ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೀತಿಯ ಜಿ ಕೆ ಆರ್ ಸಾರ್..

ಎದೆಯೊಳಗೆ ಉಳಿದ ಮಾತು

ಬಿದಲೋಟಿ ರಂಗನಾಥ್ 

ಪ್ರೀತಿಯ ಜಿ ಕೆ ಆರ್ ಸಾರ್
ನಿಮ್ಮ ಜೊತೆ ಮಾತಾಡಬೇಕೆಂದಿದ್ದೆ
ಬಯಲಾಗಬೇಕೆದ್ದ ಮಾತು
ಎದೆಯೊಳಗೆ ಉಳಿಯಿತು

ವಾಟ್ಸಪ್ನಲ್ಲಿ ನಾನು ಹಾಕಿದ ನಮಸ್ಕಾರಕ್ಕೆ
ಪ್ರತಿ ನಮಸ್ಕಾರ ಹಾಕಿ
ಸದ್ದಿಲ್ಲದೆ ಎದ್ದೊದಿರಿ
ಕಾವ್ಯ ಲೋಕದ ತಾರೆಯೊಂದು ಉದುರಿದ
ಮೋಡದಲಿ ಕತ್ತಲು ಕಡುಗತ್ತಲು..

ಕಾವ್ಯ ನಮಸ್ಕಾರದಲ್ಲಿನ
ನಿಮ್ಮ ಕವನ ಓದುತ ಇರುವಾಗಲೇ
ನಿಮ್ಮ ಸಾವಿನ ಸುದ್ದಿ ಬರಬೇಕೆ?
ಎಂತಹ ನಿಷ್ಕರುಣಿ ವಿಧಿ

ಮೆದುಳೊಳಗೆ ಮಗುವಾಗಿ
ಎದೆಯೊಳಗೆ ಬೆಳೆದು ಉಳಿದ ನಿಮ್ಮ ಕವಿತೆಗಳ ಸಾಲುಗಳು ನಿದ್ದೆಗೆಡಿಸಿವೆ
ಎಷ್ಟೊಂದು ಅರ್ಥವಿನಿಮಯ ನಿಮ್ಮ ಕವಿತೆಗಳಲ್ಲಿ
ನಿಟ್ಟುಸಿರ ಜಾಡಿನಲಿ ಹೆಜ್ಜೆಯೂರಿ
ಸೇರುವ ತಾವಿನ ಕಡೆ ಮುಖಮಾಡಿ
ಕನ್ನಡಿ ಬೇಕಿಲ್ಲದ ಶಶಿಕರನ ಎದೆಯ ಮೇಲಾಡುತ್ತಿವೆ


ಹೆಸರಿಲ್ಲದ ಊರು
ದಿಕ್ಕಿಲ್ಲದ ದಾರಿ
ಮನೆ ಮಡದಿ ಮಕ್ಕಳಿಲ್ಲದ
ಕಾವ್ಯದ ಕನಸಿಲ್ಲದ ಆ ನಿಶ್ಚಿಂತೆಯ ನಿದ್ದೆ
ನಿಜಕ್ಕೂ ಬೇಡವಾಗಿತ್ತು
ಆಗಂತ ನೀವೆ ಬಯಸಿದ ಚಿರನಿದ್ರೆಯೂ ಅಲ್ಲ

ಅಲ್ಲೇ
ಹಾಗೆ ಇದೆ
ನಿಮ್ಮ ಮುಖದ ಗೆರೆ ಜಾಡುಗಳಲ್ಲಿ
ಕಡು ಕಾವ್ಯ ಮೋಹಿಯ ಕಳೆ
ಆ ಶಾಂತ ನಿದ್ರೆಯಲ್ಲೂ !

ಮುರುಟಿ ಮಣ್ಣಲ್ಲಿ ಮಣ್ಣಾಗಿ ಹೋದವು
ಕೊನರಲು ಇಣುಕುತ್ತಿದ್ದ ಕೆಲವು
ಕಾವ್ಯದ ಸಾಲುಗಳು
ಜೀವಂತ ಉಳಿದು ಬೆಳಕು ಚಲ್ಲುತ್ತಿವೆ
ನೀವೆ ಬರೆದ ಕವನದ ಸಾಲುಗಳು

ಕಾವ್ಯದ ಸಾಲು ಸಾಲಿನ
ಖಾಲಿ ಜಾಗದಲಿ ನಿಮ್ಮ ಉಸಿರಿದೆ
ನೀವಿಲ್ಲ !
ನೀವೆ ಚಲಿಸಿದ ದಾರಿಯ ಮೇಲೆ
ಕರುಣೆ ಪ್ರೀತಿ ಮಮತೆ ಉಸಿರಾಡುತ್ತಿವೆ

ಏನೆ ಆದರೂ
ನಾನು ನಿಮ್ಮೊಂದಿಗೆ ಮಾತಾಡುವುದಿತ್ತು
ಎದೆಯೊಳಗೇ ಉಳಿದ ಮಾತಿಗೆ
ನಾನೇನು ಜವಾಬು ಕೊಡಲಿ.

‍ಲೇಖಕರು avadhi

10 October, 2019

2 Comments

  1. Guruprasad

    ನಮ್ಮ ಬಿದಲೋಟಿ ಕಾವ್ಯ ನದಿ

  2. Bidaloti Ranganath

    ಧನ್ಯವಾದಗಳು ಗುರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading