ಶ್ರೀನಿವಾಸ ಪ್ರಭು ಅಂಕಣ: ನಾನೇ ಮೂರ್ಛೆ ಹೋದೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 117
——————
2002 ರಲ್ಲಿ ಪ್ರಸಾರ ಪ್ರಾರಂಭವಾದರೂ 2001ರಲ್ಲಿಯೇ ಚಿತ್ರೀಕರಣ ಪ್ರಾರಂಭಗೊಂಡ ಈ ಟಿವಿಯ ಒಂದು ಪ್ರಮುಖ ದೈನಂದಿನ ಧಾರಾವಾಹಿಯೆಂದರೆ ‘ಶರಪಂಜರ’. ಈ ಧಾರಾವಾಹಿಯ ನಿರ್ಮಾಪಕ ಹಾಗೂ ನಿರ್ದೇಶಕ— ಅಶೋಕ್ ನಾಯ್ಡು. ಈ ಅಶೋಕ ದೂರದರ್ಶನ ಕೇಂದ್ರದಲ್ಲಿ ಕ್ಯಾಮರಾಮನ್ ಆಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ವೃತ್ತಿಪರ ಛಾಯಾಗ್ರಾಹಕ—ನಿರ್ದೇಶಕನಾಗಿ ತೊಡಗಿಕೊಂಡವನು. ದೂರದರ್ಶನದಲ್ಲಿ ನನ್ನ ಸಹೋದ್ಯೋಗಿಯಾಗಿದ್ದಾಗ ನನ್ನ ಹಲವಾರು ಕಿರುಚಿತ್ರಗಳಿಗೆ ಸೊಗಸಾದ ಛಾಯಾಗ್ರಹಣ ಮಾಡಿಕೊಟ್ಟಿದ್ದ ಅಶೋಕನಿಗೆ ಮೊದಲಿನಿಂದಲೂ ನಿರ್ದೇಶನದಲ್ಲಿ ಅತೀವ ಆಸಕ್ತಿ.

ದೂರದರ್ಶನದಲ್ಲಿದ್ದಾಗ ಅಶೋಕ್ ‘ತೆರೆದ ಹೃದಯ ಚಿಕಿತ್ಸೆ’ಯೊಂದನ್ನು ಆಪರೇಷನ್ ನಡೆಯುತ್ತಿರುವಂತೆಯೇ ವೈದ್ಯರ ಸೂಕ್ತ ಮಾರ್ಗದರ್ಶನದಲ್ಲಿ ಮೈ ನವಿರೇಳಿಸುವಂತೆ ಚಿತ್ರೀಕರಿಸಿದ್ದ! ಈ ಸಾಕ್ಷ್ಯಚಿತ್ರದಲ್ಲಿ ಇಡೀ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯನ್ನು ಎಳೆಎಳೆಯಾಗಿ ವಿವರಿಸುವ ನಿರೂಪಕನ ಪಾತ್ರವನ್ನು ನಾನು ನಿರ್ವಹಿಸಬೇಕಿತ್ತು! ‘ಜಬ್ ದಿಲ್ ಹೀ ಟೂಟ್ ಗಯಾ ಹಮ್ ಜೀ ಕೇ ಕ್ಯಾ ಕರೇಂಗೇ’ ಎಂಬ ಪ್ರಸಿದ್ಧ ಸೈಗಾಲ್ ರ ಹಾಡಿನೊಂದಿಗೆ ಪ್ರಾರಂಭವಾಗುತ್ತಿದ್ದ ನಿರೂಪಣೆಯ ಮೊದಲ ಭಾಗವನ್ನು ನಮ್ಮ ಕೇಂದ್ರದ ಹೊರ ಆವರಣದಲ್ಲಿಯೇ ಯಶಸ್ವಿಯಾಗಿ ಚಿತ್ರೀಕರಿಸಿಕೊಂಡು ಶಸ್ತ್ರಚಿಕಿತ್ಸೆಯ ಯಥಾವತ್ ಚಿತ್ರೀಕರಣದ ದೃಶ್ಯಾವಳಿಗೆ ಧ್ವನಿ ನೀಡಲು ಸ್ಟುಡಿಯೋದ ಒಳಗೆ ಹೋದೆವು.

ಸಂಕಲನ ಕೇಂದ್ರದಲ್ಲಿಯೇ ಧ್ವನಿ ಮುದ್ರಣದ ವ್ಯವಸ್ಥೆಯಾಗಿತ್ತು. ಅಶೋಕ್ ಟೇಪ್ ಅನ್ನು ಚಲಾಯಿಸುತ್ತಿದ್ದಂತೆಯೇ ಶಸ್ತ್ರಚಿಕಿತ್ಸೆಯ ಪೂರ್ವಸಿದ್ಧತೆಗಳ ದೃಶ್ಯಗಳು…ನಂತರ ಆಪರೇಷನ್ ಟೇಬಲ್ ಮೇಲೆ ಮಲಗಿರುವ ವ್ಯಕ್ತಿ…ಸುತ್ತುವರಿದಿರುವ, ಕೈಗಳಿಗೆ ಗವುಸು—ಮುಖಕ್ಕೆ ಮುಸುಕು ಧರಿಸಿರುವ ವೈದ್ಯರು—ಇತರ ಸಹಾಯಕರು..ದೊಡ್ಡ ದೊಡ್ಡ ದೀಪಗಳು..ಬಗೆಬಗೆಯ ಆಯುಧಗಳು—ಸಲಕರಣೆಗಳು…ನೋಡುತ್ತಿದ್ದಂತೆ ನನಗೆ ಸಣ್ಣಗೆ ನಡುಕ ಪ್ರಾರಂಭವಾಯಿತು! ಹೃದಯ ಸಮಸ್ಯೆ ಇದ್ದ ವ್ಯಕ್ತಿಗೆ ಅರಿವಳಿಕೆಯನ್ನು ನೀಡಿ ಅವನನ್ನು ಶಸ್ತ್ರಚಿಕಿತ್ಸೆಗೆ ಸಿದ್ಧಗೊಳಿಸಿ ಹರಿತವಾದ ಶಸ್ತ್ರವನ್ನೆತ್ತಿಕೊಂಡು ವೈದ್ಯರು ಹೃದಯ ಭಾಗವನ್ನು ಸೀಳುತ್ತಿದ್ದಂತೆಯೇ ಛಿಲ್ಲೆಂದು ಹಾರಿದ ರಕ್ತದ ಒರತೆಯನ್ನು ಕಂಡು ನಾನು ಹೆಚ್ಚುಕಡಿಮೆ ಪ್ರಜ್ಞಾಹೀನನೇ ಆಗಿಬಿಟ್ಟೆ!

ಇನ್ನು ನಿರೂಪಣೆಯನ್ನು ನೀಡುವುದಾದರೂ ಎಲ್ಲಿ ಬಂತು!? ‘ಅಣ್ಣಾ, ಈ ಚಿತ್ರಕ್ಕೆ ನಿರೂಪಣೆಯನ್ನು ನೀಡುವುದು ನನ್ನಿಂದಾಗದ ಕೆಲಸ; ದಯವಿಟ್ಟು ಕ್ಷಮಿಸಿಬಿಡು’ ಎಂದು ಅಶೋಕನಿಗೆ ಕೈ ಮುಗಿದುಬಿಟ್ಟೆ. ಅಶೋಕನಿಗೋ ಒಂದೆಡೆ ನನ್ನ ಅವಸ್ಥೆ ಕಂಡು ಕನಿಕರ, ಮತ್ತೊಂದೆಡೆ ಕೆಲಸ ಬೇಗ ಮುಗಿಸುವ ಕಾತರ! “ಅಯ್ಯಾ ಪುಣ್ಯಾತ್ಮ..ಷೂಟ್ ಮಾಡಿಕೊಂಡು ಬಂದಿರೋ ಚಿತ್ರಕ್ಕೆ ವಿವರಣೆ ಕೊಡೋದಕ್ಕೇ ಇಷ್ಟು ಪರದಾಡ್ತಿದೀಯಾ..ನಿನ್ನನ್ನೇ ಆಪರೇಷನ್ ಥಿಯೇಟರ್ ಗೆ ಕರಕೊಂಡು ಹೋಗಬೇಕಾಗಿ ಬಂದಿದ್ರೆ ಏನೋ ಗತಿ?” ಎಂದು ನಗುತ್ತಲೇ ನುಡಿದು ಅವನೇ ಒಂದು ಮಾರ್ಗವನ್ನೂ ಸೂಚಿಸಿದ: ” ನೀನು ಚಿತ್ರವನ್ನ ನೋಡಲೇಬೇಡ..ನಾನು ನಿನ್ನ ಪಕ್ಕ ಕೂತು ನಿರೂಪಣೆಯ ಅಗತ್ಯವಿದ್ದಾಗ ಒಂದ್ಸಲ ತಟ್ತೀನಿ..ನಿಲ್ಲಿಸಬೇಕಾದಾಗ ಇನ್ನೊಂದ್ಸಲ ತಟ್ತೀನಿ..ನೀನು script ನೋಡಿಕೊಂಡು ನಿರೂಪಣೆ ಮಾಡಿ ಮುಗಿಸು..ಸರೀನಾ?” ಎಂದ. ನನಗೂ ಅದೇ ಸೂಕ್ತವೆನ್ನಿಸಿತು.

ಪಕ್ಕದಲ್ಲಿ ಕೂತ ಅಶೋಕನಿಂದ ಸಾಕಷ್ಟು ಸಲ ‘ತಟ್ಟಿಸಿ’ಕೊಂಡು ಹಾಗೂ ಹೀಗೂ ಯಶಸ್ವಿಯಾಗಿ ನಿರೂಪಣೆಯನ್ನು ನೀಡಿ ಪೂರೈಸಿದೆ! ಮುಂದೆ ಅನೇಕ ವರ್ಷಗಳ ಕಾಲ ಅನೇಕಾನೇಕ ಬಾರಿ ಮರುಪ್ರಸಾರಗೊಂಡ ಸಾಕ್ಷ್ಯಚಿತ್ರವದು. ಈಗಲೂ ಕೆಲವರು ತೆರೆದ ಹೃದಯದ ಶಸ್ತ್ರಚಿಕಿತ್ಸೆಯ ಆ ಸಾಕ್ಷ್ಯಚಿತ್ರವನ್ನು ನೆನಪಿಸಿಕೊಳ್ಳುವುದುಂಟು. ಆದರೆ ಇಡೀ ಚಿತ್ರಕ್ಕೆ ನಿರೂಪಣೆಯನ್ನು ನೀಡಿ ಪ್ರತಿ ಹಂತವನ್ನೂ ಎಳೆಎಳೆಯಾಗಿ ವಿವರಿಸಿರುವ ನಾನು ಮಾತ್ರ ಆ ಅಪೂರ್ವ ಸಾಕ್ಷ್ಯಚಿತ್ರವನ್ನು ಒಮ್ಮೆಯೂ ನೋಡಿಲ್ಲ!!

ಇಂಥಾ ಸೃಜನಶೀಲ ಛಾಯಾಗ್ರಾಹಕ—ನಿರ್ದೇಶಕ ಅಶೋಕ್ ನಾಯ್ಡು, ಈ ಟಿವಿಗಾಗಿ ನಿರ್ಮಿಸಿ ನಿರ್ದೇಶಿಸುತ್ತಿದ್ದ ತನ್ನ ‘ಶರಪಂಜರ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಲು ನನ್ನನ್ನು ಆಹ್ವಾನಿಸಿದಾಗ ನನ್ನ ಖುಷಿಗೆ ಪಾರವೇ ಇಲ್ಲ. ಆತ್ಮೀಯ ಹಳೆಯ ಗೆಳೆಯನೊಂದಿಗೆ ಮತ್ತೆ ದೀರ್ಘಾವಧಿಯ ಧಾರಾವಾಹಿಗಾಗಿ ಕೆಲಸ ಮಾಡುವುದು ನಿಜಕ್ಕೂ ಸಂತಸ ತಂದಿತ್ತು. ಕಥೆ—ಚಿತ್ರಕಥೆಯನ್ನು ಸಿದ್ಧ ಪಡಿಸಿಕೊಡುತ್ತಿದ್ದುದು ಜೋಗಿ ಹಾಗೂ ಉದಯ ಮರಕಿಣಿ ಅವರ ಜೋಡಿ. ಋತು ಹಾಗೂ ಬಿ.ಎಂ. ವೆಂಕಟೇಶ್ (ಪರಿಷತ್ ವೆಂಕಟೇಶ್) ಇನ್ನೆರಡು ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ನಾನು ಶರತ್ ನಾಮಾಂಕಿತನಾದ ದೊಡ್ಡ ಸರ್ಕಾರಿ ಅಧಿಕಾರಿಯಾಗಿದ್ದೆ; ನನ್ನ ಸೋದರ ಯಶವಂತನ ಪಾತ್ರ ನಿರ್ವಹಿಸುತ್ತಿದ್ದರು ವೆಂಕಟೇಶ್. ಈ ಯಶವಂತ ಒಬ್ಬ ಕುಪ್ರಸಿದ್ಧ ಡಾನ್. ನನ್ನ ತಂಗಿಯ ಪಾತ್ರವನ್ನು ಈಗ ಪ್ರಖ್ಯಾತ ನಿರ್ಮಾಪಕಿಯಾಗಿರುವ ಶೃತಿ ನಾಯ್ಡು ಅವರು ನಿರ್ವಹಿಸುತ್ತಿದ್ದರು. ಸಿದ್ಧಾರ್ಥ ಎಂಬ ಮತ್ತೊಂದು ಮುಖ್ಯ ಪಾತ್ರಕ್ಕೆ ಅಶೋಕ್ ನ ಸುಪುತ್ರ ಅಶ್ವಿನ್ ಆಯ್ಕೆಯಾಗಿದ್ದ.

ನಮ್ಮ ತಾಯಿಯ ಪಾತ್ರಕ್ಕೆ ಯಾರಾದರೂ ಹೊಸ ಕಲಾವಿದರನ್ನು ತೆಗೆದುಕೊಳ್ಳಲು ಅಶೋಕ್ ಯೋಚಿಸುತ್ತಿದ್ದ. ನನ್ನ ಪರಿಚಯದವರೂ ರಂಗಭೂಮಿ ಕಲಾವಿದೆಯೂ ಆಗಿದ್ದ ‘ಭಾಗ್ಯ’ ಎನ್ನುವವರನ್ನು ನಾನು ಸೂಚಿಸಿ ಅಶೋಕನಿಗೂ ಅವರು ಒಪ್ಪಿಗೆಯಾಗಿ ಚಿತ್ರೀಕರಣ ಪ್ರಾರಂಭವಾಯಿತು.

ಜೋಗಿ—ಮರಕಿಣಿಯವರು ಹೆಣೆದ ಕಥೆ—ಚಿತ್ರಕಥೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದು ಸಂಭಾಷಣೆಗಳೂ ಅಷ್ಟೇ ಹರಿತವಾಗಿದ್ದವು. ಮುಖ್ಯ ಪಾತ್ರಗಳನ್ನು ಇವರು ಅರ್ಥೈಸಿರುವ ಪರಿಯನ್ನಾದರೂ ಗಮನಿಸಿ:

“ದುಃಖದ ಸಪ್ತ ಸಾಗರಗಳನ್ನು ದಾಟಿ ಹೋಗದ ಹೊರತು ಬಯಸಿದ ಬಾಡದ ಹೂ ಸಿಗಬಾರದೆಂಬ ನಿಯಮವೇನಾದರೂ ಇದೆಯೇ? ‘ಎಂದು ಪ್ರಶ್ನಿಸುವ ಶರತ್ ; ‘ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ; ನನ್ನ ಬದುಕು ಇನ್ನೆಲ್ಲೋ ಇದೆ..ಆದರೆ ನನಗೇ ಗೊತ್ತಿಲ್ಲದ ಹಾಗೆ ನಾನು ನನಗೇ ಬೇಕಿಲ್ಲದ ಬದುಕಿಗೆ ನನ್ನನ್ನೇ ಕಟ್ಟಿಹಾಕಿಕೊಂಡಿದ್ದೇನೆ’ ಎನ್ನುವ ಶರಾವತಿ; ‘ನೀವು ನಿಮ್ಮ ಬದುಕನ್ನು ಕ್ಲೋಸಪ್ ನಲ್ಲಿ ನೋಡುವುದರಿಂದ ಅವು ನೋವಿನ ಪ್ರಗಾಥಗಳಂತೆ ಕಾಣುತ್ತವೆ; ಆದರೆ ಬೇರೆಯವರ ಬದುಕನ್ನು ಲಾಂಗ್ ಶಾಟ್ ನಲ್ಲಿ ನೋಡುವುದರಿಂದ ಅವು ಸಂತೋಷದ ಸರೋವರದಂತೆ ಕಾಣುತ್ತವೆ’ ಎಂದು ವ್ಯಾಖ್ಯಾನಿಸುವ ಯಶವಂತ….

ಹೀಗೆ ಅನನ್ಯವಾದ ರೀತಿಯಲ್ಲಿ ಪಾತ್ರಗಳನ್ನು ಕಟ್ಟಿಕೊಟ್ಟು ಆ ಪಾತ್ರಗಳ ಒಳತೋಟಿಗಳನ್ನೂ ಬೇಗುದಿಗಳನ್ನೂ ಮನಮುಟ್ಟುವಂತೆ ಜೋಗಿ—ಉದಯ್ ರೂಪಿಸಿದ್ದರೆ ಅಶೋಕ್ ಸೊಗಸಾದ ರೀತಿಯಲ್ಲಿ ಅದೆಲ್ಲವನ್ನೂ ದೃಶ್ಯಮಾಧ್ಯಮದಲ್ಲಿ ದಾಖಲಿಸುತ್ತಾ ಚಿತ್ರೀಕರಿಸುತ್ತಿದ್ದ.ಆ ಸಮಯದಲ್ಲಿ ನಾನು ಅಭಿನಯಿಸಿದ ಹಲವು ಹತ್ತು ಧಾರಾವಾಹಿಗಳಲ್ಲಿ ‘ಶರಪಂಜರ’ಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಪ್ರಸಾರ ಪ್ರಾರಂಭವಾಗಿ ನೂರಿನ್ನೂರು ಕಂತುಗಳನ್ನು ಪೂರೈಸಿ ಸಾಕಷ್ಟು ಜನಪ್ರೀತಿಯನ್ನೂ ಗಳಿಸಿಕೊಂಡಿತ್ತು ‘ಶರಪಂಜರ’. ಆದರೆ ಮತ್ತದೇ ರಗಳೆ—ಅದೇ ಕಿರಿಕಿರಿ ಎನ್ನುವಂತೆ ವಾಹಿನಿಯ ಅಧಿಕಾರಿಗಳ ಕೃಪಾಕಟಾಕ್ಷ ನಮ್ಮ ಧಾರಾವಾಹಿಗೆ ದೊರೆಯದೆ ಕಥೆಯನ್ನು ಪೂರ್ಣವಾಗಿ ಹೇಳುವ ಮುನ್ನವೇ ಅದು ನಿಂತುಹೋಯಿತು. ಕೇಳಿದರೆ ‘ಟಿ ಆರ್ ಪಿ ಇಲ್ಲ’ ಎಂಬ ಅದೇ ಹಳೆಯ ಸಿದ್ಧ ರಾಗ! ಇರಲಿ. ಈ ಸಂದರ್ಭದ ಒಂದೆರಡು ಸ್ವಾರಸ್ಯಕರ ಪ್ರಸಂಗಗಳನ್ನು ನೆನಪಿಸಿಕೊಳ್ಳುತ್ತೇನೆ.

ತಾಯಿಯ ಪಾತ್ರಕ್ಕೆ ನನ್ನ ಸಲಹೆಯ ಮೇಲೆ ಅಶೋಕ ಆರಿಸಿದ್ದ ‘ಭಾಗ್ಯ’ ಅವರಿಗೆ ಚಿತ್ರೀಕರಣದ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿ ಸ್ವಲ್ಪ ಕಿರಿಕಿರಿಗಳು ಶುರುವಾದವು. ಮೊಟ್ಟಮೊದಲ ಬಾರಿಗೆ ಒಂದು ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದುದರಿಂದ ಇಲ್ಲಿಯ ಕಾರ್ಯಶೈಲಿ ಅವರಿಗೆ ತೀರಾ ಹೊಸದಾಗಿದ್ದುದು ಪ್ರಮುಖ ಕಾರಣ. ನೂರು ಒತ್ತಡ— ಜಂಜಾಟಗಳ ನಡುವೆ ಚಿತ್ರೀಕರಣ ನಡೆಸುವ ನಿರ್ದೇಶಕನಿಗೆ ಕಲಾವಿದರಿಂದಲೂ ನಿರೀಕ್ಷಿತ ಮಟ್ಟದ ಸಹಕಾರ—ಸ್ಪಂದನೆ ದೊರೆಯದೇ ಹೋದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದೂ ಸಹಜವೇ! ‘ಶರಪಂಜರ’ದಲ್ಲಿ ಆದದ್ದೂ ಇದೇ! ಒಮ್ಮೆಯಂತೂ ಭಾಗ್ಯ ಅವರ ವರ್ತನೆ ಎಂಥ ಸಹನಾಶೀಲರಿಗೂ ಬೇಸರ ಹುಟ್ಟಿಸುವ ಅತಿರೇಕದ ಮಟ್ಟ ಮುಟ್ಟಿಬಿಟ್ಟಿತು. ಒಂದು ದೃಶ್ಯದ ಪರಿಕಲ್ಪನೆ ಹೀಗಿತ್ತು:

ಯಶವಂತ ಬದುಕಿನಲ್ಲಿ ಸಾಕಷ್ಟು ಆಘಾತಗಳನ್ನು ಅನುಭವಿಸಿ ಒಂದು ಘಟ್ಟದಲ್ಲಿ ಸೋತು ಹಣ್ಣಾಗಿ ತಾಯಿಯ ಬಳಿ ಬಂದು ಕುಸಿದು ಬೀಳುತ್ತಾನೆ. ಮಗನ ಸಂಕಟವನ್ನು ನೋಡಿ ವಿಚಲಿತಳಾಗುವ ತಾಯಿ ಮಗನ ತಲೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಸಂತೈಸುತ್ತಾಳೆ. ಇಂಥದೊಂದು ಹೃದಯಸ್ಪರ್ಶಿ ಸನ್ನಿವೇಶವನ್ನು ಮನಮುಟ್ಟುವಂತೆ ಬರೆದುಕೊಟ್ಟಿದ್ದರು ಜೋಗಿ ಅವರು.

ಚಿತ್ರೀಕರಣ ಪ್ರಾರಂಭಿಸುತ್ತಿದ್ದಂತೆ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದ ಭಾಗ್ಯ ಅವರು, “ಕ್ಷಮಿಸಿ..ನಾನು ಈ ದೃಶ್ಯವನ್ನು ಈ ರೀತಿ ಮಾಡಲಾರೆ” ಎಂದುಬಿಡುವುದೇ!

ನಿರ್ದೇಶಕರಾದಿಯಾಗಿ ನಾವೆಲ್ಲರೂ ಅವರ ಮಾತುಗಳನ್ನು ಕೇಳಿ ಅವಾಕ್ಕಾಗಿ ನಿಂತುಬಿಟ್ಟೆವು. “ನಿಮ್ಮ ಸಮಸ್ಯೆ ಏನು ಅಂತಾನಾದ್ರೂ ಹೇಳಿ ಮೇಡಂ…ಏನಾದರೂ ಪರಿಹಾರ ಯೋಚಿಸೋಣ” ಎಂದು ಅಶೋಕ ಕೇಳಿದ್ದಕ್ಕೆ ಭಾಗ್ಯಮ್ಮನವರು, “ಯಾರು ಯಾರನ್ನೋ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸೋದಕ್ಕೆಲ್ಲಾ ನನ್ನಿಂದ ಆಗೋಲ್ಲ… I am sorry. I am not doing this scene in this particular manner” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು!

‘ಯಾರು ಯಾರನ್ನೋ ತೊಡೆಯ ಮೇಲೆ ಮಲಗಿಸಿಕೊಳ್ಳಲಾರೆ’ ಎಂದರೇನರ್ಥ?! ವಾಸ್ತವದಲ್ಲಿ ಹೊರಗಿನವನೋ ಅಪರಿಚಿತನೋ ಆಗಿರುವ ಆತ ಚಿತ್ರದಲ್ಲಿ ಮಗನೇ ಅಲ್ಲವೇ? ಪಾತ್ರವನ್ನು ಚಿತ್ರದ ಮಟ್ಟಿಗೆ ‘ವಾಸ್ತವ’ವೆಂದೇ ಗ್ರಹಿಸಿ ಅಭಿನಯಿಸಬೇಕಾಗಿರುವುದೇ ಕಲಾವಿದರ ಆದ್ಯ ಕರ್ತವ್ಯವಲ್ಲವೇ! ಜೊತೆಗೆ ಇಲ್ಲಿ ಅಭಿವ್ಯಕ್ತಗೊಳ್ಳುತ್ತಿರುವುದು ತಾಯಿ—ಮಗನ ವಾತ್ಸಲ್ಯ ಭರಿತ ಸಂಬಂಧದ ಒಂದು ಆಪ್ತ ಮಾರ್ದವ ಭಾವ. ಮುಜುಗರಕ್ಕೆ ದೂಡಬಹುದಾಗಿದ್ದ ‘ಗಂಡು ಹೆಣ್ಣಿನ ಆಪ್ತತೆ’ಯ ದೃಶ್ಯವಾಗಿದ್ದರೆ ಅವರ ನಿರಾಕರಣೆಗೆ ಅರ್ಥವಿರುತ್ತಿತ್ತು. ಪರಿಪರಿಯಾಗಿ ಆಕೆಗೆ ಈ ವಿಚಾರಗಳನ್ನು ಮನದಟ್ಟು ಮಾಡಿಕೊಟ್ಟರೂ ಏನೂ ಪ್ರಯೋಜನವಾಗಲಿಲ್ಲ…ಆಕೆ ತನ್ನ ನಿಲುವನ್ನು ಬದಲಿಸಿಕೊಳ್ಳಲಿಲ್ಲ. ಕೊನೆಗೆ ಆಕೆ ಹೇಗೆ ತನಗೆ ಅನುಕೂಲವೆಂದು ಸೂಚಿಸಿದರೋ ಆ ಪರಿಯಲ್ಲಿಯೇ ಚಿತ್ರೀಕರಣ ಮಾಡಿ ಮುಗಿಸಿದ್ದಾಯಿತು.

ದೃಶ್ಯ ನಿರೀಕ್ಷಿತ ಮಟ್ಟದ ಪರಿಣಾಮ ಬೀರುವಲ್ಲಿ ಸೋತಿತೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೇ! “ಇಷ್ಟೆಲ್ಲಾ ಮಡಿವಂತಿಕೆ ಇರೋರು ಯಾಕಾದರೂ ಸಿನೆಮಾ—ಸೀರಿಯಲ್ ಕ್ಷೇತ್ರಕ್ಕೆ ಬರ್ತಾರೋ ನಮ್ಮ ಪ್ರಾಣ ತೆಗೆಯೋಕೆ” ಎಂದು ಗೊಣಗಿಕೊಳ್ಳುತ್ತಾ ಅಶೋಕ ನನ್ನತ್ತ ಚಿಂತಾಜನಕ ನೋಟ ಬೀರಿದ. ನಾನಾದರೂ ಏನು ಹೇಳಲಿ? ಆಕೆಯನ್ನು ಅಶೋಕನಿಗೆ ಸೂಚಿಸಿ ಕರೆತಂದವನು ನಾನೇ ಅಲ್ಲವೇ! ‘ಸಾರಿ ಕಣೋ..ಇವರು ಇಷ್ಟು ರಿಜಿಡ್ ಆಗಿರ್ತಾರೆ ಅನ್ನೋ ಸುಳಿವೂ ನನಗಿರಲಿಲ್ಲ..ತಪ್ಪಾಗಿಹೋಯ್ತು’ ಎಂದು ಕ್ಷಮೆ ಕೇಳಿಕೊಂಡೆ.

ಜೋಗಿ—ಉದಯ ಮರಕಿಣಿಯವರು ನಮ್ಮ ಬರಹಗಾರರು ಎಂದು ಈಗಾಗಲೇ ಹೇಳಿದ್ದೇನಲ್ಲಾ…ಸಂಭಾಷಣೆಗಳನ್ನು ಬರೆದು ಕಳಿಸುತ್ತಿದ್ದವರು ಜೋಗಿಯವರು. ಜೋಗಿಯವರು ಅದೆಷ್ಟು ಕೆಲಸಗಳಲ್ಲಿ ಏಕಕಾಲದಲ್ಲಿಯೇ ತೊಡಗಿಕೊಂಡಿರುತ್ತಾರೆಂದರೆ ಬೆರಳುಗಳ ನಡುವೆ ಪೆನ್ನಿಲ್ಲದ ಅಥವಾ ಕಂಪ್ಯೂಟರ್ ನ ಕೀಗಳ ಮೇಲೆ ಚಲಿಸದ ಬೆರಳುಗಳ ಜೋಗಿಯ ಚಿತ್ರವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ! ಒಂದು ರೀತಿಯಲ್ಲಿ ‘ಅಕ್ಷರ ಬ್ರಹ್ಮ’ ಈ ಜೋಗಿ. ಸಮಯಕ್ಕೆ ಸರಿಯಾಗಿ ಬರೆದುಕೊಡಲಾಗದ ತಮ್ಮ ಅಸಹಾಯಕತೆಯನ್ನು ಅವರೇ ಎಷ್ಟೋ ಬಾರಿ ತಮಾಷೆಯಾಗಿ ಹೇಳಿಕೊಂಡಿರುವುದುಂಟು.

ಚಿತ್ರೀಕರಣವಿಲ್ಲದಿದ್ದ ಒಂದು ದಿನ ಬೆಳಿಗ್ಗೆ ನಾನು ಮನೆಯಲ್ಲಿದ್ದಾಗಲೇ ಜೋಗಿಯವರ ಕರೆ ಬಂತು! ಜೋಗಿಯವರು ಹಾಗೆಲ್ಲಾ ತಾವಾಗಿ ಪುರುಸೊತ್ತಾಗಿ ಕರೆ ಮಾಡುವುದು ಅಪರೂಪ! ಕರೆಯನ್ನು ಸ್ವೀಕರಿಸಿ ನಾನು ಕೇಳಿದೆ: “ಹೇಳಿ ಸರ್..ಬೆಳಿಗ್ಗೆ ಬೆಳಿಗ್ಗೇನೇ ಜ್ಞಾಪಿಸಿಕೊಂಡಿದ್ದೀರಲ್ಲಾ!” ಎಂದೆ.
ಜೋಗಿ: “ಹಾಗೇ ಸುಮ್ಮನೆ ಫೋನ್ ಮಾಡಿದೆ ಪ್ರಭೂ..ಹೇಗೆ ನಡೀತಿದೆ ಷೂಟಿಂಗು? “
ನಾನು: “ತುಂಬಾ ಚೆನ್ನಾಗಿ ನಡೀತಿದೆ ಸರ್..ನಾನಂತೂ ನಿಮ್ಮ script ಗೇ ಕಾಯ್ತಿರ್ತೀನಿ!”
ಜೋಗಿ: ” ಥ್ಯಾಂಕ್ಯೂ ಥ್ಯಾಂಕ್ಯೂ…ಈಗ ಎಲ್ಲಿದೀರಿ? ಷೂಟಿಂಗಾ?”
ನಾನು: “ಇಲ್ಲ ಸರ್..ಇವತ್ತು ಷೂಟಿಂಗ್ ಇಲ್ಲ..ಮನೇಲೇ ಇದೀನಿ..ಷೂಟಿಂಗ್ ನಾಳೆಯಿಂದ ನಾಲ್ಕು ದಿನ ಇದೆ.”
ಜೋಗಿ: ” ಓ ಸರಿ ಸರಿ..ಸಿಗೋಣ ಹಾಗಾದ್ರೆ..ಬೈ ಬೈ” ಎನ್ನುತ್ತಾ ಫೋನ್ ಇಟ್ಟರು ಜೋಗಿಯವರು.

ನಾನೂ ನನ್ನ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡೆ. ಸುಮಾರು ಒಂದು ತಾಸಿನ ನಂತರ ಅಶೋಕ್ ನಾಯ್ಡುವಿನ ಕರೆ ಬಂತು! ” ಪ್ರಭೂ, ನಿನಗೇನಾದ್ರೂ ಜೋಗಿಯವರು ಫೋನ್ ಮಾಡಿದ್ರಾ?” ಎಂದು ಕೇಳಿದ ಅಶೋಕನ ದನಿಯಲ್ಲಿ ಆತಂಕವಿತ್ತು. ನಾನು ಹೌದೆಂದು ಉತ್ತರಿಸಿದೆ.
ಅಶೋಕ್: ” ಇವತ್ತು ಷೂಟಿಂಗ್ ಇಲ್ಲ ಅಂತ ಅವರಿಗೆ ಹೇಳಿಬಿಟ್ಟೆಯಾ?”
ನಾನು: “ಹೂಂ ಅಶೋಕ್..ಅವರೇ ಕೇಳಿದರು ಷೂಟಿಂಗ್ ಇದೆಯಾಂತ..ನಾನು ಇಲ್ಲ ಅಂದೆ.”
ಅಶೋಕ್: “ಛೇ ಛೆ ಛೆ..ಎಂಥಾ ಕೆಲಸ ಆಗಿಹೋಯ್ತೋ! ಷೂಟಿಂಗ್ ಇಲ್ಲಾಂತ ಹೇಳಬಾರದಾಗಿತ್ತು ನೀನು..”
ಅರೆ! ನಾನು ಯಾಕೆ ಹಾಗೆ ಸುಳ್ಳು ಹೇಳಬೇಕಿತ್ತು ಅನ್ನುವುದು ನನಗೆ ಫಕ್ಕನೆ ಅರ್ಥವಾಗಲಿಲ್ಲ.

ಅಶೋಕನೇ ವಿವರಿಸಿದ: ಜೋಗಿಯವರು ಸಮಯಕ್ಕೆ ಸರಿಯಾಗಿ ಸ್ಕ್ರಿಪ್ಟ್ ಕಳಿಸದೇ ಹೋಗಿಬಿಟ್ಟರೆ ತೊಂದರೆಯಾಗುತ್ತದೆಂಬ ದೂರಾಲೋಚನೆಯಿಂದ ಅಶೋಕ ಶೂಟಿಂಗ್ 12 ನೆಯ ತಾರೀಖು ಇದ್ದರೆ 11 ರಂದೇ ಇದೆ ಎಂದು ಜೋಗಿಯವರಿಗೆ ಹೇಳಿಬಿಡುತ್ತಿದ್ದ! ಅವರು ಎಷ್ಟೇ ತಡವಾಗಿ ಕೊಟ್ಟರೂ ಷೂಟಿಂಗ್ ಗೆ ಮುಂಚಿತವಾಗಿಯೇ ಸ್ಕ್ರಿಪ್ಟ್ ಕೈ ಸೇರಿಬಿಡುತ್ತಿತ್ತು! ಸುಮಾರು ದಿನದಿಂದ ಇದೇ ವ್ಯವಸ್ಥೆ ನಡೆದುಕೊಂಡು ಬಂದಿದ್ದು ಚಿತ್ರೀಕರಣ ಸುಗಮವಾಗಿ ಸಾಗಿಕೊಂಡು ಬಂದಿದೆ! ಅದು ಹೇಗೋ ಏನೋ ಜೋಗಿಯವರಿಗೆ ಅಶೋಕನ ಈ ಹುನ್ನಾರದ ವಾಸನೆ ಬಡಿದುಬಿಟ್ಟಿದೆ! ಆ ಕಾರಣವಾಗಿಯೇ ಅವರು ನನಗೆ ಫೋನ್ ಮಾಡಿ ಷೂಟಿಂಗ್ ಇದೆಯಾ ಎಂದು ಕೇಳಿ ಖಚಿತಪಡಿಸಿಕೊಂಡದ್ದು! “ಅಯ್ಯೋ..ಎಷ್ಟು ಕಷ್ಟಪಟ್ಟು ಮಾಸ್ಟರ್ ಪ್ಲಾನ್ ಮಾಡಿ ಇಷ್ಟು ದಿನ ಹೇಗೋ ನಿಭಾಯಿಸಿಕೊಂಡು ಬಂದಿದ್ದೆ..ಇನ್ನು ಏನು ಹೇಳಿದರೂ ಅವರನ್ನ convince ಮಾಡೋಕಾಗಲ್ಲ.. ಒಂದೇ ಮಾತಲ್ಲಿ ಎಲ್ಲಾನೂ ಢಮಾರ್ ಅನ್ನಿಸಿಬಿಟ್ಟೆ ನೀನು!” ಎಂದು ಅಶೋಕ ಪೇಚಾಡಿದ್ದೇ ಪೇಚಾಡಿದ್ದು!

ವಿಷಯ ತಿಳಿದ ನನಗೆ ಮೊದಲು ಕೊಂಚ ಪೆಚ್ಚಾದರೂ ನಂತರ ನಗು ತಡೆಯಲಾಗಲಿಲ್ಲ! ಇಂಥ ಸಣ್ಣ ಪುಟ್ಟ ಸ್ವಾರಸ್ಯಕರ ಘಟನೆಗಳು ಚಿತ್ರೀಕರಣದ ನಡುವೆ ನಡೆಯುತ್ತಲೇ ಇರುತ್ತವೆ..ಮುದ ನೀಡುತ್ತಲೇ ಇರುತ್ತವೆ!

ನೀವೇ ಹೇಳಿ—ಈ ಸಂದರ್ಭದಲ್ಲಿ—

“ಯಾರು ಚಾಪೆಯ ಕೆಳಗೆ ಯಾರು ರಂಗೋಲಿಯ ಕೆಳಗೆ!!?”

‍ಲೇಖಕರು avadhi

November 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: