ಮುಷ್ಟಿ ಮರೆವು, ಬೊಗಸೆ ನೆನಪು!

ಚಂದ್ರಕಾಂತ ವಡ್ಡು

ಒಬ್ಬರ ಹೆಸರು ರವಿ ಹೆಗಡೆ, ಇನ್ನೊಬ್ಬರು ಜೋಗಿ. ಇವರು ಮೂರು ದಶಕಗಳ ಹಿಂದೆ ನನಗೆ ಪರಿಚಯವಾದಾಗ ರವಿ ಜಾದೂಗಾರ್ ಮತ್ತು ಎಚ್.ಗಿರೀಶ್ ರಾವ್ ಆಗಿದ್ದರು; ಇಬ್ಬರೂ ನನಗೆ ಅಸಮಾನಮನಸ್ಕ ಗೆಳೆಯರು! ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ ಅಂಗಡಿಯಲ್ಲಿ ನಾವು ಮೂವರೂ ಆಕಸ್ಮಿಕವಾಗಿ ಮುಖಾಮುಖಿಯಾದಾಗ ಸಿಹಿ-ಕಹಿ-ಖಾರಾ ನೆನಪುಗಳ ಥ್ರಿಬಲ್ ಇಂಜಿನ್ ಪಯಣ.

ನಮ್ಮ ನಡುವಿನ ಭೇಟಿಗೆ ಎಷ್ಟೋ ವರ್ಷಗಳ ಅಂತರ; ಮಾನಸಿಕವಾಗಿಯಂತೂ ಅಜಗಜಾಂತರ. ನನಗೆ ಬೆಚ್ಚಗಿನ ದಿರಿಸಿನ ಜೋಗಿಯನ್ನು ತಕ್ಷಣ ಗುರುತಿಸಲೂ ಸಾಧ್ಯವಾಗಲಿಲ್ಲ. ನಾನೀಗ ಸಮಾಜಮುಖಿ ಪತ್ರಿಕೆ ರೂಪಿಸುತ್ತಿರುವುದನ್ನೇ ರವಿ ಮರೆತಿದ್ದರು. ಸಮಾಜಮುಖಿಗೆ ಪ್ರಕಾಶ್ ರೈ ಸಂದರ್ಶನ ಮಾಡಿಕೊಟ್ಟಿದ್ದ ಜೋಗಿ, ಅವರ ಪಕ್ಕದಲ್ಲಿ ನಸುನಗುತ್ತ ನಿಂತಿದ್ದರು. ನಮಗೆಲ್ಲಾ ಮರೆವು ಆವರಿಸುವಷ್ಟು ವಯಸ್ಸಾಗಿರುವುದು ತುಸು ಆತಂಕ ಹುಟ್ಟಿಸಿದರೂ ಸಮಕಾಲೀನರೆಲ್ಲಾ ಜೊತೆಗಿದ್ದಾರೆ ಎಂಬ ನೆಮ್ಮದಿಗೂ ಸ್ಥಳಾವಕಾಶ ಇದೆ. ಆದರೆ ರವಿ ಬೆಳಗೆರೆ ಅವರ ಹಾಯ್ ಬೆಂಗಳೂರು ಪತ್ರಿಕೆಯ ಮೊದಲ ಸಂಚಿಕೆಯ ಟ್ರೇಸಿಂಗ್ ಹಾಳೆಗಳ ಪ್ರಿಂಟ್ ನ್ನು ಬಸವೇಶ್ವರನಗರದ ನನ್ನ ಕಚೇರಿಯಲ್ಲಿ ತೆಗೆದುಕೊಟ್ಟಿತ್ತು ಎಂಬುದನ್ನು ರವಿ ಹೆಗಡೆ ಜ್ಞಾಪಿಸಿಕೊಂಡಿದ್ದು ಮಾತ್ರ ಅಚ್ಚರಿ ಮೂಡಿಸಿತು. ಅಂದ್ರೆ ಅಷ್ಟೇನೂ ಕಂಗೆಡುವಷ್ಟು ವಯಸ್ಸು ಆಗಿಲ್ಲ ಎಂಬ ಸಮಾಧಾನ!

‘ಸಮಾಜಮುಖಿ ಪತ್ರಿಕೆಯನ್ನು ಸೀರಿಯಸ್ ಆಗಿ ಮಾಡುತ್ತಿದ್ದೇವೆ, ನೀವೆಲ್ಲಾ ಗಮನಿಸಬೇಕು’ ಎಂಬ ನನ್ನ ಅಮಾಯಕ ಮಾತಿಗೆ, ‘ಸೀ..ರಿ..ಯ..ಸ್ ಆಗಿ ಮಾಡ್ತಿದ್ದೀರಾ?’ ಎಂಬ ಪ್ರತಿಕ್ರಿಯೆ ರವಿ ಅವರಿಂದ! ಸೀರಿಯಸ್ ಪದವನ್ನು ಅವರು ಹಿಂಜಿ ಹೇಳಿದ ದನಿಯಲ್ಲಿ, ‘ಹಾಗಾದರೆ ಓದುಗರನ್ನು ಎಲ್ಲಿ ಹುಡುಕುತ್ತೀರಿ, ಲೇಖಕರು ಎಲ್ಲಿ ಸಿಗುತ್ತಾರೆ, ಪತ್ರಿಕೆ ಹೇಗೆ ನಡೆಸುತ್ತೀರಿ, ನಿಮ್ಮ ಬದುಕು ಹೇಗೆ…?’ ಇತ್ಯಾದಿ ಹತ್ತಾರು ಅನುಮಾನ, ಅನುಕಂಪಗಳು ಬೆರೆತಿದ್ದವು. ಆದಾಗ್ಯೂ ಮಾತಿನ ನಡುವೆ ಪರ್ಯಾಯ ಪತ್ರಿಕಾರಂಗದ ಅಗತ್ಯ ಮತ್ತು ಮಹತ್ವದ ಬಗ್ಗೆ ಸಹಮತ ವ್ಯಕ್ತಪಡಿಸಿದ್ದು ಆರೋಗ್ಯಕರ ಸಂಗತಿ
ಸಾಮಾಜಿಕ ಮಾಧ್ಯಮದ ಹುಟ್ಟಿನೊಂದಿಗೆ ಬದಲಾಗಿರುವ ಓದುಗರ ಅಭಿರುಚಿ, ನಿರೀಕ್ಷೆಗಳ ಕುರಿತು ರವಿಗೆ ಖಚಿತ ಗ್ರಹಿಕೆ ಇದೆ. ಈ ಕುರಿತು ತಮ್ಮ ಸಂಸ್ಥೆ ನಡೆಸಿದ ಅಧ್ಯಯನಗಳ ಫಲಿತಾಂಶದ ಬಗ್ಗೆ ಮಾತನಾಡಿದರು. ಓದುಗರ ಓದುವಿಕೆಯ ಕ್ರಮ, ವ್ಯಯಿಸುವ ಸಮಯ ಮತ್ತು ಆಸಕ್ತಿಯ ವಿಷಯ ಕುರಿತ ಅವರ ತಿಳಿವಳಿಕೆ ಅಪಾರವಾದುದು. ಬರವಣಿಗೆಗಿಂತ ಪತ್ರಿಕಾರಂಗದಲ್ಲಿ ತಂತ್ರಜ್ಞಾನ ಬಳಸುವಿಕೆಯಲ್ಲಿ ರವಿಗೆ ಮೊದಲಿನಿಂದಲೂ ವಿಶೇಷ ಆಸಕ್ತಿ ಮತ್ತು ಪರಿಣತಿ.

ರವಿ ಹೆಗಡೆಗೆ ಶಿಕ್ಷಣ ಮತ್ತು ಶೇರು ಮಾರುಕಟ್ಟೆ ಬಗೆಗೂ ಬಹಳ ಒಲವು. ಎರಡು ದಶಕಗಳ ಹಿಂದೆಯೇ ಬೆಂಗಳೂರಿನ ಶಿಕ್ಷಣಾವಕಾಶಗಳ ಮಾಹಿತಿ ಬಗ್ಗೆ ಒಂದು ಜಾಲತಾಣ ರೂಪಿಸಿದ್ದರು. ನಾನು ಮೊಟ್ಟಮೊದಲಿಗೆ ಯಾರದೋ ಸಲಹೆಯಂತೆ ಖರೀದಿಸಿದ್ದ ಯಾವುದೋ ಕಂಪನಿಯ ಶೇರು ಮಾರಲು ಒಮ್ಮೆ ಪರದಾಡುತ್ತಿದ್ದೆ. ಆಗ ಅದನ್ನು ಕೊಂಡವರು ಇದೇ ರವಿ ಹೆಗಡೆ. ಅವರು ದೀಪಕ್ ಫರ್ಟಿಲೈಸರ್ಸ್ ಎಂಬ ಆ ಕಂಪನಿಯ ಹೆಸರನ್ನು ಈಗ ನೆನಪಿಸಿಕೊಂಡು, ‘ಅದು ಮೇಲೆ ಏಳಲೇ ಇಲ್ಲ…’ ಎಂದು ಗೊಣಗಿದ್ದು ಮಾತ್ರ ತಮಾಷೆ ಎನ್ನಿಸಿತು.

ರವಿ ಮತ್ತು ನಾನು ತೊಂಬತ್ತರ ದಶಕದ ಆರಂಭದಲ್ಲಿ ಸಂಯುಕ್ತ ಕರ್ನಾಟಕ ಬಳಗದ ಮೂಲಕ ಪತ್ರಿಕಾರಂಗದಲ್ಲಿ ವೃತ್ತಿ ಬದುಕು ಆರಂಭಿಸಿದವರು. ಅವರು ಶಿರಸಿಯವರು; ಅಲ್ಲಿ ಅವರ ಕುಟುಂಬದ ಕಡ್ಲೆಭಟ್ರ ಖಾನಾವಳಿ ಬಹಳ ಪ್ರಸಿದ್ಧವಾಗಿತ್ತು. ನನ್ನದು ಬಳ್ಳಾರಿ ಜಿಲ್ಲೆ ವಡ್ಡು ಗ್ರಾಮದ ಕೃಷಿಕ ಕುಟುಂಬದ ಹಿನ್ನೆಲೆ. ಇಬ್ಬರೂ ಹಳ್ಳಿಗಾಡಿನಿಂದ ಬಂದ ಲೋ ಪ್ರೊಫೈಲ್ ವ್ಯಕ್ತಿತ್ವದವರು. ರವಿ ಒಂದಿಷ್ಟು ಜಾದೂ ಕೈಚಳಕ ಕಲಿತು ಕೆಲವೊಮ್ಮೆ ಕಚೇರಿಯಲ್ಲೂ ಪ್ರದರ್ಶಿಸಿದ್ದುಂಟು; ಆರಂಭದಲ್ಲಿ ರವಿ ಜಾದೂಗಾರ್ ಹೆಸರಿನಲ್ಲೇ ಗುರುತಿಸಿಕೊಂಡಿದ್ದರು, ಬರೆಯುತ್ತಿದ್ದರು. ಒಮ್ಮೆ ಕಚೇರಿಯಿಂದ ಹಿಂದಿರುಗುವಾಗ ಸಿಟಿಬಸ್ಸಿನಲ್ಲಿ ಊಟದಚೀಲ ಅವುಚಿಕೊಂಡು ಅಕ್ಕಪಕ್ಕ ಕುಳಿತಿದ್ದೆವು; ಆ ವಾರದ ಕರ್ಮವೀರದಲ್ಲಿ ನಾನು ಬರೆದಿದ್ದ ಸಂಪಾದಕೀಯ ಮೆಚ್ಚಿ ಅಚ್ಚರಿ ವ್ಯಕ್ತಪಡಿಸಿದ್ದರು ರವಿ.

ತೊಂಬತ್ತರ ದಶಕದಲ್ಲಿ ನಾನು ಪತ್ರಿಕಾರಂಗದ ಮುಖ್ಯವಾಹಿನಿಯಿಂದ ಬದಿಗೆ ಸರಿದು ಸ್ವತಂತ್ರ ಪ್ರಯೋಗಗಳಲ್ಲಿ ಕಳೆದುಹೋದೆ. ಅದು ನನ್ನದೇ ಆಯ್ಕೆಯ ಅವಸ್ಥೆಯಾಗಿತ್ತು. ನಾನು ಹೊರತರುತ್ತಿದ್ದ ‘ಬಿಸಿಲ ಬದುಕು’ ಮಾಸಪತ್ರಿಕೆಗೆ ರವಿ ಬರೆಯುತ್ತಿದ್ದರು. ನಂತರ ಅವರನ್ನು ಬೆಳಗಾವಿ ಕನ್ನಡಪ್ರಭ ಕಚೇರಿಯಲ್ಲೊಮ್ಮೆ ಭೇಟಿಯಾದ ನೆನಪು. ಮದುವೆಯಾದ ನಂತರ ಪತ್ನಿ ಜೊತೆ ಮನೆಗೆ ಬಂದಿದ್ದರು. ನಾನು ಮನೆ ಕಟ್ಟಿಸುವಾಗ ಅವರ ಮನೆಯನ್ನು ನೋಡಲು ಹೋಗಿದ್ದೆ.

ನಮ್ಮ ಭೇಟಿಗಳು ಇಷ್ಟಕ್ಕೇ ಸೀಮಿತ. ಆದರೆ ನಮ್ಮ ನಡುವಿನ ತಾತ್ವಿಕ ಭಿನ್ನಾಭಿಪ್ರಾಯ, ತಕರಾರು ಮಾತ್ರ ತೀಕ್ಷ್ಣ ಮತ್ತು ನಿರಂತರ.

2014ರಲ್ಲಿ ನಾನು ಮೈಸೂರಿನಲ್ಲಿರುವಾಗ ಯಾವುದೋ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ರವಿ ಹೆಗಡೆ, ”ಗಾಂಧೀಜಿ ಅವರು ಗ್ರಾಮಗಳು ಸ್ವಾವಲಂಬಿಗಳಾಗಿ ಇರಬೇಕೆಂದು ಆಶಿಸಿದರು. ಇಂದಿನ ಟೌನ್ಶಿಪ್ ಪರಿಕಲ್ಪನೆ ಇದಕ್ಕೆ ಹತ್ತಿರವಾಗಿದೆ” ಎಂಬ ವಿಚಿತ್ರ ಹೇಳಿಕೆ ನೀಡಿದಾಗ ನಾನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದೆ. ಹಾಗೆಯೇ ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ಸಿಎಂ ಕಚೇರಿಯಿಂದ ಕನ್ನಡಪ್ರಭಕ್ಕೆ ಬಂದ ಗಿಫ್ಟ್ ಹಣ ಮತ್ತು ಅದನ್ನು ನಿರಾಕರಿಸಿದ ಪ್ರಸಂಗದ ಸತ್ಯಾಸತ್ಯತೆ ಹೊರಹಾಕಬೇಕೆಂದು ರವಿ ಹೆಗಡೆಗೆ ಬಹಿರಂಗ ಸವಾಲು ಹಾಕಿದ್ದು ಇನ್ನೂ ಹಸಿರಾಗಿದೆ.

ಇನ್ನು, ನಾನು ಜೋಗಿಯನ್ನು ಮೊದಲ ಬಾರಿ ಭೇಟಿಯಾಗಿದ್ದು 1988ರಲ್ಲಿ. ಅವರು ಆಗಿನ್ನೂ ಎಚ್.ಗಿರೀಶರಾವ್. ಬಳ್ಳಾರಿಯಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಥಾಕಮ್ಮಟದಲ್ಲಿ ನಾವಿಬ್ಬರೂ ಭಾಗಿಯಾಗಿದ್ದೆವು. ದಕ್ಷಿಣ ಕನ್ನಡದ ಸಭ್ಯತೆ, ನಾಜೂಕು, ಶಿಸ್ತು ಹೊತ್ತುಕೊಂಡು ಬಂದಿದ್ದ ಅವರು ಕಮ್ಮಟದಲ್ಲಿ ವಿಧೇಯ ವಿದ್ಯಾರ್ಥಿ. ಗಂಟಲಲ್ಲಿ ಗುಂಟೂರು ಖಾರ, ನೆತ್ತಿಯಲ್ಲಿ ಬಿಸಿಲ ಉರಿ ತುಂಬಿಕೊಂಡಿದ್ದ ಅಪ್ಪಟ ಬಳ್ಳಾರಿಗ ನಾನು. ಜೋಗಿ ಮುಂದಿನ ಸಾಲಿನಲ್ಲಿ ಕುಳಿತು ಉಪನ್ಯಾಸಗಳಿಗೆ ಕಿವಿಕೊಟ್ಟರೆ ನಾನೋ ಹಿಂದಿನ ಸಾಲಿನಲ್ಲಿ ಕುಳಿತು ಖಾಲಿಯಾದ ವಿಲ್ಸ್ ಸಿಗರೇಟು ಪ್ಯಾಕಿನಿಂದ ಮಾಡಿದ ಗನ್ ಹಿಡಿದು ಭಯೋತ್ಪಾದನೆ ಮಾಡುತ್ತಿದ್ದೆ.

ಕಮ್ಮಟದ ಅಂತಿಮ ಘಟ್ಟದಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಫಲಿತಾಂಶ ಹೊರಬಿದ್ದು ನನ್ನ ‘ನೇಪಥ್ಯದ ನೋವು’ ಕಥೆಗೆ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪ್ರಕಟವಾಯ್ತು. ಆಗ ಅತಿಥಿಯಾಗಿ ಆಗಮಿಸಿದ್ದ ಬೆಸಗರಹಳ್ಳಿ ರಾಮಣ್ಣ ಅವರಿಗೆ ಆದ ಹೆಮ್ಮೆ ಅಷ್ಟಿಷ್ಟಲ್ಲ! ನಾನು ಸಂಕೋಚದಿಂದ ಮುದುಡಿಹೋಗಿದ್ದೆ. ಅವರಿಗೆ ಬೆನ್ನು ತಟ್ಟುವ ತವಕ. ಸಾಧ್ಯವಾದಷ್ಟು ಅವರ ಕೈಗೆ ಸಿಗದೇ ತಿರುಗಿದೆ. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯಕ್ರಮ. ನಿರೂಪಕರು ನನ್ನ ಹೆಸರು ಕೂಗಿದರು. ಜಾಗೃತರಾದ ಬೆಸಗರಹಳ್ಳಿಯವರು ಈಗ ಇವನನ್ನು ಹಿಡಿದೇಬಿಟ್ಟೆ ಎಂಬ ಹುಮ್ಮಸ್ಸಿನಲ್ಲಿ ಕಾಯತೊಡಗಿದರು. ಪ್ರಮಾಣಪತ್ರ ಪಡೆದ ತಕ್ಷಣ ಬಳಿಗೆ ಕರೆದು ಅಭಿನಂದಿಸಿದರು. ಆದರೆ ವೇದಿಕೆ ಮೇಲೆ ಅವರ ಕೈಗೆ ಸಿಕ್ಕಿದ್ದು ನಾನಲ್ಲ; ನನ್ನ ಪರವಾಗಿ ಪ್ರಮಾಣಪತ್ರ ಪಡೆಯಲು ನಾನು ಬೇರೊಬ್ಬರನ್ನು ನಿಯೋಜಿಸಿದ್ದೆ!

ನಂತರ ಬೆಂಗಳೂರು ಸೇರಿದ ಜೋಗಿ ಸಿನಿಮಾ ಪತ್ರಕರ್ತರಾಗಿ, ಸಾಹಿತಿಯಾಗಿ ಗುರುತಿಸಿಕೊಂಡರು. ರವಿ ಬೆಳಗೆರೆ ಅವರ ವೃತ್ತಿಬದುಕಿನ ದ್ವಿತಿಯಾರ್ಧದಲ್ಲಿ ಅವರೊಂದಿಗೆ ಸಾಕಷ್ಟು ಒಡನಾಟ ಹೊಂದಿದ್ದರು. ಹಿಂದೊಮ್ಮೆ ಟಿ.ಎನ್.ಸೀತಾರಾಂ ಅವರು ಆರ್.ಎಸ್.ಎಸ್. ವೇದಿಕೆ ಹಂಚಿಕೊಂಡ ಸಂದರ್ಭದಲ್ಲಿ ನಾನು ತಕರಾರು ತೆಗೆದಿದ್ದೆ. ಆಗ ಸೀತಾರಾಂ ಪರವಾಗಿ ಗುಂಪು ಕಟ್ಟಿಕೊಂಡು ಬಂದ ಜೋಗಿ ತಮ್ಮ ಗುರುವನ್ನು ಬಲವಾಗಿ ಸಮರ್ಥಿಸಿ’ಕೊಂದಿ’ದ್ದರು! ಅವರ ತಂಡದ ಜೊತೆಗೆ ಫೇಸ್ಬುಕ್ಕಿನಲ್ಲಿ ಸುದೀರ್ಘ ಮಾತಿನ ಚಕಮಕಿ ನಡೆದಿತ್ತು. ಬಹುಶಃ ಅವರು ಆಗ ನನ್ನನ್ನು ಅನ್ ಫ್ರೆಂಡ್ ಮಾಡುವ ಮೂಲಕ ‘ಠೂ’ ಬಿಟ್ಟರು ಕೂಡ. ಆದರೆ ಬ್ಲಾಕ್ ಮಾಡಿಲ್ಲ! ಅಂತೆಯೇ ಯಾವಾಗ ಬೇಕಾದರೂ ತಗಾದೆ ತೆಗೆಯುವ ಅವಕಾಶ ಇಬ್ಬರಿಗೂ ಮುಕ್ತವಾಗಿದೆ.

ಒಂದೆಡೆ ರವಿ ಹೆಗಡೆ ಪ್ರತಿನಿಧಿಸುವ ಪತ್ರಿಕಾ ಮಾದರಿ, ಇನ್ನೊಂದೆಡೆ ಜೋಗಿ ಪ್ರತಿಪಾದಿಸುವ ಸಾಹಿತ್ಯ ಸ್ವರೂಪ; ನಾನು ಎರಡರಿಂದಲೂ ಭಿನ್ನ, ಮಾರು ದೂರ. ಆದರೂ ಸ್ನೇಹ ‘ಸಂಬಂಜ ಅನ್ನೋದು ದೊಡ್ಡದು ಕಣಾ’ ಎಂಬ ಮಾತಿಗೆ ಹತ್ತಿರ.
ಕಾಳೇಗೌಡ ನಾಗವಾರ ಅವರು ಹೇಳುವ ‘ಭಿನ್ನಮತದ ಸೊಗಸು’ ಇದೇ ಇರಬಹುದೇ…?

‍ಲೇಖಕರು Admin

January 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: