ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆನಪಿನ ಹೂಜಿ ಜಾರಿ ಬೀಳಲಿ…

ಸದಾಶಿವ್ ಸೊರಟೂರು

ಪ್ರತಿ ಕನಸಿನಲ್ಲೂ ಮೂಡುವ
ಚಿತ್ರಗಳ ಮೂಲೆಯಲ್ಲಿ
ಢಾಳಾಗಿ ಕಾಣುವ
ವೃತ್ತಾಕಾರದ ಸೀಲು
ನಿನ್ನದಾ?

ನಿನ್ನದೇ ಇರಬೇಕು
ಯಾರ-ಯಾರದೊ ಕನಸಿನಲ್ಲಿ
ನೀನು ನಡೆಯುವವಳಲ್ಲ
ವಿಳಾಸವಿಲ್ಲದ ಕನಸುಗಳಿಗೆ
ನುಗ್ಗುವುದಾದರೂ ಹೇಗೆ?

ಶೋಕೇಸಿನಲ್ಲಿ
‘ಕಣ್ಣೀರ ಹನಿ’ ಮೋಡ್
-ನಲ್ಲಿರುವ ಹೂಜಿಯಲ್ಲಿ
ತುಂಬಿರುವ ನೆನಪಿಗೂ
ಕನಸಿನೊಳಗಿನ ಚಿಹ್ನೆಗೂ
ಬಾರಿ ಹೋಲಿಕೆ ಕಂಡಿದೆ

ಹೇಳು ಅದೇ ಹೂಜಿ ಬಟ್ಟಲಲ್ಲಿ
ತಾನೇ
ನಾವಿಬ್ಬರು ಮಧು ಕುಡಿದಿದ್ದು
ಸಾಕು ಸಾಕು ಅಂದರು
‘ಸಾಕಿ’ಯು ಸುರಿಯುತ್ತಲೇ
ಇದ್ದಳು ಅಲ್ಲವಾ?

ಎಲ್ಲಾ ನೆನಪುಗಳನ್ನು ಗುಡ್ಡೆ
ಹಾಕಿ ‘ಫೈರ್ ಕ್ಯಾಂಪ್’ ಮಾಡಿದಾಗ
ಆ ಹೂಜಿಯೊಂದು ಉಳಿದು
ಹೋಗಿದೆ ನೋಡು,‌
ಪದೇ ಪದೇ ನನ್ನ ಸೋಲನ್ನು
ನೆನಪಿಸುತ್ತಾ..

ಅದು ಜಾರಿ ಬೀಳಲಿ ಅಂತ
ಸದಾ ಆಶಿಸುತ್ತೇನೆ
ಆದರೂ
ಮತ್ತೆ ಮತ್ತೆ ಒರೆಸಿ
ಶೋಕೆಶಿನಲ್ಲಿಡುತ್ತೇನೆ

ಶಾಲಾ ದಾಖಲಾತಿಯಲ್ಲಿರುವಂತೆ
ಇನ್ಶಿಯಲ್ ಸಮೇತ ಇರುವ
ನಿನ್ನ ಮದುವೆ ಕಾರ್ಡನ್ನು
ಶೋಕೆಶಿನಲ್ಲಿಡುವಾಗ
ಹೂಜಿ ಬಿದ್ದಿದ್ದು ಎಂತಹ ಕಾಕತಾಳೀಯ!

ಬಿದ್ದ ಚೂರುಗಳನ್ನೆಲ್ಲಾ
ಆಸೆ ಬುರುಕನಂತೆ ಬಾಚಿಕೊಳ್ಳುವಾಗ
ನೆನಪುಗಳು ಕೈಗೆ ಚುಚ್ಚಿ
ಕೈತುಂಬಾ, ನೆಲದ ತುಂಬಾ ರಕ್ತ

ನೀನು ಅವತ್ತು ಕೊಟ್ಟ
ಮುತ್ತಿನಂತೆಯೇ ಈಗ
ಕೈ ತುಂಬಾ ಕೆಂಪು ಬಣ್ಣದ ರಂಗು
ಮತ್ತು ಅದನ್ನು ತೊಳೆಯಲು
ಪ್ರಯತ್ನಿಸುತ್ತಿದ್ದ ಬಿಸಿ ಕಣ್ಣೀರು!

‍ಲೇಖಕರು Avadhi

23 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading