ಲಕ್ಷ್ಮೀನಾರಾಯಣ ಭಟ್ ಓದಿದ ‘ಪ್ರೇಮ ಭಕ್ತಿ’

ಲಕ್ಷ್ಮೀನಾರಾಯಣ ಭಟ್ ಪಿ

**

“ಮಧ್ಯಕಾಲೀನ ಭಾರತೀಯ ಸಮಾಜದ ಸಾಂಸ್ಕೃತಿಕ ಆಯಾಮ: ಪ್ರೇಮ ಭಕ್ತಿ” –

ಸಿ.ಎನ್. ರಾಮಚಂದ್ರನ್;

ಅಂಕಿತ ಪುಸ್ತಕ: ಬೆಂಗಳೂರು.

ಬೆಲೆ: ರೂ.130/- ಪುಟಗಳು 122

**

ಈ ಕೃತಿ 14 – 16 ನೇ ಶತಮಾನಗಳ ಕಾಲಘಟ್ಟದ ಮಧ್ಯಕಾಲೀನ ಭಾರತದ ಮುಸ್ಲಿಂ ಅನುಭಾವೀ ಕವಿಗಳ ಕುರಿತು ಪರಿಚಯಾತ್ಮಕವಾಗಿಯೂ, ವಿಶ್ಲೇಷಣಾತ್ಮಕವಾಗಿಯೂ ಬೆಳಕು ಚೆಲ್ಲುತ್ತದೆ. 

ಈ ಪುಸ್ತಕದಲ್ಲಿ ಪ್ರೊ. ಸಿ.ಎನ್.ಆರ್. ಅವರು  ಅರೇಬಿಕ್ ಮತ್ತು ಪರ್ಶಿಯನ್ ಭಾಷೆಗಳಲ್ಲಿ ಅದ್ವಿತೀಯ ಕಾವ್ಯ ರಚಿಸಿ, ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ಕವ್ವಾಲಿ, ಗಝಲ್ ಶೈಲಿಗಳನ್ನು ಪರಿಚಯಿಸಿದ ಖ್ಯಾತಿಯ ಅಮೀರ್ ಖುಸ್ರೋ ಮತ್ತು ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಜನಪ್ರಿಯ ಕ್ಯಾಸೆಟ್ “ಶಿಶುನಾಳ ಶರೀಫರ ತತ್ವಪದಗಳ”  ಮೂಲಕ ಓದುಗರಿಗೆ ಈಗ ಚಿರಪರಿಚಿತರಾಗಿರುವ ಶಿಶುನಾಳ ಶರೀಫ; ತನ್ನ ದೋಹಾಗಳಿಂದ ಪ್ರಸಿದ್ಧರಾಗಿರುವ ಸಂತ ಕಬೀರ್ ಜೊತೆಗೆ ಕಾಲಪ್ರವಾಹದಲ್ಲಿ ಇಂದು ವಿಸ್ಮೃತಿಗೊಳಗಾಗಿರುವ ಇತರ ಮುಸ್ಲಿಂ ಕವಿಗಳ ದಾರ್ಶನಿಕ-ಸಾಹಿತ್ಯಿಕ ಕೊಡುಗೆಯ  ಕುರಿತಾಗಿಯೂ ಬರೆಯುತ್ತಾರೆ. 

ಈ ಕೃತಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ-ಆಶಯ ಏನೆಂದರೆ ಈ ಎಲ್ಲಾ ಮುಸ್ಲಿಂ ಕವಿಗಳು ತಮ್ಮ ಮತೀಯ ಧಾರ್ಮಿಕ ಚೌಕಟ್ಟುಗಳನ್ನು ಮೀರಿ/ದಾಟಿ ವ್ಯಾಪಕವಾಗಿ ಭಕ್ತಿ ಪಂಥದ, ಅದರಲ್ಲೂ ವಿಶೇಷವಾಗಿ ಹಿಂದೂ ದಾರ್ಶನಿಕತೆಯ ಹೊಳಹುಗಳನ್ನು ತಮ್ಮ ಕೃತಿಗಳ ಜೀವಾಳವಾಗಿರಿಸಿಕೊಂಡು ಸಾಮರಸ್ಯದ, ಸಹಬಾಳ್ವೆಯ ಕುರಿತು ಚಿಂತನೆ ನಡೆಸಿದ್ದು. ಮತ, ಧಾರ್ಮಿಕತೆಗಳ ನೆಲೆಯಲ್ಲಿ ಸಮಾಜ ವಿಘಟಿತಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಅನ್ಯ ಮತ, ಧರ್ಮಗಳ ಬಗ್ಗೆ ಅಸಹನೆ, ಅಸಮಾಧಾನ ಹೆಚ್ಚುತ್ತಿರುವ ಈ ವಿಷಘಳಿಗೆಯಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಜತನದಿಂದ ಕಾಯ್ದುಕೊಳ್ಳಬೇಕಾದ ಆವಶ್ಯಕತೆಯನ್ನು ಐದಾರು ಶತಮಾನಗಳ ಹಿಂದೆಯೇ ಪ್ರತಿಪಾದಿಸಿದ ಈ ಕವಿಗಳ ಕೊಡುಗೆಯನ್ನು ನೆನಪಿಸಿಕೊಡುವ ಪ್ರೊ. ಸಿ.ಎನ್.ಆರ್. ಅವರ ಈ ಕೃತಿ ಬಹು ಮಹತ್ವದ್ದು ಎಂಬುದರಲ್ಲಿ ಎರಡು ಮಾತಿಲ್ಲ. 

ಇಲ್ಲಿ ನನಗೆ ಮುಖ್ಯವೆಂದು  ಅನಿಸುವ ಇನ್ನೊಂದು ಪ್ರಮುಖ ಅಂಶ ಎಂದರೆ – ಯಾವುದೇ ‘ಒಂದು’ ತಾತ್ವಿಕ, ದಾರ್ಶನಿಕ ಸಿದ್ಧಾಂತ – ಅದು ಜನಮಾನಸದಲ್ಲಿ ಸ್ವೀಕೃತವಾಗುವ ಹಂತದಲ್ಲಿ [ಮತ್ತು ಸ್ವೀಕೃತಗೊಂಡ ಬಳಿಕವೂ ಕೂಡಾ] ‘ಅನೇಕ’ ಕವಲುಗಳಾಗಿ ‘ಒಡೆಯುವುದು’ ಮತ್ತು ಈ ‘ಕವಲುಗಳು’ ಮೂಲದಲ್ಲಿದೆಯೆಂದು ತೋರುವ ವಿರೋಧಾಭಾಸಗಳನ್ನೆಲ್ಲ ಅಂತಸ್ಥಗೊಳಿಸಿಕೊಂಡು ಹೊಸನೆಲೆಯ ನಿರ್ವಚನೆಗೆ ಅನುವು ಮಾಡಿಕೊಡುತ್ತಾ ಒಂದು ಧಾರ್ಮಿಕ/ಸಾಮಾಜಿಕ ಆಯಾಮವನ್ನು ಪಡೆದುಕೊಳ್ಳುವ ಒಂದು ವಿಶಿಷ್ಟ, ವಿಚಿತ್ರ ಪ್ರಕ್ರಿಯೆ ನನಗೆ ತುಂಬಾ ಕುತೂಹಲ ಹಾಗೂ ವಿಸ್ಮಯವನ್ನು ಉಂಟುಮಾಡುವ ವಿದ್ಯಮಾನ!!  ಇದು ತಾತ್ವಿಕತೆಯ ಸಾಧಾರಣೀಕರಣಕ್ಕೆ ಒಂದು ಅತ್ಯುತ್ತಮ ನಿದರ್ಶನ ಹಾಗೂ ಇದು ಕಾಲ, ದೇಶ, ಭಾಷೆ, ಮತ, ಧರ್ಮಗಳನ್ನು ಮೀರಿ ಸಕಲ ತಾತ್ವಿಕ, ಆಧ್ಯಾತ್ಮಿಕ ಚಿಂತನೆಗಳಿಗೆ ಸಲ್ಲುವ ಸಾರ್ವಕಾಲಿಕ ಸಹಜ ಪ್ರಕ್ರಿಯೆ ಎಂದು ನನ್ನ ಅನಿಸಿಕೆ. ಉದಾಹರಣೆಗೆ ‘ದೇವರ’ ಕುರಿತು ಮೌನವಾಗಿರುವ ಬೌದ್ಧ ಧರ್ಮ ‘ಹೀನಯಾನ’ ಹಾಗೂ ‘ಮಹಾಯಾನ ಎಂಬೆರಡು ವಿರುದ್ಧ ಧ್ರುವಗಳಾಗಿ ಒಡೆದದ್ದು [ಇನ್ನೂ ಅನೇಕ ಕವಲುಗಳಿವೆ, ಬಿಡಿ.] ಹಾಗೂ ಬುದ್ಧನನ್ನೇ ದೇವರನಾಗಿಸಿದ್ದು; ಶಂಕರಾಚಾರ್ಯರಿಂದ ಪ್ರವರ್ತಿತ ‘ಅದ್ವೈತ’ ಸಿದ್ಧಾಂತಕ್ಕೆ ಕಾಲಾನುಕ್ರಮದಲ್ಲಿ ಮಧ್ವಾಚಾರ್ಯರಿಂದ ಪ್ರತಿಪಾದಿತ ‘ದ್ವೈತ’ ಸಿದ್ಧಾಂತ ಒಡ್ಡಿದ ತಾತ್ವಿಕ ವಿರೋಧ ಹಾಗೂ ಇವೆರಡರ ಸಮನ್ವಯದ ರಾಮಾನುಜಾಚಾರ್ಯರಿಂದ ಪ್ರತಿಷ್ಠಾಪಿತ ‘ವಿಶಿಷ್ಟಾದ್ವೈತ’ವನ್ನು ನೋಡಬಹುದು. ಈ ಉದಾಹರಣೆಯನ್ನು ಇಲ್ಲಿಗೇ ಸೀಮಿತವಾಗಿರಿಸಿಕೊಂಡು ಮತ್ತೆ ಪ್ರೊ. ಸಿ.ಎನ್.ಆರ್. ಅವರ ಕೃತಿಗೆ ಮರಳೋಣ. 

‘ಮಧುರ ಭಕ್ತಿ ಮತ್ತು ಮುಸ್ಲಿಮ್ ಕವಿಗಳು’ ಎನ್ನುವ ಮೊದಲ ಅಧ್ಯಾಯದಲ್ಲಿ ಪ್ರೊ. ಸಿ.ಎನ್.ಆರ್. ಬರೆಯುತ್ತಾರೆ: “ನಿರ್ಗುಣ ಬ್ರಹ್ಮನನ್ನಾರಾಧಿಸುವ ಮತ್ತು ಅವತಾರ ಕಲ್ಪನೆಯನ್ನು ಒಪ್ಪದ ಇಸ್ಲಾಂ ಧರ್ಮಾನುಯಾಯಿಗಳು ಮಧುರ ಭಕ್ತಿಯನ್ನು ಆಚರಿಸುವುದು ನಿಜಕ್ಕೂ ಆಶ್ಚರ್ಯಕರ” [ಪು.16-17.]. ಮಧುರ ಭಕ್ತಿ ಎಂದರೆ ಲಿಂಗಭೇದರಾಹಿತ್ಯವಾಗಿ ತನ್ನ ಇಷ್ಟದೈವವನ್ನು ಪತಿಯಾಗಿ ಕಲ್ಪಿಸಿಕೊಂಡು ಆತನನ್ನು ಸೇರುವ ತೀವ್ರ ಹಂಬಲವನ್ನು ವ್ಯಕ್ತಪಡಿಸುವುದು; ಉದಾಹರಣೆಗೆ ಅಕ್ಕ ಮಹಾದೇವಿ ಹಾಗೂ ಸಂತ ಮೀರಾಬಾಯಿ. ಇದಕ್ಕೆ ಸಂವಾದಿಯಾಗಿ ಅಮೀರ್ ಖುಸ್ರೋನ ಹಲವು ಕವನಗಳನ್ನು ಪ್ರೊ. ಸಿ.ಎನ್.ಆರ್. ಉದಾಹರಿಸುತ್ತಾರೆ.

 ನೀನೆ ನನ್ನ ಪತಿ, ಓ ಸರ್ವಶಕ್ತ ಪ್ರಿಯಕರ; 

       ನಿನ್ನ ಬಣ್ಣದಲ್ಲಿಯೇ ನನ್ನನ್ನು ಅದ್ದು. [ಪು.24] 

 ನಾನು ನೀನಾಗಿದ್ದೇನೆ, ನೀನು ನಾನಾಗಿದ್ದೀಯ; ನಾನು ದೇಹ, ನೀನು ಆತ್ಮ. 

 ಇಲ್ಲಿಂದ ಮುಂದೆ, ನೀನು ಬೇರೆ ನಾನು ಬೇರೆ ಎಂದು ಯಾರೂ ಹೇಳುವಂತಿಲ್ಲ.    

       [ಪು.27]

ಪ್ರೊ. ಸಿ.ಎನ್.ಆರ್. ಹೇಳುವಂತೆ “ತನ್ನ ಪ್ರಿಯಕರನಿಗಾಗಿ ಪ್ರಿಯತಮೆ ಹಂಬಲಿಸುವುದು ಭಕ್ತನು ತನ್ನ ಇಷ್ಟದೈವದ ಸಾನ್ನಿಧ್ಯಕ್ಕಾಗಿ ಹಂಬಲಿಸುವುದರ ಅತ್ಯಂತ ಸಮರ್ಥ ರೂಪಕವಾಗುತ್ತದೆ. ಭಕ್ತಿ ಕಾವ್ಯವೂ ಈ ನೆಲೆಯಲ್ಲಿಯೇ ಅನ್ಯೋಕ್ತಿಯ [allegory]  ಸ್ವರೂಪವನ್ನು ಪಡೆಯುತ್ತದೆ” [ಪು.14]. ಇಲ್ಲಿ ಕವಿ ತನ್ನನ್ನು ‘ಭಕ್ತೆ’ಯಾಗಿ ಕಲ್ಪಿಸಿಕೊಳ್ಳುತ್ತಾನೆ. ಇದು ‘ಲಿಂಗ’ ವನ್ನು ದಾಟುವ/ಮೀರುವ ಪ್ರಕ್ರಿಯೆ. ಮೇಲಿನ ಎರಡನೇ ಉದಾಹರಣೆ ಅದ್ವೈತ ಸಿದ್ಧಾಂತದ ‘ಅಹಂ ಬ್ರಹ್ಮಾಸ್ಮಿ’ ತತ್ವದ ಪ್ರತಿಧ್ವನಿಯಂತೆ ಕಾಣುತ್ತದೆ ಅಲ್ಲವೇ! ಇದು ಮತ, ಧರ್ಮವನ್ನು ಮೀರುವ/ದಾಟುವ ಪ್ರಕ್ರಿಯೆ. “ಭಕ್ತಿ ಚಳುವಳಿಗಳ ಒಂದು ವಿಶಿಷ್ಟ ಗುಣವನ್ನು ವಿವರಿಸುವಾಗ ಜಾನ್ ಸ್ಟ್ರಾಟನ್ ಹಾಲಿ – John Straton Hawley – ಎಂಬ ಅಮೆರಿಕನ್ ವಿದ್ವಾಂಸರು ’ದಾಟುವಿಕೆ’ – crossing – ಎಂಬ ಪರಿಕಲ್ಪನೆಯನ್ನು ಕಟ್ಟಿಕೊಡುತ್ತಾರೆ. ಅವರ ದೃಷ್ಟಿಯಲ್ಲಿ, ಮಧ್ಯಕಾಲೀನ ಸಮಾಜದಲ್ಲಿ ಭಾರತದುದ್ದಕ್ಕೂ ಹರಡಿದ್ದ ಭಕ್ತಿಪಂಥಗಳ ಒಂದು ವೈಶಿಷ್ಟ್ಯವೆಂದರೆ, ಅದು ಜಾತಿ-ಮತ-ಧರ್ಮ-ಲಿಂಗ-ಭೇದಗಳ ಗೋಡೆಗಳನ್ನು ‘ದಾಟುವ’ ಪ್ರಕ್ರಿಯೆಗೆ ಇಂಬುಕೊಟ್ಟಿತು. ಈ ಪುಸ್ತಿಕೆಯು ಆ ಪರಿಕಲ್ಪನೆಯ ಚೌಕಟ್ಟಿನಲ್ಲಿ ಕ್ರಿಯಾಶೀಲವಾಗಿದ್ದ ‘ದಾಟುವ’ ಪ್ರಕ್ರಿಯೆಯ ಭಿನ್ನ ಆಯಾಮಗಳನ್ನು ಗುರುತಿಸಲು ಪ್ರಯತ್ನಿಸುತ್ತದೆ [ಪು.12].

ಪಂಜಾಬಿ ಭಾಷೆಯಲ್ಲಿ “ಅಬ್ಯತ್” [ಎರಡು ಸಾಲುಗಳ ಒಂದು ಪದ್ಯ – ದ್ವಿಪದಿ] ಎಂಬ ಛಂದೋರೂಪದಲ್ಲಿ ಸುಲ್ತಾನ್ ಬಹು [1630-1691; ‘ಬಹು’ ಎಂದರೆ ‘ದೇವರೊಡನೆ ಇರುವವನು’ ಎಂಬರ್ಥ] ಎಂಬ ಸೂಫಿ ಪಂಥಾನುಯಾಯೀ  ಕವಿ  ರಚಿಸಿದ ಕವನಗಳು ಬಹಳ ಅರ್ಥಪೂರ್ಣವಾಗಿವೆ. ಅವುಗಳಲ್ಲೊಂದು ಈ ಅಬ್ಯತ್:

 ಈ ದೇಹ ನನ್ನೊಡೆಯನ ದೇವಾಲಯ; ಅದರೊಳಗನ್ನು ಇಣಿಕಿ ನೋಡು. 

 ಓ ಅನ್ವೇಷಕನೆ ! ನಿನಗೆ ಯಾವ ದೇವದೂತನ ಸಹಾಯವೂ ಬೇಕಿಲ್ಲ; ಜೀವಜಲ  

        ನಿನ್ನೊಳಗೇ ಇದೆ. [ಪು.34]

ಇದರ ಮೊದಲ ಸಾಲು ಬಸವಣ್ಣನವರ ‘ದೇಹವೇ ದೇಗುಲ’ – [“ಉಳ್ಳವರು ಶಿವಾಲಯವ ಮಾಡುವರು”] ಎಂಬ ಉಕ್ತಿಯನ್ನು ನೆನಪಿಸುತ್ತದೆ, ಅಲ್ಲವೇ! ಅಂತೆಯೇ ಮೂರು ದ್ವಿಪದಿಗಳ ಇನ್ನೊಂದು ಅಬ್ಯತ್:

 ನನ್ನ ಒಡೆಯನು ಹತ್ತಿರದಲ್ಲಿಯೇ ಇದ್ದಾನೆ. ಆದರೆ ದೂರದಲ್ಲಿರುವಂತೆ 

        ಭಾಸವಾಗುತ್ತದೆ; 

 ಅವನನ್ನು ಹೇಗೆ ಹುಡುಕಬೇಕೆಂದು  ನಿನಗೆ ಗೊತ್ತಿಲ್ಲ. 

 ಹೊರಗೆ ಹುಡುಕುವುದರಿಂದ ನೀನೇನೂ ಸಾಧಿಸಲಾರೆ, 

       ನಿನ್ನೊಳಗೇ ಅವನು ಕುಳಿತಿದ್ದಾನೆ. 

ನೀನು ಕೊಳಕೆಲ್ಲವನ್ನೂ ಹೊರಹಾಕಿದಾಗ ಎಲ್ಲಾ ಮುಸುಕುಗಳೂ ಮರೆಯಾಗುತ್ತವೆ, ಮತ್ತು 

ಕನ್ನಡಿಯಂತೆ ನಿನ್ನ ಹೃದಯವು ಹೊಳೆಯುತ್ತದೆ.     

‘ದೇವರು ತನ್ನೊಳಗೇ ಇದ್ದಾನೆ’ ಎಂಬ ಆಶಯದ ಈ ಅಬ್ಯತ್ ಶ್ವೇತಾಶ್ವತರ ಉಪನಿಷತ್ ಹೇಳುವ “ಎಳ್ಳಿನಲ್ಲಿ ಎಣ್ಣೆ, ಮೊಸರಿನಲ್ಲಿ ಬೆಣ್ಣೆ ಇರುವಂತೆ ಆತ್ಮವು ತನ್ನೊಳಗೇ ಆಸ್ತಿತ್ವದಲ್ಲಿದೆ” ಎಂಬ ಈ ಮಾತಿಗೆ ಸಂವಾದಿಯಾಗಿದೆ:

      ತಿಲಸು ತೈಲಂ ದಧಿನೀವ ಸರ್ಪಿ-

      ರಾಪಃ ಶ್ರೋತಃಸ್ವರಣೀಷುಕಾಗ್ನಿಃ ।

      ಏವಮಾತ್ಮಾತ್ಮನಿ ಗೃಹ್ಯತೇ …   [1:16]  

ಸಂತ ಕವಿ ಕಬೀರ್ ಕೂಡಾ ಇದೇ ಮಾತನ್ನು ಪ್ರತಿಧ್ವನಿಸುತ್ತಾನೆ:

 ಜೈಸೆ ತಿಲ್ ಮೆ  ತೇಲ್ ಹೈ, ಜ್ಯೋ ಚಕಮಕ್ ಮೆ ಆಗ್ /

 ತೇರಾ ಸಾಯೀ ತುಝ್ ಮೆ ತೂ ಜಾಗ್ ಸಕೇತೋ ಜಾಗ್ //  [ಪು.53]         

 [ಎಳ್ಳಿನಲ್ಲಿ ಎಣ್ಣೆ ಇರುವಂತೆ, ಚಕಮಕಿ ಕಲ್ಲಿನಲ್ಲಿ ಬೆಂಕಿ ಇರುವಂತೆ, ನಿನ್ನ ದೇವರು   

         ನಿನ್ನೊಳಗೇ ಇದ್ದಾನೆ;

  ಅವನನ್ನು ಎಚ್ಚರಿಸಲು ಸಾಧ್ಯವಾದರೆ ಎಚ್ಚರಿಸು.]     

‘ಕೃಷ್ಣಭಕ್ತ ಮತ್ತು ರಾಮಭಕ್ತ ಮುಸ್ಲಿಮ್ ಕವಿಗಳು’ – ಎಂಬ ಆಧ್ಯಾಯಗಳಲ್ಲಿ ಈ ಕವಿಗಳ ಮೇಲೆ ವೈಷ್ಣವ ಭಕ್ತಿ ಪಂಥದ ಗಾಢ ಪ್ರಭಾವವನ್ನು ಗುರುತಿಸುತ್ತಾ ಪ್ರೊ. ಸಿ.ಎನ್.ಆರ್. ಹೇಳುವಂತೆ 15 – 16 ನೇ ಶತಮಾನಗಳ ಕಾಲಘಟ್ಟದಲ್ಲಿ ಹಿಂದೂ – ಇಸ್ಲಾಂ ಧರ್ಮಗಳ ಅನುಯಾಯಿಗಳು ಪರಸ್ಪರ ಅಸ್ತಿತ್ವ ಹಾಗೂ ಧರ್ಮ ಪ್ರಸರಣಕ್ಕಾಗಿ ‘ಉಗ್ರ ಸ್ಪರ್ಧೆಯಲ್ಲಿ ತೊಡಗಿ’ದ್ದುದರಿಂದ ‘ಜನಸಾಮಾನ್ಯರ ಬದುಕು ಕಷ್ಟಸಾಧ್ಯವಾಗಿ’ ಹೋಯಿತು. ‘ಈ ಕಾರಣದಿಂದಲೇ’ ಭಕ್ತಿ ಚಳುವಳಿ ‘ಹಿಂದೂ–ಮುಸ್ಲಿಮ್ ತತ್ವಗಳ ಸಮನ್ವಯ’ವನ್ನು ತನ್ನ ಒಂದು ಮುಖ್ಯ ಲಕ್ಷಣವಾಗಿ ಅಂತರ್ಗತಗೊಳಿಸಿತು [ಪು.37].

ಮೂಲತಃ ಸೈಯದ್ ಇಬ್ರಾಹೀಮ್ ಖಾನ್ [1548-1628] ಎಂಬ ಹೆಸರಿನ ಸೂಫಿ ಕವಿ ಮುಂದೆ ರಸ್ ಖಾನ್ ಎಂಬ ಹೆಸರಿಂದ ಖ್ಯಾತನಾಗಿ ತನ್ನ ಜೀವನದ ಕೊನೆಯ ಕ್ಷಣದ ವರೆಗೂ ಬೃಂದಾವನವಾಸಿಯಾಗಿದ್ದುಕೊಂಡು ಬ್ರಜ ಭಾಷೆಯಲ್ಲಿ ಕೃಷ್ಣ-ರಾಧಾ ಪ್ರೇಮವನ್ನು “ಪ್ರೇಮವಾಟಿಕಾ” ಎಂಬ ತನ್ನ ದೋಹಾಗಳ ಸಂಕಲನದಲ್ಲಿ ವರ್ಣಿಸುತ್ತಾನೆ. 

 ಪ್ರೇಮವನಕ್ಕೆ ಮಾಲಿಗಳು ದ್ವಂದ್ವಾತೀತರಾದ ಇವರಿಬ್ಬರೂ; [ಕೃಷ್ಣ-ರಾಧೆ] 

 ಪ್ರೇಮ-ಪ್ರೇಮ ಎಂದು ಎಲ್ಲರೂ ಹೇಳುತ್ತಾರೆ, ಆದರೆ ಯಾರಿಗೂ ಗೊತ್ತಿಲ್ಲ ಪ್ರೇಮ;

 ಜನರು ಪ್ರೇಮವೆಂದರೇನೆಂದು ಅರಿತಿದ್ದರೆ, ಈ ಜಗವೇಕೆ ಅಳುತ್ತಿತ್ತು? [ಪು.39]   

ಈ ಕವಿಯ ಕೃಷ್ಣ ಪ್ರೇಮ ಯಾವ ಉತ್ಕಟ ಮಟ್ಟಕ್ಕೆ ತಲುಪಿತ್ತು ಎಂಬುದಕ್ಕೆ ಈ ಕವನವೇ ಸಾಕ್ಷಿ:  

 ಮಾನುಸ್ ಹೋ ತೋ ವಹೀ ರಸಖಾನ್

        ಮಾನವನಾಗಿ ರಸಖಾನ್ ಮತ್ತೊಮ್ಮೆ ಹುಟ್ಟುವುದಿದ್ದರೆ, ಗೋಕುಲದಲ್ಲಿ   

        ಗೋವಳನಾಗಿರಲಿ;

        ಪ್ರಾಣಿಯಾಗಿ ಹುಟ್ಟುವುದಿದ್ದರೆ ನಂದನ ಗೋಮಾಳದಲ್ಲಿ ಹುಲ್ಲು ಮೇಯುವ ಒಂದು   

        ಹಸುವಾಗಿರಲಿ;

        ಕಲ್ಲಾಗುವುದಿದ್ದರೆ, ಇಂದ್ರನ ಬಿರುಗಾಳಿಯನ್ನು ತಡೆಯಲು ಕೊಡೆಯಂತೆ ಕೃಷ್ಣನೆತ್ತಿದ  

        ಗೋವರ್ಧನ ಗಿರಿಯಲ್ಲಿರಲಿ; 

        ಪಕ್ಷಿಯಾಗಿ ಹುಟ್ಟುವುದಿದ್ದರೆ, ಯಮುನಾ ತೀರದ ಕದಂಬ ವೃಕ್ಷದ ಕೊಂಬೆಗಳಲ್ಲಿ  

        ನೆಲೆಸಲಿ. [ಪು.40]    

‘ಮುಸ್ಲಿಮ್ ಮೀರಾಬಾಯಿ’ ಎಂದೇ ಕರೆಸಿಕೊಳ್ಳುತ್ತಿದ್ದ ತಾಜ್-ಬೀಬಿ ಎಂಬಾಕೆ ವೈಷ್ಣವ ದೀಕ್ಷೆಯನ್ನು ಪಡೆದು ರಚಿಸಿದ ಆರ್ತತೆ ಹಾಗೂ ಹೃದಯಸ್ಪರ್ಶಿ ಭಕ್ತಿಭಾವಗಳ ಕವಿತೆಗಳ ಮೂಲಕ ‘ಪುಷ್ಟಿ ಮಾರ್ಗ ಸಂಪ್ರದಾಯ’ದ ಅತ್ಯಂತ ಮಹತ್ವದ ಸಂತ-ಕವಿಯಾಗಿ ಗುರುತಿಸಿಕೊಂಡಿದ್ದಾಳೆ. ಆಕೆಯ ಒಂದು ಕವನದಲ್ಲಿ ಜನರು ದೇವರನ್ನು ನಾನಾ ಹಂಬಲಗಳ ಪೂರೈಕೆಗಾಗಿ ಪೂಜಿಸುತ್ತಾರೆ ಎಂದು ವಿವರಿಸುತ್ತಾ ತಾನು ಕಾರಣರಾಹಿತ್ಯವಾಗಿ – ಅಂದರೆ ನಿಷ್ಕಾಮಕರ್ಮಿಯಾಗಿ ‘ಪೂಜಿಸುವುದು ನಂದಸುತ ಶ್ರೀಕೃಷ್ಣನನ್ನು ಮಾತ್ರ’ ಎಂದು ಸಾರುತ್ತಾಳೆ ಯಾಕೆಂದರೆ ‘ಕೃಷ್ಣ ನನ್ನವ, ನನ್ನ ಒಡೆಯ’[ಪು.43]. 

ಸಂಸ್ಕೃತದಲ್ಲಿ “ಖೇಟ ಕೌತುಕಂ” ಮತ್ತು ‘ದ್ವಾವಿಂಶತ್ ಯೋಗಾವಳಿ” ಕೃತಿಗಳನ್ನು ರಚಿಸಿದ, ಅಕ್ಬರ್-ನ ಆಸ್ಥಾನದ ‘ನವರತ್ನ’ಗಳಲ್ಲಿ ಒಬ್ಬನಾಗಿದ್ದ ಬಹುಭಾಷಾ ವಿಶಾರದ ಅಬ್ದುಲ್ ರಹೀಮ್ ಖಾನ್–ಎ-ಖಾನಾ [1556-1627] ಎಂಬ ಕವಿಯ ಈ ಕವನಗಳಲ್ಲಿ ಹುದುಗಿರುವ ಆಳವಾದ ಆಧ್ಯಾತ್ಮಿಕ ತತ್ವವನ್ನು ಗಮನಿಸಿ:

           ಜೋ ರಹೀಮ್ ಭಾವೀ ಕತಹೂ …  

           ಏನು ಆಗುವುದಿದೆಯೋ ಅದು ಆಗಿಯೇ ತೀರುತ್ತದೆ, ಅದನ್ನು ಯಾರೂ ತಪ್ಪಿಸಲು  

           ಸಾಧ್ಯವಿಲ್ಲ;

    ರಾಮನು ಮಾಯಾ ಜಿಂಕೆಯನ್ನು ಬೆನ್ನತ್ತಿದನು, ರಾವಣನು ಸೀತೆಯನ್ನು  

           ಅಪಹರಿಸಿದನು. [ಪು.48] 

     ರಹಿಮನ್ ಗಲಿ ಹೈ ಸಕ್ರಿ …

    ಈ ಓಣಿ ಬಲು ಕಿರಿದು, ಒಬ್ಬರಿಗೆ ಮಾತ್ರ ಸ್ಥಳವಿದೆ;

    ಅಹಂ ಅಥವಾ ದೇವರು – ಇಬ್ಬರಲ್ಲಿ ಒಬ್ಬರು ಮಾತ್ರ ಓಡಾಡಬಹುದು. [ಪು.49]   

ಮಲಿಕ್ ಮುಹಮ್ಮದ್ ಜಾಯಸಿ ಎಂಬ ಸೂಫಿ ಕವಿ 16 ನೇ ಶತಮಾನದಲ್ಲಿ ಅವಧಿ ಭಾಷೆಯಲ್ಲಿ ಬರೆದ ರತ್ನಸೇನ-ಪದ್ಮಾವತಿಯರ ಪ್ರೇಮಕಥೆಯನ್ನು ಕೇಂದ್ರವಾಗಿಟ್ಟುಕೊಂಡ, ಅಷ್ಟಾದಶ ವರ್ಣನೆಗಳಿಂದ ಕೂಡಿದ ಮಹಾಕಾವ್ಯ “ಪದ್ಮಾವತ್” ಸೂಫಿ ಪರಿಕಲ್ಪನೆಗಳಾದ ನಫ್ಸ್ [ಆತ್ಮ] ಹಾಗೂ ಇಶ್ಕ್ [ಪ್ರೇಮ] ಇವುಗಳ ಸಂಬಂಧವನ್ನು ಅನ್ವೇಷಿಸುತ್ತಾ ಅನ್ಯೋಕ್ತಿಯ ಮೂಲಕ ನಿಜಕ್ಕೂ ಧ್ವನಿಸುವುದು ‘ಮಾಯೆ ಮತ್ತು ಮಾನವ ದೇಹದ ಮಿತಿಗಳು ಇವುಗಳನ್ನು ದಾಟಿ, ಮಾನವನ ಮನಸ್ಸನ್ನು ಸೇರಲು ಆತ್ಮವು ಅನುಭವಿಸುವ ಕಷ್ಟ-ಕೋಟಲೆಗಳನ್ನು’ ಎಂಬ ರುಚಿಕಾ ಶರ್ಮರ ಮಾತನ್ನು ಪ್ರೊ. ಸಿ.ಎನ್.ಆರ್. ಅನುಮೋದಿಸುತ್ತಾರೆ [ಪು.77]. 

ಪುಸ್ತಕದ ಕೊನೆಯಲ್ಲಿ ಪ್ರೊ. ಸಿ.ಎನ್.ಆರ್. ಹೇಳುವ ಮಾತುಗಳಿಂದ ಈ ಲೇಖನವನ್ನು ಇಲ್ಲಿಗೇ ಮುಗಿಸುತ್ತಿದ್ದೇನೆ ಯಾಕೆಂದರೆ ಅವರ ಮಾತುಗಳನ್ನು ಮೀರಿದ ವ್ಯಾಖ್ಯಾನ ಅಸಾಧ್ಯ, ಮತ್ತು ಅಪರಿಪೂರ್ಣ ಎಂಬ ಕಾರಣಕ್ಕಾಗಿ! 

… ಈ ಅಂಶಗಳೆಲ್ಲವೂ ಏನನ್ನು ನಿರ್ದೇಶಿಸುತ್ತವೆ ಎಂದರೆ, ಜಾತಿ-ಮತ-ಲಿಂಗ ಭೇದಗಳು ಆಕಸ್ಮಿಕ; ಶ್ರೇಷ್ಟ ಕವಿ-ಸಂತರು ಈ ಬಗೆಯ ಆಕಸ್ಮಿಕ ಭೇದಗಳನ್ನು ದಾಟಿರುವವರು. ಇವರುಗಳಿಂದ ನಾವು ಕಲಿಯಬೇಕಾದುದು ನಾವೂ ಈ ಭಿನ್ನತೆಯ ಬೇಲಿಗಳನ್ನು ದಾಟಿ, ‘ನಾವು-ಅವರು’ ಎಂಬ ನಿಲುವಿನ ಬದಲು ‘ನಾವೆಲ್ಲರೂ’ ಎನ್ನುವ ನಿಲುವನ್ನು ತಳೆಯಬಹುದು ಎಂದು. ಇಂದಿನ ಕಾಲದಲ್ಲಿಯಂತೂ ಈ ‘ದಾಟುವಿಕೆ’ಯ ಕಲಿಕೆ ಅತ್ಯವಶ್ಯಕ ಎಂದು ನನಗನಿಸುತ್ತದೆ [ಪು.107]

‍ಲೇಖಕರು avadhi

January 1, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: