ನಾ ದಿವಾಕರ ಓದಿದ ‘ಮಹಾಸಂಗ್ರಾಮಿ’

ಹೋರಾಟದ ಬದುಕಿನ ವಿಹಂಗಮ ಕಥನ

ಜನಪರ ಹೋರಾಟಗಳ ಒಡನಾಡಿಯೊಬ್ಬರ ನಡಿಗೆಯನ್ನು ಹೀಗೂ ದಾಖಲಿಸಬಹುದಲ್ಲವೇ ?

ನಾ ದಿವಾಕರ

—–

1960-70ರ ದಶಕ ಭಾರತದ ಮಟ್ಟಿಗೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಟ್ಟಿಗೆ ಜನಾಂದೋಲನಗಳ ಪರ್ವಕಾಲವನ್ನು ಸೃಷ್ಟಿಸಿದ ಒಂದು ಯುಗ. ಸಮಕಾಲೀನ ಭಾರತೀಯ ಇತಿಹಾಸದ ನಡಿಗೆಯನ್ನು ಯಾವುದೇ ಸೈದ್ಧಾಂತಿಕ ನೆಲೆಯಲ್ಲಿ ನಿಂತು ಬರೆದರೂ ಈ ಎರಡು ದಶಕಗಳಲ್ಲಿ ಸಂಭವಿಸಿದ ವಿಪ್ಲವಗಳು, ಪಲ್ಲಟಗಳು ಹಾಗೂ ಜನಸಮುದಾಯಗಳ ನಡುವಿನ ಉತ್ಕರ್ಷಗಳನ್ನು ಉಲ್ಲೇಖಿಸದೆ ಇರಲಾಗುವುದಿಲ್ಲ. ವರ್ತಮಾನದಲ್ಲಿ ನಿಂತು ನೋಡಿದಾಗ ಈ ದಶಕಗಳ ಅನೇಕ ಹೋರಾಟಗಳು ಈಗ ಎತ್ತ ಸಾಗಿವೆ ಎಂತಲೋ ಅಥವಾ ಏನಾದವೋ ಎಂಬ ಪ್ರಶ್ನೆ ಮೂಡುವುದೂ ಸಹಜ. ಏಕೆಂದರೆ 1980ರ ನಂತರದ ನವ ಉದಾರವಾದಿ ಆರ್ಥಿಕತೆಯು ಜನಪರ ಚಳುವಳಿಗಳನ್ನು ಪ್ರಜಾಸತ್ತಾತ್ಮಕವಾಗಿಯೇ ಉಸಿರುಗಟ್ಟಿಸುತ್ತಾ ನಿಷ್ಕ್ರಿಯವಾಗಿಸುತ್ತಿವೆ. ಆದರೆ ಮೇಲ್ನೋಟಕ್ಕೆ ಹೋರಾಟಗಳು ಕಣ್ಣಿಗೆ ರಾಚುವಂತೆ ಪ್ರಭಾವಶಾಲಿಯಾಗಿ ಕಾಣದೆ ಹೋದರೂ, ಸುಪ್ತಾವಸ್ಥೆಯಲ್ಲಿರುವ ಜನಮಾನಸದ ಅಸಮಾಧಾನದ ತಂತುಗಳು ಆ ಕಾಲಘಟ್ಟದ ಎಲ್ಲ ಆಂದೋಲನಗಳನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಜೀವಂತಿಕೆಯಿಂದಿರಿಸಿವೆ.

ಹಾಗಾಗಿ ಏನೋ ಆಗುತ್ತಿದೆ ಎಂಬ ಆತಂಕಗಳ ಹಾಗೆಯೇ ಏನೂ ಮಾಡಲಾಗುತ್ತಿಲ್ಲವಲ್ಲಾ ಎಂಬ ಭ್ರಮನಿರಸನದ ಮಾತುಗಳು ಕ್ಲೀಷೆ ಎನಿಸಿಬಿಡುತ್ತವೆ. ಯಾವುದೇ ಸಮಾಜದ ಪ್ರಗತಿಯ ಹಾದಿಯಲ್ಲಿ ಎದುರಾಗಬಹುದಾದ ಪಲ್ಲಟಗಳೇ ನಮ್ಮ ಸಮಾಜದಲ್ಲೂ ಕಾಣುತ್ತಿವೆ. ಇದರ ಹಿಂದಿನ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಹಾಗೂ ಸಾಮುದಾಯಿಕ ಕಾರಣಗಳನ್ನು ಶೋಧಿಸುತ್ತಾ ಹೋದಂತೆ ನಾವು ಮತ್ತೊಮ್ಮೆ 1960-70ರ ದಶಕಗಳ ಹೋರಾಟಗಳ ಚೌಕಟ್ಟಿನೊಳಗೇ ಸಿಲುಕುವಂತಾಗಿರುವುದು ವಾಸ್ತವ. ಒಂದು ಸಣ್ಣ ಉದಾಹರಣೆಯನ್ನು ನೀಡಬಹುದಾದರೆ, ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ನರಮೇಧದ ನಡುವೆ ನಿಷ್ಕ್ರಿಯವಾಗಿರುವ ಯುದ್ಧವಿರೋಧಿ ಧ್ವನಿಗಳು ನಮ್ಮನ್ನು ಆ ಎರಡು ದಶಕಗಳ ವಿಯಟ್ನಾಂಗೆ ಕೊಂಡೊಯ್ಯುತ್ತದೆ. ಎಲ್ಲ ಸಾಮಾಜಿಕ ಆಯಾಮಗಳಲ್ಲೂ ಈ ಬೌದ್ಧಿಕ ಮಂಥನ ನಮ್ಮನ್ನು ಕಾಡುತ್ತಲೇ ಇವೆ. ಆದರೆ ಯಾವುದೇ ಚಲನಶೀಲ ಸಮಾಜದಲ್ಲಿ ಉಗಮಿಸುವ ಬೌದ್ಧಿಕ ಜಡತ್ವ ತಾತ್ಕಾಲಿಕವಾಗಷ್ಟೇ ಇರಲು ಸಾಧ್ಯ.

ಚರಿತ್ರೆಯ ಅರಿವೂ ಇಲ್ಲದ, ವರ್ತಮಾನದ ಕಾಳಜಿಯೂ ಇಲ್ಲದ, ಜಾಗತೀಕರಣ-ಬಲಪಂಥೀಯಯ ರಾಜಕಾರಣದಿಂದ ಭ್ರಮಾಧೀನವಾಗಿರುವ 21ನೆಯ ಶತಮಾನದ ಪೀಳಿಗೆಯ ದೃಷ್ಟಿಯಿಂದ ನೋಡಿದಾಗ, ಆ ಎರಡು ದಶಕಗಳ ಹೋರಾಟಗಳಿಗೆ ಮರುಭೇಟಿ ನೀಡುವ ಅವಶ್ಯಕತೆ ಎದ್ದು ಕಾಣುತ್ತದೆ. ಹಾಗೆಯೇ ಮಹಿಳೆಯರ, ಆದಿವಾಸಿಗಳ, ಗ್ರಾಮೀಣ ಬಡವರ, ಶೋಷಿತ ದಲಿತ ಸಮುದಾಯಗಳ, ಅಲ್ಪಸಂಖ್ಯಾತರ, ಅವಕಾಶವಂಚಿತರ ಹಾಗೂ ಅಂಚಿಗೆ ತಳ್ಳಲ್ಪಟ್ಟವರ ಅಂತರಂಗದ ಧ್ವನಿಗೆ ದನಿಯಾಗಿ, ಬದುಕಿನ ತಲ್ಲಣ-ತುಮುಲಗಳಿಗೆ ಸ್ಪಂದಿಸಿ ತಮ್ಮ ಬದುಕನ್ನು ನೊಂದವರಿಗಾಗಿಯೇ ಮುಡಿಪಾಗಿಟ್ಟು ನಿರಂತರ ಹೋರಾಟಗಳಲ್ಲಿ ತೊಡಗಿದ ಹಲವಾರು ಚೇತನಗಳ ಬದುಕಿನೊಳಗೊಮ್ಮೆ ಇಣುಕಿ ನೋಡುವ ಅವಶ್ಯಕತೆಯೂ ಎದ್ದು ಕಾಣುತ್ತದೆ. ಹೋರಾಟಗಳು ಸಮಾಜದ ಆಯಾಕಾಲದ ಅವಶ್ಯಕತೆಗಳಿಗನುಗುಣವಾಗಿ ರೂಪುಗೊಳ್ಳುವಂತೆಯೇ ಹೋರಾಟಗಾರರನ್ನೂ ಈ ಸನ್ನಿವೇಶಗಳೇ ಸೃಷ್ಟಿಸುತ್ತವೆ. ದೇಶ ಭಾಷೆಗಳ ಗಡಿಗಳಿಂದಾಚೆಗೆ ಸ್ಪಂದಿಸುವ ಇಂತಹ ಸಂವೇದನಾಶೀಲ ಮನಸ್ಸುಗಳೇ ಜನಾಂದೋಲನಗಳ ಕಾವನ್ನು ಕಾಪಿಟ್ಟು ಭವಿಷ್ಯದ ಪೀಳಿಗೆಗೆ ರವಾನಿಸುತ್ತವೆ. ಇಂತಹ ಒಂದು ಮನಸ್ಸು ಇಂದಿಗೂ ನಮ್ಮ ನಡುವೆ ಇದೆ. ಅದು ಎಸ್.‌ ಆರ್.‌ ಹಿರೇಮಠ್‌.

ಸಮಾಜ ಪರಿವರ್ತನ ಸಮುದಾಯ, ಜನ ವಿಕಾಸ ಆಂದೋಲನ,  ಜನ ಸಂಗ್ರಾಮ ಪರಿಷತ್‌, ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ ಹಾಗೂ ಜನಾಂದೋಲನಗಳ ಮಹಾಮೈತ್ರಿ ಮುಂತಾದ ಹಲವು ಆಯಾಮಗಳ ಜನಪರ ಚಳುವಳಿಗಳನ್ನು ಹುಟ್ಟುಹಾಕುತ್ತಲೇ ಈ ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ತಳಮಟ್ಟದ ಜನತೆಯವರೆಗೂ ತಲುಪಿಸುವುದೇ ಅಲ್ಲದೆ , ರಾಜಕೀಯ ಭ್ರಷ್ಟಾಚಾರ, ಕೋಮುವಾದ, ಮತೀಯವಾದ, ಸಾಮಾಜಿಕ ಅನ್ಯಾಯ, ದೌರ್ಜನ್ಯ, ಲಿಂಗ ತಾರತಮ್ಯ, ಗ್ರಾಮೀಣ ಬಡತನ, ನಿರುದ್ಯೋಗ, ಅಸ್ಪೃಶ್ಯತೆ, ಸಾಮಾಜಿಕಾರ್ಥಿಕ ಅಸಮಾನತೆ ಮೊದಲಾದ ಎಲ್ಲ ಅನಿಷ್ಠಗಳ ವಿರುದ್ಧವೂ ನಿರಂತರ ಹೋರಾಡುತ್ತಲೇ ಬಂದಿರುವ ಎಸ್.‌ ಆರ್.‌ ಹಿರೇಮಠ್‌ ಅವರ ಬದುಕಿನ ಹೆಜ್ಜೆಗಳನ್ನು ಗುರುತಿಸುವುದೆಂದರೆ ಆ ಹೆಜ್ಜೆಗಳಿಗೆ ಬೌದ್ಧಿಕವಾಗಿ ನಾವೂ ಹೆಜ್ಜೆಯಾಗಬೇಕು. ಹೀಗೆ ಲೌಕಿಕವಾಗಿಯೂ ಹೆಜ್ಜೆಯಾಗುವ ಮೂಲಕ ಸಾಮಾಜಿಕ ಕಾರ್ಯಕರ್ತೆ, ಲೇಖಕಿ, ಕವಯಿತ್ರಿ ರೂಪ ಹಾಸನ ಹಿರೇಮಠರ ಬದುಕಿನ ವಿಭಿನ್ನ ಮಜಲುಗಳನ್ನು ತಮ್ಮ ಕೃತಿ                    “ ಮಹಾಸಂಗ್ರಾಮಿ ”ಯಲ್ಲಿ ಹಿಡಿದಿಟ್ಟಿದ್ದಾರೆ.

ಸಂಗ್ರಾಮಿಯ ದಿಟ್ಟ ಹೆಜ್ಜೆಗಳು

ಎಸ್. ಆರ್‌. ಹಿರೇಮಠ್‌ ಅವರ ಹೋರಾಟದ ಹೆಜ್ಜೆಗಳನ್ನು ಬೆನ್ನತ್ತಿ ಹೋಗುವುದೆಂದರೆ ಕಳೆದ ಐದು ದಶಕಗಳ ಕರ್ನಾಟಕದ ಸಾಮಾಜಿಕ ಚಳುವಳಿಗಳ ನಿಘಂಟನ್ನು ತೆರೆದಿಟ್ಟಂತೆ. ಅಮೆರಿಕದ ಕಾರ್ಪೋರೇಟ್‌ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಲೇ 1970ರ ದಶಕದಲ್ಲಿ ಉಗಮಿಸುತ್ತಿದ್ದ ಹಲವು ಮಜಲುಗಳ ಸಾಮಾಜಿಕ ಚಳುವಳಿಗಳತ್ತ ಚಿತ್ತ ಹರಿಸಿದ ಹಿರೇಮಠ್‌ 1968-69ರಲ್ಲಿ ಕಾನ್ಸಸ್‌ ಸ್ಟೇಟ್‌ ಯೂನಿವರ್ಸಿಟಿಯಲ್ಲಿ ಭಾರತೀಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ತಮ್ಮ ಸಾಮಾಜಿಕ ಬದುಕಿನ ಹಾಳೆಗಳನ್ನು ತಿರುವಿಹಾಕಲಾರಂಭಿಸುತ್ತಾರೆ. ಅಂದಿನಿಂದ ಇಂದಿನವರೆಗೆ ಹಿರೇಮಠರ ಬದುಕಿನ ಪಯಣ ಕೌಟುಂಬಿಕ ಸ್ವಾರ್ಥವನ್ನು ದಾಟಿ ಸಮಾಜದ ಒಡಲಲ್ಲೇ ಉದ್ಭವಿಸುವ ಹತ್ತು ಹಲವಾರು ಜಟಿಲ ಸಮಸ್ಯೆಗಳತ್ತ ಸಾಗುತ್ತಲೇ ಬಂದಿದ್ದು, ಈವತ್ತಿನ ಜನಾಂದೋಲನಗಳ ಮಹಾಮೈತ್ರಿಯವರೆಗೂ ಸಾಗಿ ಬಂದಿದೆ.

1970ರ ದಶಕದಲ್ಲಿ ಯಾವುದೇ ಸಾಮಾಜಿಕ-ರಾಜಕೀಯ ಚಳುವಳಿಗೆ ಸ್ಫೂರ್ತಿಯಾಗಬಹುದಾಗಿದ್ದ ಎರಡು ಮಾರ್ಗಗಳೆಂದರೆ ಮಾರ್ಕ್ಸ್‌ವಾದಿ ನೆಲೆಯ ವಿವಿಧ ಮಜಲುಗಳು ಅಥವಾ ಆಧುನಿಕೋತ್ತರವಾದದಿಂದ ಪ್ರೇರಿತವಾದ ಜನಪರ ಚಳುವಳಿಗಳು, ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು ಹಾಗೂ ತಳಮಟ್ಟದ ಅವಕಾಶವಂಚಿತರನ್ನು ನೇರವಾಗಿ ತಲುಪುವಂತಹ ಗ್ರಾಮಮಟ್ಟದ ಸೇವಾ ಸಂಸ್ಥೆಗಳ ಹಾದಿ. ತಾತ್ವಿಕವಾಗಿ ಮಾರ್ಕ್ಸ್‌ವಾದವನ್ನು ಅಳವಡಿಸಿಕೊಳ್ಳದಿದ್ದರೂ, ಮಾರ್ಕ್ಸ್‌ನ ಸೈದ್ಧಾಂತಿಕ ನೆಲೆಯನ್ನು ಅವಲಂಬಿಸದಿದ್ದರೂ,  ಹಿರೇಮಠ್‌ ತಮ್ಮ ಹೋರಾಟದುದ್ದಕ್ಕೂ ಬಂಡವಾಳಶಾಹಿ ಮತ್ತು ಅದರ ಶೋಷಣೆಯ ಅಸ್ತ್ರಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಲೇ ಬಂದಿರುವುದು ವಿಶೇಷ. 1980-90ರ ದಶಕದಲ್ಲಿ ಎನ್‌ಜಿಒ ರಾಜಕಾರಣದ ಬಗ್ಗೆ ಭಾರತದಲ್ಲಿ ವ್ಯಾಪಕವಾದ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ತಮ್ಮ ಸ್ಥಿತಪ್ರಜ್ಞಾವಸ್ಥೆಯೊಂದಿಗೆ ತಳಮಟ್ಟದ ಜನಸಮುದಾಯಗಳ ನೋವು-ಸಂಕಷ್ಟ-ತಲ್ಲಣಗಳಿಗೆ ಸ್ಪಂದಿಸುತ್ತಲೇ ಮುನ್ನಡೆದ ಹಿರೇಮಠ್‌, ಎಡಪಂಥೀಯ ಚಳುವಳಿಗಳೊಡನೆ ಅನುಸಂಧಾನ ಮಾಡುತ್ತಲೇ ಜನಾಂದೋಲನಗಳನ್ನು ರೂಪಿಸಿರುವುದು ಮತ್ತೊಂದು ವಿಶೇಷ. ಕೆಲವು ಸಂದರ್ಭಗಳಲ್ಲಿ ಎಡಪಕ್ಷಗಳು ಒಳನುಸುಳಲಾರದ/ನುಸುಳಿರದ ಜನವಲಯಗಳನ್ನೂ ಭೇದಿಸಿರುವುದು ಈ ಹೋರಾಟಗಳ ಒಂದು ಲಕ್ಷಣ.

ಹಿರೇಮಠರ ಈ ಹೋರಾಟದ ಹೆಜ್ಜೆಗಳನ್ನು “ಮಹಾಸಂಗ್ರಾಮಿ” ಯ ಹೆಜ್ಜೆಗಳಾಗಿ ಲೇಖಕಿ ರೂಪ ಹಾಸನ ದಾಖಲಿಸುತ್ತಾ ಹೋಗುತ್ತಾರೆ. ಐದು ತೆನೆಗಳಲ್ಲಿ ವಿಕಸಿಸುವ ದೀರ್ಘ ಹೋರಾಟದ ಫಸಲನ್ನು ಸವಿಸ್ತಾರವಾಗಿ ಪರಿಶೋಧಿಸಿರುವ ರೂಪ ಹಾಸನ ಹಿರೇಮಠರ ಬಾಲ್ಯ, ಯೌವ್ವನ, ವಿದ್ಯಾರ್ಥಿ ದೆಸೆಯ ಬೆಳವಣಿಗೆಗಳನ್ನು ಪರಿಚಯಿಸುತ್ತಲೇ ಅಮೆರಿಕಾಗೆ ಹಾರಿದ ನಂತರ ಅವರು ತೆರೆದುಕೊಂಡ ಹೊಸ ಸಾಮಾಜಿಕ ಪರಿಸರದತ್ತ ಹೊರಳುತ್ತಾರೆ. ಹಿರೇಮಠ್‌ ವಿದೇಶದಲ್ಲಿ ಕುಳಿತು ಭಾರತದ ಸಾಮಾನ್ಯ ಜನತೆಯ ಬದುಕಿನ ತುಮುಲಗಳನ್ನು ಶೋಧಿಸಲು ತೊಡಗುವ ವೇಳೆಗೇ ಭಾರತದಲ್ಲಿ ಹೇರಲ್ಪಡುವ 1975ರ ತುರ್ತುಪರಿಸ್ಥಿತಿ ಅವರ ಹೋರಾಟದ ದಿಕ್ಕನ್ನು ಬದಲಿಸುತ್ತದೆ. ವಿದೇಶಿ ನೆಲದಲ್ಲಿ ನಿಂತು, ಅಲ್ಲಿನ ಭಾರತೀಯ ಸಂಜಾತರ ಹಾಗೂ ಸ್ಥಳೀಯ ಚಿಂತಕರ ಜೊತೆಗೂಡಿ ಭಾರತದಲ್ಲಿ ಉದ್ಭವಿಸಿದ್ದ ಸರ್ವಾಧಿಕಾರದ ಆಳ್ವಿಕೆ ಮತ್ತು ಸಾಂವಿಧಾನಿಕ ಹಕ್ಕುಗಳ ದಮನದ ಬಗ್ಗೆ ವಿಶೇಷ ಆಸ್ಥೆ ವಹಿಸುವ ಹಿರೇಮಠ್‌ ತುರ್ತುಪರಿಸ್ಥಿತಿಯ ವಿರುದ್ಧ ತಾತ್ವಿಕವಾಗಿ ಮಹಾಸಮರವನ್ನೇ ಸಜ್ಜುಗೊಳಿಸುತ್ತಾರೆ.  ಬಹುಶಃ ಇಂದಿನ ಸನ್ನಿವೇಶದಲ್ಲಿ ಇಂತಹ ಯಾವುದೇ ಪ್ರಭುತ್ವ ವಿರೋಧಿ ಪ್ರಯತ್ನಗಳು “ ದೇಶದ್ರೋಹಿ ” ಪಟ್ಟಕ್ಕೆ ಗುರಿಯಾಗುತ್ತಿದ್ದವು.

ಬಡತನ, ಹಸಿವೆ, ನಿರುದ್ಯೋಗ ಹಾಗೂ ನಿರ್ಗತಿಕತೆ ಇವೆಲ್ಲವನ್ನೂ ಸಮಗ್ರವಾಗಿ ಕಾಣಬೇಕಾದರೆ ಇಂದಿಗೂ ಸಹ ಭಾರತದ ಕುಗ್ರಾಮಗಳತ್ತಲೇ ನಡೆಯಬೇಕು. ಈ ವಾಸ್ತವವನ್ನು ಗ್ರಹಿಸಿ ಹಿರೇಮಠ್‌ ಧಾರವಾಡ ಸಮೀಪದ ಮೆಡ್ಲೇರಿ ಎಂಬ ಕುಗ್ರಾಮವನ್ನು ತಮ್ಮ ಕರ್ಮಭೂಮಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಗಾಂಧಿ ತತ್ವವನ್ನೇ ಅನುಸರಿಸುತ್ತಾ ಗ್ರಾಮೀಣ ಆರ್ಥಿಕತೆಯಲ್ಲಿ ಭಾರತದ ಭವಿಷ್ಯವನ್ನು ಕಾಣುವ ಹಂಬಲದೊಂದಿಗೆ “ಆಂದೋಲನ ಜೀವಿ” ಯಾಗಿ (ಇದು ನವ ಭಾರತದಲ್ಲಿ ಹೋರಾಟಗಾರರನ್ನು ಬಣ್ಣಿಸುವ ಹೊಸ ಪರಿ) ರೂಪುಗೊಳ್ಳುವ ಎಸ್. ಆರ್. ಹಿರೇಮಠ್‌ ಸ್ಥಾಪಿತ ವ್ಯವಸ್ಥೆಯ ವಾರಸುದಾರರಿಂದ, ಸ್ಥಳೀಯ ʼಜನಪ್ರತಿನಿಧಿಗಳಿಂದʼ ಸಹಜವಾಗಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತಲೇ ಗ್ರಾಮಗಳಲ್ಲಿ ತಳಮಟ್ಟದ ಜನತೆಯನ್ನು ಸಂಘಟಿಸಿ, ಅವರಲ್ಲಿ ಸ್ವಾವಲಂಬಿ ಬದುಕಿನ ಕನಸನ್ನು ಬಿತ್ತುತ್ತಾ ಹೋಗುವುದು ಒಂದು ವಿಶಿಷ್ಟ ಕಥನ. ಈ ಹಾದಿಯಲ್ಲಿ ಅವರು ಎದುರಿಸುವ ಹತ್ತುಹಲವು ಸವಾಲುಗಳನ್ನು ಈ ಕೃತಿಯಲ್ಲಿ ಎಳೆಎಳೆಯಾಗಿ ಬಿಡಿಸಿ ಹೇಳಲಾಗಿದೆ.

ತಳಮಟ್ಟದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ತೊಡಗಿಕೊಳ್ಳುವ ಹಿರೇಮಠರಿಗೆ ಸಹಜವಾಗಿಯೇ ಅಲ್ಲಿ ಕಾಣುವುದು ಮಹಿಳೆಯರ ಸುತ್ತಲಿನ ಜಟಿಲ-ಸಂಕೀರ್ಣ ಸವಾಲುಗಳು, ತಳಸಮುದಾಯಗಳ ಬವಣೆ ಮತ್ತು ಗ್ರಾಮೀಣ ಬಡಜನತೆಯ ಸಂಕಷ್ಟಗಳು. ಈ ಸವಾಲುಗಳಿಗೆ ಭಾರತದ ಸಂವಿಧಾನದ ಚೌಕಟ್ಟಿನಲ್ಲೇ ಲಭ್ಯವಾಗಬಹುದಾದ ಪರಿಹಾರೋಪಾಯಗಳನ್ನು ಗುರುತಿಸುವುದಷ್ಟೇ ಅಲ್ಲದೆ ಸರ್ಕಾರಗಳು ಕಾಲಕಾಲಕ್ಕೆ ರೂಪಿಸುವ ಕಾರ್ಯಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹಿರೇಮಠ್‌ ಸಾಮಾನ್ಯ ಜನತೆಯ ನಡುವೆ ಜಾಗೃತಿ ಮೂಡಿಸುತ್ತಾರೆ. ತಮ್ಮ ಸಾಂವಿಧಾನಿಕ ಬದುಕಿನ ಹಕ್ಕುಗಳಿಗಾಗಿ ಹೋರಾಡುವ ಆತ್ಮಸ್ಥೈರ್ಯವನ್ನು ಅನಕ್ಷರಸ್ಥರಲ್ಲೂ ಬಿತ್ತುವ ಮೂಲಕ ಗ್ರಾಮೀಣ ಜನತೆಗೆ ಹಕ್ಕೊತ್ತಾಯ ಹೋರಾಟಗಳ ಮನೋಭಾವವನ್ನೂ ಮೂಡಿಸಲು ಯಶಸ್ವಿಯಾಗುತ್ತಾರೆ. ಈ ಅಹಿಂಸಾತ್ಮಕ ಮಾರ್ಗದಲ್ಲೇ ಕರ್ನಾಟಕದ ಮೂಲೆಮೂಲೆಗಳನ್ನು ತಲುಪಿರುವ ಎಸ್.‌ ಆರ್.‌ ಹಿರೇಮಠ್‌ ತಳಮಟ್ಟದ ಜನರನ್ನು ಸಂಘಟಿಸುತ್ತಾ ಐದು ದಶಕಗಳನ್ನು ಪೂರೈಸಿದ್ದಾರೆ.

ಹೆಜ್ಜೆಗಳ ದಾಖಲಿಸುವ ವಿಶಿಷ್ಟ ಶೈಲಿ

ಲೇಖಕಿ ರೂಪ ಹಾಸನ ಎಸ್.ಆರ್.‌ ಹಿರೇಮಠರ ಬದುಕಿನ ಹಾದಿಯನ್ನು, ಹೋರಾಟದ ಹೆಜ್ಜೆಗಳನ್ನು ಗುರುತಿಸಲು ಕಥನ ಶೈಲಿಯನ್ನು ಅನುಸರಿಸಿರುವುದು “ಮಹಾಸಂಗ್ರಾಮಿ” ಪುಸ್ತಕವನ್ನು ಮತ್ತಷ್ಟು ತಲಸ್ಪರ್ಶಿಯಾಗಿಸುತ್ತದೆ. ಪುಸ್ತಕದ ಕೊನೆಯ ಭಾಗದಲ್ಲಿ (ಲೇಖಕಿಯ ಪರಿಭಾಷೆಯಲ್ಲಿ ʼತೆನೆʼ) ಹಿರೇಮಠರ ಸ್ವ-ವಿವರಣೆಯ ಮೂಲಕ ಇಡೀ ಕೃತಿಗೆ ಒಂದು ಸಾರ್ಥಕತೆಯನ್ನು ಒದಗಿಸುವ ಲೇಖಕಿ ರೂಪ ಹಾಸನ, ಮೊದಲ ನಾಲ್ಕು ಭಾಗಗಳಲ್ಲಿ ಅವರ ಬದುಕಿನ ಪ್ರತಿಯೊಂದು ಹೆಜ್ಜೆಯನ್ನೂ ಹೋರಾಟಗಳ ನಡುವೆಯೇ ಗುರುತಿಸುವ ಪ್ರಯತ್ನ ಮಾಡಿರುವುದು ಪ್ರಶಂಸನೀಯ. ರೂಪ ಹಾಸನ ಅವರ ಕಥನ ಶೈಲಿಯನ್ನು ಗಮನಿಸಿದರೆ ಅವರು ಹಿರೇಮಠರ ಸಮಕಾಲೀನರೇನೋ, ಅವರೊಟ್ಟಿಗೇ ಹೆಜ್ಜೆ ಹಾಕಿದವರೇನೋ ಎನಿಸುವಷ್ಟು ಮಟ್ಟಿಗೆ ವಿಷಯಗಳು, ಪ್ರಸಂಗ-ಪ್ರಕರಣಗಳು ಮನಸ್ಸಿಗೆ ನಾಟುತ್ತವೆ. ಹಲವು ಆಕರ ಲೇಖನಗಳನ್ನು ಆಧರಿಸಿದ್ದರೂ ಇಡೀ ಪುಸ್ತಕದ ಜೀವಾಳ ಇರುವುದು ಲೇಖಕಿಯು ಹಿರೇಮಠರೊಡನೆ ನಡೆಸಿದ ಸಂಧಾನ-ಸಂಭಾಷಣೆ ಹಾಗೂ ವೈಯುಕ್ತಿಕ ಸಮಾಲೋಚನೆಯಲ್ಲಿ.

ಎಸ್.ಆರ್.‌ ಹಿರೇಮಠರ ಕೌಟುಂಬಿಕ ಬದುಕು, ವ್ಯಕ್ತಿಗತ ತಾತ್ವಿಕ ನಿಲುಮೆಗಳು, ಸಾಮಾಜಿಕ ಕಾಳಜಿ ಮತ್ತು ಕಳಕಳಿ ಹಾಗೂ ಸೈದ್ಧಾಂತಿಕ ನೆಲೆಗಳನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋಗುವ  “ ಹಿರೇಮಠರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ ”ದ ಈ ಕೃತಿ ಲೇಖಕಿ ರೂಪ ಹಾಸನ ಅವರ ಸಾಹಿತ್ಯಕ ಬದ್ಧತೆ, ಸೃಜನಶೀಲತೆ ಮತ್ತು ಸಾಮಾಜಿಕ ಕಾಳಜಿಯನ್ನು ಸಮನಾಗಿ ಬಿಂಬಿಸುತ್ತದೆ. ನಿರೂಪಕಿಯ ನೆಲೆಯಲ್ಲಿ ನಿಂತು ಹಿರೇಮಠರ ಜೀವಪರತೆಯನ್ನು, ಧ್ಯೇಯಾದರ್ಶಗಳನ್ನು ಹಾಗೂ ಅವರ ಹೋರಾಟದ ವಿವಿಧ ಮಜಲುಗಳನ್ನು ಪರಿಚಯಿಸುತ್ತಾ ಹೋಗುವ ರೂಪ ಹಾಸನ ಎಲ್ಲಿಯೂ ಏಕತಾನತೆಗೆ ಅವಕಾಶವೀಯತೆ, ಪುನರಾವರ್ತನೆಗಳಿಗೆ ಎಡೆಮಾಡಿಕೊಡದೆ, “ಮಹಾ ಸಂಗ್ರಾಮಿ”ಯ ಜೀವನ ಚರಿತ್ರೆಯನ್ನು ಹಂತಹಂತವಾಗಿ ಓದುಗರ ಮುಂದಿಡುತ್ತಾ ಹೋಗುತ್ತಾರೆ. ಈ ಬೌದ್ಧಿಕ ಕ್ರಿಯೆಯಲ್ಲಿ ರೂಪ ಹಾಸನ ಅವರು ಅನುಸರಿಸಿರುವ ಕಥನ ಶೈಲಿ ಓದುಗರ ಆಸಕ್ತಿಯನ್ನು ಕೊನೆಯವರೆಗೂ ಹಿಡಿದಿಡುತ್ತದೆ. ಎಲ್ಲಿಯೂ ಸಹ ನಿರೂಪಕಿಯಾಗಿ ಸ್ವಾಭಿಪ್ರಾಯವು ದಾಖಲಾಗದಂತೆ, ತಮ್ಮ ವ್ಯಕ್ತಿಗತ ತಾತ್ವಿಕ ನಿಲುಮೆಗಳು ಉದ್ದೇಶಿತ ವ್ಯಕ್ತಿಯ ಹೆಜ್ಜೆಗುರುತುಗಳನ್ನು ಅತಿಕ್ರಮಿಸದಂತೆ, ಎಚ್ಚರವಹಿಸಿರುವ ಲೇಖಕಿ ಒಂದು ಇಡೀ ಕೃತಿಯನ್ನು ʼಶ್ರವ್ಯ ಆತ್ಮಕತೆʼ ಯ ರೂಪದಲ್ಲಿ ಓದುಗರ ಮುಂದಿಟ್ಟಿದ್ದಾರೆ.

ಸ್ವತಃ ಮಹಿಳಾ ಹೋರಾಟಗಾರ್ತಿಯಾಗಿ, ಸಂವೇದನಾಶೀಲ ಕವಯಿತ್ರಿ-ಲೇಖಕಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಅತ್ಯಂತ ಅಲಕ್ಷಿತ ಸಮುದಾಯಗಳ ನಡುವೆ ಕ್ರಿಯಾಶೀಲವಾಗಿರುವ ಲೇಖಕಿ ರೂಪ ಹಾಸನ,  ತಮ್ಮ ಸಾಮಾಜಿಕ ಚಟುವಟಿಕೆಗಳ ನಡುವೆಯೇ,  ಕಳೆದ ಅರ್ಧ ಶತಮಾನದಲ್ಲಿ ಕರ್ನಾಟಕ ಕಂಡ ಅಪ್ರತಿಮ “ಆಂದೋಲನಜೀವಿ”ಯನ್ನು ಸಂಪರ್ಕಿಸಿ, ಸಂದರ್ಶಿಸಿ ಅವರ ಮನದಾಳದ ಮಾತುಗಳನ್ನು ಅಕ್ಷರ ರೂಪಕ್ಕಿಳಿಸಿರುವುದು ಒಂದು ಸಾಹಿತ್ಯಕ ಸಾಧನೆ. ಎಸ್.ಆರ್.‌ಹಿರೇಮಠ್‌ ಅವರನ್ನು ʼಮಹಾಸಂಗ್ರಾಮಿʼ ಎಂದು ಸಂಬೋಧಿಸುವ ಮೂಲಕ ಅವರ ಅವಿರತ ಹೋರಾಟದ ಹೆಜ್ಜೆಗಳಿಗೆ ಸಾರ್ಥಕತೆಯನ್ನೂ ಲೇಖಕಿ ನೀಡಿದ್ದಾರೆ.  ಪ್ರಸ್ತಾವನೆಯಲ್ಲಿ ತಾವೇ ಹೇಳಿರುವಂತೆ ಲೇಖಕಿಯು ಇಡೀ ಕೃತಿಗೆ ʼಓದಿಸಿಕೊಳ್ಳಬಲ್ಲ ಸಾಮರ್ಥ್ಯದʼ ಮಾನದಂಡವನ್ನು ಅನ್ವಯಿಸಿರುವುದು ಅಕ್ಷರಶಃ ಸತ್ಯ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೇಳುವುದಾದರೆ  “ಮಹಾಸಂಗ್ರಾಮಿ” ಕೃತಿ ಕೇವಲ ಓದಿಸಿಕೊಂಡು ಹೋಗದೆ ಮನದಾಳಕ್ಕಿಳಿದು ಕೂತುಬಿಡುತ್ತದೆ. ಈ ಶ್ರೇಯ ಲೇಖಕಿ ರೂಪ ಹಾಸನ ಅವರಿಗೆ ಸಲ್ಲಲೇಬೇಕು.

 ತಳಸಮುದಾಯಗಳ ಬದುಕಿಗೆ ನಿರಂತರ ತುಡಿಯುವ, ಅವರ ನೋವುಗಳಿಗೆ ಸದಾ ಮಿಡಿವ ಯಾವುದೇ ಸಾಮಾಜಿಕ ಹೋರಾಟಗಳನ್ನು, ಹೋರಾಟಗಾರರನ್ನು ಈ ರೀತಿ ದಾಖಲಿಸುವ ಮೂಲಕ ಭವಿಷ್ಯದ ತಲೆಮಾರಿಗೆ ಸಮಕಾಲೀನ ಇತಿಹಾಸದ ಹೆಜ್ಜೆಗುರುತುಗಳನ್ನು ಉಳಿಸಿ ಹೋಗುವ ಒಂದು ಜವಾಬ್ದಾರಿ ವರ್ತಮಾನದ ಬೌದ್ಧಿಕ ವಲಯದ ಮೇಲಿದೆ. ಅಕಾಡೆಮಿಕ್‌ ಅಧ್ಯಯನ, ಸಂಶೋಧನೆ ಮುಂತಾದ ಹಾದಿಗಳಿಂದಲೂ ಹೊರತಾದ ಸಾಹಿತ್ಯಕ ಪ್ರಯತ್ನಗಳು ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯ ಎನ್ನುವುದನ್ನು ಲೇಖಕಿ ರೂಪ ಹಾಸನ ತಮ್ಮ “ಮಹಾಸಂಗ್ರಾಮಿ” ಮೂಲಕ ಸಾಬೀತುಪಡಿಸಿದ್ದಾರೆ. ಎಸ್.ಆರ್.‌ ಹಿರೇಮಠ್‌ ಹೇಗೆ ಕರ್ನಾಟಕದ ಜನಮಾನಸದಲ್ಲಿ ಅಪ್ರತಿಮ ಹೋರಾಟಗಾರರಾಗಿ ಚಿರಸ್ಥಾಯಿಯಾಗಿ ಉಳಿಯುತ್ತಾರೋ ಹಾಗೆಯೇ ರೂಪ ಹಾಸನ ಅವರ ಈ ಗ್ರಂಥವೂ ಉಳಿಯಲಿದೆ. ಈ ದೃಷ್ಟಿಯಿಂದ ಪ್ರತಿಯೊಬ್ಬ ಸಾಮಾಜಿಕ ಕಾರ್ಯಕರ್ತರೂ ಓದಲೇಬೇಕಾದ ಒಂದು ಕೃತಿ ನಮ್ಮ ಮುಂದಿದೆ. ಹೋರಾಟಗಳೊಂದಿಗೇ ಈ ಅಕ್ಷರ ಸಂಪತ್ತನ್ನೂ ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ಸಮಾಜದ ಮೇಲಿದೆ. ಮಾರ್ಕ್ಸ್‌-ಲೋಹಿಯಾ-ಅಂಬೇಡ್ಕರ್-ಗಾಂಧಿವಾದಗಳನ್ನು ಪ್ರತ್ಯೇಕಿಸಿ, ಏಕಮೇವ ಮಾರ್ಗವಾಗಿ ನೋಡುತ್ತಿದ್ದ ಕಾಲಮಾನವನ್ನು ದಾಟಿ, ಸಮನ್ವಯದ ಹೋರಾಟದ ಪರ್ವ ತಲುಪಿರುವ ವರ್ತಮಾನದ ಕಾಲಘಟ್ಟದಲ್ಲಿ ಈ ಕೃತಿ ಹೆಚ್ಚು ಪ್ರಸ್ತುತತೆ ಪಡೆದುಕೊಳ್ಳುತ್ತದೆ.

ರೂಪ ಹಾಸನ ಅವರ ಸಾಹಿತ್ಯಕ ಪಯಣ ಇದೇ ರೀತಿ ವಿಭಿನ್ನ ಆಯಾಮಗಳಲ್ಲಿ ಕವಲೊಡೆದು ಮುನ್ನಡೆಯಲಿ ಎಂಬ ಆಶಯದೊಂದಿಗೆ..

‍ಲೇಖಕರು avadhi

November 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: