂದೆ. ‘ಮಾತಾಡುತ್ತಾ ಮಗು..?’ ವಿಚಾರಣೆ ಶುರುವಿಟ್ಟುಕೊಂಡರು. ‘ಇನ್ನೂ ಇಲ್ಲ’ ಮುಖ ಚಿಕ್ಕದಾಗಿಸಿದೆ. ‘ಒಸ್ತಾಗಿ ಬಂದವ್ರಾ ಇಲ್ಲೀಗೆ..?’ ಎಂಬ ಪ್ರಶ್ನೆಗೆ ‘ಹಾ ಹೌದು’ ಅಂದೆವು ನಾವಿಬ್ಬರೂ ಒಟ್ಟಿಗೆ. ‘ಏನಿಲ್ಲವ್ವ.. ಕಿವಿಗೆ ಮಸಿನ್‌ಕೊಡ್ತಾರೆ, ಆಕಿದ್ರೆ ಎಲ್ಲ ಸರ‍್ಹೋಗತ್ತೆ ಕಂಡ್ರವ್ವ..,’ ಅಂತ ಎಲ್ಲರಿಗಿಂತ ಮುಂಚೆ ಕುಂತಲ್ಲೇ ಫಲಿತಾಂಶ ಕೊಟ್ಟುಬಿಟ್ಟರು. ಜತೆಗೆ ‘ನೋಡಿ, ನನ್‌ ಮೊಮ್ಮಗಳೂ ಹಾಕಂಡವ್ಳೆ’ ಅನ್ನುತ್ತಾ ಅವರ ಜತೆಗಿದ್ದ ಮಗುವಿನ ಕಿವಿ ತೋರಿಸಿದರು.

ಆ ಮಗು ಮುದ್ದಾಗಿ ನಕ್ಕಿತ್ತು. ಅವಳನ್ನ ನೋಡಿ ನಾವೂ ನಕ್ಕೆವು. ಯಾವುದೇ ಬೇಸರವಿಲ್ಲದೆ, ಆತಂಕವಿಲ್ಲದೆ, ಹಿಂಜರಿತವಿಲ್ಲದೆ ಅತ್ಯಂತ ಸಹಜವಾಗಿ ಮಾತನಾಡಿಸುತ್ತಿದ್ದ ಅಜ್ಜಿಗೆ ಪ್ರತಿಕ್ರಿಯಿಸುವ ಪರಿಸ್ಥಿತಿ ಅದಾಗಿರಲಿಲ್ಲ ನಮ್ಮ ಪಾಲಿಗೆ. ಅಜ್ಜಿಯ ಮಾತು ಚುಚ್ಚಿದಂತಾಯ್ತು ನಮಗೆ. ಅವರಿಗೆ ನಾವೇನನ್ನೂ ಹೇಳದೇ, ಇಬ್ಬರೂ ಮುಖ ಮುಖ ನೋಡಿಕೊಂಡ್ವಿ. ವಿನಯ್‌ ಕಣ್ಣಲ್ಲೇ ನನಗೆ ಸಮಾಧಾನ ಮಾಡಿ ಹೆಸರು ಕೂಗಿದಾಗ ಹೇಳು ಅನ್ನುತ್ತಾ, ಅಥರ್ವನನ್ನ ಎತ್ತಿಕೊಂಡು ಆಚೆ ಎದ್ದುಹೋದ.

ಕಾಯುತ್ತಿರುವ ಒಂದೊಂದು ನಿಮಿಷ ಕೂಡ, ಗಂಟೆಯಂತೆ ಅನ್ನಿಸುತ್ತಿತ್ತು ನನಗೆ. ಯಾವ ಕ್ಷಣ ನಮ್ಮನ್ನ ಒಳಗೆ ಕರೆಯುತ್ತಾರೋ.. ಸ್ವಲ್ಪ ಹೊತ್ತಿನಲ್ಲಿ ಎಲ್ಲ ಮುಗಿಸಿಕೊಂಡು, ಇಲ್ಲಿಂದ ಹೊರಟುಹೋಗುತ್ತೇವೋ ಎಂಬ ತಹತಹಿಕೆ ಮನಸ್ಸಿನಲ್ಲಿ. ಕೂತಲ್ಲಿಂದಲೇ ಹಿಂತಿರುಗಿ ನೋಡಿದೆ, ಇದ್ಯಾವುದರ ಪರಿವೆಯೂ ಇಲ್ಲದ ಮಗು ಅಥರ್ವ ಮಾತ್ರ, ಅಪ್ಪನ ಜತೆ ಆಟವಾಡ್ತಿದ್ದ. ಅವನ ಮುಖ ನೋಡಿ ನೆನಪುಗಳು ಕಾಡುವುದಕ್ಕೆ ಶುರುವಿಟ್ಟುಕೊಂಡವು.

