ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ರಶಿಯನ್ನರ ರಾಜಕೀಯ ಲೆಕ್ಕಾಚಾರ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

14

ಡಿಸೆಂಬರ್ 20ರಂದು ವರಾನ್ತಸೋವ್‍ ಯುದ್ಧ ಮಂತ್ರಿ ಚೆರ್ನಿಶೋವ್‍ಗೆ ಈ ಮುಂದಿನಂತೆ ಬರೆದ. ಪತ್ರ ಫ್ರೆಂಚ್ ಭಾಷೆಯಲ್ಲಿತ್ತು:
‘ಪ್ರಿಯ ಪ್ರಿನ್ಸ್, ನಾನು ತಮ್ಮ ಹಿಂದಿನ ಪತ್ರಕ್ಕೆ ಉತ್ತರ ಬರೆಯಲಿಲ್ಲ. ಹಾಜಿ ಮುರಾದ್‍ನ ವಿಷಯ ಏನು ಮಾಡಬೇಕೆಂದು ನಾನು ಮೊದಲು ನಿರ್ಧರಿಸಬೇಕಾಗಿತ್ತು. ಕಳೆದ ಎರಡು ಮೂರು ದಿನಗಳಿಂದ ನನ್ನ ಆರೋಗ್ಯವೂ ಅಷ್ಟು ಸರಿಯಿಲ್ಲ. ಹಾಜಿ ಮುರಾದ್ ಇಲ್ಲಿಗೆ ಬಂದಿರುವ ವಿಷಯವನ್ನು ಕಳೆದ ಪತ್ರದಲ್ಲಿ ನಿಮಗೆ ತಿಳಿಸಿದ್ದೆ.

‘ಅವನು 8ನೆಯ ತಾರೀಕಿನಂದ ಟಿಫ್ಲಿಸ್‍ಗೆ ಬಂದ, ಮಾರನೆಯ ದಿನ ನಾನು ಅವನ ಪರಿಚಯ ಮಾಡಿಕೊಂಡೆ. ಮುಂದಿನ ಏಳೆಂಟು ದಿನಗಳಲ್ಲಿ ಅವನೊಡನೆ ಮಾತನಾಡಿದ್ದೇನೆ. ಭವಿಷ್ಯದಲ್ಲಿ ಅವನನನ್ನು ನಾವು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದೆಂದು, ವಿಶೇಷವಾಗಿ ಸದ್ಯಕ್ಕೆ ಅವನನ್ನು ಏನು ಮಾಡಬೇಕೆಂದು ಆಲೋಚಿಸಿದ್ದೇನೆ. ಅವನು ತನ್ನ ಕುಟುಂಬದ ಕ್ಷೇಮದ ವಿಚಾರದಲ್ಲಿ ಬಹಳ ಚಿಂತಿತನಾಗಿದ್ದಾನೆ. ಮನೆಯವರೆಲ್ಲರೂ ಶಮೀಲ್‍ನ ವಶದಲ್ಲಿರುವವರೆಗೂ ತಾನು ಯಾವ ಸೇವೆಯನ್ನೂ ಸಲ್ಲಿಸಲಾರೆ, ಅಥವ ನಾವು ಅವನಿಗೆ ಕ್ಷಮಾದಾನ ನೀಡಿ ಗೌರವಪೂರ್ವಕವಾಗಿ ಸ್ವಾಗತಿಸಿದ್ದಕ್ಕೆ ಸರಿಯಾಗಿ ಕೃತಜ್ಞತೆಯನ್ನು ಸೂಚಿಸಲಾರೆ ಎಂದು ಹೇಳುವಾಗ ಅವನ ಮಾತಿನಲ್ಲಿ ಪ್ರಾಮಾಣಿಕತೆ ಕಾಣುತ್ತದೆ.
‘ತನಗೆ ಪ್ರಿಯರಾದವರ ವಿಷಯದಲ್ಲಿ ಅವನಿಗಿರುವ ಅನಿಶ್ಚಿತತೆಯ ಕಾರಣದಿಂದ ಕಳವಳಪಟ್ಟಿದ್ದಾನೆ. ಅವನ ಜೊತೆಗೆ ಇರುವಂತೆ ನಾನು ನಿಯಮಿಸಿರುವ ವ್ಯಕ್ತಿಗಳು ತಿಳಿಸಿರುವಂತೆ ಅವನು ರಾತ್ರಿಯ ಹೊತ್ತು ನಿದ್ರೆ ಮಾಡುವುದಿಲ್ಲ. ಅವನ ಊಟವು ಇಲ್ಲವೇ ಇಲ್ಲ ಅನ್ನುವಷ್ಟು ಕಡಮೆ. ನಿರಂತರವಾಗಿ ಪ್ರಾರ್ಥನೆ ಮಾಡುತ್ತಾನೆ. ಹಲವು ಕೊಸಾಕ್‍ಗಳೊಡನೆ ಸವಾರಿ ಹೋಗಲು ಅವಕಾಶ ಕೊಡಿ ಎಂದು ಬೇಡುತ್ತಾನೆ—ಅವನಿಗಿರುವ ಏಕೈಕ ಮನರಂಜನೆ ಮತ್ತು ವ್ಯಾಯಾಮವೆಂದರೆ ಅದೊಂದೇ. ಅಲ್ಲದೆ ಜೀವಮಾನ ಪರ್ಯಂತ ಅಭ್ಯಾಸವಾಗಿರುವ ಕುದುರೆ ಸವಾರಿ ಈಗಲೂ ಅವನಿಗೆ ಅಗತ್ಯವೆನಿಸಿದೆ.

‘ತನ್ನ ಕುಟುಂಬದ ಸುದ್ದಿಯೇನಾದರೂ ತಿಳಿಯಿತೇ? ಶಮೀಲ್‍ನಿಗೆ ಒಪ್ಪಿಸುವ ಸಲುವಾಗಿ ನಮ್ಮ ಬಳಿ ಇರುವ ಸೆರೆಯಾಳುಗಳನ್ನೆಲ್ಲ ಒಟ್ಟುಗೂಡಿಸಿದ್ದೇವೆಯೇ? ಯಾವಾಗ ಸೆರೆಯಾಳುಗಳನ್ನು ಒಪ್ಪಿಸಿ ಅವನ ಕುಟುಂಬದವರನ್ನು ಬಿಡಿಸುತ್ತೇವೆ ಎಂದು ತಿಳಿಯುವುದಕ್ಕಾಗಿ ದಿನವೂ ಅವನು ನನ್ನ ಬಳಿಗೆ ಬರುತ್ತಾನೆ. ನನಗೆ ಸ್ವಲ್ಪ ದುಡ್ಡನ್ನೂ ಕೊಡುತ್ತಾನೆ. ಅವನ ಉದ್ದೇಶ ನೆರವೇರಿಸಿಕೊಳ್ಳಲು ಹಾಜಿ ಮುರಾದ್‍ಗೆ ಒಂದಷ್ಟು ದುಡ್ಡು ಕೊಡುವ ಜನ ಇದ್ದಾರೆ.

‘ನನ್ನ ಕುಟುಂಬನ್ನು ಉಳಿಸಿ, ಆಮೇಲೆ ನಿಮ್ಮ ಸೇವೆಗೊಂದು ಅವಕಾಶ ಕೊಡಿ,’ ಎಂದು ಮತ್ತೆ ಮತ್ತೆ ಕೇಳುತ್ತಾನೆ. ಲೆಝಿನ್ ಮುಂಚೂಣಿಗೆ ಹೋಗುವ ಬಯಕೆ ಅವನಿಗಿದೆ ಎಂದು ಹೇಳಿಕೊಳ್ಳುತ್ತಾನೆ. ‘ಇನ್ನೊಂದು ತಿಂಗಳ ಒಳಗೆ ನಿಮಗೊಂದು ದೊಡ್ಡ ಸೇವೆ ಸಲ್ಲಿಸದಿದ್ದರೆ ನಿಮಗಿಷ್ಟ ಬಂದ ಶಿಕ್ಷೆ ಕೊಡಿ ಎನ್ನುತ್ತಾನೆ. ಅದಕ್ಕುತ್ತರವಾಗಿ ನಾನು, ‘ಇದೆಲ್ಲವೂ ನನಗೆ ನ್ಯಾಯವಾಗಿ ಕಾಣುತ್ತದೆ; ಅವನ ಕುಟುಂಬದವರು ರಶಿಯನ್ನರ ವಶದಲ್ಲಿರದೆ ಬೆಟ್ಟಗಾಡಿನಲ್ಲಿರುವವರೆಗೆ ನಮ್ಮಲ್ಲಿ ಅನೇಕರು ಅವನನ್ನು ನಂಬುವುದೂ ಇಲ್ಲ. ನಮ್ಮ ಗಡಿನಾಡಿನಲ್ಲಿ ಸೆರೆಯಾಳುಗಳನ್ನು ಒಟ್ಟುಗೂಡಿಸಲು ನನ್ನ ಕೈಯಲಾದ ಎಲ್ಲ ಪ್ರಯತ್ನ ಮಾಡುತ್ತೇನೆ. ಅವನ ಕುಟುಂಬವನ್ನು ಬಿಡಿಸಿಕೊಳ್ಳಲು ಅವನೇ ದುಡ್ಡನ್ನು ಎತ್ತಬೇಕು, ಅಂಥ ಕಪ್ಪವಾಗಿ ದುಡ್ಡನ್ನು ಕೊಡಲು ನಮ್ಮ ಕಾನೂನಿನ ಪ್ರಕಾರ ನನಗೆ ಅಧಿಕಾರವಿಲ್ಲ, ಅದರ ಬದಲಾಗಿ ಬೇರೆಯ ರೀತಿಯಲ್ಲಿ ಸಹಾಯ ಮಾಡುತ್ತೇನೆ,’ ಎಂದಿದ್ದೇನೆ. ಆನಂತರ ನಾನು ಅವನಿಗೆ ನೇರವಾಗಿ ಹೇಳಿದ್ದೇನೆಂದರೆ, ‘ಶಮೀಲ್‍ ನಿನ್ನ ಮನೆಯವರನ್ನು ಬಿಡುತ್ತಾನೆಂದು, ನಿನಗೆ ಕ್ಷಮಾದಾನ ನೀಡುತ್ತಾನೆಂದು, ನಿನ್ನ ಹಳೆಯ ಅಧಿಕಾರವನ್ನು ಮರಳಿಸುತ್ತಾನೆಂದು ನನಗೆ ತೋರುವುದಿಲ್ಲ, ಬದಲಾಗಿ ನೀನು ವಾಪಸು ಹೋಗದಿದ್ದರೆ ನಿನ್ನ ತಾಯಿ, ಹೆಂಡಿರು, ಆರು ಮಕ್ಕಳನ್ನು ಕೊಲ್ಲುವುದಾಗಿ ಹೇಳಿದರೆ ಆಗ ಏನು ಮಾಡುತ್ತೀಯ ಪ್ರಾಮಾಣಿಕವಾಗಿ ಹೇಳು,’ ಎಂದು ಕೇಳಿದೆ.

‘ಹಾಜಿ ಮುರಾದ್ ಆಕಾಶಕ್ಕೆ ಮುಖ ಮಾಡಿ, ಕೈಗಳನ್ನು ಮೇಲೆತ್ತಿ ಎಲ್ಲವೂ ದೇವರ ಕೈಯಲ್ಲಿದೆ. ನಾನು ಎಂದಿಗೂ ಶತ್ರುವಿಗೆ ಶರಣಾಗುವುದಿಲ್ಲ. ಶಮೀಲ್‍ ಎಂದಿಗೂ ನನ್ನ ಕ್ಷಮಿಸುವುದಿಲ್ಲ, ಹಾಗಾಗಿ ನಾನು ಬಹಳ ಕಾಲ ಬದುಕುವುದಿಲ್ಲ’ ಎಂದ. ಶಮೀಲ್‍ ಆತುರಪಟ್ಟು ನನ್ನ ಕುಟುಂಬದವರನ್ನು ಕೊಲ್ಲುವುದಿಲ್ಲ; ಏಕೆಂದರೆ ಅದರಿಂದ ನಾನು ಹತಾಶನಾಗಿ ಅವನಿಗೆ ಅಪಾಯಮಾಡುತ್ತೇನೆಂದು ಅವನಿಗೆ ಗೊತ್ತು. ಅಲ್ಲದೆ ಇಂಥ ಕೆಲಸ ಮಾಡದಂತೆ ಅವನನ್ನು ತಡೆಯಬಲ್ಲ ಪ್ರಭಾವಶಾಲಿಗಳು ದಾಗೆಸ್ತಾನ್‍ದಲ್ಲಿ ಅನೇಕರಿದ್ದಾರೆ,’ ಎಂದು ಹೇಳಿದ.

‘ಕೊನೆಯದಾಗಿ ಭವಿಷ್ಯದಲ್ಲಿ ದೇವರು ಏನು ಇಚ್ಛಿಸುತ್ತಾನೋ ಅದೇ ಆಗುತ್ತದೆ, ಸದ್ಯದಲ್ಲಿ ನಾನು ಕುಟುಂಬವನ್ನು ಬಿಡಿಸಿಕೊಳ್ಳುವ ಆಸಕ್ತಿ ನನ್ನದು. ದೇವರ ಹೆಸರಿನಲ್ಲಿ ನನಗೆ ಸಹಾಯ ಮಾಡಿ, ಚೆಚೆನ್ಯಾ ಪ್ರಾಂತ್ಯದ ಸಮೀಪಕ್ಕೆ ಹೋಗಲು ಅವಕಾಶ ಕೊಡಿ,’ ಎಂದು ಕೋರಿಕೊಂಡ.‘ ಅಲ್ಲಿ ನಿಮ್ಮ ಕಮಾಂಡರುಗಳ ಸಹಾಯ, ಒಪ್ಪಿಗೆಯೊಂದಿಗೆ ಕುಟುಂಬದವರೊಡನೆ ಸಂಪರ್ಕ ಸಾಧಿಸುವುದು, ಅವರ ಸ್ಥಿತಿಗತಿಗಳ ಬಗ್ಗೆ ಸುದ್ದಿ ತಿಳಿಯುವುದು, ಅವರನ್ನು ಬಿಡಿಸಿಕೊಳ್ಳುವ ಉತ್ತಮ ಉಪಾಯ ರೂಪಿಸವುದು ಎಲ್ಲಾ ಸಾಧ್ಯವಾಗುತ್ತದೆ,’ ಎಂದ.’

‘ಅಲ್ಲಿ, ಶತ್ರು ಪ್ರದೇಶದಲ್ಲಿರುವ ಅನೇಕರು, ಕೆಲವು ನಾಯಿಬ್‍ರು ಕೂಡ ಅವನಿಗೆ ಬೇಕಾದವರಾಗಿದ್ದಾರೆ, ಅವರ ಮತ್ತು ಈಗಾಗಲೇ ರಶಿಯದ ಅಧೀನದಲ್ಲಿರುವ ಪ್ರಾಂತಗಳ ಜನರ, ತಟಸ್ಥ ಪ್ರಾಂತಗಳ ಜನರ ನೆರವಿನಿಂದ ಹಗಲೂ ರಾತ್ರಿ ಹಾಜಿ ಮುರಾದ್‍ನನ್ನು ಕಾಡುತ್ತಿರುವ ಸಮಸ್ಯೆಗೆ ಪರಿಹಾರ ರೂಪಿಸುವುದು, ಹಾಗೆ ಪರಿಹಾರ ದೊರೆತ ಮೇಲೆ ನಮ್ಮ ಒಳಿತಿಗಾಗಿ ಅವನು ಕೆಲಸ ಮಾಡಿ ನಮ್ಮ ವಿಶ್ವಾಸ ಗಳಿಸುವುದು ಸುಲಭ ಎಂದು ಹೇಳುತ್ತಾನೆ. ಇಪ್ಪತ್ತು ಅಥವ ಮೂವತ್ತು ಆಯ್ದ ಕೊಸಾಕ್‍ಗಳೊಂದಿಗೆ ಅವನನ್ನು ಗ್ರೋಜ್ನಿಗೆ ವಾಪಸು ಕಳಿಸಬೇಕು, ಕೊಸಾಕ್‍ಗಳು ಅವನಿಗೆ ರಕ್ಷಣೆ ಕೊಡುವುದರ ಜೊತೆಗೆ ಅವನ ಮೇಲೆ ನಾವು ನಿಗಾ ಇರಿಸುವುದಕ್ಕೂ ಸಹಾಯವಾಗುತ್ತದೆ ಎನ್ನುತ್ತಾನೆ.

‘ಪ್ರಿಯ ಪ್ರಿನ್ಸ್, ಇದೆಲ್ಲದರಿಂದ ನನಗೆಷ್ಟು ಗೊಂದಲವಾಗಿದೆ ಎನ್ನುವುದು ನಿಮಗೆ ತಿಳಿಯಬಹುದು. ನಾನು ಏನೇ ಮಾಡಿದರೂ ದೊಡ್ಡ ಜವಾಬುದಾರಿ ನನ್ನ ಹೆಗಲ ಮೇಲಿರುತ್ತದೆ. ಅವನನ್ನು ಸಂಪೂರ್ಣವಾಗಿ ನಂಬುವುದು ಖಂಡಿತವಾಗಲೂ ಆತುರದ ನಡೆಯಾಗುತ್ತದೆ. ಆದರೆ ಅವನು ತಪ್ಪಿಸಿಕೊಳ್ಳಲಾರದ ಹಾಗೆ ಸೆರೆಮನೆಯಲ್ಲಿ ಕೂಡಿ ಹಾಕುವುದು ನನ್ನ ಅಭಿಪ್ರಾಯದಲ್ಲಿ ಅನ್ಯಾಯ ಮತ್ತು ಅಸೌಜನ್ಯವಾಗುತ್ತದೆ. ಹಾಗೆ ಮಾಡಿದರೆ ಬಲು ಬೇಗನೆ ಆ ಸುದ್ದಿ ಇಡೀ ದಾಗೆಸ್ತಾನದಲ್ಲಿ ಪ್ರಚಾರಗೊಳ್ಳುತ್ತದೆ, ಅದರಿಂದ ನಮಗೇ ಕೆಡುಕಾಗುತ್ತದೆ. ಯಾಕೆಂದರೆ ಶಮೀಲ್‍ನನ್ನು ವಿರೋಧಿಸುವವರು ಅನೇಕರಿದ್ದಾರೆ, ನಾವು ಇಮಾಮ್‍ನ ಅತ್ಯಂತ ಧೈರ್ಯಶಾಲೀ ಅತ್ಯಂತ ಸಾಹಸೀ ಅಧೀಕಾರಿಯನ್ನು ಹೇಗೆ ನಡೆಸಿಕೊಳ್ಳುತ್ತೇವೆಂದು ಕುತೂಹಲದಿಂದ ಗಮನಿಸುತ್ತಿದ್ದಾರೆ. ಅವನೀಗ ನಮ್ಮಲ್ಲಿಗೆ ಬಂದಿದ್ದಾನೆ. ಹಾಜಿ ಮುರಾದ್‍ನನ್ನು ಸೆರೆಯಾಳಾಗಿ ಕಂಡರೆ ಅವನನ್ನು ಸೆರೆಗೆ ಹಾಕಿದರೆ ಅವರೆಲ್ಲರೂ ನಮ್ಮತ್ತ ಬರುವುದನ್ನು ನಾವೇ ತಡೆದ ಹಾಗಾಗುತ್ತದೆ.

ಈ ಸಂದರ್ಭದಲ್ಲಿ ನಮಗೆ ದೊರೆಯಬಹುದಾದ ಲಾಭವನ್ನು ಕಳೆದುಕೊಂಡಂತಾಗುತ್ತದೆ. ನಾನು ಈಗ ವರ್ತಿಸಿದ್ದಕ್ಕಿಂತ ಬೇರೆ ರೀತಿಯಲ್ಲಿ ನಡೆದುಕೊಳ್ಳುವುದಕ್ಕೆ ಸಾಧ್ಯವಿರಲಿಲ್ಲ. ಹಾಗೆಯೇ ಹಾಜಿ ಮುರಾದ್ ಮತ್ತೆ ತಪ್ಪಿಸಿಕೊಂಡರೆ, ಈ ಜಟಿಲವಾದ ಪರಿಸ್ಥಿತಿಯಲ್ಲಿ ನಾನು ಬಹು ದೊಡ್ಡ ತಪ್ಪು ಎಸಗಿದೆನೆಂದು ಆಪಾದಿಸುವುದಕ್ಕೂ ಅವಕಾಶವಿದೆ ಎಂದೂ ಭಾವಿಸಿದ್ದೇನೆ. ತಪ್ಪಿನ ಸಂಭಾವ್ಯತೆಗೆ ಅವಕಾಶವಿರದಂತೆ, ಆಪಾದನೆಯ ಹೊರೆ ಹರೊದಂತೆ ಯಾವುದೇ ನೇರವಾದ ದಾರಿಯಲ್ಲಿ ಸಾಗುವುದು ಅಸಾಧ್ಯವೆಂಬಷ್ಟು ಕಷ್ಟ. ಏನೇ ಸಂಭವಿಸಿದರೂ ನಾನು ಹೀಗೆಯೇ ನಡೆದುಕೊಳ್ಳಬೇಕು.

ಪ್ರಿಯ ಪ್ರಿನ್ಸ್, ತಾವು ದಯವಿಟ್ಟು ಈ ವರದಿಯನ್ನು ಪ್ರಭುಗಳಾದ ಚಕ್ರವರ್ತಿಯವರ ಅವಗಾಹನೆಗೆ ಸಲ್ಲಿಸಬೇಕೆಂದು ಕೋರುತ್ತೇನೆ. ಪ್ರಭುಗು ನನ್ನ ಕಾರ್ಯವನ್ನು ಒಪ್ಪಿದರೆ ನಾನು ಬಹಳ ಸಂತುಷ್ಟನಾಗುತ್ತೇನೆ.

‘ಮೇಲೆ ಬರೆದಿರುವುದನ್ನೆಲ್ಲ ನಾನು ಜನರಲ್ ಝ್ವೊದೋವ್‍ಸ್ಕಿ, ಜನರಲ್ ಕೊಝ್ಲೋವ್‍ಸ್ಕಿ ಅವರಿಗೂ ಬರೆದಿದ್ದೇನೆ. ಇದರಿಂದ ಹಾಜಿ ಮುರಾದನೊಡನೆ ವ್ಯವಹರಿಸುವಾಗ ಕೊಝ್ಲೋವ್‍ಸ್ಕಿ ಅವರಿಗೆ ಅನುಕೂಲವಾಗುತ್ತದೆ. ಅಲ್ಲದೆ ಕೊಝ್ಲೋವ್‍ಸ್ಕಿ ಅವರ ಒಪ್ಪಿಗೆ ಪಡೆಯದೆ ಹಾಜಿ ಮುರಾದ್ ಎಲ್ಲಿಗೂ ಹೋಗುವಂತಿಲ್ಲವೆಂದು ತಾಕೀತು ಮಾಡಿ ಎಚ್ಚರಿಕೆ ನೀಡಿದ್ದೇನೆ. ಹಾಜಿ ಮುರಾದ್ ಎಲ್ಲಿಗೆ ಹೋಗುವುದಿದ್ದರೂ ನಮ್ಮವರ ಗುಂಪಿನೊಡನೆಯೇ ಇದ್ದರೆ ನಮಗೆ ಒಳ್ಳೆಯದು, ಇಲ್ಲದಿದ್ದರೆ ನಾವು ಹಾಜಿ ಮುರಾದ್‍ನನ್ನು ಸೆರೆಯಾಳಾಗಿಟ್ಟುಕೊಂಡಿದ್ದೇವೆಂದು ಶಮೀಲ್‍ ಪುಕಾರು ಹಬ್ಬಿಸಬಹುದೆಂದು ಹೇಳಿದ್ದೇನೆ.

ಹಾಗೆಯೇ ಅವನು ಎಂದೂ ವಾಝ್ವಿಶಾನ್ಕ್ಗೆ ಹೋಗುವಂತಿಲ್ಲವೆಂದು ಮಾತು ಪಡೆದಿದ್ದೇನೆ. ಏಕೆಂದರೆ ಅವನು ಮೊದಲು ಶರಣಾದದ್ದು ನನ್ನ ಮಗನಿಗೆ. ಹಾಜಿ ಮುರಾದ್ ನನ್ನ ಮಗನನ್ನು ಕುನಾಕ್ ಎಂದು ಬಾವಿಸಿ, ವರ್ತಿಸುತ್ತಾನೆ. ನನ್ನ ಮಗನು ಅಲ್ಲಿನ ಕಮಾಂಡರ್ ಅಲ್ಲ. ಹಾಗಾಗಿ ಅಲ್ಲಿ ಕೆಲವು ಅನಪೇಕ್ಷಿತ ತಪ್ಪು ತಿಳಿವಳಿಕೆಗಳು ಹುಟ್ಟಬಹುದು. ಅದೇನೇ ಇದ್ದರೂ ವಾಝ್ವಿಶಾನ್ಕ್ ಜನ ದಟ್ಟಣೆಯಿರುವ ಶತ್ರುಗಳ ಪ್ರದೇಶಕ್ಕೆ ಹತ್ತಿರವಾಗಿದೆ. ಅವನು ತನ್ನ ಗೆಳೆಯರನ್ನು ಭೇಟಿ ಮಾಡಲು ಗ್ರೋಸ್ನಿಯು ಎಲ್ಲ ರೀತಿಯಲ್ಲೂ ಸೂಕ್ತವಾಗಿದೆ. ಅವನ ಕೋರಿಕೆಯಂತೆಯೇ ಆಯ್ದ ಇಪ್ಪತ್ತು ಕೊಸಾಕ್‍ಗಳು ಅವನೊಂದಿಗಿದ್ದಾರೆ. ಅಲ್ಲದೆ ಅವನೊಂದಿಗೆ ಕ್ಯಾಪ್ಟನ್ ಲೊರಿಸ್-ಮೆಲಿಕೋವ್‍ನನ್ನು ಕಳುಹಿಸಿದ್ದೇನೆ. ಅವನು ಬಹಳ ಚುರುಕಾದ, ಯೋಗ್ಯನಾದ ಅಧಿಕಾರಿ. ಅವನು ಟಾರ್ಟರ್ ಭಾಷೆ ಮಾತನಾಡುತ್ತಾನೆ, ಹಾಗೆಯೇ ಹಾಜಿ ಮುರಾದ್‍ನನ್ನು ಚೆನ್ನಾಗಿ ಬಲ್ಲವನು. ಹಾಜಿ ಮುರಾದ್‍ನಿಗೂ ಅವನ ಮೇಲೆ ವಿಶ್ವಾಸವಿದೆ.

ಹಾಜಿ ಮುರಾದ್ ಇಲ್ಲಿದ್ದ ಹತ್ತೂ ದಿನಗಳು ಶೌಶನ್ ಜೆಲ್ಲೆಯ ಮುಖ್ಯಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಿನ್ಸ್ ತರ್ಖನೋವ್‍ನೊಟ್ಟಿಗೆ ಒಂದೇ ಮನೆಯಲ್ಲಿದ್ದ. ಅವನು ತನ್ನ ಸರ್ಕಾರಿ ಸೇವೆಯ ಯಾವುದೋ ವಿಚಾರವಾಗಿ ಇಲ್ಲಿಗೆ ಕೆಲಸದ ಮೇಲೆ ಬಂದಿದ್ದ. ಅವನು ನಿಜವಾಗಿ ಯೋಗ್ಯ, ಅವನನ್ನು ಪೂರ್ಣವಾಗಿ ನಂಬುತ್ತೇನೆ. ಅವನೂ ಹಾಜಿ ಮುರಾದ್‍ನ ವಿಶ್ವಾಸವನ್ನು ಗೆದ್ದಿದ್ದಾನೆ. ಅವನಿಗೂ ಟಾರ್ಟರ್ ಭಾಷೆ ಚೆನ್ನಾಗಿ ಬರುತ್ತದೆ. ಅವನ ಮುಖಾಂತರ ನಾನು ಅನೇಕ ಗೌಪ್ಯ ಮತ್ತು ಸೂಕ್ಷ್ಮ ವಿಷಯಗಳನ್ನು ಚರ್ಚೆ ಮಾಡಿದ್ದಾನೆ.

ಹಾಜಿ ಮುರಾದ್‍ನ ಬಗ್ಗೆ ನಾನು ತರ್ಖನೋವ್‍ನೊಡನೆ ಸಮಾಲೋಚಿಸಿದ್ದೇನೆ, ಅವನೂ ನನ್ನದೇ ಅಭಿಪ್ರಾಯ ಹೊಂದಿದ್ದಾನೆ: ಈಗ ನಾನು ಮಾಡಿರುವ ಕೆಲಸವನ್ನೇ ಮಾಡಬೇಕು ಅಥವಾ ಹಾಜಿ ಮುರಾದ್‍ನನ್ನು ಸೆರೆಗೆ ತಳ್ಳಿ ಬಲವಾದ ಕಾವಲಿಡಬೇಕು, (ನಾವು ಅವನನ್ನು ಸೂಕ್ತವಾಗಿ ಗಮನಿಸದಿದ್ದರೆ ಅವನನ್ನು ಹತೋಟಿಯಲ್ಲಿಡುವುದೇ ಕಷ್ಟವಾಗುತ್ತದೆ), ಅಥವಾ ಅವನನ್ನು ನಮ್ಮ ದೇಶದಿಂದಲೇ ಹೊರದೂಡಬೇಕು ಎಂದು ತರ್ಖನೋವ್‍ ಕೂಡ ಒಪ್ಪುತ್ತಾನೆ. ಆದರೆ ಕೊನೆಯ ಎರಡು ಪರ್ಯಾಯಗಳನ್ನು ನಾವು ಆಯ್ಕೆ ಮಾಡಿದರೆ ಹಾಜಿ ಮುರಾದ್ ಮತ್ತು ಶಮೀಲ್‍ರ ನಡುವೆ ಇರುವ ವೈಮನಸ್ಯದಿಂದ ನಮಗಾಗುವ ಲಾಭವನ್ನು ಹಾಳು ಮಾಡಿದಂತಾಗುತ್ತದೆ. ಅಲ್ಲದೆ ಜನ ಈಗ ಶಮೀಲ್‍ನ ಅಧಿಕಾರದ ವಿರುದ್ಧ ತಿರುಗಿಬಿದ್ದಿರುವುದರಿಂದ, ಮುಂದೆ ಅವರು ಅವನ ವಿರುದ್ಧ ದಂಗೆಯೆದ್ದರೆ ಅದರಿಂದ ನಮಗಾಗುವ ಲಾಭವನ್ನೂ ಕಳೆದುಕೊಂಡಂತಾಗುತ್ತದೆ. ಹಾಜಿ ಮುರಾದ್‍ನ ಸತ್ಯವಂತಿಕೆಯ ಬಗ್ಗೆ ತಮಗೆ ಯಾವುದೇ ಅನುಮಾನವಿಲ್ಲವೆಂದು ಪ್ರಿನ್ಸ್ ತರ್ಖಾನೋವ ಹೇಳುತ್ತಾರೆ ಮಾತ್ರವಲ್ಲ, ಶಮೀಲ್‍ ಏನೇ ಭರವಸೆ ನೀಡಿದರೂ ತನ್ನನ್ನು ಎಂದೂ ಕ್ಷಮಿಸುವುದಿಲ್ಲವೆನ್ನುವುದು ಹಾಜಿ ಮುರಾದ್‍ನ ನಂಬಿಕೆ ಎಂದೂ ನನ್ನ ಬಳಿ ಹೇಳಿದ್ದಾರೆ.

ತರ್ಖಾನೋವ್‍ ಅವರ ಪ್ರಕಾರ ನಮಗೆ ಇರುವ ಆತಂಕ ಒಂದೇ ಒಂದು. ಅದೇನೆಂದರೆ ಹಾಜಿ ಮುರಾಧ್‍ನ ಧರ್ಮನಿಷ್ಠೆ. ಧರ್ಮದ ಮಾತನ್ನು ಎತ್ತಿಕೊಂಡು ಶಮೀಲ್‍ ಹಾಜಿ ಮುರಾದ್‍ನ ಮೇಲೆ ಪ್ರಭಾವ ಬೀರಬಹುದು. ಆದರೂ ಹಾಜಿ ಮುರಾದ್ ಅವನ ಪಕ್ಷಕ್ಕೆ ಸೇರಿದರೂ ಇಂದಲ್ಲ ನಾಳೆ ಶಮೀಲ್‍ ಅವನ ಜೀವ ತೆಗೆಯದೆ ಇರಲಾರ.

‘ಡಿಯರ್ ಪ್ರಿನ್ಸ್, ನಮ್ಮಲ್ಲಿನ ವ್ಯವಹಾರಗಳ ಬಗ್ಗೆ ನಾನು ತಮಗೆ ತಿಳಿಸಬೇಕಾಗಿರುವುದು ಇಷ್ಟೇ.’

|ಮುಂದುವರೆಯುವುದು |

ಟಿಪ್ಪಣಿ
ಲೆಝಿನ್: ಕಕೇಶಿಯದ ಉತ್ತರ-ಪೂರ್ವ ದಿಕ್ಕಿನಲ್ಲಿ ನೆಲೆಸಿರುವ ಸುನ್ನಿ ಮುಸ್ಲಿಮರೇ ಹೆಚ್ಚಾಗಿರುವ ಪ್ರಾಂತ ಮತ್ತು ಸಮುದಾಯ.
ಗ್ರೋಸ್ನಿ: ಚೆಚೆನ್ಯಾ ಪ್ರಾಂತದ ರಾಜಧಾನಿ

‍ಲೇಖಕರು Admin

January 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: