ಕಲ್ಲೇಶ್ ಕುಂಬಾರ್ ಕಂಡಂತೆ ‘ಹಿರೋಶಿಮಾದ ಹೂವುಗಳು’

ಕಲ್ಲೇಶ್ ಕುಂಬಾರ್

ಕನ್ನಡದ ಪ್ರಮುಖ ಬರಹಗಾರರಾದ ಡಾ. ವಿಜಯನಾಗ್ ಅನುವಾದಿಸಿರುವ ‘ಹಿರೋಶಿಮಾದ ಹೂವುಗಳು’ ಕಾದಂಬರಿಯ ಕುರಿತಾಗಿ ಬರೆಯುತ್ತಿರುವ ಈ ಸಂದರ್ಭದಲ್ಲಿ ಒಂದು ಮಾತನ್ನು ಇಲ್ಲಿ ಹೇಳಲೇಬೇಕು! ಅದೇನೆಂದರೆ, ಈ ಕಾದಂಬರಿಯನ್ನು ಓದಿದ ಯಾರಿಗಾದರೂ ತಮ್ಮ ಸುತ್ತಲಿನ ಸಕಲವೂ ಮನುಷ್ಯನ ಕ್ರೌರ್ಯದ ಕಾರಣವಾಗಿ ಗಾಯಗೊಂಡಂತೆಯೂ, ಆ ಗಾಯದ ಆಳದಿಂದ ಅನಾದಿಕಾಲದ ಶೋಕದ ಕೀರಲು ಗೀತೆಯೊಂದು ಹೊಮ್ಮಿ ಬಂದು, ಮೈಮನದ ತುಂಬೆಲ್ಲ ಅದೇ ಗಾಯದಿಂದ ವಸರಿದ ಕೀವು- ರಕ್ತವನ್ನು ಸವರಿದಂತೆಯೂ ಭಾಸವಾಗುತ್ತದೆ! ಹಾಗೆ ನೋಡಿದರೆ, ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಮನುಷ್ಯ, ತನ್ನ ಅಧಿಪತ್ಯವನ್ನು ಸಾಧಿಸುವುದಕ್ಕಾಗಿಯೇ ಮನುಷ್ಯನ ಮೇಲೆಯೇ ಕ್ರೌರ್ಯವನ್ನು ಮೆರೆಯುವ ಕ್ರಿಯೆಯು ಹೇಸಿಗೆಯನ್ನು ತರಿಸುವಂತದ್ದು.

ಈ ಲೋಕದಲ್ಲಿ ಯಾವುದೂ ಶಾಶ್ವತವಲ್ಲ; ಹಾಗೆಯೇ ಈ ಲೋಕಕ್ಕೆ ಯಾರೂ, ಯಾವುದೂ ಅನಿವಾರ್ಯವೂ ಅಲ್ಲ! ತನ್ನ ಅಳಿವು ಉಳಿವನ್ನು ಸ್ವಯಂ ತಾನೇ ನಿಭಾಯಿಸುವ ಕಲೆಯನ್ನು ಅರಿತಿರುವ ಈ ಲೋಕವನ್ನು ತನ್ನದೆಂದು ಅಹಂಮಿಕೆಯನ್ನು ಮೆರೆಯುವ ಮನುಷ್ಯನಿಗೆ ಜಪಾನಿನ ಹೀರೋಶೀಮಾ ಮತ್ತು ನಾಗಾಸಾಕಿ ನಗರಗಳ ಮೇಲಿನ ಅಣುಬಾಂಬ್ ದಾಳಿಯಿಂದ ಉಂಟಾದ ಘೋರ ಅನಾಹುತವು ಒಂದು ಪಾಠವಾಗಬೇಕಿದೆ. ಶಾಂತಿಪಥವೊಂದೇ ಮನುಕುಲದ ಒಳಿತಿನ ದಾರಿಯೆಂದು ಅರಿಯಬೇಕಾಗಿದೆ ಎಂಬುದನ್ನು ಈ ಕಾದಂಬರಿಯ ಓದುಗನ ಅರಿವಿಗೆ ತರುತ್ತದೆ.

ಡಾ. ವಿಜಯನಾಗ್ ಅನುವಾದಿಸಿರುವ’ಹಿರೋಶಿಮಾದ ಹೂವುಗಳು’ ಕಾದಂಬರಿಯ ಮೂಲ ಲೇಖಕಿ ಎದಿತಾ ಮೋರಿಸ್. ಈಕೆಯನ್ನು ಜಗತ್ತಿನ ಶ್ರೇಷ್ಠ ಕಾದಂಬರಿಕಾರ್ತಿಯನ್ನಾಗಿಸಿದ ‘ಪ್ಲವರ್ಸ್ ಆಫ್ ಹಿರೋಶಿಮಾ’ ಕಾದಂಬರಿಯು ವಿಶ್ವದ ಮೂವತ್ತೊಂಬತ್ತು (39) ಭಾಷೆಗಳಿಗೆ ಅನುವಾದಗೊಂಡಿದೆ. ಡಾ. ವಿಜಯನಾಗ್ ಅವರು ಈ ಕಾದಂಬರಿಯನ್ನು ಮೂಲಕೃತಿಗೆ ಚ್ಯುತಿ ಬಾರದಂತೆ ಎಚ್ಚರ ವಹಿಸಿ ಕನ್ನಡಕ್ಕೆ ತಂದಿದ್ದಾರೆ. ನಿಜ ಹೇಳಬೇಕೆಂದರೆ, ಮೂಲ ಕೃತಿಯನ್ನು ಕನ್ನಡಕ್ಕೆ ತರುವಾಗ ಅದರ ಕಲಾತ್ಮಕತೆ ಕುಂದದಂತೆ ಅವರು ಎಚ್ಚರ ವಹಿಸಿದ್ದಾರೆ. ಅನುವಾದಕರಿಗೆ ತೊಡಕಾಗಬಹುದಾದಂಥ ಮೂಲ ಕೃತಿಯೊಳಗಿನ ಪಾತ್ರ, ಸನ್ನಿವೇಶ, ಘಟನೆ, ವಿವರಗಳನ್ನು ವರದಿರೂಪ ಪಡೆದುಕೊಳ್ಳಬಹುದಾದ ಅಪಾಯದಿಂದ ತಪ್ಪಿಸಿ, ಅವೆಲ್ಲವುಗಳನ್ನು ಸುಂದರವಾದ ಕಲಾಕೃತಿಯಂತೆ ಅರಳಿಸಿದ್ದಾರೆ.

ಇಡಿಯಾಗಿ ಕಾದಂಬರಿಯ ಆಶಯವೇ ಮನುಷ್ಯನ ಅಧಿಕಾರ ಲಾಲಸೆಯ ಕಾರಣವಾಗಿ ಉಂಟಾಗಬಹುದಾದ ಘೋರ ದುರಂತದ ಚಿತ್ರಣವನ್ನು ಕಟ್ಟಿಕೊಡುವುದಾಗಿದೆ. ಇಲ್ಲಿ, ವಿಶ್ವದ ಮೇಲೆ ಅಧಿಪತ್ಯವನ್ನು ಸಾಧಿಸಲು ಹೊರಟ ಅಮೇರಿಕಾ, 6 ಆಗಷ್ಟ 1945ರಂದು ಜಪಾನಿನ ಹೀರೋಶೀಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಮಾಡಿದ ಅಣುಬಾಂಬ್ ವಿಸ್ಫೋಟದಿಂದ ಉಂಟಾದ ಅನಾಹುತದ ಪರಿಣಾಮದ ಅಗಾಧತೆ ಎಷ್ಟಿತ್ತೆಂದರೆ ವರ್ತಮಾನ ಸಂದರ್ಭದ ಈ ಕ್ಷಣದ ವರೆಗೆ ಅಲ್ಲಿನ ಜನರು ಅದೇ ಭಯದಲ್ಲಿರುವಂತೆ ಮಾಡಿದೆಯಷ್ಟೇ ಅಲ್ಲದೇ, ಇಂದಿನವರೆಗೂ ಅಲ್ಲಿ ಹುಟ್ಟುವ ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಊನರನ್ನಾಗಿಸಿ ಹುಟ್ಟಿಸುವುದರ ಮೂಲಕ ಈ ಭೂಮಿಯ ಮೇಲಿನ ವಿಶೇಷ ಜಾತಿಯ ಮನುಷ್ಯರನ್ನಾಗಿಸಿ ಬಿಟ್ಟಿದೆ! ಈ ಘೋರ ಅನಾಹುತಕ್ಕೆ ಕಾರಣವಾದ ಲಿಟಲ್ ಬಾಯ್ ಮತ್ತು ಫ್ಯಾಟ್ ಬಾಯ್ ಎಂಬ ಎರಡು ಅಣುಬಾಂಬ್ ಗಳಿಂದ ನಾಶವಾದ ಹಿರೋಶಿಮಾ ಮತ್ತು ನಾಗಾಸಾಕಿ ಎಂಬ ಅವಳಿ ಪಟ್ಟಣಗಳಲ್ಲಿ ಒಂದಾದ ಹಿರೋಶಿಮಾ ನಗರದಲ್ಲಿನ ವಿಶೇಷವಾಗಿ ಒಂದು ಕುಟುಂಬಕ್ಕೆ ಒದಗಿ ಬಂದ ದುರಂತವನ್ನು ಕಣ್ಮುಂದೆ ತಂದು ನಿಲ್ಲಿಸುವುದರ ಮೂಲಕ ಆ ಎರಡು ಅವಳಿ ಪಟ್ಟಣಗಳು ಆ ಸಂದರ್ಭದಲ್ಲಿ ಅದೆಂಥ ಕ್ರೂರ ಮತ್ತು ಕರುಣಾಜನಕ ಸ್ಥಿತಿಯನ್ನು ಎದುರಿಸುತ್ತಿದ್ದವು ಎಂಬುದನ್ನು ಈ ಕಾದಂಬರಿ ಅರಿವಿಗೆ ತರಲು ಪ್ರಯತ್ನಿಸುತ್ತದೆ.

ಈ ಕಾದಂಬರಿಯ ಮುಖ್ಯಪಾತ್ರ ಯುಕಾ- ಸಾನ್ ಳ ಕುಟುಂಬದ ಚಿತ್ರಣವನ್ನು ಕಟ್ಟಿಕೊಡುತ್ತಲೇ ಆ ಸಂದರ್ಭದಲ್ಲಿನ,ಆ ಪ್ರದೇಶದ ಜನಸಮೂಹವು ಎದುರಿಸುತ್ತಿದ್ದ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ನೈತಿಕವಾದ ಸಂದಿಗ್ಧತೆಯ ಪರಿಯನ್ನು ಆರ್ದ್ರವಾಗಿ ಕಟ್ಟಿಕೊಡುತ್ತದೆ. ಆ ಮೂಲಕ ಮನುಷ್ಯನ ಮೇಲೆ ಅಧಿಪತ್ಯವನ್ನು ಸಾಧಿಸಬೇಕೆನ್ನುವ ಹಟದ ಕಾರಣವಾಗಿ ಮನುಷ್ಯ ಸ್ವಯಂ ತಾನೇ ಮಾಡಿಕೊಂಡ ಅಪಾಯದ ಪರಿಣಾಮ ಮತ್ತು ಅದು ತಂದೊಡ್ಡುವ ಸಂಕಟವನ್ನು ಮನಕಲಕುವಂತೆ ಅನಾವರಣಗೊಳಿಸುತ್ತದೆ. ಅಣುಬಾಂಬ್ ವಿಸ್ಫೋಟದ ನಂತರ ‘ರೇಡಿಯೇಟ್’ ಗೆ ಸಿಕ್ಕು ನರಳಿದ ಯುಕಾ- ಸಾನ್ ಳ ಗಂಡ ಫ್ಯೂಮಿಯೋ ಎದುರಿಸಿದ ದೈಹಿಕ ಹಿಂಸೆಯೊಂದಿಗೆ ಆ ಕುಟುಂಬವು ಸಾಮಾಜಿಕವಾಗಿಯೂ ಬಹಿಸ್ಕಾರಕ್ಕೊಳಗಾಗಿ ಇಂಚಿಂಚೂ ನರಳಿದ ಕಥೆಯನ್ನು ಓದುಗನ ಕಣ್ಮುಂದೆ ತಂದು ನಿಲ್ಲಿಸುತ್ತದೆ.

ಆರ್ಥಿಕವಾಗಿ ಸಬಲವಲ್ಲದ ಈ ಕುಟುಂಬದ ಯಜಮಾನಿ ಯುಕಾ- ಸಾನ್ ತನ್ನ ಎರಡು (ತಾದೆಓ ಮತ್ತು ಮಿಚಿಕೊ) ಮಕ್ಕಳು ಹಾಗೂ ತಂಗಿ ಓಹಾತ್ಸೊಳೊಂದಿಗೆ ಬದುಕು ಸವೆಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಕುಟುಂಬದ ನಿರ್ವಹಣೆಗೆ ತನ್ನ ಮನೆಯ ಕೋಣೆಯನ್ನು ಅಮೇರಿಕಾದ ಸ್ಯಾಮ್- ಸಾನ್ ಎಂಬ ವ್ಯಕ್ತಿಗೆ ಬಾಡಿಗೆ ಕೊಡುತ್ತಾಳೆ. ಈತ ವ್ಯವಹಾರಿಕವಾಗಿ ಇಲ್ಲಿಗೆ ಬಂದ ವ್ಯಕ್ತಿಯಾದರೂ ಮಾನವೀಯ ಪಾತಳಿಯ ಮೇಲೆ ಈ ಕುಟುಂಬದೊಂದಿಗೆ ಒಡನಾಡಲಾರಂಭಿಸುತ್ತಾನೆ. ಹೀಗೆ, ಯಾರದೋ ದುರಾಶೆಯ ಕಾರಣವಾಗಿ ಬಲಿಪಶುವಾದ ಕುಟುಂಬದೊಂದಿಗೆ ಅಪಾಯವನ್ನುಂಟು ಮಾಡಿದ ದೇಶ (ಅಮೇರಿಕಾ)ರಿಂದ ಬಂದ ಸ್ಯಾಮ್- ಸಾನ್ ಮಾನವೀಯತೆಯಿಂದ ವರ್ತಿಸುವುದು ಒಂದು ತೆರದಲಿ ಆಸ್ತಿ, ಅಂತಸ್ತು, ಅಧಿಕಾರ- ಈ ಎಲ್ಲವನ್ನೂ ಮೀರಿ ಮನುಷ್ಯನ ಬದುಕಿಗೆ ಪೂರಕವಾಗಿರುವ ಅಂತಃಕರಣ ಪ್ರೇರಿತವಾದ ಮನುಷ್ಯತ್ವವೇ ಮುಖ್ಯ ಎಂಬುದನ್ನು ಈ ಕಾದಂಬರಿಯು ಮೇಲುಸ್ತರಕ್ಕೆ ತಂದು ನಿಲ್ಲಿಸುತ್ತದೆ. ಇಡಿಯಾಗಿ ಕಾದಂಬರಿಯು ಮನುಷ್ಯನ ಅಧಿಕಾರ ದಾಹವನ್ನು ಸಾರಾಸಗಟಾಗಿ ವಿರೋಧಿಸುತ್ತದೆ.

ಇನ್ನು, ಈ ಕಾದಂಬರಿಯ ಆರಂಭದಲ್ಲಿ ಬರುವ ಪಂಜರದೊಳಗೆ ಬಂಧಿಯಾದ ಬುಲ್ ಬುಲ್ ಹಕ್ಕಿಯು, ಯುಕಾ- ಸಾನ್ ಳ ಕುಟುಂಬದೊಂದಿಗೆ, ಆ ಪ್ರದೇಶದಲ್ಲಿ ರೇಡಿಯೇಟ್ ಗೆ ಒಳಗಾಗಿ ನರಳುತ್ತಿರುವ ಅಸಂಖ್ಯ ಕುಟುಂಬಗಳು ನಿರ್ವಹಿಸುತ್ತಿರುವ ಹೀನಾಯವಾದ ಸಾಮಾಜಿಕ ಬದುಕಿಗೆ ರೂಪಕದಂತಿದೆ.
ಹಾಗೆಯೇ, ಈ ಕಾದಂಬರಿಯ ಅಂತ್ಯ ಭಾಗದಲ್ಲಿ ಅಣುಬಾಂಬ್ ವಿಸ್ಫೋಟದಿಂದಾಗಿ ಸಂಪೂರ್ಣ ರೋಗಗ್ರಸ್ಥಳಾಗಿ ಹಾಸುಗೆಯ ಮೇಲೆ ಮಲಗಿದ್ದ ಮಾಎದಾಸಾನ್ ನ ಹೆಂಡತಿ ಈಇಜಾಗೆ ಇನ್ನಿಲ್ಲದಂಗೆ ತೊಂದರೆ ಕೊಡುತ್ತಿದ್ದ ಮಿಂಚುಹುಳು ಹಿರೋಶಿಮಾದ ಮೇಲೆ ದಾಳೆಯೆಸಗಿದ ಅಮೇರಿಕಾದ ಅಧಿಕಾರ ಲಾಲಸೆಯ ಮನೋಸ್ಥಿತಿಗೆ ರೂಪಕದಂತಿದೆ! ವಸಂತದ ರಾತ್ರಿಯ ನಕ್ಷತ್ರಗಳಂತೆ ದಿಕ್ಕು ಬದಲಿಸಿ (ಅಣುಬಾಂಬ್ ಸ್ಫೋಟವಾದಾಗ ಹೊರಹೊಮ್ಮಿದ ಬೆಳಕಿನಂತೆ!) ಬೆಳಕನ್ನು ಚೆಲ್ಲಾಡುತ್ತ ಹಾರಾಡುತ್ತಿದ್ದ ಆ ಮಿಂಚುಹುಳುಗಳ ಧೋರಣೆಯು ಈಇಜಾಳಂಥ ಡಾ. ದೊಮೋತೋರ ಆಸ್ಪತ್ರೆಯ ವಾರ್ಡ್ ನಲ್ಲಿರುವ ಅದೇ ಅಣುಬಾಂಬ್ ದಾಳಿಗೆ ಒಳಗಾಗಿ ಸಾವು ಬದುಕಿನ ಮಧ್ಯೆ ನರಳುತ್ತಿರುವ ಬೇರೆ ಬೇರೆ ಕೇಸ್ ಗಳ ಕರುಣಾಜನಕ ಸ್ಥಿತಿಯನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ.

ಚಿಕ್ಕ ಚಿಕ್ಕ ಚಂದಿರನಂತೆ ತಾನೇ ಬೆಳಗುವಷ್ಟು ಎಲ್ಲ ರೀತಿಯಿಂದಲೂ ಸಮೃದ್ಧವಾಗಿರುವ ಅಮೇರಿಕಾ ದೇಶ ಜಗತ್ತನ್ನೇ ತನ್ನ ಕೈವಶ ಮಾಡಿಕೊಳ್ಳಬೇಕೆಂಬ ದುರಾಲೋಚನೆಯ ಕಾರಣವಾಗಿ ಇಡಿಯಾಗಿ ಮನುಕುಲವನ್ನೇ ಆಪೋಶನ ತೆಗೆದುಕೊಳ್ಳುತ್ತಿರುವುದು ಅದರ ರೋಗಗ್ರಸ್ಥ ಮನಸ್ಥಿತಿಯನ್ನು ಅರಿವಿಗೆ ತರುವಂತಿದೆ. ಆದರೆ, ದುರುಳ ಅಮೇರಿಕಾಗೆ ಇದಾವುದೂ ಮುಖ್ಯವೇ ಅಲ್ಲ! ಬದಲಿಗೆ ಅದಕ್ಕೆ ಮುಖ್ಯವಾಗುವುದು ಕೇವಲ ತನ್ನ ಬೆಳಕನ್ನು ಮಿಂಚುಹುಳುವಿನಂತೆ ವಿಶ್ವದೆಲ್ಲೆಡೆಯಲ್ಲ ಚೆಲ್ಲಾಡುತ್ತ ರಾಜಾರೋಷವಾಗಿ ನಿರಂತರವಾಗಿ ಎಲ್ಲರ ತಲೆಯ ಮೇಲೆ ಹಾರಾಡುತ್ತಲೇ ಇರುವುದಾಗಿದೆ! ಹಾಗೆ ಮಿಂಚುಹುಳುವಿನಂತೆ ತನ್ನ ಅಧಿಪತ್ಯವನ್ನು ಸಾಧಿಸುವುದಕ್ಕೋಸ್ಕರವಾಗಿ ಹಾರಾಡುವುದೇ ಅಮೇರಿಕಾದ ಕನಸಾಗಿರುವುದು ಮನುಕುಲದ ವಿನಾಶಕ್ಕೆ ನಾಂದಿ ಹಾಡುವ ಕ್ರಿಯೆಯಾಗಿದೆ ಎಂಬುದನ್ನು ಕಾದಂಬರಿಯು ಸೂಚ್ಯವಾಗಿ ಹೇಳುತ್ತದೆ.

ಪ್ರಬಲರು ಅಧಿಪತ್ಯವನ್ನು ಸಾಧಿಸುವುದು; ದುರ್ಬಲರು ಅಧಿಕಾರಸ್ಥರ ಹೀನ ಮನಸ್ಥಿತಿಯ ಕಾರಣವಾಗಿ ರೂಪುಗೊಂಡ ದುರುಳ ಧೋರಣೆಯಿಂದಾಗಿ ನರಳುತ್ತಲೇ ಇರುವುದು ಒಂದು ತೆರದಲಿ ಎಲ್ಲ ಕಾಲದ ರಾಜಕಾರಣದ ಸಂಚು ಆಗಿದೆ ಎಂಬಲ್ಲಿಗೆ ಕಾದಂಬರಿಯ ಆಶಯವು ಒಂದು ಕಾಲಘಟ್ಟದ, ಒಂದು ಪ್ರದೇಶದ ಮನುಷ್ಯ ರೂಪಿಸಿದ ದುರಂತವನ್ನು ಸಾರ್ವತ್ರೀಕರಣಗೊಳಿಸುವಲ್ಲಿ ಯಶಸ್ವಿಯಾಗಿದೆ.
ಅಲ್ಲದೇ, ರೇಡಿಯೇಟ್ ಗೆ ಒಳಗಾಗಿ ಮೈಯೊಳಗಿನ ರಕ್ತ- ಮಾಂಸವೆಲ್ಲ ಸೋರಿ ಹೋಗಿ ಎಲುಬಿನ ಗೂಡಿನಂತಾಗಿದ್ದ ಫ್ಯೂಮಿಯೋನ ದೈಹಿಕ ಸ್ಥಿತಿಗೆ ಕಾದಂಬರಿಯಲ್ಲಿ ಬರುವ ಒಡೆದು ಹೋದ ಗೊಂಬೆಯು ರೂಪಕದಂತಿದೆ.

ಒಂದು ಸಂದರ್ಭದಲ್ಲಿ ಯುಕಾ- ಸಾನ್ ಳು ಒಡೆದು ಹೋದ ಗೊಂಬೆಯನ್ನು ಕೈಯಲ್ಲಿ ಹಿಡಿದುಕೊಂಡು ತನ್ನ ಗಂಡ ಫ್ಯೂಮಿಯೋನ ರೇಡಿಯೇಟ್ ಗೆ ಒಳಗಾಗುವ ಮುಂಚಿನ ದೈಹಿಕ ಸ್ಥಿತಿಯನ್ನು ಕಲ್ಪಿಸಿಕೊಳ್ಳುತ್ತಾಳೆ. ದಷ್ಟಪುಷ್ಟವಾಗಿದ್ದ ತನ್ನ ಗಂಡ ಈಗೆಲ್ಲ ಆಕೆಯ ಕೈಗಳಲ್ಲಿ ತಲೆಯಿಟ್ಟು ಮಲಗಿಕೊಂಡಾಗಲೆಲ್ಲ ಒಡೆದು ವಿರೂಪಗೊಂಡ ಗೊಂಬೆಯಂತೆ ಎಷ್ಟೊಂದು ವಿರೂಪಗೊಂಡಂತೆ ಮತ್ತು ಸೋತು ಹೋದಂತೆ ಕಾಣುತ್ತಾನಲ್ಲ..!- ಎಂದು ಒಳಗೊಳಗೇನೆ ಮರುಗುವುದು ಇದೆಯಲ್ಲ, ಅದು.. ಅಣುಬಾಂಬ್ ವಿಸ್ಫೋಟದಿಂದಾಗಿ ಮನುಕುಲದ ಮೇಲೆ ಆದ ಘೋರ ಆಘಾತವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ! ಇಂಥ ಅನೇಕ ಸಂಗತಿಗಳು ಕಾದಂಬರಿಯುದ್ದಕ್ಕೂ ಹರಡಿಕೊಂಡಿದ್ದು ಓದುಗನ ಎದೆಯನ್ನು ತೇವಗೊಳಿಸುತ್ತದೆ.

ಹೀಗೆ, ಇದೆಲ್ಲವನ್ನೂ ಹೇಳಿ ಮುಗಿದಾದ ಮೇಲೆಯೂ ಈ ಕಾದಂಬರಿಯ ಕುರಿತಾಗಿ ಹೇಳಲೇಬೇಕಾದ ಇನ್ನೊಂದು ಬಹು ಮುಖ್ಯವಾದ ಮಾತನ್ನು ಹೇಳಲೇಬೇಕು. ಅದು, ಈ ಕಾದಂಬರಿಯನ್ನು ಓದಿದ ಯಾರಿಗಾದರೂ ತುಸು ದಿನಗಳ ಮಟ್ಟಿಗಾದರೂ ಅನ್ನ ಆಹಾರದ ಮೇಲಿನ ವ್ಯಾಮೋಹವನ್ನು ತೊರೆದು ಅಂತರ್ಮುಖಿಯಾಗುವಂತೆ ಮಾಡುತ್ತದೆ. ಅಷ್ಟರ ಮಟ್ಟಿಗೆ ಮೂಲಕೃತಿಗೆ ಎಳ್ಳಷ್ಟೂ ಕುಂದು ಬಾರದಂತೆ ಪರಿಣಾಮಕಾರಿಯಾಗಿ ಈ ಕಾದಂಬರಿಯನ್ನು ಡಾ. ವಿಜಯ್ ನಾಗ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ನಿಟ್ಟಿನಲ್ಲಿ ಬಾ. ವಿಜಯ್ ನಾಗ್ ಅವರು ಅಭಿನಂದನಾರ್ಹರು.

‍ಲೇಖಕರು Admin

January 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: