ತಲೆಮಾರು

 ಕು ಸ ಮಧುಸೂದನ್ ರಂಗೇನಹಳ್ಳಿ

ಬೆಂಗಳೂರಿನಲ್ಲಿ ಓದಿದ ಮಗ ನಾಗರಾಜ ಎಲ್.ಎಲ್.ಬಿ.ಪದವಿ ಪಡೆದು ಹಳ್ಳಿಗೆ ಮರಳಿದಾಗ ದೊಡ್ಡಯ್ಯನನ್ನು ಹಿಡಿಯುವವರೇ ಇರಲಿಲ್ಲ. ಆಗಿನ ಕಾಲಕ್ಕೇನೆ ದೊಡ್ಡಯ್ಯ ಗ್ರಾಮಪಂಚಾಯಿತಿ ಚೇರ್ಮನ್ ಆಗಿ, ತಾಲ್ಲೂಕು ಬೋರ್ಡಿನ ಸದಸ್ಯನಾಗಿ ಅಧಿಕಾರ ಅನುಭವಿಸಿದ್ದವನು. ಪರಂಪರಾನುಗತವಾಗಿ ಬಂದಿದ್ದ ಸಾಕಷ್ಟು ಹೊಲಮನೆ, ತೋಟಗಳು, ಮೂರು ತಲೆಮಾರು ಕೂತು ತಿಂದರೂ ಕರಗದಷ್ಟು ನಗದು, ಚಿನ್ನಬೆಳ್ಳಿ ಇದ್ದುದರಿಂದ ರಾಜಕೀಯದಲ್ಲಿ ಆಸ್ತಿ ಮಾಡುವ, ಅದಕ್ಕಾಗಿ ಅಡ್ಡದಾರಿ ಹಿಡಿಯುವ ಅಗತ್ಯ ಅವನಿಗಿರಲಿಲ್ಲ. ಜೊತೆಗೆ ಅಂತಹ ಆಸೆಬುರುಕುತನ ಕೊನೆತನಕವು ಅವನಲ್ಲಿ ಮೊಳಕೆಯೊಡೆಯಲೇ ಇಲ್ಲ.

ವಕೀಲಿಕೆ ಓದಿ ಮುಗಿಸಿ ಮನೆಗೆ ಬಂದ ಮಗ ಹತ್ತಿರದ ತಾಲ್ಲೂಕು ಕೇಂದ್ರಕ್ಕೆ ಹೋಗಿ ವಕೀಲ ವೃತ್ತಿ ಮಾಡುತ್ತ, ನಾಲ್ಕು ಜನಕ್ಕೆ ಉಪಕಾರಿಯಾಗುವುದರ ಜೊತೆ ತನ್ನದೇ ಆದ ವರ್ಚಸ್ಸು ಹೆಚ್ಚಿಸಿಕೊಂಡು ತನ್ನ ಜನಪ್ರಿಯತೆಯಿಂದ ತಾಲ್ಲೂಕಿನ ಎಂ.ಎಲ್.ಎ. ಆಗಲಿ ಎಂಬುದರ ಹೊರತಾಗಿ ದೊಡ್ಡಯ್ಯನಿಗೆ ಬೇರೇನು ಮಹತ್ವಾಕಾಂಕ್ಷೆಯಿರಲಿಲ್ಲ. ಇದ್ದ ಮೂರೂಜನ ಹೆಣ್ಣು ಮಕ್ಕಳಿಗೆ ತಾನು ಅಧಿಕಾರದಲ್ಲಿದ್ದ ಸಮಯದಲ್ಲಿಯೇ ತನ್ನ ಅಂತಸ್ತಿಗೆ ಸರಿಹೊಂದುವಂತಹ ಶ್ರೀಮಂತಮನೆಗಳ ಗಂಡುಗಳಿಗೆ ಕೊಟ್ಟು ಮದುವೆ ಮಾಡಿದ್ದ.

ಅವನಿಗಿದ್ದ ಒಂದೇ ಒಂದು ದುಃಖವೆಂದರೆ ತಾನು ಐದು ಬಾರಿ ಎಂ.ಎಲ್.ಎ. ಚುನಾವಣೆಗೆ ನಿಂತು ಸೋತಿದ್ದು ಮಾತ್ರವಾಗಿತ್ತು. ಆದರೆ ಅವನ ಕ್ಷೇತ್ರದ ಜನರು ಗೆದ್ದ ಎಂ.ಎಲ್.ಎ.ಗಿಂತ ಹೆಚ್ಚು ಗೌರವವನ್ನು ದೊಡ್ಡಯ್ಯನಿಗೇ ಕೊಡುತ್ತಿದ್ದರು ಅಷ್ಟಲ್ಲದೆ ಕಷ್ಟಕಾರ್ಪಣ್ಯ ಬಂದಾಗ ಅವರು ನೇರವಾಗಿ ಬಂದು ನಿಲ್ಲುತ್ತಿದ್ದುದು ಇವನ ಮನೆಯ ಬಾಗಿಲಿಗೇನೆ! ಹಾಗೆ ಬಂದರ‍ ಯಾರನ್ನೂ ಎಂದೂ ಬರಿಗೈಲಿ ಕಳಿಸದ ಅವನನ್ನು ಕಂಡರೆ ಅಧಿಕಾರಸ್ಥ ಎಂ.ಎಲ್.ಎ.ಗಳಿಗೂ ಒಳಗೊಳಗೆ ಭಯವಿತ್ತು.

ಇಷ್ಟಿದ್ದರೂ ಚುನಾವಣೆಯಲ್ಲಿ ತಾನು ಸತತವಾಗಿ ಸೋಲುತ್ತ ಬರುತ್ತಿದ್ದರ ಬಗ್ಗೆ ದೊಡ್ಡಯ್ಯನ ಒಳಗೊಂದು ಗಾಢ ವಿಷಾದವೊಂದು ಉಳಿದು ಹೋಗಿತ್ತು. ಹೀಗಾಗಿಯೇ ಮಗ ನಾಗರಾಜನನ್ನಾದರು ಎಂ.ಎಲ್.ಎ. ಮಾಡಬೇಕೆಂಬುದು ದೊಡ್ಡಯ್ಯನ ಮಹದಾಸೆಯಾಗಿತ್ತು. ತನ್ನ ನಿಸ್ವಾರ್ಥಸೇವೆ, ತಮ್ಮ ಮನೆತನದ ದಾನಧರ್ಮಗಳ್ಯಾವು ತನ್ನ ಗೆಲುವಿಗೆ ಸಹಕಾರಿಯಾಗದೆ ಹೋದದ್ದರ ಬಗ್ಗೆ ಆತನಿಗೆ ಆದಕ್ಕಿಂತ ಹೆಚ್ಚಾಗಿ ದು:ಖವಿತ್ತು.

ತಾನು ಗೆಲ್ಲದೆ ಹೋಗಿದ್ದರಿಂದ ತನ್ನ ಮಗನಾದರು ಒಮ್ಮೆ ಎಂ.ಎಲ್.ಎ. ಆಗಬೇಕೆಂಬ ಬಯಕೆ ಅವನೊಳಗೆ ಯಾವತ್ತೊ ಹುಟ್ಟಿ ಹೋಗಿತ್ತು. ಹೀಗಾಗಿಯೇ ನಾಗರಾಜ ವಾಪಾಸು ಊರಿಗೆ ಬಂದತಕ್ಷಣ ತಾಲ್ಲೂಕು ಕೇಂದ್ರದಲ್ಲಿ ಮನೆ ಮತ್ತು ಕಚೇರಿಯೊಂದನ್ನು ವ್ಯವಸ್ಥೆ ಮಾಡಿ ಮಗನಿಗೆ ಅಲ್ಲಿಗೆ ಹೋಗಿ ತನ್ನ ವೃತ್ತಿ ಪ್ರಾರಂಭಿಸಲು ಹೇಳಿದ. ಹೆಚ್ಚಾಗಿ ಬಡವರ ಕೇಸುಗಳನ್ನು ತೆಗೆದುಕೊಂಡು ಫೀಸಿರದೆ ನಡೆಸು. ನೀನು ನೂರು ವರ್ಷ ಕೂತು ತಿಂದರೂ ಕರಗದಷ್ಟು ಆಸ್ತಿ ಇದೆ, ಹಣಕ್ಕಾಗಿ ವಕೀಲಿಕೆ ಮಾಡದೆ ಸೇವೆಯ ಉದ್ದೇಶ ಇಟ್ಟುಕೊ. ಎಲ್ಲ ಜಾತಿಯವರನ್ನು ಪ್ರೀತಿಯಿಂದ ಕಾಣುತ್ತಾ ಜನರಿಗೆ ಒಳ್ಳೆಯದನ್ನು ಮಾಡುತ್ತ ಅವರ ಜೊತೆ ಬೆರೆತು ಹೆಸರು ಗಳಿಸು.

ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದ ಟಿಕೇಟು ನಿನಗೇ ಕೊಡಿಸುತ್ತೇನೆ. ನೀನಾದರು ಗೆದ್ದು ಎಂ.ಎಲ್.ಎ. ಆಗುವಂತೆ ಎಂದು ಮಗನಿಗೆ ಗಂಟೆಗಟ್ಟಲೆ ಉಪದೇಶಿಸಿದ. ಎಲ್ಲವನ್ನೂ ಕೇಳಿಸಿಕೊಂಡ ಮಗ ಮನಸ್ಸಿನಲ್ಲಿಯೆ ನಕ್ಕು ವೃತ್ತಿ ಆರಂಭಿಸಿದ. ಮೊದಲಿನಿಂದಲೂ ನಾಗರಾಜನಿಗೆ ಅಪ್ಪನ ಪ್ರಾಮಾಣಿಕತೆ, ಬಡವರ ಪರವಾದ ಕಾಳಜಿಯ ಬಗ್ಗೆ ಒಂದು ಸಣ್ಣ ನಿರ್ಕಕ್ಷ್ಯವಿತ್ತು!

ತಾಲ್ಲೂಕು ಕೇಂದ್ರಕ್ಕೆ ಹೋದ ನಾಗರಾಜನಿಗೆ ಅಪ್ಪನ ಹೆಸರಿನ ಬಲದಿಂದ ಸುಲಭವಾಗಿ ಕೇಸುಗಳು ಸಿಗತೊಡಗಿದವು. ಅಪ್ಪನ ಕಣ್ಣಿಗೆ ಮಣ್ಣೆರಚಲು ಒಂದೆರಡು ಬಡವರ ಕೇಸು ನಡೆಸುವಂತೆ ನಾಟಕವಾಡುತ್ತಿದ್ದ ನಾಗರಾಜ ಕ್ರಮೇಣ ಶ್ರೀಮಂತ ವರ್ತಕರ, ಕಪ್ಪುಹಣದ ಕುಳಗಳ ಮತ್ತು ಅಪರಾಧಲೋಕದಲ್ಲಿನ ಜನರ ಕೇಸುಗಳನ್ನು ಒಪ್ಪಿಕೊಂಡು ಅಪಾರ ಹಣಗಳಿಸತೊಡಗಿದ. ಅಂತವರ ಸಾಕಷ್ಟು ಕೇಸುಗಳನ್ನು ಗೆದ್ದು ಒಳ್ಳೇ ಲಾಯರ್ ಎಂಬ ಹೆಸರು ಗಳಿಸಿ, ತಾಲ್ಲೂಕಿನ ಗಣ್ಯ ವ್ಯಕ್ತಿಗಳ ಹೀರೋ ಆಗ ತೊಡಗಿದ.

ಅನೇಕ ಸಂಘಸಂಸ್ಥೆಗಳ, ಕ್ಲಬ್ಬುಗಳ ಸದಸ್ಯನಾಗಿ ಮೇಲ್ವರ್ಗಗಳ ಜನರ ಆಪ್ತನಾಗುತ್ತ ಹೋದ. ನಾಲ್ಕೇ ವರ್ಷಗಳಲ್ಲಿ ತಾಲ್ಲೂಕಿನ ಪ್ರತಿಷ್ಠಿತ ವ್ಯಕ್ತಿಯಾಗಿ ಬೆಳೆದು ಬಿಟ್ಟಿದ್ದ. ಅದರಲ್ಲೂ ಪಕ್ಕದ ಜಿಲ್ಲೆಯ ದೊಡ್ಡ ಉದ್ದಿಮೆದಾರನ ಮಗಳನ್ನು ಮದುವೆಯಾದ ಮೇಲಂತೂ ನಾಗರಾಜನ ರೀತಿಯೇ ಬದಲಾಗುತ್ತ ಹೋಯಿತು. ದೊಡ್ಡಯ್ಯನ ಎಲ್ಲ ರೀತಿನೀತಿಗಳನ್ನು ಗಾಳಿಗೆ ತೂರುತ್ತ ತನ್ನದೇ ಶೈಲಿಯಲ್ಲಿ ವಕೀಲಿಕೆ ಮತ್ತು ರಾಜಕಾರಣ ಮಾಡತೊಡಗಿದ.

ಈ ನಡುವೆ ಮಗನ ಈ ಬೇರೆ ರೀತಿಯ ಬೆಳವಣಿಗೆ ದೊಡ್ಡಯ್ಯನ ಒಳಗೆ ದುಗುಡವನ್ನುಂಟು ಮಾಡ ತೊಡಗಿತ್ತು. ಮಗ ಬಡಜನರನ್ನು ಹೀಗೆ ನಿರ್ಲಕ್ಷಿಸಿದರೆ ಇವನನ್ನು ಎಂ.ಎಲ್.ಎ. ಮಾಡುವ ತನ್ನ ಕನಸು ಈಡೇರುವುದಿಲ್ಲವೆಂಬುದನ್ನು ಅರ್ಥ ಮಾಡಿಕೊಂಡ ದೊಡ್ಡಯ್ಯನೊಳಗಿನ ಮಗನ ಬಗೆಗಿನ ಕನಸು ನಿದಾನವಾಗಿ ಕಮರ ತೊಡಗಿತು. ಇದೇ ವ್ಯಥೆಯಿಂದಾಗಿ ಆತನ ರಕ್ತದೊತ್ತಡ ಏರುಪೇರಾಗುತ್ತ ಹೊಸದಾಗಿ ಅಮರಿಕೊಂಡ ಶುಗರ್ ಅವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿತು. ಆಗಾಗ ಹಳ್ಳಿಗೆ ಬರುತ್ತಿದ್ದ ನಾಗರಾಜನ ಬಳಿ  ಆತನ ಬದಲಾದ ಚಟುವಟಿಕೆಗಳ ಬಗ್ಗೆ ಜೊತೆ ಮಾತನಾಡಿದಾಗೆಲ್ಲ ಅವನದು ಎಂದಿನ ಉಡಾಫೆಯ ಉತ್ತರ!

‘ನಿನಗೆ ನಾನು ಎಂ.ಎಲ್.ಎ.ಆಗಬೇಕು, ಅಷ್ಟೇ ತಾನೇ! ಪಕ್ಷದ ಟಿಕೇಟೊಂದು ಸಿಗಲಿ ಹೇಗೆ ಎಲೆಕ್ಷನ್ ಗೆಲ್ಲಬೇಕೆಂಬುದು ನನಗೆ ಗೊತ್ತಿದೆ!’ ಎಂದು ಹೇಳಿ ಹೊರಟು ಹೋಗುತ್ತಿದ್ದ. ‘ಹೇಗೆ ಗೆಲ್ಲಬೇಕೆಂಬುದು ನನಗೆ ಗೊತ್ತಿದೆ! ಎನ್ನುವ ಮಗನ ಮಾತಿನ ಹಿಂದಿನ ಒಳಮರ್ಮ ಅರಿತ ದೊಡ್ಡಯ್ಯ ಮತ್ತಷ್ಟು ಕುಗ್ಗಿ ಹೋಗತೊಡಗಿದ್ದ.ಆ ‘ಹೇಗೆ? ಎನ್ನುವುದು ತನಗೆ ಗೊತ್ತಿದ್ದರೂ ಅದನ್ನುತಾನು ಮಾಡದೆ ಸೋತಿದ್ದನ್ನು ನೆನಪಿಸಿಕೊಂಡು ಕೊರಗತೊಡಗಿದ್ದ..

ತಾನು ಮನಸ್ಸು ಮಾಡಿದ್ದರೆ ತನ್ನ ಜಾತಿಯ ಮಠದಸ್ವಾಮಿಗಳಿಂದ ಜನರಿಗೆ ತನಗೆ ಮತ ಚಲಾಯಿಸುವಂತೆ ಹುಕುಂ ಹೊರಡಿಸಬಹುದಿತ್ತು, ಮಾತ್ರವಲ್ಲದೆ ಎದುರು ಪಕ್ಷದವನಂತೆ ಹೆಂಡಹಣ ಹಂಚಿಜನರಿಗೆ ಬೆದರಿಕೆ ಒಡ್ಡಿ ಮತಹಾಕಿಸಿಕೊಂಡು ಗೆಲ್ಲಬಹುದಿತ್ತು ಎನ್ನಿಸಿ, ಇದನ್ನೆಲ್ಲ ಮಾಡಹೊರಟ ಮಗನ ಬಗ್ಗೆ ಜಿಗುಪ್ಸೆ ಹುಟ್ಟಿ ಬಿಟ್ಟಿತು. ಆದರೆ ಇದ್ಯಾವುದರ ಚಿಂತೆಯಿರದೆ ನಾಗರಾಜ ತನ್ನ ಪಾಡಿಗೆ ತಾನುತನ್ನ ರಾಜಕಾರಣಕ್ಕೆ ಬೇಕಾದ ತಂತ್ರಗಳ ಮೊರೆಹೋಗತೊಡಗಿದ.

ತನ್ನ ಕಕ್ಷಿದಾರರುಗಳಾದ ಡಿಸ್ಟಿಲರಿ ಮಾಲೀಕರುಗಳಿಗೆ ಚುನಾವಣೆ ಬಂದಾಗ ತನಗೆ ಹೇಗೆ ಸಹಾಯ ಮಾಡಬೇಕೆಂಬುದನ್ನು ಹೇಳಿ, ತಾಲ್ಲೂಕಿನ ದೊಡ್ಡದೊಡ್ಡಗುತ್ತಿಗೆದಾರರಿಗು ಸಹ ಚುನಾವಣೆಯಲ್ಲಿ ಮಾಡಬೇಕಾದ ಸಹಾಯಗಳ ಬಗ್ಗೆ ತಿಳಿಸಿ ಇಟ್ಟುಕೊಂಡಿದ್ದ. ಇನ್ನು ಅಪರಾಧಿ ಜಗತ್ತಿನ ಹಲವರು ಈಗಾಗಲೇ ತಮ್ಮ ಅಕ್ರಮ ಚಟುವಟಿಕೆಗಳಿಗೆ ನಾಗರಾಜನಿಂದ ಕಾನೂನು ನೆರವು ಪಡೆದಿದ್ದು ಯಾವ ಕ್ಷಣದಲ್ಲಿಯಾದರು ನಾಗರಾಜನ ಬೆಂಬಲಕ್ಕೆ ನಿಲ್ಲಲು ಸಿದ್ದರಾಗಿ ನಿಂತಿದ್ದರು.

ಚುನಾವಣೆಗಳು ಘೋಷಣೆಯಾಗುವ ಕೆಲ ತಿಂಗಳುಗಳಿಗೆ ಮುಂಚೆಯೇ ತನ್ನ ಜಾತಿಯ ಮಠದ ಸ್ವಾಮೀಜಿಗಳನ್ನು ಕರೆಯಿಸಿ ಸಾಮೂಹಿಕ ವಿವಾಹ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಿ ರಾಜ್ಯದ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ತಾನು ಮತ್ತು ಸ್ವಾಮಿಗಳಿರುವ ದೊಡ್ಡದೊಡ್ಡ ಪೋಟೊಗಳ ಪುಟಗಟ್ಟಲೆ ಜಾಹಿರಾತುಗಳು ಬರುವಂತೆ ನೋಡಿಕೊಂಡ. ಇಷ್ಟಲ್ಲದೆ ತಾಲ್ಲೂಕಿನ ಪ್ರತಿ ಪಂಚಾಯಿತಿ ಕೇಂದ್ರದಲ್ಲಿಯೂ ಉಚಿತ ಆರೋಗ್ಯತಪಾಸಣಾ ಶಿಬಿರಗಳನ್ನು ಆಯೋಜಿಸುತ್ತ ಬಡವರ ಬಂದು ಎಂಬ ಬಿರುದನ್ನು ತನ್ನ ಹಿಂಬಾಲಕರಿಂದ ಪಡೆದ. ಅದರ ಜೊತೆಗೆ ಹಳ್ಳಿಹಳ್ಳಿಗಳಲ್ಲಿ ಕಬಡ್ಡಿ, ವಾಲೀಬಾಲ್, ಕ್ರಿಕೇಟ್ ಟೂರ್ನಿಮೆಂಟುಗಳನ್ನು ನಡೆಸಲು ನಿರುದ್ಯೋಗಿ ಯುವಕರಿಗೆ ದಂಡಿಯಾಗಿ ಹಣ ನೀಡುತ್ತಾ ಯುವಕರ ಬಾಯಲ್ಲಿ ತನ್ನ ಹೆಸರು ಓಡಾಡುವಂತೆ ನೋಡಿಕೊಂಡ.

ಇದಕ್ಕೆಲ್ಲ ನಾಗರಾಜನೇನೂ ತನ್ನ ಜೇಬಿಂದ ಹಣ ಖರ್ಚು ಮಾಡಲಿಲ್ಲ. ಬದಲಿಗೆ ತನ್ನ ಕಂಟ್ರಾಕ್ಟರ್ ಗೆಳೆಯರುಗಳ ಮತ್ತು ಉದ್ದಿಮೆದಾರರುಗಳ ಕೈಯಿಂದ ಹಣ ಕೊಡಿಸಿದ್ದ. ಪ್ರತಿವಾರ ಸ್ಥಳೀಯವಾಗಿ ಪ್ರಬಲವಾಗಿದ್ದ ಪತ್ರಕರ್ತರುಗಳಿಗೆ ಪಾರ್ಟಿ ಮಾಡಿಸುತ್ತ. ಪತ್ರಿಕೆಗಳಲ್ಲಿ ತನ್ನ ಬಗ್ಗೆ ಒಂದಲ್ಲಾ ಒಂದು ಸುದ್ದಿ ಬರುತ್ತಿರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಹೀಗೆ ನಾಗರಾಜ ದೊಡ್ಡಯ್ಯನ ಆದರ್ಶ ಮತ್ತು ಕನಸುಗಳನ್ನು ಧಿಕ್ಕರಿಸುತ್ತ ನಡೆಯುತ್ತ ಹೋಗುತ್ತಿದ್ದರೆ ಅತ್ತ ದೊಡ್ಡಯ್ಯ ಮಗನ ಈ ಎಲ್ಲ ಚಟುವಟಿಕೆಗಳಿಂದ ದಿನದಿನಕ್ಕೆ ಹೆಚ್ಚು ದುಃಖಿತನಾಗುತ್ತ ಹೋದ.

ಅಷ್ಟರಲ್ಲಿ ಚುನಾವಣೆ ಘೋಷಣೆಯಾಯಿತು. ಎಂದಿನಂತೆ ಪಕ್ಷದ ವರಿಷ್ಠರು ದೊಡ್ಡಯ್ಯನಿಗೆ ಟಿಕೇಟು ನೀಡಲು ಬಂದಾಗ ಅವನು ತನಗೆ ಆರೋಗ್ಯ ಸರಿಯಿರದ ಕಾರಣ ತನಗೆ ಟಿಕೇಟು ಬೇಡ,ಪಕ್ಷದ ಯಾರಾದರು ಪ್ರಾಮಾಣಿಕ ಕಾರ್ಯಕರ್ತರಿಗೆ ಕೊಡಿ ಎಂದು ತಮ್ಮ ಪಕ್ಷದ ತನ್ನ ಹಿಂಬಾಲಕನೊಬ್ಬನಿಗೆ ಟಿಕೇಟು ಕೊಡಿಸಿದ. ನಿಮ್ಮ ಮಗನಿಗೆ ಕೊಡುತ್ತೇವೆಂದು ಪಕ್ಷದ ವರಿಷ್ಠರು ಒತ್ತಾಯಿಸಿದಾಗ ಬೇಡ, ಪಕ್ಷಕ್ಕೆ ಇಷ್ಟು ವರ್ಷ ದುಡಿದವರಿಗೇನೆ ನೀವು ಟಿಕೇಟು ನೀಡಬೇಕೆಂದು ಹಟ ಹಿಡಿದ. ಅಷ್ಟೂ ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿಯುತ್ತ, ಅನೇಕ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ತನ್ನದೇ ಜಾತಿಯ ಕುಮಾರಪ್ಪನಿಗೆ ಟಿಕೇಟು ಕೊಡಿಸುವಲ್ಲಿ ದೊಡ್ಡಯ್ಯ ಯಶಸ್ವಿಯಾದ.

ಅಪ್ಪನ ಹಟದಿಂದ ತನಗೆ ಟಿಕೇಟು ತಪ್ಪಿದ ಸಿಟ್ಟಿನಲ್ಲಿದ್ದ ನಾಗರಾಜನಿಗೆ ಪಟ್ಟಣದ ಅವನ ಗೆಳೆಯರು ನೀನು ಪಕ್ಷೇತರನಾಗಿ ನಿಲ್ಲು ನಾವು ಗೆಲ್ಲಿಸುತ್ತೇವೆಂದು ಬಲವಂತ ಮಾಡಿದಾಗ ಮೊದಮೊದಲು ಹಿಂದೇಟು ಹಾಕಿದವನಂತೆ ನಟಿಸಿದ ನಾಗರಾಜ ಯಾವಾಗ ತನಗೆ ಹೆಣ್ಣುಕೊಟ್ಟ ಮಾವ ಎಷ್ಟು ಕೋಟಿ ಖರ್ಚಾದರೂ ಪರವಾಗಿಲ್ಲ ನಿಂತು ಗೆಲ್ಲು ಎಂಬ ಭರವಸೆ ನೀಡಿದಾಗ ಪಕ್ಷೇತರನಾಗಿ ತನ್ನ ಉಮೇದುವಾರಿಕೆ ಸಲ್ಲಿಸಿದ.

ಇದು ಗೊತ್ತಾದ ದೊಡ್ಡಯ್ಯ ಮಗನನ್ನು ಕರೆಸಿಕೊಂಡು ಇಷ್ಟು ವರ್ಷ ನಾವು ಪಕ್ಷಕ್ಕೆ ನಿಷ್ಠೆಯಿಂದ ಇದ್ದವರು. ಈಗ ನೀನು ದ್ರೋಹ ಮಾಡಿ ನನ್ನ ಹೆಸರು ಕೆಡಿಸಬೇಡ. ಉಮೇದುವಾರಿಕೆ ವಾಪಾಸು ತಗೊ ಅಂದಾಗ ನಾಗರಾಜ ಆಗುವುದಿಲ್ಲವೆಂದ. ಹಾಗಿದ್ದರೆ ನಾನೇ ನಿನ್ನ ವಿರುದ್ದ ಪ್ರಚಾರ ಮಾಡಬೇಕಾಗುತ್ತದೆ ಎಂದು ಹೇಳಿದ ಅಪ್ಪನಿಗೆ ನಾಗರಾಜ ಲೇವಡಿಯ ದ್ವನಿಯಲ್ಲಿ ‘ನೀನೆ ನಿಂತು ಗೆಲ್ಲಲಾಗಲಿಲ್ಲ, ಇನ್ನು ನಿನ್ನ ಶಿಷ್ಯನನ್ನು ನೀನು ಹೇಗೆ ಗೆಲ್ಲಿಸುತ್ತೀಯಾ? ನೋಡೋಣ! ಗೆಲ್ಲಿಸಿಕೊ’ ಎಂದು ಹೇಳಿ ಎದ್ದು ಹೋದ. ಹಾಗೆ ಎದ್ದು ಹೋದ ಮಗನ ವರ್ತನೆಯಿಂದ ಕುಸಿದು ಹೋದ ದೊಡ್ಡಯ್ಯನಿದೇಹದ ಎಡಭಾಗಕ್ಕೆ ಪಾರ್ಶ್ವ ವಾಯು ಹೊಡೆದು ಆಸ್ಪತ್ರೆ ಸೇರಬೇಕಾಯಿತು.

ಆರಂಭಗೊಂಡ ಚುನಾವಣಾ ಪ್ರಚಾರದಲ್ಲಿ ದೊಡ್ಡಯ್ಯನಿಗೆ ಪಾಲ್ಗೊಳ್ಳಲು ಸಾದ್ಯವಾಗಲೇ ಇಲ್ಲ. ತಮ್ಮ ಮಠಕ್ಕೆ ತಮ್ಮ ಜಾತಿಯ ಮುಖಂಡರನ್ನು ಕರೆಸಿಕೊಂಡ ಸ್ವಾಮಿಗಳು ಈ ಬಾರಿ ತಮ್ಮ ಜಾತಿಯ ನಾಗರಾಜನಿಗೆ ಓಟು ಹಾಕಿ ಗೆಲ್ಲಿಬೇಕೆಂದು ಫರ್ಮಾನು ಹೊರಡಿಸಿದರು. ನಾಗರಾಜನ ಗೆಳೆಯರ ಡಿಸ್ಟಿಲರಿಗಳಿಂದ ಹೆಂಡ ಹೊಳೆಯಾಗಿ ಕ್ಷೇತ್ರದಾದ್ಯಂತ ಹರಿಯಿತು. ಗುತ್ತಿಗೆದಾರರು ವರ್ತಕರು ಚುನಾವಣೆಯ ಹಿಂದಿನ ದಿನ ಮನೆಮನೆಗೆ ಹಣ ಹಂಚಿಸಿದರು. ಚುನಾವಣೆಯ ಹಿಂದಿನ ಮದ್ಯರಾತ್ರಿ ದೊಡ್ಡಯ್ಯ ದಾಖಲಾಗಿದ್ದ ಆಸ್ಪತ್ರೆಯಿಂದ ನಾಗರಾಜನಿಗೆ ದೊಡ್ಡಯ್ಯನ ಅನಾರೋಗ್ಯ ಬಿಗಡಾಯಿಸದ ಸುದ್ದಿ ಬಂತು.

ತಕ್ಷಣ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಓಡಿದ ನಾಗರಾಜ ಆಸ್ಪತ್ರೆ ತಲುಪಿದಹತ್ತೇ ನಿಮಿಷಕ್ಕೆ ದೊಡ್ಡಯ್ಯ ಸಾವನ್ನಪ್ಪಿದ್ದ. ಆಸ್ಪತ್ರೆಯ ಆಡಳಿತದ ಸಿಬ್ಬಂದಿ ಮತ್ತು ವೈದ್ಯರುಗಳನ್ನು ಮನವೊಲಿಸಿ ತನ್ನ ತಂದೆಯವರ ಸಾವಿನ ಸುದ್ದಿಯನ್ನು ನಾಳೆ ಸಂಜೆ ಚುನಾವಣೆ ಮುಗಿಯುವವರೆಗು ಯಾರಿಗೂ ತಿಳಿಸದೆ ದೇಹವನ್ನು ಐ.ಸಿ.ಯು.ವಿನಲ್ಲಿಯೇ ಇಡುವಂತೆ ನೋಡಿಕೊಂಡ. ಮಾರನೇ ಬೆಳಿಗ್ಗೆ ಸಣ್ಣ ಹಳ್ಳಿಗಳಲ್ಲಿ ನಾಶಗರಾಜನ ಅಪರಾಧಿ ಲೋಕದ ಗೆಳೆಯರ ತಂಡ ಸಕ್ರಿಯವಾಗಿ ಕೆಲಸ ಮಾಡಿ ಅವನ ವಿರುದ್ದ ಓಟು ಹಾಕುವಂತವರನ್ನು ಗುರುತಿಸಿಅವರು ಮತಗಟ್ಟೆಗಳಿಗೇನೆ ಬರದಂತೆನೋಡಿಕೊಂಡರು.

ಚುನಾವಣೆ ಮುಗಿದ ಸಂಜೆಗೇನೆ ದೊಡ್ಡಯ್ಯನ ಸಾವಿನ ಸುದ್ದಿಯನ್ನು ಆಸ್ಪತ್ರೆ ಅಧಿಕೃತವಾಗಿ ಪ್ರಕಟಿಸಿತು. ಆ ರಾತ್ರಿಯೇ ತತಂದೆಯ ಶವವನ್ನು ಹಳ್ಳಿಗೆ ತಂದ ನಾಗರಾಜ  ಮಾರನೇ ದಿನ ಮದ್ಯಾಹ್ನದ ಹೊತ್ತಿಗೆ ಅಂತ್ಯಕ್ರಿಯೆ ಮುಗಿಸಿದ. ಮಾರನೇ ದಿನ ಮದ್ಯಾಹ್ನದ ಹೊತ್ತಿಗೆ ಪಕ್ಷೇತರ ಅಭ್ಯರ್ಥಿ ನಾಗರಾಜ ಎಲ್ಲ ಪಕ್ಷಗಳ ಅಧಿಕೃತ ಅಭ್ರ‍ರ್ಥಿಗಳನ್ನು ಸೋಲಿಸಿ ಐವತ್ತು ಸಾವಿರ ಮತಗಳ ಅಂತರದಿಂದ ಗೆಲುವು ಸಾದಿಸಿದ್ದು ದೊಡ್ಡಯ್ಯನ ಅಭಿಮಾನಿಗಳಾಗಿದ್ದ ಹೊರಗಿನ ಜನರಿಗೆ ಸಂತೋಷವನ್ನುಂಟು ಮಾಡಿದ್ದರೆ, ನಾಗರಾಜು ಮತ್ತು ದೊಡ್ಡಯ್ಯ ಅವರನ್ನು ಹತ್ತಿರದಿಂದ ಬಲ್ಲವೆರಿಗೆ ದೊಡ್ಡಯ್ಯನ ಸಾವು, ನಾಗರಾಜನ ಗೆಲುವು ತಾಲ್ಲೂಕಿನ ಜನರ ಅದಃಪತನದಂತೆ ಕಂಡು ಬಂತು. ಮಾರನೇದಿನ ಸ್ಥಳೀಯ ಪತ್ರಿಕೆಗಳು ‘ಹಿರಿಯ ನಾಯಕನ ನಿರ್ಗಮನ’- ‘ಹೊಸನಾಯಕನ ಉದಯ’ ಎಂಬ ಆಕರ್ಷಕ ತಲೆಬರಹದೊಂದಿಗೆ ಪ್ರಕಟವಾದವು!

‍ಲೇಖಕರು Avadhi

June 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. ಚೈತ್ರಾ ಶಿವಯೋಗಿಮಠ

    ಒಂದು ಕಾಲದಲ್ಲಿ ಹೇಗೆ ಪ್ರಾಮಾಣಿಕ ರಾಜಕಾರಣಿ ಅಳಿದು ರಕ್ಕಸ ರಾಜಕಾರಣಿ ಹುಟ್ಟಿದ ಅನ್ನೋದನ್ನ ಚೆನ್ನಾಗಿ ಚಿತ್ರಿಸಿದ್ದೀರಿ ಸರ್..

    ಪ್ರತಿಕ್ರಿಯೆ
    • ಕು.ಸ.ಮಧುಸೂದನ್ ರಂಗೇನಹಳ್ಳಿ

      ಥ್ಯಾಂಕ್ಸ್ ಮೇಡಂ

      ಪ್ರತಿಕ್ರಿಯೆ
      • km vasundhara

        ಕತೆ ಎನಿಸದೆ, ಸಹಜವಾದ ಚಿತ್ರಣವನ್ನು ಕಟ್ಟಿರುವಿರಿ.. ಕತೆ ಇಷ್ಟವಾಯ್ತು. ಆದರೂ ಕಡೆಗೆ ಪ್ರಾಮಾಣಿಕತೆಯು ಸಾಯುವುದನ್ನು ತಡೆಯಬೇಕಿತ್ತು..

        ಪ್ರತಿಕ್ರಿಯೆ
  2. C.P.Nagaraja

    ಕತೆಯನ್ನು ಓದುತ್ತಾ ಓದುತ್ತಾ ಹೋದಂತೆ ಕಳೆದ 30 ವರ್ಷಗಳ ರಾಜಕೀಯ ಇತಿಹಾಸವೇ ಕಣ್ಣಿಗೆ ಕಟ್ಟಿದಂತೆ ಆಯಿತು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಒಬ್ಬೊಬ್ಬ ದೊಡ್ಡಯ್ಯ ಮತ್ತು ನಾಗರಾಜ ಕಂಡು ಬಂದರು. ಒಳ್ಳೆಯ ಕತೆ. ಅಭಿನಂದನೆಗಳು.

    ಪ್ರತಿಕ್ರಿಯೆ
    • ಕು.ಸ.ಮಧುಸೂದನ್ ರಂಗೇನಹಳ್ಳಿ

      ಧನ್ಯವಾದ ಸರ್

      ಪ್ರತಿಕ್ರಿಯೆ
  3. Shivarama adiga

    Kathe Chennagi mudibandide Edu Nata Vajjaramuni Natisiruva Hale 70.80 Ra Dhashakada Cinimada Kathe Nodidange Anubhavawayithu

    ಪ್ರತಿಕ್ರಿಯೆ
    • ಕು.ಸ.ಮಧುಸೂದನ್ ರಂಗೇನಹಳ್ಳಿ

      ಆ ಸಿನಿಮಾಹೆಸರೇನು ಸರ್? ನೋಡಬೇಕು ತಿಲಿಸಿ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: