ಪ್ರಿಯದರ್ಶಿನಿ ಶೆಟ್ಟರ್ ಓದಿದ ‘ಬಗೆದಷ್ಟು ಜೀವ ಜಲ’

ಪ್ರಿಯದರ್ಶಿನಿ ಶೆಟ್ಟರ್

ಕನ್ನಡ ಸಾಹಿತ್ಯಲೋಕದಲ್ಲಿ ಲಲಿತಪ್ರಬಂಧ ಪ್ರಕಾರಕ್ಕೆ ವಿಶೇಷ ಸ್ಥಾನವಿದೆ. ಆರಂಭದಿಂದ ಇಲ್ಲಿಯವರೆಗೆ ಬಹಳಷ್ಟು ಪ್ರಬಂಧಕಾರರು ಸಾಹಿತ್ಯದ ಈ ಪ್ರಕಾರವನ್ನು ತಮ್ಮದೇ ಶೈಲಿಯಲ್ಲಿ ಶ್ರೀಮಂತಗೊಳಿಸಿದ್ದಾರೆ. ಇದಕ್ಕೆ ಇತ್ತೀಚಿನ ಮತ್ತೊಂದು ಸೇರ್ಪಡೆ –‘ಬಗೆದಷ್ಟು ಜೀವಜಲ’ ಎಂಬ ಕೃತಿ. ಖ್ಯಾತ ಸಾಹಿತಿ ಮಾಲತಿ ಪಟ್ಟಣಶೆಟ್ಟಿಯವರ ಇಪ್ಪತ್ತಾರು ಲಲಿತಪ್ರಬಂಧಗಳನ್ನೊಳಗೊಂಡ ಪುಸ್ತಕವಿದು. ಶುರುವಾತಿನಲ್ಲಿ ೨೦ನೇ ಶತಮಾನದಲ್ಲಿ ಕನ್ನಡ ಸಾಹಿತ್ಯವನ್ನು ಪ್ರಬಂಧ ಪ್ರಕಾರವು ಪ್ರವೇಶಿಸಿದ್ದರ ಹಿನ್ನೆಲೆ, ಅದರ ಪ್ರಾಮುಖ್ಯತೆ, ಪ್ರಸ್ತುತತೆಯನ್ನು ವಿವರಿಸಿದ್ದಾರೆ. ಜೊತೆಗೆ ಅನೇಕ ಪ್ರಬಂಧಕಾರರನ್ನು ನೆನೆದಿದ್ದಾರೆ.

ಓದುಗರು ಈ ಕೃತಿಯನ್ನು ಕೈಗೆತ್ತಿಕೊಂಡರೆ ಸಾಕು, ಮುಂದೆ ತಾನಾಗಿಯೇ ಓದಿಸಿಕೊಂಡು ಹೋಗುವ ಶಕ್ತಿ ಪ್ರಸ್ತುತ ಸಂಕಲನಕ್ಕಿದೆ. ಮೊದಲನೆಯ ಪ್ರಬಂಧ ಹಾಗೂ ‘ನೆನಪು ಗಂಧರ್ವರು’ ಪ್ರಬಂಧಗಳಲ್ಲಿ ಲೇಖಕರು ತಮ್ಮ ಬಾಲ್ಯ, ಶಾಲಾದಿನಗಳು, ಶಿಕ್ಷಕರು, ಆಟಪಾಠಗಳಲ್ಲಿನ ಆಸಕ್ತಿ, ಅವರ ಗುರುಗಳು ಅವರನ್ನು ಪ್ರಭಾವಿಸಿದ ರೀತಿ, ಇಂಗ್ಲಿಷ್ ಅಧ್ಯಾಪಕಿಯಾಗಲು ಅವರಿಗೆ ದೊರೆತ ಪ್ರೇರಣೆ – ಹೀಗೆ ಅನೇಕ ವಿಷಯಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲಲ್ಲಿ ಅವರ ಕಾವ್ಯಾತ್ಮಕ ಶೈಲಿ ಮನಸ್ಸಿಗೆ ಮುದ ನೀಡುತ್ತದೆ. ‘ಹದಿನಾರರ ಜೀವನ ದರ್ಶನ’ ಹಾಗೂ ‘ಬಂಗಾರದ ಕಾಡುಜಿಂಕೆ – ಹಿಮಾದಾಸ್’ ಇವೆರಡೂ ವ್ಯಕ್ತಿಚಿತ್ರಣಗಳಾಗಿದ್ದು ಸಂಕಲನದಲ್ಲಿ ‘ಗುಂಪಿಗೆ ಸೇರದ ಬರಹ’ಗಳಂತೆ ಭಾಸವಾಗುವುದು.

ಉಪ್ಪಿನಕಾಯಿಯ ಕುರಿತ ಎರಡು ಪ್ರಬಂಧಗಳು ಇಲ್ಲಿವೆ. ಒಂದರಲ್ಲಿ ಲೇಖಕಿ ತಮ್ಮ ಅಜ್ಜಿ ನಿಂಬೆ ಉಪ್ಪಿನಕಾಯಿ ಹಾಕುವಾಗಿನ ಸಂಭ್ರಮ, ಸಂಪ್ರದಾಯಗಳ ಬಗ್ಗೆ ಬರೆಯುತ್ತಾ ಆಗಿನ ಹಿರಿಯರು ಎಷ್ಟು ಭಯಭಕ್ತಿಯಿಂದ ಇಂತಹ ರೂಢಿಗಳನ್ನು ಪಾಲಿಸುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ಅವರ ಉತ್ತರ ಕರ್ನಾಟಕದ ಆಡುಮಾತಿನ ರೂಪದ ಭಾಷಾಪ್ರಯೋಗ ಆಪ್ತವೆನಿಸುತ್ತದೆ.

ಮಾವಿನ ಹಣ್ಣಿನ ಸೀಜನ್ ಬಗ್ಗೆ ಬರೆಯುತ್ತಾ ಮತ್ತೊಮ್ಮೆ ಉಪ್ಪಿನಕಾಯಿಯ ಪ್ರಸ್ತಾಪ ಮಾಡುತ್ತಾರೆ. ಮಾವಿನಹಣ್ಣಿನ ಸೀಕರಣೆ, ಗುಳುಂಬ, ಜ್ಯೂಸ್ – ಇವೆಲ್ಲ ಓದುಗರ ಬಾಯಲ್ಲಿ ನೀರೂರಿಸುತ್ತವೆ! ‘ಅಮೇರಿಕೆಯ ಕೃಷಿ ಮಾರ್ಕೆಟ್ಟುಗಳು’ ಪ್ರಬಂಧದಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್‌ಹೋಜೆಯಲ್ಲಿನ ಮಾರುಕಟ್ಟೆಗಳ ಕುರಿತಾದ ವಿವರಣೆ, ರಾಸಾಯನಿಕರಹಿತ ಕೃಷಿ ಉತ್ಪನ್ನಗಳ ಮಾರಾಟ, ಅಲ್ಲಿನ ರೈತ ಸಂಘಟನೆಗಳು, ಇತ್ಯಾದಿಗಳ ಮಾಹಿತಿಪೂರ್ಣ ಬರಹ ಒಂದು ಇಲ್ಲಿದೆ.

ಪ್ರಸ್ತುತ ಕೃತಿಯಲ್ಲಿನ ಪ್ರವಾಸ ಸಾಹಿತ್ಯ ಹಾಗೂ ಜೀವನಗಾಥೆಗಳು ಲಲಿತಪ್ರಬಂಧದ ಚೌಕಟ್ಟಿನಿಂದ ಹೊರಗಿದ್ದರೂ, ತಮ್ಮದೇ ಆದ ಆಕಾರ ಪಡೆದಿವೆ. ಇನ್ನೊಂದು ಪ್ರವಾಸ ಕಥನದಲ್ಲಿ ಕಾರ್ಮೆಲ್ ಪಟ್ಟಣದಲ್ಲಿನ ಕಲಾರಾಧನೆ, ಅಪರೂಪದ ಕಲೆಯ ಹಾಗೂ ಅಂತಹ ಕಲಾವಿದರ ಬೀಡಾದ ಕಾರ್ಮೆಲ್‌ನ ಸ್ಥಾಪನೆ ಮತ್ತು ಅಲ್ಲಿನ ಸಂಸ್ಕೃತಿಯ ಮೇಲೆ ಲೇಖಕರು ಬೆಳಕು ಚೆಲ್ಲಿದ್ದಾರೆ. ಜೊತೆಗೆ ನಮ್ಮ ಭಾರತೀಯ ಕಲೆಗಳ ಪೋಷಣೆ, ಪ್ರೋತ್ಸಾಹಗಳ ಅಗತ್ಯತೆಯ ಕುರಿತು ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ.

ಕಾಡಿನ ಸೌಂದರ್ಯ, ನಿಗೂಢತೆ, ಅನನ್ಯತೆಗಳನ್ನೇ ಕೇಂದ್ರವಾಗಿರಿಸಿಕೊಂಡು ಬರೆದ ಎರಡು ಪ್ರಬಂಧಗಳಲ್ಲಿ ಒಂದು ಕ್ಯಾಲಿಫೋರ್ನಿಯಾದ ಕಾಡುಗಳ ಬಗೆಗೆ ಹಾಗೂ ಇನ್ನೊಂದು ‘ಆರ್ಮಸ್ಟ್ರಾಂಗ್-ರೆಡ್‌ವುಡ್’ ಎಂಬ ಅರಣ್ಯದ ಕುರಿತಾಗಿದೆ. ಲೇಖಕಿಯು ಕಾಡುಗಳ ಸಂರಕ್ಷಣೆಯ ತುರ್ತು, ಜೀವವೈವಿಧ್ಯತೆಯನ್ನು ರಕ್ಷಿಸಬೇಕಾದ ಅನಿವಾರ್ಯತೆ, ಅಲ್ಲಿಯ ಕಾಡುಗಳಲ್ಲಿನ ವ್ಯವಸ್ಥೆಗಳ ವರ್ಣನೆ, ತರಬೇತಿ ಕೇಂದ್ರಗಳ ಮಾಹಿತಿ – ಹೀಗೆ ತಮ್ಮ ನೆನಪುಗಳ ಸುರುಳಿಯಿಂದ ನುಸುಳಿ ಬಂದ ಸಾಕಷ್ಟು ವಿಷಯಗಳನ್ನು ಓದುಗರ ಮುಂದಿಟ್ಟಿದ್ದಾರೆ.

‘ಸಂದರ್ಶಕರ ಸಂದರ್ಶನ’ ವಿಶಿಷ್ಟವಾದ ಪ್ರಬಂಧ. ಲೇಖಕಿಯನ್ನು ಸಂದರ್ಶನ ಮಾಡಲು ಬಂದ ನಾಲ್ವರು ಕಾಲೇಜು ವಿದ್ಯಾರ್ಥಿನಿಯರನ್ನು ಲೇಖಕಿಯವರೇ ಸಂದರ್ಶನ ಮಾಡಿದ್ದು ಅವರ ವ್ಯಕ್ತಿತ್ವದಲ್ಲಿನ ವೈಶಿಷ್ಟ್ಯತೆಗೆ ನಿದರ್ಶನವಾಗಿದೆ. ಅವರನ್ನು ಸಂದರ್ಶನ ಮಾಡುವ ಮೂಲಕ ಈಗಿನ ಯುವಪೀಳಿಗೆಯ ಮನೋಧೋರಣೆಯನ್ನು, ಅವರ ಜೀವನದ ಗುರಿ, ಹವ್ಯಾಸ, ಆಸಕ್ತಿಗಳನ್ನರಿಯಲು ಲೇಖಕಿ ಮಾಲತಿ ಅಮ್ಮನವರು ಕುತೂಹಲಿಯಾದುದನ್ನು ನೋಡಿದರೆ ಆಶ್ಚರ್ಯವೆನಿಸದೇ ಇರದು.

ಆ ಯುವತಿಯರಿಗೆ ಅವರು ಹತ್ತು ಪ್ರಶ್ನೆಗಳನ್ನು ಕೊಟ್ಟು ಉತ್ತರಿಸಲು ಹೇಳಿದಾಗ ಅವರಿಂದ ಬಂದ ಪ್ರತಿಕ್ರಿಯೆಗಳು ಲೇಖಕಿಗೆ ಅಸಮಾಧಾನ ತರುವಂತಹವೇ ಆಗಿರುತ್ತವೆ. ಅಂದಹಾಗೆ ನನಗೆನಿಸುವುದೇನೆಂದರೆ ಈ ಪ್ರಶ್ನೆಗಳು ಕೇವಲ ಅವರಿಗೆ ಮಾತ್ರ ಕೊಟ್ಟ ಪ್ರಶ್ನೆಗಳಲ್ಲ, ಬದಲಾಗಿ ಈಗಿನ ಪೀಳಿಗೆಯವರೆಲ್ಲರೂ ಉತ್ತರಿಸಬೇಕಾದಂಥವು. ಓದುಗರು ತಮ್ಮಷ್ಟಕ್ಕ ತಾವೇ ಉತ್ತರಿಸಿ ತಮ್ಮ ವ್ಯಕ್ತಿತ್ವದ ಮೌಲ್ಯಮಾಪನ ಮಾಡಿಕೊಳ್ಳಬಹುದು. ಆ ಯುವತಿಯರ ಮಹತ್ವಾಕಾಂಕ್ಷೆ ರಹಿತ, ಸ್ವಂತಿಕೆ ಇರದ ಉತ್ತರಗಳು ಓದುಗರಿಗೂ ಬೇಸರ ತರಿಸುವವು. ಕಾರಣವಿಷ್ಟೇ: ‘ಎಲ್ಲರೂ ಕಲಿಯುತ್ತಿದ್ದಾರೆ ನಾನೂ ಕಲಿಯಬೇಕು’, ‘ಎಲ್ಲರೂ ಉದ್ಯೋಗ ಮಾಡಿ ಸಂಪಾದಿಸುತ್ತಿದ್ದಾರೆ, ನಾನೂ ಸಂಪಾದಿಸಬೇಕು’, ‘ಇತರರು ಮದುವೆಯಾಗುತ್ತಿದ್ದಾರೆ, ತಾನೂ ಆಗಬೇಕು!’ – ಎಂಬ ಸರ್ವೇಸಾಮಾನ್ಯ ಮನಸ್ಥಿತಿ ನಮ್ಮ ಪೀಳಿಗೆಯವರಲ್ಲಿ ಹಾಸುಹೊಕ್ಕಾಗಿದೆ.

‘ಎಲ್ಲ ಮಿತಿಗಳನ್ನು ಮೀರಿ ನಿಲ್ಲಬೇಕು, ‘ಹತ್ತರಲ್ಲಿ ಹನ್ನೊಂದು’ ಎಂದಾಗದೇ, ನಾವು ಬಯಸಿದ ಹಾದಿ ನಮ್ಮದಾಗಬೇಕು, ಸಮಾಜಕ್ಕೊಂದಿಷ್ಟು ಒಳಿತು ಮಾಡಬೇಕು…’ – ಎಂಬಿತ್ಯಾದಿ ವಿಚಾರಗಳು ನಮ್ಮನ್ನು ತಟ್ಟುವುದು ನಾವು ನಮ್ಮ ‘ಕಂಫರ್ಟ್ ಝೋನ್’ನಿಂದ ಹೊರಬಂದಾಗ ಮಾತ್ರ! ಪ್ರಬಂಧದ ಕೊನೆಯಲ್ಲಿ ಇಂದಿನ ಆಧುನಿಕ ಜಗತ್ತಿಗೆ ಎಂತಹ ತರುಣ-ತರುಣಿಯರು ಬೇಕಾಗಿದ್ದಾರೆ ಎಂಬ ಒಂದು ಮಾರ್ಗದರ್ಶಿ ಸೂತ್ರವನ್ನೇ ಕೊಟ್ಟಿದ್ದಾರೆ. ಇಂದಿನ ಯುವಕ-ಯುವತಿಯರು ಅನೇಕ ಬಗೆಯ ಆಕರ್ಷಣೆಗಳಿಗೆ ಒಳಗಾಗಿ ಹೇಗೆ ಗೊತ್ತುಗುರಿಯಿಲ್ಲದ ಜೀವನ ನಡೆಸುತ್ತಿದ್ದಾರೆ ಎಂಬುದರ ಕುರಿತು ಲೇಖಕಿ ತೀವ್ರ ಚಿಂತಿತರಾಗಿದ್ದಾರೆ.

ನಮ್ಮೂರು ಧಾರವಾಡದ ಕುರಿತು ಮೂರು ಬರಹಗಳು ಇಲ್ಲಿವೆ. ಇಲ್ಲಿನ ಸುಂದರ ಪರಿಸರ, ಈ ಊರಿನ ಸಾಧಕರು, ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳು, ನಿಧಾನಗತಿಯ ಜೀವನಶೈಲಿ, ಇಲ್ಲಿನ ಸಾಹಿತ್ಯ- ಸಂಗೀತದ ಇಂಪು, ಪೇಡಾ, ಪೇರಲ, ಮಾವಿನಹಣ್ಣಿನ ಕಂಪು, ‘ಧಾರವಾಡದ ಮಳೆ’, ಆಮೆಗತಿಯ ಪ್ರಗತಿ – ಇಂತಹ ಹತ್ತು ಹಲವು ಸ್ವಾರಸ್ಯಕರ ಸಂಗತಿಗಳ ವಿವರಣೆಗಳಿವೆ. ೧೨ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಸೋಮೇಶ್ವರ ಕ್ಷೇತ್ರದಲ್ಲಿನ ಶಿವಮಂದಿರದ ಕಥೆ ಹಾಗೂ ‘ಗುಪ್ತಗಾಮಿನಿ’ ಶಾಲ್ಮಲೆಯ ಕುರಿತ ಪ್ರಬಂಧ ಸುಂದರವಾಗಿ ಮೂಡಿಬಂದಿದೆ. ಇನ್ನೊಂದು ಪ್ರಬಂಧದಲ್ಲಿ ಧಾರವಾಡದ ತತ್ವಾನ್ವೇಷಣ ಮಂದಿರದ ಸಂಪೂರ್ಣ ಮಾಹಿತಿ ಇದೆ. ಶತಮಾನ ಪೂರೈಸಿದ ಈ ಸಂಸ್ಥೆಯ ಇಂದಿನ ದುಃಸ್ಥಿತಿ, ಅದರ ಸುಧಾರಣೆಗೆ ಅಗತ್ಯವಿರುವ ಸಲಹೆಗಳನ್ನು ಲೇಖಕಿಯು ಇಲ್ಲಿ ಕಾಳಜಿಪೂರ್ವಕವಾಗಿ ನೀಡಿದ್ದಾರೆ.

ಟೊಮೆಟೊ ಬಗೆಗಿನ ‘ಮುಗಿಯದ ಟೊಮೆಟೋ ರಾಮಾಯಣ’ ಲಲಿತಪ್ರಬಂಧದಲ್ಲಿ ಲೇಖಕಿಗೆ ಪೇಟೆಯಲ್ಲೊಬ್ಬ ವ್ಯಾಪಾರಿ ಕೆ.ಜಿ.ಗಟ್ಟಲೇ ಟೊಮೆಟೊಗಳನ್ನು ಪುಕ್ಕಟೆಯಾಗಿ ಕೊಟ್ಟ ಸಂದರ್ಭ, ಅವನ ದಯನೀಯ ಸ್ಥಿತಿ ಕಂಡು ಮರುಕವುಂಟಾದ ಸನ್ನಿವೇಶ, ಅಷ್ಟೊಂದು ಟೊಮೆಟೊಗಳನ್ನು ಬಳಸಬೇಕಾದಾಗ ಎದುರಾದ ಫಜೀತಿ- ಇವೆಲ್ಲ ಚೆನ್ನಾಗಿ ಮೂಡಿಬಂದಿವೆ. ಮೊದಮೊದಲು ಧಾರವಾಡದ ಆಡುಮಾತಿನ ಶೈಲಿಯಲ್ಲಿ ಶುರುವಾದ ಬರವಣಿಗೆ ಕೊನೆಕೊನೆಗೆ ಗ್ರಾಂಥಿಕರೂಪ ಪಡೆಯುತ್ತದೆ.

ಮುಂದಿನ ಲಲಿತಪ್ರಬಂಧ ‘ಹೌದು ಕಾಲ ಬದಲಾಯ್ತು’ ಪ್ರಬಂಧ ಬಹಳ ಖುಷಿ ನೀಡುವಂಥಹದ್ದು. ನಮ್ಮನ್ನು ಚಿಂತನೆಯ ಒರೆಗೆ ಹಚ್ಚುವ ಶಕ್ತಿ ಈ ಪ್ರಬಂಧಕ್ಕಿದೆ. ನಾವು ಬದಲಾಗದ ಹೊರತು ಕಾಲ ಹೇಗೆ ಬದಲಾದೀತು? ಅದೂ ನಾವು ಕಾಲದ ಒಂದು ಅವಿಭಾಜ್ಯ ಅಂಗವೇ ಆಗಿರುವಾಗ? ಎಲ್ಲ ಕಡೆ ಒಂದೇ ತರಹದ, ಒಂದೇ ವೇಗದ ಬದಲಾವಣೆ ಆಗಿಲ್ಲ ಎಂದಾದರೆ, ಅದಕ್ಕೆ ಮಾನವನ ಸ್ವಭಾವದಲ್ಲಿ ಆಗಿರಬಹುದಾದ ಬದಲಾವಣೆ ಎಷ್ಟರ ಮಟ್ಟಿಗೆ ಕಾರಣ? ಇತ್ಯಾದಿ ಪ್ರಶ್ನೆಗಳನ್ನು ಇಲ್ಲಿನ ಚಿಂತನೆಗಳು ಹುಟ್ಟುಹಾಕುತ್ತವೆ.

ಹಲವು ಸಾಂಪ್ರದಾಯಿಕ ರೂಢಿಗಳು ಆಧುನಿಕತೆಯ ಹೊಡೆತಕ್ಕೆ ಸಿಕ್ಕ ವಿಷಯವನ್ನೊಳಗೊಂಡ ಬರಹಗಳು ಈಗಾಗಲೇ ಸಾಕಷ್ಟು ಬಂದಿವೆ. ಆದರೆ, ಪ್ರಬಂಧಕಾರರು ಇಲ್ಲಿ ಅದನ್ನು ಹೇಳುವ ಶೈಲಿ ಭಿನ್ನವಾಗಿದೆ. ಆಧುನಿಕ ಕಾಲದವರ ಉಡುಗೆ-ತೊಡುಗೆ, ಊಟೋಪಚಾರ, ಕೇಶವಿನ್ಯಾಸ – ಅದರಲ್ಲೂ ಈಗಿನ ಮಹಿಳೆಯರ ಕೂದಲು ಬಿಡುವ ಅಭ್ಯಾಸ, ಮನೆತುಂಬ, ಅಡುಗೆಮನೆಯಲ್ಲಿ ಮತ್ತು ಊಟದಲ್ಲಿ ಆವಾಗೀವಾಗ ಸಿಗುವ ಕೂದಲೆಳೆಗಳು, ಅದರಿಂದುಟಾಗುವ ಕಿರಿಕಿರಿ, ಇತ್ಯಾದಿಗಳೆಲ್ಲ ಸೇರಿ ಈ ಪ್ರಬಂಧವು ಹಾಸ್ಯಮಯ ಹಾಗೂ ಲಾಲಿತ್ಯಪೂರ್ಣವಾಗಿ ಮೂಡಿಬಂದಿದೆ.

ಮಲೇಷ್ಯಾದ ತಾಳೆ ಎಣ್ಣೆಯ ಉದ್ಯಮ ನಡೆದುಬಂದ ಹಾದಿ ಹಾಗೂ ಅದರ ಶತಮಾನೋತ್ಸವದ ಯಶೋಗಾಥೆ, ತಾಳೆಮರಗಳ ಕೃಷಿಯಿಂದ ಉಂಟಾದ ಅರಣ್ಯನಾಶ – ಇವೆಲ್ಲ ವಿವರಗಳು ಕುತೂಹಲಕರವಾಗಿವೆ. ಈ ಕೃತಿಯಲ್ಲಿ ಓದುಗರು ಗಮನಿಸಬೇಕಾದ ಮೊದಲನೆಯ ಸಂಗತಿಯೆಂದರೆ ಹೊಸಶಬ್ಧಗಳ ಸೃಷ್ಟಿ ಹಾಗೂ ಉಪಯೋಗ. ಎರಡನೆಯದು ಲೇಖಕಿಯ ವೈಜ್ಞಾನಿಕ ದೃಷ್ಟಿಕೋನ ಹಾಗೂ ಮೂರನೆಯದು ಅವರ ಪರಿಸರದೆಡೆಗಿನ ಕಾಳಜಿ. ಇವೆಲ್ಲ ಓದುಗರನ್ನು ಪ್ರಭಾವಿಸುವ ಬಹುಮುಖ್ಯವಾದ ಅಂಶಗಳು.

ಮತ್ತೊಂದು ಪ್ರಬಂಧದಲ್ಲಿ ಲೇಖಕರು ತಾವು ಅತಿಥಿಯಾಗಿ ಹೋದ ಅಧ್ವಾನ, ವಿರೋಧಾಭಾಸಗಳಿಂದಲೇ ತುಂಬಿದ ಕಾರ್ಯಕ್ರಮದ ಬಗ್ಗೆ ಬರೆಯುತ್ತಾರೆ. ಸಾಹಿತ್ಯದ ಗಂಧ-ಗಾಳಿಯೇ ಇರದ ಆಯೋಜಕರು, ಅಲ್ಲಿಗೆ ಆಗಮಿಸಿದ ಇನ್ನಿತರ ಅತಿಥಿಗಳ ಬಗ್ಗೆ ತಮ್ಮ ಅನುಭವವನ್ನು ಹಾಸ್ಯಮಿಶ್ರಿತವಾಗಿ ಮತ್ತು ವಿಡಂಬನಾತ್ಮಕವಾಗಿ ಹಂಚಿಕೊಂಡಿದ್ದಾರೆ. ಈ ಕೃತಿಯಲ್ಲಿ ಕಾಗುಣಿತ ದೋಷಗಳು ಅಲ್ಲಲ್ಲಿ ಕಾಣಸಿಗುತ್ತವೆ. ಮುಂದಿನ ಮುದ್ರಣಗಳಲ್ಲಿ ಅವುಗಳನ್ನು ಸರಿಪಡಿಸಬಹುದಾಗಿದೆ.

‘ಜೋನ್ ಆಫ್ ಆರ್ಕ್’ ಒಂದು ಸುದೀರ್ಘ ಸಾಹಸಗಾಥೆ. ಫ್ರಾನ್ಸಿನ ಇತಿಹಾಸದಲ್ಲಿ ಮಿಂಚಿ ಮರೆಯಾದ ಜೋನ್‌ಳ ಸಾಹಸ, ಅವಳ ಹತ್ಯೆಯ ಹಿಂದಿನ ಸಂಚು, ಇವೆಲ್ಲ ವಿಷಯಗಳ ಬಗ್ಗೆ ರಚನೆಯಾದ ಸಾಹಿತ್ಯದ ಕುರಿತಾದ ಪರಿಚಯಾತ್ಮಕ ಲೇಖನವೊಂದಿಲ್ಲಿದೆ. ಮಣ್ಣೆತ್ತಿನ ಅಮವಾಸ್ಯೆಯ ಬಗೆಗೆ ಬರೆಯಲಾರಂಭಿಸಿದ ಪ್ರಬಂಧವು ಕ್ರಮೇಣ ನಮ್ಮ ಹಬ್ಬ-ಹುಣ್ಣಿಮೆಗಳ ಕುರಿತು ಸಾಕಷ್ಟು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.

ನಾಗರಪಂಚಮಿ, ಚವತಿಯ ಗಣಪ, ಮಣ್ಣೆತ್ತುಗಳು, ಅಷ್ಟಮಿಕೊಡ, ಮಣ್ಣಿನ ಗಡಿಗೆ, ಗುಳ್ಳವ್ವ, ಹಣತೆಗಳು – ಹೀಗೆ ಹಬ್ಬಗಳಲ್ಲಿ ಮಣ್ಣಿನ ಉಪಯೋಗದ ಮೂಲಕ ನಮ್ಮ ಕೃಷಿಕರು, ಜನಪದರು ಭೂದೇವಿಯನ್ನು ನೆನೆಯುತ್ತಾರೆ. ಇಂತಹ ಆಚರಣೆಗಳಲ್ಲಿ ಹಾಡಲಾಗುವ ಪದಗಳು, ಆಚರಿಸಲಾಗುವ ಪದ್ಧತಿಗಳು ದಿನ ಕಳೆದಂತೆ ಸರಳೀಕರಣಗೊಂಡು ಇನ್ನೇನು ನಮ್ಮ ಸಾಂಪ್ರದಾಯಿಕ ಹಬ್ಬಗಳು ಮರೆವಿನ ತೆರೆಗೆ ಸರಿದುಹೋಗುವ ಸ್ಥಿತಿಯಲ್ಲಿವೆ. ಇಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ಮುಂದಿನ ಪೀಳಿಗೆಯವರ ಮೇಲಿದೆ ಎಂಬ ಮಾತು
ಸಂದರ್ಭಕ್ಕನುಸಾರವಾಗಿದೆ.

ಅಮೇರಿಕದ ಬೃಹದಾಕಾರದ, ಸುಂದರ ಸ್ವಾತಂತ್ರ್ಯ ದೇವಿಯ ಮೂರ್ತಿಯ ಸ್ಥಾಪನೆ, ಅದರ ಇತಿಹಾಸ, ಅದನ್ನು ತಯಾರಿಸಿದ ಶಿಲ್ಪಿ, ಅದರ ನಿರ್ಮಾಣಕಾರ್ಯ – ಇವೆಲ್ಲ ವಿವರವಾಗಿ ಮೂಡಿಬಂದಿವೆ. ಸಾಹಿತ್ಯ ಹಾಗೂ ಸಂಶೋಧನೆಗಳ ಸಂಗಮವಾದ ಲೇಖಕಿಯ ಬರಹದ ಶೈಲಿ ಓದುಗರನ್ನು ಹಿಡಿದಿಡುತ್ತದೆ.

ಇದಕ್ಕೆ ಉದಾಹರಣೆಯೆಂದರೆ: ‘ನುಶು – ಚೀನಿ ಸ್ತ್ರೀಯರ ರಹಸ್ಯ ಭಾಷೆ’ ಪ್ರಬಂಧ. ಪುರುಷಪ್ರಧಾನ ಸಮಾಜದ ಬಿಗಿಹಿಡಿತದಲ್ಲಿ ಉಸಿರುಗಟ್ಟಿದಂತಾದ ಅಲ್ಲಿನ ಸ್ತ್ರೀಯರು ಶಾಲೆಗಳಿಲ್ಲದೆ, ಕಲಿಸುವವರಿಲ್ಲದೆ ತಮಗೆ ತಾವೇ ರೂಪಿಸಿಕೊಂಡ ಭಾಷೆ – ನುಶು. ಇಲ್ಲಿ ದಾಖಲಾದ ಸಾಹಿತ್ಯ, ಮಹಿಳೆಯರ ಸಂಕಟಗಳು, ಸ್ತ್ರೀ ಸಂವೇದನೆಗೆ ಧ್ವನಿಯಾದ ನುಶು ಭಾಷೆ ಧ್ವಂಸವಾದ ರೀತಿ, ಈ ಪರಂಪರೆಯ ಅವಸಾನ, ಅದರ ಕುರಿತು ನಡೆಯಬೇಕಾದ ಸಂಶೋಧನೆಯಂತಹ ಎಲ್ಲ ವಿಚಾರಗಳು ಇಲ್ಲಿ ಮೂಡಿಬಂದಿವೆ. ಲೇಖಕರ ವಿಸ್ತೃತ ಓದು ಹಾಗೂ ವೈವಿಧ್ಯಮಯ ಆಸಕ್ತಿಗಳನ್ನು ಓದುಗರು ಗುರುತಿಸಬಹುದಾಗಿದೆ. ಕುತೂಹಲಕ್ಕಾಗಿ ಲೇಖಕರ ಸಂಕ್ಷಿಪ್ತ ಪರಿಚಯ ಸಿಗಬಹುದೇ ಎಂದು ಕೊನೆಯ ಪುಟ ನೋಡಿದಾಗ ನಿರಾಶೆಯಾಯಿತು. ಎಲ್ಲಿಯಾದರೂ ಅವರ ಸಾಧನೆ, ಸಾಹಿತ್ಯ ಕೃಷಿಯ ಬಗೆಗೆ ಕೆಲ ಸಾಲುಗಳನ್ನು ಸೇರಿಸಬಹುದಿತ್ತು.

ಬೆಳದಿಂಗಳು, ಸೂರ್ಯಾಸ್ತದ ಬಣ್ಣನೆ, ಪ್ರವಾಸದ ಮಹತ್ವ, ವಿವಿಧ ಗೋಪುರಗಳ ವರ್ಣನೆ, ಸಾಂಪ್ರದಾಯಿಕ ಹಬ್ಬಗಳ ಆಚರಣೆ, ಪರಿಸರದ ಬಗೆಗಿನ ಕಾಳಜಿ, ಉತ್ತರ ಕರ್ನಾಟಕದ ಭಾಷೆಯ ಸೊಗಡು, ಇಲ್ಲಿನ ಹೊಸ ಶಬ್ಧಗಳು – ಇವೆಲ್ಲ ಗುಣಾತ್ಮಕ ಅಂಶಗಳನ್ನೊಳಗೊಂಡ ಈ ಪುಸ್ತಕವು ಸಪ್ನ ಬುಕ್‌ಹೌಸ್‌ನಿಂದ ಪ್ರಕಟಗೊಂಡು ಓದುಗರ ಮುಂದಿದೆ. ಈಗ ಓದುವ ಹಾಗೂ ಓದಿನ ಅನುಭವಗಳನ್ನು ಹಂಚಿಕೊಳ್ಳುವ ಸರದಿ ನಮ್ಮದು !!

‍ಲೇಖಕರು Admin

August 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: