ಹೊರುವ ಮಂದಿಯ ಹೆಗಲ ಕಥೆ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ವರ್ಷದ ಹಿಂದೆ ವಿಡಿಯೋ ಒಂದು ವೈರಲ್‌ ಆಗಿತ್ತು. ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರು ಶಬರಿಮಲೆ ಯಾತ್ರೆಗೆ ಪರ್ವತವೇರಲು, ಕಾಲ್ನಡಿಗೆಯ ಬದಲು ಡೋಲಿಯನ್ನು ಆಯ್ಕೆ ಮಾಡಿದಾಗ, ಡೋಲಿ ಹೊರುವ ಮಂದಿಗೆ ನಮಸ್ಕಾರ ಮಾಡಿ ಗೌರವಪೂರ್ವಕವಾಗಿ ಅದನ್ನೇರಿದರು. ಎಸ್‌ಪಿಬಿ ಎಂಬ ದೊಡ್ಡ ವ್ಯಕ್ತಿತ್ವ ಇನ್ನೂ ಎತ್ತರದಲ್ಲಿ ನಮಗೆ ಕಾಣಲು ಕಾರಣ ಇದೊಂದು ಸಣ್ಣ ಉದಾಹರಣೆ ಸಾಕು.

ಈ ವಿಡಿಯೋ ತುಣುಕು ಮಾತ್ರ ನನಗೆ ಪದೇ ಪದೇ ನೆನಪಾಗುತ್ತದೆ. ಇದರ ಜೊತೆಗೆ, ಹೂಕಣಿವೆಯ ಚಾರಣದಲ್ಲಿ ಗಡದ್ದಾಗಿ ಪೋರ್ಟರ್‌ ಹೆಗಲಿನ ಬುಟ್ಟಿಯಲ್ಲಿ, ʻತನ್ನ ಹೊರುವವನ ಕಷ್ಟ ಕಟ್ಟಿಕೊಂಡು ನನಗೇನಾಗಬೇಕು? ನಾನಂತೂ ಆತ ಕೇಳಿದ ಹಣವನ್ನೂ ಚೌಕಾಸಿ ಮಾಡಿದರೂ ಕೊಟ್ಟು ಬಿಡುತ್ತೇನಲ್ಲʼ ಎಂಬಂತೆ ಕೂತಿದ್ದ ಆತನ ಮುಖಭಾವವೂ ಆಗಾಗ ಕಣ್ಣ ಮುಂದೆ ಬಂದು ಹೋಗುತ್ತದೆ!

ಅದು ಉತ್ತರಾಖಂಡದ ಹೂಕಣಿವೆಯ ಚಾರಣ. ಇದು ಬಹುತೇಕ ಚಾರಣಪ್ರಿಯರ ಕನಸು. ಆದರೆ, ಈ ಚಾರಣದ ವಿಶೇಷವೆಂದರೆ, ಇಲ್ಲಿ ನಡೆದು ಮೇಲೇರಿ ಚಾರಣ ಮಾಡಲು ಬರುವ ವರ್ಗ ಇರುವಂತೆ, ಒಂದು ಹಂತದವರೆಗೆ ಹೆಲಿಕಾಪ್ಟರ್‌ ಏರಿ, ನಂತರ ಪೋರ್ಟರುಗಳ ಬೆನ್ನ ಮೇಲೆ ನೇತಾಡುವ ಬ್ಯಾಗಿನಲ್ಲಿ ಕೂತುಕೊಂಡು ಅಥವಾ ಕುದುರೆ ಮೇಲೇರಿ ಆರಾಮವಾಗಿ ಪರ್ವತ ನೋಡುವ ಇನ್ನೊಂದು ವರ್ಗವೂ ದೊಡ್ಡದಿದೆ. ಬಂದಿದ್ದನ್ನು ಬಂದಂತೆ ಸ್ವೀಕರಿಸುವ ಬಜೆಟ್‌/ಸೋಲೋ ಚಾರಣಿಗರು ಒಂದೆಡೆಯಾದರೆ, ಐಷಾರಾಮಿ ವ್ಯವಸ್ಥೆಗಳನ್ನು ಅನುಭವಿಸಿಕೊಂಡು ದುಡ್ಡಿನ ಹೊಳೆ ಸುರಿದು ಬರುವವರು ಇನ್ನೊಂದೆಡೆ. ಇದೂ ಅಲ್ಲದೆ, ಹೇಮಕುಂಡವೆಂಬ ಸಿಖ್‌ ಪವಿತ್ರ ಕ್ಷೇತ್ರದ ಹೆಸರಿನಲ್ಲಿ ಬರುವ ಭಕ್ತಾದಿಗಳೂ ಇಲ್ಲಿದ್ದಾರೆ. ಹಾಗಾಗಿ ಹೂಕಣಿವೆಯೆಂಬುದು ಜಗತ್ತನ್ನು ತೋರಿಸುವ ಕಣಿವೆ.

ವರ್ಷದ ಒಂದಿಷ್ಟೇ ತಿಂಗಳು ಮಾತ್ರ ಚಾರಣ ಮಾಡಬಹುದಾದ ಈ ಕಣಿವೆ, ಒಂದು ರಮ್ಯಲೋಕ! ಆದರೆ ಖಂಡಿತ ಎಲ್ಲರಿಗಿದು ಹೂವಿನ ಹಾಸಿಗೆಯಲ್ಲ. ಎಡೆಬಿಡದೆ ಸುರಿವ ಮಳೆಯಲ್ಲಿ ಒದ್ದೆಯಾಗಲು ತಯಾರಿರುವ ಪ್ರಕೃತಿ ಯಾವ ಕ್ಷಣಕ್ಕೂ ನೀಡಬಲ್ಲ ಸವಾಲಿನ ಬಗ್ಗೆ ಹೆಚ್ಚು ತಲೆಕೆಡಿಸದಿರುವ ಮಂದಿಗೆ ಮಾತ್ರ. ಇಂಥ ಹೂಕಣಿವೆಯ ಚಾರಣಕ್ಕೆ ಹೊರಟಾಗ ಮಗನಿಗೆ ೫ ವಯಸ್ಸು. ದಿನಕ್ಕೆ ೧೦ ಕಿಮೀ ನಡೆಯಬೇಕು. ಈ ಮೊದಲು ಈತ ಹಲವು ಹಿಮಾಲಯ ಚಾರಣಗಳನ್ನು ಮಾಡಿದ್ದರೂ, ಒಳಗೊಳಗೇ ನಮಗೂ ಅಳುಕಿತ್ತು. ಆದರೂ, ಒಂದು ಭಂಡಧೈರ್ಯದಿಂದ ಹೊರಟಾಗಿತ್ತು.

ಇಂತಿಪ್ಪ ಹೂಕಣಿವೆಯ ಚಾರಣ ಶುರುವಾಗಿ, ಹತ್ತು ಹೆಜ್ಜೆ ಇಟ್ಟಾಗಿದೆ ಎಂಬಷ್ಟರಲ್ಲಿ ಹೊತ್ತು ಸಾಗಲು ಬೆನ್ನಿಗೆ ಬುಟ್ಟಿ ಕಟ್ಟಿಕೊಂಡ ನೇಪಾಳಿ ಮೂಲದ ಪೋರ್ಟರ್‌ ಚಂದ್ರಬಾಹರ್‌ ಥಾಪಾ ಹಿಂದೆ ಬಿದ್ದ. ʻಇಷ್ಟು ಪುಟ್ಟ ಮಗುವನ್ನು ನಡೆಸುತ್ತೀರಲ್ಲ, ಅವನನ್ನಾದರೂ, ನನ್ನ ಬುಟ್ಟಿಯಲ್ಲಿ ಕೂರಿಸಬಹುದಲ್ಲ?ʼ ಅಂತ ಒಂದೇ ರಾಗ. ಬೇಡ ಎಂದೆ ಮೊದಲಿಗೆ. ʻಕಮ್ಮಿ ಮಾಡಿಕೊಡುವ, ಹೆಚ್ಚು ಹಣ ಕೇಳೋದಿಲ್ಲʼ ಎಂಬ ಧಾಟಿಯ ಮಾತುಗಳು. ಪಾಪ, ಹೊಟ್ಟೆಪಾಡು. ಸುಮ್ಮನೆ ಏರುತ್ತಲೇ ಇದ್ದರೂ ಥಾಪಾ ನಮ್ಮನ್ನು ಬಿಡಲು ತಯಾರಿರಲಿಲ್ಲ. ʻಅದು ಹೇಗೆ ಈ ಪುಟ್ಟ ಮಗು ಹತ್ತೀತು! ಖಂಡಿತ ತನ್ನ ಅವಶ್ಯಕತೆ ಇವರಿಗೆ ಬಿದ್ದೇ ಬೀಳುತ್ತದೆʼ ಎಂಬ ನಂಬಿಕೆಯಿಂದ ನಮ್ಮ ಜೊತೆಗೇ ಬರತೊಡಗಿದ.

ಒಂದೆರಡು ಕಿಮೀ ಆದರೂ ಬಿಡುವ ಲಕ್ಷಣ ಕಾಣದಿದ್ದಾಗ, ಸ್ವಲ್ಪ ದೂರ ಹೋಗುವಷ್ಟರಲ್ಲಿ ನಾನಂದೆ, ʻನೋಡಿ, ದಯವಿಟ್ಟು ತಪ್ಪು ತಿಳಿಯಬೇಡಿ. ನಾವು ಮೂರೂ ಜನ ಕಾಲ್ನಡಿಗೆಯಲ್ಲೇ ಏರಬೇಕೆಂದು ಬಂದವರು. ಮಗನಿಗೂ ಕೂಡಾ ಅಭ್ಯಾಸವಿದೆ. ಆತ ಏರಿಯಾನೆಂಬ ನಂಬಿಕೆ, ಧೈರ್ಯ ಇದೆ. ನಾವು ಮತ್ತೆ ನಿಮ್ಮ ಸಹಾಯ ಪಡೆದೇವೆಂಬ ಆಸೆಯಿಂದ ನೀವು ನಮ್ಮ ಹಿಂದೆ ಹಿಂದೆ ಬರುತ್ತಲೇ ಇದ್ದರೆ ನಮಗೂ ಪದೇ ಪದೇ ಬೇಡ ಅನ್ನಲು ಕಷ್ಟವಾಗುತ್ತದೆ.

ನಿಮಗೆ ನಮ್ಮ ಹಿಂದೆ ಬಂದರೆ ಲಾಭವಾಗದು. ಅದರ ಬದಲು, ಇದೇ ಸಮಯವನ್ನು ನೀವು ಗಿರಾಕಿ ಹುಡುಕಲು ಬಳಸುತ್ತಿದ್ದರೆ ಬಳಸಬಹುದಲ್ವಾ? ನಿಮ್ಮ ಸಮಯವನ್ನೂ ಹಾಳು ಮಾಡಿ ಆಮೇಲೆ ನಿರಾಸೆಗೊಳಿಸಲು ಇಷ್ಟವಿಲ್ಲ ಭಯ್ಯಾ. ತಪ್ಪು ತಿಳೀಬೇಡಿ. ಹಣ ಕೊಡುವ ವಿಚಾರಕ್ಕಾಗಿ ಅಲ್ಲವೇ ಅಲ್ಲʼ ಎಂದು ನಯವಾಗಿ ವಿವರಿಸಿದೆ. ಕೊಂಚ ಬೇಸರವಾದರೂ, ಇನ್ನೂ ಸ್ವಲ್ಪ ದೂರ ನಮ್ಮ ಹಿಂದೆಯೇ ಬಂದು ಆಮೇಲೆ ಯಾರೋ ಸಿಕ್ಕಿದರೆಂದು ಹೊರಟು ಹೋದ. ಪಾಪ ಅನಿಸಿತು.

ಹೀಗೆ ಹತ್ತುತ್ತಿರುವಾಗ ಗಮನಿಸುತ್ತಿದ್ದೆ. ಪ್ರವಾಸಕ್ಕಿಂತ ಚಾರಣಗಳು ಯಾವತ್ತಿಗೂ ಭಿನ್ನವೇ. ಚಾರಣದಲ್ಲಿ ನಡೆದೇ ಆಗಬೇಕೆನ್ನುವ ವಿಚಾರದಲ್ಲಿ ದುಡ್ಡಿದ್ದವರೂ, ಇಲ್ಲದವರೂ ಒಂದೇ! ಒಂದಿಷ್ಟು ರಾತ್ರಿಯ ಮಲಗುವ ಸೌಲಭ್ಯದಲ್ಲಿ, ಕೊಡುವ ದುಡ್ಡಿಗೆ ಅನುಗುಣವಾಗಿ ಭಿನ್ನವಿರಬಹುದು ಬಿಟ್ಟರೆ, ಎಲ್ಲರೂ ಸಮಾನರು. ಆದರೆ ಈ ಹೂಕಣಿವೆಯ ಚಾರಣ ಅಂಥದ್ದಲ್ಲ. ಇದನ್ನೂ ಕಣ್ಣಾರೆ ಕಂಡು, ಎಂತೆಂಥವರೆಲ್ಲ ಚಾರಣಕ್ಕೆ ಬರುತ್ತಾರಪ್ಪಾ ಎಂದು ಆಶ್ಚರ್ಯವೂ ಆಯಿತು. ಒಬ್ಬಾತ, ಹೀಗೆ ಪೋರ್ಟರ್‌ ಹೆಗಲೇರಿ ಬುಟ್ಟಿಯಲ್ಲಿ ಕೂತಿದ್ದ. ಸಣಕಲನಲ್ಲದ ದಷ್ಟಪುಷ್ಟವಾಗಿದ್ದ ಆತ ಕಡಿಮೆಯೆಂದರೂ ೧೦೦ ಕೆಜಿ ಖಂಡಿತ ಇದ್ದಾನು! ಇಂಥವನನ್ನು ಹೊತ್ತುಕೊಂಡ ಆ ಸಣಕಲ ಪೋರ್ಟರು ೭೦-೮೦ರ ಮೇಲಿರಲಿಕ್ಕಿಲ್ಲ.

ಈ ನೇಪಾಳಿ ಪೋರ್ಟರುಗಳ ಭಾರ ಹೊರುವ ತಾಕತ್ತಿಗೆ ಮಾತ್ರ ಏನು ಹೇಳುವುದೋ ತಿಳಿಯದು. ಆದರೆ, ಕೆಲವು ಕ್ಲಿಷ್ಟಕರ ಏರು ದಾರಿಯಲ್ಲಿ, ಈತನನ್ನು ಹೊತ್ತುಕೊಂಡು ಆತ ಕಷ್ಟ ಪಟ್ಟು ಮೇಲೇರುವಾಗ, ʻನಿಮಗೆ ಕಷ್ಟವಾಗುತ್ತಿದೆಯೇ, ಸ್ವಲ್ಪ ದೂರದ ಮಟ್ಟಿಗೆ ಇಳಿಯಲೇʼ ಎಂದು ಕೇಳುವ ಸೌಜನ್ಯವೂ ತೋರದೆ, ಪ್ರಕೃತಿ ನೋಡುತ್ತಾ ತನ್ನದೇ ಲೋಕದಲ್ಲಿ ಮೈಮರೆತ ಆತನ ಮೇಲೆ ಮಾತ್ರ ಯಾಕೋ ಅಸಾಧ್ಯ ಸಿಟ್ಟು ಬಂತು. ಛೇ, ದುಡ್ಡು ಕೊಟ್ಟು ಮನುಷ್ಯರ ಹೆಗಲ ಬೆನ್ನ ಮೇಲೆ ಹೊತ್ತೊಯ್ಯಿಸುವ ಆ ಪರಿಯೇ ವಿಚಿತ್ರ ಎನಿಸಿತು.

ಕನಿಷ್ಟ ಪಕ್ಷ ಕೆಲವು ಜಾಗಗಳಲ್ಲಾದರೂ, ನಾನು ಇಳಿಯಲಾ ಎಂದು ಕೇಳುವ ಸಹಾನುಭೂತಿಯೂ ಇಲ್ಲದ ಇಂಥವರೆಲ್ಲ ಇಲ್ಲಿ ಯಾತಕ್ಕಾಗಿ ಬರುತ್ತಾರೆ ಎಂಬ ದುಃಖವೂ ಆಯಿತು. ತನ್ನನ್ನು ಹೊತ್ತು ಸಾಗುವಾತನ ಕಷ್ಟ ಸುಖಗಳೇನು, ಅಥವಾ, ದಾರಿ ಮಧ್ಯೆ ತಿನ್ನುವಾಗ, ಕುಡಿಯುವಾಗ, ನೀವೂ ತಿನ್ನಿ ಎಂದು ಹೇಳುವ ಕನಿಷ್ಟ ಸೌಜನ್ಯ ಯಾವುದೂ ಕಾಣಿಸದೆ ಇದ್ದಾಗ ನಮ್ಮಂತೆ ಮನುಷ್ಯರಾದ ಅವರೆಡೆಗೆ ಇರುವ ತಾತ್ಸಾರದಿಂದ ಬೇಸರವಾಗುತ್ತದೆ.

ದಾರಿಯುದ್ದಕ್ಕೂ ಗಮನಿಸಿದ್ದೆ. ಈ ಹೊರುವ ಮನುಷ್ಯರಿಗೂ, ಹೊರಿಸಿಕೊಳ್ಳುವವರಿಗೂ ಮಾತುಕತೆ ಬಹಳ ಕಡಿಮೆ. ಚಾರಣಕ್ಕೆ ಸಿಗುವ ಗೈಡ್‌ ಚಾರಣಿಗರಿಗೆ ವಿಚಾರಗಳನ್ನು ಅರುಹುವವನಾದ್ದರಿಂದ ಮಾತಿಗೆ ಸಿಕ್ಕರೂ, ಯಾರ ಕಣ್ಣಿಗೂ ಕಾಣದೆ, ಎಲೆಮರೆಯ ಕಾಯಿಯಂತೆ ಚಾರಣಿಗರ ಬ್ಯಾಗುಗಳನ್ನೆಲ್ಲ ಹೊತ್ತು ಎಲ್ಲರಿಗಿಂತ ಮೊದಲು ಕ್ಯಾಂಪ್‌ ಸೈಟಿಗೆ ಹೋಗಿ ತಲುಪುವ ಪೋರ್ಟರುಗಳು ಮಾತ್ರ ಇವೆಲ್ಲದಕ್ಕೆ ಸಂಬಂಧವೇ ಪಡದವರಂತೆ ಉಳಿದುಬಿಡುತ್ತಾರೆ ಎಂಬುದು ದುರಂತ.

ಒಂದು ಪ್ರವಾಸ, ಒಂದು ಪುಸ್ತಕ ಓದಿದಂತೆ ಒಂದೊಳ್ಳೆ ಅನುಭವ ಯಾವಾಗ ಆಗಬಹುದೆಂದರೆ, ನಾವು ಹೋದ ಪರಿಸರವನ್ನು, ಅಲ್ಲಿನ ಜನಜೀವನವನ್ನು, ಸಂಸ್ಕೃತಿಯನ್ನು, ಅಲ್ಲಿನ ಜನರನ್ನು ನೋಡಿ ತಿಳಿವ, ಮಾಡಿ ಕಲಿವ ಕುತೂಹಲ ಇದ್ದಾಗ. ಅಲ್ಲಿನ ಜನರ ಕಥೆಗಳಿಗೆ ಕಿವಿಯಾಗುವ ಸಹನೆ ಇದ್ದಾಗ. ಅಲ್ಲಿನ ಸಾಮಾನ್ಯರಂತೆ ಇದ್ದು ನೋಡುವ ಜೀವನಪ್ರೀತಿ ಬೆಳೆಸಿಕೊಂಡಾಗ.

ನಾವೆಷ್ಟು ಮಂದಿ, ಹೋದ ಊರಿನಲ್ಲಿ ಸಿಕ್ಕ ಜನರನ್ನೋ, ನಮ್ಮ ಪ್ರವಾಸವನ್ನು, ಚಾರಣವನ್ನು ಸೊಗಸಾಗಿಸಿ ಹೊಟ್ಟೆ ಹೊರೆಯಲು ಬಂದ ಪರ್ವತ/ಬಯಲ ನಾಡಿನ ಮಂದಿಯ ಕಷ್ಟ ಸುಖವನ್ನು ವಿಚಾರಿಸಿಕೊಂಡಿದ್ದೇವೆ? ನಾವೆಷ್ಟು ಮಂದಿ, ನಮ್ಮ ಜೊತೆಗೆ ನಮ್ಮ ಸಾಮಾನು ಹೊತ್ತು ತಂದ ಇವರ ಊಟ ತಿಂಡಿ, ನಿದ್ದೆ ಬಗ್ಗೆ ಯೋಚನೆ ಮಾಡಿದ್ದೇವೆ? ಕನಿಷ್ಟ ಪಕ್ಷ ವಿಚಾರಿಸಿಕೊಳ್ಳುವ ಸೌಜನ್ಯ ಹೊಂದಿದ್ದೇವೆ? ದುಡ್ಡು ಎಂಬ ಮಾಯೆ, ಹೊಟ್ಟೆಪಾಡು ಎಂಬ ಸತ್ಯ ಮನುಷ್ಯ ಮನುಷ್ಯರ ನಡುವೆ ಏನೆಲ್ಲ ಕಂದಕ ಸೃಷ್ಟಿಸಿಬಿಡುತ್ತದೆ!

****

ಈಗ್ಗೆ ಕೆಲಕಾಲದ ಹಿಂದೆ ಒಂದು ಆಸಕ್ತಿಕರ ವಿಚಾರ ಓದಿದ್ದೆ. ಕುತೂಹಲಕ್ಕೆ ಆತ ಮಾಡಿದ ಸಾಕ್ಷ್ಯಚಿತ್ರ ʻದಿ ಪೋರ್ಟರ್-‌ ದಿ ಅನ್‌ಟೋಲ್ಡ್‌ ಸ್ಟೋರಿ ಅಟ್‌ ಎವರೆಸ್ಟ್‌ʼ ಅನ್ನೂ ನೋಡಿದೆ. ನೆಥನೀಲ್ ಮೆನ್ನಿಂಗರ್‌ ಎಂಬ ೨೬ರ ಹರೆಯದ ಅಮೆರಿಕನ್‌ ಚಾರಣಿಗ ಯಾರೂ ಮಾಡದ ಒಂದು ಹೊಸ ಸಾಹಸ ಮಾಡಿದ್ದ. ಅದೆಲ್ಲವನ್ನೂ ಒಂದು ಸಾಕ್ಷ್ಯಚಿತ್ರವಾಗಿ ನಿರ್ಮಿಸಿ ಬೇರೆಯದೇ ಒಂದು ಜಗತ್ತನ್ನು ನಮ್ಮ ಮುಂದೆ ಇಟ್ಟಿದ್ದ. ಮೊದಲೇ ಸಣ್ಣದಾಗಿ ತಲೆಯಲ್ಲಿ ಕೊರೆಯುತ್ತಿದ್ದ ಯೋಚನೆಯೊಂದು ಈ ಸಾಕ್ಷ್ಯಚಿತ್ರದೊಂದಿಗೆ ಬೆಳೆದು ಹೆಮ್ಮರವಾಯಿತು.

ಮೆನಿಂಗರ್, ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಚಾರಣ ಮಾಡಲು ನೇಪಾಳಕ್ಕೆ ಬಂದಾತ. ಆದರೆ, ಈತನ ಬಳಿ ಲಕ್ಷಗಟ್ಟಲೆ ದುಡ್ಡಿರಲಿಲ್ಲ. ದುಡ್ಡು ಖರ್ಚು ಮಾಡದೆ, ಎವರೆಸ್ಟ್‌ ಬುಡ ತಲುಪೋದು ಹೇಗೆ ಎಂದು ಯೋಚಿಸಿದವನಿಗೆ ತಲೆಯಲ್ಲಿ ಹೊಳೆದ ವಿಚಾರ ತಾನೇ ಪೋರ್ಟರ್‌ ಆಗುವುದು. ಸಣ್ಣ ವಯಸ್ಸಿನವನಾದ್ದರಿಂದ, ಆ ದೇಹಕ್ಷಮತೆಯೂ ಇತ್ತಾದ್ದರಿಂದ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದ. ಈತನೇ ಎವರೆಸ್ಟಿನ ಸ್ಥಳೀಯನಲ್ಲದ ಮೊದಲ ಪೋರ್ಟರು. ಹಾಗಾಗಿ ಈತ ಎವರೆಸ್ಟ್‌ ಬುಡದ ಹಾದಿಗೆ ದುಡ್ಡು ತೆರಲಿಲ್ಲ, ಬದಲಾಗಿ ಇಬ್ಬರು ಚಾರಣಿಗರ ಸುಮಾರು ೧೦೦ ಕೆಜಿ ಭಾರದ ಬ್ಯಾಗು ಹೊತ್ತು ಪೋರ್ಟರ್‌ ಆಗಿ ಬದಲಾದ. ನೇಪಾಳಿ ಭಾಷೆ ಕಲಿತ. ತಿಂಗಳ ಕಾಲ ಅವರಂತೆ ಚಾರಣ ಮಾಡಿಸಿದ ಲೆಕ್ಕದಲ್ಲಿ ಸಂಬಳವನ್ನೂ ಪಡೆದ. ಮಾಡುವ ಛಲ ಎಂದರೆ ಇದು, ಜೀವನ ಪ್ರೀತಿ ಎಂದರೂ ಇದುವೇ!

ಈತ ಹೇಳುತ್ತಾನೆ, ʻಎಷ್ಟೋ ಚಾರಣಗಳನ್ನು ಮಾಡುತ್ತೇವೆ. ಆದರೆ, ನಮ್ಮ ಬ್ಯಾಗುಗಳನ್ನು ಹೊತ್ತು ಸಾಗುವ ಪೋರ್ಟರ್‌ ಏನು ತಿನ್ನುತ್ತಾನೆ, ಎಲ್ಲಿ ಮಲಗುತ್ತಾನೆ, ಅವನ ಕಥೆ ಏನು, ಆತ ಎಲ್ಲಿಯವನು, ಅವನ ಬದುಕು ಹೇಗೆ ಎಂಬಿತ್ಯಾದಿ ಯಾವ ಮಾಹಿತಿಗಳೂ ಕೂಡಾ ಯಾರಿಗೂ ತಿಳಿಯುವುದಿಲ್ಲ. ಅದನ್ನು ತಿಳಿದುಕೊಳ್ಳುವ ಯೋಚನೆಯೂ ಬಹುತೇಕ ಯಾವ ಚಾರಣಿಗನಿಗೂ ಬರುವುದಿಲ್ಲ. ಇದೆಲ್ಲವನ್ನು, ಅವರಲ್ಲೊಬ್ಬನಾಗಿ ಯಾಕೆ ನೋಡಬಾರದು ಅನಿಸಿ ಮಾಡಿದ ಕೆಲಸ ಇದು. ಇಡೀ ಚಾರಣದಲ್ಲಿ, ಬೇರೆ ಪೋರ್ಟರುಗಳು ನೆಲದಲ್ಲೇ ಮಲಗಿದರೆ ನಾನೂ ನೆಲದಲ್ಲೇ ಮಲಗಿಬಿಡುತ್ತಿದ್ದೆ. ನನಗಾವ ಮೇಲ್ದರ್ಜೆಯ ಸವಲತ್ತುಗಳೂ ಬೇಕಾಗಿಲ್ಲ ಎಂದು ನಾನು ಡಿಸೈಡ್‌ ಮಾಡಿದ್ದೆ ಎನ್ನುತ್ತಾನೆ.

ನೀವು ಬೇಕಾದರೆ ನೋಡಿ. ಹೊತ್ತು ಸಾಗುವವರು, ಎಂದಿಗೂ ಬಗ್ಗಿಯೇ ಇರುತ್ತಾರೆ. ಅವರ ಜೊತೆ ಮಾತನಾಡುವುದು ಕಷ್ಟ. ಹೊರುವವನ ಕಣ್ಣು ಬೇರೆಯವರೊಂದಿಗೆ ಸಂಧಿಸದು. ಹಾಗಾಗಿ, ಅವರ ಜಗತ್ತೂ, ಚಾರಣಿಗರ ಜಗತ್ತೂ ಯಾವತ್ತಿಗೂ ಬೇರೆಯೇ ಆಗಿರುತ್ತದೆ. ಈ ಜಗತ್ತನ್ನು ನಾನು ನೋಡಿರಲಿಲ್ಲ. ನನಗೆ ಒಬ್ಬ ಪೋರ್ಟರು ಎಷ್ಟು ಕಷ್ಟದ ಪರಿಸ್ಥಿತಿಯನ್ನು ಅನುಭವಿಸುತ್ತಾನೆ ಎಂಬುದನ್ನೂ ನೋಡಬೇಕಿತ್ತು, ಅನುಭವಿಸಬೇಕಿತ್ತು. ಹೀಗೆ ಶುರುವಾದ ಪಯಣವಿದು. ಇದು ನನಗೆ ಜೀವನದಲ್ಲಿ ದಕ್ಕಿದ ಅತ್ಯಮೂಲ್ಯ ಪಾಠ ಎನ್ನುತ್ತಾನೆ.

ಪೋರ್ಟರುಗಳ ಬದುಕೇ ಹಾಗೆ. ಅವರ ನಿತ್ಯದ ಬದುಕು ಮಾತ್ರ ಶೋಚನೀಯ. ಅವರು ಯಾವಾಗಲೂ ಬಗ್ಗಿಯೇ ಇರುವ ಕಾಯಕಯೋಗಿಗಳು. ಅವರಿಗೆ ಸಿಗುವ ವೇತನ ಬಹಳ ಕಡಿಮೆ. ಜೊತೆಗೆ ಒಬ್ಬ ಪೋರ್ಟರು ಇಬ್ಬರ ಬ್ಯಾಗುಗಳನ್ನು ಹೊರಬೇಕು. ಬೆಳ್ಳಂಬೆಳಗ್ಗೆ  ಶುರುವಾಗುವ ಹೆಗಲು ಕೊಡುವ ಕೆಲಸ, ದಿನವಿಡೀ ಮುಂದುವರಿಯುತ್ತದೆ. ಮಣಭಾರದ ಬ್ಯಾಗು ಹೊತ್ತುಕೊಂಡು ದುರ್ಗಮ ಶಿಖರವೇರುವುದು ಎಂಥ ಕಠಿಣ ಸವಾಲು ಎಂದರೆ ಊಹಿಸುವುದು ಸಾಮಾನ್ಯನಿಗೆ ಕಷ್ಟ.

ಇಷ್ಟು ಎತ್ತರೆತ್ತರದ ದುರ್ಗಮ ಬೆಟ್ಟಗಳನ್ನೇರುವ ಕಠಿಣ ಸವಾಲಿನ ಕಾಯಕಯೋಗಿಗಳಿಗೆ ನಿಜಕ್ಕೂ ಪೌಷ್ಟಿಕ ಆಹಾರ ಬೇಕು. ಆದರೆ, ಅವರು ಮಾತ್ರ ತಮ್ಮ ಹಸಿವಿನ ಅರ್ಧವನ್ನಷ್ಟೆ ಉಣ್ಣುತ್ತಾರೆ. ಉಳಿದರ್ಧಕ್ಕೆ ಖರ್ಚಾಗುವ ಪಾಲು ಉಳಿಕೆಗೆ. ಇಡೀ ಚಾರಣ ಮುಗಿಯುವವರೆಗೂ ಟಿಪ್ ಇಲ್ಲ. ಅದೂ ಕೆಲವರಿಂದ ಒಳ್ಳೆ ಟಿಪ್‌ ಸಿಕ್ಕಿದರೂ ಕೆಲವರಿಂದ ಅದೂ ದಕ್ಕದು. ಒಟ್ಟಾರೆ ಇವರ ಬದುಕೆಂದರೆ ತೂಗುಯ್ಯಾಲೆ. ಇವರ ಹೆಗಲು ಹೇಳುವ ಕಥೆಗೆ ಕಿವಿಯಾಗುವ ಮನಸ್ಸು ಎಲ್ಲಾದರೂ ಸಿಕ್ಕೀತೇ?

ನೋಡಿ, ಯಾವ ಪೋರ್ಟರು ಕೂಡ ತನ್ನ ಮಕ್ಕಳೂ ತನ್ನದೇ ಕೆಲಸವೇ ಮಾಡಲಿ ಎಂದು ಬಯಸುವುದಿಲ್ಲ. ತಾನು ಕೂಡ ಜೀವನ ಪರ್ಯಂತ ಪೋರ್ಟರ್‌ ಆಗಿರೋದಕ್ಕೂ ಬಯಸುವುದಿಲ್ಲ. ಆದರೆ, ಪರ್ವತದ ಬದುಕು ಅವರನ್ನು ಇಂಥ ಕೆಲಸಗಳಿಗೆ ಒಡ್ಡುತ್ತದೆ. ಅವರಿಗೂ ಕನಸುಗಳಿವೆ. ಅವರ ಜೊತೆಗೆ ಅವರಾಗಿ ಕಳೆದ ಕಾರಣವಷ್ಟೆ ಇವೆಲ್ಲವೂ ನನ್ನೊಳಗೆ ಇಳಿಯಿತು ಎನ್ನುತ್ತಾನೆ.

ನೇಪಾಳೀ ಪೋರ್ಟರುಗಳು ಹೊರುವ ಭಾರ, ಅವರ ಕ್ಷಮತೆಯ ಬಗ್ಗೆ ಜಗತ್ತೇ ನಿಬ್ಬೆರಗಿನಿಂದ ನೋಡುತ್ತದೆ. ಅವರು ತಮಗಿಂತಲೂ ಹೆಚ್ಚು ಭಾರವನ್ನು ತಮ್ಮ ಹೆಗಲ ಮೇಲೆ ಹೇಗೆ ಹೊತ್ತುಕೊಂಡು ದುರ್ಗಮ ಶಿಖರಗಳನ್ನೇರುತ್ತಾರೆ ಎಂಬ ಬಗ್ಗೆ ಕೆಲವು ಅಧ್ಯಯನಗಳೂ ನಡೆದಿವೆ. ಆದರೆ, ಈ ಸಾಕ್ಷಚಿತ್ರ ಜಗತ್ತಿಗೆ ತೋರಿಸಿದ ಎವರೆಸ್ಟ್‌ ಚಾರಣದ ಇನ್ನೊಂದು ಮುಖ ಈ ಹೆಗಲು ಕೊಡುವ ಮಂದಿಯ ಮುಖದಲ್ಲಿ ನಗುವನ್ನು ತರಿಸಿದೆ. ನಮ್ಮ ಬದುಕಿನ ಬಗ್ಗೆಯೂ ಕನಿಷ್ಟ ಯಾರೋ ಒಬ್ಬರು ಕಣ್ಣಾಗಿದ್ದಾರೆ, ಕಿವಿಯಾಗಿದ್ದಾರೆ ಎಂದವರಿಗೆ ಅನಿಸಿ, ತಮ್ಮ ಕೆಲಸದ ಬಗ್ಗೆ ಅವರಿಗಿರುವ ಪ್ರೀತಿಯನ್ನು ಇಮ್ಮಡಿಗೊಳಿಸಿದೆ.

ಒಂದು ಮಾತ್ರ ನಿಜ. ಈ ಪರ್ವತನಾಡಿನ ಮಂದಿಯಷ್ಟು ಸಹನೆ, ಜೀವನಪ್ರೀತಿ, ತಾಳ್ಮೆಯನ್ನು ಬೇರೆಲ್ಲೂ ನಾನಂತೂ ಕಂಡಿಲ್ಲ. ಈ ಕಡಿದಾದ ಬೆಟ್ಟಗಳಲ್ಲಿ ಪುಟ್ಟ ಕಾರು ಚಲಾಯಿಸಿಕೊಂಡು ಬರುವಾಗ, ಬಹಳ ದೂರದಿಂದಲೇ ಗಮನಿಸಿ ಎದುರಿಂದ ಬರುವವರಿಗೆ ಜಾಗ ಬಿಟ್ಟು ನಿಲ್ಲುವ ಅವರ ತಾಳ್ಮೆಯನ್ನು, ಒಂದು ಸೆಂಕೆಂಡೂ ಪುರುಸೊತ್ತಿಲ್ಲದವರಂತೆ ಸಿಗ್ನಲ್‌ ಜಂಪ್‌ ಮಾಡಿ, ಕಿವಿ ಹರಿಯುವಂತೆ ಹಾರ್ನ್‌ ಮಾಡುತ್ತಾ ಗಾಡಿ ಓಡಿಸುವ ನಗರದ ಮಂದಿ ನಾವು ಗಮನಿಸಬೇಕು. ಪರ್ವತದ ಜೊತೆಯಲ್ಲಿ ಬದುಕಿದರೆ ಯಾವ ವಿಶ್ವವಿದ್ಯಾಲಯದ ಪಾಠವೂ ಏನೂ ಅಲ್ಲ ಎಂಬುದಕ್ಕೆ ಇದರಿಂದ ದೊಡ್ಡ ಉದಾಹರಣೆ ಬೇಕೇ?

ಇಲ್ಲಿ ಮೆನ್ನಿಂಗರ್‌ ಹೇಳುವ ಮಾತೊಂದು ಬಹಳ ಕಾಡುತ್ತದೆ. ʻಪೋರ್ಟರುಗಳ ಕಣ್ಣಿನ ಪರ್ವತವೇ ಬೇರೆ. ಚಾರಣಿಗರ ಕಣ್ಣಿನ ಪರ್ವತವೇ ಬೇರೆ. ಇಬ್ಬರ ಪರ್ವತಗಳ ನಡುವೆಯೂ ದೊಡ್ಡದೊಂದು ಕಂದಕ ಇದೆ.ʼ

ಕಾಡುವ ಮಾತು!

‍ಲೇಖಕರು Admin

August 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: