ಕ= ಕಮಲ, ಕ= ಕಲ್ಕೆರೆ

 `ಮುಖವಾಡ’ಗಳ ಮಾರುವ ಊರಿನಲ್ಲೊಂದು ಸುತ್ತು!

ಎಂ.ಆರ್. ಕಮಲಾ

ಹಬ್ಬಕ್ಕೆಂದೇ `ಮುಖವಾಡ’ಗಳ ಧರಿಸಬೇಕಿಲ್ಲ
ಇಲ್ಲಿ ಅದು ತೀರಾ ಚರ್ಮಕ್ಕೆ ಹತ್ತಿ ಕೂತಿದೆ ,
ಹಡಗಾಗಿ, ಸರಕಾಗಿ, ದೋಣಿಯ ಹಾಡಾಗಿ
ಕೊನೆಗೆ ನೀರೊಳಗೆ ಬಿದ್ದ ಸೂರ್ಯನಿಗೂ ಮೆತ್ತಿದೆ!

mask2ಮುಷ್ಠಿಯಲ್ಲಿ ಏನನ್ನೋ ಮುಚ್ಚಿಟ್ಟಂತೆ,ತುಸು ಬಿಚ್ಚಿಟ್ಟಂತೆ ಕಾಣುವ
ನಕಾಶೆ ಹಿಡಿದು ಹೊರಟರೆ….. ಎದುರಾಗುವವರು ಯಾರು?
`ಪರದೇಸಿ’ಗಳಾದ ದೇಸಿಗಳೋ,`ದೇಸಿ’ಗಳಾದ ಪರದೇಸಿಗಳೋ?
ನೆಲದ ದಾರಿಗೆ ನೀರು ದಡವೋ, ನೀರ ದಾರಿಗೆ ನೆಲವು ದಡವೋ?
ಮನೆಗಳೇ ಮಾರುಕಟ್ಟೆಯೋ, ಮಾರುಕಟ್ಟೆಗಳಾದ ಮನೆಯೋ ?
ಬಡಕೊಂಡರೂ ಸುಳಿವು ಬಿಟ್ಟು ಕೊಡದ `ಸುಡೊಕು’!


ರಾತ್ರಿ ದೀಪ ಹೊತ್ತುಕೊಂಡರೆ..
ನೀರು-ನೆಲ ಬೆಸೆದ ಸಗ್ಗ ನಿಧಾನಕ್ಕೆ ಬಿಚ್ಚುತ್ತಾ ಹೋಗುತ್ತದೆ
ಮನೆ ಮನೆಗಳಿಂದ ಹರಿದು ಬಂದ `ಹುಗ್ಗಿಯ ಹೊಳೆ’
`ಗೊಂಡೊಲಾ’ ಗಳ ಮುತ್ತಿಕ್ಕುವ ಬೆಳದಿಂಗಳ ಅಲೆ
ಇರುಳಿನಲ್ಲೂ ಸೂರ್ಯನ ಹಾಡು ಹಾಡುವ ದೋಣಿಕಾರರು!
O sole, o sole mio, st n’fronte a te!
(ಓ ಸೂರ್ಯ, ನನ್ನ ಸೂರ್ಯ, ನಿನ್ನ ಮುಖದ ಮೇಲೆ)
ಯಾರದೋ ಸೂರ್ಯ ಯಾರ ಮೊಗದ ಮೇಲೋ !


`ಒಂದು ಪೌಂಡ್ ಮಾಂಸವನ್ನೇ ಕೊಡು’ ಎಂದು
ಪಟ್ಟು ಹಿಡಿದ `ವೆನಿಸ್ ನ ವರ್ತಕ’ ಕಣ್ಮುಂದೆ ಸುಳಿದರೂ
ಅಲ್ಲೇ ಕೂತು ಕವಿತೆ ಬರೆದ `ಗಯಟೆ’ ಯೂ ಜೊತೆಯಲ್ಲೇ!
ಆ ದಡದಿಂದ ಈ ದಡ, ಈ ದಡದಿಂದ ಆ ದಡಕ್ಕೆ
`ಕನಸ ದೋಣಿ’ ಯಲಿ ಕಳೆದು ಹೋಗುವ ಕಂದಗಳು
ಎದೆಯೊಳಗೆ ಸುಡು ಸುಡು ಆತಂಕದ ಅಮ್ಮಂದಿರು!

`ವೆನಿಸ್’ ನಗರದಲ್ಲಿ ಯಾವ ಭಾಷೆಯಾದರೂ ನಡೆದೀತು
ಇಟಾಲಿಯನ್, ಫ್ರೆಂಚ್, ಜರ್ಮನ್ ಕೊನೆಗೆ ಕನ್ನಡ ತಮಿಳು!
ಮಾರಿ-ಕೊಳ್ಳುವುದಕ್ಕೆ ಬೇಕೆ ತಾಯ್ತನ, ತಾಯಿ ಭಾಷೆ?

mask3

ಗೊಂಡೊಲಾ : ವಿಶಿಷ್ಟವಾಗಿ ವಿನ್ಯಾಸ ಮಾಡಿದ ವೆನಿಸ್ ನ ದೋಣಿಗಳು.
ವೆನಿಸ್ ನ ವರ್ತಕ : ಶೇಕ್ಸ್ ಪಿಯರ್ ನ ಪ್ರಸಿಧ್ಧ ನಾಟಕ `Merchant of Venice’
ಗಯಟೆ: ಜರ್ಮನ್ ಲೇಖಕ. ಆತ ಕೆಲ ಕಾಲ ವೆನಿಸ್ ನಲ್ಲಿ ವಾಸವಾಗಿದ್ದ ಎಂದು ಇಟಾಲಿಯನ್ ನಲ್ಲಿ ಮನೆಯೊಂದರ ಮೇಲೆ ಬರೆದಿತ್ತು.. ಅದು ಕಣ್ಣಿಗೆ ಬಿದ್ದು ವಿಪರೀತ ಖುಷಿಯಾಗಿತ್ತು

kalkere deepak

ಕಲ್ಕೆರೆ ದೀಪಕ್ 

ಮೇಡಂ ರವರ ” ಮುಖವಾಡಗಳ ಮಾರುವ ಊರಿನಲ್ಲೊಂದು ಸುತ್ತು ” ಬದುಕಿನ ವಿವಿಧ ಮುಖಗಳ (ಮುಖವಾಡಗಳ ) ನೈಜ-ಕೃತಕ , ವಾಸ್ಸವ- ಕಲ್ಪನೆ ಇವುಗಳ ಸಂಕೀರ್ಣ ಅಸಂಗತ ಕವನ .
ವಿಶೇಷವಾಗಿ ಮುಖವಾಡಗಳನ್ನು ಧರಿಸಬೇಕಿಲ್ಲ. ಚರಾಚರಗಳು ಕೊನೆಗೆ ಸೃಷ್ಠಿಯೇ ಒಂದು ಹಂತದಲ್ಲಿ ಮುಖವಾಡ ಹೊತ್ತೇ ಇರುತ್ತದೆ. ನಿರ್ಜೀವ ವಸ್ತುಗಳಷ್ಟೇ ಸಹಜವಾಗಿ ಮುಖವಾಡಗಳಿರುತ್ತವೆ. ಅದೆಷ್ಟು ಸಹಜವಾಗಿ ಅಂದರೆ ಹುಟ್ಟಿನಿಂದ ಚರ್ಮಕ್ಕೆ ಹತ್ತಿ ಕೂತಿದೆ ಅನ್ನುವಷ್ಟು. ಆದರೆ ಈ ಬದಲಾವಣೆ ಅರಿವಿಗೇ ಬರುವುದಿಲ್ಲ ; ನಮ್ಮನ್ನು ಒಳಗೊಂಡಂತೆ. ಎಷ್ಟೇ ಹುಡುಕ ಹೊರಟರು , ಲೆಕ್ಕ ಹಾಕಿದರು ಮುಖವಾಡವಿಲ್ಲದ ಮುಖಗಳೇ ಇಲ್ಲ. ಆದ್ದರಿಂದ ಪರಸ್ಪರ ಅಪರಿಚಿತರು ; ನಮ್ಮನ್ನೆ ನಾವು ಹುಡುಕಿಕೊಳ್ಳುವಷ್ಷ್ಟು .
ಈ ಕವನದಲ್ಲಿ ತೀವ್ರವಾಗಿ ಕಾಡುವ ಎರಡು ವಿರೋಧಾಭಾಸಗಳೆಂದರೆ ,
ಒಂದು ಪೌಂಡ್ ಮಾಂಸಕ್ಕಾಗಿ ವೆನಿಸ್ ವರ್ತಕ ಪಟ್ಟು ಹಿಡಿಯುವುದು . ಈ ಸನ್ನಿವೇಶದಲ್ಲೂ ಸಂವೇದನಾಶೀಲ ಕವಿ ಗಯಟೆ ಕವಿತೆ ಬರೆಯುವುದು . ಮತ್ತು ” ಕನಸ ದೋಣಿ ” ಯಲಿ ಕಳೆದು ಹೋಗುವ ಕಂದಗಳು ಎದೆಯೊಳಗೆ ಸುಡುಸುಡು ಆತಂಕದ ಅಮ್ಮಂದಿರು.
” ವೆನಿಸ್ ” ಮಾರುಕಟ್ಟೆಯಲ್ಲಿ ಮಾರಿ- ಕೊಳ್ಳುವುದಕ್ಕೆ ಬೇಕೆ ತಾಯ್ತನ , ತಾಯಿಭಾಷೆ ?. ಈ ಸಾಲು ಅಧೀರರನ್ನಾಗಿಸುತ್ತದೆ. ಜಾಗತಿಕ ಕೊಳ್ಳುಬಾಕತನದ ಪ್ರತಿಮೆಯಾಗಿದೆ .

ಈ ರೀತಿಯ ಸಂಕೀರ್ಣ , ಅಸಂಗತ ಕವನಗಳು ವಿರಳ , ವಿಭಿನ್ನ. ಕವಿಯ ಅಂತರಾತ್ಮದ ಸೂಕ್ಷ್ಮ ಬನಿಯನ್ನು ಬೇಡುತ್ತದೆ.

‍ಲೇಖಕರು Admin

July 20, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shama, Nandibetta

    ಮಾರಿ-ಕೊಳ್ಳುವುದಕ್ಕೆ ಬೇಕೆ ತಾಯ್ತನ, ತಾಯಿ ಭಾಷೆ?”

    Wah.. entha saalu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: