ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನೆದೆಯ ಬೆಳದಿಂಗಳ ಮೇಲೆ..

ಮೂಲ : ರೂಮಿ

ಎನ್ ಪಾರ್ವತಿ

1.

ನಾಲಿಗೆಯಲ್ಲಿ ನಲಿವ ಹೆಸರು
ಉಸಿರಿನಲ್ಲಿ ಬೆರೆತ ನೆನಪು
ನೋಟದಲ್ಲಿನ ಚಿತ್ರ
ಎಲ್ಲವೂ ನೀನೇ ಆಗಿರುವಾಗ
ಈ ಖಾಲಿ ಪದಗಳಿಗೆ ಅರ್ಥವಿನ್ನೆಲ್ಲಿ?

2.

ನಿನ್ನ ಹಾದಿಗೆ
ನಿನ್ನ ನಡಿಗೆಯೇ ಜೋಡಿ;
ಇನ್ನೊಬ್ಬರೋ
ಮತ್ತೊಬ್ಬರೋ ಸೇರಿ
ಎರಡು ಹೆಜ್ಜೆ ಹಾಕಿಯಾರು
ಕೊನೆವರೆಗೂ
ಯಾರು ಉಳಿದಾರು?

3.

ಮನವಿಷ್ಟು ತಿಳಿಯಾಗಲಿ ನಿಲ್ಲು
ನಿನ್ನೊಳಗೇ ಇರುವ ಈ ಚಂದ್ರ, ತಾರೆಯರ
ಬಿಂಬವ ನೋಡುವಿಯಂತೆ.

4.

ಸಾವಿರಾರು ಗುಟ್ಟುಗಳವಿತಿವೆ
ಕ್ಷಣವೊಂದರಲ್ಲಿ
ಪ್ರತಿ ಆರ್ತನಾದಕ್ಕೂ ನೂರಾರು
ಮಾರ್ದನಿಗಳಿವೆ ಇಲ್ಲಿ

5.

ಹಿಡಿದಿಡುವ
ಬಿಟ್ಟು ನಡೆವ
ಹಾದಿಗಳೆರಡರ
ನಡುವೆ ತೂಗುವ
ತಕಲಿ ಜೀವನ

6.

ನಿಜಕ್ಕೂ ನಮ್ಮ ಆತ್ಮಗಳು ಒಂದೇ,
ನಿನ್ನೊಳಗೆ ನಾನು,
ನನ್ನೊಳಗೆ ನೀನು ಕಾಣುತ್ತೇವೆ.
ಒಬ್ಬರೊಳಗೊಬ್ಬರು ಅವಿತುಕೊಂಡಿದ್ದೇವೆ.

7.

ನನ್ನ ಕಣ್ಣಲ್ಲಿ ನಿನ್ನ ಬೆಳಕಿದೆ
ನನ್ನ ಹೃದಯದಲ್ಲಿ ನಿನ್ನ ಸೌಂದರ್ಯವಿದೆ

8.

ಮನೆಯ ತೊರೆದೇ ಗೊತ್ತಿಲ್ಲದವರು
ನಿನ್ನ ಪಯಣಕ್ಕೆ ದಿಕ್ಸೂಚಿಯಾಗಲಾರರು

9.

ನಿನ್ನೆದೆಯ ಬೆಳದಿಂಗಳ ಮೇಲೆ
ಚಿಂತನೆಯ ನೆರಳು ಬೀಳದಿರಲಿ;
ಆಲೋಚನೆಗಳನ್ನು ಬೀಳ್ಕೊಟ್ಟು ಬಿಡು.

‍ಲೇಖಕರು Admin

18 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading