ಕರ್ನಾಟಕದ ಮಹತ್ವದ ಕಲಾ ವಿಮರ್ಶಕರಾದ ಗಿರಿಧರ್ ಖಾಸನೀಸ್ ಅವರ ಮೊದಲ ಕೃತಿ ಹೊರ ಬಂದಿದೆ. ಎಲ್ಲಿಂದಲೋ ಹಾರಿಬಂದು ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.
ಈ ಕೃತಿಗೆ ಹಿರಿಯ ವಿಮರ್ಶಕರು-ಓದುಗರು ಬರೆದ ಮಾತುಗಳು ಇಲ್ಲಿವೆ-
ಗಿರಿಧರ್ ಖಾಸನೀಸರ ‘ಎಲ್ಲಿಂದಲೋ ಹಾರಿ ಬಂದು’ ಸಂಕಲನ ನನ್ನ ಪ್ರಕಾರ ಒಂದು ಅಪೂರ್ವ ಕೊಡುಗೆ. ಕನ್ನಡ ಸಾಹಿತ್ಯದಲ್ಲಂತೂ ಇಂತಹ ಬರಹಗಳನ್ನು ನಾನು ಕಂಡಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಅದರಲ್ಲಿ ಕೆಲವನ್ನು ಹೇಳಬಹುದಾದರೆ – ನಮಗೆ ಸಾಮಾನ್ಯವಾಗಿ ತಿಳಿದಿರುವ ಯಾವುದೇ ಒಂದು ಪ್ರಾಕಾರಕ್ಕೆ ಈ ಬರಹಗಳು ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ.
ಕೆಲವು ಬರಹಗಳನ್ನು ಓದಿದಾಗ ಜೆನ್ ಕಥೆ/ಕಾವ್ಯ ಹಾಗೂ ಹೈಕುಗಳ ನೆನಪಾಗುತ್ತವೆ. ಅದರ ಪಕ್ಕದಲ್ಲೇ ಬೊರೇಸ್, ಕಾಫ್ಕ, ಸಿಂಗರ್ ಮೊದಲಾದವರು ಕಾಣಿಸುವಂತ ದರ್ಶನಗಳು ಸಿಗುತ್ತವೆ. ಅವುಗಳ ಸನಿಹದಲ್ಲೇ ರಾಶೊಮನ್ ರೀತಿಯ ಮಲ್ಟಿ-ಪೆರ್ಸ್ಪೆಕ್ಟಿವ್ ಬರಹಗಳು ಎದ್ದು ನಿಲ್ಲುತ್ತವೆ. ಇವೆಲ್ಲದರ ಸಾಂಗತ್ಯವಿದ್ದರೂ ಯಾರನ್ನೂ ಅನುಕರಣಿಸದೆ ಯಾವುದಕ್ಕೂ ಅಂಟಿಕೊಳ್ಳದೆ ಖಾಸನೀಸರು ತಮ್ಮ ಪಾಡಿಗೆ ತಮ್ಮ ಹಾದಿಯನ್ನು ರಚಿಸಿರುವುದು ನಿಜಕ್ಕೂ ಖುಷಿ ಕೊಡುತ್ತದೆ.
ಬರಹಗಳ ಶೀರ್ಷಿಕೆಗಳನ್ನೇ ನೋಡಿ. ಅವು ಬರೀ ಶೀರ್ಷಿಕೆಗಳಾಗದೆ ಬರಹಗಳ ಅವಿಭಾಜ್ಯ ಅಂಗಗಳಾಗುತ್ತವೆ. ಬಹುತೇಕ ಬರಹಗಳಲ್ಲಿ ಕಟ್ಟ ಕಡೆಯ ಸಾಲುಗಳು ಇಡೀ ಬರಹದ ಬಣ್ಣವನ್ನೇ ಬದಲಿಸಿ ಓದುಗನನ್ನು ಬೆರಗುಗೊಳಿಸುತ್ತವೆ. ಇವೆಲ್ಲದರ ನಡುವೆ ನಮಗೆ ಕಾಣುವುದು ನಮ್ಮ ಸುತ್ತಲಿನ ಜೀವನದ ಆಳವಾಗಿ ಗ್ರಹಿಸಿದ ಕ್ಷಣಗಳು, ತುಣುಕುಗಳು, ಹಾಗೂ ಯಾವುದೇ ಆಡಂಬರ ಉತ್ಪ್ರೇಕ್ಷೆಗಳಿಲ್ಲದ ಚಿಕ್ಕ ಚೊಕ್ಕ ಸ್ವಚ್ಛ ನೋಟಗಳು.
ಇದು ಖಾಸನೀಸರ ಚೊಚ್ಚಲ ಸಂಕಲನ ಎಂದು ನಂಬುವುದು ಕಷ್ಟ. ಅವರ ಮುಂದಿನ ಬರಹ ಹಾಗೂ ಸಂಕಲನಗಳನ್ನು ಓದಲು ಕಾತರನಾಗಿದ್ದೇನೆ. ಖುಷಿಯಿಂದ ಎದುರುನೋಡುತಿದ್ದೇನೆ.
– ಡಾ. ಕೆ ಪುಟ್ಟಸ್ವಾಮಿ

ಪ್ರಿಯ ಗಿರಿಧರ್,
ನಿಮ್ಮ ಬರಹಗಳನ್ನು ಓದಿ ಸಂತೋಷವಾಯಿತು.
ನಿಮ್ಮ ಬರವಣಿಗೆಯಲ್ಲಿ ತಾಜಾತನವಿದೆ. ಈಗಾಗಲೇ ಪ್ರಚಲಿತ ವಿರುವ ದಾರಿಗಳನ್ನು ತುಳಿಯದೆ ನಿಮ್ಮದೇ ಆದ ಮಾರ್ಗವನ್ನು ಅನ್ವೇಷಿಸುತ್ತಿದ್ದೀರಿ. ಅಭಿನಂದನೆಗಳು.
ಮನುಷ್ಯಸ್ಥಿತಿ, ಸಂಬಂಧಗಳು, ಸನ್ನಿವೇಶಗಳ ಹಿಂದಿನ ಸಾಮಾಜಿಕ-ರಾಜಕೀಯ- ಆರ್ಥಿಕ ಆಯಾಮಗಳ ಶೋಧಕ್ಕಿಂತ, ಅವುಗಳ ಹಿಂದಿನ ನಿಗೂಢತೆ, ರಹಸ್ಯಮಯತೆಗಳ ಬಗ್ಗೆ ಬೆರಗನ್ನು ಉಳಿಸಿಕೊಂಡಿದ್ದೀರಿ. ನಿಮ್ಮ ಬರಹಗಳು ನಿಮ್ಮ ಸಮಕಾಲೀನರ ಬರವಣಿಗೆಗಿಂತ ಕೊಂಚ ಭಿನ್ನವಾಗಿ ಕಾಣಲು ಇದೂ ಒಂದು ಕಾರಣ. ಸಾಹಿತ್ಯ ಪ್ರಕಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಸೃಜನಶೀಲ ಲಹರಿಗಳನ್ನು ಮುಕ್ತವಾಗಿ ಹರಿಯಲು ಬಿಟ್ಟಿರುವಿರಿ. ಬದುಕನ್ನು ಕಾಣುವ, ಬಗೆಯುವ ಹೊಸ ಸಾಧ್ಯತೆಗಳನ್ನು ಹೊಳೆಯಿಸಿರುವುದರಿಂದ ಓದುಗರಿಗೂ ಒಂದು ಸ್ಪೇಸ್ ಉಳಿಸಿರುವಿರಿ.
– ಟಿ ಪಿ ಅಶೋಕ

ಗಿರಿಧರ ಖಾಸನೀಸ್ ಅವರ ಬರಹಗಳು ತಮ್ಮದೇ ಆದ ಗುರುತನ್ನು ಉಳಿಸುತ್ತವೆ. ಅವರ ಪ್ರತಿಯೊಂದು ಬರಹವೂ ಅವರ ಪ್ರಯೋಗಶೀಲ ಮನಸ್ಸಿಗೆ ಹಿಡಿದ ಕನ್ನಡಿ. ನಾನಂತೂ ಅವರ ಕವಿತೆಗಳ ಹೊಸತನ, ಗದ್ಯ ಹಾಗೂ ಪದ್ಯದ ನಡುವೆ ಇರುವ ಗೆರೆಗಳನ್ನು ಅಳಿಸುತ್ತಾ ಹೋಗುವ ಅವರ ಪ್ರಯೋಗಕ್ಕೆ ಮಾರುಹೋಗಿದ್ದೇನೆ. ಕೆ ವಿ ತಿರುಮಲೇಶ್ ಅವರ ಪರಂಪರೆ ಹಾಗೂ ಪ್ರಯೋಗದ ಮುಂದುವರಿದ ಭಾಗದಂತೆ ಖಾಸನೀಸರು ನನಗೆ ಕಾಣಿಸುತ್ತಾರೆ.
-ಜಿ ಎನ್ ಮೋಹನ್
ಗಿರಿಧರ ಖಾಸನೀಸರ ಬರವಣಿಗೆ ವಿಶಿಷ್ಟವಾದದ್ದು. ಅವರ ಕಥೆ, ಅತಿ ಸಣ್ಣ ಕಥೆ, ಕವನ, ಅತಿ ಸಣ್ಣ ಕವನಗಳು ಮೇಲ್ನೋಟಕ್ಕೆ ಬಿಡಿ ಬಿಡಿಯಾಗಿ ಕಂಡರೂ, ಅವೆಲ್ಲ ಒಂದೇ ಸೃಜನಶೀಲ ಮನಸ್ಸಿನ ಅಖಂಡ ಬೆಳವಣಿಗೆಗಳಾಗಿವೆ. ಒಂದು ಅರ್ಥಪೂರ್ಣವಾದ ಸಾವಯವವಾದ ಬಂಧ ಅವುಗಳಲ್ಲಿದೆ. ಎಂತೆಲೆ ಅವರ ಬರವಣಿಗೆಯ ಓದು ಕೊಡುವ ಅನುಭವ ಹೊಚ್ಚ ಹೊಸದು.
-ಪ್ರೊ. ಪ್ರಮೋದ ಮುತಾಲಿಕ
0 ಪ್ರತಿಕ್ರಿಯೆಗಳು