ಗೆಳತಿ ಶ್ರೀಲಕ್ಷ್ಮಿ ಆಗ ೭ ತಿಂಗಳ ಗರ್ಭಿಣಿ. ಹೊಟ್ಟೆಹೊತ್ತು ನಿಂತಿದ್ದ ಅವಳನ್ನ ನೋಡೋದೇ ನನಗೊಂದು ದೊಡ್ಡ ಖುಷಿ. ಬಸುರಿಯಾದಾಗಿನಿಂದ ದೇಹದಲ್ಲಿ ಏನೇನೆಲ್ಲ ಬದಲಾವಣೆಯಾಯ್ತು ಅನ್ನೋದನ್ನ ಅವಳು ನನಗೆ ವಿವರಿಸ್ತಾ ಇದ್ರೆ, ನನಗೇನೋ ಹೊಸ ಪುಳಕ. ಅವಳ ಮನೆಯಲ್ಲಿ ನಾವಿಬ್ಬರು ಮಾತಿನಲ್ಲಿ ತಲ್ಲೀನರಾಗಿದ್ದಾಗಲೇ ಅವಳ ಹೊಟ್ಟೆ ಅಲುಗಾಡಿದ್ದು ನನಗೆ ಕಾಣಿಸಿತ್ತು. ‘ಅರೆರೆ.. ಪಾಪು ಒಳಗೆ ಮಿಸುಕಾಡುತ್ತಿದ್ದೆಯಾ..? ಕೇಳಿದೆ. ಆಶ್ಚರ್ಯದಿಂದ. ‘ಹೌದೌದು ನೀನೂ ನೋಡು ಬಾ..’ ಅಂತ ಖುಷಿಯಿಂದ ನನ್ನ ಕೈ ಎತ್ತಿ ತನ್ನ ಹೊಟ್ಟೆಯ ಮೇಲಿಟ್ಟಳು. ಅವಳ ಮಗು ಹೊಟ್ಟೆಯೊಳಗೆ ಮಿಸುಕಾಡಿದ್ದು, ನನಗೂ ಅನುಭವಕ್ಕೆ ಬಂದಿತ್ತು. ಆಗ ನನ್ನಲ್ಲಿ ಸ್ಫುರಿಸಿದ ಆ ಭಾವ ಹೇಳಲಸಾಧ್ಯ. ಅದೇನೋ ಪುಳಕ, ವರ್ಣನೆಗೆ ನಿಲುಕದ ಖುಷಿ. ಅವತ್ತು ಇಡೀ ದಿನ ಅದೇ ಗುಂಗಿನಲ್ಲಿದ್ದೆ. ಆವತ್ತೇ ನನ್ನ ಗಂಡನಿಗೆ ಹೇಳಿದ್ದೆ. ‘ನಮಗೂ ಮಗು ಬೇಕು ಕಣೋ..’ ಅಂತ. ಶ್ರೀಲಕ್ಷ್ಮಿಗೆ ಮಗು ಹುಟ್ಟಿ ಒಂದೇ ಒಂದು ತಿಂಗಳಿಗೆ ನಾನೂ ಗರ್ಭಿಣಿಯಾಗಿದ್ದೆ.

ಗರ್ಭದಲ್ಲಿ ಮಗು ಮಿಸುಕಾಡುವ ಆ ಸುಂದರ ಅನುಭವಕ್ಕಾಗಿ ಕಾಯುತ್ತಲೇ ಇದ್ದ ನನಗೆ ಐದು ತಿಂಗಳು ಮುಗಿಯುತ್ತಿದ್ದಂತೆ, ಮೊದಲ ಅನುಭವಾಯ್ತು. ಆವತ್ತು ನನ್ನ ಖುಷಿಗೆ ಪಾರವೇ ಇರಲಿಲ್ಲ. ‘ಹೊಟ್ಟೆಯೊಳಗಿನಿಂದಲೇ ಮಗು ಕೇಳಿಸಿಕೊಳ್ಳುತ್ತಂತೆ. ಅದಕ್ಕೆ ಮಾತೂ ಕೇಳಿಸುತ್ತಂತೆ, ಸಂಗೀತವೂ ಕೇಳುತ್ತಂತೆ, ಶಾಸ್ತ್ರೀಯ ಸಂಗೀತ ಕೇಳು’ ಎಂದು ನನ್ನಮ್ಮ ನನಗೆ ಫೋನ್‌ನಲ್ಲಿ ಆಗಾಗ ಹೇಳುವಳು. ನನ್ನತ್ತೆ ಒಂದ್ಹೆಜ್ಜೆ ಮುಂದಿಟ್ಟು ‘ಶ್ರೀರಾಮ್‌ ಜಯರಾಮ್‌’ ಆಡಿಯೋ ತಂದು, ನಾನು ಮಲಗೋ ರೂಂಗೆ ಫಿಕ್ಸ್‌ ಮಾಡಿಸಿಬಿಟ್ಟಿದ್ದರು.

ಹೊಟ್ಟೆಯೊಳಗಿನ ಮಗು ಕೇಳಿಸಿಕೊಳ್ಳಲಿ ಎಂದು. ಒಳಗಿರೋ ಮಗುವಿಗೆ ಶಬ್ಧದ ಅಬ್ಬರಕ್ಕೆ ಭಯವಾಗಬಹುದು ಅನ್ನೋ ಕಾರಣಕ್ಕೆ, ಗಂಡ ಎಷ್ಟೇ ಒತ್ತಾಯಿಸಿದರೂ ನಾನು ಥಿಯೇಟರ್‌ನಲ್ಲಿ ಮೂವಿ ನೋಡಲು ಒಪ್ಪಿರಲಿಲ್ಲ. ಎಂಟು ತಿಂಗಳು ಕಳೆದು ಒಂಭತ್ತನೇ ತಿಂಗಳು ಆರಂಭವಾಗುತ್ತಿದ್ದಂತೆ, ಗರ್ಭದೊಳಗಿನ ಮಗುವಿನ ಓಡಾಟ ಎಲ್ಲರಿಗೂ ಗೋಚರಿಸುತ್ತಿತ್ತು. ಮಗುವಿನ ಓಡಾಟ ಜಾಸ್ತಿಯಾದಾಗಲೆಲ್ಲ ಅದಕ್ಕೆ ಸಂಗೀತ ಕೇಳಿಸುತ್ತಿದ್ದೆ. ಹೊಟ್ಟೆಯೊಳಗಿದ್ದಾಗಲೇ ಅದು ಸಂಗೀತ ಕೇಳಲಿ ಅನ್ನೋದು ನನ್ನ ಆಸೆಯಾಗಿತ್ತು.

‘ಅಥರ್ವ ಹೆಗಡೆ’ ಒಳಗಿನಿಂದ ಹೆಸರು ಕೂಗಿದ್ದರು. ಹಿಂದೆ ಓಡಿದ್ದ ಮನಸ್ಸನ್ನ ಎಳೆದು ತಂದು ವಾಸ್ತವಕ್ಕೆ ಹೊಂದಿಸಿಕೊಂಡು, ಎದ್ದು ನಿಂತೆ. ವಿನಯ್‌ ಮಗುವನ್ನು ಎತ್ತಿಕೊಂಡು ಕ್ಯಾಬಿನ್‌ ಒಳಗೆ ಹೋಗಿದ್ದ. ಒಬ್ಬರು ಮೇಡಮ್‌ ಕುಳಿತಿದ್ದ ಕ್ಯಾಬಿನ್‌ ಅದು. ನಸು ನಗುತ್ತಾ ನಮ್ಮನ್ನ ಕಣ್ಣಿನಲ್ಲೇ ಬರಮಾಡಿಕೊಂಡ ಮೇಡಮ್‌, ತಮ್ಮ ಮುಂದಿದ್ದ ಟೇಬಲ್‌ಗೆ ಹೊಂದಿಕೊಂಡಿದ್ದ ಕುರ್ಚಿಗಳನ್ನ ತೋರಿಸ್ತಾ, ಕುಳಿತುಕೊಳ್ಳಿ ಎಂದರು. ಆತಂಕದಿಂದಲೇ ಕುಳಿತುಕೊಂಡ್ವಿ. ಒಂದೂವರೆ ವರ್ಷದ ಮಗು ಅಥರ್ವ ಇನ್ನೂ ಮಾತನಾಡುತ್ತಿಲ್ಲ, ಅನ್ನೋದನ್ನ ವಿನಯ್‌ ಅವರಿಗೆ ಹೇಳುತ್ತಿದ್ದಂತೆ, ಆ ಕ್ಯಾಬಿನ್‌ ಒಳಗೆ ಬಂದ ಬಿಳಿಕೋಟು ಧರಿಸಿದ್ದ ಎಳೆಪ್ರಾಯದ ಹುಡುಗನೊಬ್ಬ ಆ ಮೇಡಮ್‌ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡ. ಮೇಡಮ್‌ ನಮ್ಮನ್ನ ವಿಚಾರಿಸುತ್ತಿದ್ದಂತೆ, ಆತ ಫಾಮ್‌ ಫಿಲ್‌ ಮಾಡಲು ಶುರುವಿಟ್ಟುಕೊಂಡ.

ಮಗು ಹುಟ್ಟಿದ್ದು ಯಾವಾಗ, ಮಗು ತಿಂಗಳು ತುಂಬಿ ಹುಟ್ಟಿದೆಯೋ ಅಥವಾ ಬೇಗ ಹುಟ್ಟಿದೆಯೋ, ಸಹಜ ಹೆರಿಗೆಯೋ? ಶಸ್ತ್ರಚಿಕಿತ್ಸೆಯ ಹೆರಿಗೆಯೋ, ಮಗುವಿನ ಅಪ್ಪ, ಅಮ್ಮ, ರಕ್ತ ಸಂಬಂಧಿಗಳೋ? ಅಲ್ಲವೋ..? ಗರ್ಭಿಣಿಯಾಗಿದ್ದಾಗಿನ ತಾಯಿಯ ಆರೋಗ್ಯ, ಹುಟ್ಟಿದ ಮೇಲೆ ಮಗುವಿನ ಬೆಳವಣಿಗೆ, ಅದರ ಹಾವ-ಭಾವ, ಮಗು ಬೋರಲಾಗಿದ್ದು, ತೆವಳಿದ್ದು, ಅಂಬೆಗಾಲಿಟ್ಟಿದ್ದು, ನಡೆದಿದ್ದು ಯಾವಾಗ, ಎಂಬ ಎಲ್ಲ ಮಾಹಿತಿಗಳನ್ನೂ ಒಂದೊಂದಾಗಿ ಕೇಳತೊಡಗಿದ್ದರು. ಬರೋಬ್ಬರಿ ಒಂದು ಗಂಟೆಯ ಕಾಲ ನಮ್ಮನ್ನು ಸಂದರ್ಶಿಸಿದ ಅವರು ಸಂಪೂರ್ಣ ಮಾಹಿತಿ ದಾಖಲಿಸಿಕೊಂಡರು.

ವಿಚಾರಣೆ ಮುಗಿದ ಮೇಲೆ, ಮುಂದೇನು..? ಮಗುವನ್ನ ಯಾರು ಪರೀಕ್ಷಿಸುತ್ತಾರೆ..? ಅನ್ನೋ ಗೊಂದಲದಲ್ಲಿದ್ದ ನಮಗೆ ಈಗ ಈ ಇನ್‌ಸ್ಟಿಟ್ಯೂಟ್‌ನಲ್ಲಿಯೇ ಮತ್ತೊಂದು ಕ್ಯಾಬಿನ್‌ನಲ್ಲಿರುವ ಇ.ಎನ್‌.ಟಿ ಡಾಕ್ಟರ್‌ಬಳಿ ಮಗುವನ್ನ ಪರೀಕ್ಷಿಸಬೇಕು ಎಂಬ ಸಲಹೆ ಕೊಟ್ಟ ಆ ಬಿಳಿಕೋಟಿನ ಹುಡುಗ. ಮಾಹಿತಿ ದಾಖಲಿಸಿಕೊಳ್ಳುವುದಷ್ಟೇ ಆ ಮೇಡಮ್‌ನ ಕೆಲಸ ಅಂತ ನಮಗೆ ಗೊತ್ತಾಗಿದ್ದೇ ಆವಾಗ.

ಡಾ. ಎಸ್‌.ಆರ್‌. ಚಂದ್ರಶೇಖರ ಇನ್‌ಸ್ಟಿಟ್ಯೂಟ್‌ ಒಂದು ಕಾಲೇಜು ಕೂಡ ಹೌದು. ಆಡಿಯೋಲಜಿ, ಸ್ಪೀಚ್‌ ಲ್ಯಾಂಗ್ವೇಜ್‌ ಪೆಥೋಲೊಜಿ ವಿಷಯದಲ್ಲಿ ಬ್ಯಾಚುಲರ್‌ ಮತ್ತು ಮಾಸ್ಟರ್‌ ಡಿಗ್ರಿ ಮಾಡುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಂದು ವರ್ಷದ ಇಂಟರ್ನ್‌‌ಶಿಪ್‌ ಖಡ್ಡಾಯವಾಗಿರುವ ಕಾರಣ ಅಲ್ಲಿ ಸ್ಟೂಡೆಂಟ್ಸ್‌ ಅಧಿಕ ಸಂಖ್ಯೆಯಲ್ಲಿರುವತ್ತಾರೆ. ಓರ್ವ ವಿದ್ಯಾರ್ಥಿ ಒಂದು ಕೇಸ್‌ ವಹಿಸಿಕೊಂಡು ಅಧ್ಯಯನ ಮಾಡ್ತಾರೆ. ಅಥರ್ವನ ಕೇಸ್‌ನ ಜವಾಬ್ಧಾರಿ ಹೊತ್ತಿದ್ದು, ಒಬ್ಬ ಚೂರುಪಾರು ಕನ್ನಡ ತಿಳಿದುಕೊಂಡಿದ್ದ ಮಲಯಾಳಿ ಹುಡುಗ ಸರ್ಫ್‌‌ರಾಝ್‌. ನಮ್ಮ ಮೊದಲ ಹಂತದ ವಿಚಾರಣೆ ಮುಗಿದ ಮೇಲೆ ಅವನೇ ತನ್ನ ಪರಿಚಯ ಮಾಡಿಕೊಂಡ.

ವಿಚಾರಣೆ ಮುಗಿಯುವ ಹೊತ್ತಿಗೆ ಸುಮಾರು ಬೆಳಿಗ್ಗೆ 11.30 ಆಗಿತ್ತು. ಸರ್ಫ್‌‌ರಾಝ್‌ ನಮ್ಮನ್ನು ಇ.ಎನ್‌.ಟಿ ಡಾಕ್ಟರ್‌ ಕ್ಯಾಬಿನ್‌ ಬಳಿ ಕರೆದೊಯ್ದ. ನಾವು ಅಲ್ಲಿಗೆ ಹೋಗುವಷ್ಟರಲ್ಲಿ ಅಲ್ಲಿತ್ತು ಉದ್ದಾನುದ್ದ ಕ್ಯೂ. ಒಂದು ಗಂಟೆಯಿಂದ ಕ್ಯಾಬಿನ್‌ ಒಳಗೇ ಇದ್ದು ಇದ್ದು ಅಥರ್ವನಿಗೆ ಕಿರಿಕಿರಿ ಶುರುವಾಗಿತ್ತು. ಕೈ ತಪ್ಪಿಸಿಕೊಂಡು ಓಡಲು ಶುರುಮಾಡಿದ್ದ. ವಿನಯ್‌ಮತ್ತೆ ಮಗುವನ್ನ ಎತ್ತಿಕೊಂಡು ಹೊರಗೆ ಹೋದ. ನಾನು ನಮ್ಮ ಸರದಿಗಾಗಿ ಕಾಯುತ್ತಾ ಕೂತೆ.

ಡಾಕ್ಟರ್‌ಗಾಗಿ ಕಾಯುತ್ತಿದ್ದಾಗ, ತಮ್ಮ ಪೋಷಕರ ಜತೆ ಕುಳಿತಿದ್ದ ಮಕ್ಕಳನ್ನೆಲ್ಲ ಗಮನಿಸಿದ್ದೆ. ಅಸ್ಪಷ್ಟವಾಗಿ ಮಾತನಾಡ್ತಾ, ಸನ್ನೆ ಮಾಡ್ತಿರೋ ಆ ಮಕ್ಕಳನ್ನ ನೋಡಿ, ಕರುಳು ಕಿವುಚುತ್ತಿತ್ತು. ಅಲ್ಲಿದ್ದ ಬಹುತೇಕ ಎಲ್ಲ ಮಕ್ಕಳ ಕಿವಿಯ ಮೇಲೆ ಯಾವುದೋ ಉಪಕರಣವಿದ್ದಿದ್ದನ್ನ ನಾನು ಗಮನಿಸಿದೆ. ಅಲ್ಲಿಯ ತನಕ ವೃದ್ಧರು ಕಿವಿಯೊಳಗೆ ತೂರಿಸಿಕೊಳ್ಳುವ ಚಿಕ್ಕ ಶ್ರವಣ ಸಾಧನವನ್ನ ಮಾತ್ರ ನೋಡಿದ್ದ ನನಗೆ ಆ ಮಕ್ಕಳ ಕಿವಿಯ ಮೇಲಿನ ಉಪಕರಣ ವಿಚಿತ್ರವಾಗಿ ಕಂಡಿತ್ತು. ನನಗೆ ಹತ್ತಿರವೇ ಇದ್ದ ಒಂದು ಮಗುವಿನ ಬಳಿ ನಿಧಾನವಾಗಿ ಜರುಗಿ ಬಗ್ಗಿ ನಿಂತು ಆ ಉಪಕರಣವನ್ನ ನೋಡಿದೆ. ಕಿವಿಯ ಮೇಲಷ್ಟೇ ಅಲ್ಲ, ಆ ಉಪರಕಣದ್ದೇ ಮತ್ತೊಂದು ಭಾಗ ಕಿವಿಯ ಹಿಂದಿನ ತಲೆಗೂ ಅಂಟಿಕೊಂಡಿತ್ತು. ನನಗೆ ಗೊತ್ತಿಲ್ಲದಂತೆ ’ಮೈ ಜುಂ’ ಎಂದಿತ್ತು. ಮೈಮೇಲಿನ ರೋಮಗಳೆಲ್ಲ ಎದ್ದು ನಿಂತಿದ್ದವು.

ಕಿವಿಯ ರಂಧ್ರದೊಳಗೆ ಆ ಉಪಕರಣದ ಯಾವುದೇ ಭಾಗ ಹೋಗಿಲ್ಲ. ಬದಲಾಗಿ ತಲೆಗೆ ಅಂಟಿಕೊಂಡಿದೆ. ನನಗೆ ಆಶ್ಚರ್ಯ. ಇದೆಂಥ ಉಪಕರಣ..? ಇದೊಂದು ಶ್ರವಣ ಸಾಧನವೇ..? ಅದು ತಲೆಗೆ ಏಕೆ ಅಂಟಿಕೊಂಡಿದೆ..? ಅನ್ನೋ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಏಳುತ್ತಿರುವಾಗಲೇ, ವಿನಯ್‌ ನನ್ನ ಕಿವಿಯಲ್ಲಿ ಪಿಸುಗುಟ್ಟಿದ್ದ. ‘ಅದೊಂಥರ ಹಿಯರಿಂಗ್‌ ಏಡ್‌ ಅಂತೆ, ಆಪರೇಶನ್‌ ಮಾಡಿಸಿ ಹಾಕಿರೋ ಮಷಿನ್‌ ಅದು’. ‘ಹೌದಾ..?’ ಅಂದೆ ಆಶ್ಚರ್ಯದಿಂದ. ‘ಅದು ತಲೆಗೆ ಏಕೆ ಅಂಟಿಕೊಂಡಿದೆ..?’ ಮರು ಪಶ್ನೆ ನನ್ನದು. ‘ತಲೆಯೊಳಗಿನ ಮಷಿನ್‌ಗೆ ಹೊರಗಿರುವ ಮ್ಯಾಗ್ಯೇಟ್‌ ಅಂಟಿಕೊಳ್ಳುತ್ತಂತೆ.’

ಅಥರ್ವನನ್ನ ಸುತ್ತಾಡಿಸಲು ಕರೆದುಕೊಂಡು ಹೋದಾಗ ವಿನಯ್‌ ಎಲ್ಲೋ ಮಾಹಿತಿ ಕಲೆಹಾಕಿದ್ದಾನೆ ಅನ್ನೋದು ಗೊತ್ತಾಯ್ತು. ಅಲ್ಲಿಯ ತನಕ ಅಂಥದ್ದೊಂದು ಉಪಕರಣವನ್ನ, ಅದನ್ನ ಧರಿಸಿರುವವರನ್ನ ನೋಡಿರದ ನಮಗೆ ಅದೊಂದು ಅದ್ಭುತವಾಗಿ ಕಂಡಿತ್ತು. ನಮಗೇ ಅರಿವಿರದಂತೆ ಎದೆಯಲ್ಲೆದ್ದ ಸಣ್ಣ ನಡುಕ, ಮೈ ತೋಯಿಸಿತ್ತು.

‍ಲೇಖಕರು Avadhi

June 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: