‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
7
ಮಂಗಳೂರಿಗೆ ಬರುವ ಮೊದಲು ಬೋಳುವಾರರು ಓಡಾಡಿದ ಎಲ್ಲ ಜಾಗಗಳನ್ನು ಅವರ ಕಲ್ಪನೆಯ ‘ಒಂದು ತುಂಡು ಗೋಡೆ’ಯ ಕಥೆಯನ್ನು, ಅವರ ಕಲ್ಪನೆಯ ಪಾತ್ರಗಳನ್ನು ನೋಡಿ ಬರುವ ಎಂದುಕೊಂಡಿದ್ದರಿಂದ ಬೋಳುವಾರರನ್ನು ಈ ಬಗ್ಗೆ ಕೇಳಿದೆವು. ಬೋಳುವಾರರು ‘ನಾನೂ ಜೊತೆ ಬರುತ್ತೇನೆ. ಎಲ್ಲವನ್ನೂ ತೋರಿಸುತ್ತೇನೆ’ ಎಂದು ಉತ್ಸಾಹ ವ್ಯಕ್ತಪಡಿಸಿದ್ದರು. ಅವರ ತಮ್ಮ ಐ. ಕೆ. ಬೋಳುವಾರರು ಮತ್ತು ತಂಗಿ ಇಬ್ಬರೂ ಪುತ್ತೂರರಿನಲ್ಲಿಯೇ ಇತ್ತು. ಅಲ್ಲಿಂದ ಸ್ವಲ್ಪ ದೂರದ ಗೋಣಿ ತಟ್ಟುವಿನಲ್ಲಿ ಬೋಳುವಾರರ ಶ್ರೀಮತಿ ಜುಬೇದಾ ಅವರ ತವರು ಮನೆ ಕೂಡಾ ಇತ್ತು.
ಆ ಜಾಗದಲ್ಲಿ ನಿಮಗೆ ಬೇಕಾಗುವ ಎಲ್ಲ ವ್ಯವಸ್ಥೆಯೂ ಆಗಬಹುದು ಎಂದು ಹೇಳಿದ್ದರಿಂದ, ಎಲ್ಲವನ್ನೂ ನೋಡಿಕೊಂಡು ನಂತರ ನಮ್ಮ ಜಾಗದ ಹುಡುಕಾಟಕ್ಕೆ ತೊಡಗುವುದು ಸಾಮಾನ್ಯವಾದ ಪರಿಪಾಠವಾದ್ದರಿಂದ, ಬೋಳುವಾರರಿಗೂ ಉತ್ಸಾಹವಿದ್ದಿದ್ದರಿಂದ ಒಟ್ಟಿಗೆ ಹೊರಟೆವು. ಪುತ್ತೂರಿನ ರಾಮಾ ಹೊಟೇಲಿನಲ್ಲಿ ನಮ್ಮ ವಾಸ್ತವ್ಯ. ಅದೊಂದು ಭಿನ್ನವಾದ ಅನುಭವ.
ನಮ್ಮ ಕಣ್ಣಲ್ಲಿ ಕಥೆ ಓದಿ ಮೂಡುವ ಚಿತ್ರಕ್ಕೂ, ವಾಸ್ತವದ ಚಿತ್ರಕ್ಕೂ ಸಂಬಂಧವೇ ಇಲ್ಲ. ಅವರು ಓದಿದ ಶಾಲೆ, ಬಸ್ಟ್ಯಾಂಡ್‌ನ ಬಳಿ ಇರುವ ಶ್ರೀನಿವಾಸಾಚಾರಿಯ ಚಿನ್ನದಂಗಡಿ, ಅದರ ಪಕ್ಕದಲ್ಲಿನ ಬಟ್ಟೆಯಂಗಡಿ ಹೀಗೆ ಎಲ್ಲವನ್ನೂ ನೋಡಿ ಬಂದೆವು. ಹೆಸರಿಗೆ ಚಿನ್ನದಂಗಡಿ. ಯಾವ ಸೇಫ್ಟಿಯೂ ಆ ಅಂಗಡಿಗಿರಲಿಲ್ಲ. ಮರದ ಜೋಡಿಸುವ ಬಾಗಿಲುಗಳನ್ನು ತೆಗೆದು ಈಗ ಷಟರ್ ಹಾಕಿಸಿದ್ದರು ಎನ್ನುವುದನ್ನು ಬಿಟ್ಟರೆ ನಮಗದು ಚಿನ್ನದಂಗಡಿ ಎಂದು ನಂಬಲಿಕ್ಕೆ ಏನೂ ಇರಲಿಲ್ಲ.
ಬೆಂಗಳೂರಿನ ಅಂಗಡಿಗಳ ಹಾಗೆ ಒಡವೆಗಳನ್ನು ಡಿಸ್‌ಪ್ಲೇ ಮಾಡಿರಲಿಲ್ಲ. ‘ಇಲ್ಲೇ ಮಾಡಬಹುದಲ್ಲಾ’ ಎಂದರು ಬೋಳುವಾರರು. ನಮಗೆ ಇಷ್ಟವಾಗಿರಲಿಲ್ಲ ಆದ್ದರಿಂದ ‘ನೋಡುವ ಸಾರ್’ ಎಂದೆವು. ‘ಈಗ ಶ್ರೀನಿವಾಸಾಚಾರಿ ಇಲ್ಲ, ಕಾಲವಾಗಿ ಬಹುದಿನಗಳಾದವು. ಅಂಗಡಿಯನ್ನು ಚಂದ್ರಣ್ಣನೇ ನೋಡುತ್ತಾರೆ’ ಬೋಳುವಾರರು ಹೇಳಿದರು. ಪರಿಚಯ, ಕುಶಲೋಪರಿ ಮಾತುಗಳಲ್ಲಿ ಸಿನಿಮಾದ ವಿಷಯ ಬಂದಾಗ ಚಂದ್ರಣ್ಣ ಖುಷಿಯಾದರು. ಅವರ ಅಂಗಡಿಯಲ್ಲೇ ಶೂಟಿಂಗ್ ಮಾಡುವುದಾದರೆ ಬಿಟ್ಟುಕೊಡುವುದಾಗಿ ಕೂಡಾ ಹೇಳಿದರು.
ಮೂಲೆಯಲ್ಲಿ ಸಣ್ಣದೊಂದು ಕುಲುಮೆ, ಚಿನ್ನ ಕಾಯಿಸುವ ಮೂಸೆ, ಅಲ್ಲೊಬ್ಬ ಹುಡುಗ ಏನನ್ನೋ ಕಾಯಿಸಿ ಕಾಯಿಸಿ ನೀರಿನಲ್ಲಿ ಅದ್ದಿ ಚುಯ್ ಎನ್ನಿಸುತ್ತಿದ್ದ. ಅವನ ಸುತ್ತಾ ಚಟ್ಟುಗ ಚಿಮ್ಮಟ ಇಕ್ಕಳಥರದ ಅನೇಕ ವಸ್ತುಗಳು ಹರಡಿಕೊಂಡಿದ್ದವು. ಚಂದ್ರಣ್ಣ ಬೋಳುವಾರರ ಕಡೆಗೆ ತುಂಬಾ ವಿನಯಪೂರ್ವಕವಾದ ನಡೆಯನ್ನು ಪ್ರದರ್ಶಿಸುತ್ತಿದ್ದರು. ಮಾತಾಡುವಾಗಲೇ ಚಹಾ ಬಂತು. ನಮ್ಮ ಕಥೆಯ ಚಂದ್ರಣ್ಣನಿಗೂ ಇವನಿಗೂ ಸಂಬಂಧವೇ ಇಲ್ಲ ಎನ್ನಿಸಿ ನಿರಾಸೆಯಾಯಿತು.
ಕಥೆಯ ಯಂಗ್ ಅಂಡ್ ಎನರ್ಜಟಿಕ್ ಆಗಿದ್ದ ಚಂದ್ರಣ್ಣ ನಡುವಯಸ್ಸನ್ನೂ ದಾಟಿಬಿಟ್ಟಿದ್ದ. ಅವನೇನಾ ಇವನು ಎನ್ನುವ ಅನುಮಾನ ನಮ್ಮನ್ನು ಕಾಡುತ್ತಿದ್ದರೆ ‘ಅವನೇ ಇವನು’ ಎನ್ನುವ ವಿಶ್ವಾಸದಲ್ಲಿ ಬೋಳುವಾರರು ಮಾತಾಡುತ್ತಿದ್ದರು. ಎಲ್ಲವನ್ನೂ ನೋಡಿ ಬಂದೆವು. ಸೃಷ್ಟಿ ಕ್ರಿಯೆಯ ಬಗ್ಗೆ ಸ್ವಲ್ಪ ತಿಳಿದಿದ್ದ ನಮಗೆ ಕತೆ ಬೋಳುವಾರರದ್ದೆ ಆದ್ದರಿಂದ ಕಲ್ಪನೆಯೂ ಅವರದ್ದೆ ಅಲ್ಲವಾ? ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದೆವು.
ಧರ್ಮವನ್ನು ರಾಜಕೀಯ ಮಾಡದೆ ವೈಯಕ್ತಿಕವಾದ ದೊಡ್ಡ ಶ್ರದ್ಧೆಯಲ್ಲಿ ಬದುಕುವ ದೊಡ್ಡ ಸಮುದಾಯ ಯಾರಿಗೂ ಹಾನಿ ಮಾಡುವುದಿಲ್ಲ. ಯಾವ ಧರ್ಮವೂ ದ್ವೇಷವನ್ನು ಹೇಳುವುದಿಲ್ಲ. ಅದನ್ನು ಅನುಸರಿಸದೆ ಧರ್ಮದ ಹೆಸರಿನಲ್ಲಿ ಬದುಕುವವರು ನಡೆಸುವ ಹಿಂಸಚಾರಕ್ಕೆ ಯಾರು ಹೊಣೆ? ಆವೇಶವನ್ನೇ ಮೈ ಹೊದ್ದ ಯುವಕರನ್ನು ತಮ್ಮ ಕಡೆಗೆ ಸೆಳೆಯುತ್ತಾ ಅವರಿಂದ ತಮಗೆ ಬೇಕಾದ ಕೆಲಸವನ್ನು ಮಾಡುವವರನ್ನು ‘ಧರ್ಮಾಧಿಕಾರಿ’ ಎಂದು ಹೇಗೆ ಹೇಳಲು ಸಾಧ್ಯ? ಪಾತುಮ್ಮ ಎನ್ನುವ ಬಡಹೆಂಗಸಿಗೆ ಬದುಕು ನಡೆಸುವುದೇ ಕಷ್ಟವಾಗಿರುವಾಗ ಅವಳು ಹೇಗೆ ತಾನೆ ಇನ್ನೊಬ್ಬರನ್ನು ದ್ವೇಷಿಸುತ್ತಾಳೆ? ಅವಳ ಬದುಕಿನ ಸಂಗತಿಗಳಿಗೆ ಉತ್ತರ ಹುಡುಕಿಕೊಳ್ಳುವುದು ದೊಡ್ಡದಾಗಿರುವಾಗ ಸರಿ ತಪ್ಪುಗಳನ್ನು ಹೇಗೆ ನಿರ್ಧರಿಸುತ್ತಾಳೆ? ಪ್ರೀತಿಯಲ್ಲೇ ನಂಬುಗೆಯನ್ನು ಕಂಡ ಅವಳಿಗೆ ಅನುಮಾನವನ್ನು ಹೇಗೆ ಹೊತ್ತೊಯ್ಯುತ್ತಾಳೆ? ಇಂಥಾ ಪಾಪದ ಹೆಣ್ಣುಮಗಳೊಬ್ಬಳು ಬಾಬರಿ ಮಸೀದಿಯ ಗೋಡೆ ಕೆಡವಿದವರು ಎನ್ನುವ ದ್ವೇಷವಿಲ್ಲದೆ ಕರಸೇವೆಯಿಂದ ಹಿಂದಿರುಗಿ ಬಂದ ಚಂದ್ರಣ್ಣನ ಹತ್ತಿರ ಅದರದ್ದೊಂದು ತುಂಡು ಸೇರಿಸಿ ಮನೆ ಕಟ್ಟಿ ಬಿಡುವ ಉಮೇದು ಬಂದು ಕೇಳುತ್ತಾಳೆ. ಇದು ಚಂದ್ರಣ್ಣನಿಗೂ ಆಘಾತ.
ತಾನು ಒಡೆಯದೇ ಹೋದರು ಅಷ್ಟು ದೂರ ಹೋದ ತನ್ನ ಶೌರ್ಯಕ್ಕೆ ಸಾಕ್ಷಿಯಾದ, ಯಾರಿಗೂ ಹೇಳದೆ ತನ್ನಲ್ಲೇ ಉಳಿದ ಆ ಗೋಡೆಯ ತುಂಡು ಅವನೊಳಗಿನ ಪಾಪಪ್ರಜ್ಞೆಯನ್ನು ಕೆಣಕುತ್ತದೆ. ಹಾಗಾದರೆ ಎಲ್ಲರೂ ಸೇರಿ ಒಡೆದದ್ದು ಏನನ್ನು? ಎನ್ನುವ ಪ್ರಶ್ನೆಗೆ ಉತ್ತರಿಸಲಾಗದೆ ಒದ್ದಾಡುತ್ತಾನೆ. ಕಡೆಗೆ ಅದನ್ನು ನೀರೊಳಗೆ ಎಸೆದು ತನ್ನ ಬಳಿ ನಡೆದ ಎಲ್ಲಕ್ಕೂ ಸಾಕ್ಷಿಯಾದ ಆ ಹೆಂಟೆಯನ್ನು ಎಸೆದು ನಿರಾಳವಾಗುತ್ತಾನೆ. ಇದು ಸತ್ಯವಾ? ಅಂಥಾ ಘಟನೆ ಭಾರತದಲ್ಲಿ ಎಲ್ಲಾದರೂ ನಡೆಯಿತಾ? ಎಂದರೆ ನಡೆಯಲಿಲ್ಲ.
ಇತಿಹಾಸಕ್ಕೆ ದಾಖಲೆಗಳು ಬೇಕು. ಆ ದಾಖಲೆಗಳು ಆಧಾರಸಹಿತವಾಗಿರಬೇಕು. ಆದರೆ ಸಾಹಿತ್ಯಕ್ಕೆ ಇದ್ಯಾವುದೂ ಬೇಡ. ದಾಖಲೆಗಳಿಗಿಂದ ಮಾನವತೆಯ ತುಡಿತಗಳು ಬೇಕು. ಅಂತಃಕರಣಪೂರಿತವಾದ ಆದ್ರವಾದ ಕಣ್ಣುಗಳು ಬೇಕು. ಸಾಹಿತ್ಯ ಮಾತ್ರ ಇದನ್ನು ಬಯಸುತ್ತದೆ ಮತ್ತು ಸಾಹಿತ್ಯದಲ್ಲಿ ಮಾತ್ರ ಇಂಥದ್ದು ನಡೆಯುತ್ತದೆ. ಇಂಥಾ ಕತೆಯನ್ನು ಬರೆದ ಬೋಳುವಾರರು ತಣ್ಣನೆಯ ವಿಷಾದವನ್ನು ಆ ಹೊತ್ತು ಅನುಭವಿಸುತ್ತಿದ್ದುದು ಅವರ ಕಣ್ಣುಗಳಲ್ಲಿ ನಮಗೆ ಗೋಚರವಾಗಿತ್ತು. ಆ ವಿಷಾದ ನಮ್ಮೆಲ್ಲರದ್ದೂ ಕೂಡಾ.
ಬೋಳುವಾರರು ತಮ್ಮ ತಂಗಿಯ ಮನೆಯಿಂದ ಕಾರನ್ನು ತೆಗೆದುಕೊಂಡು ‘ಉಪ್ಪಿನಂಗಡಿಗೆ ಹೋಗೋಣ’ ಎಂದು ಹೇಳಿದ್ದರಿಂದ ದಾರಿಯಲ್ಲಿ ಆಟೊ ಹಿಡಿದು ಹೊರಟೆವು. ಅವರ ತಂಗಿ ಟೀಚರ್. ಗಂಡ ಬ್ಯಾಂಕ್‌ನಲ್ಲಿ ಮ್ಯಾನೇಜರ್. ಅವರ ಕಾರನ್ನು ಅಲ್ಲಿಗೆ ಹೋದಾಗ ಬೋಳುವಾರರು ಬಳಸುತ್ತಿದ್ದರಿಂದ ಅದನ್ನು ತೆಗೆದುಕೊಂಡು ಹೊರಟೆವು. ಸ್ವತಃ ಬೋಳುವಾರರೇ ಡ್ರೈವ್ ಮಾಡುತ್ತಿದ್ದರು. ‘ಒಂದು ಕಾರನ್ನು ಬಾಡಿಗೆಗೆ ತೆಗೆದುಕೊಳ್ಳೋಣ’ ಎಂದು ಹೇಳಿದರೂ ‘ಸುಮ್ಮನೆ ಹಣ ಯಾಕೆ ಹಾಳು ಬನ್ನಿ’ ಎಂದು ಕರೆದೊಯ್ದರು.
ದಾರಿಯಲ್ಲಿ ಬರುತ್ತಾ ಅವರು ಓದಿದ್ದ ಬೋಳುವಾರಿನ ಪ್ರೈಮರಿ ಸ್ಕೂಲು ನೋಡಲು ಗುಡ್ಡ ಹತ್ತಿದ್ದೆವು. ಗೇಟು ಲಾಕ್ ಆಗಿತ್ತು. ಪಕ್ಕದ ಸಂದಿಯಿಂದಲೇ ಒಳಗೆ ನುಗ್ಗಿದೆವು. ಅಲ್ಲಲ್ಲಿ ಬಿದ್ದ ಬೀಡಿ ತುಂಡುಗಳು ಬೋಳುವಾರರನ್ನು ಕಂಗೆಡಿಸಿತ್ತು. ಹಿಂದೆ ಬಾವಿ ಇದ್ದಿದ್ದು ಎನ್ನುತ್ತಾ ಕಥೆಯಲ್ಲಿ ಬರುವ ಬಾವಿಗಾಗಿ ಹುಡುಕಾಟ ನಡೆಸಿದರು. ಬಾವಿಯನ್ನು ಮುಚ್ಚಿಬಿಟ್ಟಿದ್ದರು. ಗುಡ್ಡದ ಕೆಳಗೆ ಅವರ ಮನೆಯಲ್ಲಿ ದಾಯಾದಿಗಳು ವಾಸವಾಗಿದ್ದಾರೆ. ಪಕ್ಕದಲ್ಲೆ ಪುಟ್ಟ ಅಂಗಡಿ. ಮನೆಯವರೆಲ್ಲ ಸೇರಿ ಮಾಡುತ್ತಿದ್ದ ಅಕ್ರೋಟಿನ ಚಾಕಲೇಟು ಫೇಮಸ್ ಆದದ್ದರ ಬಗ್ಗೆ, ತನ್ನ ತಂದೆ ಅಬ್ಬಾಸ್ ಬ್ಯಾರಿಗೆ ಅದು ತುಂಬಾ ಹೆಸರು ತಂದುಕೊಟ್ಟಿದ್ದರ ಬಗ್ಗೆ ಹೇಳಿಕೊಂಡು ಅರ್ಧ ನಕ್ಕು ಕಣ್ಣಲ್ಲಿ ನೀರನ್ನೂ ತುಂಬಿಕೊಂಡರು.
ಗೋಣಿತಟ್ಟು ಅವರ ಹೆಂಡತಿಯ ತವರು ಮನೆ. ‘ಅಲ್ಲಿ ಕೆಲ ಮಸೀದಿಗಳು ಇವೆ. ನಿಮಗೆ ಅದರಿಂದ ಉಪಯೋಗ ಆಗಬಹುದು ಲೊಕೇಷನ್ನೂ ಚೆನ್ನಾಗಿದೆ’ ಎಂದು ಹೇಳಿದ್ದರಿಂದ ನಮಗೆ ಉತ್ಸಾಹವೂ ಇತ್ತು. ಮತ್ತು ಮಸೀದಿ ವಾತಾವರಣದಲ್ಲಿ ಶೂಟಿಂಗ್ ಸಮಸ್ಯೆ ಬಗೆಹರಿಯಬಹುದು ಎಂಬ ಆಸೆಯೂ ಇದ್ದಿದ್ದರಿಂದ ನಮಗೆ ಈ ಜರ್ನಿಯಲ್ಲಿ ಕುತೂಹಲ ಉಳಿದಿತ್ತು.
ಬೆಂಗಳೂರು-ಉಪ್ಪಿನಂಗಡಿಯ ಮುಖ್ಯರಸ್ತೆಯಲ್ಲಿ ಈ ಗೋಣಿತಟ್ಟು ಸಿಗುತ್ತದೆ. ಬಸ್ಟ್ಯಾಂಡ್‌ನಲ್ಲೇ ಒಂದು ಹಳೆಯ ಹೊಟೇಲು ಸುಮಾರು ಮೂವತ್ತು ವರ್ಷ ಹಳೆಯದ್ದಿರಬೇಕು. ಬಳಸಿದ್ದರಿಂದ ಹಳೆಯ ಕುರ್ಚಿಗಳು ಪಾತ್ರೆಗಳು ದೋಸೆಯ ಚುಯ್ ಎನ್ನುವ ಸದ್ದು. ಉರಿಯುತ್ತಿರುವ ಒಲೆ ಹೀಗೆ ಪಾತುಮ್ಮ ಈ ಹೊಟೇಲಿಗೆ ರೊಟ್ಟಿಯನ್ನು ತಂದುಕೊಡುವುದಾದರೆ ಚೆನ್ನಾಗಿರುತ್ತೆ ಎಂದುಕೊಂಡೆವು. ಅದು ಅಷ್ಟು ಚೆನ್ನಾಗಿತ್ತು ಮತ್ತು ಕಾಲದ ದೃಷ್ಟಿಯಿಂದ ೯೦ರ ದಶಕಕ್ಕೆ ನಮ್ಮನ್ನು ಕೊಂಡೊಯ್ಯುತ್ತಿತ್ತು.
ನಮ್ಮ ಕಥೆಯಲ್ಲಿ ನಾವು ಪಾತುಮ್ಮ ರೊಟ್ಟಿಯನ್ನು ಹೊಂದೂ ಮಿಲಿಟ್ರಿ ಹೊಟೇಲಿಗೆ ಕೊಡುತ್ತಾಳೆ ಎಂದೇ ಬರೆದುಕೊಂಡಿದ್ದೆವು. ಈ ಹೊಟೇಲನ್ನು ನೋಡಿದ ಮೇಲೆ ಇಲ್ಲ ಇಲ್ಲಿಗಾದರೆ ಚೆನ್ನಾಗಿರುತ್ತೆ ಎಂದು ಅನ್ನಿಸಿ ಮಾನಸಿಕವಾಗಿ ಫಿಕ್ಸ್ ಆಗಿಬಿಟ್ಟೆವು. ಅಲ್ಲೇ ಬೋಳುವಾರರ ಭಾವಮೈದುನ ನಾಸಿರ್ ಕಾಯುತ್ತಿದ್ದರು. ಅಲ್ಲಿಂದ ಮುಂದೆ ರಸ್ತೆಯ ಬದಿಯಲ್ಲೇ ಇದ್ದ ಮಸೀದಿಯನ್ನು ತೋರಿಸಿದರು. ಅದು ಹೊಸ ಮಸೀದಿಯಾದ್ದರಿಂದ ಅಲ್ಲಿ ಹೆಣ್ಣು ಮಕ್ಕಳಿಗೂ ಪ್ರಾರ್ಥನೆಗೆ ಬೇರೆಯದ್ದೇ ಜಾಗವಿತ್ತು. ಅದಲ್ಲದೆ ಅಲ್ಲಿ ಮದರಸಾ ಕೂಡಾ ಇತ್ತು.
। ಇನ್ನು ಮುಂದಿನ ವಾರಕ್ಕೆ ।
0 Comments