ಅಹಂಕಾರ ಯಾರಿಗೂ ಒಳಿತಲ್ಲ!

ಗೋಳೂರ ನಾರಾಯಣಸ್ವಾಮಿ

ಹದಿನಾರನೆಯ ಶತಮಾನದಲ್ಲಿ ಬದುಕಿ ಬಾಳಿದವರು ಎನ್ನಲಾದ ಮಾದಪ್ಪ, ಮಾದಾರಿ, ಮಲೆ ಮಹದೇಶ್ವರ ಎಂದು ಕರೆಸಿಕೊಳ್ಳುವ ಮಾದೇವನನ್ನು ಜನಪದರು ಭಕ್ತಿಯಿಂದ ಮಾದಪ್ಪ ಎಂದು ಕರೆಯುತ್ತಾರೆ.

ಮಾದಪ್ಪನಿಗೆ ಸಾವಿರಾರು ಜನಪದ ಗೀತೆಗಳು, ಬಿಡಿ ಕಾವ್ಯಗಳು ಸೃಷ್ಟಿಯಾಗಿದ್ದು ಅವೆಲ್ಲ ಮಾದೇವನ ಪವಾಡಗಳನ್ನು, ಆಂದೋಲನವನ್ನು ಹಾಗೂ ಆತನ ಸಾಮಾಜಿಕ ಚಳವಳಿಯನ್ನು ಸಾರುತ್ತವೆ. ಜಗತ್ತಿನಲ್ಲಿ ಫಿನ್ ಲ್ಯಾಂಡ್ ನ ‘ಕಲೆವಲ’ ಎಂಬ ಕಾವ್ಯ ಬಿಟ್ಟರೆ ಅತ್ಯಂತ ದೊಡ್ಡ ಜನಪದ ಕಾವ್ಯ ನಮ್ಮ “ಮಹದೇಶ್ವರ ಕಾವ್ಯ”. ಇಂತಹ ಹಿರಿಮೆಯನ್ನು ಹೊಂದಿರುವ ಮಾದೇಶ್ಚರ ಕಾವ್ಯದಲ್ಲಿ ಹಲವಾರು ಕವಟ್ಲುಗಳು, ಸಾಲುಗಳು ಬರುತ್ತವೆ. ಇವು ಪ್ರತ್ಯೇಕ ಅಧ್ಯಾಯಗಳಾಗಿದ್ದು, ಪ್ರತ್ಯೇಕ ವ್ಯಕ್ತಿ ಅಥವಾ ವಸ್ತು ಕೇಂದ್ರಿತವಾದ ಕತೆಗಳನ್ನು ಹೇಳುತ್ತವೆ. ಇದರಲ್ಲಿ “ಶೆಟ್ಟಿ ಸರಗೂರಯ್ಯನ ಸಾಲು” ಕೂಡ ಒಂದು.

ಸರಗೂರಯ್ಯನ ಮಠ ಈಗಿನ ಮಳವಳ್ಳಿ ತಾಲ್ಲೂಕು ಸರಗೂರು ಹ್ಯಾಂಡ್ ಪೋಸ್ಟ್ ಬಳಿ ಇದೆ. ಇಲ್ಲಿಂದ ಮಂಟೇಸ್ವಾಮಿ ನೆಲೆಗೊಂಡ ಬೊಪ್ಪೇಗೌಡನಪುರ ನಾಲ್ಕೈದು ಕಿ.ಮೀ. ದೂರದಲ್ಲಿದೆ.

ಸರಗೂರು ಮಠದಲ್ಲಿ ಮೂಗಪ್ಪ, ರಾಮವ್ವೆ ಎಂಬ ದಂಪತಿಗಳು ವಾಸವಾಗಿದ್ದರು. ಇವರು ಕೃಷಿ ಮಾಡಿಕೊಂಡು ಪರೋಪಕಾರಿಗಳಾಗಿ ಜೀವಿಸಿತ್ತಾ ಇರುತ್ತಾರೆ. ಇಲ್ಲಿಗೆ ಉತ್ತರ ದೇಶದಿಂದ ಮಾದಯ್ಯ ತನ್ನ ಒಕ್ಕಲು ಹೆಚ್ಚುಸಿಕೊಳ್ಳಲು ಹಾಗೂ ತನಗೆ ‘ಎಣ್ಣೆಮಜ್ಜನ’ ಮಾಡಲು ಇವರೇ ಸೂಕ್ತ ಎಂದು ತಿಳಿದು ಮಠಕ್ಕೆ ಬಂದು ತನ್ನ ಒಕ್ಕಲಾಗಲು ಕೇಳಿಕೊಳ್ಳುತ್ತಾನೆ. ಆದರೆ ರಾಮವ್ವೆ ಮತ್ತು ಮೂಗಪ್ಪ ತಾವು ಬಿಳಿಗಿರಿರಂಗನ ಒಕ್ಕಲಾಗಿದ್ದು, ಮಾದಯ್ಯನ ಒಕ್ಕಲಾಗಲು ಒಪ್ಪದಿರಲು ಹಲವಾರು ಕಷ್ಟಕಾರ್ಪಣ್ಯಗಳನ್ನು ನೀಡಿ ಮಾದೇಶ್ವರ ತನ್ನ ಒಕ್ಕಲಾಗಿ ಕೊನೆಗೂ ಇವರನ್ನು ಪಡೆದುಕೊಳ್ಳುತ್ತಾನೆ.

ರಾಮವ್ವ- ಮೂಗಪ್ಪ ಇಬ್ಬರೂ ಒಕ್ಕಲಾಗಿ ತನ್ನ ಉಪ್ಪಾರ ಕುಲದವರನ್ನು ಮಾದಯ್ಯನಿಗೆ ನಡೆದುಕೊಳ್ಳುವಂತೆ ಮಾಡುತ್ತಾರೆ‌. ಇವರು ಕಟ್ಟಿ ಬೆಳೆಸಿದ ಮಠ ಸರಗೂರಯ್ಯನ ಮಠವಾಗಿ ಇಂದಿಗೂ ಅಪಾರ ಭಕ್ತರನ್ನು ಒಳಗೊಂಡ ಮಠವಾಗಿದೆ.

ಪ್ರತೀ ಅಮವಾಸ್ಯೆಯಂದು ಎಣ್ಣೆಮಜ್ಜನ ಮಾಡಲು ಒಪ್ಪಿಕೊಂಡ ಸರಗೂರಯ್ಯ ದಂಪತಿಗಳು ಆ ದಂಡಕಾರಣ್ಯದೊಳು ಸುಮಾರು ತೊಂಭತ್ತು ಕಿ.ಮೀ. ದೂರ ನಡೆದುಕೊಂಡು ಹೋಗಿ ಎಣ್ಣೆಮಜ್ಜನ ಮಾಡುವ ಪರಿಸ್ಥಿತಿ ಬರುತ್ತದೆ. ಹೀಗೆ ನಡೆದುಕೊಂಡು ಹೋಗುವ ಕುರಿತು ಅನೇಕ ಜನಪದ ಮಟ್ಟುಗಳು ಸೃಷ್ಟಿಯಾಗಿವೆ.

“ಕಾರೆಂಬೋ ಕತ್ತಲಲ್ಲಿ,
ಜೋರೆಂಬೋ ಮಳೆ ಸುರಿದು”

“ಹೊತ್ತು ಮುಳುಗಿದರೇನು,
ಕತ್ತಲಾದರೇನು,
ಅಪ್ಪ ನಿನ್ನ ಬಳಿಗೆ ಬರುವೇನು”

“ಬೆಟ್ಟದ ಮ್ಯಾಲಿನ ಕಲ್ಲೀಗೆ
ಹನ್ನೆರಡು ಸಾವಿರ ಮಲ್ಲಿಗೆಯು
ಬೆಟ್ಟಕೆ ಬೆಳಗೀನ ಮಲ್ಲಿಗೂವು
ಗಮಗುಟ್ಟುತ ಬಂದಾವು”

“ಕಾಡಪ್ಪಾ ಪಾರುವಾಳದಕ್ಕಿ
ಕಂದನ ಹುಲುಮರಿದುಂಬಿಗಳು
ನವುಲಕ್ಕಿ ನವುಲಿಂಡಯ್ಯಾನ
ಕೂಗಿ ಕರಿದಾವು”

“ಕಾಡಿ ಬೇಡಿ ಕಂಗೆಟ್ಟೆನು ಗುರುವೆ
ಬೇಡುವೆನು ನಿಮ್ಮ ಸಿರಿಪಾದವ
ಮಂಡೆಮ್ಯಾಗಳ ಮಜ್ಜಣದೂವ
ಪಾಲಿಸಯ್ಯ ವರುವ”

“ಇಂದು ಕಂಡ ಸರಗೂರಲ್ಲಿ
ಚದುರಂಗದ ಬೆಟ್ಟದ ಕೈಯೊಳಗೆ
ಇಂದು ಕಂಡೀರ್ಯಾ ಮಾದೇವನ
ಸಿರುಗಂಧದ ಕೊಳುದಲ್ಲಿ”

ಜನಪದರಲ್ಲಿ ತಮಗೆ ಒಳಿತು ಮಾಡುವ ಮಾನವ ಬಂಧುತ್ವದ ಮೇಲೆ ಸಣ್ಣದೊಂದು ಭಕ್ತಿಯೆಂಬ ಹಸಿರು ಗೋಪುರ ಹುಟ್ಟಿಕೊಳ್ಳುತ್ತದೆ. ಅಲ್ಲಿಂದ ಆ ವ್ಯಕ್ತಿ ಅಥವಾ ಶಕ್ತಿಯೊಂದಿಗೆ ಸ್ವಲ್ಪ ಭಿನ್ನವಾದ ಅಂತರ ಗೌರವಯುತವಾಗಿಯೇ ಹುಟ್ಟಿಕೊಳ್ಳುತ್ತದೆ. ಇಷ್ಟು ದಿನ ನಮ್ಮೊಡನೆಯೇ ಇದ್ದು ಅನೇಕ ಪವಾಡಗಳನ್ನು ಮಾಡಿದ ಮಾದೇವ ಈಗ ದೈವವಾಗಿ ಕಾಣಸಿಗುತ್ತಾನೆ.

ಇಂತಹ ಸಂಧರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ಹೇಳುತ್ತೇನೆ. ಈಗಾಗಲೇ ಸರಗೂರಯ್ಯ ದಂಪತಿಗಳನ್ನು ಒಕ್ಕಲಾಗಿ ಪಡೆದು ಎಣ್ಣೆಮಜ್ಜನಕ್ಕೆ ಒಪ್ಪಿಸಿ ಬೆಟ್ಟಕ್ಕೆ ತೆರಳಿದ ಮಾದಪ್ಪ ಗುಡಿಯೊಳಗೆ ಕುಳಿತು ನಿದ್ರೆಗೆ ಜಾರಿರುತ್ತಾನೆ. ಮಾದೇಶ್ವರನ ಪವಾಡಗಳನ್ನು ಕಣ್ಣಾರೆ ಕಂಡ ಶರಣೆ ರಾಮವ್ವ ಮೂಗಪ್ಪ ದಂಪತಿ ಅಪಾರ ಭಕ್ತಿಭಾವದಿಂದ ಅದೊಂದು ಅಮವಾಸ್ಯೆ ದಿನ ಎಣ್ಣೆಮಜ್ಜನ ಮಾಡಲು ಉಚ್ಚೆಳ್ಳು ಬುತ್ತಿಯನ್ನು ಹೊತ್ತು ತಂದು ಮಾದೇವನ ಗುಡಿ‌ಮುಂದೆ ನಿಂತು ಸರಗೂರಯ್ಯ ಕೂಗುತ್ತಿದ್ದಾನೆ, “ಹೊರಗೆ ಬನ್ನಿ ಮಾದಪ್ಪ ನಾವು ಬಂದಿದ್ದೇವೆ. ಎಪ್ಪತ್ತ ಏಳು ಬೆಟ್ಟಗಳನ್ನು ಹತ್ತಿ ಇಳಿದು ಈಗಾಗಲೇ ಸಾಕಷ್ಟು ದಣಿದಿದ್ದೇವೆ. ನಿಮಗೆ ಮಜ್ಜನ ಮಾಡಬೇಕು. ಮತ್ತೆ ನಮ್ಮ ಊರ ದಾರಿ ಹಿಡಿಯಬೇಕಾಗಿದೆ,” ಎಂಬುದಾಗಿ ಕೂಗಲಾಗಿ, ಮಾದೇವನು ಗಾಢ ನಿದ್ರೆಗೆ ಜಾರಿದ್ದಾನೆ. ಇವರ ಕೂಗು ಆತನಿಗೆ ಕೇಳಿಸಿಲ್ಲವಾಗಿ ಹತ್ತಾರು ಬಾರಿ ಕೂಗಿದರು ಬರಲಿಲ್ಲ. ಕುಪಿತಗೊಂಡ ಸರಗೂರಯ್ಯ, “ಹೇ, ಮಾದಾರಿ ಬಾ ಹೊರಗೆ,” ಎಂಬುದಾಗಿ ದನಿಯೇರಿಸಿದ್ದಾನೆ. ಈ ಕೂಗು ಮಾದಪ್ಪನ ಕರ್ಣಗಳಿಗೆ ಮುಟ್ಟಲಾಗಿ ಕರ್ಣವೇ ಹರಿದು ಹೋದಂತಾಗಿದೆ. “ಏನೋ ಶೆಟ್ಟಿ ನನ್ನನ್ನೇ ಮಾದಾರಿ ಎಂದು ಏಕವಚನದಲ್ಲಿ ಕರೆಯುವಷ್ಟು ಸೊಕ್ಕಾಯಿತೆ ನಿನಗೆ?” ಎಂದು ಮಾದೇವ ಗುಡಿಯಿಂದೆದ್ದು ಹೊರಬಂದು ನೋಡಲಾಗಿ, ಸರಗೂರಯ್ಯನ ಕಣ್ಣುಗಳು ಕೆಂಡದ ಉಂಡೆಗಳಾಗಿವೆ. ಇದನ್ನು ನೋಡಿದ ಮಾದೇವನೊಮ್ಮೆ ಬೆಚ್ಚಿ ಬಿದ್ದು, “ಅಯ್ಯಾ ಕ್ಷಮಿಸು, ಶಾಂತನಾಗು. ಈ ಪರಿ ಕೋಪ ಲೋಕಕ್ಕೆ ಹಿತವಲ್ಲ,” ಎಂದು ಹೇಳುತ್ತಿದ್ದ ಹಾಗೆ ಸರಗೂರಯ್ಯನ ಕಣ್ಣುಗಳು ಕೆರೆಯ ಕಮಲಗಳಾದವು. ಆಗ ಮಾದೇಶ್ವರ ಹೇಳುತ್ತಾನೆ, “ಅಯ್ಯಾ, ನಾನಲ್ಲ ಶರಣ ನೀನು. ನೀನು ನಿಜವಾದ ಘನ ಶರಣ,” ಎಂದು ನನ್ನ ಬಳಿಯೇ ನೀನಿರಿಬೇಕೆಂದು ಇರಿಸಿಕೊಳ್ಳುತ್ತಾನೆ ಮಾದೇವ.

ಇಲ್ಲಿ ಭಕ್ತಿ ದೊಡ್ಡದು. ಭಕ್ತಿಗೆ ಒಳಗಾಗುವವನನ್ನೇ ಬೆಚ್ಚಿಬೀಳಿಸಿದ್ದು ಈ ಮಾನವಬಂಧುತ್ವ. ಮನುಷ್ಯ ಅಹಂ ಬಿಡದ ಹೊರತು ಎಂದಿಗೂ ಉದ್ದಾರ ಆಗೋದಿಲ್ಲ ಎಂಬುದು ಇದರ ತಾತ್ಪರ್ಯವಾಗಿದೆ.

‍ಲೇಖಕರು Admin

November 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: