ನಾ ಡಿಸೋಜ ಕಂಡಂತೆ ‘ಬಾನಾಡಿ ಕಂಡ ಬೆಡಗು’

ಡಾ ನಾ ಡಿಸೋಜ

‘ಬಾನಾಡಿ ಕಂಡ ಬೆಡಗು’ ಕೆ ಆರ್ ಉಮಾದೇವಿ ಉರಾಳ ಅವರ ಪ್ರವಾಸ ಕಥನ

ಖ್ಯಾತ ಹಿರಿಯ ಸಾಹಿತಿ ಡಾ ನಾ ಡಿಸೋಜರವರು ಬರೆದ ಮುನ್ನುಡಿ ಇಲ್ಲಿದೆ.

ಈವರೆಗೆ ನಾನು ಸಾಕಷ್ಟು ಕವಿತೆ, ಕತೆ, ಕಾದಂಬರಿ, ಪ್ರಬಂಧ ಇತ್ಯಾದಿಗಳಿಗೆ ಮುನ್ನುಡಿ ಬರೆದಿರುವುದುಂಟು. ಆದರೆ ಈ ಬಾರಿ ಪ್ರಥಮ ಎಂಬಂತೆ ಶ್ರೀಮತಿ ಕೆ.ಆರ್. ಉಮಾದೇವಿ ಉರಾಳ ಅವರ ‘ಬಾನಾಡಿ ಕಂಡ ಬೆಡಗು’, ಯೂರೋಪ್, ಚೀನಾ, ಈಶಾನ್ಯ ಭಾರತ ಪ್ರವಾಸ ಕಥನ”ಕ್ಕೆ ಮುನ್ನುಡಿ ಬರೆಯುವ ಧೈರ್ಯ ಮಾಡಿದ್ದೇನೆ. ಧೈರ್ಯ ಎಂಬ ಮಾತನ್ನು ಮೊದಲೇ ಬರೆಯುವ ಕಾರಣ ಈ ಕೃತಿ ಸಾಕಷ್ಟು ಸುದೀರ್ಘವಾಗಿದೆ. ವಿಶ್ವದ ವಿವಿಧ ದೇಶಗಳ ಪರಿಚಯ ಮಾಡಿಕೊಡಲಿದೆ. ಯೂರೋಪ್, ಚೀನಾಗಳನ್ನು ಮಾತ್ರವಲ್ಲದೆ ನಮ್ಮ ದೇಶದ ಈಶಾನ್ಯ ಪ್ರದೇಶಗಳ ಪರಿಚಯವನ್ನೂ ಮಾಡಿಕೊಡುತ್ತದೆ. ಇಂತಹ ವೈವಿಧ್ಯಮಯವೂ ವಿಸ್ತಾರವೂ ವಿಶಾಲವೂ ಆದ ಪ್ರದೇಶಗಳ ಪರಿಚಯವನ್ನ ಪುಸ್ತಕದ ಮೂಲಕ ಮಾಡಿಕೊಡಲು ಮುಂದಾದ ಉಮಾದೇವಿ ಅವರಿಗೆ ಪ್ರಥಮವಾಗಿ ನಾನು ಕೃತಜ್ಞತೆ ಹೇಳ ಬಯಸುತ್ತೇನೆ. ಜೊತೆಗೆ ನೋಡಿದ್ದನ್ನೆಲ್ಲ ನೆನಪಿನಲ್ಲಿ ಇರಿಸಿಕೊಂಡು ಅದನ್ನ ಬರವಣಿಗೆಗೆ ಇಳಿಸಿದ ಅವರ ನೆನಪಿನಶಕ್ತಿಗೆ ಭಲೇ ಹೇಳುತ್ತೇನೆ.

ಪ್ರವಾಸ ಮಾಡುವುದು ಹೇಗೆ ಒಂದು ಮೋಜಿನ ವಿಷಯವೋ, ಆ ಪ್ರವಾಸದ ಬಗ್ಗೆ ಬರೆಯುವುದು ಕೂಡ ಒಂದು ಮೋಜಿನ ವಿಷಯವೇ. ಹಾಗೆಯೇ ತಾನು ನೋಡಿದ. ಕಂಡ ಎಲ್ಲವನ್ನು ನೆನಪಿರಿಸಿಕೊಂಡು ಬರೆದು ಮೂರನೆಯವರೊಬ್ಬರಿಗೆ ತಿಳಿಸುವುದು ಇನ್ನೊಂದು ಮೋಜಿನ ವಿಷಯ. ಈ ಕಾರಣದಿಂದಲೇ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯ ಎಂಬುದೊಂದು ಮಾಧ್ಯಮ ಸದಾ ಜನಪ್ರಿಯಗೊಂಡಿದೆ. ಕನ್ನಡದ ಪ್ರಖ್ಯಾತ ಲೇಖಕರಾದ ಕಾರಂತ, ಗೋಕಾಕ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜಿ.ಎಸ್. ಶಿವರುದ್ರಪ್ಪ ಮೊದಲಾದವರು ಪ್ರವಾಸ ಸಾಹಿತ್ಯವನ್ನ ಜನಪ್ರಿಯಗೊಳಿಸಿದ್ದಾರೆ. ಹೀಗೆಂದೇ ಇರಬೇಕು ಚಂಪಾ ಹೊರತಂದಿರುವ (ನೀಲಾ ಪಾಟೀಲ ಸಂಕಲಿಸಿರುವ) “ಕನ್ನಡ ಸಾಹಿತಿಗಳ ಮಾಹಿತಿ” ಕೋಶದಲ್ಲಿ ಲೇಖಕರ ಪರಿಚಯವನ್ನ ಮಾಡಿಕೊಡುತ್ತಾ ಸಂಪಾದಕರು, ಲೇಖಕರು ಬರೆದಿರುವ ಕಾವ್ಯ, ಕಥೆ, ಕಾದಂಬರಿ, ಸಂಶೋಧನೆ, ಜಾನಪದೀಯ, ಅನುವಾದ, ವೈಚಾರಿಕ ಇವುಗಳ ಜೊತೆಯಲ್ಲಿ “ಪ್ರವಾಸಕಥನ”ವನ್ನೂ ಸೇರಿಸುತ್ತ ಬಂದಿದ್ದಾರೆ. ಅಂದರೆ ಪ್ರವಾಸಕಥನಕ್ಕೆ ಇಲ್ಲಿ ಒಂದು ಸ್ಥಾನವನ್ನ ನೀಡಿದ್ದಾರೆ. ಆದರೆ ಒಂದು ವಿಚಿತ್ರ ಅಂದರೆ “ಪ್ರವಾಸ ಸಾಹಿತ್ಯ” ಅನ್ನುವ ಕ್ಷೇತ್ರದಲ್ಲಿ ಕೆಲಸ ಮಾಡಿರುವವರು ಕಡಿಮೆ. ಈ ಕಾರಣದಿಂದಾಗಿ ಇದು ಸುಲಭದ ಕ್ಷೇತ್ರವಲ್ಲ ಎಂಬುದು ನನ್ನ ಅಭಿಪ್ರಾಯ.

ಇದೀಗ ಉಮಾದೇವಿಯವರು ಈ ಕೃತಿಯಲ್ಲಿ ನಾಲ್ಕು ಹಂತದ ತಮ್ಮ ಪ್ರವಾಸವನ್ನು ಮುಂದಿಡುತ್ತಾರೆ. ಯುನೈಟೆಡ್ ಕಿಂಗ್ಡಂ ಮತ್ತು ಮಧ್ಯ ಯೂರೋಪಿನ ಹದಿನೆಂಟು ದಿನಗಳ ಪ್ರವಾಸ, ನಂತರದ ಸ್ಕಾಂಡಿನೇವಿಯಾ ಪ್ರವಾಸ, ಮೂರನೆಯದಾಗಿ ಚೀನಾದ ಪ್ರವಾಸ, ಕೊನೆಯದೆಂಬಂತೆ ನಮ್ಮದೇ ಆದ ಸಪ್ತ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶ ಹಾಗೂ ಕೊನೆಯದಾಗಿ ಮಯನ್ಮಾರಿನ ತಮು ಇವುಗಳ ಪರಿಚಯ ಮಾಡಿಕೊಡುತ್ತಾರೆ. ಮೊದಲ ಮೂರು ಪ್ರದೇಶಗಳ ಪರಿಚಯಕ್ಕಿಂತ ಈಶಾನ್ಯ ರಾಜ್ಯಗಳ ಪರಿಚಯವನ್ನ “ಸಪ್ತ ಸೋದರಿಯರ ಮಡಿಲಲ್ಲಿ” ಎಂದು ಕರೆದು ಪರಿಚಯ ಮಾಡಿಕೊಡುವುದು ಅರ್ಥಪೂರ್ಣ ಎನಿಸುತ್ತದೆ. ನದಿ, ಕೊಳ, ಕಾಡು, ಪರಿಸರದಿಂದ ಕೂಡಿದ ಈ ಪ್ರದೇಶಗಳ ವರ್ಣನೆ ನಮಗೆ ಆತ್ಮೀಯವಾಗುತ್ತದೆ. ಏಕೆಂದರೆ ನಾವೂ ಈ ಪ್ರದೇಶದಿಂದ ಬಂದವರಲ್ಲವೇ?

ಯೂರೋಪಿನ ಎಲ್ಲ ದೇಶಗಳ ಪರಿಚಯ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಇದ್ದೇ ಇದೆ. ಲಂಡನ್, ಪ್ಯಾರಿಸ್, ಹಾಲೆಂಡ್, ಜರ್ಮನಿ, ಇಟಲಿ, ವ್ಯಾಟಿಕನ್ಗಳು ನಮಗೆ ಇಂದು ಅಪರಿಚಿತವಾಗಿ ಉಳಿದಿಲ್ಲ. ನಮ್ಮ ಸ್ನೇಹಿತರು ಆಗಾಗ್ಗೆ ಇಲ್ಲಿಗೆ ಹೋಗಿಬರುತ್ತಿರುತ್ತಾರೆ. ನಾವು ಪತ್ರಿಕೆಗಳಲ್ಲಿ ಇವುಗಳ ಬಗ್ಗೆ ಓದುತ್ತಿರುತ್ತೇವೆ. ಆದರೆ ಉಮಾದೇವಿ ಈ ಎಲ್ಲ ದೇಶಗಳ ಪರಿಚಯ ನಮಗೆ ಮಾಡಿಕೊಡುತ್ತ ಕೆಲ ಹೊಸ ವಿಷಯಗಳತ್ತ ನಮ್ಮ ಗಮನ ಸೆಳೆಯುತ್ತಾರೆ. “ಸೂರ್ಯ ಮುಳುಗದ ದೇಶ” ಎನಿಸಿಕೊಂಡಿದ್ದ ಇಂಗ್ಲೆಂಡಿಗೆ ಈ ಹೆಸರು ಬರಲು ಕಾರಣ ಭೂಭಾಗದ ಬಹುತೇಕ ಎಡೆಗಳಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ ಇಂಗ್ಲೆಂಡಿನ ಒಂದಲ್ಲಾ ಒಂದು ದೇಶದಲ್ಲಿ ದಿನದ ಎಲ್ಲ ಸಮಯದಲ್ಲೂ ಸೂರ್ಯ ಬೆಳಗಿರುತ್ತಿದ್ದ ಎನ್ನುತ್ತಾರೆ ಉಮಾದೇವಿ. ಹೀಗೆಯೇ ಆಧುನಿಕತೆಯತ್ತ ಹೊರಳಿ ನಿಂತಿರುವ ಲಂಡನ್ ಸಾಂಪ್ರದಾಯಿಕವಾದ ಹೊಗೆಕೊಳವೆಗಳನ್ನ ಮನೆಯ ಮಾಡಿನಲ್ಲಿ ಉಳಿಸಿಕೊಂಡಿರುವುದು, ಹೀಗೆ ಕೆಲ ಕುತೂಹಲದ ವಿಷಯಗಳನ್ನ ಅವರು ಹೇಳುತ್ತಾರೆ. ತಾವು ಯೂರೋಪಿನ ಒಂದೊಂದು ದೇಶಕ್ಕೆ ಹೋದ ಹಾಗೆ ಅಲ್ಲಿಯ ಪ್ರಖ್ಯಾತ ಲೇಖಕರ ಬಗ್ಗೆ ಹೇಳುತ್ತಾರೆ ಉಮಾದೇವಿ. ಲಂಡನ್ ಅಂದ ಕೂಡಲೇ ಉಮಾದೇವಿಯವರಿಗೆ ಬಿಎಂಶ್ರೀ ಅವರ “ಇಂಗ್ಲಿಷ್ ಗೀತಗಳು” ನೆನಪಾಗುತ್ತದೆ. ಜೊತೆಗೆ ಇತರ ಇಂಗ್ಲಿಷ್ ಕವಿಗಳು ಕೂಡ. ಲಿಯೋನಾರ್ಡೋ ಡಾವಿಂಚಿಯ ಪ್ಯಾರಿಸ್ನಲ್ಲಿರುವ ಮೊನಾಲಿಸಾ ಕಲಾಕೃತಿಯ ರೂಪದರ್ಶಿ ಆಗಿದ್ದವಳು ಇಟಲಿಯ ಪ್ರಖ್ಯಾತ ವ್ಯಾಪಾರಿ ಓರ್ವನ ಪತ್ನಿ ಅನ್ನುವ ವಿಷಯವನ್ನ ಉಮಾದೇವಿ ಹೇಳುತ್ತಾರೆ.

“ದೇವರು ವಿಶ್ವವನ್ನು ಸೃಷ್ಟಿಸಿದ, ಡಚ್ಚರು ಹಾಲೆಂಡನ್ನ ಸೃಷ್ಟಿಸಿದರು” ಅನ್ನುವ ಮಾತು ಹಾಲೆಂಡಿಗೆ ಹೇಳಿ ಮಾಡಿಸಿದ್ದು. ಉಕ್ಕಿ, ಸೊಕ್ಕಿ, ಮೊರೆವ ಸಮುದ್ರವನ್ನೇ ಹಿಂದಕ್ಕೆ ತಳ್ಳಿ ತಮಗೆ ಬೇಕಾದ ನೆಲವನ್ನ ಪಡೆದುಕೊಂಡವರು ಹಾಲೆಂಡಿನವರು. ಉಳಿದವರು ಕೂಡ ಹಾಗೆಯೇ. ಉಮಾದೇವಿಯವರು ಇಲ್ಲಿ ಬಣ್ಣಿಸಿದ ಎಲ್ಲ ದೇಶಗಳ ಕಥೆಯೂ ಇದೇನೆ. ಜರ್ಮನಿ, ಸ್ವಟ್ಜರ್ಲೆಂಡ್, ಆಸ್ಟ್ರೀಯಾ, ಇಟಲಿ, ವ್ಯಾಟಿಕನ್ ಮೊದಲಾದೆಡೆ ಪರಿಸರವನ್ನ ಬಗ್ಗಿಸಿಕೊಂಡು ಮನುಷ್ಯ ಏನೆಲ್ಲ ಮಾಡಿದ್ದಾನೆ ಅನ್ನುವುದನ್ನು ನೋಡಿದರೆ ಅಚ್ಚರಿ ಆಗುತ್ತದೆ. ಹಾಗೆಂದು ಇವರು ನಿಸರ್ಗವನ್ನ ಧಿಕ್ಕರಿಸಿದವರಲ್ಲ. ಆ ನಿಸರ್ಗದ ಎಲ್ಲ ನಿಯಮಗಳನ್ನ ಉಳಿಸಿಕೊಂಡು, ಅದನ್ನ ಬಳಸಿಕೊಂಡವರು. ಉದಾಹರಣೆಗೆ ಕಲೋನ್ ನಗರದ ರೈನ್ ನದಿಯ ಬಗ್ಗೆ ಲೇಖಕಿ ಹೇಳುವ ವಿಷಯ ಅಚ್ಚರಿಯನ್ನುಂಟು ಮಾಡುವಂತಹುದು. ೧೩೩೦ ಕಿ.ಮೀ. ಉದ್ದದ ರೈನ್ ನದಿಯನ್ನು ಅಲ್ಲಿನ ಜನ ಬಳಸಿಕೊಂಡ ರೀತಿ ಅದ್ಭುತ. ಉದ್ದಕ್ಕೂ ಎದುರಾಗುವ ತೋಟ, ಹೊಲ, ಮನೆಗಳು, ಉದ್ಯಾನವನಗಳು, ವಿಶ್ರಾಂತಿಗೃಹಗಳು, ಇವುಗಳಿಂದ ಲಾಭ ಮಾಡಿಕೊಳ್ಳುವ ಜನ. ನಮ್ಮ ದೇಶದಲ್ಲಿ ಯಾರೂ ಇಂತಹ ಪ್ರಯತ್ನ ಮಾಡಿಲ್ಲವೆ ಎಂದು ಮರುಗುತ್ತಾರೆ, ಲೇಖಕಿ. ಎಲ್ಲೇ ಹೋದರೂ ತಾವಿರುವ ತಾವನ್ನ ಸುಂದರಗೊಳಿಸಿ ಅದರಿಂದ ಪ್ರತಿಫಲವೆಂಬಂತೆ ಮತ್ತೆ ಚೆಲುವನ್ನು ಪಡೆಯುವ ಮನೋಭಾವ ಇಲ್ಲಿ ಎದ್ದು ಕಾಣುವುದನ್ನು ಅವರು ತಿಳಿಸಿಕೊಡುತ್ತಾರೆ.

ಹಾಗೆಯೇ ಒಂದು ಹೊಸ ಪ್ರವಾಸ ಕೈಗೊಳ್ಳುವಾಗ ಇವರು ರೋಮಾಂಚನಗೊಳ್ಳುತ್ತಾರೆ. ಆ ದೇಶದ ಬಗ್ಗೆ ಮಾಹಿತಿಗಳನ್ನ ಕಲೆ ಹಾಕಿ ಸಂಭ್ರಮ ಪಡುತ್ತಾರೆ. ಅಲ್ಲಿಯ ಮ್ಯೂಸಿಯಂಗಳು, ಕವಿಗಳು, ಕಲಾವಿದರು, ನಾಟಕಮಂದಿರಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಆ ದೇಶದ ಕವಿ, ಕಾದಂಬರಿಕಾರರ ಕೃತಿಗಳ ಬಗ್ಗೆ ವಿವರ ನೀಡುತ್ತಾರೆ. ಅವರ ಈ ಉತ್ಸಾಹ ಅವರ ಪ್ರವಾಸವನ್ನ ಯಶಸ್ವಿಗೊಳಿಸಿದೆ ಎಂದು ನಾನು ಅಂದುಕೊಂಡಿದ್ದೇನೆ. ಅಂತೆಯೇ ಅವರು ವೆನಿಸ್, ಪೀಸಾ, ಫ್ಲಾರೆನ್ಸ್, ರೋಮ್ಗಳಿಗೆ ಭೇಟಿ ಕೊಡುತ್ತಾರೆ. ವೆನಿಸ್ ಎಂದಾಗ ರೋಮಿಯೋ ಜೂಲಿಯಟ್, ಪೀಸಾ ಎಂದಾಗ ಗೆಲಿಲಿಯೋ, ಫ್ಲಾರೆನ್ಸ್ ಎಂದಾಗ ಮಹಾ ಕವಿ ಡಾಂಟೆ, ಮೈಕೆಲೇಂಜೆಲೋ ಅವರ ನೆನಪಿಗೆ ಬರುತ್ತಾರೆ. ಅಲ್ಲಿಯ ಇತಿಹಾಸದ ಜೊತೆಯಲ್ಲಿ ಈ ಇತಿಹಾಸವನ್ನು ಹೇಳುತ್ತಾ ಹೋಗುತ್ತಾರೆ ಲೇಖಕರು.

ಸ್ಕಾಂಡಿನೇವಿಯಾ ಅವರು ಮುಂದೆ ಭೇಟಿ ಮಾಡಿದ ಸ್ಥಳ. ಅಲ್ಲಿಯ ಹಸಿರು, ಜಲಪಾತಗಳು, ರಮ್ಯ ಪರ್ವತ ಶ್ರೇಣಿಗಳು ಅವರನ್ನು ಮೋಹಕಗೊಳಿಸುತ್ತವೆ. ಅವರನ್ನು ಸಂತಸಗೊಳಿಸಲು ಸುಂದರ ನೋಟ ಕಾದಿದ್ದರೂ, ಅವರನ್ನು ಕರೆದೊಯ್ದ ಪ್ರವಾಸಿ ಸಂಸ್ಥೆಯ ಎಡವಟ್ಟಿನಿಂದಾಗಿ ಈ ಕುಟುಂಬ ತುಂಬಾ ತೊಂದರೆಗೆ ಒಳಗಾಯಿತು. ಆದರೂ ಕೋಪನ್ಹೇಗನ್, ನಾರ್ವೆ, ಸ್ವೀಡನ್ ಎಂದು ಪ್ರವಾಸ ಮುಗಿಸಿ ಬರುತ್ತಾರೆ. ಪ್ರವಾಸದ ನಡುವೆ ತಮಗಾದ ಒಂದೆರಡು ತೊಂದರೆಗಳನ್ನು ಈ ದಂಪತಿ ಹೇಳಿಕೊಳ್ಳುತ್ತಾರೆ. ಆದರೆ ಅವರು ಅನುಭವಿಸಿದ ತೊಂದರೆಗಳು ಕಮ್ಮಿ ಆಗಿದ್ದವು ಅನ್ನುವುದು ಸಮಾಧಾನದ ವಿಷಯ.

ಅವರ ಮುಂದಿನ ಪ್ರವಾಸ ಚೀನಾದ ಶಾಂಘೈನಿಂದಲೇ ಪ್ರಾರಂಭವಾಗುತ್ತದೆ. ಶಾಂಘೈ, ಬೀಜಿಂಗ್, ಮಕಾವೋ, ಹಾಂಕಾಂಗ್ ಎಂದೆಲ್ಲ ೧೪ ದಿನಗಳ ಪ್ರವಾಸ ಮುಗಿಸಿ ಬಂದ ಈ ಕುಟುಂಬ ಭರತವಾಕ್ಯ ಎನ್ನುವಂತೆ ಕೊನೆಯಲ್ಲಿ ಹೇಳುವ ಈ ಮಾತುಗಳು ಮಹತ್ವದ್ದು ಎಂದು ನನಗೆ ಅನಿಸುತ್ತದೆ.

“ಹದಿನಾಲ್ಕು ದಿನಗಳ ನಮ್ಮ ಚೀನಾ ಪ್ರವಾಸ ಮುಕ್ತಾಯದ ಹಂತಕ್ಕೆ ಬಂದಿತ್ತು. ಚೀನಾ ಕುರಿತ ಕೆಲವು ನಮ್ಮ ಪೂರ್ವಾಗ್ರಹದ ಕಾಲ್ಪನಿಕ ಭ್ರಮೆಗಳು ನಿವಾರಣೆಯಾಗಿದ್ದವು. ಸ್ವಚ್ಛತೆಯಲ್ಲಿ, ಉತ್ತಮ ಸಂಚಾರ ವ್ಯವಸ್ಥೆಯಲ್ಲಿ, ಪ್ರವಾಸೋದ್ಯಮವನ್ನ ರೂಪಿಸುವುದರಲ್ಲಿ, ಜನರ ಕರ್ತವ್ಯಪರತೆಯಲ್ಲಿ ಚೀನಾ ಯೂರೋಪಿನ ದೇಶಗಳಿಗೆ ಸರಿಸಾಟಿಯಾಗಿದೆ ಎಂಬುದು ನಿಚ್ಚಳವಾಗಿ ಕಂಡುಬರುತ್ತಿತ್ತು… ಇಲ್ಲಿ ವ್ಯಕ್ತವಾಗುವ ಅವರ ದೇಶಪ್ರೇಮ, ಸಾಮಾಜಿಕ ಚಿಂತನೆ ಗಮನಿಸಬೇಕಾದ್ದು…” ಎಂಬ ಅಭಿಪ್ರಾಯದೊಂದಿಗೆ ಲೇಖಕಿ ಧನ್ಯವಾದ, ನಮಸ್ಕಾರ ಹೇಳುತ್ತಾರೆ, ಅದೂ ಚೈನಾದ ಭಾಷೆಯಲ್ಲಿಯೇ.

ಕೊನೆಯದಾಗಿ ಈ ಪ್ರವಾಸಕಥನದ ಅಂತ್ಯ ಭಾಗ “ಸಪ್ತ ಸೋದರಿಯರ ಮಡಿಲಲ್ಲಿ”. ಅಂದರೆ ಈಶಾನ್ಯ ಭಾರತದ ಏಳು ರಾಜ್ಯಗಳ ದರ್ಶನ. ಉದ್ದಕ್ಕೂ ಬ್ರಹ್ಮಪುತ್ರಾದೊಂದಿಗೆ ಇನ್ನೂ ಸಾಕು ಬೇಕು ಅನ್ನುವಷ್ಟು ನದಿ ಕೊಳ ಸರೋವರ, ಗುಡ್ಡ, ಬೆಟ್ಟಗಳು, ಹಸಿರು ಗದ್ದೆಗಳು, ದಟ್ಟಕಾಡು. ಇಲ್ಲಿಯ ಪರಿಸರವನ್ನ ಬಣ್ಣಿಸುವಾಗ ಕವಿ ರವೀಂದ್ರರೂ ಬರುತ್ತಾರೆ. ಲೇಖಕಿ ಇಲ್ಲಿಯ ಇತಿಹಾಸವನ್ನೂ ವರ್ಣಿಸುತ್ತಾರೆ. ಹಿಂದಿನ ಕತೆಯನ್ನೂ ಹೇಳುತ್ತಾರೆ. ೨೩ ದಿನಗಳ ಈ ಪ್ರವಾಸದಲ್ಲಿ ನಮ್ಮನ್ನೂ ಜೊತೆಯಲ್ಲಿ ಕರೆದೊಯ್ಯುತ್ತಾರೆ.

ಈಶಾನ್ಯ ರಾಜ್ಯಗಳ ಹೆಬ್ಬಾಗಿಲು ಎಂದೆನಿಸಿಕೊಂಡ ಅಸ್ಸಾಂ, ಕಾಜಿರಂಗ ನ್ಯಾಷನಲ್ ಪಾರ್ಕ್, ಮೇಘಾಲಯದ ಚಿರಾಪುಂಜಿ, ಎಲಿಫೆಂಟ್ ಫಾಲ್ಸ್, ಬೊಮ್ಡಿಲಾ, ಮಯನ್ಮಾರಿನ ಮಕುಟಮಣಿ ತಮು- ಹೀಗೆ ಹಲವನ್ನು ನೋಡುವ ಅವಕಾಶ. ಕೆಲ ಯುದ್ಧ ಸ್ಮಾರಕಗಳು, ಸೈನಿಕರ ಪ್ರತಿಮೆಗಳು, ಭಾರತ ಬಾಂಗ್ಲಾ ಗಡಿಯಲ್ಲಿ ನಡೆಯುವ ಧ್ವಜಾವರೋಹಣದ ಅಪರೂಪದ ನೋಟ ಇದೆಲ್ಲವನ್ನು ಲೇಖಕಿ ಬಣ್ಣಿಸುತ್ತಿದ್ದರೆ, ನಾವು ಅಲ್ಲಿಯೇ ಎಲ್ಲೋ ಇದ್ದೇವೇನೋ ಅನಿಸುತ್ತದೆ.

ಉಮಾದೇವಿ ಅವರಿಗೆ ಸುಂದರ ದೃಶ್ಯಗಳನ್ನು ಸವಿಯುವ ಮನೋಭಾವ ಇದೆ. ಜೊತೆಗೆ ಅದನ್ನ ಅಷ್ಟೇ ಸುಂದರವಾಗಿ ಬಣ್ಣಿಸುವ ಚಾಕಚಕ್ಯತೆಯೂ ಇದೆ. ಪ್ರವಾಸದ ಉದ್ದಕ್ಕೂ ತಮಗಾದ ಅನುಭವವನ್ನು ತೆರೆದಿಡುವ ಕೆಲಸವನ್ನ ಅವರು ಚೆನ್ನಾಗಿಯೇ ಮಾಡಿದ್ದಾರೆ. ತಮ್ಮಂತೆಯೇ ಬಂದ ಪ್ರವಾಸಿಗಳನ್ನು ಮಾತಿಗೆಳೆಯುವ, ಮಕ್ಕಳನ್ನು ಮಾತನಾಡಿಸುವ ಕೆಲಸವನ್ನ ಅವರು ಚೆನ್ನಾಗಿ ಮಾಡಿದ್ದಾರೆ. ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿಯ ಇತಿಹಾಸ, ಪುರಾಣ ಇತ್ಯಾದಿಗಳನ್ನ ತಿಳಿದುಕೊಳ್ಳುವ, ಓದುಗರಿಗೆ ತಿಳಿಸುವ ಕೆಲಸವನ್ನ ಅವರು ಮಾಡಿದ್ದಾರೆ. ಜೊತೆಗೆ ಪ್ರವಾಸದ ಸಂದರ್ಭದಲ್ಲಿ ತಮ್ಮೊಡನೆ ಇರುತ್ತಿದ್ದ ಪ್ರವಾಸ ನಿರ್ವಾಹಕರನ್ನು ಆತ್ಮೀಯವಾಗಿ ಪರಿಚಯ ಮಾಡಿಕೊಡುತ್ತಾರೆ. ಅವರು ಕೂಡ ಪ್ರವಾಸಿಗಳ ಜೊತೆ ಅಷ್ಟೇ ಪ್ರೀತಿಯಿಂದ ವರ್ತಿಸುವುದನ್ನು ನಾವು ನೋಡುತ್ತೇವೆ. ವಿದೇಶೀಯರು ನಮ್ಮ ಜೊತೆ ಪ್ರೀತಿ, ಸ್ನೇಹದಿಂದ ವರ್ತಿಸುವುದು ಇಲ್ಲಿ ಎಲ್ಲ ಕಡೆಗಳಲ್ಲಿ ಎದ್ದು ಕಾಣುತ್ತದೆ.

ನಾವು ಕೇವಲ ಪರಿಸರ ಆಸಕ್ತರು. ಅದಕ್ಕೆ ದೂರನಿಂತು ಕೈ ಮುಗಿದು ಹಿಂದೆ ಸರಿಯುತ್ತೇವೆ. ಆದರೆ ವಿದೇಶೀಯರು ಪರಿಸರವನ್ನ ಪ್ರೀತಿಸುತ್ತಾರೆ. ಉಮಾದೇವಿ ಹೋದೆಡೆಯಲ್ಲೆಲ್ಲ ಈ ಮನೋಭಾವವನ್ನ ಗುರುತಿಸುತ್ತಾರೆ. ವಿದೇಶೀಯರ ಈ ಪರಿಸರಾಸಕ್ತಿ ತಮ್ಮ ಸುತ್ತಲಿನ ನಿಸರ್ಗವನ್ನ ಎಷ್ಟೊಂದು ಸುಂದರವಾಗಿಸಿದೆ ಎಂದು ಅಚ್ಚರಿಯೂ ಆಗುತ್ತದೆ.

ಲೇಖಕಿ ಉಮಾದೇವಿಯವರು ಪ್ರವಾಸವನ್ನ ಒಂದು ಶಿಕ್ಷಣ ಎಂದು ಪರಿಗಣಿಸಿದವರು. ಪ್ರತಿ ಸ್ಥಳವನ್ನೂ ಹೋಗಿ ತಲುಪುವ ಮುನ್ನ ಸಾಕಷ್ಟು ನೋಟ್ಸ್ ಮಾಡಿಕೊಂಡೇ ಅವರು ಹೋಗುತ್ತಿದ್ದರು ಅನ್ನುವುದು ಸ್ಪಷ್ಟ. ಒಂದು ಪ್ರವಾಸ ಇರಬೇಕಾದದ್ದೇ ಹಾಗೆ. ಇಲ್ಲವೆಂದರೆ ಪ್ರವಾಸ ಒಬ್ಬ ವ್ಯಕ್ತಿಯ ಪಾಲಿಗೆ ‘ಹೊರೆ’ಯಾಗಿ ಪರಿಣಮಿಸುತ್ತದೆ. ಇಲ್ಲಿಯ ಹಾಗೆ ಅದು ಒಂದು ಸಮುದಾಯದ ಆಸ್ತಿ ಆಗುವುದೇ ಇಲ್ಲ. ಸಂತಸದ ವಿಷಯ ಅಂದರೆ ಉಮಾದೇವಿಯವರ ಪ್ರಯತ್ನದಿಂದಾಗಿ ಅವರ ಈ ಪ್ರವಾಸಕಥನ ಕನ್ನಡ ಭಾಷೆಗೆ ಒಂದು ಅತ್ಯಮೂಲ್ಯ ಆಸ್ತಿಯಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

‍ಲೇಖಕರು avadhi

May 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: