ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವನಗೌಡ ಹೆಬ್ಬಳಗೆರೆ ಕವಿತೆ- ಯಾರಿಗೆ ತಾನೇ ಹೇಳುವುದು ನಾವು?

ಬಸವನಗೌಡ ಹೆಬ್ಬಳಗೆರೆ

ಕೇಳಿಸಿದರೂ ಕೇಳಿಸದಂತೆ
ಎಚ್ಚರವಿದ್ದರೂ ಗಾಢ ನಿದ್ದೆಯಲ್ಲಿದ್ದಂತೆ
ನಟಿಸಬಲ್ಲ ಚಾಣಾಕ್ಷರಿರುವಾಗ
ಯಾರಿಗೆ ತಾನೇ ಹೇಳುವುದು ನಾವು?

ಮಾತಿನಲ್ಲೇ ಮಹಲು ಕಟ್ಟುತ್ತ
ಮಹಲುಗಳ ಮೇಲೆ ಮಹಲು
ಏರಿಸುತಿರುವ ಕಿರಾತಕರಿರುವಾಗ
ಯಾರಿಗೆ ತಾನೇ ಹೇಳುವುದು ನಾವು?

ಗೋಸುಂಬಿಯನ್ನ
ಮೀರಿಸುವಂತಹ ಬಣ್ಣ ಬದಲಿಸೋ
ವಂಚಕರಿರುವಾಗ
ಯಾರಿಗೆ ತಾ‌ನೇ ಹೇಳುವುದು ನಾವು?

ನಮ್ಮ ಕಷ್ಟವನು
ಲಾಭದ ಸರಕನು ಮಾಡಿಕೊಳ್ಳುವ
ಲಂಪಟರಿರುವಾಗ
ಯಾರಿಗೆ ತಾನೇ ಹೇಳಿಕೊಳ್ಳುವುದು ನಾವು?

ಗಾಳಿಯ ಬೀಸುವಿಕೆಗೆ ಸಿಕ್ಕು
ಜೊಳ್ಳು ಕಾಳಿನಂತೆ ಹಾರಿ ಹೋಗುವಂತಿರುವ
ಜನರ ಮೌಲ್ಯಗಳು
ಧನದಾಹಕೆ ಹಾರುತಿರುವಾಗ
ಯಾರಿಗೆ ತಾನೇ ಹೇಳುವುದು ನಾವು?

ಒಬ್ಬನ ಸಮಾಧಿಯ ಮೇಲೆ
ಮತ್ತೊಬ್ಬನು ಮಹಲು ಕಟ್ಟುತಿರುವಾಗ
ಯಾರಿಗೆ ತಾನೇ ದೂರುವುದು ನಾವು?

‘ತಾಮ್ರದ ಬಿಲ್ಲೆ (ಕಾಸು)
ತಾಯಿ ಮಗನ ಸಂಬಂಧ ಕೆಡಿಸುತ್ತೆ’
ಎಂಬ ಗಾದೆ ಮಾತು
ಸತ್ಯವಾಗುತ್ತಿರುವ ಕಾಲದಲ್ಲಿ
ಯಾರಿಗೆ ತಾನೇ ದೂರುವುದು ನಾವು??!!

ದೂರುವುದು ದೂರವಾಗಲಿ
ಮನಸು ಹಗುರವಾಗಲಿ
ಅಳುವವನು ಹೆಳವನೆನಿಸುವನಷ್ಟೇ!

ಆಳುವವರಾಗೋಣ ನಮ್ಮನು ನಾವೇ!
ನಮ್ಮ ಕಷ್ಟವನು ಧೈರ್ಯದಲಿ
ಎದುರಿಸುತ
ನಮಗೆ ನಾವೇ ಸಮಾಧಾನ
ಮಾಡಿಕೊಳ್ಳೋಣ…

‍ಲೇಖಕರು Admin

23 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading