ಗೀತಾ ಕುಂದಾಪುರ ಓದಿದ ‘ಖಾಲಿ ಹಾಳೆ’

ಗೀತಾ ಕುಂದಾಪುರ

ಗೀತಾ ಅವರು ನೇರವಾಗಿ ಮನುಷ್ಯನ ಮನಸ್ಸಿಗೇ ಲಗ್ಗೆ ಇಟ್ಟು ಅತೀ ಸೂಕ್ಷ್ಮ ಭಾವನೆಗಳನ್ನೂ ಹೊರಗೆಳೆದು ಓದುಗರ ಮುಂದೆ ಹರಡುವುದರಲ್ಲಿ ಸಿದ್ಧ ಹಸ್ತರು, ಅದನ್ನೇ ವಿಶ್ಲೇಷಿಸುತ್ತಾ ‘ಮನಸೇ ನೀನೇಕೆ ಹೀಗೆ?’ ಎನ್ನುತ್ತಾರೆ. ಪ್ರಬುದ್ಧ ಲೇಖನ ಹಾಗೂ ಕವಿತೆಗಳಿಂದ ‘ಗೀತಾ ಜೀ ಹೆಗಡೆ ಕಲ್ಮನೆ’ ಸಾಹಿತ್ಯ ಪ್ರೇಮಿಗಳಿಗೆ ಪರಿಚಿತರು. ‘ಖಾಲಿ ಹಾಳೆ’ ಗೀತಾ ಅವರ ಮೊದಲ ಕಥಾಸಂಕಲನ, ಹಾಗೂ ಎರಡನೆಯ ಕೃತಿ, ಇದರಲ್ಲಿ ಸುಮಾರು 20 ಕಥೆಗಳಿವೆ. 

ಕಥೆಯು ಕೇವಲ ಕಥೆಯನ್ನು ಮಾತ್ರ ಬಿಚ್ಚಿಡುವುದಲ್ಲ ಒಂದು ಪ್ರಾಂತ್ಯದ ಪರಿಚಯ, ಸೊಬಗು, ಭಾಷೆ, ರೀತಿ, ರೀವಾಜನ್ನು ಪರಿಚಯಿಸಬೇಕು ಎನ್ನುತ್ತೇನೆ ನಾನು. ಗೀತಾ ಅವರು ಈ ವಿಷಯದಲ್ಲಿ ಓದುಗರಿಗೆ ನಿರಾಶೆಗೊಳಿಸುವುದಿಲ್ಲ. ಉಡುಪಿಯ ಸಮುದ್ರ ತಟದ  ಸೂರ್ಯೋದಯ, ಸೂರ್ಯಾಸ್ತ, ಮಲೆನಾಡಿನ ಮಳೆಗಾಲ, ಅಡಿಕೆ ಕೊಯಿಲು, ಹವ್ಯಕ ಸಂಭಾಷಣೆ ಎಲ್ಲವನ್ನೂ ಪರಿಚಯಿಸುತ್ತಾರೆ. ತಾಯಿ, ಮಕ್ಕಳ ಸಂಬಂಧವಾಗಲಿ, ಅಕ್ಕ ತಂಗಿಯರದ್ದಾಗಲಿ, ಅನಾಮಿಕನೊಡನೆ ನಿಸ್ವಾರ್ಥ ಪ್ರೀತಿಯಾಗಲಿ ಅದರ ಮಧುರತೆ ಓದುಗನ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ.

ಕಥಾ ಸಂಕಲನದ ಮೊದಲೆರಡು ಕಥೆಗಳಾದ ‘ಅವಳು’ ಮತ್ತು ‘ಖಾಲಿ ಹಾಳೆ’ ಅವರ ಮೊದಲ ಕೃತಿಯಲ್ಲಿರುವ ಲೇಖನದ ಜಾಡಿನಲ್ಲಿದೆ. ಮಾನವನ ಭಾವನೆಗಳು, ತಕಲಾಟವನ್ನೇ ಒರೆಗೆ ಹಚ್ಚಿ ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದಾರೆ, ಇದರಲ್ಲಿ ಕತೆ ಎಲ್ಲಿದೆ ಎಂದುಕೊಂಡೇ ಓದುತ್ತಾ ಹೋದರೆ ಕೊನೆಯಲ್ಲಿ ಗೂಗ್ಲಿ ಬಾಲಿನಂತೆ ತಿರುಗಿಕೊಂಡು ಬರುತ್ತದೆ. ಹಾಗೆಯೇ ‘ಮೌನದ ಕಣಿವೆಯಲ್ಲಿ ಮಾತಿನ ಮಂಟಪ’ ಪ್ರಕೃತಿ ಸೌಂದರ್ಯದ ವರ್ಣನೆಯಲ್ಲಿ  ಕತೆ ಮೌನವಾಗಿ ಸಾಗುತ್ತದೆ. ಈ ಮೂರು ಕಥೆಗಳು ಕಥೆಯ ಚೌಕಟ್ಟಿನಲ್ಲಿಲ್ಲವೆಂದು ಬದಿಗೊತ್ತುವಂತಿಲ್ಲ, ಬಹುಶಃ ಹೊಸ ಜಾಡು ಹಿಡಿದಿರುವ ಕಥಾ ಪ್ರಸ್ತುತಿ ಇದೇ ಆಗಿರಬಹುದು, ಆಗಬಹುದು.  

ಕಥೆಯು ಚಪ್ಪರವಾಗಿ ನಮ್ಮ ಮುಂದೆ ಹರವಿಕೊಳ್ಳುವುದು ಸಂಕಲನದ ಮೂರನೇಯ ಕಥೆಯಿಂದ, ‘ಸಂತ್ರಪ್ತಿ’ ಸುಖಾಂತ್ಯದ ಸಿಹಿ ಉಣಿಸಿದರೆ, ಕೆಲಸದ ‘ನಿಂಗಿ’ ಒಮ್ಮೆ ಮುಗ್ದಳಂತೆ, ಮತ್ತೊಮ್ಮೆ ಚಾಣಾಕ್ಷಳಾಗಿ ಕುತೂಹಲ ಕೆರಳಿಸುತ್ತ ಸಾಗಿ ಕೊನೆಯಲ್ಲಿ…. ನೀವೇ ಓದಿ. ಪ್ರತಿಯೊಬ್ಬರಿಗೂ ಜೀವನದಲ್ಲಿ ಮನದಲ್ಲಿರುವುದನ್ನು ಹೇಳಿಕೊಳ್ಳಲು ಒಂದಾದರೂ ಆತ್ಮೀಯ, ನಿಸ್ವಾರ್ಥ ಹೆಗಲು ಬೇಕೆನಿಸುತ್ತದೆ, ಆ ಹೆಗಲು ನಮ್ಮವರದ್ದೆ ಆಗಿರಬೇಕೆಂದಿಲ್ಲ,  ನಮ್ಮವರಲ್ಲದವರೂ ನಮ್ಮ ಮನಸ್ಸಿಗೆ ಹತ್ತಿರವಾಗಬಹುದು,  ಅದರಿಂದ/ಅವರಿಂದ  ಸಿಗುವ ಖುಷಿ ಸಣ್ಣದಲ್ಲ, ಅಂತಹದ್ದೇ  ಕಥೆ ‘ಆತ್ಮೀಯ’, ನಿರಾಭರಣ ಸುಂದರಿಯಂತೆ ಮನಸೆಳೆಯುತ್ತದೆ.  ಕಥೆ  ‘ಹೆತ್ತೊಡಲು’ ತಾಯಿ, ಮಕ್ಕಳ ಮಧುರ, ಆತ್ಮೀಯ ವಾತಾವರಣವನ್ನು ನಮ್ಮ ಮುಂದೆ ಸೃಷ್ಟಿಸುತ್ತದೆ, ತಮ್ಮ ಮಾತೃ ಹೃದಯದ ಪ್ರೀತಿಯನ್ನು ಮೊಗೆ, ಮೊಗೆದು ಉಣಿಸಿದ್ದಾರೆ, ಆದರೆ ಕಥೆಯ ಅಂತ್ಯ ಸ್ವಲ್ಪ ಗಂಭೀರವಾಗಬಹುದಿತ್ತು ಎನಿಸದಿರದು, ಆದರೂ ಕಥೆಯ ಸಿಹಿ ಬಹುಕಾಲ ಮನದಲ್ಲಿ ಉಳಿಯುತ್ತದೆ.  ಹಾಗೆಯೇ ‘ಬಂಧ’ ಕಥೆ ಕುಟುಂಬದ ಪ್ರಾಮುಖ್ಯತೆ, ಹಳ್ಳಿಯ ಜೀವನ, ಬೇಸಾಯದ ಬದುಕೇ ಚೆನ್ನ ಎನ್ನುವ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ, ಹಳ್ಳಿಯ ವಾತಾವರಣ ಎಂತವರನ್ನೂ ಹತ್ತಿರ ತರುತ್ತದೆ. ಈ ಎಲ್ಲಾ ಕಥೆಗಳಲ್ಲಿ ನಾವು ಅನಾಯಾಸವಾಗಿ ಕಥೆಯ ಭಾಗವಾಗುತ್ತೇವೆ, ನಾವೇ ಕಥೆಯ ಒಂದು ಪಾತ್ರವಾಗಬಹುದು ಇಲ್ಲಾ ನಮ್ಮ ಸುತ್ತ, ಮುತ್ತ ಕಥೆ ನಡೆಯುತ್ತಿರುವಂತೆ ಭಾಸವಾಗುತ್ತದೆ, ಇದೇ ಲೇಖಕಿಯ ಗಟ್ಟಿತನ.  ಕಥೆಗಳಲ್ಲಿ ಕವಿ ಹೃದಯ ಪುಟಿದೆದ್ದು ಪ್ರಕೃತಿ ಸೌಂದರ್ಯಯವನ್ನು ಓದುಗನಿಗೆ ಉಣ ಬಡಿಸುತ್ತಾರೆ, ಭಾವನೆಗಳ ಜಾಲದಲ್ಲಿ ನಮ್ಮನ್ನು ಬೀಳಿಸುತ್ತಾರೆ, ಇದೇ ಕಥೆಗಳ ಪ್ಲಸ್ ಪಾಯಿಂಟ್, ಕೆಲವೊಮ್ಮೆ ಅವೇ ಕಥೆಯಿಂದ ನಮ್ಮನ್ನು ದೂರ ಸರಿಸಿ ಬಿಡುತ್ತದೆ.  

‘ವಿದಿಯಾಟ’, ‘ವಿಧಿ ಲಿಖಿತ’, ದುರಂತ, ಹೆಸರೇ ಹೇಳುವಂತೆ ಬದುಕಿನ ಗೋಳಾಟದ ಚಿತ್ರಣ, ದುಃಖಾಂತ್ಯದ ಕಥೆಗಳು , ವಿದಿಯ ಮುಂದೆ ನಮ್ಮದೇನು ಆಟ ಅಲ್ಲವೇ? ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ವಿಧಿ ಲಿಖಿತ ಕಥೆಯಲ್ಲಿ ಅಕ್ಕ, ತಂಗಿಯರ ಬಾಂಧವ್ಯ ಬಹಳ ಚೆನ್ನಾಗಿ ಚಿತ್ರತವಾಗಿದೆ. ‘ಯಂಕನ ಜಾತ್ರೆ’ ಸಹ ದುಃಖಾಂತ್ಯವಾದರೂ ಬಾಲಕ ಯಂಕನ ಆಸೆ, ನಿರಾಸೆ ಎರಡೂ ಓದುಗನ ಮನಸ್ಸಿನಲ್ಲಿ ಉಳಿಯುತ್ತದೆ. ಮತ್ತೊಂದು ನವೀರ ಭಾವನೆಯ ಚೆಂದದ ಕತೆ ‘ನೆನಪು’, ಓದು ಮುಗಿದ ಮೇಲೆ ಕಥೆಯ ಟೈಟಲ್ ಸರಿ ಇಲ್ಲ ಎನಿಸಿದರೂ ಬಹಳ ಸುಂದರ ವಾತಾವರಣವನ್ನು  ಸೃಷ್ಟಿಸುತ್ತಾ ಹೃದಯಕ್ಕೆ ಹತ್ತಿರವಾಗುವ ಕಥೆ. 

ಲಾಟರಿ ಟಿಕೆಟ್ಟಿನ ಪರಿಚಯವೇ ಇಲ್ಲದ ಮುಗ್ದ ಆಳು ಶಂಕರ, ತಾನು ನಂಬಿದ ಒಡೆಯನೇ ಮೋಸ ಮಾಡಿದಾಗ ಆಗುವ ದುಃಖ ಸಣ್ಣದಲ್ಲ. ಶಂಕರನ ಮುಗ್ದತೆ ಮತ್ತವನ ನೋವನ್ನು ಮಲೆನಾಡಿನ ಅಡಿಕೆ ತೋಟದ ಹಿನ್ನೆಲೆ ಮತ್ತು ಅಲ್ಲಿನ ಭಾಷೆಯೊಂದಿಗೆ ಕಥೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ ಕಥೆ ‘ನೆವ’ದಲ್ಲಿ. ‘ಸ್ವಾಭಿಮಾನಿ’ ಸರಳ, ಸುಂದರ ಕಥಾವಸ್ತುವಿರುವ ಕಥೆ, ಆದರೆ ಪ್ರೇತಬಾಧೆಯ ತಿರುವಿನಿಂದಾಗಿ ದೂರವೇ ಉಳಿಯುತ್ತದೆ. 

ಕೆಲವೊಂದು ಕಡೆ ಕಥೆಯ ಹರವು ತೀವ್ರವಾದ ಭಾವನೆಗಳಿಂದಾಗಿ, ಪ್ರಕೃತಿ ಸೌಂದರ್ಯದ ವರ್ಣನೆಯಿಂದಾಗಿ   ಕವನದಂತೆ ತೋರಿದರೆ, ಇನ್ನೂ ಕೆಲವು ಕಡೆ ಕಥೆಯ ಟೈಟಲ್ ಸರಿ ಹೊಂದದು ಎನಿಸುತ್ತದೆ. ಆದರೂ ಕಥೆಗಳು ಆತ್ಮೀಯವಾದ ವಾತಾವರಣವನ್ನೂ ಸೃಷ್ಟಿಸಿಸುತ್ತದೆ, ಮನಸ್ಸಿನ ಭಾವನೆಗಳೊಂದಿಗೆ ಆಟವಾಡುತ್ತ ಹೃದಯಕ್ಕೆ ಹತ್ತಿರವಾಗುತ್ತದೆ. 

ಗೀತಾ ಅವರು ಇನ್ನೂ ಹೆಚ್ಚಿನ ಒಳ್ಳೆ ಕಥೆಗಳನ್ನು ಬರೆಯುವಂತಾಗಲಿ. 

‍ಲೇಖಕರು avadhi

March 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: