ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗರಾಜ ಬಸರಕೋಡ ಕವಿತೆ- ಹೀಗೆ ನಡೆಯಬೇಕು…

ನಾಗರಾಜ ಬಸರಕೋಡ

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ !
ಶಿವಶಿವೆಯರು ನಮ್ಮ
ನೋಡಲೆಂದು ಇಳೆಗಿಳಿದು ಬರಬೇಕು
ಕೃಷ್ಣ-ರಾಧೆಯರು ತುಸು ಅಸೂಯೆಪಡಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ
ಆ ರೂಮಿ ಇದ್ದಾನೆ ನೋಡು !
ಜಲಾಲುದ್ದೀನು
ಅವ ನಮ್ಮ ಬಗೆಯ ಬನ್ನಿಸೆ
ಹೊಸ ಪದಗಳು ಸಿಗದೆ ಕೈ-ಕೈ ಹಿಸುಕಿಕೊಳ್ಳಬೇಕು
ಕಾಳಿದಾಸ ಮತ್ತೊಂದು
ಮೇಘದೂತಕ್ಕೆ ಅಣಿಯಾಗಬೇಕು

ನಾವಿಬ್ಬರೂ ಕೈ-ಕೈ ಹಿಡಿದು ಹೀಗೆ ನಡೆಯಬೇಕಲ್ಲ
ಈ ಭೂಮಿ ಆ ಬಾನಿಗಿದು
ಸಾಧ್ಯವಾಗದ್ದಕ್ಕೆ ಕನಲಿ ಕರುಬಬೇಕು
ಉರಿದುರಿದೇ ಒಬ್ಬಂಟಿ ತಿರುಗುತ್ತ
ಆಯು ಕಳೆದ ಸೂರ್ಯ
ಪಶ್ಚಾತ್ತಾಪದಲಿ ಸಮುದ್ರಕೆ ಬಿದ್ದು ಸಾಯಲೆತ್ನಿಸಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ !
ಇಳಿವ ಮಳೆಗೂ,ಇಳೆಯ ಪುಳಕಕೂ
ಹೊಸ ವ್ಯಾಖ್ಯಾನ ಸಿಕ್ಕು
ಝುಮ್ಮೆನೆ ಒಲವು
ಹಸಿರೊಡೆಯಬೇಕು
ಸೋತ ರೆಕ್ಕೆ, ಬತ್ತಿದ ಕಂಗಳು
ಬರಡೆದ್ದ ಎದೆಗಳಲ್ಲಿ
ತೇವ ಜಿನುಗಿ
ಪ್ರೇಮವೆಂಬ ಸಂಜೀವಿನಿಯ ಸಾಕ್ಷೀಕರಿಸಬೇಕು

ನಾವಿಬ್ಬರೂ ಕೈ-ಕೈ ಹಿಡಿದು
ಹೀಗೆ ನಡೆಯಬೇಕಲ್ಲ
ಪ್ರೇಮದಲಿ ಸತ್ತವರಿಗಾಗಿ
ಎಚ್ಚೆತ್ತು ಮಿಡಿಯಬೇಕು ಮತ್ತಾ
ದೇವರು ಕಣ್ಣೀರು ಹಾಕಬೇಕು
ಕೈಯೊಳಗಿನ ಪಾಶ ಬಿಸುಟು
ಕೊಲುವ ಕಾಯಕದ ಕಾಲನು
ಗುಲಾಬಿ ಹಿಡಿದು ಹೊರಡಬೇಕು.

‍ಲೇಖಕರು avadhi

29 March, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading