ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಹೊಸ ಕವಿತೆ – ನನ್ನ ಅರಳಿಸಿಕೊ…

ನಂದಿನಿ ಹೆದ್ದುರ್ಗ

ಅವರ ನೋಟದಲ್ಲಿ
ನಮ್ಮ ಒಲುಮೆಯನ್ನು
ಬಿಕರಿಗಿಡುವ ಬಗೆ 
ಕಾಣುತ್ತಿದೆ

ಇಲ್ಲಿ 
ನನ್ನ ಹತ್ತಿರ ಬರಲು 

ಹೊರಳು ರಸ್ತೆಯ
ಬದಲು
ಈ ರಾಜಮಾರ್ಗವನ್ನೇ
ಆಯ್ದುಕೋ

ಅವರ ಅಕ್ಕರಾಸ್ತೆ‌
ಕಾಳಜಿಗಳು
ನನಗೂ
ಅರ್ಥವಾಗುತ್ತದೆ

ಅಸಂಖ್ಯ ದಟ್ಟಣೆಯಲ್ಲಿ
ನನ್ನ ಕಣ್ಣು
ಓದುವ ನಿನ್ನ
ಹುಚ್ಚಿಗೆ
ಕತ್ತಲನು ಕಾಯಬೇಡ
ಮೃದು ಬೆಳಗಲ್ಲೆ
ಬೇಕಾದ್ದು
ತಿದ್ದಿಕೋ

ಒಬ್ಬರೊಳಗೊಬ್ಬರು
ಬೇರಿಳಿಸಿಕೊಂಡಾಗಿದೆ
ಪರಿಮಳದ ಭಯಕೆ
ಮೊಗ್ಗುದುರಿಸದೆ
ಇನ್ನಾದರೂ
ನನ್ನ ಅರಳಿಸಿಕೊ

ತುಸು ಕಾಲ 
ಅವರದ್ದೂ
ವ್ಯಾಪಾರ ನಡೆಯಲಿ
ಪಾಪ

ನಿನ್ನ ಬೆಚ್ಚಗಿನ ಎದೆಗೆ‌
ಕಚಗುಳಿಯಿಡುವ
ನನ್ನ ಕಣ್ಣ ಮಿಟುಕನ್ನು
ಅಗಾ..ಹಾಗೆ
ಮಿಸುಕಾಡದೆ 
ನಿಂತು
ಸೈರಿಸಿಕೊ

ಮಲ್ಲಿಗೆಯರಳ
ಜೊತೆಗೆ
ನಿನ್ನ ಮುತ್ತುಗಳನ್ನೂ
ನೇಯುತ್ತಿದ್ದೇನೆ
ನೆಪ ಹೇಳದೆ
ನಮ್ಮ ಸಂಜೆಗಳ
ಇನ್ನಷ್ಟು
ರಂಗೇರಿಸಿಕೋ

‍ಲೇಖಕರು Admin

19 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading