ನಿರ್ಗಮನ ಕಾದಂಬರಿ ಯಾಕೆ ಬರೆದೆ ಎಂದರೆ…


ಜೋಗಿ

**

ಬೆಂಗಳೂರಿನ ಕತ್ತರಿಗುಪ್ಪೆ ಮುಖ್ಯರಸ್ತೆಯನ್ನು ದಾಟಲು ಹಿರಿಯರೊಬ್ಬರು ಹೆಣಗಾಡುತ್ತ ಸುಮಾರು ಅರ್ಧಗಂಟೆಯಿಂದ ನಿಂತಿದ್ದರು. ತಲೆ ಮೇಲೆ ಬಿಸಿಲ ಕೊಡೆ. ಅವರಿಗೆ ದಾರಿಯೇ ಬಿಡದಂತೆ ಒಂದರ ಹಿಂದೊಂದು ವಾಹನಗಳು ಭರೋ ಭರ್ರೋ ಎಂದು ಓಡಾಡುತ್ತಲೇ ಇದ್ದವು. ತುಂಬ ಹೊತ್ತಾದ ನಂತರ ಯಾರೋ ಅವಸರ ಇಲ್ಲದವರು ಬಂದು ಅವರನ್ನು ರಸ್ತೆ ದಾಟಿಸಿದರು. ಆ ವಾಹನ ಪ್ರವಾಹದ ನಡುವೆ ಅವರನ್ನು ಆಚೆ ದಡ ಸೇರಿಸಲಿಕ್ಕೆ ಕೈ ಹಿಡಿದವರಿಗೂ ಐದಾರು ನಿಮಿಷ ಬೇಕಾಯಿತು.

ಅಪರಿಚಿತ ವಾಹನ ಢಿಕ್ಕಿ. ವೃದ್ಧ ಸಾವು ಎಂಬ ಸುದ್ದಿ ದಿನವೂ ಪತ್ರಿಕೆಯಲ್ಲಿ ಬರುತ್ತಲೇ ಇರುತ್ತದೆ. ಕಳೆದ ವಾರ ಬೆಂಗಳೂರಿನ ಪೀಣ್ಯದ ಹತ್ತಿರ ಕೋಟ್ಯಂತರ ರುಪಾಯಿ ಆಸ್ತಿಯ ಒಡೆಯರೊಬ್ಬರು ರಸ್ತೆ ದಾಟುತ್ತಿದ್ದಾಗ ಪ್ರಾಣ ಕಳಕೊಂಡರು. ಅದೇ ದಿನ ಮತ್ತೂಬ್ಬರು ಪಿಂಚಣಿದಾರರು ಹಾಗೆ ರಸ್ತೆ ದಾಟುತ್ತಿದ್ದಾಗ ಮರಣಿಸಿದರು.

ವೃದ್ಧರ ಮರಣಕ್ಕೆ ಮರುಗುವವರಿಲ್ಲ. ಯಾರಾದರೂ ಸತ್ತರು ಅಂದಾಕ್ಷಣ, ಏಜೆಸ್ಟು ಅನ್ನುವ ಪ್ರಶ್ನೆ ತೂರಿ ಬರುತ್ತದೆ. ಎಪ್ಪತ್ತು ಅಂದಾಕ್ಷಣ, ಹಾಗಿದ್ದರೆ ಪರವಾಗಿಲ್ಲ ಎಂಬ ಪ್ರತಿಕ್ರಿಯೆ ಎದುರಾಗುತ್ತದೆ. ಅವರು ಈ ದೇಶಕ್ಕೆ ಪ್ರೊಡಕ್ಟಿವ್‌ ಅಲ್ಲ. ಅವರಿಂದ ಆರ್ಥಿಕ ವ್ಯವಸ್ಥೆಗೆ ಲಾಭವಿಲ್ಲ. ಅವರೇನಿದ್ದರೂ ಖರ್ಚಿನ ಬಾಬತ್ತು. ಅವರು ಸುಖಕ್ಕೆ ಕೊಡಲಿ ಏಟು.

ಹಾಗಂತ ಯಾರೂ ಹೇಳುವುದಿಲ್ಲ. ಅಂಥದ್ದೊಂದು ಭಾವ ಅಲ್ಲಲ್ಲೇ, ನೇರಳೆ ಮರದಡಿಯ ನೆರಳಿನಂತೆ, ಬಿದ್ದುಕೊಂಡಿರುವುದನ್ನು ನಾವು ಕಾಣಬಹುದು. ವೃದ್ಧರಿಂದ ಏನೇನು ಕೆಲಸ ಮಾಡಿಸಬಹುದೋ ಅದನ್ನೆಲ್ಲ ಮಾಡಿಸಲಾಗುತ್ತದೆ. ಮಕ್ಕಳನ್ನು ಸ್ಕೂಲಿನಿಂದ ಕರೆತರುವುದು, ಬೆಳ್ಳಬೆಳಗ್ಗೆ ಮಕ್ಕಳನ್ನು ಸ್ಕೂಲು ವ್ಯಾನು ಹತ್ತಿಸಲಿಕ್ಕೆ ಕರೆದುಕೊಂಡು ಹೋಗುವುದು, ಕಸದ ವ್ಯಾನಿಗೆ ಕಸ ಹಾಕುವುದು, ಗೇಟಿನ ಮುಂದೆ ಯಾರೂ ಕಾರು ನಿಲ್ಲಿಸದಂತೆ ಕಾಯುವುದು, ಕರೆಂಟು ಬಿಲ್ಲು, ವಾಟರ್‌ ಬಿಲ್ಲು ಕಟ್ಟುವುದು, ಮನೆ ಮುಂದೆ ಯಾರಾದರೂ ಗಲಾಟೆ ಮಾಡುತ್ತಿದ್ದರೆ ಅವರನ್ನು ಬೈದು ಓಡಿಸುವುದು- ಹೀಗೆ ಅವರಿಂದ ಅನೇಕಾನೇಕ ಕೆಲಸಗಳನ್ನು ಮಾಡಿಸಲಾಗುತ್ತದೆ.

ಅದೆಲ್ಲ ತಪ್ಪೆಂದೂ, ಅಂಥ ಕೆಲಸ ಮಾಡಿಸಬಾರದು ಅಂತಲೂ ನಾವ್ಯಾರು ಹೇಳುವಂತಿಲ್ಲ. ಅನೇಕರು ಅಂಥ ಕೆಲಸಗಳನ್ನು ಪ್ರೀತಿಯಿಂದಲೇ ಮಾಡುತ್ತಾರೆ. ಅದು ಕೆಲಸದ ತಪ್ಪೂ ಅಲ್ಲ, ಮಕ್ಕಳ ತಪ್ಪೂ ಅಲ್ಲ. ನಮ್ಮ ದೇಶ ಗ್ರಾಮೀಣವಾಗಿದ್ದದ್ದು, ನಗರ ಆಗುವ ಹೊತ್ತಿಗೆ ಎದುರಾಗುವ ಅಪಾಯ. ನಾವೆಲ್ಲರೂ ನಿರ್ಲಕ್ಷ್ಯ ಮಾಡಿರುವ ಒಂದು ವಿಭಾಗ. ವೃದ್ಧರಿಗೆ ಬದುಕುವುದಕ್ಕೆ ಅನುವಾಗುವಂಥ ನಗರವನ್ನು ನಾವು ಕಟ್ಟಲಿಲ್ಲ. ಕಟ್ಟುತ್ತಲೂ ಇಲ್ಲ. ಕಟ್ಟುವುದಕ್ಕೂ ಆಗುವುದಿಲ್ಲ.

ರಸ್ತೆ ದಾಟುವುದಕ್ಕೆ ಏರುಹಾದಿಯನ್ನು ನಿರ್ಮಿಸಲಾಗುತ್ತದೆ. ಆದರೆ, ವೃದ್ಧರು ಅದನ್ನು ಏರಲಾರರು. ಮೆಟ್ರೋ ರೈಲಿದೆ. ಆ ಸ್ಟೇಷನ್ನಿಗೆ ಹೋಗುವುದಕ್ಕೆ ಮತ್ತೆ ಮೆಟ್ಟಲು ಹತ್ತಬೇಕು. ಪಾರ್ಕುಗಳಿವೆ, ಅಲ್ಲಿಗೆ ಹೋಗಬೇಕಿದ್ದರೆ ರಸ್ತೆ ದಾಟಬೇಕು. ಬೆಂಗಳೂರು ನಗರ ಹೇಗೆ ವ್ಯಾಪಿಸುತ್ತಾ ಇದೆ ಎಂದರೆ ಇಲ್ಲಿ ಲಿವಿಂಗ್‌ ಏರಿಯಾ ಅನ್ನುವ ಕಲ್ಪನೆಯೇ ಇಲ್ಲ. ವಾಹನ ದಟ್ಟಣೆ ಹೆಚ್ಚುತ್ತಿದ್ದಂತೆ ವಾಹನಗಳು ಸಣ್ಣ ಪುಟ್ಟ ರಸ್ತೆಗಳನ್ನೂ ಆಕ್ರಮಿಸಿಕೊಂಡಿವೆ. ರಸ್ತೆ ದಟ್ಟವಾಗುತ್ತಿದ್ದಂತೆ ಹೆಚ್ಚು ಹೆಚ್ಚು ವೇಗದ ಬೈಕುಗಳೂ ಕಾರುಗಳೂ ಬರುತ್ತಿವೆ. ದುಡ್ಡು ಕೊಟ್ಟ ತಪ್ಪಿಗೆ ಅವರು ದುಬಾರಿ ಮೋಟಾರ್‌ ಬೈಕಿನ ಸದ್ದನ್ನೂ ಜಗತ್ತಿಗೆ ಕೇಳಿಸಬೇಕು. ಹಿರಿಯರು ಮನೆಯಿಂದ ಹೊರಗೆ ಕಾಲಿಡುವುದೇ ಸವಾಲು.

2
ಅಷ್ಟಕ್ಕೂ ಇಂಥ ಪರಿಸ್ಥಿತಿ ಏಕಿದೆ?
ಈ ಪ್ರಮಾಣದಲ್ಲಿ ವೃದ್ಧರು ತನ್ನ ಒಡಲಲ್ಲಿ ಇರುತ್ತಾರೆ ಅಂತ ಮಹಾನಗರಗಳು ನಿರೀಕ್ಷೆ ಮಾಡಿರಲಿಲ್ಲ. ಇದ್ದಕ್ಕಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಇದ್ದವರೆಲ್ಲ ನಗರಗಳಿಗೆ ನುಗ್ಗಿ ಬಂದರು. ಹಳ್ಳಿಗಳು ವೃದ್ಧಾಶ್ರಮಗಳಂತೆ ಆದವು. ಆ ವೃದ್ಧರು ಹಾಗೋ ಹೀಗೋ ಕೆಲಸ ಮಾಡಿಕೊಂಡು ಮಾಡಿಸಿಕೊಂಡು ಬದುಕುತ್ತಾ, ವರುಷಕ್ಕೊಮ್ಮೆಯೋ ಎರಡು ಸಲವೋ ಬರುವ ಮಕ್ಕಳ ಆಗಮನದಲ್ಲಿ ಸಂತೋಷ ಕಾಣುತ್ತಾ ತಮ್ಮ ಓರಗೆಯ ತಮ್ಮದೇ ವಯಸ್ಸಿನವರ ಜೊತೆ ಓಡಾಡುತ್ತಾ ಸುಖವಾಗಿಯೇ ಇದ್ದರು.
ಅವರಿಗೆ ಇದ್ದ ಸಖ್ಯ ಅವರನ್ನು ಖುಷಿಯಾಗಿಟ್ಟಿತ್ತು. ಹೆಂಡದ ಅಂಗಡಿಯಲ್ಲೋ ಸತ್ಯನಾರಾಯಣ ಪೂಜೆಯಲ್ಲೋ ಮದುವೆಯಲ್ಲೋ ಮತ್ಯಾವುದೋ ಸಾರ್ವಜನಿಕ ಕಾರ್ಯಕ್ರಮದಲ್ಲೋ ವೃದ್ಧರೆಲ್ಲ ಸಿಗುತ್ತಿದ್ದರು. ಮಾತಾಡುತ್ತಿದ್ದರು. ಅವರು ಇವರ ಮನೆಗೂ ಇವರು ಅವರ ಮನೆಗೂ ಹೋಗಿ ಬಂದು, ಹೇಗೋ ಬದುಕುತ್ತಿದ್ದರು.

ಕ್ರಮೇಣ ಆ ವೃದ್ಧಾಶ್ರಮ ನಗರಕ್ಕೆ ಶಿಫ್ಟಾಯಿತು. ಮಗನೂ ಸೊಸೆಯೂ ಮಗಳೂ ಅಳಿಯನೂ ದುಡಿಯಲು ಶುರು ಮಾಡಿದ ನಂತರ ವೃದ್ಧರು ನಗರಗಳಿಗೆ ಅನಿವಾರ್ಯವಾದರು. ಏನಿಲ್ಲವೆಂದರೂ ಅವರು ಮನೆ ಕಾಯುತ್ತಿದ್ದರು. ತಡವಾಗಿ ಬರುವ ಕೆಲಸದಾಕೆಯನ್ನು ನಿಭಾಯಿಸುತ್ತಿದ್ದರು. ಬೀದಿಯಲ್ಲಿ ಬರುವ ತರಕಾರಿ ಗಾಡಿಯವನ ಜೊತೆ ಚೌಕಾಸಿ ಮಾಡಬಲ್ಲವರಾಗಿದ್ದರು. ದೇವರ ಮನೆಯನ್ನು ಬೆಳಗುತ್ತಿದ್ದರು. ಮೊಮ್ಮಗನಿಗೆ ಕೆಮ್ಮು ಬಂದರೆ ಅದ್ಯಾವುದೋ ಕಷಾಯ ಮಾಡಿಕೊಟ್ಟು ಗಾಬರಿಯಾದ ಮಗಳನ್ನು ಸಂತೈಸುತ್ತಿದ್ದರು.

ಅದು ಹಿಂದಿನ ತಲೆಮಾರು. ಆ ತಲೆಮಾರಿಗೆ ಈಗ ವಯಸ್ಸಾಗಿದೆ. ಮಗನ ಮಗಳಿಗೂ ಮದುವೆ ಆಗಿದೆ. ಮಗಳ ಬಾಣಂತನಕ್ಕೆ ಆ ಮಗ ಬೆಂಗಳೂರಿನಿಂದ ನ್ಯೂಯಾರ್ಕಿಗೆ ಹೋಗಬೇಕಿದೆ. ಅಪ್ಪ ಅಮ್ಮನನ್ನು ಮನೆಯಲ್ಲಿ ಬಿಟ್ಟು ಹೋಗುವುದಕ್ಕೆ ಧೈರ್ಯವಿಲ್ಲ. ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಹೋಗಿ ಬರುವ ತನಕ ವೃದ್ಧಾಶ್ರಮದಲ್ಲಿರಿ ಅನ್ನುವುದಕ್ಕೂ ಮನಸ್ಸಿಲ್ಲ. ಇಂಥ ಒಂದು ವಿಚಿತ್ರ ಸಂದಿಗ್ಧ ದಲ್ಲಿರುವ ಮಗ, ಆತಂಕದಲ್ಲಿರುವ ತಂದೆತಾಯಿ, ಇವನ್ನೆಲ್ಲ ಲೆಕ್ಕಿಸದೇ ಸಾಗುವ ಕಾಲ.

3
ಸಮಸ್ಯೆ ಯಾರದ್ದೂ ಅಲ್ಲ.
ನಗರಗಳು ಸರಿಯಾಗಿದ್ದರೆ ವೃದ್ಧರೂ ಸುಖವಾಗಿರಬಹುದಾಗಿತ್ತು. ಬೆಂಗಳೂರಲ್ಲೇ ಹುಟ್ಟಿ ಬೆಳೆದ ವೃದ್ಧರಿಗೆ ಈ ಊರು ಕಷ್ಟ ಕೊಟ್ಟರೂ ಸುಖವನ್ನೂ ಕೊಟ್ಟಿದೆ. ಅಭ್ಯಾಸಬಲದಿಂದ ಅವರು ಬದುಕಬಲ್ಲರು. ಆದರೆ ಧುತ್ತನೆ ಹಳ್ಳಿಯೊಂದರಿಂದ ಬಂದಿಳಿವ ಪಿತಾಮಹರಿಗೆ ಇಲ್ಲಿ ಎಲ್ಲವೂ ಅಪ್ರತಿಭ ಅನುಭವವೇ. ಇಲ್ಲಿ ಬರಿ ಭಯವೇ. ಇಲ್ಲಿ ಬರೀ ಏಕಾಂತವೇ. ಮೌನವೇ, ಕತ್ತಲೆಯೇ, ಕಾಡೇ, ಬಂಧನವೇ, ಬಯಲಿದ್ದರೂ ಇಲ್ಲಿ ಬಯಲಾಗಲು ಶಕ್ಯವಿಲ್ಲ. ದುಡ್ಡಿದ್ದರೂ ಖರ್ಚು ಮಾಡುವಂತಿಲ್ಲ. ಹಳ್ಳಿಯ ಆಸ್ತಿ ಮಾರಿದ ಕೋಟಿ ರುಪಾಯಿ ಅಕೌಂಟಿನಲ್ಲಿ ಭದ್ರವಾಗಿದೆ. ವೃದ್ಧರಿಗೆ ದುಡ್ಡೇಕೆ ಬೇಕು? ಆಸ್ಪತ್ರೆ ಖರ್ಚಿಗೆ ಮಗನ ಮೆಡಿಕಲ್‌ ಕಾರ್ಡು, ಹೊಟ್ಟೆ ತುಂಬ ಊಟ, ಇಡೀ ದಿನ ನಿದ್ದೆ. ವಯಸ್ಸಾದ ತಂದೆಯ ಮುಂದೆ ವಯಸ್ಸಾದ ತಾಯಿ. ಅಪಾರ್ಟುಮೆಂಟು ಸೇಫು. ಯಾರನ್ನೂ ಒಳಗೆ ಬಿಡಬೇಡ ಅಂತ ಕಾವಲುಗಾರನಿಗೆ ಕಟ್ಟಪ್ಪಣೆ. ಅಪ್ಪ ಅಮ್ಮನನ್ನೂ ಹೊರಗೆ ಬಿಡಬೇಡ ಅಂತ ವಿನಂತಿ.

4
ವೃದ್ಧಾಪ್ಯಕ್ಕೆಂದು ದುಡ್ಡು ಕೂಡಿಟ್ಟು ಉಪಯೋಗವೇ ಇಲ್ಲ ಇಲ್ಲಿ.
ಗೆಳೆಯರನ್ನು ಕೂಡಿಡಬೇಕು. ಗೆಳೆಯರ ಒಂದು ಬಳಗ ಬೇಕು. ಗೆಳೆಯರು ಬೆನ್ನಿಗೆ ನಿಲ್ಲಬೇಕಾದದ್ದೇ ಆ ವಯಸ್ಸಿನಲ್ಲಿ. ಬೆಳಗಾದರೆ ಸಾಕು, ಒಬ್ಬನಲ್ಲದೇ ಹೋದರೆ ಮತ್ತೂಬ್ಬ ಗೆಳೆಯ ಬಂದು ಏಕವಚನದಲ್ಲಿ ಲೋ ಮೂರ್ತಿ, ಎದ್ದೇಳ್ಳೋ ಮಗನೇ ಎಂದು ಕರೆಯಬೇಕು. ಬಂದೇ ತಡಿಯೋ ಲೋಫ‌ರ್‌ ಅಂತ ಬೈಯುತ್ತಾ ಈತ ನಾನು ವಾಕಿಂಗ್‌ ಹೋಗ್‌ ಬರ್ತೀನಮ್ಮ, ಬೀಗದ ಕೀ ತಗೊಂಡಿದ್ದೀನಿ ಅಂತ ಧಿಮಾಕಿನಿಂದ ಹೋಗುವಂತಿರಬೇಕು. ನಂಗೆ ತಿಂಡಿ ಮಾಡಬೇಡ, ನಾನು ಹೊರಗಡೆ ಮಸಾಲೆ ದೋಸೆ ತಿಂತಿದ್ದೀನಿ ಎಂದು ಹೇಳಬಲ್ಲಷ್ಟು ಸ್ವಾತಂತ್ರÂ ಉಳಿಸಿಕೊಳ್ಳಬೇಕು. ಒಂಬತ್ತು ಗಂಟೆ ಹೊತ್ತಿಗೆ ಕ್ಲಬ್ಬಿಗೆ ಬಂದು ಪಿಕಪ್‌ ಮಾಡು ಎಂದು ಹೇಳಬಲ್ಲ ಒಬ್ಬ ಡ್ರೈವರ್‌ ಇರಬೇಕು.

ಇವೆಲ್ಲವನ್ನೂ ಸಂಪಾದಿಸಿ ಇಟ್ಟುಕೊಂಡರೆ ನಗರದ ವಾನಪ್ರಸ್ಥಾಶ್ರಮ ಸುಖಮಯ ಆಗಿರುತ್ತದೆ. ಅದು ಹಂಗಿನ ಅರಮನೆಯಾದರೆ ಭೀಕರ. ಅದರಲ್ಲೂ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದು ಸೇರಿಕೊಂಡವರಾಗಿದ್ದರೆ ಇನ್ನೂ ಭೀಕರ. ಅವರು ತಮ್ಮ ಹವ್ಯಾಸಗಳನ್ನು ಬಿಟ್ಟಿರುವುದಿಲ್ಲ. ದುಡ್ಡು ಖರ್ಚು ಮಾಡಲು ಮನಸ್ಸು ಮಾಡುವುದಿಲ್ಲ. ಅವರಿಗಿಲ್ಲಿ ಗೆಳೆಯರಿಲ್ಲ, ಹೊಸ ಗೆಳೆಯರ ಮೇಲೆ ನಂಬಿಕೆಯಿಲ್ಲ. ಮಹಾನಗರದಲ್ಲಿ ದಾರಿ ಗೊತ್ತಿಲ್ಲ.

ಹಾಗಿದ್ದರೆ…
ಗೆಳೆಯರನ್ನು ಸಂಪಾದಿಸಿಕೊಳ್ಳೋಣ. ದುಡ್ಡು ಹೇಗೋ ಬರುತ್ತದೆ. ಮಕ್ಕಳು ಮರಿ ಅವರ ಪಾಡಿಗೆ ಸುಖವಾಗಿರುತ್ತಾರೆ. ಬಂಧುಗಳು ಬಂದು ಹೋಗಲಿ. ಪೂಜೆ ನಡೆಯಲಿ. ಮಗಳು ವಿದೇಶಕ್ಕೆ ಹೋಗಲಿ. ಮಗನಿಗೆ ಸನ್ಮಾನಗಳಾಗಲಿ.

ಗೆಳೆಯರಿರಲಿ. ಯೌವನದಲ್ಲಿ ಏನು ಸಂಪಾದನೆ ಮಾಡುತ್ತೀರಿ ಎಂದು ಕೇಳಿದರೆ, ದುಡ್ಡು ಪ್ಲಸ್‌ ಗೆಳೆತನ. ಮಕ್ಕಳಿಗೂ ಕೂಡಿಡುವಷ್ಟು ದುಡ್ಡು ಸಂಪಾದನೆಗೆ ಹೊರಟರೆ ಗೆಳೆಯರು ಕಣ್ಮರೆಯಾಗುತ್ತಾರೆ. ಮಗನಿಗೆ ಅಪ್ಪ ಕಷ್ಟಪಟ್ಟು ಕೂಡಿಟ್ಟ ಒಂದು ಕೋಟಿಯ ಮೇಲೆ ಆಸೆಯೇ ಇರುವುದಿಲ್ಲ. ಆತ ತಿಂಗಳಿಗೆ ಮೂರು ಲಕ್ಷ ಸಂಪಾದನೆ ಮಾಡುತ್ತಿರುತ್ತಾನೆ. ಆತನಿಗೆ ಬೇಡದ ದುಡ್ಡನ್ನು ಈತ ತನ್ನ ಯೌವನವನ್ನು ಒತ್ತೆಯಿಟ್ಟು ಸಂಪಾದಿಸಿ ಸಾಧಿಸುವುದಾದರೂ ಏನನ್ನು?

ಗೆಳೆಯರನ್ನು ಸಂಪಾದಿಸಿ ಮತ್ತು ಆನಂದಿಸಿ. ಇಲ್ಲದೇ ಹೋದರೆ ಮಹಾನಗರದ ರಸ್ತೆ ದಾಟಿಸುವುದಕ್ಕೆ ನಡು ಮಧ್ಯಾಹ್ನ ಯಾರೂ ಇರುವುದಿಲ್ಲ. ರಸ್ತೆಗೆ ಮಹಾನಗರದಲ್ಲಿ ಕರುಣೆಯೂ ಇಲ್ಲ.

‍ಲೇಖಕರು avadhi

February 29, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: