ಶ್ರೀನಿವಾಸ ಪ್ರಭು ಅಂಕಣ- ಇಂಗ್ಲೀಷ್ ಓದಿನ ಭಯಕ್ಕೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

12

ಜಯನಗರ ನ್ಯಾಷನಲ್ ಕಾಲೇಜ್. ಪಿ ಯು ಸಿ ಓದಲು ನಾನು ಸೇರಿದ್ದು ಈ ಕಾಲೇಜಿಗೆ. ಆರಿಸಿಕೊಂಡದ್ದು ಆರ್ಟ್ಸ್ ವರ್ಗಕ್ಕೆ ಸೇರಿದ್ದ ವಿಷಯಗಳು. ‘ಆರಿಸಿಕೊಂಡಿದ್ದು’ ಅನ್ನುವ ಶಬ್ದ ಕೊಂಚ ಭಾರಿಯಾಯಿತೇನೋ… ಸೈನ್ಸ್ ವಿಷಯಗಳನ್ನು ನಾನು ಆರಿಸಿಕೊಂಡಿದ್ದರೂ ಕೊಡುವ ಉದಾರ ಮನಸ್ಸು ಕಾಲೇಜಿನವರಿಗಿರಲಿಲ್ಲ; ಬೇಕೆಂದು ಕೇಳುವ ಆಸಕ್ತಿ—ಉತ್ಸಾಹ ನನಗೆ ಮೊದಲೇ ಇರಲಿಲ್ಲ! ಆಗ ಚಾಲ್ತಿಯಲ್ಲಿದ್ದ ಒಂದೇ ವರ್ಷದ ಪಿಯುಸಿಯಲ್ಲಿ ನಾನು ಓದಬೇಕಾಗಿದ್ದದ್ದು ಹಿಸ್ಟರಿ, ಎಕನಾಮಿಕ್ಸ್ ಹಾಗೂ ಲಾಜಿಕ್. ಗಣಿತದ ಭೂತ ಕಾಲೇಜ್ ನಲ್ಲಿ ನನ್ನನ್ನು ಬಿಟ್ಟುಹೋದರೂ ಇಂಗ್ಲೀಷ್ ಪೆಡಂಭೂತ ಮಾತ್ರ ಕಾಡುತ್ತಲೇ ಇತ್ತು.

ಎಲ್ಲಾ ವಿಷಯಗಳನ್ನೂ ಓದಬೇಕಾಗಿದ್ದುದು ಇಂಗ್ಲೀಷ್ ನಲ್ಲೇ. ಇಂಗ್ಲೀಷೂ ಇಂಗ್ಲೀಷ್ ನಲ್ಲೇ! ಹೈಸ್ಕೂಲ್ ಶಿಕ್ಷಣವನ್ನು ಕನ್ನಡ ಮೀಡಿಯಂನಲ್ಲಿ ಓದಿ ಮುಗಿಸಿ ಪಿಯುಸಿ ಗೆ ಬಂದ ಅನೇಕ ವಿದ್ಯಾರ್ಥಿಗಳು ಈ ಇಂಗ್ಲೀಷ್ ಓದಿನ ಭಯಕ್ಕೆ ನನ್ನ ಹಾಗೆಯೇ ಬೆಚ್ಚಿಬಿದ್ದಿದ್ದರು. ಕನ್ನಡವೊಂದೇ ನನ್ನ ಅತ್ಯಂತ ಹತ್ತಿರದ ಪ್ರೀತಿಯ ನಂಟ. ನಿಧಾನವಾಗಿ ಈ ಇಂಗ್ಲೀಷ್ ಓದಿಗೆ ಒಗ್ಗಿಕೊಳ್ಳತೊಡಗಿದೆ. ಆದರೂ ಮೇಷ್ಟ್ರುಗಳು ತರಗತಿಯಲ್ಲಿ ಏನಾದರೂ ಪ್ರಶ್ನೆ ಕೇಳಿದರೆ ಮಾತ್ರ ನಡುಗಿಯೇ ಹೋಗುತ್ತಿದ್ದೆ. ಕೆಲವು ಅಧ್ಯಾಪಕರಿಗಂತೂ ಹೀಗೆ ಪದೇ ಪದೇ ಪ್ರಶ್ನೆ ಕೇಳುವುದೇ ಒಂದು ಚಟವಾಗಿತ್ತು. ಒಮ್ಮೆ ಹೀಗಾಯಿತು: ಒಂದು ದಿನ ಹುಷಾರಿಲ್ಲದೆ ಕಾಲೇಜ್ ಗೆ ಹೋಗಿರಲಿಲ್ಲ. ಮರುದಿನ ನಮ್ಮ ಲಾಜಿಕ್ ಲೆಕ್ಚರರ್ YNR ಈ ಕುರಿತಾಗಿ ಕೇಳಿಯೇ ಕೇಳುತ್ತಾರೆನ್ನುವುದು ನನಗೆ ಖಾತ್ರಿಯಾಗಿ ಗೊತ್ತಿತ್ತು. ಅದೇ ಕಾರಣವಾಗಿ ಸಹಪಾಠಿ ರಮೇಶನ ಬಳಿ ಹೋಗಿ,’ನಿನ್ನೆ ನಾನು ಆಸ್ಪತ್ರೆಗೆ ಹೋಗಿದ್ದೆ ಅನ್ನುವುದನ್ನು ಇಂಗ್ಲೀಷ್ ನಲ್ಲಿ ಹೇಗೆ ಹೇಳಬೇಕು?’ ಎಂದು ಕೇಳಿದೆ. ನನ್ನಂಥ ಅಚ್ಚ ಕನ್ನಡ ಕಂದಮ್ಮಗಳ ಸಂಕಟಗಳ ಪರಿಚಯವಿದ್ದ ರಮೇಶ ‘ಅಯ್ಯೋ ಪಾಪದವಾ’ ಎಂಬರ್ಥ ಸೂಸುವ ವಿಷಾದದ ನಗೆಯೊಂದಿಗೇ ಇಂಗ್ಲೀಷ್ ವಾಕ್ಯವನ್ನು ಹೇಳಿಕೊಟ್ಟ. ಹತ್ತಾರು ಸಲ ಆ ವಾಕ್ಯವನ್ನು ಉರು ಹೊಡೆದು ಮನನ ಮಾಡಿಕೊಂಡೆ.

ಮರುದಿನ ನಾನು ಏನು ಎಣಿಸಿದ್ದೆನೋ ಹಾಗೇ ಆಯಿತು! YNR ಅವರು ‘ನಿನ್ನೆ ಯಾಕೆ ತರಗತಿಗೆ ಬರಲಿಲ್ಲ?’ ಎಂದು ಇಂಗ್ಲೀಷ್ ನಲ್ಲಿ ಕೇಳಿಯೇಬಿಟ್ಟರು. ಒಂದು ಅಂದಾಜಿನ ಮೇಲೆ ಅವರ ಪ್ರಶ್ನೆ ಇದೇ ಇರಬೇಕೆಂದು ಖಾತ್ರಿ ಮಾಡಿಕೊಂಡು ಮೊದಲೇ ಉರು ಹೊಡೆದು ಸಿದ್ಧ ಪಡಿಸಿಕೊಂಡಿದ್ದ ಉತ್ತರವನ್ನು ಜೋರಾಗಿಯೇ ಹೇಳಿದೆ: “I had gone to the hospital sir!” ಪ್ರಶ್ನೆಗೆ ಉತ್ತರ ದೊರೆತ ಮೇಲೆ ಸುಮ್ಮನಾಗಬಾರದೇ! ಈ ಮೇಷ್ಟ್ರುಗಳದ್ದೂ ಕೆಟ್ಟಬುದ್ಧಿ: ಯಾವ ಆಸ್ಪತ್ರೆ.. ಏನು ಔಷಧಿ.. ಲೊಡ್ಡು ಲೊಸಕು. ಅಕ್ಕಪಕ್ಕದಲ್ಲಿ ಕುಳಿತಿದ್ದ ದುಬಾಷಿ ಸಹಪಾಠಿಗಳ ನೆರವಿನಿಂದ ಹೇಗೋ ಸಮರ್ಪಕ ಉತ್ತರಗಳನ್ನು ಕೊಟ್ಟು ಕೂರುವ ವೇಳೆಗೆ ಹೈರಾಣಾಗಿ ಹೋಗಿದ್ದೆ. ತರಗತಿಯಲ್ಲಿ ಎದ್ದಿದ್ದ ಸಣ್ಣ ನಗುವಿನ ಅಲೆ ಕಿವಿಯನ್ನು ಕೊರೆದು ಒಳಹೊಕ್ಕು ಮೆದುಳಿನಲ್ಲಿ ಪ್ರತಿಧ್ವನಿಸುತ್ತಿತ್ತು.

ಬೆಂಗಳೂರು ಹೈಸ್ಕೂಲ್ ನಲ್ಲೇ ಅನೇಕ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದರಿಂದ ಕಾಲೇಜ್ ನಲ್ಲಿಯೂ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸತೊಡಗಿದೆ. ಬೇರೆ ಕಾಲೇಜ್ ಗಳಲ್ಲಿ ನಡೆಯುತ್ತಿದ್ದ ಚರ್ಚಾಸ್ಪರ್ಧೆಗಳಲ್ಲಿ ನಮ್ಮ ಕಾಲೇಜ್ ನ ಪ್ರತಿನಿಧಿಯಾಗಿ ಭಾಗವಹಿಸಿ ಕೆಲ ಬಹುಮಾನಗಳನ್ನೂ ಗಳಿಸಿದೆ. ಒಮ್ಮೆ ನಮ್ಮ ಕಾಲೇಜ್ ನಲ್ಲಿಯೇ ಅಂತರ ತರಗತಿ ಇಂಗ್ಲೀಷ್ ಚರ್ಚಾಸ್ಪರ್ಧೆಯನ್ನು ಏರ್ಪಡಿಸಿದ್ದರು. ನನ್ನ ಕೆಲ ಸಹಪಾಠಿಗಳು,’ಪ್ರಭೂ, ನೀನೂ ಹೆಸರು ಕೊಡೋ ಇಂಗ್ಲೀಷ್ ಡಿಬೇಟ್ ಗೆ.. ನಿಂಗೇ ಫಸ್ಟ್ ಪ್ರೈಜ಼್ ಗ್ಯಾರಂಟಿ’ ಎಂದು ಕಿಚಾಯಿಸಿ ನಕ್ಕರು. ಯಾಕೋ ಭಯಂಕರ ಸಿಟ್ಟು ಉಕ್ಕಿ ಬಂದುಬಿಟ್ಟಿತು.. ಇಂಗ್ಲೀಷ್ ಡಿಬೇಟ್ ಗೆ ಹೆಸರು ಕೊಟ್ಟೇಬಿಟ್ಟೆ. ಅದೇ ವೇಳೆಗೆ ಸರಿಯಾಗಿ ನಾಗರಾಜ ಭಾವನವರ ತಮ್ಮನಾದ ಶ್ರೀನಿವಾಸಮೂರ್ತಿಯವರು ದೆಹಲಿಗೆ ಹೊರಟಿದ್ದವರು ಮಾರ್ಗಮಧ್ಯೆ ನಮ್ಮ ಮನೆಯಲ್ಲೇ ತಂಗಿದ್ದರು. ಇವರೇ ನಮ್ಮ ಎರಡನೇ ಭಾವನಾದ ಸ್ವಾರಸ್ಯಕರ ಪ್ರಸಂಗದ ಬಗ್ಗೆ ಮುಂದಿನ ಅಂಕಣದಲ್ಲಿ ಬರೆಯುತ್ತೇನೆ. ಚರ್ಚಾಸ್ಪರ್ಧೆಯ ವಿಷಯ: ‘A college degree is essential for getting a good job.’ ಶ್ರೀನಿವಾಸ ಮೂರ್ತಿಯವರು, ಈ ವಿಷಯದ ಪರವಾಗಿ ಸೊಗಸಾದ ಇಂಗ್ಲೀಷ್ ನಲ್ಲಿ ಎರಡು ಪುಟದ ಲೇಖನ ಬರೆದುಕೊಟ್ಟದ್ದಲ್ಲದೆ ಸರಿಯಾದ ಶಬ್ದೋಚ್ಚಾರಣೆ ಹಾಗೂ ಪ್ರಭಾವೀ ಪ್ರಸ್ತುತಿಯ ಬಗ್ಗೆಯೂ ಮಾರ್ಗದರ್ಶನ ನೀಡಿದರು.

ಭಾಷಣವನ್ನು ಚೆನ್ನಾಗಿ ಉರು ಹೊಡೆದು, ಯಾವ ಹಾವಭಾವಗಳೊಂದಿಗೆ ಪ್ರಸ್ತುತ ಪಡಿಸಬೇಕೆಂಬುದನ್ನು ಹಲವಾರು ಬಾರಿ ಅಭ್ಯಾಸ ಮಾಡಿಕೊಂಡು ನಾನು ಸ್ಪರ್ಧೆಗೆ ಸನ್ನದ್ಧನಾದೆ. ನಾನು ಅಂದು ನನ್ನ ವಾದ ಮಂಡನೆಯನ್ನು ಈ ವೇಳೆಗಾಗಲೇ ನಾನು ರೂಢಿಸಿಕೊಂಡಿದ್ದ ನನ್ನ ದೇ ಶೈಲಿಯಲ್ಲಿ ಆರಂಭಿಸಿದ್ದು ಹೀಗೆ: ‘A great scholor says, opportunity did not knock until i built a door. So, respected teachers and dear friends…’ ಈ ರೀತಿ ಪ್ರಾರಂಭಿಸುತ್ತಲೇ ಸಭಿಕರಿಂದ ಪ್ರಚಂಡ ಕರತಾಡನ! ಅಬ್ಬಾ!! ಈ ಚಪ್ಪಾಳೆಯ ಸದ್ದು ಅದೆಷ್ಟು ಮಧುರ, ಅದೆಷ್ಟು ಹಿತಕರ ಅನ್ನಿಸತೊಡಗಿತು.. ನಂತರ ಒಂದಿಷ್ಟೂ ಅಳುಕದೆ, ಬೆವರದೆ, ನಡುಗದೆ ಪೂರ್ಣವಿಶ್ವಾಸದಿಂದ ನಿರರ್ಗಳವಾಗಿ ಭಾಷಣವನ್ನು ಮಾಡಿ ಮುಗಿಸಿ ಎರಡನೆಯ ಬಹುಮಾನವನ್ನೂ ಗಳಿಸಿಕೊಂಡೆ. ಅಂದಿನಿಂದ ಇಂಗ್ಲೀಷ್ ಮೇಲೂ ಮೆಲ್ಲಗೆ ಪ್ರೀತಿ ಮೊಳೆಯತೊಡಗಿತು. ಅಂದುಕೊಂಡಷ್ಟು ಕಬ್ಬಿಣದ ಕಡಲೆಯೇನಲ್ಲ ಈ ಭಾಷೆ; ಭಯ—ಕೀಳರಿಮೆಯನ್ನು ಬದಿಗೊತ್ತಿ ಈ ಭಾಷೆಯನ್ನು ಒಲಿಸಿಕೊಳ್ಳಬೇಕೆಂದು ತೀವ್ರವಾಗಿ ಅನ್ನಿಸತೊಡಗಿತು. ಬಹುಶಃ ನನ್ನ ಇಂಗ್ಲೀಷ್ ಪುಸ್ತಕಗಳ ಓದು ಇಲ್ಲಿಂದಲೇ ಆರಂಭವಾಯಿತೆಂದು ತೋರುತ್ತದೆ.

ನಮ್ಮ ಕಾಲೇಜ್ ನಲ್ಲಿ ಏನಾದರೂ ವಿಶೇಷ ಸಮಾರಂಭಗಳು ನಡೆದ ಸಂದರ್ಭದಲ್ಲಿ ನಾನು ಯಾವುದಾದರೂ ಕನ್ನಡ ಪದ್ಯಗಳನ್ನು ವಾಚಿಸುತ್ತಿದ್ದೆ. ಆಗ ನನಗೆ ಅತ್ಯಂತ ಪ್ರಿಯವಾಗಿದ್ದ ಪದ್ಯಗಳೆಂದರೆ, ದ.ರಾ.ಬೇಂದ್ರೆಯವರು ತಮ್ಮ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಸುಂದರ ಕವಿತೆಗೆ ತಾವೇ ಬರೆದುಕೊಂಡಿದ್ದ ‘ಬೆಕ್ಕು ಹಾರುತಿದೆ ನೋಡಿದಿರಾ’ ಎಂಬ ಅಣಕುವಾಡು ಹಾಗೂ ಅದಾಗಲೇ ಅತ್ಯಂತ ಜನಪ್ರಿಯವಾಗಿದ್ದ ‘ಇಳಿದು ಬಾ ತಾಯೆ ಇಳಿದು ಬಾ’ ಎಂಬ ಅವರದೇ ಕವಿತೆಗೆ ನಾವುಗಳು ಕಟ್ಟಿದ್ದ ‘ಇಳಿದು ಬಾ ಕಾಫಿ ಇಳಿದು ಬಾ’ ಎಂಬ ಮತ್ತೊಂದು ಅಣಕುವಾಡು. ‘ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕ್ಷಮೆಕೋರುತ್ತಾ ಈ ಒಂದು ಅಣಕುಗೀತೆಯನ್ನು ತಮ್ಮ ಮುಂದೆ ಸಾದರ ಪಡಿಸುತ್ತಿದ್ದೇನೆ’ಯ ಎನ್ನುತ್ತಿದ್ದಂತೆ ಸಭಾಭವನದಲ್ಲಿ ಮತ್ತದೇ ಕರತಾಡನದ ಮಧುರ ನಾದ! ‘ಇಳಿದು ಬಾ ಕಾಫಿ ಇಳಿದು ಬಾ.. ಒಲೆಯ ಮೇಲಿಂದ ಬಳೆಯ ಕೈಯಿಂದ ಧುಮು ಧುಮುಕಿ ಬಾ’ ಎಂದು ಮುಂದುವರಿಸುತ್ತಿದ್ದಂತೆ ಹರ್ಷೋದ್ಗಾರಗಳು.. ಮೆಚ್ಚುಗೆಯ ನುಡಿಗಳು!

ನಮ್ಮ ಕಾಲೇಜ್ ನಲ್ಲಿ ಕನ್ನಡ ಅಧ್ಯಾಪಕರಾಗಿದ್ದವರು ಕೆ ಎಲ್ ಗೋಪಾಲಕೃಷ್ಣಯ್ಯ. ಅದಾಗಲೇ ತಮ್ಮ ಹಲವಾರು ವಿಮರ್ಶಾತ್ಮಕ ಲೇಖನಗಳಿಂದ ಹೆಸರಾಗಿದ್ದವರು. ಸೊಗಸಾಗಿ ಪಾಠ ಮಾಡುತ್ತಿದ್ದ ಕೆ ಎಲ್ ಜಿ ಯವರು ಕೆಲವೊಮ್ಮೆ ನಮ್ಮ ಪಠ್ಯದ ಗದ್ಯ-ಪದ್ಯಭಾಗಗಳನ್ನು ವಿದ್ಯಾರ್ಥಿಗಳಿಂದಲೇ ಓದಿಸುತ್ತಿದ್ದರು. ಅದರಲ್ಲಿಯೂ ಸಿಂಹಪಾಲು ಗಳಿಸಿಕೊಳ್ಳುತ್ತಿದ್ದವರೆಂದರೆ ನಾನು ಮತ್ತು ನನ್ನ ಆತ್ಮೀಯ ಮಿತ್ರ ರಂಗನಾಥ. ಒಮ್ಮೆ ನಮ್ಮ ಕಾಲೇಜ್ ನಲ್ಲಿ ಕನ್ನಡ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದರು.ಸ್ಪರ್ಧೆಗೆ ಕೊಟ್ಟಿದ್ದ ವಿಷಯ: ‘ವಿಜ್ಞಾನ ಆಧುನಿಕ ಬದುಕಿಗೊಂದು ವರ’. ವಿಜ್ಞಾನದ ವಿಷಯಗಳಿಂದ ತಪ್ಪಿಸಿಕೊಂಡು ದೂರ ಓಡುತ್ತಿದ್ದ ನಾನು, ‘ವಿಜ್ಞಾನವಿಲ್ಲದಿದ್ದರೆ ಇಂದು ನಮ್ಮ ಬದುಕು ಗಾಢಾಂಧಕಾರದಲ್ಲಿ ಮುಳುಗಿಹೋಗುತ್ತಿತ್ತು’ ಎಂದು ಪ್ರಾರಂಭಿಸಿ ಐದಾರು ಪುಟಗಳು ವಿಜ್ಞಾನದ ಪ್ರಾಮುಖ್ಯತೆಯನ್ನು ಕೊಂಡಾಡಿದ್ದೆ! ನನಗೆ ಪ್ರಥಮ ಬಹುಮಾನವನ್ನು ಗಳಿಸಿಕೊಟ್ಟ ಈ ಪ್ರಬಂಧ ಕೆ ಎಲ್ ಜಿ ಯವರಿಗೆ ತುಂಬಾ ಇಷ್ಟವಾಗಿತ್ತು. ಆಗಾಗ್ಗೆ ಕೆಎಲ್ ಜಿ ಯವರನ್ನು ಭೇಟಿಮಾಡಲು ಅವರ ಕೆಲವು ಹಳೆಯ ಶಿಷ್ಯರು ಬರುತ್ತಿದ್ದರು.

ನಮ್ಮ ಮೇಷ್ಟ್ರು ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟು, ‘ತುಂಬಾ ಒಳ್ಳೆಯ ಶೈಲಿ ಇದೆ ಈ ಹುಡುಗನಿಗೆ.. ಭಾಷೆ ಮೇಲೆ ಹಿಡಿತ ಇದೆ.. ಡಿಬೇಟ್ ಗಳಲ್ಲೂ ಚೆನ್ನಾಗಿ ಮಾತಾಡ್ತಾನೆ’ ಎಂದು ಮೆಚ್ಚುಗೆಯ ಮಾತಾಡಿದರು. ಅವರ ಹಳೆಯ ಶಿಷ್ಯರು ಈಗ ಸೆಂಟ್ರಲ್ ಕಾಲೇಜ್ ನಲ್ಲಿ ಬಿ ಎ ಕನ್ನಡ ಆನರ್ಸ್ ಓದುತ್ತಿದ್ದರಂತೆ. ಹಾಗಂದಕೂಡಲೇ ನಾನು ಜಾಗೃತನಾದೆ. ಆ ಹಿರಿಯ ವಿದ್ಯಾರ್ಥಿಗಳಿಂದ ಆ ಕನ್ನಡ ಆನರ್ಸ್ ಪದವಿಯ ಬಗ್ಗೆ ಪೂರ್ಣ ಮಾಹಿತಿ ಗಳಿಸಿಕೊಂಡೆ. ಬಿ ಎ ಪದವಿಯ ಮೂರೂ ವರ್ಷಗಳು ಕನ್ನಡ ಭಾಷೆ-ಸಾಹಿತ್ಯಗಳನ್ನೇ ಆಮೂಲಾಗ್ರವಾಗಿ ಅಧ್ಯಯನ ಮಾಡುವುದು! ನನ್ನ ಅತ್ಯಂತ ಪ್ರೀತಿಯ ವಿಷಯವನ್ನೇ ಪಠ್ಯವಾಗಿ ಓದುವ ಇಂಥದೊಂದು ಅವಕಾಶವಿದೆ ಎಂದು ತಿಳಿಯುತ್ತಲೇ ನಾನು ಪುಳಕಿತನಾಗಿಬಿಟ್ಟೆ. ಮನಸ್ಸು ಗರಿಗೆದರಿ ಖುಷಿ—ಸಂಭ್ರಮದಿಂದ ಕುಣಿಯತೊಡಗಿತು.

ಅಂದು ಪರಮೋತ್ಸಾಹದಿಂದ ಮನೆಗೆ ಬಂದವನೇ ಎಲ್ಲರ ಮುಂದೆ ಘೋಷಿಸಿಯೇ ಬಿಟ್ಟೆ: ‘ನನ್ನ ತೀರ್ಮಾನ ಆಗಿಹೋಗಿದೆ! ನಾನು ಮುಂದೆ ಓದುವುದು ಬಿ ಎ ಆನರ್ಸ್ ಕನ್ನಡ !’ ‘ತುಂಬಾ ಒಳ್ಳೆಯ ನಿರ್ಧಾರ… ಸಾಹಿತ್ಯ ಓದುವುದರಿಂದ ಆಗುವ ಎರಡು ಅತಿ ಮುಖ್ಯ ಪ್ರಯೋಜನಗಳೆಂದರೆ ಮನೋಲ್ಲಾಸ ಹಾಗೂ ಮನೋವಿಕಾಸ. ಮನಸ್ಸನ್ನು ಹದಗೊಳಿಸಿ,ಪಕ್ವಗೊಳಿಸಿ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ ಸಾಹಿತ್ಯಾಧ್ಯಯನ’ ಎಂದು ಅಣ್ಣ ಪ್ರೋತ್ಸಾಹದ ಮಾತುಗಳನ್ನೇ ಆಡಿದರು. ‘ತಮ್ಮ ಸೋದರ ಭವಿಷ್ಯದ ಒಂದು ಸ್ಪಷ್ಟ ಚಿತ್ರವನ್ನು ಕಟ್ಟಿಕೊಳ್ಳುತ್ತಿದ್ದಾನೆ’ ಎಂದು ಅಣ್ಣಯ್ಯ- ಅಕ್ಕನಿಗೂ ತುಂಬಾ ಖುಷಿಯಾಯಿತು.

ಕಾಲೇಜಿನ ಕೆಲ ಸಮಾರಂಭಗಳಲ್ಲಿ ನಾನು ಚಿಕ್ಕ ಚಿಕ್ಕ ಪ್ರಹಸನಗಳನ್ನು ಸಿದ್ಧಪಡಿಸಿಕೊಂಡು ಪ್ರದರ್ಶಿಸಿದ್ದೂ ಉಂಟು. ಒಂದು ಅಂಥ ಪ್ರಹಸನವೊಂದರ ಪ್ರಸ್ತುತಿ ಹಾಗೂ ತದನಂತರದ ಸಹಪಾಠಿಯೊಬ್ಬರ ವಿಮರ್ಶಾತ್ಮಕ ಪ್ರತಿಕ್ರಿಯೆಗಳು ನನ್ನ ಆಲೋಚನಾ ಕ್ರಮದ ಮೇಲೆ ಗಾಢ ಪರಿಣಾಮವನ್ನೇ ಬೀರಿದವು. ಆ ಪ್ರಸಂಗ ಹೀಗಿದೆ:

ನನ್ನ ಪ್ರಹಸನದ ಕೇಂದ್ರ ಪಾತ್ರ ಒಬ್ಬ ಹಳ್ಳಿಯ ಹುಡುಗ; ಇಂಗ್ಲೀಷ್ ನ ಗಂಧ ಗಾಳಿಯೇ ಇಲ್ಲದವನು. ಅವನು ಒಂದು ಸಂದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಅವನ ಗೆಳೆಯನೊಬ್ಬ, ‘ಹೆದರಬೇಡ.. ಸಂದರ್ಶನಕಾರರು ಎಲ್ಲರಿಗೂ ಇಂಗ್ಲೀಷ್ ನಲ್ಲಿ ಮೂರು ಪ್ರಶ್ನೆ ಕೇಳುತ್ತಾರೆ. ಮೊದಲ ಪ್ರಶ್ನೆಗೆ ನಿನ್ನ ಹೆಸರು ಉತ್ತರ; ಎರಡನೆಯದಕ್ಕೆ ಉತ್ತರ ನಿನ್ನ ವಯಸ್ಸು; ಕೊನೆಯಲ್ಲಿ ‘What do you prefer? Field work or desk work? ಎನ್ನುತ್ತಾರೆ. Both ಎಂದು ಉತ್ತರ ಕೊಡು ಸಾಕು’ ಎಂದು ಹೇಳಿ ಕಳಿಸುತ್ತಾನೆ. ಈ ಹುಡುಗನ ಸಂದರ್ಶನದ ಸರದಿ ಬರುವ ವೇಳೆಗೆ ಸಂದರ್ಶನಕಾರನಿಗೆ ಚಿಟ್ಟು ಹಿಡಿದಂತಾಗಿರುತ್ತದೆ. ಮೊದಲ ಎರಡು ಪ್ರಶ್ನೆಗಳನ್ನು ಅದಲಿಬದಲಿ ಮಾಡಿ ಕೇಳಿಬಿಡುತ್ತಾನೆ. ಹುಡುಗನ ತಪ್ಪುತಪ್ಪು ಉತ್ತರಗಳನ್ನು ಕೇಳಿ ಸಿಟ್ಟು ನೆತ್ತಿಗೇರಿ,’Are you a fool or am I a fool?’ ಎಂದು ಗುಡುಗುತ್ತಾನೆ ಸಂದರ್ಶನಕಾರ. ಹುಡುಗ ತಣ್ಣಗೆ ತನ್ನ ಮೂರನೇ ಉತ್ತರ- ‘both’ ಎಂದು ನುಡಿದು ಹೊರಡುತ್ತಾನೆ.

ಈ ಪ್ರಹಸನದಲ್ಲಿ ನಾನು ಹುಡುಗನ ಪಾತ್ರ ವಹಿಸಿದ್ದೆ; ರಂಗ ಹಾಗೂ ದ್ವಾರಕಾ ಇನ್ನೆರಡು ಪಾತ್ರಗಳನ್ನು ನಿರ್ವಹಿಸಿದ್ದರು. ಪ್ರಹಸನವನ್ನು ನೋಡಿ ಜನ ಸಾಕಷ್ಟು ಖುಷಿ ಪಟ್ಟರು. ಆದರೆ ನನ್ನ ಒಬ್ಬರು ಸಹಪಾಠಿಗೆ ಮಾತ್ರ ಅದೇಕೋ ನಮ್ಮ ಪ್ರಹಸನ ಅಷ್ಟು ಇಷ್ಟವಾಗಲಿಲ್ಲ. ಅವರೇ ಶಂಕರನಾರಾಯಣ. ನಮ್ಮ ತರಗತಿಯಲ್ಲಿ ಎಲ್ಲರಿಗಿಂತ ಕೊಂಚ ಹಿರಿಯರೇ ಆಗಿದ್ದ ಅವರದು ತುಂಬಾ ಗಂಭೀರ ಸ್ವಭಾವ. ಮಿತಭಾಷಿಯೂ ಅಂತರ್ಮುಖಿಯೂ ಆಗಿದ್ದ ಅವರನ್ನು ನಮ್ಮ ಅಧ್ಯಾಪಕರೂ ಗೌರವದಿಂದ ಕಾಣುತ್ತಿದ್ದರು. ಅವರು ನನ್ನನ್ನು ಬಳಿ ಕರೆದು, ‘ಪ್ರಹಸನದಲ್ಲಿ ನಿಮ್ಮೆಲ್ಲರ ಅಭಿನಯ ಚೆನ್ನಾಗಿತ್ತು. ಆದರೆ ವಸ್ತು ಜಾಳು ಜಾಳು..ಬಾಲಿಶ ಅನ್ನಿಸುವಷ್ಟು’ ಅಂದರು. ನಾನು, ‘ಆದರೆ ಜನ ಅಷ್ಟು ನಕ್ಕರಲ್ಲಾ.. ಅಂದಮೇಲೆ ಚೆನ್ನಾಗಿತ್ತು ಅಂತ ಅಲ್ಲವಾ?’ ಎಂದೆ. ಅವರು ನಗುತ್ತಾ,’ಜನರ ನಗು ಒಂದೇ ಮಾನದಂಡ ಅಲ್ಲ.. ಈಗ ನಕ್ಕ ಜನ ಆಮೇಲೆ ಸಿಲ್ಲಿ ಅನ್ನಬಹುದು.. ಹಾಸ್ಯ ಅಪಹಾಸ್ಯ ಆಗಬಾರದು.. ನಗಿಸುವ ರಭಸದಲ್ಲಿ ಕಪಿಚೇಷ್ಟೆ ಮಾಡಬಾರದು’ ಎಂದೆಲ್ಲಾ ಕಿವಿಮಾತು ಹೇಳಿದರು. ಆ ತಕ್ಷಣಕ್ಕೆ ಆ ಮಾತುಗಳ ಅರ್ಥ ನನ್ನಆಳಕ್ಕೆ ಇಳಿಯದಿದ್ದರೂ ನಂತರದ ದಿನಗಳಲ್ಲಿ ಅರ್ಥೈಸಿಕೊಂಡಿದ್ದೇನೆ. ಎಲ್ಲಕ್ಕಿಂತ ಖುಷಿಯ ಸಂಗತಿ ಅಂದರೆ ಆ ನನ್ನ ಹಿರಿಯ ಮಿತ್ರ, ಹಿತೈಷಿ, ತೀರಾ ಇತ್ತೀಚೆಗೆ Facebook ಮೂಲಕ ಮತ್ತೆ ನನ್ನ ಸಂಪರ್ಕಕ್ಕೆ ಬಂದಿದ್ದಾರೆ–ಬರೋಬ್ಬರಿ 52 ವರ್ಷಗಳ ಬಳಿಕ!

ಈ ಮಧ್ಯದಲ್ಲೇ ಕೆಲ ಅನಿವಾರ್ಯ ಕಾರಣಗಳ ಸಲುವಾಗಿ ನಾವು ಛಾಯಣ್ಣನ ಮನೆಯನ್ನು ಬಿಡಬೇಕಾಗಿ ಬಂದಿತು. ಆ ಮನೆ ಭಾವನಾತ್ಮಕವಾಗಿ ಇಂದಿಗೂ ನಮ್ಮ ಹಲವಾರು ನೆನಪುಗಳೊಂದಿಗೆ ತೆಕ್ಕೆ ಹಾಕಿಕೊಂಡಿರುವ ಪುಟ್ಟ ಗೂಡು. ಆ ಮನೆಯಲ್ಲಿಯೇ ವಿಜಯಕ್ಕನಿಗೆ ಹೆರಿಗೆಯಾಗಿ ನಮ್ಮ ಕುಟುಂಬಗಳ ಕಣ್ಮಣಿ ಜಯಪ್ರಭಾ ಜನಿಸಿದ್ದು.ಆ ಪ್ರಸಂಗ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಿದೆ: ಇದ್ದಕ್ಕಿದ್ದಂತೆ ಅಕ್ಕನಿಗೆ ವಿಪರೀತ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗುವಷ್ಟೂ ಸಮಯಾವಕಾಶ ಇಲ್ಲವೆನಿಸಿದಾಗ ಮನೆಗೇ ನರ್ಸ್ ಒಬ್ಬರನ್ನು ಕರೆಸಿ ಅವರ ನೆರವಿನಿಂದ ಪುಟ್ಟ ಕಂದಮ್ಮನನ್ನು ನಮ್ಮ ಬದುಕಿಗೆ ಬರಮಾಡಿಕೊಂಡದ್ದೇ ಒಂದು ಸಾಹಸಗಾಥೆ! ಅದೇ ಸೂಲಗಿತ್ತಿಯ ಅಜಾಗರೂಕತೆಯಿಂದಾಗಿ ಕೂಸಿಗೆ ತೊಂದರೆಯಾಗಿ ಆಸ್ಪತ್ರೆಗೆ ಸೇರಿಸಬೇಕಾಗಿ ಬಂದಾಗ ಎಲ್ಲರಿಗೂ ದಿಕ್ಕೇ ತಪ್ಪಿದಂತಾಗಿ ಹೋಗಿತ್ತು. ಅದಾಗಲೇ ಮೊದಲ ಹೆರಿಗೆಯಲ್ಲಿ ಹುಟ್ಟಿದ ಕೂಸನ್ನು ಕಳೆದುಕೊಂಡು ಕುಸಿದುಹೋಗಿದ್ದ ವಿಜಯಕ್ಕ ಇದ್ದಕ್ಕಿದ್ದಂತೆ ಬಂದೆರಗಿದ ಈ ಆಘಾತದಿಂದ ವಿಚಲಿತಳಾಗಿ ಬಿಟ್ಟಳು.

ಅತ್ತ ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಒಂದು ವಾರ ಕೂಸನ್ನು incubator ನಲ್ಲಿ ಇಡಲಾಗಿತ್ತು; ಇತ್ತ ಮನೆಯಲ್ಲಿ ದತ್ತ ದತ್ತ ದತ್ತ ದತ್ತ… ಕೂಸಿನ ಆರೋಗ್ಯ ಸುಧಾರಿಸಿ ಎರಗಿರುವ ಗಂಡಾಂತರ ತೊಲಗಲೆಂದು ನಿರಂತರ ಜಪ… ದತ್ತ ದತ್ತ ದತ್ತ ದತ್ತ…… ಎಲ್ಲರ ಮುಖದಲ್ಲಿ ಕೆತ್ತಿಹೋಗಿದ್ದ ಆತಂಕ.. ಭಯ.. ನಿರೀಕ್ಷೆ… ಒಂದು ವಾರದ ನಂತರ ಕೂಸು ಕ್ಷೇಮ, ಇನ್ನು ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದಾಗ ನಮಗಾದ ಸಂತಸ ಹೇಳತೀರದು! ಹೀಗೆ ಇಂಥದೊಂದು ಅವಘಡವನ್ನು ಕಣ್ತೆರೆದ ಕೆಲ ಕ್ಷಣಗಳಲ್ಲೇ ದಾಟಿಬಂದ ಮುದ್ದು ಕೂಸು ಜಯಪ್ರಭಾ, ಒಂದೊಂದೇ ಸಾಧನೆಯ ಮೆಟ್ಟಿಲುಗಳನ್ನೇರುತ್ತಾ ಇಂದು ತಲುಪಿರುವ ಎತ್ತರ ನಿಜಕ್ಕೂ ಬೆರಗು ಹುಟ್ಟಿಸುವಂಥದು. AMD ಕಂಪನಿಯ ಅಖಿಲ ಭಾರತದ ಎಲ್ಲಾ ಶಾಖೆಗಳ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ ಜಯಪ್ರಭಾ ಜಗದೀಶ್! ಅಷ್ಟೇ ಅಲ್ಲ, Global semiconductor alliance ಸಂಸ್ಥೆಯ ವತಿಯಿಂದ RISING WOMAN OF INFLUENCE FOR 2020 ಎಂಬ ಪ್ರಶಸ್ತಿಗೂ ಭಾಜನಳಾಗಿದ್ದಾಳೆ! ನಮ್ಮ ಕುಟುಂಬದ ಹೆಮ್ಮೆ ಜಯಪ್ರಭೆ! ಇರಲಿ. ಹಳೆಯ ಕಥೆಗೆ ಮರಳುತ್ತೇನೆ.

ಛಾಯಣ್ಣನ ಮನೆಯನ್ನು ಬಿಟ್ಟಮೇಲೆ ನಾವು ಬಂದದ್ದು ಅದೇ ರಸ್ತೆಯಲ್ಲಿ 200 ಮೀಟರ್ ಅಂತರದಲ್ಲೇ ಇದ್ದ ಮತ್ತೊಂದು ಮನೆಗೆ. ಮುಂದೆ ಸಾಕಷ್ಟು ಖಾಲಿಜಾಗ ಬಿಟ್ಟುಕೊಂಡಿದ್ದ ಮನೆ ಮಾಲೀಕ ಚಂದ್ರಶೇಖರಯ್ಯನವರು ಹಿಂಭಾಗದಲ್ಲಿ ಎರಡು ಮನೆಗಳನ್ನು ಕಟ್ಟಿಸಿದ್ದರು. ಮುಂಭಾಗದಲ್ಲಿ ಅವರದ್ದೇ ಸತ್ಯಪ್ರೇಮ ಫ್ಲೋರ್ ಮಿಲ್ಸ್. ಮನೆಯ ಒಂದು ಭಾಗದಲ್ಲಿ ಅವರ ಕುಟುಂಬವೇ ನೆಲೆಸಿದ್ದು ಮತ್ತೊಂದು ಭಾಗವನ್ನು ನಮಗೆ ಬಾಡಿಗೆಗೆ ಕೊಟ್ಟಿದ್ದರು. ಛಾಯಣ್ಣನ ಮನೆಗೆ ತೀರಾ ಸಮೀಪದಲ್ಲೇ ಇದ್ದುದರಿಂದ ಮನೆಯ ಸಾಮಾನು ಸರಂಜಾಮು ಸಾಗಿಸಲು ಬಾಡಿಗೆಗೆ ಗಾಡಿ ತರುವ ಅಗತ್ಯವಿಲ್ಲ,ಸುಮ್ಮನೆ ದುಡ್ಡು ದಂಡ ಎಂದು ತೀರ್ಮಾನಿಸಿದೆವು. ಮನೆಯಲ್ಲಿದ್ದ ಸಾಮಾನುಗಳನ್ನು ಮೂಟೆಗಳಲ್ಲಿ ಕಟ್ಟಿಕೊಂಡು ಕತ್ತಲಾದಮೇಲೆ ಸೈಕಲ್ ಮೇಲೆ ಮೂಟೆಗಳನ್ನೂ ಹಾಸಿಗೆಗಳನ್ನೂ ಹೇರಿಕೊಂಡು ಹತ್ತಾರು ಬಾರಿ ಓಡಾಡಿ ಸಾಗಿಸಿದೆವು.

ಹೀಗೆ ನಾವು ಹೊಸಮನೆಯನ್ನು ಸೇರಿಕೊಳ್ಳುವ ವೇಳೆಗೆ ನನ್ನ ತಂಗಿ ಪದ್ಮಿನಿಯೂ ಸಹಾ ಕೊಣನೂರಿನಿಂದ ಬೆಂಗಳೂರಿಗೆ ಬಂದು ನಮ್ಮನ್ನು ಸೇರಿಕೊಂಡಾಗಿತ್ತು. ಹೊಸಮನೆಗೆ ಬಂದ ಕೆಲ ಸಮಯದಲ್ಲೇ ನನ್ನ ಹಾಗೂ ರಾಮಯ್ಯ ಚಿಕ್ಕಪ್ಪನ ಜ್ಯೇಷ್ಠಪುತ್ರ ನಾಗರಾಜನ ಉಪನಯನ ಕಾರ್ಯ ಪುಣ್ಯಕ್ಷೇತ್ರ ರಾಮನಾಥಪುರದಲ್ಲಿ ನೆರವೇರಿತು. ತದನಂತರದ ಕೆಲದಿನಗಳಲ್ಲಿ ನಡೆದ ಹಲವಾರು ಘಟನಾವಳಿಗಳು ನನ್ನಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದ್ದಷ್ಟೇ ಅಲ್ಲ, ಕುಟುಂಬಕೇಂದ್ರಿತ ಆಲೋಚನಾ ಕ್ರಮದ ಹಾದಿಗೆ ನನ್ನನ್ನು ಸೆಳೆದು ಕೆಲ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರಕವಾದವು. ಹಾಗಾಗಿ ಆ ಪ್ರಸಂಗಕ್ಕೆ ಕೊಂಚ ಒತ್ತು ನೀಡಿ ನಿವೇದಿಸುತ್ತೇನೆ. ನಮ್ಮ ಕುಟುಂಬಗಳ ಮೌಲ್ಯ-ಆದರ್ಶ-ನಂಬಿಕೆ-ಹೃದಯ ವೈಶಾಲ್ಯತೆಗಳಿಗೆ ಕನ್ನಡಿ ಹಿಡಿಯುವಂತಿರುವ ಆ ಪ್ರಸಂಗವೇ ನಳಿನಿ ಅಕ್ಕನ ಪ್ರೇಮ ವಿವಾಹ ಪ್ರಸಂಗ.

‍ಲೇಖಕರು Admin

August 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: