ನೂತನ ದೋಶೆಟ್ಟಿ ಓದಿದ ‘ಈ ಮಳೆಗಾಲ ನಮ್ಮದಲ್ಲ’

ನೂತನ ದೋಶೆಟ್ಟಿ

ಹಾಸನ ಮೂಲದ ಚಲಂ ಹಾಡ್ಲಹಳ್ಳಿ ಅವರ ಹೊಸ ಕವನ ಸಂಕಲನ. ತಮ್ಮದೇ ಪ್ರಕಾಶನದಿಂದ ಪ್ರಕಟಿಸಲಾದ ಈ 58 ಕವನಗಳ ಸಂಕಲನವನ್ನು ಕಳೆದುಕೊಳ್ಳುವುದು ಎಂಬ ದಿವ್ಯ ಜ್ಞಾನೋದಯಕ್ಕೆ… ಅರ್ಪಿಸುವ ಕವಿ ಕಳೆದುಕೊಳ್ಳುವುದೆಂದರೆ ಪಡೆಯುವುದು ಎಂದೇ ಧ್ವನಿಸಿದಂತಿದೆ. ಎದೆಯ ಭಾಷೆ ಹಾಗೂ ಬುದ್ಧಿಯ ಭಾಷೆಯನ್ನು ತೀವೃ ವಿರೋಧಿಗಳೆಂದು ಕಾಣುವ ಇವರಿಗೆ ‘ಮೆದುಳಿನಿಂದ ಯೋಚಿಸುವುದಕ್ಕೆ ಒಂಚೂರಾದರೂ ಸುಳ್ಳು ಹೇಳುವ ಅವಕಾಶವಿರುತ್ತದೆ’ ಎನ್ನಿಸುವುದರಿಂದ ಬೌದ್ಧಿಕ ಲಂಪಟತನದ ಇಂದಿನ ದಿನಮಾನಗಳ ಬಗ್ಗೆ ಅನುಮಾನ, ತಿರಸ್ಕಾರ, ಬೇಸರ ಒಟ್ಟಿಗೇ ಇದ್ದಂತಿದೆ.

ಆರಂಭದಲ್ಲಿ ಹೇಳಿರುವ ಕವಿ ಮಾತುಗಳು ಇವರು ಬರೆಯದೇ ಇರುವ ಗಪದ್ಯಗಳು. ಇಲ್ಲಿನ ಕವನಗಳಿಗೆ ತಲೆಬರಹವಿಲ್ಲ. ಎಲ್ಲವೂ ಅಯೋಮಯವಾಗಿರುವಾಗ ಹೇಗೆ ಅರ್ಥೈಸುವುದು ಎಂದು ಶೀರ್ಷಿಕೆಗಳನ್ನು ಕೊಡದೆ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂದು ಓದುಗನಿಗೆ ಬಿಟ್ಟಂತಿದೆ. ಬಹುತೇಕ ಕವಿತೆಗಳಲ್ಲಿ ಕವಿಯ ನಂಬಿಕೆಯ‌ ನಿಚ್ಚಳ ಹಾದಿಯಲ್ಲಿ ಅಪನಂಬಿಕೆ ಎಂಬ ವಾಸ್ತವ ಮುಖಾಮುಖಿಯಾಗಿ ದಿಕ್ಕೆಡಿಸಿದ ಪರಿ ಅಭಿವ್ಯಕ್ತವಾಗಿದೆ. ಅದಕ್ಕೆ ಅವರು ಕಂಡುಕೊಂಡಿದ್ದು, ‘ಗೊತ್ತಿರುವುದನ್ನೇ / ಕಟ್ಟಿಕೊಳ್ಳಬೇಕು/ ಬೇರೆಯದೇ ರೀತಿಯಲ್ಲಿ/’ ಎಂಬ ಭರವಸೆಯ ಹಾದಿಯನ್ನು. ‘ಗಟ್ಟಿಗೊಳ್ಳದ ನೆಲೆಯಲಿ/ ನಿಂತು/ ವಿಶ್ವಾಸಕ್ಕಾಗಿ ಕಾತರಿಸುವುದು/ ನಿಷಿದ್ಧ/ ಯಾರೂ ಹಾಗಂತ ಹೇಳಿಕೊಡುವುದಿಲ್ಲ/’ ಎನ್ನುತ್ತ ಮೋಸ ಹೋಗುತ್ತಲೇ, ತಪ್ಪು ಮಾಡುತ್ತಲೇ ಕಲಿಯುವ, ಅರಿಯುವ ಹಾದಿಯಲ್ಲಿ ಹಣ್ಣು ಮಾಡುವ ನಿರಾಸೆ, ಹತಾಶೆಗಳು ಈ ಐದು ಸಾಲುಗಳಲ್ಲಿ ಹರಳುಗಟ್ಟಿವೆ.

ಹೊಸವರ್ಷದ ಸೂರ್ಯ… ನಮ್ಮೊಳಗೆ ಯಾವಾಗ ಉದಯಿಸುತ್ತಾನೋ? ಎಂದು ಕೇಳುತ್ತಲೇ ಅದಕ್ಕೆ ಉತ್ತರ ರೂಪವಾಗಿ, ‘ಒಡೆಯುವ ಕೈಗಳಿಗೆ , ನೇಗಿಲು, ಪುಸ್ತಕ, ಚರಕ/ ತಕ್ಕಡಿ, ಮಗ್ಗ, ಲೇಖನಿಗಳ ಕೊಡಬೇಕಾಗಿದೆ’ ಎನ್ನುತ್ತಾರೆ. ಕವಿಯ ಇಂಥ ಜಿಜ್ಞಾಸೆ, ‘ಈ ಮನೆ, ಈ ರಾತ್ರಿ, ಈ ಒಳಗು/ ಯಾಕಿಷ್ಟು ಖಾಲಿಯಾಗಿದೆ…? ಎಂದು ಕಳವಳಿಸುತ್ತದೆ.’ ಎಲ್ಲರನ್ನೂ ಕಳಕೊಂಡ ಮೇಲೆ ಸತ್ತೆನಾ? / ಸತ್ತ ಮೇಲೆ ಎಲ್ಲರನ್ನೂ ಕಳಕೊಂಡೆನಾ? ‘ ಮೊದಲಾದ ಸಾಲುಗಳು ಛಳಕು ಹುಟ್ಟಿಸುತ್ತವೆ. ತನ್ನದೇ ಕಳೇಬರದ ಎದುರು ತಾನೂ ಸೇರಿಕೊಂಡಂತೆ ನಡೆಯುವ ಜಗದ ವ್ಯಾಪಾರದ ವಿಡಂಬನೆ ಕೊನೆಗೆ ತನ್ನತನದ ಸಾವಿನಲ್ಲೂ ಪ್ರಶ್ನೆಯಾಗಿ ನಿಲ್ಲುತ್ತದೆ.

ಸಾವು ಇನ್ನಿತರ ಕವಿತೆಗಳಲ್ಲೂ ಬೇರೆ ಬೇರೆ ರೂಪಕವಾಗಿ ತಲೆ ಹಾಕುತ್ತದೆ. ಬಾಗಿಲ ಬಗೆಗಿನ ಸಾಲುಗಳು ಹೀಗಿವೆ. ‘ಬಾಗಿಲು ಒಂದು ಕಡೆಗೆ ಮಾತ್ರ/ತೆರೆದುಕೊಳ್ಳುತ್ತದೆ/ ಬಾಗಿಲ ಹಾಳೆಗಳ ಒಳಗೆಳೆದು/ ಹೊರಹೋಗುವ ನಾನು/…ಚಿಲಕ ಸಿಗಿಸುವುದನ್ನು ಮರೆಯುವುದಿಲ್ಲ/ ಅಷ್ಟು ಅಭ್ಯಾಸವಾಗಿ ಹೋಗಿದೆ/ ಅನೇಕ ಕವಿತೆಗಳಲ್ಲಿ ಕವಿಯನ್ನು ಕಾಡುವುದು ತಣ್ಣನೆಯ ಕ್ರೌರ್ಯ, ನಗೆಯ ಹಿಂದಿನ ಸ್ವಾರ್ಥ. ಈ ಸಾಲುಗಳು ಸಮುದ್ರದಾಳದ ಅಲೆಗಳಂತೆ ಮೇಲೆ ತಣ್ಣಗಿದ್ದು ಒಳಗೆ ಮೊರೆಯುತ್ತವೆ.

‘ಆಯಸ್ಸಿನೊಂದು ಭಾಗದಲ್ಲಿ/ಮಾಗಬೇಕು/ ಹಿಂದಿನ ಗಾಯಗಳು ಮಾಯುವಂತೆ/ ವಯಸ್ಸನ್ನು ನಿಭಾಯಿಸುವುದು / ತಿಳಿಯದೇ ಹೋದರೆ/ ಸಿಕ್ಕವರಿಗೆಲ್ಲ ಗಾಯವನ್ನಂಟಿಸುತ್ತ/ ಬದುಕು ಸವೆಸಬೇಕಾಗುತ್ತದೆ’ ಎನ್ನುವಲ್ಲಿ ಆಗಿ- ಮಾಗು, ಮಾಗಿ- ಆಗು ಎಂಬ ತಾತ್ವಿಕತೆಗೆ ದನಿ ತುಂಬುತ್ತ ‘ಜಗತ್ತಿನ ಅದೆಷ್ಟೊ ವಿಷಯಗಳು/ ನಾಲ್ಕು ಜನರ ಹೆಗಲ ಮೇಲೆ/ ಪ್ರಯಾಣ ಹೊರಟಾಗಲೂ/ ಇಲ್ಲಿ ಗುಟ್ಟು ಬಿಟ್ಟುಕೊಡುವುದಿಲ್ಲ’ ಎಂದು ಅಚ್ಚರಿ ಮೂಡಿಸುತ್ತವೆ.

ಆಗ ಇನ್ನೂ ಗಿಡ ಚಿಕ್ಕದಿತ್ತು… ಎಂಬ ಸಾಲಿನೊಂದಿಗೆ ಆರಂಭವಾಗುವ ಕವಿತೆ, ಮುಂದುವರೆದು ಮರದೊಟ್ಟಿಗೆ ಮಾತನಾಡಲು / ನಾನೂ ಸಹ/ ಮುಗ್ಧತೆಯನ್ನು/ ಉಳಿಸಿಕೊಳ್ಳಬೇಕಿತ್ತು/ ಎಂದು ಹೇಳುವಾಗ ಪರಿಸರದ, ಸಮಾಜದ ಎಲ್ಲ ಕೆಡುಕುಗಳಿಗೆ ಮನುಷ್ಯನ ಆಂತರಿಕ ಬೃಷ್ಟತೆಯೇ ಕಾರಣ ಎನ್ನುವಂತಿದೆ.

ಮಳೆಗಾಲದ ಸಾಲುಗಳು ಮಳೆಯ ರಮ್ಯತೆಯನ್ನೂ, ಮನದ ಹೊಯ್ದಾಟವನ್ನೂ ಏಕಕಾಲಕ್ಕೆ ಸೃಜಿಸುತ್ತವೆ.
ಹೆಣ್ಣಿನ ಬಗೆಗೆ, ಅಮ್ಮನ ಬಗೆಗೆ ಇರುವ ಕವಿತೆಗಳು ಆಂತರ್ಯದಲ್ಲಿ ಭೂಮಿಯ, ಪ್ರಕೃತಿಯ ಬಗೆಗೆ ಹೇಳುತ್ತವೆ. ‘ಅಮ್ಮ ನಿಂಗೇನು ಬೇಕು…?/ ಅಂತ ಕೇಳಿದರೆ / ಆಗ ಮಾತ್ರ ನಗುತ್ತಿದ್ದಳು/ ನಾನು ಅಲ್ಲಿ/ ನನ್ನ ಮಿತಿಯನ್ನು/ ಹುಡುಕಿಕೊಳ್ಳಬೇಕಿತ್ತು’ ಈ ಕವಿತೆಗಳಲ್ಲಿ ಹೆಣ್ಣು, ತಾಯಿ, ಭೂಮಿ, ಪ್ರಕೃತಿಯ ಬಗೆಗಿನ ಅಪಾರ ಪ್ರೇಮ, ಗೌರವ ವ್ಯಕ್ತವಾಗಿದೆ. ಕಾಡು ಹನಿಗಳು.. ಪ್ರಕೃತಿಯಿಂದ ಪೂರ್ಣ ವಿಮುಖನಾದ ಮಾನವ ಸಂಘರ್ಷವನ್ನು ವಿಡಂಬನಾತ್ಮಕವಾಗಿ ಕಟ್ಟಿಕೊಟ್ಟಿದೆ.

‘ಕಾಡಿನೊಳಗೆ ಕೂತು / ಕವಿತೆ ಬರೆದೆನೆಂದರೆ.. ಊಹಿಸಿ/ ನನ್ನೊಳಗಿನ ಸಂವೇದನೆ/ ಅದೆಷ್ಟು ಜಡ್ಡುಗಟ್ಟಿದೆ/… ನೆಟ್ವರ್ಕ್ ಇಲ್ಲದ ಚಿಂತೆ/ ತೀವ್ರವಾಗಿ ಮಾಡುತ್ತಿದ್ದಾಗಲೇ/ ನಾನು ನೋಡುವುದನ್ನು/ ಕೇಳುವುದನ್ನು ಮರೆತಿರುವುದು/ ಖಚಿತವಾಯಿತು…’

‘ಅದ್ಯಾವುದೋ ದಡದ ಮೇಲೆ/ ದಿಕ್ಕಿಲ್ಲದೇ ಕುಳಿತವನಿಗೆ/ ನಾವೆ ಕಳಿಸಿದವರು ಯಾರು..?’ ಎಂಬಂಥ ಆತ್ಮಚಿಕಿತ್ಸಕ ಸಾಲುಗಳು ಸಾರ್ವತ್ರಿಕವಾಗುವುದು ಇಲ್ಲಿನ ಕೆಲ ಕವಿತೆಗಳ ಸೊಗಸು.

ಈ ಕವಿ ಜಿಜ್ಞಾಸುವಾಗಿ, ಸಂತನಾಗಿ ಕಾಣುತ್ತಾನೆ. ತನ್ನ ಮನದ ತಾಕಲಾಟಗಳಿಗೆ ಮಾತು ಕಲಿಸುತ್ತಾನೆ. ಅವು ಎಂದೂ ಅಬ್ಬರಿಸದೆ ಕಾಡ ತೊರೆಯಂತೆ ಸದ್ದಿಲ್ಲದೆ, ಗಂಭೀರವಾಗಿ ಹರಿಯುತ್ತವೆ. ಕವಿತೆಗಳಿಗೆ ಶೀರ್ಷಿಕೆಗಳೇ ಇಲ್ಲದ ಮೇಲೆ ಪರಿವಿಡಿಯ ಗೋಜೂ ಇಲ್ಲ. ಮುನ್ನುಡಿ- ಬೆನ್ನುಡಿಗಳ ಗೊಡವೆಯೂ ಇಲ್ಲ‌. ಯಾವ ಬಂಧಗಳಿಗೂ ಒಳಗಾಗದ ಈ ಕವಿತೆಗಳು ಭಾವಪ್ರಧಾನವಾಗಿವೆ.

ಆರಂಭದ ತಮ್ಮ ಮಾತುಗಳಲ್ಲಿ ಮೆದುಳಿನಿಂದ ಯೋಚಿಸಿ ಕವಿತೆ ಬರೆಯುವುದನ್ನು ಕವಿ ಅಲ್ಲಗಳೆದರೂ , ಮೆದುಳಿನಿಂದಲೇ ಯೋಚಿಸುತ್ತ ಹೊರಬಂದಿವೆಯೇನೋ ಎನ್ನುವಷ್ಟು ದಟ್ಟವಾಗಿ ವೈಚಾರಿಕತೆಯ ಸೆಳೆತಕ್ಕೆ ಒಳಗಾಗಿವೆ. ಗದ್ಯವಾಗಿಸುವ ಪದಗಳು, ಸಾಲುಗಳು ಹೆಚ್ಚಿದ್ದರೂ ಕವಿಯ ಭಾವ ಪ್ರಾಮಾಣಿಕತೆ ಗೆಲ್ಲುತ್ತದೆ.

‍ಲೇಖಕರು Admin

November 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: