-ಗುಂಡಣ್ಣ ಚಿಕ್ಕಮಗಳೂರು
ಕನ್ನಡ ಮತ್ತು ತುಳು ಸಾಹಿತ್ಯ ಹಾಗೂ ರಂಗಭೂಮಿಯ ಖ್ಯಾತನಾಮರಾದ , ನಮಗೆಲ್ಲರಿಗೂ ಆತ್ಮೀಯರೂ , ಹಿರಿಯರೂ ಆಗಿದ್ದ ಶ್ರೀ. ದರ್ಭೆ ಕೃಷ್ಣ ಚೌಟ ಅವರ 88 ನೇ ಹುಟ್ಟು ಹಬ್ಬದ ಸ್ಮರಣಾರ್ಥ ರಂಗ ಚಂದಿರ ಸಂಸ್ಥೆಯು ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಂಗ ಗೌರವದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಶ್ರೀ ಚೌಟ ಅವರ ಮೇರು ಕೃತಿ ಮಿತ್ತಬೈಲ್ ಯಮುನಕ್ಕ ಕಾದಂಬರಿ ಆಧರಿಸಿದ ನಾಟಕ ಪ್ರಯೋಗವನ್ನು ರಂಗ ಪಯಣ ಸಂಸ್ಥೆಯು ಪ್ರದರ್ಶನ ಮಾಡಿತು.
ಬಸವರಾಜ ಸೂಳೇರಿಪಾಳ್ಯ ಅವರ ರಂಗರೂಪದ ಈ ನಾಟಕವನ್ನು ಖ್ಯಾತ ಸಂಗೀತ ಮತ್ತು ರಂಗ ನಿರ್ದೇಶಕ ರಾಜಗುರು ಅವರು ನಿರ್ದೇಶಿಸಿದ್ದರು.
ಅವಶ್ಯಕತೆ ಗೆ ತಕ್ಕಷ್ಟು ರಂಗ ಸಜ್ಜಿಕೆ ಹಾಗೂ ಬೆಳಕಿನ ವಿನ್ಯಾಸದ ಈ ನಾಟಕದಲ್ಲಿ, ಕಾದಂಬರಿಯ ಪ್ರಭಾವಶಾಲಿ ಮತ್ತು ಮುಖ್ಯ ಪಾತ್ರವಾದ ಯಮುನಕ್ಕೆಯಾಗಿ ನಮ್ಮ ನಡುವಿನ ರೆಬೆಲ್ ನಟಿ ನಯನ ಸೂಡಾ ಅವರು ನಟಿಸಿದರು.
ಅಂದಾಜು 30 ಕ್ಕೂ ಹೆಚ್ಚು ನಟ- ನಟಿಯರು ಅಭಿನಯಿಸಿದ ಈ ನಾಟಕದಲ್ಲಿ, ಇಂದಿನ ದಿನಮಾನಗಳಲ್ಲಿ ಅಷ್ಟು ಜನರ ತಂಡವನ್ನು ಕಟ್ಟುವುದು ಮತ್ತು ಪ್ರದರ್ಶನಕ್ಕೆ ಸಜ್ಜು ಗೊಳಿಸುವುದು ಸವಾಲಿನ ಚಟುವಟಿಕೆಯೇ ಸರಿ. ಇದನ್ನು ಸಮರ್ಥವಾಗಿ ನಿರ್ವಹಿಸಿದ ರಂಗ ಪಯಣ, ರಾಜಗುರು ಮತ್ತು ನಯನ ಅವರುಗಳಿಗೆ ಅಭಿನಂದನೆಗಳು…

ಮಿತ್ತಬೈಲು ನಾಟಕದ ಪ್ರಮುಖ ಪಾತ್ರಗಳಾದ ಯಮುನಕ್ಕ, ತ್ಯಾಂಪಣ್ಣ, ಆಚಕ್ಕ, ಸರ್ವೋದಯ ಚಳುವಳಿಯ ನಾಯಕ
ಮುಂತಾದ ಪಾತ್ರಗಳನ್ನು ನಿರ್ವಹಿಸಿದ ಕಲಾವಿದರು ನಿಜಕ್ಕೂ ಪ್ರಶಂಸನೀಯರು. ಈ ಎಲ್ಲ ಪಾತ್ರಗಳು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಮಾತನಾಡಿ ಅಭಿನಯಿಸಿದ್ದು ಪ್ರೇಕ್ಷಕರನ್ನು ಬೆರಗು ಗೊಳಿಸಿತು. ನಾಟಕದ ಉದ್ದಕ್ಕೂ ದೈಹಿಕ ಮತ್ತು ಧ್ವನಿಯ ಶಕ್ತಿ ಸಾಮರ್ಥ್ಯವನ್ನು ಬೇಡುವ ಯಮುನಕ್ಕೆಯ ಪಾತ್ರದಲ್ಲಿ ಅಭಿನಯಿಸಿದ ನಯನ ಅವರ ಅಭಿನಯ ಇಡೀ ನಾಟಕದ ಪ್ರಸ್ತುತಿಗೆ ಜೀವ ತುಂಬಿತು. ನಾಟಕ ಪ್ರಯೋಗದ ಮಟ್ಟ ಎಲ್ಲೂ ಕೆಳಗೆ ಬಾರದಿರುವ ಹಾಗೆ ಒಟ್ಟಾರೆ ಪ್ರದರ್ಶನವನ್ನು ಹಿಡಿದಿಟ್ಟಿತ್ತು.
ಹಣ ಮತ್ತು ಅಧಿಕಾರವನ್ನು ಸಹಜವಾಗಿ ಹೊಂದಿರುವ ಗುತ್ತಿ ಮನೆಯ ಯಜಮಾನಿಯ ಸಹಜ ಗತ್ತು, ದುರಹಂಕಾರ ಮತ್ತು ಸಮಸ್ಯೆಗಳನ್ನು ಗೆಲ್ಲುವ ಚಾಣಾಕ್ಷ ಬುದ್ದಿವಂತಿಕೆಯ ಅಭಿನಯದಲ್ಲಿ, ನಯನ ತಮ್ಮ ನಿಜವಾದ ಎತ್ತರಕ್ಕಿಂತಲೂ ಎತ್ತರಕ್ಕೆ ಯಮುನಕ್ಕೆಯಾಗಿ ಬೆಳೆದರು.
ಅಷ್ಟೇ ಪ್ರಮುಖ ಪಾತ್ರ, ಆದರೆ ತಣ್ಣಗೆ ಯೋಚಿಸಿ, ಯಮುನಕ್ಕೆಗೆ ಸಡ್ಡು ಹೊಡೆಯುವ ಕೆಳ ವರ್ಗದ ತ್ಯಾಂಪಣ್ಣನ ಪಾತ್ರದಲ್ಲಿ ಮುರುಡಯ್ಯ ಪ್ರೇಕ್ಷಕರ ಮುಂದೆ ಜೀವಿಸಿ ಅಭಿನಯಿಸಿದರು. ಭೂ ರಹಿತ ಗೇಣಿಗೆದಾರನ ನೋವು, ಗೇಣಿಯ ಭೂಮಿ ಕಳೆದುಕೊಳ್ಳುವಾಗಿನ ನೋವು ಮತ್ತು ಆಕ್ರೋಶ ಇವುಗಳ ಅಭಿನಯದ ಸಮಯದಲ್ಲಿ, ಪ್ರೇಕ್ಷಕರನ್ನೂ ತಮೊಟ್ಟಿಗೆ ಕರೆದೊಯ್ದರು. ತ್ಯಾಂಪಣ್ಣನ ಸಡ್ಡು ಹೊಡೆಯುವ ಪಾತ್ರದೊಟ್ಟಿಗೆ ಅಸಹಾಯಕತೆ ಯ ಚೋಮ ಮತ್ತು ಅವನ ಭೂಮಿ ಕನಸನ್ನೂ ನಮ್ಮ ಕಣ್ಣ ಮುಂದೆ ಕಟ್ಟಿಕೊಟ್ಟರು.
ಆಚಕ್ಕನಾಗಿ ಗೀತಾ ಸುರತ್ಕಲ್ ತಮ್ಮ ಪಾತ್ರ ಬೇಡುವ ಅಭಿನಯವನ್ನು ಸಹಜವಾಗಿ ನೀಡಿ, ತಮ್ಮ ಪಾತ್ರಕ್ಕೆ ಬೆರಗು ತಂದರು.
ತ್ಯಾಂಪಣ್ಣ ಯಮುನಕ್ಕನ ಕಡೆಯವರ ಮೇಲೆ ಜಗಳಕ್ಕೆ ಕತ್ತಿ ಹಿರಿದು ಹೊರಟು ನಿಂತಾಗ, ಯಾರ ಮಾತಿಗೂ ಬಗ್ಗದೆ, ತಾನು ಮಾಡುವುದೇ ಸರಿ ಎಂಬ ಉನ್ಮಾದದಲ್ಲಿ ಮುನ್ನುಗ್ಗುವಾಗ, ಆಚಕ್ಕ ಅವನನ್ನು ತಹಬಂದಿಗೆ ತರುವ ದೃಷ್ಯ ಹಾಗೂ ಗೀತಾ ಅವರು ಹೇಳುವ ಮಾತುಗಳ ದೃಷ್ಯ ಬಹಳ ಪರಿಣಾಮಕಾರಿಯಾಗಿ ಮೂಡಿಬಂತು. ಅದೇ ರೀತಿ, ಯಮುನಕ್ಕನ ಬಳಿ ಸೆರಗೊಡ್ಡಿ, ತಮ್ಮ ಭೂಮಿಯ ಹಕ್ಕನ್ನು ಉಳಿಸಿಕೊಡಲು ಬೇಡುವ ದೃಶ್ಯ ಮನೋಘ್ನವಾಗಿ ಮೂಡಿಬಂತು.
ಸರ್ವೋದಯ ಚಳುವಳಿಯ ನಾಯಕನಾಗಿ ಬಿ ಜಿ ರಾಮಕೃಷ್ಣ , ಬಹಳ ಸಹಜ ಅಭಿನಯ ನೀಡಿದರು. ಸರ್ವೋದಯ ಚಳುವಳಿಯ ಮುಂದಾಳಿಗೆ ಬೇಕಾಗಿರುವ ಸರಳ ನಡತೆ ಅವರ ಮಾತು ಮತ್ತು ಆಂಗಿಕ ಅಭಿನಯದಲ್ಲಿ ಪ್ರೇಕ್ಷಕರಿಗೆ ನೇರ ತಲುಪಿತು. ಯಮುನಕ್ಕನಿಗೆ ಪರರ ಆಸ್ತಿಯ ಮೇಲೆ ವ್ಯಾಮೋಹ ಮತ್ತು ದ್ವೇಷ ಬೇಡ ಎಂದು ಹಿತವಚನ ಹೇಳುವ; ತ್ಯಾಂಪಣ್ಣನ ಮನೆಯಲ್ಲಿ ಅವನ ಕೋಪಕ್ಕೆ ಗುರಿಯಾಗುವ ಸನ್ನಿವೇಶದ ಅಭಿನಯ ಆ ಪಾತ್ರವನ್ನು ವಿಶಿಷ್ಟ ವಾಗಿಸಿತು. ಆ ಪಾತ್ರಕ್ಕೆ, ಬಿ ಜಿ ರಾಮಕೃಷ್ಣ ಅವರಿಗಿಂತ ಸೂಕ್ತ ನಟ ಸಿಗುತ್ತಿರಲಿಲ್ಲ ಎನಿಸಿತು.
ನಾಟಕದ ಗುಂಪು ಕಲಾವಿದರೂ ಸಹ ಅತ್ಯಂತ ಶಿಸ್ತಿನಿಂದ, ಎಲ್ಲರೂ ಒಬ್ಬರೇ ಕಲಾವಿದರೇನೋ ಅನ್ನುವ ರೀತಿಯಲ್ಲಿ ಅಭಿನಯಿಸಿದ್ದು, ಇಡೀ ಗುಂಪನ್ನು ಸಂಯೋಜಿಸಿದ ನಿರ್ದೇಶಕರ ಜಾಣ್ಮೆ ಮತ್ತು ಶ್ರಮವನ್ನು ಗುರುತಿಸಿ, ಗೌರವಿಸಲೇ ಬೇಕು.
ಹಲವು ದೃಶ್ಯಗಳಿಗೆ ಅವಶ್ಯಕತೆ ಇದ್ದ ಆವೇಶ ಮತ್ತು ರೋಷಗಳನ್ನು ಹಾಡಿನ ಸ್ವರ- ಲಯಗಳಲ್ಲಿ ಮೂಡಿಸಿ, ದೃಷ್ಯವನ್ನು ಹೆಚ್ಚು ಶ್ರೀಮಂತ ಗೊಳಿಸಿದ ರಾಜಗುರು ಅಭಿನಂದನಾರ್ಹರು.
ಕೆಲವು ಸನ್ನಿವೇಶಗಳಲ್ಲಿ ಸಂಗೀತವೇ, ನಾಟಕದ ದೃಷ್ಯಗಳಿಗಿಂತ ಏರು ಸ್ಥಿತಿಯಲ್ಲಿತ್ತು. ಅಂತಹ ಸನ್ನಿವೇಶಗಳನ್ನು ಗುರುತಿಸಿ, ಸಂಗೀತದ ಮಟ್ಟನ್ನು ಕಡಿಮೆಗೊಳಿಸುವುದು ಒಳಿತು ಅನ್ನಿಸುತ್ತದೆ.
ಡಿ ಕೆ ಚೌಟ ಅವರ ಸಾಹಿತ್ಯಕ ಕೊಡುಗೆ, ಅವರ ರಂಗಭೂಮಿ ಕಳಕಳಿ ಮುಂತಾದ ನೂರು ಮಾತುಗಳಿಗಿಂತ, ಅವರದ್ದೇ ಆದ ಕಾದಂಬರಿಯನ್ನು ಪ್ರಯೋಗಕ್ಕೆ ಒಳಪಡಿಸಿ, ಪ್ರದರ್ಶಸಿ, ಚೌಟ ಅವರ ಸಾಮಾಜಿಕ ವ್ಯಕ್ತಿತ್ವ, ಸಾಂಸ್ಕೃತಿಕ ಬದ್ದತೆಗಳನ್ನು ಸಮಗ್ರವಾಗಿ ಪರಿಚಯಿಸಿ, ಚೌಟರನ್ನು ಮತ್ತೆ ನಮ್ಮ ಮನಸ್ಸಿನ ಅಂಗಳದಲ್ಲಿ ಸ್ಥಾಪಿಸಿದ ಒಟ್ಟಾರೆ ಕಾರ್ಯಕ್ರಮಕ್ಕೆ ರಂಗಚಂದಿರ, ಜಿ ಪಿ ಒ ಚಂದ್ರು ಮತ್ತು ಗೆಳೆಯರು ಹಾಗೂ ರಂಗಪಯಣದ ಎಲ್ಲ ಕಲಾವಿದರು, ರಾಜಗುರು, ನಯನ ಹಾಗೂ ಎಲ್ಲರೂ ಸುತ್ಯಾರ್ಹರು….
ಮಿತ್ತಬಯಲು ಹೆಚ್ಚು ಪ್ರದರ್ಶನಗಳನ್ನು ಕಾಣಲಿ ಎಂಬ ಆಶಯದೊಂದಿಗೆ






0 Comments