ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನೆಲ ಕೆದರಿದ ನಾಯಿ ಕಾಲು’

ಬಿದಲೋಟಿ ರಂಗನಾಥ್

**

ನಿತ್ರಾಣಗೊಂಡು

ಒದ್ದಾಡುವ ಆ ಹಕ್ಕಿಯ ಮರಿಯ ಜೀವ

ಗಾಯಗೊಂಡಿದೆ

ಶುಶ್ರೂಷೆ ಮಾಡುವ ಕೈಗಳು

ಮಗ್ಗಲ ಹಾದಿ ಹಿಡಿದಿವೆ

ಹಸಿವೆನ್ನುವ ಉಸಿರ ಹೊತ್ತ ಅವ್ವ

ನೆಮೆಯುತ್ತಿದ್ದಾಳೆ

ಬಯಲ ಸೇರಿದೆ ಗಾಳಿಯೊಂದಿಗೆ

ಕಣ್ಣಗುಡ್ಡೆಯ ಕನಸುಗಳು

ಹಾದಿ ಮೇಲಿನ ಮಿಣುಕು ದೀಪ

ಮರದ ಟೊಂಗೆಯಲಿ ನಿಂತು ಕೂಗಿವೆ

ಹಕ್ಕಿಗಳು ಒದ್ದೆಗಣ್ಣುಗಳನ್ನು ಹೊತ್ತು

ಈ ಹಕ್ಕಿಗೋ ಹಿಡಿ ಜೀವ ಬಾಯಿಗೆ ಬಂದಿದೆ

ದೂರದಲ್ಲಿ ಇರುವೆ ಸಾಲಿನ ಮೆರವಣಿಗೆ

ಇತ್ತಲೆ ದಾವಿಸಿ ಬರುತ್ತಿದೆ

ವಾಸನೆ ಹಿಡಿದ ಮೂಗನ್ನು ಉಜ್ಜಿಕೊಳ್ಳುತ್ತ

ಗುಟುಕು ನೀರಿಗಾಗಿ

ಬಾಯಿ ತೆರೆ ತೆರೆದು ಮುಚ್ಚುತ್ತಿದೆ

ಒದ್ದಾಡುವ ಹಕ್ಕಿ ಮರಿ

ಮನುಷ್ಯ ಕುಲದ ಕೈಗಳಲ್ಲೂ ಹಸಿವು

ಮೆತ್ತಿಕೊಂಡಿದೆ

ಮುಟ್ಟಲು ಇದರಲ್ಲಿ ನೆಣವಿಲ್ಲ

ಜೀವ ಉಳಿಸಲು ಮನಸಿಲ್ಲ

ಬೆಳಗ್ಗೆ ಬಿಸಿಲು ಬಿದ್ದರೂ

ಕೊರಗಿ ಸೊರಗುವ ಮರಿಗೆ ಅಮ್ಮನ ನೆನಪು

ನೆಲ ಕೆದರಿದ ನಾಯಿ ಕಾಲು

ಮರಿಗೆ ತಾಕಿ ರಸ್ತೆ ಬದಿಯ ಗುಂಡಿಗೆ ಉರುಳಿ

ಸಣ್ಣ ರೆಕ್ಕೆಯು ಉಸಿರಾಡಿದರೂ

ಹಾರಲು ಚೈತನ್ಯವಿಲ್ಲ

ಸಣ್ಣ ನಾಲಿಗೆಯು ನೀರು ನೆಕ್ಕಿದೆ

ಕಣ್ಣಲ್ಲಿ ಹೊಳಪಿದೆ

ಮೈನಡುಗಿಸಿ ನಿಂತಿದೆ

ಹೊತ್ತೋದರೆ ನೀರು ಸಾವಿನ ದವಡೆಯೇ

ಕಣ್ಣಾಗಿದೆ ಅಮ್ಮನ ದಾರಿಗೆ

ಕೂಗಲು ದನಿಯಿಲ್ಲ ಮಿಗಿಲಾಗಿ ಬಲಿತಿಲ್ಲ

ಯಾವೂರ ಬಳಸಿ ಬರುತ್ತಿದ್ದಾಳೋ ಅಮ್ಮ

ಟೊಂಗೆಯ ಮೇಲಿನ ಗೂಡು ಖಾಲಿ!

ದವಡೆಯಲ್ಲಿ ಕಾಳು

ಮಡಿಲಲ್ಲಿಲ್ಲ ಮಗು

ಕೂಗಿ ಕರೆಯಿತು ಗೂಡನ್ನು ಕೆಡವಿ

ಚಕ್ರತಿರುಗಿ ಸ್ವರ ಮೀಟುತ್ತಲೇ ಇತ್ತು

ತಿಳಿಯಿತು ಮರಿಗೆ ತನ್ನಮ್ಮ ಬಂದಿರುವ

ಸುಳಿವು

ಕೂಗಲು ಗಂಟಲಲ್ಲಿ ಸ್ವರವಿಲ್ಲ

ಬಡಿಯಲು ರೆಕ್ಕೆ ಬಲಿತಿಲ್ಲ

ದಬಾರನೆ ಮುಳುಗೆದ್ದ ಮೀನು ಸಿಡಿಸಿದ

ನೀರ ತುಣುಕೊಂದು

ಹಕ್ಕಿ ಮರಿಯ ಅಮ್ಮನ ಕಣ್ಣಿಗೆ ಬಿದ್ದು

ಕಣ್ಣಾಸಿತು ಕಟ್ಟೆಯತ್ತ..!

‍ಲೇಖಕರು Admin MM

6 March, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading