ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ತೆಕ್ಕೆಯಲ್ಲೇ ಹೆಣ್ಣಾದ ಸಂಭ್ರಮ..

ಶಮ ನಂದಿಬೆಟ್ಟ 

pairಪ್ರತಿ ಬಾರಿ ಹುಚ್ಚು ಮಳೆ
ಸುರಿದಾಗಲೂ ಅದೇ ನೆನಪು

ನಾ ಮುಡಿಪಿನ ಗುಡ್ಡ ಹತ್ತಲು
ಹೊರಟಿದ್ದನ್ನ ಇಣುಕಿ
ಕಂಡ ನೀನು ಕಳ್ಳನಂತೆ
ಹೊರಬಿದ್ದಿದ್ದು
ಬೇಕಂತಲೇ ಛತ್ರಿ ಮರೆತು

ಬಂದವನಂತೆ ನಟಿಸಿದ್ದು
ಋತುಮಾನವೂ ನಿನ್ನ
ಪರ ವಹಿಸಿ ಧೋ ಎಂದು
ಮಳೆ ಸುರಿಸಿದ್ದು
ಬಣ್ಣ ಬಣ್ಣದ ಸಣ್ಣ ಹೂವಿನ
ನನ್ನ ಪುಟಾಣಿ ಛತ್ರಿಯೊಳಗೆ
ಆತುಕೊಂಡು ನಡೆದಿದ್ದು

ಇನ್ನೇನು ಹತ್ತು ಹೆಜ್ಜೆ
ಇಡುವುದರೊಳಗೆ ಪಾದ
ಊರಿದ ಕಡೆಯೆಲ್ಲ ಕಡುಗೆಂಪು
ನಿನ್ನ ತೆಕ್ಕೆಯಲ್ಲೇ ಹೆಣ್ಣಾದ
ಸಂಭ್ರಮದಲ್ಲಿ ನಾನು
ಸಾರ್ಥಕತೆಯಲ್ಲಿ ಮಿಂದೆದ್ದ
ಪುಟ್ಟ ಹೆಂಗಸಾಗಿದ್ದೆ

“ಮಗುವಾಗತ್ತೇನೇ” ನಿನ್ನ ಮುಗ್ಧ
ಭಯದ ಮಾತಿಗೆ ಉತ್ತರ
ಕೊಡಲಾಗದೇ ತಬ್ಬಿದ ಬಿಸುಪು
ಎದೆಯ ಶಿಖರಗಳ ತಪ್ಪಲಲ್ಲಿ
ಈಗಲೂ ಜೋಪಾನವಾಗಿದೆ

sheಹೊಸ ಹೆಣ್ಣು ನಾನು
ಗಮನವೆಲ್ಲ ಸುತ್ತ
ಗಿಲಿಗಿಲಿಸುತ್ತಿದ್ದ ಚೆಂದದ
ಹುಡುಗರ ಮೆಲಷ್ಟೇ
ಅಹಂಕಾರ ಬಂತೆಂದು
ದೂರಿ ದೂಡಿದಾಗಲೂ
ನಿನ್ನದು ಬೆಟ್ಟದಂಥ ಮೌನ
ಬುದ್ಧಿ ಬಂದಾಗ ಸುತ್ತೆಲ್ಲ
ಕಂಡಿದ್ದು ಮರುಭೂಮಿ

ಯಾವುದೋ ದೇಶದಲ್ಲಿ
ಸಿಗರೇಟು ಸೇದುತ್ತ
ಕ್ಯಾಮರಾ ಹಿಡಿದುಕೊಂಡು
ಸುಂದರಿಯರ ಹಿಂದೆ
ತಿರುಗುತ್ತಿದ್ದಾನೆಂಬ ಸುದ್ದಿ
ಯಾಕೋ ಎದೆಗೆ ಗುದ್ದಿ
ಸದ್ದು ಮಾಡುತ್ತಿದೆ…

ಅವತ್ತಿನ ಕೆಂಪೀಗ
ಹರಳುಗಟ್ಟಿ ಪೊರೆ ಕಳಚಿ
ನಿನ್ನ ಮುಗ್ಧತೆಯ ಕುಸುರಿ
ಮಾಡಿದ ಮುತ್ತು ನನ್ನ
ಗರ್ಭದ ಚಿಪ್ಪಿನೊಳಗೆ
ಪಡಿ ಮೂಡಬೇಕು
ಸಿಗರಟೇಟು ಬಿಟ್ಟು ಬಿಡು
ತುಟಿಯನ್ನು ಸಂಭಾಳಿಸುವ
ಕೆಲಸ ನನಗಿರಲಿ ಬರುವೆಯಾ ?

‍ಲೇಖಕರು Admin

20 July, 2016

5 Comments

  1. ಮಲ್ಲಿಕಾರ್ಜುನಗೌಡ ತೂಲಹಳ್ಳಿ

    Haunting poem

    • Shama, Nandibetta

      Thanks Mallikarjun

  2. Prasad

    Beautiful poem Shama… Delight to read your works…
    – Prasad, Republic of Angola

  3. ‘ಶ್ರೀ’ ತಲಗೇರಿ

    lovely 🙂 🙂 🙂 “ಋತುಮಾನವೂ ನಿನ್ನ ಪರವಹಿಸಿ” ಅನ್ನುವಾಗ ಕವಿತೆಗೊಂದು ವಿಶಿಷ್ಟ ಛಾಪು ಸಿಗುತ್ತಿದೆ. “ತುಟಿಯನ್ನು ಸಂಭಾಳಿಸುವ ಕೆಲಸ ನನಗಿರಲಿ” ಈ ಸಾಲು ಅದೆಷ್ಟೊಂದು ಭಾವಗಳನ್ನು ಕಟ್ಟಿಕೊಡುತ್ತಿದೆ. ಚೆಂದ ಚೆಂದ ಶಮಕ್ಕಾ 🙂 🙂 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading