ಗಂಗಾಧರ ಕೊಳಗಿ ಕಥೆ- ಮತ್ತೊಂದು ಬೆಳ್ಳಿ ರೇಖೆ…

ಗಂಗಾಧರ ಕೊಳಗಿ

ಕೆಲವು ದಿನಗಳಿಂದ ಆಗಾಗ್ಗೆ ಏನಾದರೊಂದು ತೊಂದರೆ ಕೊಡುತ್ತಿದ್ದ ಹೊಲಿಗೆಮೆಶೀನ್ ಹಠಾತ್ತನೇ ಕಡ್ ಕಡ್ ಎಂದು ಸದ್ದು ಮಾಡತೊಡಗಿದಾಗ ಬಾಬಣ್ಣನಿಗೆ ರೋಸಿ ಹೋಯಿತು. ಯಾವತ್ತೂ ಸಣ್ಣಪುಟ್ಟ ತರಲೆ, ತಾಪತ್ರಯಗಳಿಗೆ ತಲೆಕೆಡಿಸಿಕೊಳ್ಳದ ಬಾಬಣ್ಣ ಅವತ್ಯಾಕೋ ರೋಸಿ ಹೋಗಿ ಕಾಲಿನಲ್ಲಿ ಒತ್ತಿಕೊಂಡಿದ್ದ ಪೆಡಲ್ ಸರಿಸಿ, ಮೆಶೀನ್ ಚಕ್ರದ ಓಟವನ್ನು ತಡೆದು ಮೆಶೀನ್ ಹಲಗೆಯ ಮೇಲೆ ರಪ್ ಅಂತ ಮುಷ್ಠಿ ಗುದ್ದಿದ. ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷದಿಂದ ಡರ್ಭಿ ಕಂಪನಿಯ ಆ ಹೊಲಿಗೆ ಮೆಶೀನ್ ಜೊತೆಗೆ ಬಾಬಣ್ಣನ ಒಡನಾಟ ಸಾಗಿ ಬಂದಿತ್ತು.

ಮನೆಯಲ್ಲಿರುವದಕ್ಕಿಂತ ಹೆಚ್ಚುಹೊತ್ತು ಅಂಗಡಿಯಲ್ಲೇ ಇರುವ ಕಾರಣಕ್ಕೆನೋ? ಹೊಕ್ಕುಳಬಳ್ಳಿಯ ಸಖ್ಯ ಅದರ ಜೊತೆಗೆ ಬೆಳೆದು ಬಂದಿತ್ತು. ಯಾವತ್ತೂ ಕೆಲಸಕ್ಕೆ ಕೈ ಕೊಟ್ಟಿರದ ಮೆಷಿನ್ ಇತ್ತೀಚೆಗೆ ಸಣ್ಣ ಪುಟ್ಟ ಕಿರಿಕಿರಿ ಮಾಡುತ್ತಿತ್ತು. ಆವಾಗೆಲ್ಲ ತನ್ನ ಸಹಾಯಕರೋ, ಎದುರು ನಿಂತಿರುತ್ತಿದ್ದ ಗಿರಾಕಿಗಳ ಬಳಿಯೋ ‘ಇದಕ್ಕೂ ನನ್ನ ಹಾಗೇ ವಯಸ್ಸಾಯ್ತು, ಮಾತು ಬಾರದಿರುವದಕ್ಕೆ ಅದನ್ನ ಈ ಥರದಲ್ಲಿ ಹೇಳ್ತಾ ಇದೆ’ ಎಂದು ಜೋಕ್ ಮಾಡುತ್ತಿದ್ದ. ಮೆಶೀನ್ ಬಗ್ಗೆ ಬಾಬಣ್ಣನಿಗೆ ಎಷ್ಟು ಕಾಳಜಿ ಅಂದರೆ ಅದು ಹೇಗೇ ಇರಲಿ, ವರ್ಷಕ್ಕೆ ಎರಡು ಬಾರಿ ಹುಬ್ಬಳ್ಳಿಯಿಂದ ಬರುವ ಖಂಡೇರಾವ್ ಬಳಿ ಇಡೀ ಮೆಶೀನ್‌ನ್ನು ಓವರ್‌ ಆಯ್ಲಿಂಗ್ ಮಾಡಿಸುತ್ತಿದ್ದ. ಜೀವವೇ ಆಗಿದ್ದ ಅದರ ಕುರಿತು ಕಕ್ಕುಲಾತಿಯ ಜೊತೆಗೆ ಅದರಿಂದಲೇ ತನ್ನ ಬದುಕು ಸಾಗುತ್ತಿದೆ ಎನ್ನುವ ಸಾಮಾನ್ಯ ತಿಳುವಳಿಕೆಯೂ ಅವನಲ್ಲಿತ್ತು.

ಕಳೆದ ನಾಲ್ಕಾರು ದಿನಗಳಿಂದ ಬಟ್ಟೆ ಹೊಲಿಯುವಾಗ ದಾರ ಸರಿಯಾಗಿ ಕೂರದೇ ಹೊಲಿಗೆ ಬಿಟ್ಟುಕೊಳ್ಳುತ್ತ ಬರುತ್ತಿತ್ತು. ಇಷ್ಟು ವರ್ಷಗಳ ಅನುಭವದಲ್ಲಿ ಸಣ್ಣಪುಟ್ಟ ರಿಪೇರಿಗಳನ್ನು ಮಾಡಿಕೊಳ್ಳುವ ಪರಿಣಿತಿ ಪಡೆದಿದ್ದ ಬಾಬಣ್ಣ ಅದನ್ನು ಸರಿಮಾಡಿಕೊಳ್ಳುತ್ತಿದ್ದ. ಆದರೆ ಈಗ ಏಕಾಏಕಿ ಬಾಬಿನ್‌ನಲ್ಲೇ ಸಮಸ್ಯೆ ಕಾಣ ಸಿತ್ತು. ಸೂಜಿ ಕುಕ್ಕಿ ದಾರ ಮೇಲೆತ್ತಿ ಹೊಲಿಗೆಯಾಗಲು ಸಹಕರಿಸುವ ಬಾಬಿನ್ನೇ ತೊಂದರೆ ಕೊಟ್ಟರೆ? ಬಾಬಣ್ಣ ಬಾಬಿನ್ ತೆಗೆದು, ಅದನ್ನೆಲ್ಲ ಸರಿಮಾಡಿ ಮತ್ತೆ ಮೆಶೀನ್ ಚಾಲೂ ಮಾಡಿದರೂ ಮತ್ತದೇ ರಗಳೆ.

ಈಗ ಹಂಗಾಮು; ಶಾಲಾ ಮಕ್ಕಳ ಸಮವಸ್ತ್ರ ಹೊಲಿಯುವ ಧಾವಂತ. ಹೊಲಿಯುವ ಬಟ್ಟೆಗಳು ರಾಶಿಯಾಗಿದ್ದವು. ಗಿರಾಕಿಗಳು ಬಟ್ಟೆ ಕೊಡುವ ದಿನವನ್ನ ತಿಳಿದಿದ್ದರೂ ರಸ್ತೆಯಲ್ಲಿ ಹಾಯುವಾಗೆಲ್ಲ ಕುಶಲೋಪರಿ ವಿಚಾರಿಸುವ ರೀತಿಯಂತೆ ‘ನಮ್ಮದು ರೆಡಿಯಾಯ್ತಾ?’ ಎಂದು ಕೇಳಿಯೇ ಮುಂದಕ್ಕೆ ಸಾಗುತ್ತಿದ್ದರು. ಅದರಲ್ಲೂ ಮಕ್ಕಳಿಗಂತೂ ಸಮವಸ್ತ್ರ ಸಿಗದ ಹೊರತು ನೆಮ್ಮದಿಯೇ ಇಲ್ಲ; ಶಾಲೆಗೆ ಹೋಗುವಾಗ, ವಾಪಸ್ ಮನೆಗೆ ಬರುವಾಗ ಬಾಬಣ್ಣನ ಅಂಗಡಿ ಮುಂದೆ ನಿಂತು ಹೋಗದಿದ್ದರೆ ಅವರಿಗೆ ಸಮಾಧಾನವೇ ಇಲ್ಲ.

ತನ್ನ ಇಷ್ಟು ವರ್ಷಗಳ ಸರ್ವೀಸಿನ ಸತ್ಯವೃತವನ್ನು ಮುರಿಯಬಹುದಾದ ಈ ಸಂದಿಗ್ಧ ಸ್ಥಿತಿ ಬಾಬಣ್ಣನಲ್ಲಿ ತಳಮಳ ಹುಟ್ಟಿಸಿಬಿಟ್ಟಿತ್ತು. ಮೊದಲಾಗಿದ್ದರೆ ಬಾಬಣ್ಣನ ಅಂಗಡಿಯಲ್ಲಿ ಎರಡು ಮೆಶೀನ್‌ಗಳಿದ್ದವು. ತಾನು ಬಳಸುವ ಈ ಮೆಷಿನ್ ಒಂದಾದರೆ ತನ್ನ ಬಳಿ ಕಾಜು, ಗುಂಡಿ ಮಾಡುತ್ತ, ಕ್ರಮೇಣ ಕತ್ತರಿಸಿ ಕೊಟ್ಟ ಬಟ್ಟೆಗಳನ್ನು ತನ್ನ ನಿರ್ದೇಶನದಲ್ಲಿ ಹೊಲಿಯುವ ಹುಡುಗರಿಗೆ ತರಬೇತಿಗೆಂದು ಮತ್ತೊಂದು ಮೆಶೀನ್ ತಂದಿಟ್ಟುಕೊ೦ಡಿದ್ದ. ಮುನಸಿಪಾಲ್ಟಿಯವರು ಅಗಲೀಕರಣಕ್ಕಾಗಿ ಮುಖ್ಯ ರಸ್ತೆಯನ್ನು ತೆರವುಗೊಳಿಸುವಾಗ ಈ ಅಂಗಡಿ ಇಲ್ಲವೇ ಆಗಿ, ನಂತರ ಅದೇ ಬೀದಿಯ ತಿರುವಿನ ಮೂಲೆಯಲ್ಲಿ ಅಂಗಡಿ ಬಾಡಿಗೆ ಹಿಡಿಯುವ ಅನಿವಾರ್ಯತೆ ಬಾಬಣ್ಣನಿಗೆ ಬಂತು. ಅಂಗಡಿ ಚಿಕ್ಕದಾದಾಗ ಆ ಮೆಶೀನ್‌ನ್ನು ತನ್ನ ಬಳಿಯೇ ಕಲಿತು ಹೊಸದಾಗಿ ಅಂಗಡಿ ಹಚ್ಚಿದ್ದ ಸಹಾಯಕನಿಗೆ ನಿಕ್ಕಿ ದರ ಹೇಳದೇ ಕೊಟ್ಟು ಅವನು ಕೊಟ್ಟಷ್ಟು ಹಣ ತೆಗೆದುಕೊಂಡಿದ್ದ.

ಬಾಬಣ್ಣನ ಅಂಗಡಿ ಚಿಕ್ಕದೋ, ದೊಡ್ಡದೋ? ಬಟ್ಟೆ ಹೊಲಿಸುವವರಿಗೆ ಅದು ಮುಖ್ಯವೇ ಆಗಿರಲಿಲ್ಲ. ಅಳತೆ ತೆಗೆದುಕೊಂಡು ನೋಟುಬುಕ್ಕಿನಲ್ಲಿ ಗುರುತು ಹಾಕಿಕೊಂಡದ್ದನ್ನ ಗಿರಾಕಿಗೆ ತೋರಿಸಿ, ಕರಾರುವಕ್ಕಾದ ರೀತಿ ಹಾಗೂ ಸಮಯದಲ್ಲಿ ಒದಗಿಸುತ್ತಿದ್ದ ಬಾಬಣ್ಣನ ಬಗ್ಗೆ ಖಾಯಂ ಹೊಲಿಸುವವರಿಗೆ ವಿಶ್ವಾಸದ ಜೊತೆಗೆ ಆತ ತಮ್ಮವನೇ ಅನ್ನಿಸುತ್ತಿದ್ದ; ಆತ ಹೊಲಿದ ಬಟ್ಟೆ ತೊಟ್ಟವರಿಗೆಲ್ಲ ಒಂದೆರಡು ಸೆಕೆಂಡ್ ಆದರೂ ಬಾಬಣ್ಣ ನೆನಪಾಗುತ್ತಿದ್ದ. ಮಿತಭಾಷಿ, ವಿನಯದ ವರ್ತನೆ ಇವೆಲ್ಲ ಬಾಬಣ್ಣನ ನಿಜಗುಣವಾದರೂ ಯಾರಾದರೂ ಗಿರಾಕಿ ಅನವಶ್ಯಕ ಕಿರಿಕಿರಿ ಮಾಡಿದರೆ, ತನ್ನ ಸ್ವಾಭಿಮಾನಕ್ಕೆ ಚೂರು ಮುಕ್ಕಾದರೂ ಬಾಬಣ್ಣ ‘ಈ ಹೊಲಿಗೆಯ ದುಡ್ಡೇ ಬೇಡ, ಮತ್ತೆ ನನ್ನ ಹತ್ರ ಬರಬೇಡಿ’ ಎಂದು ಮುಸುಡಿಗೆ ಹೊಡೆದಂತೆ ಹೇಳಿಬಿಡುತ್ತಿದ್ದ. ಒಮ್ಮೆ ಬಾಬಣ್ಣನ ಬಳಿ ಬಂದು ಬಟ್ಟೆ ಹೊಲಿಸಿದವರಲ್ಲಿ ಹೆಚ್ಚಿನವರು ಮತ್ತೆ ಅವನಲ್ಲೇ ಬರುತ್ತಿದ್ದರು. ದೇಹಾಕೃತಿಗೆ ತಕ್ಕಂತೆ ನೀಟಾದ ಹೊಲಿಗೆ, ತೊಟ್ಟರೆ ಒಳಗಿನಿಂದಲೇ ಸುಖ ಕೊಡುವ ಚಹರೆ ಇಂಥ ಅನೇಕವು ಸೇರಿಕೊಂಡು ಬಾಬಣ್ಣ ಅವರಿಗೆಲ್ಲ ಇಷ್ಟದವನಾಗಿದ್ದ.

ಆದರೆ ಬಾಬಣ್ಣನನ್ನು ಕಂಗೆಡಿಸುತ್ತಿದ್ದು ಕೇವಲ ಅವನ ಹೊಲಿಗೆ ಮೆಶೀನ್ ಮಾತ್ರವಲ್ಲವಾಗಿತ್ತು. ಅವನ ಒಳ ಬದುಕನ್ನು ಹೈರಾಣವಾಗಿಸುತ್ತ ಬಂದ ಸೂಕ್ಷ್ಮ ಪಲ್ಲಟಗಳು ಹೊರ ಬದುಕನ್ನು ಅಸ್ತವ್ಯಸ್ತಗೊಳಿಸತೊಡಗಿತ್ತು. ತಂದೆಯನ್ನೇ ನೋಡದ ಬಾಬಣ್ಣನನ್ನು ಅವನ ತಾಯಿ ಅದೆಷ್ಟು ಕಷ್ಟದಿಂದ ಸಾಕಿದಳೋ? ಯಾವ ಘಾತವೂ ತಾಗದಂತೆ, ಯಾವ ತಲ್ಲಣಗಳು ಸೋಕದಂತೆ ಅವನನ್ನ ತಾನು ಯಾರೋ ದೊಡ್ಡವರಿಂದ ಬೇಡಿ ಪಡೆದ ಜನತಾ ಮನೆಯಲ್ಲಿ ಬೆಳೆಸಿದ್ದಳು. ಸದಾಕಾಲ ಅವನ ಬುದ್ದಿಗೆ ಕಲ್ಮಷ ತಾಗದಂತೆ ಮತ್ತು ಹೊಟ್ಟೆ ಖಾಲಿಯಾಗದಂತೆ ಜತನದಿಂದ ಬೆಳೆಸಿದ್ದಳು. ಬೆಳೆದು ಬುದ್ದಿ ಬಲಿತಾಗ ಬಾಬಣ್ಣನಿಗೆ ತನ್ನ ಇರುವಿಕೆಯ ಸ್ಥಿತಿ, ಸುತ್ತಲಿನ ವಾಸ್ತವದ ಬಗ್ಗೆ ನಿಧಾನಕ್ಕೆ ಮನವರಿಕೆಯಾಗತೊಡಗಿತು. ಅಮ್ಮ ತನಗಾಗಿ ಅಲ್ಲ, ಮಗನಾದ ನನ್ನ ಒಳ್ಳೆಯದಕ್ಕೆ ಒದ್ದಾಡುತ್ತಿದ್ದಾಳೆ ಎನ್ನುವದಷ್ಟೇ ಅವನ ಅರಿವಿಗೆ ಬಂತೇ ಹೊರತು ಅವಳ ಕನಸುಗಳೇನು, ಗುರಿಯೇನು? ಇಷ್ಟೆಲ್ಲ ತ್ಯಾಗಮಯಿ ತಾಯಿ ದೊರಕಿದ್ದು ಪುಣ್ಯ ಎನ್ನುವ ಯಾವ ಆದರ್ಶ ಸಾಲುಗಳೂ ಅವನ ಮನಸ್ಸಲ್ಲಿ ಮೂಡಿರಲಿಲ್ಲ. ಅಮ್ಮನ ಪಡಿಪಾಟಲು ನಿಲ್ಲಿಸಬೇಕು ಎನ್ನುವದಷ್ಟೇ ಮನಸ್ಸಿಗೆ ತೆಗೆದುಕೊಂಡ ಬಾಬಣ್ಣ ಹತ್ತನೇ ಇಯತ್ತೆ ಮುಗಿದದ್ದೇ ಅವಳ ಬಳಿ ತನ್ನ ಯೋಚನೆಯನ್ನು ಹೇಳಿದ. ‘ದುಡ್ಡೇ ಮುಖ್ಯ ಅಲ್ಲ, ಸ್ವತಂತ್ರತೆ ಮುಖ್ಯ’ ಎಂದ ಮಗನ ಮಾತು ಕೇಳಿದ ಕನ್ನಮ್ಮ ‘ಇವನನ್ನ ಒತ್ತಾಯ ಮಾಡಿ ಹೊರಗಿನದೂ ತಿಳಿಯಲಿ ಎಂದು ಮುನ್ಸಿಪಾಲ್ಟಿ ಲೈಬ್ರರಿಗೆ ಓದಲು ಕಳಿಸಿದ್ದೇ ಎಡವಟ್ಟಾಯ್ತೇನೋ?’ ಅಂದುಕೊ೦ಡಳು.

ಬಾಬಣ್ಣನ ವರಾತ ತಡೆಯಲಾಗದೇ ತಾನು ಪರಕಾರ ಹೊಲಿಸುತ್ತಿದ್ದ ಹುಚ್ಚರಾಯಪ್ಪನವರ ಬಳಿ ಹೇಳಿಕೊಂಡಾಗ ‘ನನ್ನ ಹತ್ರ ಕಳಿಸು, ಅವಂಗೆ ಮನುಷ್ಯನಾಗಬೇಕು ಅಂತಿದೆ. ಓದಿದೋರೆಲ್ಲ ಕಡಿದದ್ದು ಅಷ್ಟೇ ಇದೆ’ ಎಂದು ಕನ್ನಮ್ಮನ ತಳಮಳವನ್ನ ಕಡಿಮೆ ಮಾಡಿದ್ದರು. ಹುಚ್ಚರಾಯಪ್ಪನವರ ಕುಟುಂಬವೇ ಅನಾದಿಯಿಂದ ಹೊಲಿಗೆ ವೃತ್ತಿಯಲ್ಲಿ ತೊಡಗಿಕೊಂಡು ಬಂದದ್ದು. ಇಡೀ ಊರಲ್ಲಿ ಅವರೊಬ್ಬರೇ ಕೋಟು, ಜುಬ್ಬಾ ಹೊಲಿಯುವವರು. ನಿಖರವಾಗಿ ಗಂಡಸರ ಪೈಜಾಮಾ, ಅಂಗಿ, ಪ್ಯಾಂಟ್ ಹೊಲಿಗೆ ಮಾಡುವ ಹುಚ್ಚರಾಯರು ಹೆಂಗಸರ ಪರಕಾರವನ್ನು ಹೊಲಿಯುವವರಾದರೂ ಗಂಡಸರ ಬಳಿ ಅಳತೆ ತೆಗೆದುಕೊಂಡ೦ತೆ ಅವರಲ್ಲಿ ವರ್ತಿಸುತ್ತಿರಲಿಲ್ಲ. ಹಳೆಯ ಬಟ್ಟೆಯನ್ನ ಅಳತೆಗೆ ಬಳಸುತ್ತಿದ್ದರು.

ಅವರ ಅಂಗಡಿಯಲ್ಲಿ ನೆಲದ ಮೇಲೆ ಕೂತು ಕಾಜು, ಬಟನ್ ಮಾಡುವಲ್ಲಿಂದ ಶುರು ಮಾಡಿದ ಬಾಬಣ್ಣ ಹುಚ್ಚರಾಯಪ್ಪನವರ ಖಡಕ್ಕಾದ ತರಬೇತಿಯಿಂದ ನಾಲ್ಕಾರು ವರ್ಷಗಳಲ್ಲೇ ಎಕ್ಸಪರ್ಟ ಟೈಲರ್ ಎನ್ನುವ ಬಿರುದಿಗೆ ಪಾತ್ರನಾಗಿದ್ದ. ಅಷ್ಟರಲ್ಲೇ ಕನ್ನಮ್ಮ ತೀರಿಕೊಂಡಳು. ಬಾಬಣ್ಣ ಮಳೆಯಲ್ಲಿ ನೆಂದ ಗುಬ್ಬಿಯಂತೆ ಕುಗರತೊಡಗಿದ್ದ. ಅಮ್ಮನನ್ನ ಕಳೆದುಕೊಂಡ ಸಂಕಟ ಅವನಲ್ಲಿ ಅವ್ಯಕ್ತವಾಗಿ ಸುಡುತ್ತಿತ್ತು. ಅವಳು ಕಳೆದುಹೋದ ದು:ಖ ಅವನೊಳಗೆ ಹೊರಜಗತ್ತಿಗೆ ಕೇಳದ ರೀತಿಯಲ್ಲಿ ರೋಧಿಸುತ್ತಿತ್ತು. ಅವನ ಒಳವೇದನೆ, ತಲ್ಲಣ ಗಮನಿಸಿದ ಹುಚ್ಚರಾಯಪ್ಪ ಅವನಲ್ಲಿ ಜೀವಶಕ್ತಿ ತುಂಬಬಹುದು ಎಂತಲೇನೋ ಮುಂದೆ ನಿಂತು ಅವನದ್ದೇ ಸ್ವಂತ ಅಂಗಡಿ ಹಾಕಿಸಿಕೊಟ್ಟಿದ್ದರು.

ಬಾಬಣ್ಣನ ಅಂಗಡಿಯಲ್ಲಿ ಈಗಲೂ ಆತ ನಂಬುವ ಗಣಪತಿ ದೇವರ ಫೋಟೊದ ಪಕ್ಕ ಹುಚ್ಚರಾಯಪ್ಪನವರ ಫೋಟೊವೂ ಇತ್ತು. ದಿನಾ ಬೆಳಿಗ್ಗೆ ಅಂಗಡಿ ತೆರೆದಾಕ್ಷಣ ಮನೆಯಿಂದ ತಂದ ಹೂವುಗಳನ್ನ ಅವಕ್ಕೆ ಧರಿಸಿ, ಊದುಕಡ್ಡಿ ಬೆಳಗುತ್ತಿದ್ದ. ಅಂಗಡಿ ಶುರುಮಾಡಿ ಆರೆಂಟು ತಿಂಗಳಲ್ಲೇ ಹುಚ್ಚರಾಯಪ್ಪನವರು ತೀರಿಕೊಂಡಿದ್ದರು. ತಾಯಿ ಮತ್ತು ಜೀವನಕ್ಕೆ ದಾರಿ ಮಾಡಿಕೊಟ್ಟ ಮಾರ್ಗದರ್ಶಿ ಇಬ್ಬರನ್ನೂ ವರ್ಷದೊಳಗೆ ಕಳೆದುಕೊಂಡಿದ್ದ ಬಾಬಣ್ಣ ಹೊರಗೂ, ಒಳಗೂ ನಿಜವಾಗಿ ಅನಾಥನಾಗಿದ್ದ.

ಈಗ ಏನು ದಾರಿ? ಎನ್ನುವಂತೆ ಎದುರಿನ ಗೋಡೆಯಲ್ಲಿದ್ದ ಅಮ್ಮ ಮತ್ತು ಹುಚ್ಚಪ್ಪರಾಯರ ಫೋಟೊ ನೋಡುತ್ತಿದ್ದವನಿಗೆ ಹಳೆಯ ನೆನಪುಗಳು ಬಿಚ್ಚಿಕೊಳ್ಳತೊಡಗಿದವು. ಅಂಥ ಇಕ್ಕಟ್ಟಿನಲ್ಲೂ ಬಾಬಣ್ಣನಿಗೆ ಏನೋ ಹೊಳೆದು ನಗು ಬಂತು; ಬಯಲುದಾರಿ ಸಿನೆಮಾದ ನಾಯಕಿ ಅತಿಕಷ್ಟದಲ್ಲಿದ್ದಾಗ ಹಾಡುವ ‘ಬಿಡೆನು ನಿನ್ನ ಪಾದ’ ಎಂದು ಹಾಡಿದರೆ ಹೇಗೆ?’ ಅನ್ನಿಸಿ ಮುಸಿ ಮುಸಿ ನಕ್ಕ. ಅವನ ಸಹಾಯಕರಿಗೆ ಅವನ ವರ್ತನೆ ಆಶ್ಚರ್ಯ ತಂದರೂ ಎದುರಾಗುವ ವಿಪತ್ತುಗಳನ್ನು ಇಂಥ ಸಣ್ಣಪುಟ್ಟ ಚೇಷ್ಟೆಗಳ ಮೂಲಕ ನಿವಾರಿಸಿಕೊಳ್ಳುವ ಅವನ ಚತುರತೆ ಗೊತ್ತಿದ್ದರಿಂದ ಅವರೂ ಸಣ್ಣಗೆ ನಕ್ಕು ಸುಮ್ಮನಾಗಿದ್ದರು.

ಬೇರೆಯವರ ಬಳಿ ಹೇಳಿಕೊಳ್ಳಲಾಗದ ಆ ಎಲ್ಲ ಒಳಗುದಿಗಳನ್ನ ಮರೆಯುವ ಹಠ ಎನ್ನುವಂತೆ ತನ್ನ ಕಾಯಕದಲ್ಲಿ ತೊಡಗಿಕೊಂಡು, ಸಾಕಷ್ಟು ಸಂಪಾದನೆಯನ್ನು ಮಾಡುತ್ತಿದ್ದ ಬಾಬಣ್ಣನ ಮೇಲೆ ಹಲವರ ಕಣ್ಣು ಇತ್ತು. ಒಳ್ಳೆ ಮನಸ್ಸಿನ, ಯಾವ ದುರಭ್ಯಾಸವೂ ಇರದ ಹುಡುಗ. ಹಿಂದಿಲ್ಲ, ಮುಂದಿಲ್ಲ. ನಮ್ಮ ಹತ್ತಿರದ ಹುಡುಗಿಯನ್ನು ಇವನಿಗೆ ಜೋಡಿಸಬಹುದಿತ್ತು ಎಂದು ಹಲವು ಗಂಡಸರು, ಹೆಂಗಸರೂ ಅವರವರೇ ಹಾಯ ಹಾಕುವ ಜೊತೆಗೆ ಇವನಿಗೆ ತಮ್ಮ ಹುಡುಗಿಯನ್ನು ಗಂಟು ಹಾಕುವ ಬಗ್ಗೆ ಜಂಟಿಯಾಗಿ ಚರ್ಚಿಸುವದೂ ಇತ್ತು. ತಾನು ಇವರೆಲ್ಲರ ಕೇಂದ್ರಬಿ೦ದುವಾಗಿದ್ದೇನೆ ಎನ್ನುವ ಪರಿವೆಯೇ ಇಲ್ಲದೇ ತಾನು ಮಾಡುತ್ತಿರುವದು ತುಂಬಾ ಜವಾಬ್ದಾರಿಯ ಕಾರ್ಯ ಎನ್ನುವದನ್ನ ಮನಸ್ಸಲ್ಲೇ ಇಟ್ಟುಕೊಂಡು, ಹೊರಗೆಲ್ಲೂ ತೋರಿಸದೇ ದುಡಿಯುತ್ತಿದ್ದ.

ಅಂತೂ ಬಾಬಣ್ಣನ ಸೋದರ ಮಾವನ ಕಡೆಯ ನೆಂಟರೊಬ್ಬರ ಮಗಳು ಧರ್ಮಪತ್ನಿಯಾಗಿ ಅವನನ್ನು ವರಿಸಿಕೊಂಡಳು. ಕಾಮರ್ಸನಲ್ಲಿ ಡಿಗ್ರಿ ಪಾಸುಕೊಂಡಿದ್ದ ಆಕೆ ಟೈಲರ್ ಆಗಿರುವ ಬಾಬಣ್ಣನನ್ನ ಮದುವೆಯಾಗಲು ಮೊದಲು ಹಿಂದೇಟು ಹಾಕಿದರೂ ವಾಸ್ತವವನ್ನು ನಿಖರವಾಗಿ ಅರಿತುಕೊಳ್ಳುವ ಮನಸ್ಥಿತಿ ಇದ್ದ ಆಕೆ ನಂತರದಲ್ಲಿ ಒಪ್ಪಿಕೊಂಡಳು. ತನ್ನ ಕುಟುಂಬದ ಸ್ಥಿತಿ, ತನ್ನ ನಂತರ ಇರುವ ಮೂವರು ತಂಗಿಯರ ಭವಿಷ್ಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಆಕೆ ನೋಡಲು ಸ್ಮಾರ್ಟ ಆಗೇ ಇರುವ, ಯಾವ ಹವ್ಯಾಸಗಳಿಲ್ಲ ಎನ್ನುವ ಖ್ಯಾತಿಯನ್ನು ಪಡೆದ, ಸದಾ ಕಾಲ ಕಾಯಕವೇ ಕೈಲಾಸ ಎನ್ನುವ ಮನುಷ್ಯನೇ ಸರಿಯಾದ ಆಯ್ಕೆ ಎಂದು ಒಪ್ಪಿಗೆ ಕೊಟ್ಟ ಎರಡು ತಿಂಗಳಲ್ಲೇ ಹೆಚ್ಚೇನೂ ಆಡಂಭರವಿಲ್ಲದಿದ್ದರೂ ಊಟೋಪಚಾರಕ್ಕೆ ಯಾವ ಕೊರತೆಯೂ ಇಲ್ಲದ ರೀತಿಯಲ್ಲಿ ಮದುವೆಯೂ ಆಗಿತ್ತು.

ತನ್ನ ಲಗ್ನದ ದಿನವೊಂದು ಬಿಟ್ಟು ಉಳಿದೆಲ್ಲ ದಿನ ಬಾಬಣ್ಣ ಸಹಾಯಕ ಹುಡುಗರಿಗೆ ಅಂಗಡಿ ತೆರೆದಿರಲು ಹೇಳಿದ್ದ. ಲಗ್ನದ ಸಿದ್ಧತೆ, ಆ ನಂತರ ಮಾವನ ಮನೆ, ನೆಂಟರ ಮನೆ ತಿರುಗಾಟ ಮುಗಿಸಿ ಬಂದವನೇ ಅಂಗಡಿ ಹೊಕ್ಕು ಬಟವಾಡೆ ಮಾಡಬೇಕಾದ ಬಟ್ಟೆಗಳ ಹೊಲಿಗೆಗೆ ಗಮನ ಕೊಟ್ಟ. ಬಾಬಣ್ಣ ಚರ್ಯೆ, ಕೆಲಸದ ಭರಾಟೆಯ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ಮಡದಿ ಸುವರ್ಣ ಒಂದೆರಡು ದಿನದ ನಂತರ ರಾತ್ರಿ ಹತ್ತರ ನಂತರ ಮನೆಗೆ ಬರುವದರ ಬಗ್ಗೆ ಆಕ್ಷೇಪ ಎತ್ತಿದಳು.

ಸುವರ್ಣಳ ಅಭಿಪ್ರಾಯ ಸರಿ ಎಂದು ಬಾಬಣ್ಣನಿಗೆ ಅನಿಸಿತು. ತಾಯಿಯನ್ನು ಬಿಟ್ಟರೆ ಹೊಸದಾಗಿ ಮದುವೆಯಾದ ಆತನಿಗೆ ಲಗ್ನಮಂಟಪದಲ್ಲಿ ಮೊದಲ ಬಾರಿಗೆ ಮತ್ತೊಬ್ಬ ಹೆಣ್ಣಿನ ಶರೀರ ಸ್ಪರ್ಶವಾದದ್ದು. ಮೊದಲೊಮ್ಮೆ ಒಂಥರಾ ಅನಿಸಿದರೂ ನಂತರ ಆ ಸ್ಪರ್ಶ ಬೇಕು ಎನ್ನುವ ಆಪೇಕ್ಷೆ ಅವನೊಳಗೆ ಹುಟ್ಟಿಕೊಂಡಿತ್ತು. ಸುಡು ಬಿಸಿಲಿನಲ್ಲಿ ಬೆಂದ ನೆಲ ಹನಿ ಮಳೆಗೆ ಕಾದಂತೆ ಆತ ಆ ಸ್ಪರ್ಶಸುಖಕ್ಕಾಗಿ ಕಾತರಿಸುತ್ತಿದ್ದ. ಇತ್ತ ಹಲವು ವರ್ಷಗಳಿಂದ ರೂಢಿಸಿಕೊಂಡು ಬಂದ ಪದ್ಧತಿ, ಕೆಲಸದ ನಿಷ್ಠೆ, ವ್ಯಾಮೋಹ ಬಿಡಲಾಗದಿದ್ದರೂ ಮಡದಿಯ ಆಕ್ಷೇಪ ಸರಿಯೆನ್ನಿಸಿದ ಮರುದಿನದಿಂದ ರಾತ್ರಿ ಒಂಬತ್ತು ಮುಕ್ಕಾಲಿಗೆ ಅಂಗಡಿ ಮುಚ್ಚಿಬಿಡುತ್ತಿದ್ದ. ಅವನ ಸಹಾಯಕ ಹುಡುಗರಿಗೆ ಖುಷಿಯಾಗಿ ‘ಅಣ್ಣನಿಗೆ ಮದುವೆಯಾದದ್ದು ನಮಗೆ ದಿನದಲ್ಲಿ ಎರಡು ತಾಸು ಸ್ವಾತಂತ್ರö್ಯ ಬಂತು’ ಎಂದು ಖುಷಾಲಿನ ಮಾತನಾಡಿಕೊಂಡರು.

ಅಷ್ಟಾಗಿ ಒಂದೂವರೆ ವರ್ಷಕ್ಕೆ ಸುವರ್ಣ ಹೆಣ್ಣುಮಗುವಿಗೆ ಜನ್ಮವಿತ್ತ ನಂತರ ಬಾಬಣ್ಣ ಮತ್ತಷ್ಟು ಗೆಲುವಾಗಿದ್ದ. ತಾಯಿ ತನಗಾಗಿ ಒದ್ದಾಡುತ್ತಿದ್ದ ಕಷ್ಟಗಳು ಮಡದಿಗೆ ಬರಬಾರದು ಎಂದು ತಾನೇ ಮಗುವಿನ ಹಲವು ಕೆಲಸಗಳನ್ನ ನಿರ್ವಹಿಸುತ್ತಿದ್ದ. ಕರುಳಿನ ಬಳ್ಳಿಯಾದ ಈ ಮಗು ತನ್ನಂತೆ ಮುಂದೊ೦ದು ದಿನ ನೋಯುತ್ತಿರಬಾರದು ಎನ್ನುವ ಅತೀವ ಕಾಳಜಿ ಅವನೊಳಗಿತ್ತು. ವೃತ್ತಿ ಮತ್ತು ಕೌಟುಂಬಿಕ ನಿರ್ವಹಣೆಗಳ ನಡುವಿನ ಅವಸರದಲ್ಲಿ ಮಾನಸಿಕವಾಗಿ, ಶಾರೀರಿಕವಾಗಿ ಸುಸ್ತೆನ್ನಿಸುತ್ತಿದ್ದರೂ ಇದು ತನ್ನ ಕರ್ತವ್ಯ ಎನ್ನುವ ಪ್ರಜ್ಞೆ ಬಾಬಣ್ಣನ ಲವಲವಿಕೆಗೆ ಕಾರಣವಾಗಿತ್ತು.

ಮಗು ಬೆಳೆದು ಅಂಗನವಾಡಿಗೆ ಹೋಗುವಷ್ಟಾದಾಗ ಸುವರ್ಣಳಿಗೆ ಮತ್ತೆ ಮನೆ, ಮನಸ್ಸು ಬಣ ಬಣ ಅನ್ನಿಸತೊಡಗಿತು. ಪ್ರೌಢತೆ ಬಂದ ಮನಸ್ಸಿನಲ್ಲಿ ತಾನು ಕಲಿತ ವಿದ್ಯೆ ನಿಷ್ಪçಯೋಜಕವಾಗುತ್ತಿದೆಯಲ್ಲ ಎನ್ನುವ ಹಳಹಳಿಕೆಯೂ ಸುಳಿಯತೊಡಗಿತು. ಖಾಲಿ ಸುಮ್ಮನೆ ಕೂರುವ ಬದಲು ಏನಾದರೂ ಸಣ್ಣ ನೌಕರಿಯನ್ನಾದರೂ ಮಾಡುತ್ತಿದ್ದರೆ ಹೊತ್ತು ಕಳೆದೀತು ಅನ್ನಿಸಿ ಬಾಬಣ್ಣನಿಗೆ ದುಂಬಾಲು ಬೀಳತೊಡಗಿದಳು. ‘ನಿಂಗ್ಯಾಕೆ ಆ ಥರ ದುಡಿಮೆ. ನಾನೇನಾದರೂ ಕಡಿಮೆ ಮಾಡಿದ್ದೇನಾ? ಪಾಪುನ್ನ ನೋಡ್ಕೊಂಡ್ರೆ ಚೋಲೋದಲ್ವಾ’ ಎಂದದ್ದಕ್ಕೆ ‘ಪಾಪುನ್ನ ನೋಡಿಕೊಳ್ಳೊದಕ್ಕೆ ಅಮ್ಮ ಇದಾಳೆ, ನಾನು ಹೊರಗೆ ಹೋಗೋದು ನಿಮಗೆ ಇಷ್ಟ ಇಲ್ವೆನೋ?’ ಎಂದು ನಾಲ್ಕಾರು ದಿನ ಮುನಿಸಿಕೊಂಡಿದ್ದಳು.

ಬಾಬಣ್ಣನೂ ತನ್ನ ಹೊಲಿಗೆ ಕಾಯಕದಲ್ಲಿ ಇದನ್ನೂ ಯೋಚಿಸುತ್ತಿದ್ದವ ನಂತರದಲ್ಲಿ ಒಂದು ನಿರ್ಧಾರಕ್ಕೆ ಬಂದ. ಪಾಪ, ತಾಯಿಗೊಬ್ಬಳೇ ಮಗಳೆಂದು ತಮ್ಮ ಮನೆಯಲ್ಲಿ ತಂದಿಟ್ಟುಕೊ೦ಡ ಸುವರ್ಣಳ ತಾಯಿ ಬಿಟ್ಟರೆ ಮನೆಯಲ್ಲಿ ಮತ್ಯಾರೂ ಇಲ್ಲ. ಮನೆಯಲ್ಲಿದ್ದು ಬೇಜಾರು ಪಡುತ್ತಾಳೆ. ನನ್ನ ಹಾಗಲ್ಲದೇ ಹೆಚ್ಚಿಗೆ ಓದಿದಾಳೆ, ಅವಳಿಗೂ ಆಸೆ ಇರುತ್ತದೆ’ ಎಂದು ನಿತ್ಯ ಬೆಳಿಗ್ಗೆ, ಸಂಜೆ ಪೈಗಳ ಹೋಟೆಲಿಗೆ ಚಹಾ ಕುಡಿಯಲು ಒಟ್ಟಿಗೇ ಹೋಗುವ ನಾಲ್ಕಾರು ಅಂಗಡಿ ಆಚೆಯ ಪುತ್ತೂರಾಯರ ಬಳಿ ತನ್ನ ಆಲೋಚನೆಯನ್ನು ಉಸುರಿದ.

ಬಾಬಣ್ಣನನ್ನು ಚಿಕ್ಕಂದಿನಿ೦ದ ನೋಡುತ್ತ, ಅವನ ಬದುಕಿನ ವಿಸ್ತರಣೆಯನ್ನು ಕಾಣುತ್ತ ಬಂದ ಪುತ್ತೂರಾಯ ಲೋಕಜ್ಞಾನವಿದ್ದ ವೃದ್ಧ. ಚಿಕ್ಕದೊಂದು ಗೋಲಿ ಸೋಡಾ, ಶರಬತ್ ಅಂಗಡಿ ನಡೆಸುತ್ತಿದ್ದ ಆತ ತನ್ನ ಅಂಗಡಿಗೆ ಗಿರಾಕಿಗಳು ಕಡಿಮೆಯಾಗುತ್ತಿರುವದನ್ನ ಗಮನಿಸಿಯೇ ಬದಲಾಗುತ್ತಿರುವ ಜಗತ್ತನ್ನು ಊಹಿಸಿಕೊಂಡವ. ಚಿಕ್ಕಪುಟ್ಟ ಅಂಗಡಿಗಳಲ್ಲೂ ಸಿಗುವ ಟೆಟ್ರಾ ಪ್ಯಾಕೆಟ್, ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ತಂಪು ಪಾನೀಯ ಸವಿಯುವ ಹೊಸ ಜಗತ್ತಿನ ಬಾಯಿಗಳು ತನ್ನ ಅಂಗಡಿಯಿ೦ದ ಮುಖ ತಿರುಗಿಸಿದ್ದನ್ನ ನಿರ್ವೀಕಾರವಾಗಿ ಸ್ವೀಕರಿಸಿದ್ದ. ಪಟ್ಟಾಂಗ ಹೊಡೆಯಲೆಂದು ಬರುತ್ತಿದ್ದ ಹಳೆ ತಲೆಗಳು ಬಿಟ್ಟರೆ ಹೊಸಬರು ಬಾರದಿದ್ದರೂ ಮೊದಲಿನ ದಿನಗಳಲ್ಲಿ ಹೇಗೆ ಅಂಗಡಿ ನಿರ್ವಹಣೆ ಮಾಡುತ್ತಿದ್ದನೋ ಹಾಗೇ ಇಂದಿಗೂ ಮುಂದುವರಿಸಿದ್ದ.

‘ಬ್ಯಾಡಾಗಿತ್ತು ಮಾರಾಯ’ ಎಂದು ಆಕ್ಷಣಕ್ಕೆ ಹೇಳಿದರೂ ಎರಡು ದಿನದ ನಂತರ ‘ಮತ್ತೆ ಇದೇ ರಾಮಾಯಣ ಆದ್ರೂ ಆಯ್ತು ಮಾರಾಯ. ನಿಂಗೆ ಗೊತ್ತಿದ್ದವರಿಗೆ ಹೇಳಿ ನೌಕರಿ ಕೊಡಿಸಾ’ ಎಂದ. ಅಷ್ಟರ ನಂತರ ಬಾಬಣ್ಣ ಯೋಚನೆ ಮಾಡಿ ತನ್ನ ಬಳಿ ಖಾಯಂ ಆಗಿ ಬಟ್ಟೆ ಹೊಲಿಸುತ್ತಿದ್ದ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರ ಬಳಿ ವಿಷಯ ಪ್ರಸ್ತಾವಿಸಿ, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯೂ ಸಿಕ್ಕಿ, ಸಂದರ್ಶನವೂ ಆಗಿ ಅಲ್ಲಿ ಕ್ಲರ್ಕ ಆಗಿ ಸುವರ್ಣ ಕೆಲಸ ನಿರ್ವಹಿಸುವಂತಾಗಿದ್ದು ಬಾಬಿನ್ ಬಿಚ್ಚಿ ಏನಾಗಿದೆ ಎಂದು ಪರಿಶೀಲಿಸುತ್ತಿದ್ದ ಬಾಬಣ್ಣ ಮನಸ್ಸಿನಲ್ಲಿ ಹತ್ತು, ಹದಿನಾಲ್ಕು ವರ್ಷಗಳ ಹಿಂದಿನ ಈ ಎಲ್ಲ ಹಳೆಯ ಘಟನೆಗಳೇ ಗಿರಕಿ ಹೊಡೆಯತೊಡಗಿದ್ದವು. ಬಾಬಿನ್‌ನಲ್ಲಿ ಅಂಥದ್ದೇನೂ ತೊಂದರೆ ಕಾಣುತ್ತಿರಲಿಲ್ಲ. ಹಾಗಂತ ಮತ್ತೆ ಹೊಲಿಯಲು ಕೂತರೆ ಹೊಲಿಗೆ ಮಾತ್ರ ಸರಿಯಾಗುತ್ತಿರಲಿಲ್ಲ. ‘ಯಾವುದಕ್ಕಾದರೂ ಒಂದು ಸೂತ್ರ ಅಂತಿರುತ್ತದೆ. ಅದು ನಮ್ಮ ಹೊಲಿಗೆಗೂ ಅನ್ವಯಿಸುತ್ತೋ ಬಾಬಣ್ಣ. ಅದಕ್ಕೆ ಮೊದಲೇ ಮೆಶೀನ್‌ನ್ನು ಆಗಾಗ್ಗೆ ಸರಿಪಡಿಸ್ತಾ ಇರ‍್ಬೇಕು’ ಅಂತ ಹುಚ್ಚರಾಯಪ್ಪ ಹೇಳುತ್ತಿದ್ದದ್ದು ನೆನಪಾಯಿತು.

ಬಾಬಣ್ಣನಿಗೆ ಐವತ್ತು ವರ್ಷ ದಾಟಿದಂತೇ ಅವನ ಮಗಳೂ ಬೆಳೆದು ಹೈಸ್ಕೂಲಿಗೆ ಹೋಗತೊಡಗಿದ್ದಳು. ಮಡದಿ ಸುವರ್ಣಾ ತನ್ನ ಕೆಲಸದ ಶೃದ್ಧೆಯಿಂದ ಬಡ್ತಿ ಪಡೆದುಕೊಳ್ಳುತ್ತ ಅದೇ ಶಾಖೆಯ ಮ್ಯಾನೇಜರ್ ಆಗಿದ್ದಳು.

ಬಾಬಣ್ಣನಿಗೆ ಆಗಾಗ್ಗೆ ಅನಿಸುತ್ತಿತ್ತು ; ಎಲ್ಲರ ಬದುಕು ಬದಲಾಗುತ್ತ, ಏರುಮುಖದಲ್ಲಿ ಸಾಗುತ್ತಿದ್ದರೆ ತನ್ನದು ಮಾತ್ರ ಇಷ್ಟೇ; ನಿಂತ ನೀರು. ಆಗಾಗ್ಗೆ ಬದಲಾಗುವ ಗಿರಾಕಿಗಳನ್ನ ಬಿಟ್ಟರೆ ಅದೇ ಅಂಗಡಿ, ಅದೇ ಮೇಶಿನ್. ಈಗೀಗ ರೆಡಿಮೇಡ್ ಬಟ್ಟೆಗಳ ಖಯಾಲಿ ಹೆಚ್ಚಾಗಿ ಹೊಲಿಸುವವರೂ ಕಡಿಮೆಯಾಗುತ್ತಿದ್ದಾರೆ. ಮೊದಲಿನ ಸಂಪಾದನೆ ಈಗಿಲ್ಲ ಎಂದೆಲ್ಲ ಸಂತಾಪ ಪಡುತ್ತಿದ್ದ. ಸಣ್ಣ ಪುಟ್ಟ ರಗಳೆಗಳಿದ್ದರೂ ಬದುಕು ಹಿತದಿಂದ ಸಾಗುತ್ತಿದೆಯಲ್ಲ ಎನ್ನುವ ಸಮಾಧಾನದಲ್ಲಿದ್ದ ಬಾಬಣ್ಣನ ಸಂಸಾರದಲ್ಲಿ ಸಣ್ಣಗೆ ಕಸಿವಿಸಿ ಕಾಣಿಸಿಕೊಳ್ಳತೊಡಗಿತ್ತು.

ಮೊದಮೊದಲು ಅವನ್ನೆಲ್ಲ ನಿರ್ಲಕ್ಷಿಸಿದ್ದ ಬಾಬಣ್ಣನಿಗೆ ಸುವರ್ಣಾಳ ವರ್ತನೆಯಲ್ಲಿ ಬದಲಾವಣೆ ಗೋಚರವಾಗತೊಡಗಿತು. ತನ್ನದೇ ನಡೆಯಬೇಕು ಎನ್ನುವ ಅವಳ ಧೋರಣೆಯನ್ನು ಮದುವೆಯಾದಲ್ಲಿಂದ ನೋಡುತ್ತ ಬಂದಿದ್ದ. ಈಗಿನದು ಆ ಥರದ್ದಲ್ಲ; ಅದನ್ನೂ ಮೀರಿದ್ದು. ಆಕೆಯ ವರ್ತನೆಗಳನ್ನ ಸ್ವಪ್ರತಿಷ್ಠೆ, ಸರ್ವಾಧಿಕಾರಿ ಧೋರಣೆ ಎಂದೆಲ್ಲ ಕರೆಯಲು ಅವನಿಗೆ ಶಬ್ದಸಂಪತ್ತಿಲ್ಲದ ಕಾರಣ ತನ್ನ ಮಿತಿಯಲ್ಲಿ ಗ್ರಹಿಸಿದ್ದ. ತನಗಿಂತ ಹೆಚ್ಚಿರುವ ಆಕೆಯ ಸಂಪಾದನೆ ಆಕೆಯ ಮನಸ್ಥಿತಿಯನ್ನ ಬದಲಾಯಿಸಿರಬಹುದೇ? ಎಂದು ಅನ್ನಿಸಿದರೂ ಅದಲ್ಲ ಎಂದೇ ಕೆಲವು ಕಾಲ ನಂಬಿಕೊ೦ಡಿದ್ದ. ತನ್ನ ವೃತ್ತಿ, ಗಳಿಕೆ, ಸ್ಥಾನಮಾನದ ಬಗ್ಗೆ ಹೀಗಳಿಕೆಯ ಮಾತುಗಳು ಅವಳಿಂದ ಬರತೊಡಗಿದಾಗ ಆ ನಂಬಿಕೆ ಅಲುಗಾಡತೊಡಗಿತ್ತು. ಅಷ್ಟು ಮಾತ್ರವಲ್ಲದೇ ಮಗಳೂ ಕೂಡ ಅಂಥದ್ದೇ ಲೇವಡಿಯ ಮಾತುಗಳನ್ನ ಆಡಿದಾಗ ಸುವರ್ಣಾ ಮಗಳ ಮನಸ್ಸನ್ನು ತಿದ್ದಿರುವದು ಸ್ಪಷ್ಟವಾಗಿ ಸಂಕಟವೆನ್ನಿಸಿಬಿಟ್ಟಿತ್ತು. ಅಮ್ಮ,ಮಗಳೂ ಮಾರ್ಕೆಟಿಗೆ ಹೋಗಬೇಕಾದಾಗ ತನ್ನ ಅಂಗಡಿಯತ್ತ ಬರುವದಿರಲಿ, ಅಡ್ಡ ಮುಖ ಹಾಕಿಕೊಂಡು ದಾಟುವದನ್ನ ಗಮನಿಸಿದಾಗ ಕುಗ್ಗುತ್ತಿದ್ದ.

ಹಣದ ಮದ ಮನುಷ್ಯನನ್ನ ಬದಲಾಯಿಸುವದನ್ನ ಕೇಳಿದ್ದ. ನೋಡಿದ್ದ. ಆದರೆ ತನ್ನ ಸಂಸಾರವನ್ನ ಛೀಧ್ರಗೊಳಿಸುತ್ತಿರುವ ಅದರ ಪರಿಣಾಮವನ್ನು ಗಟ್ಟಿ ಮನಸ್ಸಿನಿಂದ ತಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ವ್ಯಕ್ತಗೊಳಿಸಲಾಗದ ಒಳಗಿನ ಕುದಿತ, ಮನುಷ್ಯತ್ವದ ನಂಬಿಕೆಯೇ ಕುಸಿಯುವ ಸಾಧ್ಯತೆ ಇವೆಲ್ಲವನ್ನ ತೋಡಿಕೊಳ್ಳಬಹುದಾಗಿದ್ದ ಪುತ್ತೂರಾಯರೂ ಕಾಲವಾಗಿ ಅದೆಷ್ಟೋ ದಿನಗಳಾಗಿತ್ತು. ಇಂಥ ಖಾಸಗಿ ಸಂಗತಿಗಳನ್ನ ಹಂಚಿಕೊಳ್ಳುವ ಯಾವ ಮನಸ್ಸುಗಳೂ ಬಾಬಣ್ಣನಿಗೆ ಇರದ ಕಾರಣ ‘ಬೇಡ, ಅವೆಲ್ಲ ನನ್ನೊಳಗೇ ಸುಡುತ್ತಿರಲಿ’ ಎಂದು ಗಟ್ಟಿನಿಶ್ಚಯ ಮಾಡಿಕೊಂಡಿದ್ದ.

ಈಗ ಬಹುಕಾಲದ ಸಖ ಮೇಶಿನ್ ಕೂಡ ಕೈ ಕೊಡತೊಡಗಿದೆ. ಸಾಕಷ್ಟು ಸಂಪಾದನೆ, ಒಳ್ಳೆಯ ಹೆಸರು, ನಾಲ್ಕಾರು ಜನರಿಗೆ ಉದ್ಯೋಗ ಕೊಡುವ ಅವಕಾಶ ಒದಗಿಸಿದ್ದು ಇದೇ ಮೇಶಿನ್. ಈ ಯಂತ್ರಕ್ಕೆ ಇರುವ ಸಹೃದಯ ಮನಸ್ಸು ನಮ್ಮಂಥ ಮನುಷ್ಯರಿಗೆ ಇರುವದಿಲ್ಲವಲ್ಲ ಎನ್ನಿಸಿತು ಬಾಬಣ್ಣನಿಗೆ. ಏನು ಮಾಡಲಿ? ಎಂದು ತುಸು ಹೊತ್ತು ಯೋಚಿಸಿದ.

ಎಂದಿನಿ೦ದಲೋ ಒಳಮನಸ್ಸಲ್ಲಿ ಅಡಗಿಕೊಂಡಿತ್ತೇನೋ ಎನ್ನುವಂತೆ ಛಕ್ಕನೆ ಹೊಳಹೊಂದು ಎದ್ದುಬಂತು. ಬಾಬಣ್ಣ ಆ ಖುಷಿಯಲ್ಲಿ ಈವರೆಗೆ ಕಾಡುತ್ತಿದ್ದ ಒಳಗುದಿಗಳನ್ನೆಲ್ಲ ಮರೆತು ಸಹಾಯಕ ಕೇಶವನ ಬಳಿ ‘ನಾವೊಂದು ಸಣ್ಣದಾಗಿ ರೆಡಿಮೇಡ್ ಅಂಗಡಿ ಶುರು ಮಾಡಿದರೆ ಹೆಂಗೇ? ದುಬಾರಿ ಬಟ್ಟೆಗಳು ಬೇಡ. ಒಳ ಉಡುಪು, ಟವೆಲ್, ಬನೀಯನ್ ಇಂಥವು. ಹೊಲಿಗೆ ಜೊತೆಗೆ ಅದೂ ಇರಲಿ, ಕೈ ಹತ್ತಿದ್ರೆ ಮುಂದೆ ದೊಡ್ಡದಾಗಿ ಮಾಡುವ, ಅಲ್ವಾ?’ ಎಂದ. ಬಾಬಣ್ಣನ ಈ ಆಲೋಚನೆ ಕೇಶವನಿಗೆ ಆಶ್ಚರ್ಯ ಹುಟ್ಟಿಸಿ, ತನ್ನ ಹಾಗೇ ಕಣ್ಣು, ಮುಖದಲ್ಲಿ ಬೆರಗು ತುಂಬಿಕೊ೦ಡು ಕೂತಿದ್ದ ಪಕ್ಕದ ಗಿರೀಶನ ಮುಖ ನೋಡಿದ.

‘ಬಟ್ಟೆ ಕೊಡುವವರಿಗೆ ತಡವಾದರೂ ಸರಿಯೇ, ನಾಳೆಯೇ ಹುಬ್ಬಳ್ಳಿಗೆ ಹೋಗಿ ಹೊಸ ಮೇಶಿನ್ ತರಬೇಕು ಮತ್ತು ಸ್ವಲ್ಪ ದೊಡ್ಡದಾದ ಅಂಗಡಿಗೆ ತುರ್ತಾಗಿ ಸ್ಥಳ ಹುಡುಕಬೇಕು’ ಎಂದು ಬಾಬಣ್ಣ ಆ ಕ್ಷಣಕ್ಕೆ ನಿರ್ಧರಿಸಿಬಿಟ್ಟ.

‍ಲೇಖಕರು avadhi

May 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: