****
ಸುಧಾ ಆಡುಕಳ
ಕಾಲೇಜಿನಿಂದ ಬಂದ ಮಗ ಬಾಗಿಲು ತೆರೆಯುತ್ತಿದ್ದಂತೆ ನುಡಿದ, “ ಅಮ್ಮಾ, ನಾಳೆ ತರಗತಿಯಲ್ಲಿ ಗಾಂಧೀಜಿಯವರ ಬಗ್ಗೆ ಮಾತನಾಡಬೇಕು. ಏನಾದರೂ ಹೇಳಿಕೊಡು.”
ನಾನೆಂದೆ, “ ಅದಕ್ಕೇನಂತೆ, ನಮ್ಮ ಮನೆಯಲ್ಲಿ ಗಾಂಧೀಜಿಯವರಿಗೆ ಸಂಬಂಧಿಸಿದ ಹತ್ತಾರು ಪುಸ್ತಕಗಳಿವೆ. ತೆಗೆದಿಡುತ್ತೇನೆ. ಓದಿಕೊ.” ಅದಕ್ಕವನು, “ನನಗೆ ಅಷ್ಟೆಲ್ಲ ಸಮಯವಿದ್ದರೆ, ನಾನೇ ಕಾಲೇಜಿನ ವಾಚನಾಲಯದಲ್ಲಿ ಕುಳಿತು ತಯಾರಿ ಮಾಡುತ್ತಿದ್ದೆ. ನೀನೇ ಏನಾದರೂ ಹೇಳು, ಹತ್ತು ನಿಮಿಷ ಮಾತನಾಡುವಷ್ಟು.” ಎಂದುತ್ತರಿಸಿದ.
ನಾನು ಗಾಂಧೀಜಿಯವರ ‘ನನ್ನ ಸತ್ಯಾನ್ವೇಷಣೆ’ ಪುಸ್ತಕವನ್ನು ತೆರೆದು ಅವರ ಜೀವನದ ಮುಖ್ಯ ಘಟನೆಗಳನ್ನು ಗುರುತು ಹಾಕತೊಡಗಿದೆ. ಇದನ್ನು ನೋಡಿದ ಮಗ, “ಆಮ್ಮಾ, ನಾನೇನು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗಾಂಧಿ ಜಯಂತಿಯ ಭಾಷಣ ಮಾಡಲು ಹೋಗುತ್ತಿಲ್ಲ. ಅದೇ ನೀವೆಲ್ಲ ಸ್ನೇಹಿತರು ಸೇರಿದಾಗ ಗಾಂಧಿಯಿಸಂ ಅಂತ ವಿಮರ್ಶಾತ್ಮಕವಾಗಿ ಮಾತನ್ನಾಡುತ್ತೀರಲ್ಲ. ಆ ಥರ ಕೆಲವು ಮುಖ್ಯಾಂಶಗಳನ್ನು ಹೇಳಿಕೊಡು” ಎಂದು ಅಸಲಿ ವಿಷಯಕ್ಕೆ ಬಂದ.
ನಿಜವಾಗಿ ನಡೆದಿರುವುದು ಇಷ್ಟು. ಅವನ ಭಾಷಾ ಶಿಕ್ಷಕರು ಗಾಂಧೀಜಿಗೆ ಸಂಬಂಧಿಸಿದ ಪಾಠ ಮಾಡುತ್ತಿರುವಾಗ, ಇವನ ಸ್ನೇಹಿತರೆಲ್ಲ ಗಾಂಧೀಜಿಯವರ ವಿರುದ್ಧವಾಗಿ ಏನೆಲ್ಲವನ್ನು ಹೇಳಿದ್ದಾರೆ. ಮನೆಯಲ್ಲಿ ನಮ್ಮ ಮಾತುಕತೆಯನ್ನು ಅಲ್ಪ ಸ್ವಲ್ಪ ಕೇಳಿಸಿಕೊಂಡಿರುವ ಇವನು ಅದನ್ನು ವಿರೋಧಿಸಿದ್ದಾನೆ. ಹಾಗಾಗಿ ತರಗತಿಯಲ್ಲೊಂದು ಬಿಸಿಬಿಸಿ ಚರ್ಚೆ ನಡೆದಿದೆ.
ಗಾಂಧೀಜಿಯವರ ಜೀವನದ ನಡೆ ಮತ್ತು ವಿಚಾರಧಾರೆ ಇತ್ತೀಚಿನ ಯುವಜನರಿಗೆ ಅಪಥ್ಯವಾಗಿರುವುದರಿಂದ ವಿರೋಧಿಸುವವರ ಕೈ ಮೇಲಾಗಿದೆ. ಪಾಪ, ಮಾಸ್ತರರಿಗೆ ಈಚೆಗೆ ಹೌದೆನ್ನುವಂತೆಯೂ ಇಲ್ಲ, ಅಲ್ಲಗಳೆಯಲೂ ಬಾರದು. ಹಾಗಾಗಿ ನಾಳೆ ಇವನು ಗಾಂಧೀಜಿಯ ವಿಚಾರಧಾರೆಗಳ ಬಗ್ಗೆ ಮಾತನ್ನಾಡುತ್ತಾನೆ, ಮತ್ತೆ ಚರ್ಚೆ ಮಾಡೋಣ ಎಂದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.
ವಿಷಯ ಸ್ವಲ್ಪ ಗಹನವಾಗಿದೆಯೆಂದು ಅರಿತ ನಾನು ಮಗನಿಗೆ ಅವನ ಎಲ್ಲಾ ಕೆಲಸಗಳನ್ನು ಮುಗಿಸಿ ಬರುವಂತೆಯೂ, ಮತ್ತೆ ನಾವು ಬಿಡುವಾಗಿ ಗಾಂಧೀಜಿಯ ಬಗ್ಗೆ ಚರ್ಚಿಸೋಣವೆಂದು ಹೇಳಿದೆ.
ಮತ್ತೆ ನಾವಿಬ್ಬರೂ ಒಟ್ಟಿಗೆ ಸೇರುವಾಗ ಜಗವೆಲ್ಲ ಮಲಗುವಷ್ಟು ರಾತ್ರಿಯಾಗಿತ್ತು. ತುಂಬಿದ ಚಂದ್ರನ ಬೆಳಕಿನಡಿಯಲ್ಲಿ ಕುಳಿತು ನಾವು ಗಾಂಧೀಜಿಯ ಬಗ್ಗೆ ಮಾತನಾಡತೊಡಗಿದೆವು. ಮಗ ಮೊದಲಿಗೆ ಅವನ ಸ್ನೇಹಿತರು ಗಾಂಧೀಜಿಯ ಬಗೆಗೆ ಮಾಡಿರುವ ಆರೋಪಗಳ ಪಟ್ಟಿಯನ್ನೇ ನೀಡತೊಡಗಿದ.
ಗಾಂಧೀಜಿಯವರದು ಸದಾ ನಾಟಕೀಯ ನಡೆ, ಅವರ ಹೋರಾಟ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಲ್ಲ, ಅವರದು ಎಂದಿದ್ದರೂ ಹಿಂದೂ ವಿರೋಧೀ ನಡೆ, ಅವರು ಮನಸ್ಸು ಮಾಡಿದ್ದರೆ ಭಗತ್ ನಂತವರನ್ನು ಉಳಿಸಬಹುದಿತ್ತು,ಅವರ ಉಪವಾಸ, ಸರಳ ಜೀವನ ಎಲ್ಲವೂ ನಾಟಕ, ಅವರ ಕುಟುಂಬವನ್ನೇ ಅವರು ನರಳಿಸಿದರು…
ನಾನು ಅವನ ಅಹವಾಲುಗಳನ್ನೆಲ್ಲ ಮೌನವಾಗಿ ಕೇಳುತ್ತಾ ಕುಳಿತೆ. ಅವನೆಂದ, “ನನಗೆ ತಿಳಿದಿದೆ ಇವೆಲ್ಲವೂ ನಿಜವಲ್ಲವೆಂದು. ಆದರೆ ಹೇಗೆ ಹೇಳುವುದು ಅವರಿಗೆಲ್ಲ ?” ಉತ್ತರ ನೀಡುವುದು ಕಷ್ಟವೆನಿಸಿತು.
ಸುಮ್ಮನೆ ಅವನನ್ನು ಕರೆದುಕೊಂಡು ಕಂಪ್ಯೂಟರ್ ಕೊಠಡಿಯತ್ತ ನಡೆದೆ. ಎಟೆನ್ ಬರೋ ನ ಗಾಂಧಿ ಚಲನಚಿತ್ರವನ್ನು ಹಚ್ಚಿದೆ. ಇಬ್ಬರೂ ಕುಳಿತು ಸುಮ್ಮನೆ ನೋಡಿದೆವು. ಚಿತ್ರ ಮುಗಿಯುವಾಗ ಮನಸ್ಸು ತಿಳಿಯಾಗಿತ್ತು. ಬೆಳಗಾಗಲು ಕೆಲವೇ ಗಂಟೆಗಳು ಉಳಿದಿದ್ದವು.
ಬೆಳದಿಂಗಳಿನಲ್ಲಿ ಕುಳಿತು ಅವನಲ್ಲಿ ಕೇಳಿದೆ, “ನಾಳೆ ತರಗತಿಯಲ್ಲಿ ಏನು ಹೇಳ್ತೀಯ?” ಮಗ ದೂರದ ದಿಗಂತ ದಿಟ್ಟಿಸುತ್ತ ನುಡಿದ, “ ಬಹುಶ: ಇಷ್ಟೇ ಹೇಳಿದರೆ ಸಾಕೆನಿಸುತ್ತದೆ, ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಯಾರಿಗಾದರೂ ಹೇಳಲು ಸಾಧ್ಯವಾದರೆ ಅದು ಆ ಮಹಾತ್ಮನಿಗೆ ಮಾತ್ರ!”
ಬೆಳದಿಂಗಳ ಆಕಾಶದಲ್ಲಿ ಗಾಂಧಿ ನಕ್ಕಂತಾಯಿತು!





0 Comments