ನಮ್ಮಲ್ಲೂ ಇವೆ ಮಕ್ಕಳ ಗೋರಿಗಳು…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ಕಳೆದ ತಿಂಗಳು (೨೦೨೧ ಜುಲೈ ೧೫) ಬಿಬಿಸಿ ವಾರ್ತೆಗಳ ವೆಬ್‌ಸೈಟ್‌ ಸುದ್ದಿಯೊಂದನ್ನು ಪ್ರಕಟಿಸಿತ್ತು. ʻಕೆನಡಾದ ಅತ್ಯಂತ ದೊಡ್ಡದೂ ಹಳೆಯದೂ ಆದ ಕಾಮ್‌ಲೂಪ್ಸ್‌ ವಸತಿ ಶಾಲೆಯ ಆವರಣದ ಸುತ್ತಮುತ್ತ ನೂರಾರು ಮಕ್ಕಳ ಗೋರಿಗಳು ಪತ್ತೆಯಾಗಿವೆ. ಆ ಶಾಲೆಗಳನ್ನು ಸ್ಥಳೀಯ ಮೂಲನಿವಾಸಿಗಳ ಮಕ್ಕಳಿಗಾಗಿ ಉಚಿತವಾಗಿ ಸರ್ಕಾರದ ನೆರವಿನಿಂದ ಚರ್ಚ್‌ ಮೂಲದ ಒಂದು ಸಂಸ್ಥೆ ೧೮೮೩ರಿಂದ ೧೯೬೯ರವರೆಗೆ ನಡೆಸುತ್ತಿತ್ತು (ಆ ನಂತರ ಸರ್ಕಾರ ಅದನ್ನು ವಶಪಡಿಸಿಕೊಂಡಿದ್ದು ೧೯೯೬ರ ತನಕ ನಡೆಸಿ ಮುಚ್ಚಲಾಗಿತ್ತು). ಒಂದು ಅಂದಾಜಿನಂತೆ ೪,೧೦೦ ಮಕ್ಕಳು (೩ ವರ್ಷದ ಮಕ್ಕಳನ್ನೂ ಒಳಗೊಂಡು) ಆ ಸಂಸ್ಥೆಯಲ್ಲಿ ನಿರ್ಲಕ್ಷ್ಯ, ದೌರ್ಜನ್ಯ, ರೋಗ ಅಥವಾ ದುರಂತಗಳು, ಅಪಘಾತಗಳಿಂದ ಸತ್ತಿರಬಹುದು ಎನ್ನಲಾಗಿದೆ. ನಾಪತ್ತೆಯಾಗಿದ್ದ ತಮ್ಮ ಮಕ್ಕಳನ್ನು ಕುರಿತು ಕುಟುಂಬಗಳು ಕೇಳಿದಾಗ, ನಿಮ್ಮ ಮಗು ಓಡಿ ಹೋಗಿದೆ ಎಲ್ಲೋ ಕಳೆದು ಹೋಗಿದೆ ಎಂದಿದ್ದರಂತೆ. ಮಕ್ಕಳು ಸತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದ ಪ್ರಕರಣಗಳಲ್ಲೂ ಮಕ್ಕಳ ಕಳೇಬರವನ್ನು ಕುಟುಂಬಗಳಿಗೆ ನೀಡಲಾಗಿರಲಿಲ್ಲವಂತೆ…

ʻಈ ಸಾವುಗಳ ಸಂಖ್ಯೆ ೪೧೦೦ ಅಷ್ಟೇ ಅಲ್ಲ, ಇದು ಖಂಡಿತಾ ಹತ್ತು ಸಾವಿರ ಮೀರಿರಬಹುದು ಎಂದು ಅಂತಹ ಸಂಸ್ಥೆಗಳ ಸುತ್ತಮುತ್ತ ಇದ್ದಿರಬಹುದಾದ ಗುರುತುಗಳಿಲ್ಲದ ಗೋರಿಗಳನ್ನು ಪರಿಶೀಲಿಸುತ್ತಿರುವ ತನಿಖಾ ಸಂಸ್ಥೆ ಹೇಳಿದೆ. ಈಗ ಈ ಪ್ರಕರಣವನ್ನು ಕೆನಡಾ ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಸ್ಥಳೀಯ ಮೂಲ ನಿವಾಸಿಗಳ ಸಂಘಟನೆಗಳು
ದಾಖಲೆಗಳ ಸಮೇತ ಪ್ರತಿಭಟನೆ ಆರಂಭಿಸಿವೆ. ೧೮೦೦ರ ಅವಧಿಯಲ್ಲಿ ಮಕ್ಕಳನ್ನು ಇಂತಹ ವಸತಿ ಶಾಲೆಗಳಿಗೆ ಬಲವಂತವಾಗಿ ಸರ್ಕಾರವೇ ಸೇರಿಸುತ್ತಿತ್ತು. ಅಲ್ಲಿ ಮಕ್ಕಳಿಗೆ ಸಂಸ್ಕೃತಿ, ಭಾಷೆ, ನಡೆನುಡಿ, ಶಿಕ್ಷಣ, ಕ್ರಿಶ್ಚಿಯನ್‌ ಪದ್ಧತಿಯನ್ನು ಕಲಿಸಲಾಗುತ್ತಿತ್ತು. ತಮ್ಮ ಮೂಲನಿವಾಸಿ ಭಾಷೆಯಲ್ಲಿ ಮಾತನಾಡುವುದನ್ನು ನಿರ್ಬಂಧಿಸಲಾಗಿತ್ತು. ಮಕ್ಕಳು ಏನೇ ಪ್ರಶ್ನೆ ಕೇಳಿದರೂ ಪ್ರತಿರೋಧ ತೋರಿದರೂ ಅವೆಲ್ಲಕ್ಕೂ ತೀವ್ರವಾದ ಶಿಕ್ಷೆ ವಿಧಿಸಲಾಗುತ್ತಿತ್ತು.

‘ಈಗ ಕೆನಡಾ ಸರ್ಕಾರ ಮೂಲನಿವಾಸಿಗಳನ್ನು ಕ್ಷಮೆಯಾಚಿಸುವುದಾಗಿ ಹೇಳಿದೆ. ಜೊತೆಗೆ ಕಾಮ್‌ಲೂಪ್ಸ್‌ ಸಂಸ್ಥೆಯನ್ನು ನಡೆಸುತ್ತಿದ್ದ ಮೂಲ ಚರ್ಚನ್ನು ಕೂಡಾ ಕ್ಷಮೆಯಾಚಿಸಲು ಮತ್ತು ಪರಿಹಾರ ಕ್ರಮವನ್ನು ಕೈಗೊಳ್ಳಲು ಒತ್ತಾಯಿಸುತ್ತಿದೆʼ.


ಈ ಸುದ್ದಿಯನ್ನು ಓದುತ್ತಿದ್ದಾಗ ನಾನು ಕಂಡಂತೆ ಕಳೆದ ಮೂವತ್ತೈದು ವರ್ಷಗಳಲ್ಲಿ ʻವಿವಿಧ ಹೆಸರುಗಳ ಹಲವು ವಸತಿ ನಿಲಯ ಮತ್ತು ಶಾಲೆಗಳು, ಅವುಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ಕುರಿತು ಕೇಳಿದ್ದು, ಕಣ್ಣಾರೆ ಕಂಡದ್ದು, ವಿಚಾರಣೆ ನಡೆಸಿದ್ದು, ಮಕ್ಕಳನ್ನು ರಕ್ಷಿಸಿದ್ದು, ಮುಜುಗರಕ್ಕೆ ಒಳಗಾದದ್ದು…ʼ ಹೀಗೇ ಹಲವು ಪ್ರಕರಣಗಳು ಒಂದು ಸುತ್ತು ನೆನಪಿಗೆ ಬಂದವು.

ಇಲ್ಲಿನ ಯಾವುದೇ ಪ್ರಕರಣವನ್ನೂ ನಾನು ನಿರ್ದಿಷ್ಟ ಸಂಸ್ಥೆಗಳನ್ನು ಟೀಕಿಸಲು ಬಳಸುತ್ತಿದ್ದೇನೆ ಎಂದು ಓದುಗರು ಮತ್ತು ಗುರುತು ಸಿಕ್ಕವರು ಭಾವಿಸಬಾರದು. ಬದಲಿಗೆ ವ್ಯವಸ್ಥೆಗಳನ್ನು ಉತ್ತಮವಾಗಿಸಲು ಮಕ್ಕಳ ಸ್ನೇಹೀ ಆಗಿ ಮಕ್ಕಳ ಹಿತ ಕಾಪಾಡುವ ಮನಸ್ಸುಗಳಾಗಲಿ ಎಂದು ಚರ್ಚೆ ಮಾಡಲಾಗುತ್ತಿದೆ ಎಂದೇ ಭಾವಿಸಬೇಕಾಗಿದೆ.

ಪ್ರಕರಣ ೧:
ಬೆಂಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯೆದುರು ಚೈಲ್ಡ್‌ಲೈನ್‌ ೧೦೯೮ ಕರೆತಂದಿದ್ದ ಹಲವು ಮಕ್ಕಳಲ್ಲಿ ಒಬ್ಬ ಹುಡುಗ ನನ್ನ ಗಮನ ಸೆಳೆದಿದ್ದ (೨೦೦೭). ಅವನ ಹಣೆಯಲ್ಲಿ ಇನ್ನೂ ಮೂರು ಪಟ್ಟೆಯ ವಿಭೂತಿಯ ಪಸೆ ಕಾಣುತ್ತಿತ್ತು. ಶಾಲಾ ಸಮವಸ್ತ್ರ ಧರಿಸಿದ್ದ. ಸ್ಪಷ್ಟವಾಗಿ ಹೇಳಿದ. ತಾನು ಬೆಂಗಳೂರಿಗೆ ಹತ್ತಿರದ ಊರಿನ ಪ್ರಸಿದ್ಧ ಮಠದ ಒಂಭತ್ತನೇ ತರಗತಿ ವಿದ್ಯಾರ್ಥಿ. ಎರಡು ವರ್ಷ ಕಷ್ಟ ಅನುಭವಿಸಿ ಇನ್ನು ಅಲ್ಲಿರಲು ಆಗದು ಎಂದು ಹೊರಟು ಬಂದಿದ್ದಾನೆ. ರಸ್ತೆಯಲ್ಲಿ ಪುಸ್ತಕದ ಚೀಲ ಬಿಸಾಕಿ ಮನೆಗೆ ಹೋಗಲು ರೈಲು ಹತ್ತಿ ಬಂದವನನ್ನ ಇಲ್ಲಿಗೆ ಕರೆತರಲಾಗಿದೆ.

ನಮಗಿದೇನು ಮೊದಲ ಪ್ರಸಂಗವಾಗಿರಲಿಲ್ಲ. ಈ ಹಿಂದೆ ಇಂತಹದ್ದು ನಾಲ್ಕೈದು ಪ್ರಕರಣಗಳಿತ್ತು. ಆಗೆಲ್ಲಾ ಮಕ್ಕಳ ಪೋಷಕರು ಆದಷ್ಟೂ ಬೇಗನೆ ಬಂದು ದಾಖಲೆ ಒದಗಿಸಿ ಮಕ್ಕಳನ್ನು ಕರೆದೊಯ್ದಿದ್ದರು. ಇಲ್ಲೇನೋ ಮುಸುಕಿನ ಗುದ್ದು ಇದೆ ಎಂದು ತಿಳಿಯುತ್ತಿದ್ದರೂ, ಪೋಷಕರು ನೀಡುತ್ತಿದ್ದ ಹೇಳಿಕೆಗಳು, ಒದಗಿಸುತ್ತಿದ್ದ ದಾಖಲೆಗಳನ್ನು ನೋಡಿ ಸುಮ್ಮನಾಗಬೇಕಾಗುತ್ತಿತ್ತು.

ಈ ಮಗುವಿನ ವಿವರಗಳನ್ನು ಪಡೆದುಕೊಂಡು ಮಠದ ವ್ಯವಸ್ಥಾಪಕರಿಗೆ ಒಂದು ಪತ್ರವನ್ನು ತಕ್ಷಣ ಬರೆದು ಮಕ್ಕಳ ಕಲ್ಯಾಣ ಸಮಿತಿಯೆದುರು ಆದಷ್ಟೂ ಬೇಗನೆ ಹಾಜರಾಗಲೂ ತಿಳಿಸಲಾಯಿತು.

ನಿಗದಿತ ದಿನ ಮಠದವರು ಬರಲಿಲ್ಲ. ಬದಲಿಗೆ ಈ ಮಗುವಿನ ಪೋಷಕರು, ʻಮಗು ತಮ್ಮ ಮನೆಯಿಂದ ಓಡಿ ಹೋಗಿದ್ದಾನೆ, ಹುಡುಕಿ ಕೊಡಿʼ ಎಂದು ಮಂಡ್ಯದ ತಮ್ಮೂರಿನ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಕೊಟ್ಟಿರುವ ದೂರಿನ ಪ್ರತಿ ತೆಗೆದುಕೊಂಡು ಬಂದರು. (ಎಫ್‌.ಐ.ಆರ್‌. ಆಗಿರಲಿಲ್ಲ). ಅರೆ, ಮಗು ಬಂದಿರುವುದು ಬೆಂಗಳೂರಿನ ಹತ್ತಿರದ ಊರಿನಿಂದ ಎಂದು ಎಲ್ಲರಿಗೂ ಗೊತ್ತು. ಆದರೀಗ ನಮ್ಮೆದುರು ಇರುವ ಸಾಕ್ಷಿ ಬೇರೆ ಹೇಳುತ್ತದೆ! ಹಿಂದಿನ ಪ್ರಕರಣಗಳಲ್ಲೂ ಹೀಗೇ ಆಗಿತ್ತು.

ಏಕೋ ಏನೋ ನನಗೆ ಇದನ್ನು ಇಲ್ಲಿಗೆ ಬಿಡಬಾರದೆಂದೆನಿಸಿತು. ಆ ಪೋಷಕರನ್ನು ನಿಧಾನವಾಗಿ ಮಾತನಾಡಿಸಿದಾಗ ವಿವರಗಳ ಕಹಿಯುಂಡೆಗಳು ಹೊರಬಿದ್ದವು. ಮಕ್ಕಳನ್ನು ಸೇರಿಸಿಕೊಳ್ಳುವಾಗಲೇ ʼಮಠದಲ್ಲಿದ್ದಾಗ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಮಠವನ್ನು ಹೊಣೆಮಾಡಿಸಬಾರದು. ಮಕ್ಕಳು ಓಡಿ ಹೋದರೆ ತಾವೇ ಜವಾಬ್ದಾರಿ ಹೊರಬೇಕು. ಮಕ್ಕಳು ದೂರು ನೀಡಿದರೆ ಅದನ್ನು ಪರಿಗಣಿಸಬಾರದು, ಇತ್ಯಾದಿ. ಹುಡುಗ ಹೀಗೆ ಮಠದಿಂದ ಹೋಗಿರುವುದನ್ನು ಮಾರನೇ ದಿನವೇ ಸಂಬಂಧಿತ ಟೀಚರ್‌ ಫೋನ್‌ ಮಾಡಿ ತಿಳಿಸಿದ್ದರಂತೆ. ಮೊದಲೇ ನೀಡಲಾಗಿದ್ದ ನಿರ್ದೇಶನದ ಪದ್ಧತಿಯಂತೆ ಅವರು ಸ್ಥಳೀಯ ಪೊಲೀಸ್‌ ಠಾಣೆಗೆ ದೂರಿನ ರೀತಿಯಲ್ಲಿ ಮಾಹಿತಿಯನ್ನು ಕೊಟ್ಟಿದ್ದರು.

ಆ ಪೋಷಕರಿಂದಲೇ ಸಂಖ್ಯೆ ಪಡೆದು ಸಂಬಂಧಿತ ಮಠದಲ್ಲಿನ ವ್ಯಕ್ತಿಗೆ ದೂರವಾಣಿ ಕರೆ ಮಾಡಿದೆ. ಮಗುವಿನ ಬಗ್ಗೆ ಚರ್ಚೆ ಮಾಡಲು ದಾಖಲೆಗಳ ಸಮೇತ ತಕ್ಷಣವೇ ಬರಬೇಕೆಂದು ತಾಕೀತು ಮಾಡಿದೆ. ಕೊಸರಾಡಿದ ಸಂಸ್ಥೆಯವರು ಕೊನೆಗೂ ಅವರೇ ನಡೆಸುವ ಶಾಲೆಯ ಮುಖ್ಯೋಪಾಧ್ಯಾಯರನ್ನು ಕಳುಹಿಸಿದರು. ಆತ ಯಾವುದೇ ಮಾಹಿತಿ ಕೊಡಲೊಲ್ಲ ಮತ್ತು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಾಹಿತಿಗಾಗಿ ಕೇಳಿದ ಪ್ರತಿ ಪ್ರಶ್ನೆಗೂ ಮಠದಲ್ಲಿ ಯಾರಿಗೋ ಫೋನ್‌ ಮಾಡಿ ಕೇಳುತ್ತಿದ್ದರು.

ಅಷ್ಟು ಹೊತ್ತಿಗೆ ಆ ಹುಡುಗ ನೀಡಿದ ಮಾಹಿತಿಯಂತೆ ಬಹುತೇಕ ಅನೇಕ ಸಂಸ್ಥೆಗಳಲ್ಲಿ ಆ ದಿನಗಳಲ್ಲಿ ಇದ್ದಿರಬಹುದಾದ ವಾತಾವರಣದ ಅನಾವರಣ ಮಾಡಿದ್ದ. ತನಗೆ ಒಪ್ಪಲಾಗದ ಕಠಿಣ ನಿಯಮಗಳು. ಬೆಳಗ್ಗೆ ಸಂಜೆ ಮತ್ತು ಅತಿಥಿಗಳು ಬಂದಾಗ ಗಂಟೆಗಟ್ಟಲೆ ಸ್ವಾಮಿಗಳ ಪ್ರವಚನಕ್ಕೆ ಕೂರಬೇಕು, ಸಹವರ್ತಿ ಮಕ್ಕಳಿಂದ ವಿಕೃತ ಹಿಂಸೆ. ತಮ್ಮನ್ನು ನೋಡಿಕೊಳ್ಳುವ ದೊಡ್ಡವರಿಂದ ಚಿಕ್ಕಪುಟ್ಟ ತಪ್ಪುಗಳಿಗೂ (!) ವಿಪರೀತವಾದ ಬೈಗುಳ ಮತ್ತು ಅವರಿವರಿಂದ ಹೊಡೆತ ಬಡಿತ… ಮಕ್ಕಳು ಆಗಾಗ್ಗೆ ಅಲ್ಲಿಂದ ತಪ್ಪಿ ಹೋಗುವುದು, ಕೆಲವರನ್ನು ಹಿಡಿದುಕೊಂಡು ಬರುವುದು. ಊಟ ಹೊಟ್ಟೆತುಂಬಾ ಕೊಡುತ್ತಾರೆ. ಶಾಲೆ ಚೆನ್ನಾಗಿದೆ. ಆದರೆ, ತನಗಲ್ಲಿ ಇರಲು ಇಷ್ಟವಿಲ್ಲ.

ಪ್ರಕರಣ ೨:
ಮಗುವೊಂದರ ಶವವಿಟ್ಟುಕೊಂಡು ಒಂದಷ್ಟು ಜನ ಬೆಂಗಳೂರಿನ ಸಂಸ್ಥೆಯೊಂದರ ಎದುರು ಗಲಾಟೆ ಮಾಡುತ್ತಿದ್ದಾರೆಂದೂ, ಪೊಲೀಸ್‌ ಸಿಬ್ಬಂದಿ ಅವರನ್ನು ನಿಯಂತ್ರಿಸಲು ಹರ ಸಾಹಸ ಮಾಡುತ್ತಿದೆಯೆಂದು ನಮಗೆ ಸುದ್ದಿ ಬಂದಿತು (೨೦೦೯). ಅಲ್ಲಿಗೆ ಚೈಲ್ಡ್‌ಲೈನ್‌ ೧೦೯೮ ಸಿಬ್ಬಂದಿ ಧಾವಿಸಿದರು. ಪೊಲೀಸ್‌, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಚರ್ಚ್‌ನ ಮುಖ್ಯಸ್ಥರ ಸಂಧಾನದಿಂದ ಪರಿಸ್ಥಿತಿಯನ್ನು ಸ್ಥಿಮಿತಕ್ಕೆ ತರಲಾಯಿತೆಂದು ಹೇಳಲಾಯಿತು.

ತಮಿಳು ನಾಡು ಮೂಲದ ಸ್ವತಂತ್ರವಾಗಿ ಚಿಕ್ಕದೊಂದು ಚರ್ಚ್‌ ನಡೆಸುತ್ತಿದ್ದ ಪ್ಯಾಸ್ಟರ್‌ ಒಬ್ಬಾತ ಬೆಂಗಳೂರಿನಲ್ಲಿ ತನ್ನದೊಂದು ಶಾಖೆ ತೆರೆದುಕೊಂಡಿದ್ದ. ಬಡ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಒದಗಿಸುವುದಾಗಿಯೂ ಮತ್ತು ಜೀವನ ಕೌಶಲ್ಯಗಳನ್ನು ಕುರಿತು ಅರಿವು ಮೂಡಿಸುವುದಾಗಿಯೂ ಆತ ಹೇಳಿಕೊಂಡಿದ್ದ. ಮಕ್ಕಳಿಗೆ ಶಿಕ್ಷಣ ಸಿಗುವುದೆಂಬ ಆಶೆಗೆ ಕೇಂದ್ರದ ಸುತ್ತಮುತ್ತಲ ತಮಿಳು ಭಾಷಿಕ ಜನರು ತಮ್ಮ ಮಕ್ಕಳನ್ನು ಆತನ ವಶಕ್ಕೆ ಒಪ್ಪಿಸಿದ್ದರು. ಇದೇ ಕೇಂದ್ರಕ್ಕೆ ಆತ ತಮಿಳುನಾಡಿನಿಂದಲೂ ಮಕ್ಕಳನ್ನು ಕರೆತರುವುದು, ಮತ್ತು ಇಲ್ಲಿಂದ ಮಕ್ಕಳನ್ನು ಆಂಧ್ರಪ್ರದೇಶದಲ್ಲಿ ಯಾವುದೋ ಹಳ್ಳಿಯಲ್ಲಿದ್ದ ಆತನ ದೊಡ್ಡ ತೋಟದಲ್ಲಿದ್ದ ಇನ್ನೊಂದು ಶಾಖೆಗೆ ಆಗಾಗ್ಗೆ ಕರೆದೊಯ್ಯುವುದು ಸಾಮಾನ್ಯವಾಗಿತ್ತು. ತೋಟಕ್ಕೆ ಒಯ್ಯುತ್ತಿದ್ದುದು ಜೀವನ ಕೌಶಲ್ಯಗಳನ್ನು ಕಲಿಸಲು!

ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪ್ರಕರಣವನ್ನು ವಿವರವಿವರವಾಗಿ ವಿಚಾರಿಸಿದಾಗ ತಿಳಿದದ್ದು, ತೋಟಕ್ಕೆ ವಿವಿಧ ಕಡೆಗಳಿಂದ ಮಕ್ಕಳನ್ನು ಒಯ್ಯುತ್ತಿದ್ದುದು ಜೀವನ ಕೌಶಲ್ಯದ ಹೆಸರಿನಲ್ಲಿ ತೋಟದ ಕೆಲಸಗಳನ್ನು ಮಾಡಿಸಲು. ಅಲ್ಲಿ ಮಕ್ಕಳು ಕೂಲಿಗಳಂತೆ ಬದುಕಬೇಕು. ಗಂಡು ಮಕ್ಕಳು ಹೆಣ್ಣು ಮಕ್ಕಳೆಲ್ಲರೂ ಒಂದೇ ಕಡೆ ಇರಬೇಕು. ಇರಲಿಕ್ಕೆ ಸರಿಯಾದ ಮನೆಗಳಿಲ್ಲ, ಸ್ನಾನದ ವ್ಯವಸ್ಥೆಯಿಲ್ಲ. ದಿನವಿಡೀ ಕೆಲಸ. ಒಮ್ಮೊಮ್ಮೆ ಆ ಮನುಷ್ಯ ಹೆಣ್ಣುಮಕ್ಕಳ ಜೊತೆ ಕೆಟ್ಟದಾಗಿ ಇತರ ಹುಡುಗರೆದುರೇ ವರ್ತಿಸುತ್ತಿದ್ದ. ಯಾರಾದರೂ ಪ್ರಶ್ನೆ ಮಾಡಿದರೆ, ಕೆಲಸದಲ್ಲಿ ಹಿಂಜರಿಕೆ ತೋರಿದರೆ ಹೊಡೆಯುತ್ತಿದ್ದ ಮತ್ತು ಸುಟ್ಟು ಬಿಡುತ್ತೇನೆ ಎಂದು ಪಿಸ್ತೂಲು ತೋರಿಸುತ್ತಿದ್ದನಂತೆ.

ತೋಟದ ಕೆಲಸದ ವಿಚಾರದಲ್ಲಿ ತಗಾದೆ ತೆಗೆದಿದ್ದರಿಂದ ಹೀಗೆ ತೋಟಕ್ಕೆ ಬೆಂಗಳೂರಿನಿಂದ ಹೋಗಿದ್ದ ಒಬ್ಬ ೧೫ ವರ್ಷದ ಬಾಲಕನಿಗೆ ವಿಪರೀತವಾಗಿ ಪ್ಯಾಸ್ಟರ್‌ ಹೊಡೆದಿದ್ದನಂತೆ. ದುರಾದೃಷ್ಟವಶಾತ್‌ ಹೊಡೆತ ಎಲ್ಲೆಲ್ಲೋ ಬಿದ್ದು ಅವನು ಸತ್ತು ಹೋಗಿದ್ದ. ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಒಯ್ದಿದ್ದರೆಂದೂ, ಅವರು ಬಾಲಕ ಎಲ್ಲಿಂದಲೋ ಬಿದ್ದು ಸತ್ತಿದ್ದಾನೆಂದು ಪ್ರಮಾಣ ಪತ್ರ ಸಿಕ್ಕಿತ್ತು. ಪ್ಯಾಸ್ಟರ್‌ ಪೋಷಕರನ್ನು ತೋಟಕ್ಕೆ ಕರೆಸಿಕೊಂಡು ಬಾಲಕ ಸತ್ತು ಹೋಗಿರುವ ಬಗ್ಗೆ ತಿಳಿಸಿ ಅಲ್ಲಿಯೇ ದಫನ್‌ ಮಾಡಿಬಿಡಲೂ ಸೂಚಿಸಿದನಂತೆ. ಆದರೆ ಬಾಲಕನ ಪೋಷಕರು ಅದಕ್ಕೊಪ್ಪದೆ ಶವವನ್ನು ಬೆಂಗಳೂರಿಗೆ ಬಲವಂತವಾಗಿ ತರೆಸಿಕೊಂಡಿದ್ದರು. ಅಷ್ಟರೊಳಗೆ ಈತ ʻನಿರೀಕ್ಷಣಾ ಜಾಮೀನುʼ ಪಡೆದಿದ್ದ!

ಪ್ರಕರಣ ೩
ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ಬಾಸ್ಕೋ ಸಂಸ್ಥೆಯವರು ನಾಲ್ಕು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ, ಬೆಂಗಳೂರು ಎದುರು ಕರೆತಂದಿದ್ದರು (೨೦೦೮). ಆ ಮಕ್ಕಳಿಗೆ ಇಲ್ಲಿನ ಭಾಷೆ ಬರದು. ಹಿಂದಿ ತಿಳಿಯುವುದು ಕಷ್ಟ. ಅವರ ವೇಶಭೂಷಣ, ಅರಿವಿಗೆ ಬರುತ್ತಿದ್ದ ಕೆಲವು ಪದಗಳು, ಕೊಡಗು ಎಂದು ಅವರು ಹೇಳುತ್ತಿದ್ದುದರಿಂದ ನಮಗೆ ತಿಳಿಯುತ್ತಿದ್ದುದು ಅವರು ಟಿಬೆಟನ್‌ ಇರಬೇಕು. ಟಿಬೆಟನ್‌ ಭಾಷೆ ತಿಳಿದಿವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಕರೆಸಲಾಯಿತು.

ವಾಸ್ತವವಾಗಿ ಈ ಮಕ್ಕಳಿಗೆ ಟಿಬೆಟನ್‌ ಭಾಷೆ ಸರಿಯಾಗಿ ಬರುತ್ತಿರಲಿಲ್ಲ. ಅವರ ಭಾಷೆ ಲಢಾಕಿಯೆಂದು ಆಗ ತಿಳಿಯಿತು. ತಾವು ಲಡಾಕ್‌ನ ಕಾರೋ ಪ್ರಾಂತದ ಹತ್ತಿರದ ಹಳ್ಳಿಗಳ ಮಕ್ಕಳೆಂದು ಅವರು ಹೇಳಿದರು. ಮತ್ತೆ ಇವರನ್ಯಾಕೆ ಕೊಡಗಿನಲ್ಲಿ ಇಟ್ಟುಕೊಳ್ಳಲಾಗಿತ್ತು!?

ಮತ್ತೆ ಅದೇ ಪಾಡು. ಹಾಗೂ ಹೀಗೂ ಆ ಮಕ್ಕಳನ್ನು ಮತ್ತೆ ಮತ್ತೆ ಮಾತನಾಡಿಸಿದಾಗ ಕೊಡಗಿನ ಬೈಲುಕುಪ್ಪೆಯ ಹತ್ತಿರದಲ್ಲಿ ಯಾರ ಜೊತೆಯಲ್ಲಿ ಇವರಿದ್ದರು ಎಂಬ ವಿವರಗಳು ಹೊರಬಿದ್ದವು. ದೂರವಾಣಿ ಸಂಖ್ಯೆಯೂ ಸಿಕ್ಕಿತು. ಮುಂದಿನೆರಡು ಮೂರು ದಿನದಲ್ಲಿ ಅಲ್ಲಿಂದ ಒಬ್ಬ ಸನ್ಯಾಸಿ ಬಂದರು. ತಾನು ಮಕ್ಕಳನ್ನು ಕರೆದೊಯ್ಯಲು ಸಿದ್ಧವೆಂದು ಅವನು ಹೇಳುವುದು, ಈ ಮಕ್ಕಳು ತಾವು ಹೋಗುವುದಿಲ್ಲ ಎಂದು ಗೋಳಾಡುವುದು. ತಾನೇ ಮಕ್ಕಳ ಪೋಷಕ / ಕೇರ್‌ ಟೇಕರ್‌, ಇವರ ಧಾರ್ಮಿಕ ಶಿಕ್ಷಣ ಮತ್ತು ಏಳ್ಗೆಗಾಗಿ ಇವರ ತಂದೆ ತಾಯಿಯರು ತನ್ನೊಡನೆ ಕಳುಹಿಸಿದ್ದಾರೆ ಎಂಬುದು ಅವನ ಮಾತು. ಆತನ ಬಳಿ ಆ ತರಹದ ಯಾವುದಾದರೂ ಪತ್ರ, ಮಾಹಿತಿ ಶಾಲೆಯಲ್ಲಿ / ಮೊನಾಸ್ಟ್ರಿಯಲ್ಲಿ ಇಟ್ಟುಕೊಂಡಿರಲಿಲ್ಲ. ಅವನಿಗೆ ಗೊತ್ತಿರಲಿಲ್ಲವಂತೆ! ಇನ್ನಷ್ಟು ವಿವರಗಳಿಗಾಗಿ ನಾವು ಆಗ್ರಹಿಸಿದಾಗ ಅರಿವಾದದ್ದು ಆತನಿಗೆ ಟಿಬೆಟ್‌ನ ಸಮುದಾಯಗಳೊಡನೆ ಸಂಪರ್ಕವಿದೆ. ಆದರೆ ಅವನು ಬೈಲುಕುಪ್ಪೆಯಲ್ಲಿರುವ ಟಿಬೆಟ್‌ ನಿರಾಶ್ರಿತನಲ್ಲ. ಅವರೊಡನೆ ಇವನಿಗೆ ಯಾವುದೇ ಸಂಪರ್ಕವಿಲ್ಲ. ಆದರೆ ಅವರ ಹೆಸರಿನ ನೆರಳಿನಲ್ಲಿ ಲಢಾಕ್‌ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಮಕ್ಕಳನ್ನು ಕರೆತಂದು ಅವರಿಗೆ ಧರ್ಮ ಬೋಧನೆ ಮಾಡುವುದು, ಸ್ಥಳೀಯವಾಗಿ ಪಡೆದುಕೊಂಡಿದ್ದ ಒಂದಷ್ಟು ಜಾಗದಲ್ಲಿ ಕೃಷಿ ಮಾಡುತ್ತಿರುವುದು ತಿಳಿಯಿತು.

ಮತ್ತೆ ಅದೇ ಕತೆ. ಮಕ್ಕಳನ್ನು ತೋರಿಸಿ ಅವನು ಬೇರೆಬೇರೆ ಕಡೆಗಳಿಂದ ದೇಣಿಗೆ ಸಂಗ್ರಹಿಸಿ ಕೇಂದ್ರ ನಡೆಸುತ್ತಿದ್ದ. ಗದ್ದೆ ಮತ್ತು ತೋಟದ ಕೆಲಸಗಳಲ್ಲಿ ಮಕ್ಕಳು ತೊಡಗಬೇಕಿತ್ತು. ಇವನು ಅಲ್ಪಸ್ವಲ್ಪ ಧರ್ಮಬೋಧೆ ಮಾಡುತ್ತಿದ್ದ. ಅವನ ಬಳಿ ಆ ತರಹದ ಧರ್ಮ ಬೋಧನೆ ಮಾಡಬಹುದು ಎನ್ನುವ ಯಾವುದೇ ಅರ್ಹತೆಗಳ ಗುರುತುಗಳು ಇರಲಿಲ್ಲ. ಮಕ್ಕಳನ್ನು ಅವನ ವಶಕ್ಕೆ ಕೊಡುವುದಿಲ್ಲವೆಂದೂ, ಮಕ್ಕಳ ಪೋಷಕರ ಬಳಿಗೆ ಕಳುಹಿಸಲು ನಾವು ಕಾನೂನು ಪ್ರಕಾರ ಬದ್ಧರೆಂದು ಹೇಳಿದೆವು. ಪೋಷಕರಂತೂ ಸುತರಾಂ ಹಿಂದಕ್ಕೆ ಬರಲು ಸಾಧ್ಯವೇ ಇಲ್ಲ, ಈ ಮಕ್ಕಳಿಗೆ ಏನಾದರೂ ತಾನೇ ಜವಾಬ್ದಾರ, ನೀವು ಏನೂ ಮಾಡಲಾಗದು ಎಂಬುದು ಇವನ ಖಡಾಖಂಡಿತವಾದ ಮಾತಾಗಿತ್ತು. ಮೊದಮೊದಲು ಆತನ ಮೊಂಡುವಾದ ಇವರೆಲ್ಲರೂ ವಿದೇಶಿಯರು, ನಿಮ್ಮ ಕಾನೂನು ಇವರ ಮೇಲೆ ಇಲ್ಲ. ಲಢಾಕ್‌ ಅವನಿಗೆ ಭಾರತವಲ್ಲ!

ಸರ್ಕಾರದ ವ್ಯವಸ್ಥೆಗಳು ಪ್ರಾಯಶಃ ಅವನ ಅರಿವಿನಲ್ಲಿ ಇರಲಿಲ್ಲ. ನಾವು ಜಮ್ಮು ಕಾಶ್ಮೀರ ರಾಜ್ಯದ (ಆಗಿನ್ನೂ ರಾಜ್ಯವೇ ಆಗಿತ್ತು) ಲಡಾಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರತಿನಿಧಿಯನ್ನು ಸಂಪರ್ಕಿಸಿ, ಅಲ್ಲಿಂದ ಮಕ್ಕಳ ಕಲ್ಯಾಣ ಸಮಿತಿಯವರನ್ನು ಪತ್ತೆ ಮಾಡಿ ಮಕ್ಕಳನ್ನು ಪೊಲೀಸ್‌ ಬೆಂಗಾವಲಿನಲ್ಲಿ ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಿದೆವು. ಆ ಮಕ್ಕಳ ಜೊತೆಯಲ್ಲಿ ತಾನೂ ಹೋಗುತ್ತೇನೆ ಅವರಿಗೆ ಭಾಷೆ ಬಾರದು, ಏನೂ ತೊಂದರೆಯಾಗಬಾರದು ಇನ್ನೂ ಏನೇನೋ ಅವನ ಬಡಬಡಿಕೆಯಾಗಿತ್ತು. ಮಕ್ಕಳನ್ನು ಬಿಟ್ಟು ಬಂದ ಪೊಲೀಸರು ಹೇಳಿದ್ದು, ಆತ ಇವರು ಹೋದ ರೈಲಿನಲ್ಲೇ ಪ್ರಯಾಣಿಸಿದನೆಂದೂ, ಮಕ್ಕಳನ್ನು ಲೆಹ್‌ನಲ್ಲಿ ಅಧಿಕಾರಿಗಳ ವಶಕ್ಕೆ ಒಪ್ಪಿಸುವ ಹೊತ್ತಿಗೆ ಮಕ್ಕಳ ಕೆಲ ಪೋಷಕರನ್ನು ಕರೆತಂದಿದ್ದನೆಂದೂ, ಅವರು ಇವನ ಪರ ಮಾತನಾಡುವುದು, ಮಕ್ಕಳು ವಿರುದ್ಧ ಹೇಳುವುದು ಕೆಲಕಾಲ ಆಗಿತ್ತೆಂದು ವರದಿ ಮಾಡಿದರು.

ಆದರೆ ಅಲ್ಲಿನ ಅಧಿಕಾರಿಗಳು ನಾವು ಕಳುಹಿಸಿದ್ದ ಪತ್ರವನ್ನು ಎದುರಿಟ್ಟುಕೊಂಡು, ಮಕ್ಕಳನ್ನು ರಾಜ್ಯದಿಂದ ಯಾವುದೇ ಒಪ್ಪಿಗೆಯಿಲ್ಲದೆ ಕರೆದೊಯ್ದಿರುವುದು ಮತ್ತು ದುಡಿಸಿಕೊಂಡಿರುವುದು ತಪ್ಪು ಮತ್ತು ಮಕ್ಕಳಿಗೆ ಇಲ್ಲಿಯೇ ಶಿಕ್ಷಣದ ವ್ಯವಸ್ಥೆಗಳು ಇರುವಾಗ ಹಾಗೆ ಕರೆದೊಯ್ಯಬಾರದೆಂದು ಸೂಚಿಸಿದರಂತೆ. ಈಗ ಅವನ ಬಳಿ ಲಡಾಕಿನ ಮಕ್ಕಳು ಎಷ್ಟಿರುವರು ಎಂಬ ಲೆಕ್ಕ ಒಪ್ಪಿಸಲು ತಾಕೀತು ಮಾಡಿದರಂತೆ.

ಪ್ರಕರಣ ೪
೨೦೧೦ರ ಒಂದು ಬೆಳಗಿನ ಜಾವ ನನ್ನ ಮೊಬೈಲ್‌ಗೆ ನನ್ನ ಪರಿಚಿತರೊಬ್ಬರ ಕರೆ ಬಂದಿತು. ʻಸರ್‌ ಸುಮಾರು ಮೂವತ್ತರಿಂದ ನಲವತ್ತು ಮಕ್ಕಳಿದ್ದಾರೆ ಸರ್‌. ಎಲ್ಲ ಬಿಹಾರ, ಉತ್ತರಪ್ರದೇಶದ ಮಕ್ಕಳು. ನೋಡಿದರೆ ಒಬ್ಬಾತ ಅವರನ್ನೆಲ್ಲಾ ಸಾಗಿಸಿಕೊಂಡು ಬರುತ್ತಿರುವಂತಿದೆ ಸರ್‌ʼ ನನ್ನ ನಿದ್ದೆ ಹಾರಿ ಹೋಯಿತು. ಎಲ್ಲಿ, ಏನು, ಹೇಗೆ, ಏನು ಮಾಡಬೇಕು, ಇತ್ಯಾದಿ ಪ್ರಶ್ನೆಗಳನ್ನು ಒಂದೇ ಉಸಿರಿಗೆ ಒದರಿದ್ದೆ. ʻಸರ್‌, ನಾನು ಲಕ್ನೋಗೆ ಮಕ್ಕಳನ್ನು ಬಿಡಲು ಎಸ್ಕಾರ್ಟ್‌ ಹೋಗಿದ್ದೆ. ಈಗ ಗೋರಕ್‌ಪುರ್‌ ಎಕ್ಸ್‌ಪ್ರೆಸ್‌ ಟ್ರೈನ್‌ನಲ್ಲಿದ್ದೀನಿ. ಟ್ರೈನ್‌ ಲೇಟ್‌ ಆಗಿದೆ. ಸುಮಾರು ೧೧ ಗಂಟೆಗೆ ಯಶವಂತಪುರಕ್ಕೆ ಬರುತ್ತದೆ. ನಾನಿರುವ ಭೋಗಿಯಲ್ಲೇ ಈ ಮಕ್ಕಳಿರುವುದು. ಎಲ್ಲ ಮುಸ್ಲಿಂ ಮಕ್ಕಳು. ಮಾತನಾಡಿಸಿದೆ. ಒಂದು ಸರ್ತಿ ಸ್ಕೂಲು ಅಂತಾರೆ, ಕೆಲಸಕ್ಕೆ ಅಂತಾರೆ, ಅವರಿಗೆ ಸರಿಯಾಗಿ ಏನೂ ಹೇಳಕ್ಕೆ ಬರ್ತಿಲ್ಲ. ಆದರೆ ಅವರ ಜೊತೆಯವನ ಮಾತು ಗೊತ್ತಾಯ್ತು. ನಾನು ಮಕ್ಕಳ ಜೊತೆ ಮಾತನಾಡಿಸಿದ್ದಕ್ಕೆ ಮಕ್ಕಳಿಗೆಲ್ಲ ಹೆದರಿಸ್ತಿದ್ದಾನೆ. ಅವರು ಹಿಡ್ಕೊಂಡು ಹೋಗ್ಬಿಡ್ತಾರೆ ಅಷ್ಟೆ ಅಂತಿದ್ದಾನೆ. ನನಗ್ಯಾಕೋ ಅನುಮಾನ ಸರ್‌. ನೀವು ಏನಾದರೂ ಮಾಡಿ ಬಂದು ಸ್ವಲ್ಪ ನೋಡಿ ಸರ್ʼ. ಆಕೆಯ ಮಾತಿಗೆ ರೈಲು ಓಡುವ ಚುಕುಬುಕು ಚುಕುಬುಕು ಶಬ್ದದ ಹಿಮ್ಮೇಳ.

ರೈಲಿನ ಹೆಸರು, ಸಂಖ್ಯೆ, ಭೋಗಿ ಸಂಖ್ಯೆ ತೆಗೆದುಕೊಂಡು ತಟ ತಟ ಪರಿಚಿತ ಪೊಲೀಸರಿಗೆ, ರೈಲ್ವೆ ಅಧಿಕಾರಿಗಳಿಗೆ, ಚೈಲ್ಡ್‌ಲೈನ್‌ ತಂಡಕ್ಕೆ, ಮಕ್ಕಳ ಕಲ್ಯಾಣ ಸಮಿತಿಯ ನನ್ನ ಸಹ ಸದಸ್ಯರಿಗೆ, ಮಾನವ ಕಳ್ಳಸಾಗಣೆ ತಡೆ ತಂಡಕ್ಕೆ ಫೋನು ಮಾಡಿ ನಾನು ಎದ್ದೆ. ಇಷ್ಟು ಮಾಡುವುದರೊಳಗೆ ಗಂಟೆ ಏಳು ದಾಟಿತ್ತು.

ಮನೆಯಿಂದ ಹೊರಟು ಸಂಬಂಧಿಸಿದವರನ್ನೆಲ್ಲಾ ಹುರುದುಂಬಿಸಿ ಮಧ್ಯ ಮಧ್ಯ ಮಾಹಿತಿ ನೀಡಿದ್ದವರೊಡನೆ ಮಾತನಾಡುತ್ತಾ ಕಛೇರಿ ತಲುಪಿ, ಅಲ್ಲಿಂದ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಹೋದೆ. ಅಷ್ಟರಲ್ಲಾಗಲೇ ಪೊಲೀಸರು ಮತ್ತಿತರ ತಂಡಗಳು ಸಿದ್ಧವಾಗಿದ್ದರು. ಒಂದು ತಂಡ ಆಗಲೇ ಮಫ್ತಿ ಉಡುಪಿನಲ್ಲಿ ಹಿಂದಿನ ನಿಲ್ದಾಣಕ್ಕೆ ಹೋಗಿ ರೈಲು ಹತ್ತಿ ನಿರ್ದಿಷ್ಟ ಭೋಗಿಯಲ್ಲಿದ್ದು ಪರಿಸ್ಥಿತಿ ಗಮನಿಸಿ ವರದಿ ಕಳುಹಿಸಿದ್ದರು. ಮಕ್ಕಳ ಜೊತೆಯಲ್ಲಿದ್ದ ವ್ಯಕ್ತಿ ಒಂಟಿ ಕಾಲಿನವನೆಂದೂ, ಅವನೊಡನಿರುವ ಒಬ್ಬ ಹುಡುಗಿ, ಮಗಳಿರಬೇಕು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾಳೆಂದೂ, ಮಕ್ಕಳಿಗೆ ಎಲ್ಲಿಯೂ ಇಳಿಯಬಾರದು, ಪೊಲೀಸರು ಹಿಡಿದುಕೊಂಡು ಹೋಗುತ್ತಾರೆಂದು ಹೆದರಿಸುತ್ತಿದ್ದಾರೆಂದೂ ತಿಳಿಯಿತು. ಗೋರಕ್‌ಪುರ ಎಕ್ಸ್‌ಪ್ರೆಸ್‌ ರೈಲು ಯಶವಂತಪುರ ಬರುತ್ತಿದ್ದಂತೆಯೇ ಪೊಲೀಸರು ಸುತ್ತುವರೆದು ಮಕ್ಕಳನ್ನು ಇಳಿಸಿಕೊಂಡರು. ಮಕ್ಕಳು ಸ್ವಾಭಾವಿಕವಾಗಿ ಹೆದರಿದ್ದರು. ಇದರ ಮಧ್ಯ ಮಕ್ಕಳೊಡನೆ ಇದ್ದ ಆ ವ್ಯಕ್ತಿ ಮತ್ತು ಹುಡುಗಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಅವರನ್ನೂ ಕರೆದುಕೊಂಡು ರೈಲ್ವೆ ನಿಲ್ದಾಣದಲ್ಲಿರುವ ಪೊಲೀಸ್‌ ಠಾಣೆಗೆ ಒಯ್ಯಲಾಯಿತು.

ಅಷ್ಟರಲ್ಲಿ ಒಂದಷ್ಟು ಜನ ಮುತ್ತಿಕೊಂಡರು. ಕೆಲವು ರಾಜಕೀಯದ ವ್ಯಕ್ತಿಗಳು ಧಿಡೀರ್‌ ಎಂದು ಪ್ರತ್ಯಕ್ಷರಾದರು. ನಾವೆಷ್ಟೇ ಪ್ರಯತ್ನಪಟ್ಟರೂ ಪೊಲೀಸ್‌ ದೂರು ದಾಖಲು ಆಗಲೇಯಿಲ್ಲ. ಆ ಮಕ್ಕಳು ಬಂದಿರುವುದು ಮದರಸಾದಲ್ಲಿ ಕಲಿಯಲು, ಹೀಗಾಗಿ ಇದನ್ನು ಮಕ್ಕಳ ಸಾಗಣೆ ಎಂದು ಪರಿಗಣಿಸಬಾರದು ಇತ್ಯಾದಿ ಜೋರು ಗದ್ದಲವಾಯಿತು. ಆ ವ್ಯಕ್ತಿ ಒಮ್ಮೆ ತನ್ನ ಮದರಸಾ ಇರುವುದು ಮಂಡ್ಯ ಎನ್ನುತ್ತಿದ್ದ, ಮತ್ತೊಮ್ಮೆ ಹಾಸನ ಎನ್ನುತ್ತಿದ್ದ. ಅಂತೂ ಇಂತೂ ಸರ್ಕಾರದ ಮಟ್ಟದಿಂದ ಒಬ್ಬ ಅಧಿಕಾರಿ ಬರಲೇಬೇಕಾಯಿತು. ಅವರೆಲ್ಲರ ನಡುವಿನ ಮಧ್ಯಸ್ಥಿಕೆಯಿಂದಾಗಿ ಮಕ್ಕಳನ್ನು ಆ ವ್ಯಕ್ತಿಯ ಜೊತೆಗೇ ಕಳುಹಿಸುವುದು, ಸರ್ಕಾರದ ಪರವಾಗಿ ಇಬ್ಬರು ಪೊಲೀಸರು ಬೆಂಗಾವಲಾಗಿ ಹೋಗುವುದೆಂದು ನಿರ್ಧಾರವಾಯಿತು.

ಆತ ಮಕ್ಕಳನ್ನು ಮಂಡ್ಯದ ಹತ್ತಿರದಲ್ಲಿ ತನ್ನ ಮದರಸಾಗೆ ಒಯ್ದ. ಮಂಡ್ಯದ ಮಕ್ಕಳ ಕಲ್ಯಾಣ ಸಮಿತಿ ನೀಡಿದ ಮಾಹಿತಿಯಂತೆ ಆತನಿಗಿದ್ದ ಸ್ಥಳದಲ್ಲಿ ಹತ್ತು ಜನರಿಗೆ ಕೂಡಾ ಸಮರ್ಪಕವಾಗಿ ಇರಲು ಆಗದು. ಮಕ್ಕಳು ಪ್ರತಿ ದಿನ ಸುತ್ತಮುತ್ತ ಓಡಾಡಿ ಭಿಕ್ಷೆ ಎತ್ತಿಕೊಂಡು ಬರಬೇಕು ಮತ್ತು ಆತನು ಹೇಳಿಕೊಡುವ ಧರ್ಮಗ್ರಂಥದ ಪಠಣ ಮಾಡಬೇಕು. ರಾತ್ರಿ ಹತ್ತಿರದಲ್ಲಿರುವ ಮಸೀದಿಯಲ್ಲಿ, ಅಲ್ಲಿ ಇಲ್ಲಿ ಜಗಲಿಗಳಲ್ಲಿ ಮಲಗಬೇಕು. ಇತ್ತೀಚಿನ ಕೆಲವು ದಿನಗಳಲ್ಲಿ ಕೆಲವು ಮಕ್ಕಳು ಆ ಮದರಸಾದಿಂದ ಓಡಿ ಹೋಗಿದ್ದಾರೆ. ಆದರೆ ಪೊಲೀಸ್‌ ದೂರು ದಾಖಲಾಗಿಲ್ಲ.

ಪ್ರಕರಣ ೫
೨೦೧೦ರಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಈಶಾನ್ಯ ಭಾರತದ ಕೆಲವು ರಾಜ್ಯಗಳಿಂದ ದೂರೊಂದು ಬಂದಿತ್ತು. ಅಲ್ಲಿನ ಹಳ್ಳಿಗಳಿಂದ ಮಕ್ಕಳನ್ನು ಕರ್ನಾಟಕಕ್ಕೆ ಹಿಂಡುಹಿಂಡಾಗಿ ಕೆಲವರು ಕರೆತರುತ್ತಿದ್ದಾರೆ. ಅದು ಮಕ್ಕಳ ಸಾಗಣೆಯಂತೆ ಕಾಣುತ್ತಿದೆ ಎಂದು ಅವರು ಮಕ್ಕಳಿರಬಹುದಾದ ಕೆಲವು ವಿಳಾಸಗಳನ್ನೂ ನೀಡಿದ್ದರು. ಕರ್ನಾಟಕದಲ್ಲಿರುವ ಅನೇಕ ಪ್ರಸಿದ್ಧ ಧಾರ್ಮಿಕ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಂಸ್ಥೆಗಳು, ಮಠಗಳ ಹೆಸರುಗಳು. ಆಯೋಗದ ಮೂಲಕ ನಾವು ತಂಡ ತಂಡವಾಗಿ ಅವುಗಳನ್ನು ಭೇಟಿ ಮಾಡಿದೆವು. ಸಾಕಷ್ಟು ಸಂಸ್ಥೆಗಳು ನಡೆಸುವ ಶಾಲೆ ಮತ್ತು ವಸತಿ ನಿಲಯಗಳಿಗೆ ಸರ್ಕಾರದಿಂದ ದೇಣಿಗೆ, ನೆರವು ಇದೆ. ಶಿಕ್ಷಣವನ್ನು ಕನ್ನಡದಲ್ಲಿ ನೀಡುತ್ತಿದ್ದಾರೆ! ಎಲ್ಲೋ ಕೆಲವು ಕಡೆ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ. ಮಕ್ಕಳು ಈ ರೀತಿ ಕರ್ನಾಟಕಕ್ಕೆ ಮಾತ್ರವಲ್ಲ ನೆರೆಯ ರಾಜ್ಯಗಳ ಧಾರ್ಮಿಕ ಸಂಸ್ಥೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆಂದು ಮಕ್ಕಳನ್ನು ಆ ರಾಜ್ಯಗಳಿಂದ ಕರೆತರುವ ವ್ಯಕ್ತಿ ಮತ್ತು ಆತನ ಸಹಚರರು ಬಹಳ ಹೆಮ್ಮೆಯಿಂದ ಹೇಳಿದರು. ʻಆ ರಾಜ್ಯಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ಹೀಗಾಗಿ ಪೋಷಕರೇ ಮಕ್ಕಳನ್ನು ಕಳುಹಿಸಿದ್ದಾರೆ ನೋಡಿʼ ಎಂದು ಅವರು ಪೋಷಕರಿಂದ ಒಪ್ಪಿಗೆ ಪತ್ರ ಮತ್ತು ಸ್ಟಾಂಪ್‌ ಪೇಪರ್‌ ಮೇಲೆ ಮಕ್ಕಳು ನಿಮ್ಮ ಜವಾಬ್ದಾರಿ ಎಂದು ಬರೆದುಕೊಟ್ಟಿರುವುದನ್ನು ನೋಡಿದೆವು. ಇಂತಹ ನಿಲಯಗಳನ್ನು ನಡೆಸಲು ಸರ್ಕಾರ ಅನುಮತಿ ನೀಡುವಾಗ ಸ್ಥಳೀಯ ಮಕ್ಕಳ ಪುನರ್ವಸತಿಗೇ ಆದ್ಯತೆ ನೀಡಬೇಕೆಂಬ ಶರತ್ತು ಇರುತ್ತದೆ.

ಆಯೋಗದಿಂದ ವಿವರಗಳನ್ನು ಸಂಗ್ರಹಿಸಿ ಈಶಾನ್ಯ ರಾಜ್ಯಗಳ ಸರ್ಕಾರದೊಡನೆ ಸಮಾಲೋಚನೆ (ಸ್ಥಳೀಯ ಪ್ರಭಾವಿಗಳ ವಿರೋಧ ಮತ್ತು ಒತ್ತಡಗಳ ನಡುವೆಯೂ) ನಡೆಸಿದೆವು. ಅಲ್ಲಿಂದ ಕೆಲವು ಅಧಿಕಾರಿಗಳು ಬಂದು ನಡೆಸಿದ ಸಮೀಕ್ಷೆ ಮಿಶ್ರ ಫಲಿತಾಂಶ ಕೊಟ್ಟಿತು. ಅಸ್ಸಾಂನ ಮತ್ತು ಮಿಝೋರಾಂನ ಅಧಿಕಾರಿಗಳು ಬಹಳ ಕಠಿಣವಾದ ಕ್ರಮ ಕೈಗೊಂಡು ಮಕ್ಕಳನ್ನು ಕರೆತಂದಿರುವುದು ʼಸಾಗಣೆಯ ಅಪರಾಧದ ವ್ಯಾಪ್ತಿಗೆʼ ಬರುತ್ತದೆಂದು ಖಡಾಖಂಡಿತವಾಗಿ ವಾದಿಸಿದರೆ, ಉಳಿದವರಿಂದ ಅಂತಹ ಗಟ್ಟಿ ನಿಲುವು ಕಾಣಲಿಲ್ಲ.


ಯಾವುದೇ ಧರ್ಮದ ಸಂಸ್ಥೆಗಳಿಗೆ ಮಕ್ಕಳ ನಿಲಯಗಳನ್ನು ನಡೆಸಲು ಅಷ್ಟೊಂದು ಪ್ರೀತಿ ಅನ್ನುವುದು ನನಗೆ ಸದಾ ಕಾಡುವ ಪ್ರಶ್ನೆ. (ಎಷ್ಟೋ ಬಾರಿ ಹೀಗೆ ನಡೆಸುವ ನಿಲಯಗಳನ್ನು ಅನಾಥಾಲಯ ಎಂದು ತಪ್ಪು ಹೇಳುವುದೂ ಉಂಟು.) ಧರ್ಮ ಪ್ರಚಾರಕ್ಕೆ ಈಗಿನಿಂದಲೇ ಮಕ್ಕಳನ್ನು ಸಿದ್ಧ ಮಾಡುವುದೆ ಅಥವಾ ಮುಂದೆ ಇವರು ಸಂಸಾರಸ್ಥರಾದಾಗ ಮಠ ಮಂದಿರಗಳಿಗೆ ಸದಾ ಕಾಲ ನಿಷ್ಠರಾಗಿರುತ್ತಾರೆಂದು ನಂಬಿರುವುದೆ.

ಅಥವಾ ತಮ್ಮ ಧಾರ್ಮಿಕ ಆಚಾರ ಪ್ರಚಾರ ಕಾರ್ಯಕ್ರಮಗಳು, ಪ್ರವಚನಗಳಿಗೆ ಮಕ್ಕಳು ಸದಾ ಕಾದಿಟ್ಟ ಪ್ರೇಕ್ಷಕರಾಗಲಿ ಎಂದೇನು? ಅಥವಾ ತಾವು ಮಕ್ಕಳನ್ನು ನೋಡಿಕೊಳ್ಳುತ್ತಿದ್ದೇವೆ ಎಂದು ದಾಖಲಿಸಿದರೆ, ಮಕ್ಕಳನ್ನು ನೋಡಿ ದಾನಧರ್ಮಗಳು ಸದಾ ಹರಿದುಬರುತ್ತಿರಲು ವ್ಯವ‍ಸ್ಥೆಯೇನು? ಅಥವಾ ಚಿಕ್ಕ ದೊಡ್ಡ ಗುರುಗಳಿಗೆ ಸದಾಕಾಲಕ್ಕೂ ಕೈಗೊಂದು ಆಳು, ಕಾಲಿಗೊಂದು ಆಳು ಇದ್ದು ಬಿಟ್ಟಿ ಸೇವೆ ಮಾಡುತ್ತಿರಲೇನು?

ಹಿಂದೆಂದೋ ಶೈಕ್ಷಣಿಕ ವ್ಯವ‍ಸ್ಥೆಗಳು ಹಳ್ಳಿಹಳ್ಳಿಯಲ್ಲಿ ಇಲ್ಲದಿದ್ದಾಗ ಧಾರ್ಮಿಕ ಸಂ‍ಸ್ಥೆಗಳು ಮುಂದಾಗಿ ಆಲಯಗಳನ್ನು, ಶಾಲೆಗಳನ್ನು ನಡೆಸಿ ತಮ್ಮ ತಮ್ಮ ಮತ ಅಥವಾ ಅನುಯಾಯಿಗಳ ಮಕ್ಕಳನ್ನು ಕರೆತಂದು ಆಶ್ರಯ ಕೊಟ್ಟಿದ್ದು ಈಗ ಚರಿತ್ರೆ. ಅಂತಹ ಸಂ‍ಸ್ಥೆಗಳಲ್ಲಿ ಇದ್ದು, ಅಧ್ಯಯನ ನಡೆಸಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಅನೇಕರಿದ್ದಾರೆ. ಈ ಬಗ್ಗೆ ನನ್ನದೇನೂ ಆಕ್ಷೇಪಣೆ ಇಲ್ಲ. ಆದರೆ ಈಗ ಸರ್ಕಾರದವರೇ ನಡೆಸುವ ನೂರಾರು ಶಾಲೆಗಳು, ವಿದ್ಯಾರ್ಥಿ ನಿಲಯಗಳು ಇರುವಾಗ ಹೊಸ ಯುಗದಲ್ಲೂ ಧಾರ್ಮಿಕ ನೆರಳು, ಬಣ್ಣ ಇರುವ ನಿಲಯಗಳಲ್ಲಿ ಮಕ್ಕಳನ್ನು ಕೂಡಿಕೊಳ್ಳಬೇಕು ಏಕೆ?

ಜೊತೆಗೆ ತಮ್ಮ ರಾಜ್ಯದಲ್ಲಿ ಮಕ್ಕಳು ಸಾಲುವುದಿಲ್ಲವೆಂದು ನೆರೆ ರಾಜ್ಯಗಳು, ಉತ್ತರ ಭಾರತ, ಈಶಾನ್ಯ ಭಾರತದ ರಾಜ್ಯಗಳಿಂದ ಮಕ್ಕಳನ್ನು ಸಾಗಿಸಿಕೊಂಡು ಬಂದು ತಮ್ಮ ಸಂಸ್ಥೆಗಳನ್ನು ತುಂಬಿಕೊಳ್ಳಬೇಕು ಏಕೆ?

ಹೀಗೆ ಎಲ್ಲೆಲ್ಲಿಂದಲೋ ಬಂದಿರುವ ಎಷ್ಟೋ ಮಕ್ಕಳು ಇಲ್ಲಿನ ಭಾಷೆ ಕಲಿತು ಇಲ್ಲಿಯ ಶೈಕ್ಷಣಿಕ ವ್ಯವ‍ಸ್ಥೆಯಲ್ಲಿ ಇದ್ದು ಇಲ್ಲಿಯವರೇ ಆಗಿಬಿಡುತ್ತಾರೆ. ಬೇರಾವುದೋ ರಾಜ್ಯದಲ್ಲಿ ಕಲಿತದ್ದಾದರಿಂದ ಅವರಿಗೆ ಅವರ ರಾಜ್ಯಗಳಲ್ಲಿ ದೊರೆಯುವ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಸಿಗದಿರಬಹುದು. ಅಷ್ಟೇ ಅಲ್ಲ ಅವರ ಮೇಲೆ ವಿವಿಧ ರೀತಿಯ ದೌರ್ಜನ್ಯ, ತೊಂದರೆಗಳು ಆಗುತ್ತಿದ್ದು ಅವನ್ನು ಕುರಿತು ತಿಳಿಸಲು, ರಕ್ಷಣೆ ಪಡೆಯಲು ಸೂಕ್ತ ವ್ಯವಸ್ಥೆಗಳು ಇಲ್ಲದಿರಬಹುದು.

ಭಾರತದಲ್ಲಿ ಈಗ ಜಾರಿಯಲ್ಲಿರುವ ರಾಷ್ಟ್ರೀಯ ಮಕ್ಕಳ ನೀತಿ, ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ ಹಾಗೂ ಮಾನವ ಕಳ್ಳಸಾಗಾಣಿಕೆ ತಡೆ ಕಾಯಿದೆಗಳು ಇಲ್ಲಿ ಉಲ್ಲೇಖಿಸಲಾಗಿರುವ ಸಾಕಷ್ಟು ಪ್ರಕರಣಗಳನ್ನು ಆಪರಾಧಿಕ ಕೃತ್ಯಗಳ ನೆರಳಿನಲ್ಲಿವೆ ಎಂದು ಗುರುತಿಸುತ್ತವೆ. ಮುಖ್ಯವಾಗಿ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಖಾತರಿಪಡಿಸಲಾಗಿರುವ ಕೌಟುಂಬಿಕ ವಾತಾವರಣದಿಂದ ಮಕ್ಕಳನ್ನು ಹೊರಗೊಯ್ಯುವುದು, ಬೇರಾರದೋ ವಶದಲ್ಲಿ ಮಕ್ಕಳಿದ್ದಾಗ ಅವರ ದುರುಪಯೋಗ ನಿರ್ಲಕ್ಷ್ಯವಾಗದಂತೆ ಎಚ್ಚರಿಕೆ ವಹಿಸದಿರುವುದು (ಪರಿಚ್ಛೇದ ೧೯); ಶಿಕ್ಷಣದ ಉದ್ದೇಶ ಮಕ್ಕಳಲ್ಲಿ ವ್ಯಕ್ತಿತ್ವದ ವಿಕಸನ, ಸದೃಢವಾದ ದೇಹ ಮನಸ್ಸುಗಳನ್ನು ನಿರ್ಮಿಸುವುದು ಎಂದಿದ್ದರೂ ಅದರ ಉಲ್ಲಂಘನೆ (ಪ. ೨೯); ಮಕ್ಕಳ ಹಕ್ಕಾದ ಸಾಮಾಜಿಕ ಭದ್ರತೆಯ ಉಲ್ಲಂಘನೆ (ಪ. ೨೬); ಮಕ್ಕಳಿಗೆ ತಾವಿರುವ ಸ್ಥಳದಲ್ಲಿ ಚಿತ್ರಹಿಂಸೆ, ಶೋಷಣೆಯಾಗದಂತೆ ರಕ್ಷಣೆ (ಪ. ೩೬) ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರ ಒಪ್ಪಿಕೊಂಡಿರುವ ಮಕ್ಕಳ ನ್ಯಾಯ (ಪ. ೪೦)ದ ಕಲ್ಪನೆಗಳನ್ನೇ ಇಲ್ಲಿ ಉಲ್ಲಂಘಿಸಲಾಗಿದೆ.

ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆಯಂತೆ ಜಾರಿಯಲ್ಲಿರುವ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಲ್ಲಿ ನಿಯೋಜಿತರಾಗಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಮಕ್ಕಳ ಸಂರಕ್ಷಣಾ ಘಟಕಗಳು ಎಲ್ಲ ಮಕ್ಕಳ ನಿಲಯಗಳನ್ನು ಪರಿಶೀಲಿಸುವ ಮತ್ತು ಸಕ್ರಮಗಳನ್ನು ಅಳವಡಿಸಿಕೊಳ್ಳುವ ಕೆಲಸಗಳನ್ನು ನಡೆಸಿವೆ. ಆದರೂ ಧರ್ಮದ ಹೆಸರಿನ ಮಕ್ಕಳ ನಿಲಯಗಳು ಈಗಲೂ ತಮ್ಮ ಪರಿಶೀಲನೆಗೆ, ನಿಯಮಗಳನ್ನು ಪಾಲಿಸುವ ಸೂಚನೆಗೆ ಪ್ರತಿರೋಧ ವ್ಯಕ್ತಪಡಿಸುತ್ತಲೇ ಇವೆ.


‍ಲೇಖಕರು Admin

August 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. kamalakar bhat

    ಎಷ್ಟು ಕರಾಳ ಸಂಗತಿಗಳು ಮಾರಾಯ! ಒಳ್ಳೆಯದು ಇದೆಲ್ಲ ನೀನು ಬರೀತಾ ಇರೋದು, ನನ್ನಂಥವರಿಗೆ ಗೊತ್ತಾಗುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: