ನಾನು ಗಿರ್ಮಿಟ್ಟು…ಸಕಲೇಶಪುರದಿಂದ ಬಂದೀನ್ರಿ…

ನಂದಿನಿ ಹೆದ್ದುರ್ಗ

ಆರನೇ ತಾರೀಖು ಅಂದರೆ ಶುಕ್ರವಾರವೇ ಸಮ್ಮೇಳನಕ್ಕೆ ಹೋಗಬೇಕು ಎನ್ನುವ ಆಸೆಯಿದ್ದಿದ್ದು ನಂಗೆ.

ಆ ಅಸೆಗೆ ಇದ್ದ ಕಾರಣ ನಾನು ಈ ಮೊದಲು ಭಾಗವಹಿಸಿದ ಧಾರವಾಡ ಸಮ್ಮೇಳನ ಮತ್ತು ಅದರ ಆಸಕ್ತಿ ಹುಟ್ಟಿಸಿದ್ದ ಗೋಷ್ಠಿಗಳು.

ಅನಿವಾರ್ಯ ಕಾರಣಗಳಿಗಾಗಿ ಬೆಂಗಳೂರಿಂದಲೇ ಹೊರಡಬೇಕಿತ್ತು.

ಆದರೆ ಆ ದಿನ ಊರಿಂದ ಬಂದವಳಿಗೆ ಬಸ್ಸು ಇಳಿವಾಗಲೇ ವಿಚಿತ್ರ ತಲೆನೋವು ವ್ಯಾಪಿಸಿ ಜೊತೆಗೆ ವಾಕರಿಕೆಯೂ ಎನಿಸಿ ಹಾವೇರಿ ಆಸೆಯನ್ನು ಬಿಟ್ಟು ಸುಮ್ಮನೆ ಹೊದ್ದು ಮಲಗಿದೆ.

ಮಾರನೆ ದಿನ ಹಾವೇರಿ ತಲುಪುವಾಗ ನಡು ಮದ್ಯಾಹ್ನದ ಎರಡೂವರೆ ಗಂಟೆ.

ಸಮ್ಮೇಳನದ ಕಮಾನು ಕಾಣ್ತಿದ್ದಿದ್ದು ಓ ಅಲ್ಲಿ… ಒಂದಷ್ಟು ಕಾರುಗೀರು ಒಳಕ್ಕೆ ಸಲೀಸು ಹೋಗ್ತಿದ್ವು.ಉಳಿದಂತೆ ಎಲ್ರೂ ಮೈಯಂಟಿ ನಡೆಯುವುದು.ಮೊದ್ಲೇ ರೈತ ಕುಲದವಳು ನಾನು. ಕಾಫಿ ತೋಟದೊಳಕ್ಕೆ ಚಪ್ಲಿ ಮೆಟ್ಟಿ ಹೋಗ್ತಿವಿ. ಏನನ್ಸಲ್ಲ.

ಆದರೆ ಗದ್ದೆಯೊಳಕ್ಕೆ ಚಪ್ಲಿ ಕಾಲಿಡುವುದು ನನಗೆ ಆಗಿಬರಲ್ಲ. ಒಂಥರಾ ಸಂಕಟ.

ಸಮಾವೇಶ ಜಾಗಕ್ಕೆ ಅಡಿಯಿಡುವ ಮೊದಲ ಹೆಜ್ಜೆಗೆ ಅದೇ ಆಗಿದ್ದು.ಆ ಉದ್ದಾನುದ್ದ ಹೊಲದಲ್ಲಿ ಆಗಷ್ಟೇ ಜೋಳದ ಕೊಯ್ಲು ಆದ ಗುರ್ತಿಗೆ ಪೈರಿನ ಕೂಳೆ ಕಾಣ್ತಿತ್ತು.ಹಾದಿಯ ಆ ಜಂಗುಳಿಲಿ ಹೋದ್ರೆ ದೂರ ಆಗಬಹುದು ಎನಿಸಿ ಕೂಳೆ ಉಳಿದಿದ್ದ ಗದ್ದೆಗೆ ಶರಣು(ನಮಸ್ಕಾರ) ಮಾಡ್ಕೊಂಡು ಆರಂಭಿಸಿದೆ.

ಅಲ್ಲಿ ಸ್ವಲ್ಪ ನಡೆಯುತ್ತಲೂ ಹಾಸನದ ಜಾವಗಲ್ಲು ಪ್ರಸನ್ನ ಸರ್ ಸಿಕ್ಕಿ..ಓ ನಮ್ ನಂದಿನಿ,ನಮ್‌ಹೆಮ್ಮೆ ಅಂತೆಲ್ಲ ಮಾತಾಡ್ಸಿದ್ರು..ಒಂದಿಷ್ಟು ಮುಜುಗರ ಬಿಟ್ಟು

‘ನನ್ ಚೂರು ಅಲ್ಲಿತನ ತಲುಪ್ಸಿ ಪ್ರಸನ್ನ ಸರ್..ಜೊತೆಗ್ ಬನ್ನಿ ‘

ಅಂದಿದ್ರೆ ಬರೋವ್ರೋ ಏನೊ.

ಹಾಗೆ ಕೇಳಿದ್ರೆ ಅವರಿಗೆಲ್ಲಿ ತೊಂದರೆಯಾಗ್ತದೊ ಎಂದುಕೊಳ್ತಾ ಮಾಮೂಲು ಧಿಮಾಕಿನ ಪೋಸಿನಲ್ಲಿ ಮುಖ್ಯ ವೇದಿಕೆ ಹತ್ರ ನಡೆಯೋಕೆ ಶುರು ಮಾಡ್ದೆ. ನಡೆಯುವುದೆಂದರೆ ಹೆಜ್ಜೆ ಹೆಜ್ಜೆ ಜೋಡಿಸಿಯೇ ಮುಂದೆ ಸಾಗುವುದು.ಆ ಅಗಾಧ ಜನಪ್ರವಾಹದಲ್ಲಿ ನಡಿಗೆ ಸುಲಭವಲ್ಲ.ಅದೂ ಅಲ್ಲದೆ ಜೊತೆಗೊಂದು ಪರಿಚಿತ ಜೀವ ಇದ್ರೆ ಎಂತದ್ದಾನಾ ಒಂದು ಕೈ ನೋಡೇ ಬಿಡುವ ಅನಿಸ್ತದೆ. ಬರೀ ಖಾಲಿ ಬಯಲಾದರೂ ಓಕೆ.ಹೋಗಬಲ್ಲೆ ಅಂದ್ಕೋಬಹುದು..

ಸುತ್ತಲೂ ಜನವೋಜನವಿದ್ದು ಒಂದೂ‌ ಮುಖವೂ ನನ್ ಗುರುತಿನದ್ದಲ್ಲ ಅನಿಸಿದಾಗ ಮಾತ್ರ ಈ ಸಂಕಟ.

ಇಳಿಯೋಕೂ ಮೊದಲೇ ಗೆಳತಿಯಿಂದ ಕವಿಗೋಷ್ಟಿ ನಡೆಯುವ ವೇದಿಕೆ ಎರಡು ಅಂತ ತಿಳ್ಕೊಂಡಿದ್ರಿಂದ ಅದನ್ನೇ ಮೊದಲಿಗೆ ಹುಡುಕ್ತಾ ಹೋದೆ.

ಅಲ್ಲಿದ್ದ ಪೋಲಿಸಪ್ಪನ್ನ ಕೇಳಿದ್ರೆ

‘ಓ ಅಲ್ಲಿ ಬಲಕ್ಕೆ ತಿರುಗಿ ಎಡಕ್ಕೆ ಹೋಗಿ..ಅದೇ.ಆ ಪುಸ್ತಕದ ಮಳಿಗೆ ಹತ್ರ ‘ಅಂದ್ರು.

ಓ ಅಲ್ಲಿ ಎನ್ನುವುದು ನನ್ ಕಣ್ಣಿಗೆ ಮೈಲು ದೂರದಂತೆ ಕಂಡಿತಾದರೂ ಹೋಗಲೇಬೇಕಾದ ಅನಿವಾರ್ಯತೆ ಇದ್ದಿದ್ರಿಂದ ನಡೀತಾ ಮಳಿಗೆ ಬಳಿ ವೇದಿಕೆ ಗೆ ಹೋದೆ.

ಅಲ್ಲಿನ ಸದ್ದು ಕೇಳಿದ್ರೆ ಅದು ಕವಿಗೋಷ್ಟಿ ಅಲ್ಲ ಅಂತ ಗೊತ್ತಾತು.ಹೊರಗಡೆ ನಿಂತಿದ್ದವರನ್ನು ಕೇಳಿದ್ರೆ

‘ಯೆ ಇಲ್ರಿ.ಕವಿಗೋಷ್ಟಿ ಅಲ್ರಿ.ಇದೆಂತದೋ ಭಾಷ್ಣ’

ಅಂದರು.

ಬಿಸಿಲು ನೆತ್ತಿಯನ್ನು ಸುಡುತಿತ್ತು.

ಜನರ ಓಡಾಟ ಕಡಲಿನ ತೆರೆ ಬೀಸಿದಂತೆ ಒಮ್ಮೆ ಗಪ್ಪನೆ ದೊಡ್ಡದಾಗಿ, ಮತ್ತೊಮ್ಮೆ ಒಂದಿಷ್ಟು ಸೌಮ್ಯವಾಗಿ ,ಮತ್ತೊಮ್ಮೆ ಅಬ್ಬರವೇರಿದಂತೆ ಕಂಡು ಜಾತ್ರೆಯಲ್ಲಿ ಕಳೆದ ಕೂಸಿನಂತೆ ಅನಿಸಿ ಒಂದುಕ್ಷಣದ ಅಳುಕು ಆವರಿಸಿತು.

ಗುರುಗಳ ಜೊತೆಗೇ ಸಮ್ಮೇಳನಕ್ಕೆ ಹೋಗಿ ಗೊತ್ತಿದ್ದವಳು ನಾನು.

ಅವರ ಜೊತೆಗೆ ಹೋಗುವಾಗ ನಾನು

ಹೂವಿನ ಜೊತೆಗಿನ ನಾರು..

‘ಅದಾ…

ಅಲ್ಲಿ..ಅವರ್ನ ಕೇಳಿ,, ಓ ಅಲ್ಲಲ್ಲ…ಎಡಕ್ಕೆ ಬಲಕ್ಕೆ ಸ್ರೈಟಿಗೆ ಪಕ್ಕಕ್ಕೆ ಹಿಂದಕ್ಕೆ ಮುಂದಕ್ಕೆ ಮೇಲಕ್ಕೆ ಕೆಳಕ್ಕೆ…’

ಉಸ್ಸಪ್ಪಾ…

ಕೇಳಿಸ್ಕೊಂಡು ಕೇಳ್ಕೊಂಡು ಕವಿಗೋಷ್ಟಿ ನಡೀತಿದ್ದೆಡೆ ಒಳಗೆ ಬರುವಷ್ಟರಲ್ಲಿ ಮೂರುಮುಕ್ಕಾಲು.

ಗೋಷ್ಠಿಯ ಕೊನೆಯ ಕವಿಯ ಕವಿತೆ ಮಾತ್ರ ಬಾಕಿಯಿತ್ತು.

ನೆತ್ತಿ ತಣ್ಣಗಾಗಿ ಅಲ್ಲಿ ‌ಕೂತ್ಕೋಬೇಕು ಅನುವಷ್ಟರಲ್ಲಿ ಅರಸೀಕೆರೆ ಕೊಟ್ರೇಶ್ ಓಡಿಬಂದು ನಂದಿನಿ ಅಂದರು.

ಅಷ್ಟರಲ್ಲಿ ಆಗಲೇ ಒಂದೂವರೆ ತಾಸಿನ ಮೇಲಾಗಿತ್ತು ನಡೆಯಲು ಆರಂಭಿಸಿ.

ದೇವರೇ…ಯಾರೋ ಪರಿಚಿತ ಜೀವ ಸಿಕ್ಕಿತು !!

ಕಳೆದುಹೋದಾಗ ಗುರ್ತಿನವರು ಸಿಕ್ಕಿದ್ರೆ ಆಗುವ‌ ಖುಷಿಯನ್ನು ಇಂತಹ ಸಂದರ್ಭಗಳಲ್ಲೇ ಅರಿಯಬೇಕು.

ವಾರಿಗೆಯ ಕವಿಮಿತ್ರರಿದ್ಕಡೆಗೆ ಹೋಗಿ‌ಕೂತೆ.

ಮಾತು‌..ನಗು..ಫೋಟೊ ..ಸೆಲ್ಫಿ…

ತುಸು ಸಮಾಧಾನ…

ಅಂತೂ ಕವಿಗೋಷ್ಟಿ ಮುಗಿದು ನಂತರ ಲಕ್ಷ್ಮಣ್ ‌ಮತ್ತು ಸುನಂದಾ ಮ್ಯಾಡಮ್ ಗೋಷ್ಠಿ ಮುಗಿವಷ್ಟರಲ್ಲಿ ನಾಲ್ಕೂವರೆ ಕಾಣುತ್ತೆ.ಅವರಿವರನ್ನು ಮಾತಾಡಿಸ್ತಾ ಜಾಗ ಬದಲಾದ ಕಾರಣ ನನ್ನಂತೆ ಹುಬ್ಳಿಲಿ ವಸತಿ ಕೊಟ್ಟಿದ್ದ ಸ್ನೇಹಿತರು ಎಲ್ಲೊ ತಪ್ಸ್ಕೊಬಿಟ್ಟಿದ್ರು.

ಎಲ್ಲಿದ್ದಿರಾ ಎನಲಿಕ್ಕೆ ನೆಟ್ವರ್ಕ್ ಸತ್ತು ಮಲಗಿದೆ.

ಹರೀಶ ಕೇರ ಸರ್ ಜೊತೆಗೆ ವೇದಿಕೆ ಎರಡರಿಂದಾಚೆಗೆ ಹೊರಟಾಗ ಬಿಸಿಲು ಮನೆಗೆ ಹೊರಡುತ್ತಿತ್ತು.

ಸರಿ ಈಗ ಹುಬ್ಳಿ ತಲುಪ್ಕೊಳಾಣ ಇನ್ನು ಅನ್ಸಿ ಅಲ್ಲಿದ್ದ ಅರ್ಗನೈಸರ್ ಹತ್ರ

‘ಸರ್ ನಮಸ್ತೆ..ನಾನು ಪೊಯೆಟ್ಟು.(ನಾನು ಗಿರ್ಮಿಟ್ಟು ಅಂತ ಹೇಳ್ತಿದ್ದಿನಾ ಅಂತ ಕಣಫ್ಯೂಸಾಗ್ತಿತ್ತು ನಂಗೆ) ಸಕಲೇಶಪುರ ದಿಂದ ಬಂದೀನಿ, ಹುಬ್ಳಿಲಿ ವಸತಿ ಕೊಟ್ಟಿದ್ದಾರೆ.

ಅಲ್ಲಿಗೆ ಹೋಗುವ ನಿಮ್ಮ ವಾಹನಗಳು ಎಲ್ಲಿವೆ ‘

ಅಂತ ಕೇಳ್ದೆ.

ಮುಖಮೂತಿ ಮುಲಾಜು ಮಾಡ್ದೆ ಅಲ್ಲಿದ್ದ ಠಾಕುಠೀಕು ಆಯೋಜಕನೊಬ್ಬ…

‘ನೋ ನೋನೋಓ.. ಹುಬ್ಲಿಂದ ಕರಕೊಬರಕ ಅಷ್ಟೇರಿ ನಮಗ ಪ್ರೊಟೊಕಾಲ್ ಇರಾದು.ಹೋಗಾದೇನಿದ್ರೂ ನಿಮ್ಮ ರಿಸ್ಕರಿ’

ಅಂದೇ ಬಿಟ್ಟ.

ಭಗವಂತಾ…ಈ ಜನಪ್ರವಾಹ ದಾಟಿಕೊಂಡು ನಾನು ನನ್ ರಿಸ್ಕಲಿ ಹೆಂಗಪ್ಪಾ ಹೋಗಲಿ ಅಂತ ಚಿಂತಿ ಮಾಡ್ತಾ ಕೇರ ಸರ್ ಜೊತೆಗೆ ಮೀಡಿಯಾ ಹೌಸ್ ಕಡೆಗೆ ಹೆಜ್ಜೆ ಹಾಕ್ದೆ.ಅಲ್ಲಿ ವಿನಾಯಕಭಟ್ರಿದ್ರೆ ಅವರಿಗೂ ಹುಬ್ಳಿಲೇ ವ್ಯವಸ್ಥೆ ಆಗಿದ್ರಿಂದ ಜೊತೆಗೆ ಹೋಗ್ಬೊದು ಅಂತೊಂದು ನಿರೀಕ್ಷೆ..

ಕಾಲಿಗೆ ಸೋಲು.ದೇಹಕ್ಕೆ ದಣಿವು.

ಗಂಟಲು ಒಣಗಿ ಬ್ಯಾಗಿನಲ್ಲಿ ನೀರು ಸಿಗದೆ ಏನಾದರೂ ಕುಡಲಿಕ್ಕೆ ಸಿಕ್ಕಿದ್ರೆ ಅನಿಸ್ಲಿಕ್ ಶುರುವಾತು.ಕೇರ ಸರ್ ಜೊತೆಗೆ ಮೀಡಿಯಾ ಹೌಸ್ ಒಳಹೋಗಿ ವಿನಾಯಕಭಟ್ರು ಸಿಗಲಿ ಅಂತ ಮುಕ್ಕೋಟಿ ದೇವರಿಗೆ ಮುಗಿದು ಸುತ್ತೂ ನೋಡಿದೆ.

ದೇವರು ಯಾಕೋ ಅವತ್ತು ನನ್ ಪಾಲಿಗಿರಲಿಲ್ಲ.

ಎತ್ತ ನೋಡಿದರೂ ಅಪರಿಚಿತರೇ.

ಬುಕ್ ಬ್ರಹ್ಮದ ಹುಡುಗ ಹುಡುಗಿಯರು ಬಂದು ಪ್ರೀತಿಯಿಂದ ಮಾತಾಡಿಸಿದರಾದರೂ ಒಳಗೊಂದು ಆತಂಕ ತುಳುಕುತ್ತಿದ್ದಾಗ ಯಾವುದೂ ಬೇಡವಾಗ್ತದೆ.

ಕೇರ ಸರ್ ಜೊತೆಯಿಂದಾಗಿ ಒಂದು ಕಾಫಿ ಸಿಕ್ಕಿ ಮನಸ್ಸು ತುಸು ನಿರಾಳ.

ಮತ್ತೆ ಆಚೆ ಹೋಗಿ ಅಲ್ಲಿದ್ದ ಆರ್ಗನೈಸರ್ ಗೆ

‘ಸರ್ ನಮಸ್ತೆ…ನಾನು ಗಿರ್ಮಿಟ್ಟು..ಸಕಲೇಶಪುರದಿಂದ ಬಂದೀನಿ’ ಅಂತ ಈಗಷ್ಟೇ ಪ್ಲೇ ಆದ ಆಡಿಯೋವನ್ನೆ ಮತ್ತೆ ಪ್ಲೇ ಮಾಡ್ದೆ.

‘ನೋಡಿ..ಒಂದ್ಕೆಲ್ಸ ಮಾಡಿ…ನಾಯಕ್ ಅಂತ ಒಬ್ರ ನಂಬ್ರು ಕೊಡ್ತಿನಿ.ಅವರಿಗೆ ಫೋನ್ ಮಾಡಿ..ವ್ಯವಸ್ಥೆ ಮಾಡಿದ್ರೂ ಮಾಡಬಹುದು’ಅಂದರು.

‘ಎಂತದ್ರಿ…ಯಾವ ಫೋನಲ್ಲಿ ಮಾಡ್ಲಿ ಹೇಳಿ.ನೆಟ್ವರ್ಕ್

ಇದೆಯಾ ನಿಮಗೆ’

ಅಂದೆ.

ಅಷ್ಟರಲ್ಲಾಗಲೇ ಆರು ಕಳೆದು ಐದು ನಿಮಿಷ.

‘ಓ ಹೌದಲಾ…ನಾನು ಶ್ರಿನಾಥ ಅಂತ..ನನ್‌ ನಂಬ್ರ ಇಟ್ಕೊಳಿ.

ಆದರೂ ನಮ್ ಕಡಿಗೆ ಪ್ರೋಟೊಕಾಲು ಬರೀ ಕರಿಸ್ಕಳಕ ಅಷ್ಟೇ ರಿ..ಒಂದು ಮಾತು ಹೇಳ್ತಿನಿ..ಬೆಳಕಿರುವಾಗಲೇ ಯಾವ್ದಾನಾ ಬಸ್ ಹಿಡಿದು ಹಾವೇರಿ ತಲುಪಿ ಹುಬ್ಳಿಗೋಗ್ರಿ.ಒಬ್ರೇ ಬೇರೆ ಇದೀನಿ ಅಂತೀರಾ.ಯದಕ್ಕೂ ನನ್ ನಂಬ್ರ ಇಟ್ಕೊಳ್ರಿ”

‘ಅಯ್ಯೋ ಶಿವನೆ…ನಿನ್ನ ನಂಬ್ರ ಇಟ್ಕಂಡು ಎಂತದ ಮಾಡ್ಲಪ್ಪಾ ..ನಿನ್ನ ಮೂತಿಗಿಷ್ಟು’

ಹೃದಯ ಕೊತಕೊತ.

ಬರೀ ಮನಸಿನ್ಯಾಗ ಆಡಿದ ಮಾತು ಮೇಲಿನವು.

ಅಷ್ಟರಲ್ಲಿ ಸಾಕ್ಷತ್ತು ದೇವರೇ ಆ ಹಾದಿಲಿ ದಾಟ್ಕೊಂತ ಬಂದಬಿಡೋದೆ?

.’ಯೇ ಎಲ್ಲೋದೊ…’ ದೇವರು ಮಾತಾಡ್ತು!

‘ಸರ್ರಾ..ನೋಡಿ ಇವರು ಹೀಗ್ಹೀಗೆ.ಇವರ್ನಾ ಹುಬ್ಳಿಗೆ ತಲುಪಿಸೊ ವ್ಯವಸ್ಥೆ ಮಾಡ್ತಿದ್ದೀನಿ ‘ಅಂತು ಶ್ರೀನಾಥ.

‘ಎಲಾ ಇವನಾ..

ಈಗಷ್ಟೇ ಈ ಕಡಲನ್ನು ನಡಕೊಂಡು ದಾಟಿ ಅಲ್ಲೆಲ್ಲೋ ಎರಡು ಕಿಮಿ ಆಚೆ ಇರೊ ಜಂಕ್ಷನ್ ಹತ್ರ ನಿತ್ಗಳಿ .ಬಸ್ ಗೆ ಹತ್ಗಳಿ’

ಅಂದಿದ್ದ ಶ್ರೀನಾಥು ಬಾಯಿ ದೇವರ ಹತ್ರ ಸುಳ್ಳು ಹೇಳ್ತಿದೆ.

‘ನಮಸ್ತೆ..’ ಅಂದೆ ನಾನು ಗಂಭೀರವಾಗಿ ದೇವರ ಕಡೆಗೆ ತಿರುಗಿ.. ಅದು ಒಮ್ಮೆ ನನ್ ಕಡೆಗೆ ನೋಡಿದ್ದು ಮತ್ತೊನ್ಸಾರಿ ನೋಡಿ ನಮಸ್ಕಾರ ಅಂತ ಅವಸರಿಸಿತು.

‘ನೀವು ಬಾಳ್ಳುಪೇಟೆಗೆ ಕ್ಯಾನವಾಸಿಗೆ ಬಂದಾಗ ನನ್ ಆತ್ಮೀಯರು ನಿಮ್ಮ ಜೊತೆಗೆ ನಿಂತ್ರು.ಎಡೆಹಳ್ಳಿ ಮಂಜುಂತಾ..’

ಓಒಓಓ..ನೀವು…ಎಸ್ಎಸ್..ಗೊತ್ತಾಯ್ತು.. ನಿಮ್ಮ ಜೊತಿಗ್ ಮಾತಾಡಿದ್ದೆ ಕಾಣುತ್ತೆ ‘

ದೇಬರ ನೆನಪಿನ ಶಕ್ತಿ ಓಕೆನೆ.

ದೇವರು ಅವಸರಿಸಿ ಹೊರಟಾಗ ಪಕ್ಕದಲ್ಲಿದ್ದ ಶ್ರೀನಾಥ ಮತ್ತೆ ತನ್ನ ನಂಬ್ರ ಕೊಟ್ಟು

‘ನೀವು ಹೊರಡ್ರಿ ಮೇಡಮ್’

ಅಂತು.

ಮತ್ತೇ ಈಗ್ತಾನೆ ವ್ಯವಸ್ಥೆ ಅಂದೆಯಲ್ಲಪ್ಪಾ‌ ಅನ್ನೋಣಾ ಅನಿಸಿದ್ರೂ ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲವೆನಿಸಿ ಹೇಗೋ ನಡೆದು ಮುಖ್ಯ ರಸ್ತೆ ಮುಖ ನೋಡೋಣಾ ಅಂತ ಸಾಧ್ಯವಿದ್ದಷ್ಟು ಉದ್ದ ಹೆಜ್ಜೆ ಹಾಕ್ದೆ..ಕತ್ತಲು‌ಕಣ್ ಬಿಡ್ತಿತ್ತು..

ಮುಂದಕ್ಕೆ ವೇದಿಕೆಗಳಲ್ಲಿ ಸಾಂಸ್ಕೃತಿಕ ‌ಕಾರ್ಯಕ್ರಮ.

ಮಾಮೂಲು ಕಡಲಿನಂತಿದ್ದ ಜನಸಾಗರ ಏಳರ ಸುಮಾರಿಗೆ ಸುನಾಮಿಯ ಬಿರುಸಿನಲ್ಲಿ ಒಳನುಗ್ಗಹತ್ತಿದರು.

ಬೇಗ ಬೇಗ ಹೊರ ಹೋಗುವುದಕ್ಕೆ ನಾನು ಹಾಕ್ತಿದ್ದ ಉದ್ದ ಹೆಜ್ಜೆ ಆ ಸುನಾಮಿಯ ಎದಿರು ಕೆಲಸ ಮಾಡಲಿಲ್ಲ.ಹೇಗೋ ದಾಟಿ ಡಾಂಬರ್ ರಸ್ತೆ ಮುಟ್ಟಿದೆ..

ಅಲ್ಲಿದ್ದ ಪೋಲೀಸಪ್ಪನ ಹತ್ರ

‘ಅಣಾ…ಹುಬ್ಳಿ‌ಕಡೆಗೆ ಹೋಗಬೇಕಾಂದ್ರೆ ಎಲ್ಗೊಗಬೇಕು’ ಅಂದೆ.

ಸ್ವರ ಅದಾಗಲೇ ಅಸಹಾಯಕವಾಗಿದೆ!.

‘ಹಿಂಗೇ ಎಡಕ್ ಹೋಗಿ..ಹಾವೇರಿ ಬಸ್ ಸಿಗ್ತಾವ್ರಿ’

ಸರಿ..ಹೇಗಾದರೂ ಆಗಲಿ.ಹುಬ್ಳಿ ಒಂದು ತಲುಪಿದ್ರೆ ನಾಳೆ ಎಫಬಿಲಿ ಹೀಗೆಲ್ಲಾ ಇವರು ಮಾಡಿದ್ರೂ ನಾನು ಸೇಫಾಗಿ ತಲುಪಿದೆ ಅಂತ ಬರೆಯಬಹುದು ಅದಕ್ಕೆ ಅಫೊಸಿಟ್ಟಿನವರಿಂದ ಸಿಗುವ ಲೈಕು ಕಮೆಂಟುಗಳ ಪುಳಕ ಮನಸ್ಸು ವ್ಯಾಪಿಸಿ ಎಡಕ್ಕೆ ನಡೆಯಹತ್ತಿದೆ.

ಎಂಟ್ನೂರು ಮೀಟ್ರು ನಡೆದಿರಬಹುದೇನೋ..

ಯಾಕೋ ಡೌಟಾಗಿ ಮತ್ತೆ ನಿಂತು ಅಲ್ಯಾರೋ‌ ಜವಬ್ದಾರಸ್ಥನ ಥರ ಕಂಡವರನ್ನು ‘ಅಣಾ..ಹುಬ್ಳಿಗೋಗಬೇಕು..ಎತ್ಲಾಗಿ ಹೋಗ್ಲಿ’ಅಂದೆ.

ಅಷ್ಟರಲ್ಲಿ ಕೊರಳ ಸೆರೆ ಉಬ್ಬಿತ್ತು.

ಸುತ್ತಮುತ್ತ ಮೇಲೆ ಕೆಳಗೆ ಎಡಕ್ಕೆ ಬಲಕ್ಕೆ ಜನವೋ ಜನ ಜನವೋ ಜನ!!

ಒಂದೇ ಒಂದೂ ಪರಿಚಿತ ಕಣ್ಣಿಲ್ಲ.

‘ಅಯ್ಯ್ ..ಇತ್ಲಾಗ್ ಅಲ್ಲ ಕಣವ್ವಾ..ಓ ಅಲ್ಲಿ ಕಾಣ್ತದಲ.ಜಂಕ್ಷನ್ನು.ಅಲ್ಲಿಗೋಗಿ.ಅಲ್ಲಿ ಹುಬ್ಳಿ ಕಡೆಗೋಗ ಎಲ್ಲಾ ಬಸ್ಸೂ ನಿಲ್ಸಾತಾವೆ’

ಓ…ಅಲ್ಲಿ..ಅಂದರೆ…ಓಓಓಓಓಓಓಓಒಓಓಓಓಓಓಓಓಒ…..ಅಲ್ಲಿ…

ದೇವರೆ.

ಹೇಗೆ ತಲುಪಲಿ ಅಲ್ಲಿವರೆಗೆ?

ಆದದ್ದಾಗಲಿ.

ನಡೆಯೋದೇ ಸೈಯಿ.

‘ಗ್ಯಾರಂಟಿ ನಿಲ್ಸತಾವಾ ಅಣಾ”

ಅಷ್ಟರಲ್ಲಿ ನಂಬಿಕೆಯನ್ನು ನಂಬಬಾರದು ಅಂತೊಂದು ಸತ್ಯ ಗೊತ್ತಾಗಿತ್ತು.

‘ಹೂಕಣವ್ವಾ.ಹೋಗಿ ನೀವು.’

ಮತ್ತೆ ವಿರುದ್ಧ ದಿಕ್ಕಿಗೆ ತಿರುಗಿ ನಡೆಯಹತ್ತಿದೆ.

ಮುಖದ ಅರ್ಧಭಾಗವನ್ನು ಮಾಸ್ಕು ವ್ಯಾಪಿಸಿತ್ತು.

ಹೆಜ್ಜೆ ದೊಡ್ಡದು ಮಾಡಲಾಗ್ತಿಲ್ಲ.

ವೇಗ ಸಿಕ್ತಿಲ್ಲ.

ಹರಿದು ಬರ್ತಿದ್ದ ಮಹಾ ಜನಪ್ರವಾಹದ ವಿರುದ್ಧ ದಿಕ್ಕಿಗೆ ನಾನು ನಡೀತಿರುವುದು.

ಹತ್ತು ಟ್ರ್ಯಾಕ್ಟರ್ ಗಳ ಊಊಊಊಊಉದ್ದ ಸಾಲು ಇಡೀ ರಸ್ತೆಯ ಅಷ್ಟು ದೂರಕ್ಕೂ ವ್ಯಾಪಿಸಿದೆ. ಅದರ ಭರ್ತಿ ಭರ್ತಿ ಜನ.

ಸಮ್ಮೇಳನದಲ್ಲಿ ಚಿನ್ನದ ಕಾಸು ಚೆಲ್ತಿದೆ.

ಈಗಲೇ ಓಡಿ ಹುಡುಕದಿದ್ರೆ ನಮ್ ಪಾಲಿಗೆ ಅದು ದಕ್ಕೋದು ಕನ್ಸು ಎನ್ನುವಂತಿತ್ತು ಅಲ್ಲಿ ನಡೆಯುತ್ತಿರುವವರ ಆವೇಶ.

ಅದಾಗಲೇ ನನಗೆ ಕಣ್ಣೀರು ಧಾರಕಾರ ಹರಿದು ಗುರುಗಳ ನೆನಪಾಗಿ ಇಲ್ಲೀವರೆಗೂ ಬಾಳಿದ ಸೊಫೆಸ್ಟಿಕೆಟೆಡ್ ಬದುಕು ನೆನಪಾಗಿ,ಮಗನ ಹುದ್ದೆ ,ಸಮಾಜದಲ್ಲಿ ಹೆಸ್ರು ,ಅವನು…ಮತ್ತಿನ್ನೇನೊನೋನೋ… ಎಲ್ಲವೂ ಮೇಲಿಂದಮೇಲೆ ನೆನಪಾಗಿ…

ಆ ಕ್ಷಣ..

ನಾನು ಪೊಯಟ್ಟು ಎನ್ನುವ ಪಟ್ಟವನ್ನು ಇಳುಕುವ ನೆಲೆಗಾಗಿ ಹುಡುಕಿದ್ನೇನೊ.

ಎಷ್ಟೋ ಹೊತ್ತು ನಡೆದ ಮೇಲೆ ಅಲ್ಲೇಲ್ಲೋ ಖಾಲಿ ಕಮರಿ ಥರದ್ದನ್ನ ದಾಟಿ ಆಚೆಕಡಿಗೆ ಕಾಣುವ ಜಂಕ್ಷನ್ ಬಳಿಗೆ ಹೋಗಲಿಕ್ಕೆ ಜನ ಓಡ್ತಿದ್ರು.ನಾನೂ ಹುಚ್ಚಿಯಂತೆ ಅವರೊಂದಿಗೆ ಓಡಿದವಳು ಅಲ್ಲಿ ‘ಆಟೋ ಬಾಡ್ಗೆ ಕಾರ್ ಬಾಡ್ಗೆ ಇವತ್ತು ಶಿಕ್ರ ಮುಟೈತೆ ಕಣಪ್ಫೋ’

ಅಂತಿದ್ದ ಅಜ್ಕಿ ಹತ್ತಿರ ನಿಂತು ‘ಅಮ್ಮ..ಹುಬ್ಳಿಗೋಗಬೇಕು.ಅಲ್ಲಿ ಬಸ್ ನಿಲ್ಸತಾವಾ…’

ಲಿಟರಲಿ ಅಳ್ತಿದ್ದೆ!!

ಅಜ್ಜಿಗೂ ಊರು ತಲುಪುವ ಅವಸರ.

ಬಸ್ಸಿಲ್ಲ..

‘ಏನ ಮೊಗ’ ಅಂತ ತಂಬಾಕು ಸೀಟಿದ್ದ ತನ್ನೆರಡೂ ಕೈಗಳಿಂದ ನನ್ನ ಕೈಗಳನ್ನು ಬೆಚ್ಚಗೆ ಹಿಡಿಯಿತು. ಬಿಕ್ಕಳಿಸಿದೆ.

ಆ ಕತ್ತಲಲ್ಲಿ ಕಾಣಲಿಲ್ಲ.

ಅಜ್ಜಿ ಉತ್ತರ ಹೇಳೊದೊಂದನ್ನು ಬಿಟ್ಟು ಅದ್ರ ಉಸಾಬರಿ ಮಾಡ್ತಲೆ ಕೈ ಹಿಡಿದಿತ್ತು.

ನನ್ನ ಕಣ್ಣೀರು ಮತ್ತೂ ರಭಸವಾದವು.

ಮೆಲ್ಲಗೆ ಕೈಬಿಡಿಸ್ಕೊಂಡು ಅಲ್ಲಿದ್ದ ಆ ಕಮರಿಗೆ ನೆಗೆದು ಜಂಕ್ಷನ್ ಕಡೆಗೆ ಓಡತೊಡಗಿದೆ.

ಆ ಬದಿಯಲ್ಲಿ ಹತ್ಬೇಕು.ಕಾಲು ಈಗಾಗಲೇ ತ್ರಾಣ ಕಳೆದುಕೊಂಡಿತ್ತಾದರೂ ಅಪತ್ಕಾಲದ ಹಾರ್ಮೋನು ಛಿಲ್ಲಛಿಲ್ಲನೆ ಚಿಮ್ಮಿ ದೇಹಕ್ಕೆ ತ್ರಾಣದ ಜೊತೆಗೆ ಮನಸ್ಸಿಗೆ ಮಂತ್ರವೊಂದನ್ನು ಭೋದಿಸಲು ಶುರು ಮಾಡಿದ್ದು ಗಮನಕ್ಕೆ ಬಂತು.

‘ಇದೂ ಒಂದು ಅನುಭವ.ಜಸ್ಟ್ ಗೋ..ಜಸ್ಟ್ ಗೋಓಒ’

ಅಲ್ಲಿ ಕಮರಿ ಹತ್ತಿ ಜಂಕ್ಷನ್ ಬಳಿ ಬಂದು ಹುಬ್ಳಿ ಬಸ್ ಯಾವ್ದು ಅಂದೆ ಪೋಲಿಸಪ್ಪನ ಹತ್ರ..

ಎಲ್ಲಾವೂ ಹುಬ್ಳಿಗೆ ಮೇಡಮ್ ಅಂದ್ರು.

ದೇವರೇ..

ಅಲ್ಲಿಗೆ ಬರುವ ಪ್ರತಿ ಬಸ್ಸಿನೊಳಕ್ಕೂ ಜನ ಆವೇಶ ಹಿಡಿದವರಂತೆ ನುಗ್ತಿದ್ದಾರೆ.

ಡೋರಿಂದ ಆಚೆಗೆ, ಕಿಟಿಕಿ ಹಿಡಿದು ಬ್ಯಾಲೆನ್ಸ್ ಮಾಡ್ತಾ ,ಹಿಂದಗಡೆ ಏಣಿ‌ಮೇಲೆ,ಮುಂದುಗಡೆಯ‌ ಸಣ್ಣ ರಾಡಿನ ಮೇಲೆ…ಬಸ್ಸು ಮಗುಚಿಕೊಳ್ದೆ ಓಡ್ತಿರುವುದೇ ದೊಡ್ಡ ಅಚ್ಚರಿಯಾಗಿ ಕಂಡು ಇದರಲ್ಲಿ ಹತ್ತಿದರೆ ಬದುಕುಳಿಯುವುದು ಅಸಾಧ್ಯವೆನಿಸಿತು.

ಇದು ಬೇಡ.

ನೆಕ್ಸ್ಟು.ಅದು..

ಅದಕ್ಕಿಂತ್ಲೂ .ನೆಕ್ಸ್ಟು

ಅದು ಅದಕ್ಕಿಂತ್ಲೂ…

ಅಲ್ಲಿ ನನ್ನಂತ ಹುಲು ಮನುಷ್ಯೆ ಬಸ್ ಹತ್ತುವುದೂ ವಿಷ ಕುಡಿದೂ ಬದುಕುವುದು ಒಂದೇ ಎನಿಸಿ ನಿಸ್ಸಾಹಾಯಕಳಾಗಿ ಕುಳಿತೆ.

ಕಣ್ಣೀರು ಹೀಗೆ ಧಾರಕಾರ ಹರಿಯುವುದನ್ನು ಮಾಸ್ಕಿನ ಕಾರಣಕ್ಕೋ ಲೋಕದ ಗಮ್ಮತ್ತಿನ ಕಾರಣಕ್ಕೋ ಯಾರೂ ಗಮನಿಸಲಿಲ್ಲ.

ಇಲ್ಲಿನಿಂತು ಬಸ್ಸು ಹತ್ತುವ ಈ ವಿಚಾರ..

ಇದು ಸಾಧ್ಯವಾಗದ ವಿಷಯ ಅಂತ ಗಟ್ಟಿ ನಿರ್ಧಾರ ಮಾಡಿದ್ದೆ ಅಷ್ಟೊತ್ತಿಗಾಗಲೇ.

ಅಲ್ಲಿದ್ದ ಪೋಲಿಸರನ್ನು…’ಹೀಗ್ಹೀಗೆ..ನಾನು ಗಿರ್ಮಿಟ್ಟು… ಸಮ್ಮೇಳನದ ವೇದಿಕೆಗೆ ಹೋಗಬೇಕು.ಹೇಗೆ ಹತ್ತಿರದ ದಾರಿ ಹಿಡಿಲಿ’

ಅಂದೆ.

‘ಬನ್ನಿಮ್ಮ..ಯಾರ್ಯಾರು ಬಂದಿದೀರಾ ಅಂದರು’ ಅವರು.

ಲೋಕಕ್ಕೆ ಸಹನುಭೂತಿಯೂ ಇರ್ತದೆ ರೀ.

ಒಬ್ಳೆ ಅಂದೆ.

ಅಯ್ಯೋ…

ಬನ್ನಿ ಇಲ್ಲಿ.. ಎನ್ನುತ್ತಾ ಒಂದು ನೂರು ಮೀಟರ್ ನಂಜೊತೆಗೆ ನಡೆದು..ಓ ಅಲ್ಲಿ… ಅದೇ ಎರಡು ದೊಡ್ಡ ಲೈಟು ಕಾಣ್ತವಲ್ಲಾ ಅಲ್ಲಿಗೆ ಹೋಗಿ ಎನ್ನುತ್ತಾ ಅದೇ ಕಮರಿ ತೋರಿ ದಾಟಿ ಅಂದರು..

ಮೆಲ್ಲಗೆ “ನಾನು ಹುಬ್ಳಿಗೆ ಹೋಗಬೇಕಾದವ್ಳು”

ಅಂದೆ.

ಸಿಟ್ಟು ಬಂತು ಕಾಣುತ್ತೆ.

‘ಮತ್ ಸಮ್ಮೇಳನಕ್ಕೆ ‌ಹೋಗಬೇಕು ಅಂದರಲ್ರೀ ಎನ್ನುತ್ತಾ ಒಮ್ಮೆಗೆ ತಿರುಗಿ ಆ ಮಹಾ ಜಂಗುಳಿಯಲಿ ಕಾಣೆಯಾದರು.

ಲೋಕದ ಸಹಾನುಭೂತಿ ಘಳಿಗೆ ಮಾತ್ರದ್ದು.

‘ಮುಖ್ಯ ವೇದಿಕೆ ಹತ್ರ ಹೋಗಿ ಕೂರುವುದು. ರಾತ್ರಿ ಹತ್ತಾದರೂ ಆಗಲಿ.ಯಾರಾದರೂ ಬಂದು ಕರೆದೊಯ್ತಾರೆ.ಕರೆದೊಯ್ಯಲೇಬೇಕು’

ನಿರ್ಧರಿಸಿದ್ದೆ.

ಮತ್ತೆ ನಡೆಯಹತ್ತಿದೆ.

ಈಗಿನ ಜನಪ್ರವಾಹಕ್ಕೆ ಇನ್ನೂ ಆವೇಶ.

ಅಲ್ಲಿ ಯಾವುದೋ ಹಾಡಿನ ಮ್ಯೂಸಿಕ್ಕಿನ ಸದ್ದಿಗೆ ಅವರ ವೇಗ ಮುಮ್ಮಡಿ ನೂರ್ಮಡಿ.

ತೊಡರುತ್ತಾ ಹೆಜ್ಜೆ ಹಾಕಿದೆ.ಅಮ್ಮ ಅಪ್ಪ ನೆನಪಾದರು.ಮಕ್ಕಳು,ನನ್ನ ಕಾಫಿ ವೇದಿಕೆ ಎಲ್ಲವೂ ನೆನಪಾಯಿತು.ಅವನು ಪದೇಪದೇ ನೆನಪಾಗಹತ್ತಿದ.

ಅಂತೂ ಇಂತೂ

ಮುಕ್ಕಾಲು ತಾಸು ನಡೆದು ಮುಖ್ಯ ವೇದಿಕೆ ಬಳಿಗೆ ಬರುವಾಗ ಸಾಧಕರ ಸನ್ಮಾನದ ಕೊನೆಯ ಹಂತ.

ವೇದಿಕೆಯ ಬೆಳಕು ಕಂಡಾಗ ಮನಸ್ಸಿಗೆ ಏನೋ ಧೈರ್ಯ.ಒಂದು ಘಳಿಗೆ ಸುಧಾರಿಸಿದಂತೆ ಮಾಡಿ

ಮುಖ್ಯ ವೇದಿಕೆ ಬಳಿಗೆ ಹೊರಳಿ ಒಳನುಗ್ಗಿ ಅಲ್ಲಿ ಬಿಳಿ ಅಂಗಿ ಧರಿಸಿ ಪುಢಾರಿಗಳ ಥರ ಕಾಣ್ತಿದ್ದವರ ಬಳಿ ಹೋಗಿ

ಧ್ವನಿಗೆ ಸ್ವಲ್ಪ ಸಮಾಧಾನ ಬೆರೆಸಿ

‘ಸರ್..ನಾನು ಗಿರ್ಮಿಟ್ಟು….’

ಅಂತ ಅದೇ ಹಳೆ ಆಡಿಯೊ ರೀಪ್ಲೆ ಮಾಡಿ

‘ಹುಬ್ಳಿಲಿ ವ್ಯವಸ್ಥೆ ಮಾಡಿದ್ದಾರೆ.ಹೋಗೊದಕ್ಕೆ ವೆಹಿಕಲ್ ಇಲ್ಲ ಅಂತಿದ್ದಾರೆ.ಏನ್ ವ್ಯವಸ್ಥೆ ಸರ್ ಇದು.ಯಾಕೆ ಕರೆಸ್ಕೊಬೇಕು ಆಗಲ್ಲ ಅಂದಮೇಲೆ.’

ಧ್ವನಿ ಒರಟೂ ದುಃಖಭರಿತವೂ ಆಗ್ತಿದೆ.

‘ಏನ ಮ್ಯಾಡಮ್…ಓ ಅದಾ…ನೀವು ಒಂದ್ಕೆಲ್ಸ ಮಾಡಿ.ಇಲ್ಲಿಂದ ಸ್ರೈಟಾಗಿ ಹೋಗಿ‌ ಲೆಫ್ಟಿಗೆ ತಿರುಗಿ.ಅಲ್ಲೊಬ್ರು ನಿಂತಿರ್ತಾರೆ.ಅವರು ಖಂಡಿತವಾಗಿ ಹೆಲ್ಪ್ ಮಾಡ್ತಾರೆ ‘ಅಂದರು.

ಮೈ ಬೆಂಕಿಯಾಯ್ತು.

‘ರೀ…ಯಾವ ಸ್ಟೈಟು ಲೆಫ್ಟು ರೈಟು ನಾರ್ತು ಈಸ್ಟು ವೆಸ್ಟು ಬಿಲೊ ಎಬೋವ್ವು…ಎಲ್ಲಿಗೂ ಹೋಗಲ್ಲ ನಾನು..ನನ್ನನ್ನು ಹುಬ್ಳಿಗೆ ತಲುಪಿಸೊ ವ್ಯವಸ್ಥೆ ಮಾಡಿ ಅಷ್ಟೇ.’

ದುಃಖ ಅಡಗಿಸಿ ಒರಟನ್ನು ಮ್ಯಾನೇಜ್ ಮಾಡಲು ಸಫಲಳಾಗಿದ್ದೆ.

ಇದೊಳ್ಳೆ ಕಥೆಯಾಯ್ತಲ್ಲ ಅಂತ ಅವರಲ್ಲೊಬ್ಬ ಅಜಾನುಬಾಹು ಇನ್ನೊಬ್ಬನ್ನ ಪಕ್ಕಕ್ಕೆ ಕರೆದು ಏನೋ ಪಿಸುಗುಟ್ಟ.

ಅಷ್ಟರಲ್ಲಿ ಅಲ್ಲಿಗೆ ಠಾಕುಠೀಕು ಡ್ರೆಸ್ ಮಾಡಿಕೊಂಡಿದ್ದ ಒಬ್ಬ ವ್ಯಕ್ತಿ ಬಂದರು.

ಏನ್ರೀ ಅಂದರು.

ಹೀಗೆ ಹೀಗೆ. ‘ಇವರು ಪೊಯೆಟ್ಟು.. ಒಬ್ರೇ ಇದಾರೆ.ಹುಬ್ಳಿಗೆ ತಲುಪಿಸಬೇಕು’ ಅಂದರು ವಿನೀತರಾಗಿ.

‘ನಮಸ್ಕಾರ ಮಾಡ್ರಿ..ಏಸಿ‌ಸಾಹೆಬ್ರು’ ಅಂತ‌ ನನಗಂದರು.

ನಾನು ಸುಮ್ಮನೆ ನಿಂತಿದ್ದೆ.

ಸಾಹೇಬರು ನನ್ ಕಡೆಗೆ ತಿರುಗಿ ಮೇಲಿಂದಕೆಳಗೆ ನೋಡಿ..

‘ಯಾಕ್ರೀ…ನಮಗೆ ಹುಬ್ಳಿಂದ ಕರಕೊಂಡು ಬರ್ಲಿಕಷ್ಟೆ ಪ್ರೊಟೊಕಾಲ್ ಇರ್ತದೆ.ನೀವು ಬಸ್ ಹಿಡಿದು ಹೋಗಬೇಕು ಹೋಗುವಾಗ’

ಎಂದರು.

‘ಎಂತದ್ರಿ ನೀವು..ಯಾವ ಬಸ್ ಹಿಡಿಯೊದು,ಎಲ್ಲಿಂದ ಎಲ್ಲಿಗೆಂತ ನಡಿಯೋದು,ಬಸ್ ಹಿಡುದ್ರೂ ಅದರೊಳಗೆ ಹತ್ಲಿಕ್ ಅಗ್ತಾದೆ ಅನಕೊಂಡ್ರಾ.ಎಂತಕ್ರಿ ಕರಿಸ್ತಿರಾ ವ್ಯವಸ್ಥೆ ಮಾಡಲಿಕ್ಕೆ ಆಗಲ್ಲ ಅಂದರೆ’

ಸ್ವರ ಏರಿತ್ತು.

‘ಅಯಯು…ಸಾಹೇಬ್ರು.ಸಾಹೇಬ್ರು ಮೇಡಮ್’

ಶ್ವೇತವಸ್ತ್ರಧಾರಿಗಳು ಗಾಬರಿಬಿದ್ದರು.

‘ರೀ ಯಾರಾದರೂ ಆಗಲಿ.ಅವರು ಏಸಿ ಆದರೆ ನನ್ ಮಗ ಐಅರ್ ಎಸ್ ಆಫೀಸರ್.ಐಟಿ ಡಿಪಾರ್ಟ್ಮೆಂಟ್”

ಅಂದೆ ಕ್ರೋಧದಿಂದಲೂ ಹೆಮ್ಮೆಯಿಂದಲೂ.

‘ಹೌದಾ ಮೇಡಮ್.ಎಲ್ ಡ್ಯೂಟಿ ಮೆಡಮ್ ‘

ಅಂದರು.

ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ‌ ನಾನು.

ಅವರು ಸುಮ್ಮನಾದದ್ದು ನೋಡಿ..

‘ನೋಡ್ರಿ..ನಾಳೆ ಎಫಬಿಯಲ್ಲಿ ಬರೀತಿನಿ.

ಹುಬ್ಳಿ ಸಮಾವೇಶದ ಕಥೆ ಹೀಗ್ಹೀಗೆ‌ ಅಂತ’

ಅಂದೆ..

‘ಅಯಯೂಉ ಹಂಗ್ ಮಾಡಬೇಡಿ ಮೇಡಮ್,ಹಂಗ್ ಮಾಡಬೇಡಿ. ನಮ್ ಮರ್ಯಾದಿ ಹೋಗ್ತದೆ’

ಎನ್ನುತ್ತಾ ಬನ್ನಿ ಏನ್ ಮಾಡಬಹುದು ಅಂತ ನೋಡಾಣ ಎನ್ನುತ್ತಾ ವಿಐಪಿ ಎಂಟ್ರಿ ಇದ್ದ ಕಡೆಯಿಂದ ಹೊರಗೆ ಕರಕೊಂಡು ಹೋದ್ರು.

ಅವರವರಲ್ಲೇ ಏನೋ ಮಾತಾಡಿಕೊಂಡು ನನ್ ಕಡೆಗೆ ತಿರುಗಿ

‘ಬನ್ನಿ ಮೇಡಮ್… ಹಾವೇರಿವರೆಗೆ ಬಿಡ್ತಿನಿ. ಬಸ್ ಸಿಕ್ಕಬಹುದು’ಅಂದರು.

‘ರೀ.ಹಾವೇರಿವರೆಗೆ ಅಂದರೆ..ಹೇಗ್ರಿ.ನಾ ಹುಬ್ಳಿಗೆ ಹೊಗಬೇಕಿರೋದು’

ಸಿಟ್ಟು ಬ್ಯಾಡ ಮೇಡಮ್.. ಏನೂ ಆಗಲಿಲ್ಲ ಅಂದರೆ ನಮ್ಮನ್ಯಾಗೇ ಉಳಿಸ್ಕೊಂಡು ಕಳಿಸ್ತಿನಿ..ಕೂತ್ಕಳಿ ಈಗ ಅಂದರು.

ಕೂತೆ ಕಾರಿನ ಹಿಂದಿನ ಸೀಟಿನಲ್ಲಿ.

ಆ ಆಜಾನುಬಾಹುವೇ ಸ್ಟೇರಿಂಗ್ ಹಿಡಿದರು. ಇನ್ನೊಬ್ರು ಬರತಾರೇನೊ ಅಂದರೆ ಯಾರೂ ಬರಲಿಲ್ಲ.

ಯಾಕೋ ಕಾಲು ನಡುಗಿದವು.

‘ಯಾರೋ ಅಪರಿಚಿತನ ಜೊತೆಗೆ ಈ ಕತ್ತಲ ರಾತ್ರಿಯಲ್ಲಿ ಈ ಅಗಾಧ ಜನಪ್ರವಾಹದ ಸಿಕ್ಕಿನಲ್ಲಿ ಹೊರಟಿದ್ದೇನೆ.

ಇರಲಿ..ತಾಯಿ…ನಿನ್ನ ಮೇಲೆ ಭಾರ ಹಾಕಿದ್ದೀನಿ. ಹಾಲೋ ನೀರೋ..ನೀನೇ ನಿರ್ಧರಿಸು’ ಎಂದುಕೊಳ್ಳುವಾಗ ಕಾರು ಸಮಾವೇಶದ ಜನಪ್ರವಾಹ ತಪ್ಪಿಸಲು ಬದಿಯ ನಿರ್ಜನವಾದ ಒಳದಾರಿಯಲ್ಲಿ ಸಾಗುವಾಗ ಬಲಕ್ಕಿದ್ದ ಕಟ್ಟಡ ತೋರ್ಸಿ ಇದು ಡಿಸಿ ಆಫಿಸು ಮೇಡಮ್ ಅಂದರು.

ಉತ್ತರಿಸಲಿಲ್ಲ ನಾನು.

ಅಲ್ಲಿಂದ ಮುಂದಕ್ಕೆ ಒಂದೆರಡು ಕಿಮಿ ದಾಟುತ್ತಲೆ ದಾವಣಗೆರೆಯಲ್ಲಿದ್ದ ಬಂಧುವೊಬ್ಬರ ನಂಬರಿಗೆ ಫೋನ್ ಮಾಡಿ ಹೀಗ್ಹೀಗೆ ಅಂತ ಹೇಳ್ದೆ.ಅವರು ಗಾಬರಿ ಬೇಡ ಅನ್ನುತ್ತಾ ನನ್ ಕರ್ಕೊಬಂದವರ ನಂಬರ್ ಪಡೆದು ಅವರೊಂದಿಗೇ ನೇರ ಮಾತಾಡಿದ್ರು.

‘ಮೇಡಮ್ ಶಿಗ್ಗಾಂವ್ ತಲುಪುಸ್ತೀನಿ.ಅಲ್ಲಿಂದ ಹ್ಯಾಂಗಾರೂ ಹೋಗಬಹುದು’

“ಅಯ್ ನಿಮ್…

ಶಿಗ್ಗಾಂವ್ಗಿಗ್ಗಾಂವು ಎಲ್ಲಾ ನ್ಯೂಸಲ್ಲಿ ಕೇಳಿಯಷ್ಟೇ ಗೊತ್ತು ಸ್ವಾಮಿ.

ಹುಬ್ಳಿ ತಲುಪಿಸಬೇಕು ಅಷ್ಟೇ’

ಧ್ವನಿ ಖಾರವೂ ಧೃಡವೂ ಇದ್ದಿದ್ದು ಅರಿವಾಯ್ತು.

ನನ್ನ ಆತ್ಮವಿಶ್ವಾಸದ ಕುರಿತು ಸಣ್ಣಗೆ ಮೆಚ್ಚುಗೆ ಆಗಿ ದೇಶಾವರಿ ಮಾತಿಗೆಳೆದೆ ಅವರನ್ನು.

ನಾನು ಭಯಪಟ್ಟಿಲ್ಲ ಎನ್ನುವುದನ್ನು ತೋರಿಸಿಕೊಳ್ಳಬೇಕಿತ್ತು.

ಇನ್ನಷ್ಟು ಧೈರ್ಯ ಕ್ಕೆ ಮಗನಿಗೆ ಫೋನ್ ಮಾಡಿದೆ.ಗೊತ್ತಿದ್ದ ಎಡಿಟರ್ ಒಬ್ರಿಗೆ ಫೋನ್ ಮಾಡಿದೆ.

ಹೀಗೆ “ಬರ್ತಿದ್ದೀನಿ.ಒಬ್ರು ಸಹಾಯ ಮಾಡಿದ್ರು ‘

ಅಂದೆ.

ಸ್ತುತಿಗೆ ಮರುಳಾಗದ ಮನಸ್ಸು ಈ ಲೋಕದಲ್ಲಿ ಇನ್ನೂ ಜನ್ಮ ತಳೆದಿಲ್ಲ.

ಸ್ಟೇರಿಂಗ್ ಹಿಡಿದ ಆ ಜೀವ ಪ್ರಸನ್ನವಾಗಿ

‘ಬನ್ನಿ ಮೇಡಮ್.. ಏನಾರ ವ್ಯವಸ್ಥೆ ಆಗ್ತದೆ ‘ ಎನ್ನುತ್ತಾ ವೇಗ ಹೆಚ್ಚಿಸಿದ್ರು.

ಆ ಅದ್ಬುತ ರಸ್ತೆಯಲ್ಲಿ,ಕಗ್ಗತ್ತಲ ರಾತ್ರಿಯಲ್ಲಿ ಹೀಗೆ ಕಣ್ಣೀರು ಕ್ರೋಧ ಆವೇಶ ಆಕ್ರೋಶ ಅಸಹಾಯಕತೆ ಭಂಡದೈರ್ಯ ಇದ್ದ ಪೊಯೆಟ್ಟೊಂದು ಅಪರಿಚಿನ ಜೊತೆಗೆ ಕಾರಲ್ಲಿ ಪ್ರಯಣಿಸ್ತಿತ್ತು.

ಇರಿ ಇರಿ..ಒಂದೆ‌ಮಿನಿಟು..

ಕಾರ್ ಸೈಡಿಗೆ ಹಾಕಿ ಆ ಕಡೆ ಬರ್ತಿದ್ದ ಇನ್ನೊಂದು ಕಾರಿಗೆ ಕೈ ಅಡ್ಡ ತೋರಿ ಏನೋ ಕೇಳಿದ್ರು.

ಮತ್ತೆ ವಾಪಾಸು ಬಂದು..

‘ಇಲ್ಲ ಮೇಡಮ್.. ಕಾರ್ ಫುಲ್ ಆಗಿದೆ’

ಅಂದರೆ..

ಇನ್ನೊಂದು ಕಾರ್ ಹತ್ತಿಸ್ತಾರಾ ಇವರು..ಅಪರಿಚಿತನೇ ಆದರೂ ಈ ವ್ಯಕ್ತಿ ಸೇಫ್ ಅನಿಸ್ತಿದ್ದಾರೆ.

ಮತ್ಯಾವುದೋ ಕಾರು.

ಮತ್ತೆ ನಾಟಕ..

ದೇವರೆ…

‘ರೀ ಯಾರೋ ಸ್ಟ್ರೆಂಜರ್ ಜೊತೆಗೆ ಹೋಗಲಿಕ್ಕಾಗ್ತದಾ ನಾನು. ಯಾವುದೋ ಕಾರ್ ಹತ್ಸಿ ಕೈ ತೊಳ್ಯೊಕೆ ನೋಡ್ತಿದ್ದೀರಾ ‘

‘ನಾನೂ ಸ್ಟ್ರೇಂಜರ್ರೇ ಅಲ್ವಾ ಮೇಡಮ್. ನನ್ ಜೊತೆಗೆ ಬಂದೀರಾ’ಅಂದರು.

ತಣ್ಣಗಾದೆ.

ಉತ್ತರಕ್ಕಾಗಿ ತಡಕಾಡಿದೆ.

ಹೆಣ್ಮಕ್ಳಿಗೆ ತುರ್ತು ಪರಿಸ್ಥಿತಿಯ ನಿರ್ವಹಣೆ ಗಂಡಿಗಿಂತಲೂ ತುಸು ಹೆಚ್ಚೇ ಅಂತ ನನ್ ಮುಂದಿನ ಪ್ರಶ್ನೆಯಿಂದ ನನಗೇ ಗೊತ್ತಾಯ್ತು.

‘ಮನೆಯವರು ಏನ್ಮಾಡ್ತಾರೆ.ಮಕ್ಕಳು?’

(ಏನಾದರೂ ಮಾಡ್ಕೊಳ್ಳಿ.ನನಗೇನ್ ಬಂತು)

‘ಮನೆಯವರು ,ನಮ್ ಅವ್ವಾ ಎಲ್ರೂ ಅಲ್ಲೇ ಅದಾರೆ ಮೇಡಮ್.. ಅವ್ವ್ ಚಳಿ ತಡೀತಾಳೋ ಇಲ್ಲೋ ಗೊತ್ತಾಗ್ತಿಲ್ಲ’

ಆತನ ಧ್ವನಿ ಮೆತ್ತಗಾಗಿತ್ತು.

ಅಯ್ಯೋ…

‘ಇರಿ ಇರಿ ಇರಿ ಮೇಡಮ್’

ಮತ್ತೆ ಕಾರಿಳಿದು ಬರ್ತಿದ್ದ ಇನ್ನೊಂದು ಕಾರು ಅಡ್ಡ ಹಾಕಿ ಒಳಗೆ ಹಣುಕಿ‌ ಏನೋ ಮಾತಾಡಿ ನನ್ ಬಳಿ ಬಂದು

‘ಬನ್ನಿ ಮೇಡಮ್.. ಇವ್ರು ಹುಬ್ಳಿಗೇ ಹೋಗ್ತಾರು.ನೀವು ಸೇಫಾಗಿ ಹೋಗಬೋದು ‘

ಅಂದರು.

ಭಂಡ ಧೈರ್ಯ ಬಂದಮೇಲೆ ಇವರೋ ಅವರೋ ಮತ್ಯಾರೊ.. ಕಾರು ಹತ್ತಿದೆ.

ಅವರ ನಂಬರನ್ನು ಮತ್ತೆ ದಾವಣಗೆರೆಯ ಬಂಧುವಿಗೆ ತಿಳಿಸಿದೆ.

ಜೊತೆಗೆ ಬಿಟ್ಟು ಹೋಗಲು ಬಂದವರ ನಂಬರ್ನ್ನೂ ಮತ್ತೊಮ್ಮೆ ನೆನಪಿಸಿದೆ.

ಅವರಿಗೆ ಥ್ಯಾಂಕ್ಸ್ ಹೇಳಿ ಈ‌ ಕಾರು ಹತ್ತಲು ಹೋದಾಗ ಒಳಗಿದ್ದವ ‘ಮುಂದೇನೇ ಬರ್ರೀ’ ಅಂದರು.

‘ಇಲ್ಲ.ಹಿಂದೆಯೇ ಕಂಫರ್ಟ್ ಇದೆ’ ಎಂದೆ.

ಮತ್ತೆ ಫೋನುಗಳ ನಾಟಕದ ಪುನರಾವರ್ತನೆ ಆಯ್ತು.

ಹೊಸ ಕಾರು ಹತ್ತಿದವರ ಬಾಯಿ ತುಂಬಾ ಜರ್ದಾದ ರಸ..

ಆತ ಏನೇ ಮಾತಾಡುವಾಗಲೂ ಬ್ಲುಬ್ಳುಜ್ಳುಳ್ಬುಲಬ್ಲು ಅಂತೇನೋ ಕೇಳ್ತಿತ್ತು.

ಅವರು ಹೇಳಿದ ಪ್ರಕಾರ ಅವರು ಟೊಯೊಟಾ ಕಂಪೆನಿಯಲ್ಲಿ ಕೆಲ್ಸ ಮಾಡ್ತಾರೆ.

ರೂರಲ್ ಏರಿಯಾದಲ್ಲಿ ಟೊಯೋಟಾ ಕಾರುಗಳನ್ನು ಮಾರ್ಕೆಟಿಂಗ್ ಮಾಡುವುದು ಅವರ ಕೆಲ್ಸ.

ದಿನವೂ ಪ್ರಯಾಣ.ಸ್ವಲ್ಪ ಹೊತ್ತಿನ ಮಾತು ಮುಗಿದ ನಂತರ

‘ನಾ ಯಾವತ್ತೂ ಅನ್ನೋನ್ ಪರ್ಸನ್ಸನ ಕಾರ್ ಹತ್ಸಲ್ಲ ನೋಡಿ”

ಅಂದರು.

ಮರ್ಮಕ್ಕೆ ತಾಕುವ ಮಾತು ಅದು.

‘ನಿಜ.ನಿಮಗೆ ನನ್ನಿಂದ ತೊಂದರೆ ಆಯ್ತು ‘

ಎಂದೆ.

ಧೃಡವಾದ ಸ್ವರದಲ್ಲಿ.

‘ಛೇ ಛೇ.ಅದು ನಿಮಗೆ ಹೇಳಿದ್ದಲ್ಲ ಮೇಡಮ್.. ಅಯ್ಯೋ.ಬ್ಲುಬ್ಳುಜ್ಬಲುಬ್ಮಲುಬ್ಳು’

ಅಂತೇನೋ ಅಂದರು..

ಗಂಡು ಕುಲ ಬೈ ಡಿಫಾಲ್ಟ್ ಪೆದ್ದರದ್ದು.

ಏನಾದರೂ ದೇಶಾವರಿ ಮಾತಾಡ್ತಾ ಕಲೆ ಸಾಹಿತ್ಯ ದ ವಿಷಯ ಕೇಳ್ತಾ ದಾರಿನ ನೆಮ್ದಿಯಾಗಿ ಕಳಿಬಹುದಾದ ಆ ಮನ್ಷ…ಸುಮ್ನೇ ಒಂದ್ ಮಾತಿಂದಾಗಿ ತಪ್ಪು ಮಾಡಿದಂತೆ ಗೊಂದಲ ಪಡತೊಡಗಿತು.

ನಿಜವಾಗಿಯೂ ಅವರು ನನಗೆ ಸಹಾಯ ಮಾಡಿದ್ದಾರೆ.

ಅವರಿಗೆ ಈ ಕ್ಷಣ ಹುಟ್ಟಿರುವ ಅಪರಾಧಿಭಾವದಿಂದ ನಾನೇ ತಪ್ಪಿಸಬೇಕು ಎನ್ನುವ ನಿರ್ಧಾರ ಮಾಡಿದವಳಂತೆ ಮತ್ತದೆ ಹಳೆಯ ಟೆಕ್ನಿಕ್‌ ಉಪಯೋಗಿಸಿದೆ.

‘ಮನೆಯವರು ಏನ್ಮಾಡ್ತಾರೆ…ಮಕ್ಕಳು?’

ಏನೋ ಹೇಳಿದ್ರು.

ಮಗು ಚಿಕ್ಕದು ಅಂದರು.

ಹುಬ್ಳಿ ರಸ್ತೆ ಯ ಚಂದದ ಬಗ್ಗೆ ಹೊಗಳಿದೆ.

ಇಲ್ಲಿ ಮೊದಲೆರಡು ಸರ್ತಿ ಬಂದಿದೀನಿ.

ಬಾಗಲಕೋಟೆಗೆ ಅಂದೆ.

ಆತ ಸ್ವಲ್ಪ ರಿಲ್ಯಾಕ್ಸ್ ಆದ ಹಾಗೆ ಕಂಡರು.

ಏನು ಮೋಜು ನೋಡಿ.

ನಾನು ಈ ಅಪರಿಚಿತ ನ ಜೊತೆಗೆ ಅವರ ಕಾರಲ್ಲಿ ಕೂತಿರುವುದು.

ನಾನು ಅನ್ರೆಸ್ಟ್ ಆಗಬೇಕಿರುವುದು.

ನನಗೆ ಭಯ ಗೊಂದಲ ಆತಂಕ ದ್ವಂದ್ವ ಇರಬೇಕಾಗಿರುವುದು.

ಇಲ್ಲಿ ಉಲ್ಟಾ..

ನಿಜ .

ಸ್ತ್ರೀವಾದವನ್ನು ಹೊಸದಾಗಿ ವ್ಯಾಖ್ಯಾನಿಸಬೇಕಿದೆ.

ಹತ್ತು ನಿಮಿಷಗಳ ಮೌನ ಇತ್ತು ನಮ್ ನಡುವೆ..

ಕಾರಣ ನಂಗೆ ಕಣ್ಣು ಎಳಿತಿತ್ತು ಅಷ್ಟೇ..

ಒಮ್ಮೆಗೆ ಆತ..’ಸುರೇಶ್ ಹುಬ್ಲಿಕರ್ ನನಗೆ ರಿಲೇಟಿವ್’ ಅಂದರು.

ಮಾತು ಮುಂದುವರಿಸಲು ಸಂಗತಿ ಹುಡುಕುತ್ತಿದ್ರು ಕಾಣ್ತದೆ.

ನಗು ಬಂತು.

‘ಓಹ್ ಹೌದಾ..ನನಗೂ ಸುರೇಶ್ ಹುಬ್ಲಿಕರ್ ಈಗೈದು ವರ್ಷದ ಹಿಂದೆ ಬಹಳ ಆತ್ಮೀಯರಿದ್ರು.ಇನ್ಫ್ಯಾಕ್ಟ್ ನನ್ ಮೊದಲ ‌ಕವಿತಾಸಂಕಲನಕ್ಕೆ ಒಂದೆರಡು ಸಾಲು ಬರೆದುಕೊಡಿ ಅಂತ ಕೂಡ ಕೇಳಿದ್ದೆ.ಅವರು ಕವಿತೆ ನಂಗರ್ಥವಾಗಲ್ಲಮ್ಮ..ಶುಭವಾಗಲಿ ಅಂದಿದ್ರು’

ಅಂದೆ.ಅವರು ಇನ್ನೂ ನಿರಾಳವಾದರು.

ಇನ್ನೇನು ಹುಬ್ಳಿ ತಲುಪುವಾಗ ನನಗೆ ನಿಗದಿಯಾಗಿದ್ದ ಪಿಡಿಒ ಪಾರ್ವತಿ ಫೋನ್ ಮಾಡಿದ್ರು.

‘ಎಲ್ಲಿದ್ದೀರಾ ಮೇಡಮ್. ಚೆಕಿನ್ ಆಗೇ ಇಲ್ಲ ನೀವಿನ್ನೂ.ನಾ ನಿಮಗೋಸ್ಕರ ಕಾಯತಿದ್ದೀನಿ’ ಅಂದರು

‘ಬಂದೇ ಬಂದೆ.ಆಯ್ತು

ಇನ್ನೇನು ಐದೇ ನಿಮಿಷ..’

‘ರೇವಣಕರ ಅಂದ್ರಿ ಅಲ್ವಾ..ಇನ್ನೂ ಇಪ್ಪತ್ತು ನಿಮಿಷ ಬೇಕು’ ಅಂದ್ರು ಅವರು.

ಮತ್ತೂ ಹುಬ್ಳಿ ಸ್ಮಾರ್ಟ್ ಸಿಟಿ ಆಗ್ತಿರುವ ಕುರಿತು ನಾಲ್ಕು ಮಾತಾಡಿದ್ರು.

ಇನ್ನೇನು ಇಳಿಯಬೇಕು ಎನ್ನುವಾಗ

ಯಾವುದೋ ಫೋನ್ ಬಂತು.

”’ಇದು ನಂದಿನಿ ಹೆದ್ದುರ್ಗ ಅಲ್ವಾ..ಬ್ಲಾ…ಬ್ಲಾ…ಬ್ಲಾ….ಅಂದ ಹಾಗೆ ನೀವೇನ್ ಮಾಡ್ತೀರಾ ಮೇಡಮ್’

‘ಥ್ಯಾಂಕ್ಯೂ ಸೋಮಚ್.ನಿಮ್ ಪರಿಚಯ ಆಗಿದ್ದು ಖುಷಿಯಾಯ್ತು..ಬೇಸಿಕಲಿ ನಾನು ಗಿರ್ಮಿ…ಅಲ್ಲಲ್ಲಾ ಪೊಯೆಟ್ಟು…ಬ್ಲಾ ್ಲಾ ಬ್ಲಾ..ಬ್ಲಾ….’

ಅವರು ರೇವಣಕರದ ಮುಂದೆ ಕಾರು ನಿಲ್ಸಿ ನನ್ ಮಾತು ಮುಗಿಲಿಕ್ಕೆ ಕಾಯ್ದರು..

ಮಾತು ಮುಗಿಸಿದವಳು ಅವರಿಗೆ ಮನಃಪೂರ್ವಕವಾಗಿ ಥ್ಯಾಂಕ್ಸ್ ಹೇಳಿ ಇಳಿದೆ.

ಕಾರನ್ನು ಅಲ್ಲೇ ನಿಲ್ಲಿಸಿ ನಾನು ಒಳಹೋಗುವವರೆಗೂ ಕಾಯ್ದು ಸ್ಟ್ರಾಟ್ ಮಾಡಿದ್ರು.

‍ಲೇಖಕರು Admin

January 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗುರುಗಳಿಗೆ ಅಭಿನಂದನೆಗಳು

ಗುರುಗಳಿಗೆ ಅಭಿನಂದನೆಗಳು

ರಾಮನಗರ ಜಿಲ್ಲಾ ಕಾವ್ಯ ಯಾನ -ನಾಲ್ಕನೇ ಕವಿಗೋಷ್ಠಿಯ ಸರ್ವಾಧ್ಯಕ್ಷರಾಗಿ ವಿದ್ವಾಂಸರು, ಸಂಸ್ಕೃತಿ ಚಿಂತಕರೂ ಆದ ಡಾ.ಬೈರಮಂಗಲ ರಾಮೇಗೌಡ ಅವರನ್ನು...

ಶ್ರೀನಿವಾಸ ಪ್ರಭು ಅಂಕಣ: ಹೊಸ ಕನಸಿಗಾಗಿ ‘ಕನಸಿನ ಮನೆ’ ಮಾರಿದೆ..!

ಶ್ರೀನಿವಾಸ ಪ್ರಭು ಅಂಕಣ: ಹೊಸ ಕನಸಿಗಾಗಿ ‘ಕನಸಿನ ಮನೆ’ ಮಾರಿದೆ..!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

ಪ್ರಿಯ ಯುವಜನರೆ, ಏಳಿ.. ಎದ್ದೇಳಿ

ಪ್ರಿಯ ಯುವಜನರೆ, ಏಳಿ.. ಎದ್ದೇಳಿ

ಕಾರ್ಗಿಲ್‌ನ ಕದನವಾಣಿ ** ಸಿ ಯು ಬೆಳ್ಳಕ್ಕಿ ** ಕಾರ್ಗಿಲ್ ಯುದ್ಧ ಹಲವಾರು ಕಾರಣಗಳಿಂದ ವಿಶ್ವದ ಸಮರ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ....

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This