ಕಾಡುವ ಕವಿತೆಗಳು ಭಾಗ – 3

ಪ್ರಿಯದರ್ಶಿನಿ ಶೆಟ್ಟರ

ಅದು ೨೦೧೮ರ ಮೇ ತಿಂಗಳು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ೬೮ನೇ ಘಟಿಕೋತ್ಸವ ಇತ್ತು. ಎಂ.ಎಸ್ಸಿ. ಬಯೋಟೆಕ್ನೊಲಜಿಯಲ್ಲಿ ಮೊದಲ ರ್ಯಾಂಕ್‌ ಬಂದಿದ್ದೆ. ಸುವರ್ಣ ಪದಕ ಪಡೆಯುವವರ ಸಾಲಿನಲ್ಲಿ ಕುಳಿತಿದ್ದೆ. ಚುಣಾವಣೆಯ ಸಮಯವದು. ಮಮ್ಮಿ ಅಂದು ಚುಣಾವಣಾ ತರಬೇತಿಯಲ್ಲಿದ್ದರು. ಕಾರ್ಯಕ್ರಮ ಬೆಳಿಗ್ಗೆ ಶುರುವಾಯಿತು.

ನಮ್ಮ ಸರದಿ ಬರುವುದು ಮಧ್ಯಾಹ್ನ ಅಂತ ಖಾತ್ರಿಯಾಯಿತು. ಅಲ್ಲಿ ಜಾಮರ್‌ ಅಳವಡಿಸಲಾಗಿತ್ತು. ಮಮ್ಮಿಗೆ ಫೋನ್‌, ಮೆಸೇಜ್‌ ಮಾಡಲು ಸಾಧ್ಯವಿರಲಿಲ್ಲ. ಆದರೂ ಪ್ರಯತ್ನಿಸುತ್ತಿದ್ದೆ. ನನ್ನ ಹಿಂದೆ ಮುಂದೆ ಕುಳಿತವರೂ ಪ್ರಯತ್ನಿಸುತ್ತಿದ್ದರು. ನಾನು ಚಡಪಡಿಸುತ್ತಿದ್ದೆ – ʼಯಾವಾಗಲಾದರೂ ಒಮ್ಮೆ ಸಿಗುವ ಅವಕಾಶವಿದು. ಮಮ್ಮಿ ಸರಿಯಾದ ಸಮಯಕ್ಕೆ ಬರುತ್ತಾರೋ ಇಲ್ಲವೋ?ʼ ಎಂದು. ಆಮೇಲೆ ನಿರ್ಧರಿಸಿದೆ: ʼಮಮ್ಮಿ ಬರದೇ ಇದ್ದರೂ ನಾನು ನಿರಾಶಳಾಗಬಾರದು. ನನ್ನ ಈ ಕ್ಷಣ ಸಂಭ್ರಮಿಸಬೇಕು. ಮೇಘ ಹೇಗಿದ್ದರೂ ವಿಡಿಯೋ ಮಾಡಿರುತ್ತಾಳೆ, ಫೋಟೊ ಸಿಗುತ್ತವೆ.ʼ ಇದನ್ನೇ ನನ್ನ ಗೆಳತಿಯರಿಗೂ ಹೇಳಿದೆ. ಚಿನ್ನದ ಪದಕ, ರ್ಯಾಂಕ್‌ ಸರ್ಟಿಫಿಕೆಟ್‌ ಕೈಸೇರಿದವು. ಘಟಿಕೋತ್ಸವ ಮುಗಿಯಿತು. ನಮ್ಮ ಕುಟುಂಬ ಇದ್ದಲ್ಲಿಗೆ ಹೋದೆ. ಮಮ್ಮಿ ಅಲ್ಲಿದ್ದರು. ಸರಿಯಾದ ಸಮಯಕ್ಕೆ ಬಂದಿದ್ದರೆಂಬುದನ್ನು ಕೇಳಿ ಕೇಳಿ ಖಚಿತಪಡಿಸಿಕೊಂಡೆ.

ಊಟದ ಬಿಡುವಿನ ಸಮಯದಲ್ಲಿ ಬಂದಿದ್ದರು. ಅವಸರವಸರವಾಗಿ ಫೋಟೋ, ಸೆಲ್ಫಿ ಎಲ್ಲ ಮುಗಿಸಿ, ಊಟ ಮಾಡಿದೆವು. ಪಪ್ಪ ಅವರನ್ನು ತರಬೇತಿ ಕೇಂದ್ರಕ್ಕೆ ಬಿಟ್ಟುಬಂದರು. ಅದೇ ವರ್ಷ ನಾನು ಪಿಎಚ್.ಡಿ. ಸೇರಿಕೊಂಡೆ. ಮಾರನೆ ವರ್ಷ ಮೇಘಳಿಗೆ ಬಿ.ಡಿ.ಎಸ್‌. ಸೀಟ್‌ ಸಿಕ್ಕಿತು. ನಮ್ಮ ಕೆಲಸಗಳೊಡನೆ ಮನೆಯ ಕೆಲಸ, ಅಭ್ಯಾಸ ಎಲ್ಲವೂ ಸೇರಿ ಒತ್ತಡವಾಗುತ್ತಿತ್ತು.

೨೦೨೦-೨೧ರಲ್ಲಿ ಬಹಳಷ್ಟು ಸಮಯ ಲಾಕ್‌ಡೌನ್‌ನಲ್ಲಿ ಕಳೆಯಿತು. ಓದು-ಬರಹ, ಹವ್ಯಾಸಗಳು ಆ ಸಮಯವನ್ನು ಕೊಂಚ ಸಹನೀಯಗೊಳಿಸಿದ್ದವು. ಮಮ್ಮಿಯ ಕಾಲೇಜು ಕೆಲಸ, ಬೋಧನೆಯ ಜೊತೆಗೆ ಸಂಶೋಧನೆಗೆ ಸಾಕಷ್ಟು ವೇಳೆ ಆಗಿತ್ತು. ಬಹಳ ಪ್ರಯಾಸಪಟ್ಟು ಪಿಎಚ್.ಡಿ. ಮುಗಿಸಿದರು. ಥೀಸಿಸ್‌ ಸಲ್ಲಿಕೆ, ವೈವಾ ಆದಂತೆಲ್ಲ ನಾನು ನಿರಾಳವಾಗುತ್ತಾ, ನನ್ನ ಕೆಲಸಗಳಲ್ಲಿ ಹೆಚ್ಚಿನ ವೇಳೆ ಕಳೆಯತೊಡಗಿದೆ. ಇದೇ ವರ್ಷ ಜೂನ್‌ ತಿಂಗಳಲ್ಲಿ ಕ.ವಿ.ವಿ.ಯಲ್ಲಿ ೭೨ನೇ ಘಟಿಕೋತ್ಸವ ನಡೆಯಿತು.

ಪದವಿ ಪಡೆಯುವವರೆಲ್ಲ ಬಿಳಿಬಣ್ಣದ ಖಾದಿ‌ ಶಾಲ್- ಬಟ್ಟೆಗಳಲ್ಲಿ ಮಿಂಚುತ್ತಿದ್ದರು. ಕರಿಗೌನ್‌ಗಳ ಸ್ಥಾನವನ್ನು ಬಿಳಿ ಬಟ್ಟೆಗಳು, ಸೀರೆಗಳು ಪಡೆದಿದ್ದವು. ವಿಶ್ವವಿದ್ಯಾಲಯದ ಈ ತೀರ್ಮಾನದಲ್ಲಿ ಪಪ್ಪನ (ಮುಖ್ಯಸ್ಥರು, ಗಾಂಧೀ ಅಧ್ಯಯನ ವಿಭಾಗ, ಕ.ವಿ.ವಿ.) ಪಾತ್ರವೂ ಇದ್ದದ್ದು ನಮಗೆಲ್ಲ ಖುಷಿ, ಹೆಮ್ಮೆ ಪಡುವ ಸಂಗತಿಯಾಗಿತ್ತು. ಅವತ್ತಿನ ದಿನವಂತೂ ಅನೇಕ ವರ್ಷಗಳ ಕನಸೊಂದು ನನಸಾದ ಭಾವ. ನಮ್ಮ ಇಡೀ ಕುಟುಂಬ ನೆರೆದಿದ್ದು, ರಾತ್ರಿ ೧೦-೧೨ ಜನ ಸೇರಿ ಊಟ ಮಾಡಿದ್ದು, ನಂತರ ಕ್ಯಾಂಪಸ್‌ನಲ್ಲಿ ಸುತ್ತಾಡಿದ್ದು, ಇವೆಲ್ಲವೂ ಅಪರೂಪದ ಕ್ಷಣಗಳು. ಉನ್ನತ ಶಿಕ್ಷಣದ ಕನಸು ಕಾಣುವುದು, ಅದಕ್ಕೆ ಬೇಕಾದ ತಯಾರಿ, ತಕ್ಕ ಮನಸ್ಥಿತಿ, ಒತ್ತಡ ನಿರ್ವಹಣೆಗೆ ಸ್ಪೂರ್ತಿ ನಮ್ಮ ಪಾಲಕರೇ ಆಗಿದ್ದರು. ಜೊತೆಗೆ ಅವರ ಬಹಳಷ್ಟು ವಿದ್ಯಾರ್ಥಿಗಳು ಒಳ್ಳೆಯ ಕರಿಯರ್‌ ಮಾಡಿಕೊಳ್ಳುತ್ತಿದ್ದದ್ದು ಕೂಡ ನಮ್ಮಲ್ಲಿ ಹುರುಪು ಮೂಡಿಸುತ್ತಿತ್ತು.

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ನಮಗೆ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೋಧಿಸುತ್ತಿದ್ದ ಪ್ರಾಣಿಶಾಸ್ತ್ರ ವಿಭಾಗದ ಡಾ. ಎ.ಎಸ್.‌ ಬೆಲ್ಲದ ಮೇಡಂ (ಕೆ.ಸಿ.ಡಿ.ಯ ಮೊದಲ ಮಹಿಳಾ ಪ್ರಾಂಶುಪಾಲರು) ಭೆಟ್ಟಿಯಾದರು. ಅವರು ಇದೇ ವರ್ಷ ನಿವೃತ್ತರಾದರು. ಜೊತೆಗೆ ಅವರ ಮಗಳು ಬಂದಿದ್ದರು. ನಾನು ಹಾಗೂ ಮೇಡಂ ಒಬ್ಬರನ್ನೊಬ್ಬರು ಕಂಡು ಎಕ್ಸೈಟ್‌ ಆಗಿ ಅಪ್ಪಿಕೊಂಡದ್ದನ್ನು ಗಮನಿಸಿದ ಅವರ ಮಗಳು ಹೇಳಿದ್ದು, "ತನ್ನ ಅಮ್ಮನೊಡನೆ ಅವರ ವಿದ್ಯಾರ್ಥಿಗಳು ಹೀಗೆ ಸಂಭ್ರಮಿಸುವುದನ್ನು ನೋಡುವುದೇ ಒಂದು ಸಂಭ್ರಮ.” ನಾನೂ ಕೂಡ ಇಂತಹ ಸನ್ನಿವೇಶಗಳಲ್ಲಿ ಇಂತಹದೇ ಅನುಭವವನ್ನು ಬಹಳ ಸಲ ಪಡೆದ ಕಾರಣ, "ನನ್ನ ಪಾಲಕರೂ ಕೂಡ ಅಧ್ಯಾಪಕ ವೃತ್ತಿಯಲ್ಲಿರುವ ಕಾರಣ ನೀವು ಹೇಳುತ್ತಿರುವುದು ನನಗೂ ಅನ್ವಯಿಸುತ್ತದೆ. ಇಂತಹ ಕ್ಷಣಗಳನ್ನು ನಾನೂ ಸಂಭ್ರಮಿಸುತ್ತೇನೆ!" ಎಂಬುದು ನನ್ನ ಪ್ರತಿಕ್ರಿಯೆಯಾಗಿತ್ತು.

ಕಳೆದ ವರ್ಷ ಏಪ್ರಿಲ್‌ ತಿಂಗಳಲ್ಲಿ ಮನೋಹರ ಮಳಗಾಂವಕರ್‌ ಅವರ ʼಬರ್ಬೂಸಾʼ ಬಂಗಲೆಗೆ (ಜೋಯಿಡಾ ತಾಲ್ಲೂಕು, ಜಗಲಬೆಟ್‌, ಉತ್ತರಕನ್ನಡ ಜಿಲ್ಲೆ) ಹೋಗುವ ಅಪೂರ್ವ ಅವಕಾಶ ಸಿಕ್ಕಿತ್ತು. ನಮ್ಮೊಡನೆ ಪಪ್ಪನ ವಿದ್ಯಾರ್ಥಿ, ಪತ್ರಕರ್ತರಾದ ಡಾ. ಬಸವರಾಜ ಹೊಂಗಲ ಅವರು ಬಂದಿದ್ದರು. ʼಬರ್ಬೂಸಾʼ ಬಂಗಲೆಯ ಸೌಂದರ್ಯ, ಅಲ್ಲಿನ ಅದ್ಭುತ ವಾತಾವರಣದ ಬಗ್ಗೆ ಬರೆಯತೊಡಗಿದರೆ ಅದೊಂದು ಪ್ರತ್ಯೇಕ ಲೇಖನವೇ ಆಗುತ್ತದೆ; ಅಷ್ಟೊಂದು ಮಾಹಿತಿಗಳಿವೆ ಹಂಚಿಕೊಳ್ಳಲು. ಅಲ್ಲಿ ಭೇಟಿ ನೀಡದೇ ಇದ್ದಿದ್ದರೆ ಮಮ್ಮಿಯ ಸಂಶೋಧನೆ ಸಂಪೂರ್ಣವಾಗುತ್ತಿರಲಿಲ್ಲ. ಅಲ್ಲಿಗೆ ಹೋಗಿಬಂದ ಕೆಲ ದಿನಗಳಲ್ಲಿ (ಏಪ್ರಿಲ್‌ ೫) ಶಾಂತಕ್ಕ ಅಮ್ಮ ತೀರಿಹೋದರು.

ಆ ಆಘಾತದಿಂದ ಹೊರಬರಲು ಕೆಲ ಸಮಯ ಬೇಕಾಯಿತು. ಥೀಸಿಸ್‌ ಸಲ್ಲಿಸುವ ಸಮಯದಲ್ಲಿ ಮಮ್ಮಿಯ ಗೈಡ್‌ ಪ್ರೊ. ಅಶೋಕ ಹುಲಿಬಂಡಿಯವರು, "ಈ ಸಂದರ್ಭದಲ್ಲಿ ತಮ್ಮ ತಾಯಿಯವರು ಇರಬೇಕಿತ್ತು" ಎಂದಾಗ ಬಹಳ ಬೇಜಾರಾಯಿತು. ಕಾಲೇಜು ಹಾಗೂ ಇಂಗ್ಲಿಷ್‌ ವಿಭಾಗದ ಸಿಬ್ಬಂದಿ, ನಮ್ಮ ಕುಟುಂಬದವರು, ಮಮ್ಮಿಯ ಅಕ್ಕ ಶ್ರೀಮತಿ ಮಹಾದೇವಿ ಚೆನ್ನಬಸಪ್ಪ ಹುಂಡೇಕಾರ - ಅಣ್ಣಂದಿರು ಶ್ರೀ ವೀರಣ್ಣ ಮತ್ತು ಶ್ರೀ ಬಸವರಾಜ ಮರಡಿ ಹಾಗೂ ಅತ್ತಿಗೆಯರು ಶ್ರೀಮತಿ ಶಾಂತಾ ಟಕ್ಕಳಕಿ ಮತ್ತು ಶ್ರೀಮತಿ ಆರತಿ ಮರಡಿ, ಸ್ನೇಹಿತರು - ಹೀಗೆ ಅನೇಕರ ಸಹಕಾರ, ಪ್ರೋತ್ಸಾಹ ಸಿಕ್ಕಿತು. ʼಇಲ್ಲಿ ಮಕ್ಕಳು ಅಳುವುದಿಲ್ಲʼ ಪದ್ಯದಲ್ಲಿದ್ದಂತೆ ಕೆಲವೊಮ್ಮೆ ಮಕ್ಕಳೆಡೆಗೆ ಹೆಚ್ಚಿನ ಸಮಯ ಕೊಡಲು ಪಾಲಕರಿಗೆ ಸಾಧ್ಯವಾಗದಿರಬಹುದು. ಆಗ ಮನೆಯಲ್ಲಿರುವವರು, ಅಜ್ಜ-ಅಜ್ಜಿಯರು ಸಂಭಾಳಿಸಿಕೊಂಡು ಹೋಗುವುದನ್ನು ಕಾಣುತ್ತೇವೆ.

ಉದ್ಯೋಗಸ್ಥ ತಾಯಿಯೂ ಸಹ ಇತರರ ಸಹಕಾರ ದೊರೆತಾಗ ಉತ್ತಮ ಗೃಹಿಣಿಯೂ ಆಗಬಲ್ಲಳು. ಮನೆಕೆಲಸದಲ್ಲಿ ಎಲ್ಲರ ಭಾಗವಹಿಸುವಿಕೆ ಇಲ್ಲಿ ಮುಖ್ಯವಾಗುತ್ತದೆ. ಮಹಿಳೆಯರಿಗೆ ʼಮಲ್ಟಿ ಟಾಸ್ಕಿಂಗ್ʼ‌ ಸಿದ್ಧಿಸಿರುತ್ತದೆ ಎಂಬ ಕಾರಣಕ್ಕೆ ಅವರ ಮೇಲೆ ಅತಿಯಾದ ಒತ್ತಡ ಹಾಕುವುದು ಸರಿ ಎನಿಸದು. ಮನಸ್ಸು ಮಾಡಿದರೆ ಏಕ ಕಾಲಕ್ಕೆ ಅನೇಕ ಕೆಲಸಗಳನ್ನು ನಿರ್ವಹಿಸುವುದು ಕಷ್ಟವೇನಲ್ಲ. ಎರಡು ಪದ್ಯಗಳ ವಿವರಣೆಯಿಂದ ಶುರುವಾದ ನೆನಪಿನ ಸುರುಳಿ ಎರಡು ದಶಕಕ್ಕೂ ಮೀರಿ ತೆರೆದುಕೊಂಡಿತು…

‍ಲೇಖಕರು Admin

November 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Haseena siddapur

    ತುಂಬಾ ಚೆನ್ನಾಗಿದೆ ನಿಮ್ಮ ಜೀವನದ ಕಥೆ ಓದಿ ಮನ ಮಿಡಿಯಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: