ಡಾ. ಪ್ರೇಮಲತ ಬಿ
ನವಿಲಾಗದಿರು ಬಿರಿದು…..
ಸುಮ್ಮನೆ ನಿಂದಾನವ
ಕಲ್ಲ ಕಾಯದವ
ಸೊಲ್ಲೆತ್ತದೆ, ತುಟಿಯ ಬಿಗಿದು
ಕಿರುಗೆರೆಯ ಅಂಚ ನಗೆಕಿರಿದು!
ಕಣ್ಣ ಮುಚ್ಚಿ ನಿಂದಾನವ
ಧ್ಯಾನದಲಿ ಮುಳುಗಿದಂತೆ
ಮೈಯೆಲ್ಲ ಕಿವಿಯಾಗಿ ಕೇಳುವಂತೆ
ಮನಸಿನಲಿ ಮಂಥನ ನಡೆಸಿದಂತೆ!
ದೊಡ್ಡಾಲೆಯ ಕಿವಿಯ ಇಳಿಯ ಬಿಟ್ಟು
ಬಲಿಷ್ಠ ಭುಜದ ಆಯ ಕೊಟ್ಟು
ನಿನ್ನ ಕರೆದಾನಂತ
ಕಥೆಯ ಕೇಳಲು ಕಾಯ್ದಾನಂತ!
ನವಿಲಾಗದಿರು ಬಿರಿದು
ಜಗಿಬಿದ್ದ ಕಿವಿಗೆರಗಿ
ನಿನ್ನೆಲ್ಲ ಗುಟ್ಟುಗಳ ಹಾಡಾಗಿಸಿ
ಥಕಧಿಮಿಸಿ ಕುಣಿಯದಿರು!
ಹಸಿರು ಹಣ್ಣಾಗಿ
ಎಲೆಯುದುರಿ ಕಾಯಾಗಿ
ಮರುವಸಂತ ಮರಳಿದರೂ
ನಿಲ್ಲುವನೇ ಅವ!
ನಿನ್ನೊಲುಮೆಯ ಕಥೆಗೆ ನರಳದೆ
ಕತ್ತ ತಿರುಗಿಸಿ, ನಕ್ಕು ಬಿಡದೆ
ನೇವರಿಸಿ, ನೆರಳ ನೀಡದೆ
ನಿನ್ನಚರಿಗೆ, ಚರಣವಾಗದೆ!
ಕಾಯುತ್ತಾನವ ಮುಂದಿನ
ರಂಗಿನ ಕಥೆಗಾಗಿ
ನಿರ್ವಾಣದ ವಚನಕೆ ಬದ್ದನಾಗಿ
ಸಿದ್ದಾರ್ಥ ಬುದ್ಧನಾಗಿ!!!





sooper