ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನವೀನ್ ಕುಮಾರ್ ಹೊಸ ಕವಿತೆ- ‘ಶಾಶ್ವತ ಕ್ಯಾಲೆಂಡರ್ ಒಂದು ಬೇಕಾಗಿದೆ’

ಎಚ್. ಆರ್. ನವೀನ್ ಕುಮಾರ್

**

ದಿನಗಳು ಓಡುತ್ತಿವೆ
ವರ್ಷಗಳು ಉರುಳುತ್ತಿವೆ
ಹೊಸ ವರ್ಷದ ಇಡೀ ಕ್ಯಾಲೆಂಡರ್ ಬದಲಾಯಿಸಿದ್ದೇನೆ, ಪುಟವನ್ನೊಂದೇ ಅಲ್ಲ… ಹೇಳಲಿಕ್ಕೇನೂ
ಹೊಸತು ಕಾಣುತ್ತಿಲ್ಲ.

ಕ್ಯಾಲೆಂಡರ್ ಬದಲಾದ ಕೂಡಲೆ
ಬದುಕು ಬದಲಾದೀತೆ ಮೂರ್ಖ ಎನಬೇಡಿ.
ಅದೇ ಹಳೆಯ ಬವಣೆ, ಕಡುಕಷ್ಟ,
ಬೆಲೆ ಏರಿಕೆಯ ಬರ್ಬರತೆ
ಅದೇ ಅತ್ಯಾಚಾರ, ಹೆಣ್ಮಕ್ಕಳ ಅವಮಾನಿಸುವ ಸುದ್ದಿಗಳು, ಧರ್ಮದ ಹೆಸರಲಿ ನರಮೇಧ,
ಅದೇ ರೈತರ ಆತ್ಮಹತ್ಯೆಯ ಚಿತ್ರಣ
ಎದುರಿಗಿದ್ದೇ ಇದೆ ಎದುರಿಸುವವರಿರುವ ತನಕ.

ಕ್ಯಾಲೆಂಡರ್ ಬದಲಾದರೂ
ಬದುಕು ಮಾತ್ರ ಬದಲಾಗಲೇ ಇಲ್ಲ.
ಹೊಸ ವರ್ಷ ಶುರುವಾತನ್ನೊಮ್ಮೆ ಸಂಭ್ರಮಿಸೋಣ ಎಂದರೆ
ಅದು ಡಿಸೆಂಬರ್ 31 ರ ರಾತ್ರಿ 12 ರ ಗಳಿಗೆಯ ಅರೆಕ್ಷಣದ ಸಂತೋಷ ಮಾತ್ರ.
ಬೆಳಗಾದರೆ ಮತ್ತದೇ ಒತ್ತಡ, ಕೆಲಸ, ಸಾಂಸಾರಿಕ ಜವಾಬ್ದಾರಿ, ಕಿತ್ತು ತಿನ್ನುವ ಸಾಲ, ಬಡತನ, ಮಕ್ಕಳಿಗೆ ಹೊಸ ವರ್ಷಕ್ಕೆ ಸಿಹಿತರಲು ಮತ್ತೆ ಸಾಲದ ಪಾಷಾಣದಲಿ ಸಿಲುಕುವಂತಾಗಿದೆ.

ಇಲ್ಲಿ ಶಾಶ್ವತ ಕ್ಯಾಲೆಂಡರ್ ಒಂದು ಬೇಕಿದೆ
ಬದುಕಿನ ಸಂಕಷ್ಟಗಳ ಬದಲಿಸುವ ಶಾಶ್ವತ ಕ್ಯಾಲೆಂಡರ್ ಬೇಕಿದೆ!

‍ಲೇಖಕರು avadhi

2 January, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading