ಬ್ಯಾಸ್ರಕ್ಕ ಬಕ್ರ ಆಗೋದಂದ್ರೆ… ಹೀಗೆ…

ಪಿ.ಎಸ್.ಅಮರದೀಪ್

ಆಸ್ರಕ್ಕ ಬ್ತಾಸ್ರಕ್ಕ ಅಂದ್ರೆ ಫ್ರೆಂಡ್ಸ್ ಇರಬೇಕು. ಒಳ್ಳೇದಕ್ಕೂ ಕೆಟ್ಟದಕ್ಕೂ. ಒಳ್ಳೇದಾದ್ರೆ ಬಹುಪರಾಕ್ ಹೇಳೋಕೂ ಇರ್ತಾರೆ‌.  ಕೆಟ್ಟದ್ದಾದ್ರೆ ಬೈದು ಬುದ್ಧಿ ಹೇಳೋದಿಕ್ಕೆ. ಕೆಲವೊಮ್ಮೆ ಕೆಟ್ಟದ್ದಾಗಿದ್ರೆ, ಅದನ್ನು ಸಮರ್ಥನೆ ಮಾಡ್ಸೊದಿಕ್ಕೂ ಇರ್ತಾರೆ‌.  ಇಲ್ಲಾ, ‘ಏನೂ ಚಿಂತಿ ಮಾಡ್ಬ್ಯಾಡ ಮಗಾ, ನಾವಿದೀವಿ’ ಅಂತಾದ್ರೂ ಅನ್ನಲೂ… ಗಮನಿಸಿ ನೋಡಿ, ಆಕಸ್ಮಿಕವಾಗಿ ಕೆಟ್ಟದ್ದಾಗಿದ್ರೆ  ಅದಕ್ಕೆ ಧೈರ್ಯ ಹೇಳೋದ್ರಲ್ಲಿ ಅರ್ಥ ಇರುತ್ತೆ. ಕೆಲವೊಮ್ಮೆ ಆಟಿಟ್ಯೂಡ್ ತುಂಬಿ ಮಾಡಿಕೊಂಡ ಎಡವಟ್ಟುಗಳನ್ನು ಯಾರಾದರೂ ಹೇಗೆ ಸಹಿಸಿಕೊಳ್ತಾರೆ ಹೇಳಿ?  ಅದು ದುಡಿಮೆಯದೂ ಇರಬಹುದು. ಬದುಕಿನದಾದರೂ ಸರಿ.

ನಮ್ಮಲ್ಲೊಬ್ಬ ಗೆಳೆಯನಿದ್ದಾನೆ‌. ಹತ್ತತ್ತಿರ ಐವತ್ತು ಅವನ ವಯಸ್ಸು… ಈಗೊಂದು ಇಪ್ಪತ್ತೈದು ವರ್ಷಗಳ ಹಿಂದೆ ಟ್ರಾವೆಲ್ ಏಜೆನ್ಸಿ ಮಾಡ್ಕೊಂಡಿದ್ದ, ಆರಾಮಾಗೇ. ಆದರೆ ಬರುಬರುತ್ತಾ ದುಡಿಮೆ ಕಡೆಗೆ ಸೋಮಾರಿತನ ಒಕ್ಕರಿಸಿಕೊಂಡು ದುಡಿಯುವುದೂ ಬಿಟ್ಟ. ಬೇರೆ ಬೇರೆ ಕಡೆ ಇದ್ದ ದುಡ್ಡು ಹಾಕಿ ಕೈ ಮತ್ತೊಂದು ಸುಟ್ಟುಕೊಂಡ. ಇಷ್ಟು ವರ್ಷಗಳಲ್ಲಿ ಮದುವೆಯೂ ಕನಸಾಗಿ ಹೋಯ್ತು. ಅಲ್ಲಿಲ್ಲಿ ಕನ್ಯಾ ನೋಡಲು ಹೋದರೆ ವಯಸ್ಸಾಗಿರುವುದು ಒಂದು ಸಮಸ್ಯೆ ಆದ್ರೆ ಇನ್ನೊಂದು ದುಡಿಮೆ ಇಲ್ಲದಿರೋದು. ಯಾರು ಕೊಡ್ತಾರೆ ಕನ್ಯೆ?!!
ಕೆಲವೇ ಸ್ನೇಹಿತರಲ್ಲಿ ಅವನು ಆಗೀಗ ಮಾತಾಡುತ್ತಾನೆ. ಕೇಳಿದರೆ, ‘ಹೊಸ್ದಾಗಿ ಬಿಜಿನೆಸ್ ಪ್ಲಾನ್ ಮಾಡಿದೀನಿ, ಇಷ್ಟರಲ್ಲೇ ಹೇಳ್ತೀನಿ’ ಅನ್ನುತ್ತಾನೆ. ಈ ಮಾತನ್ನು ಕೇಳುವ ಆರಂಭದಲ್ಲಿ ಹೊಸದಾಗಿ ನಾನು ಮಧುಮಗನಾಗಿದ್ದೆ… ಈಗಲೂ ಅವನದು ಅದೇ ಮಾತು. 

ಇನ್ನು ಮೂರು ತಿಂಗಳು ಕಳೆದರೆ ನನ್ನ ಮಗ ಪಿಯೂಸಿಗೆ ಸೇರುತ್ತಾನೆ. ಬಿಡಿ, ಅವನದಲ್ಲ ಸಧ್ಯದ ವಿಷ್ಯ… ಅವನು ಆಗಾಗ ಕಾಲ್ ಮಾಡ್ತಿದ್ದನಲ್ಲ ಗೆಳೆಯ? ಅವನ ಬಗ್ಗೆ. ‌‌ಅವನೂ ನನ್ನ ಸಹಪಾಠಿ. ನಮ್ಮ ಕಾಲೇಜ್ ಗ್ರೂಪ್ ನಲ್ಲಿ   ಒಬ್ಬ (ನಾಗ್ಯಾ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉನ್ನತ ಹುದ್ದೆಯಲ್ಲೊಬ್ಬ.. ಇನ್ನೊಬ್ಬ ( ಸುಬ್ಬ್ಯಾ) ಹೈಸ್ಕೂಲ್ ಹೆಡ್ ಮಾಸ್ತರ. ನಾನು ಮತ್ತು ಸಧ್ಯದ ಲೇಖನದ ರುವಾರಿ ಗೆಳೆಯ ರವಿ ಮಾತ್ರ ಬಹು ಬೇಗ ಸರ್ಕಾರಿ ನೌಕರಿಗೆ ಸೇರಿಕೊಂಡವರು.‌ ಆಗಿಂದ ಸಂಪರ್ಕದಲ್ಲಿದ್ದೇವೆ, ಎಲ್ಲರೂ. ಬಾಕಿ ಸ್ನೇಹಿತರಲ್ಲಿ ವ್ಯವಹಾರ ಮತ್ತೊಂದು ಮಾಡುತ್ತಿದ್ದಾರೆ.

ಯಾವಾಗ ಫೋನಲ್ಲಿ ಸಿಕ್ಕಿದರೂ ಅರ್ಧರ್ಧ ಗಂಟೆ ಹರಟೆ ಮಾಮೂಲು. ಆದರೆ, ನಮ್ಮ ನಮ್ಮಲ್ಲಿ  ಫೈನಾನ್ಸ್ ಪೊಜಿಷನ್ನು ಪಲ್ಟಿ ಹೊಡೆಯೋದು ಕಾಮನ್ನು. ಆಗ ಮಾತ್ರ ಎಲ್ಲರಿಗೂ ದುಡ್ಡು ಕೊಡುವವನಲ್ಲ ರವಿ. ಕೊಟ್ಟರೂ ಲೆಕ್ಕ, ದಿನಾಂಕ ಎಲ್ಲಾ ಪಕ್ಕ.. ಅದಿರಬೇಕಾದ್ದೇ‌. ದುಡ್ಡು ಕೇಳುವ ಆ ಸಮಯವೊಂದನ್ನು ಬಿಟ್ಟರೆ ಬಾಕಿ ಯಾವಾಗ ಕಾಲ್ ಮಾಡಿದರೂ ಪಕ್ಕಾ ಹರಟೆಯೇ ಅದು. ‘ಅವ್ನು ಫೋನ್ ಮಾಡಿದ್ದ ಕಣಲೇ’ ಅನ್ನೋನು… 

ನನ್ನದೂ ನಿತ್ಯ, ಕ್ಷಮಿಸಿ ತಿಂಗಳಿಗೊಮ್ಮೆ ಪಡೆಯುವ ಸಂಬಳಕ್ಕಾಗಿ ಬಂಗಾರದ ಮನುಷ್ಯ ಸಿನಿಮಾದ ‘ದುಡಿಮೆಯ ನಂಬಿ ಬದುಕು’ ಹಾಡಿನಂತೆ. ಹಾಗೂ ಬಸವಣ್ಣನವರ ವಚನ ‘ಕಾಯಕವೇ ಕೈಲಾಸ’ ದಂತೆ. ಆಗಾಗ ಚೂರು ಬದಲಾಗಿ ‘ಕಾಯಕವೂ ಕೈಸಾಲ’ ಎಂಬಂತಾಗಿ ನಾನೂ ಕೇಳುತ್ತಿರುತ್ತೇನೆ. ಅವನೂ ಲೆಕ್ಕವಿಟ್ಟು ಕೊಡುತ್ತಾನೆ. ನಾನೂ ವಾಪಾಸು ಕೊಡುತ್ತೇನೆ… ನಂತರ ಮತ್ತೆ ಹರಟೆ, ನಗು ಇದ್ದಿದ್ದೇ.. ಗೆಳೆತನದಲ್ಲಿ ವ್ಯವಹಾರ ಇರಬಾರದು ಎನ್ನುತ್ತಾರೆ. ಆದರೆ, ಸಣ್ಣಪುಟ್ಟ ಸಹಾಯ ಮಾಡುವ ಇಂಥ ಗೆಳೆಯರು ಎಲ್ಲರ ಮಧ್ಯೆಯೂ ಇರುತ್ತಾರೆ.

ಇನ್ನೂ ಮದುವೆಯಾಗಿ ನಮ್ಮಂತೆ ಮುಠ್ಠಾಳನಾಗದ ಗೆಳೆಯನ ಬಗ್ಗೆ ಮೊನ್ನೆ ನಾನು, ರವಿ ಏನೇನೋ ಮಾತಾಡುತ್ತಾ ನಗುತ್ತಿದ್ದೆವು. ಹಾಗಂತ ಗೇಲಿ ಮಾಡತ್ತೇವೆಂದಲ್ಲ, ಗೆಳೆಯನಿಗೆ ಕಾಳಜಿಯಿಂದಲೇ ಗದರುವ ಶೈಲಿಯಲ್ಲಿರುತ್ತದೆ ನಮ್ಮಿಬ್ಬರ ಮಾತು. ಉಪಸಂಹಾರವಾಗಿ ನಾನು‌ ಕೈಸಾಲ ಕೇಳಿದೆ.
 ‘ಎಷ್ಟು?’ 
‘ಐದ್ಸಾವ್ರ’
‘ಆಯ್ತು.’
ಅದಾಗಿ ಒಂದಿನ ರವಿ ಫೋನಿಲ್ಲ. ಮರುದಿನ ಸಂಜೆ ಮೆಸೇಜ್ ಬಂತು… ಗೂಗಲ್ ಪೇ ಗೆ ನೂರು ರುಪಾಯಿ ಬಂದಿತು.  ನೋಡಿದೆ… ರವಿ ಕಳ್ಸಿದ್ದ. ‘ಬಂತಲೇ’ ಅಂದೆ. ನಂತರ 4900/- ಹಾಕಿದ, ಅದೂ ಬಂತು… ದುಡ್ಡು ಬಂದಿದೆ ಎಂದು ತಿಳಿಸಲು ರವಿಗೆ ಕಾಲ್ ಮಾಡಿದೆ, ಅಷ್ಟೇ…

‘ಏನ್‌ ಮಗಾ, ಎಷ್ಟು ತಿಂಗ್ಳಾದ್ವಲ್ಲೋ ಮಾತಾಡಿ, ಮತ್ತೇನ್ ಸಮಾಚಾರ, ಆರಾಮಿದೀಯಾ? ಮಕ್ಳು ಆರಾಮಾ? ಆಫೀಸಲ್ಲಿ ಏನ್‌ ಕಿರಿಕಿರಿ ಇಲ್ವಲ್ಲಾ?’ ಕೇಳಿದ. ಏನೋ ಎಡವಟ್ಟಾಗ್ತಿದೆಯಲ್ಲಾ? ಅನ್ನಿಸ್ತು. ಅಲ್ಲೋ ನಿನ್ನೆ‌ ತಾನೇ ಎಂಟು ಬಾರಿ ಕಾಲ್ ಮಾಡಿ ಮಾತಾಡಿದೀವಿ. ಈಗತಾನೇ ದುಡ್ಡು ಗೂಗಲ್ ಪೇ ಮಾಡಿದೀಯಾ. ಐದು ನಿಮಿಷದ ಹಿಂದೆ ನೂರು ರುಪಾಯಿ ಬಂತು‌ ಅಂತ ಹೇಳಿದೀನಿ. ಈಗ ನೋಡಿದ್ರೆ ಎಷ್ಟು ತಿಂಗ್ಳಾಯ್ತು ಮಾತಾಡಿ ಅಂತಿದೀಯಾ?  ಏನಾಯ್ತು… ಕೇಳಿದೆ.  

‘ನಾನಾ? ನಿಂಜೊತೆ ಮಾತಾಡಿದ್ನಾ? ಯಾವಾಗ? ಇಲ್ಲ ಕಣಲೇ, ಬೆಳಿಗ್ಗೆಯಿಂದ ತಲ್ನೋವು, ಈಗತಾನೇ ಆಫೀಸಿಗೆ ಬಂದಿದೀನಿ. ನಾನ್ಯಾವಾಗ ನಿಂಗೆ ದುಡ್ಡು ಕಳ್ಸಿದೆ? ಇಲ್ಲ ಬಿಡಲೇ, ಸುಳ್ಳು ಹೇಳ್ಬೇಡ. ನವೆಂಬರ್‌ ತಿಂಗ್ಳಲ್ಲಿ ಮಾತಾಡಿದ್ದು ನೀನು… ಮೂರು ತಿಂಗಳು ನಂತರ ಇವತ್ತೇ ನೀನು ಮಾತಾಡ್ತಿರೋದು.’ ಅಂದುಬಿಟ್ಟ… 

ಒಂದು ನಿಮಿಷ ನನಗೆ ಗಾಬರಿ.. Alzheimer ಪೇಷೆಂಟೇನಾದ್ರೂ ಆಗಿಬಿಟ್ನ ಇವ್ನು? ಅಂತ. ಮತ್ತೆ ಮೊದಲಿಂದ ನಾನು ಯಾವಾಗ ಕಾಲ್ ಮಾಡಿದ್ದೆ, ಎಷ್ಟೊತ್ತು‌ ಮಾತಾಡಿದ್ವಿ, ಏನೇನು ಮಾತಾಡಿದ್ವಿ, ನಾನು ದುಡ್ಡು‌ ಕೇಳಿದ್ದು, ಅವ್ನು‌ ಕಳ್ಸಿದ್ದು, ಎಲ್ಲವನ್ನೂ ಹೇಳುತ್ತಾ ಬಂದೆ… ಆಗಲೂ ರವಿಗೆ ನೆನಪಿಲ್ಲ. ‘ಹೌದಾ, ನಂಗೇನೂ ಗೊತ್ತಾಗ್ತಿಲ್ಲ, ಯಾವ್ದು ನೆನಪಿಲ್ಲ’ ಅಂದ. ಮಾತಾಡುವ ರೀತಿ ಬದಲಿ. ಮಾತುಗಳೂ  uncertainty. ನಾನಿನ್ನೂ ಫೋನಲ್ಲಿದೀನಿ, ಆ ಕಡೆಯಿಂದ ಅವನ ಎದುರಿಗೆ ಇರುವವರೊಂದಿಗೂ ಆಗತಾನೇ ಭೇಟಿ ಆದವರಂತೆ ಮಾತು. ಅವನಿಗೆ ಏನು ಹೇಳಬೇಕೋ ತಿಳಿಯಲಿಲ್ಲ, ಫೋನ್‌ ಕಟ್  ಮಾಡಿದೆ.  

ಆ ನಂತರ ನನಗೆ ಸುಮ್ಮನೇ ಏನೇನೋ ಯೋಚನೆ. ‘ಯಾಕಿಂಗಾತು ಇವನಿಗೆ, ಏನಾತು?’ ಅಂತೆಲ್ಲಾ. ಸುಮಾರು ಹೊತ್ತಾದ ಮೇಲೆ ಮತ್ತೆ ಅವನದೇ ಕಾಲದ ಬಂತು. ಸ್ವಲ್ಪ ಆತಂಕದಿಂದಲೇ ಮಾತಾಡಲು ಶುರು ಮಾಡಿದೆ. ಆ ಕಡೆಯಿಂದ ‘ಅಲ್ಲಲೇ ದೀಪ್ಯಾ, ಫುಲ್ ಶಾಕಾ?’ ಕೇಳಿದ. ಆಗಲೂ ನಾನು confusionನಲ್ಲೇ ಇದ್ದೆ… ಧೈರ್ಯ ಮಾಡಿ ಕೇಳಿದೆ; ‘ಏನಾಗ್ತಿತ್ಲೇ ಮಗನೇ?’.

‘ಏನ್ಮಾಡ್ತಿ ಮಗಾ, ದಿನಾ ಕೆರ್ಕಳ್ಳೋಕೂ ಪುರ್ಸೊತ್ತಿರ್ತಿರಲಿಲ್ಲ. ಇವತ್ತು ಮಾಡಾಕ ಕೆಲ್ಸಿದ್ದಿಲ್ಲ, ಮಾತಾಡೋಕೆ ಯಾರೂ‌ ಸಿಗ್ಲಿಲ್ಲ. ಕಾಗೆ ಹಾರ್ಸೋದು ಯಾರಿಗೆ? ಅಗಲೇ ನಿನ್ನ ಕಾಲ್ ಬರಬೇಕಾ? ಶುರು ಹಚ್ಕೊಂಡೆ. ನೀನೂ ಅಡ್ಡಬಿದ್ದೆ.‌ ಸರಿಹೋಯ್ತು’. ಅವನಂದದ್ದು ಕೇಳಿ ನಾನು ಪೆಕರ ನಗೆ ನಕ್ಕೆ ಅಷ್ಟೇ.

‍ಲೇಖಕರು Avadhi

February 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: