ಮಂಗಳೂರು ಫುಟ್ಬಾಲಿನ ಮಹಾಗುರು : ಉಮೇಶ್ ಉಚ್ಚಿಲ್…

ಇಸ್ಮತ್ ಪಜೀರ್

ಮಂಗಳೂರಿನಲ್ಲಿ ಕ್ರಿಕೆಟ್ ಬಿಟ್ಟರೆ ಮೋಸ್ಟ್ ಪಾಪ್ಯುಲರ್ ಗೇಮ್ ಫುಟ್ಬಾಲ್. ಇಂದು ಮಂಗಳೂರಿನಲ್ಲಿ ನೂರಾರು ಕಮಿಟೆಡ್ ಫುಟ್ಬಾಲಿಗರಿದ್ದರೆ ಅದರ ಕೀರ್ತಿ ಉಮೇಶ್ ಉಚ್ಚಿಲ್ ಎಂಬ ಫುಟ್ಬಾಲ್ ಮಹಾಗುರುವಿಗೆ ಸಲ್ಲುತ್ತದೆ. ಅವರಿಗಿಂತ ಶ್ರೇಷ್ಠ ಫುಟ್ಬಾಲ್ ಆಟಗಾರರಿದ್ದರು. ಆದರೆ ಅವರಂತಹ ಕಮಿಟೆಡ್ ಫುಟ್ಬಾಲಿಗ ಇನ್ನೊಬ್ಬನಿರಲಿಲ್ಲ ಮಾತ್ರವಲ್ಲ ಈಗಲೂ ಇಲ್ಲ. ಫುಟ್ಬಾಲ್ ಅವರ ಪ್ಯಾಶನ್.

ಸೋಮೇಶ್ವರ ಉಚ್ಚಿಲದ ಬೋವಿ ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭವಾದ ಅವರ ಫುಟ್ಬಾಲ್ ಪಯಣ ಈ ಎಪ್ಪತ್ತೆರಡರ ಹರೆಯದಲ್ಲೂ ಒಂದಿಷ್ಟೂ ಮುಕ್ಕಾಗದೇ ಹಾಗೇ ಉಳಿದಿದೆ. ಸೋಮೇಶ್ವರ ಉಚ್ಚಿಲದ ಮಣ್ಣಿನಲ್ಲೇ ಫುಟ್ಬಾಲ್ ಸತ್ವ ಅಂತರ್ಗತವಾಗಿರಬೇಕೇನೋ.. ಸ್ವಾತಂತ್ರ್ಯ ಪೂರ್ವದಿಂದಲೂ ಇದೇ ಉಚ್ಚಿಲದಿಂದ ಉಪಜೀವನಕ್ಕೆಂದು ಮುಂಬೈಗೆ ತೆರಳಿ ಅಲ್ಲೇ ಬದುಕು ಕಟ್ಟಿಕೊಂಡವರು ಸಾವಿರಾರು ಮಂದಿಯಿದ್ದಾರೆ.

ದಕ್ಷಿಣ ಕನ್ನಡದ ಬೋವಿಗಳೆಂದರೆ ಸ್ಥಳೀಯ ಮಲಯಾಳಂ ಮಾತನಾಡುವ ಮೀನುಗಾರ ಸಮುದಾಯ. ಚಿಕ್ಕ ಸಮುದಾಯವಾದರೂ ಸ್ವಾತಂತ್ರ್ಯ ಪೂರ್ವದಿಂದಲೂ ಶಿಕ್ಷಣಕ್ಕೆ ತೆರೆದುಕೊಂಡ ಸಮುದಾಯವದು. ಈ ಸಮುದಾಯದ ಮಂದಿ ಹೊಟ್ಟೆಪಾಡು ಅರಸುತ್ತಾ ಮುಂಬೈಗೆ ಹೋಗಿ ಅಲ್ಲಿಯೂ ಫುಟ್ಬಾಲ್ ಆಡುತ್ತಾ ಆ ಕಾಲದಲ್ಲೇ ಫುಟ್ಬಾಲ್ ಕ್ಲಬ್‌ಗಳನ್ನು ಕಟ್ಟಿಕೊಂಡಿದ್ದರು. ಯುನೈಟೆಡ್ ಉಚ್ಚಿಲ್ಸ್ ಮತ್ತು ಜೈ ಹಿಂದ್ ಎಂಬ ಉಚ್ಚಿಲಿಗರ ಎರಡು ಫುಟ್ಬಾಲ್ ಕ್ಲಬ್ ಮುಂಬೈಯಲ್ಲಿ ಬಹಳ ಪ್ರಸಿದ್ಧವಾಗಿತ್ತು.

ಸಾಹಿತಿ ಚ.ರಾ.ಉಚ್ಚಿಲ್, ಸ್ವಾತಂತ್ರ್ಯ ಹೋರಾಟಗಾರರಾದ ಕರುಣಾಕರ್ ಉಚ್ಚಿಲ್, ನಾರಾಯಣ್ ಉಚ್ಚಿಲ್ ಮುಂತಾದವರೆಲ್ಲಾ ಒಂದು ಕಾಲಕ್ಕೆ ಮುಂಬೈಯಲ್ಲಿ ಯುನೈಟೆಡ್ ಉಚ್ಚಿಲ್ಸ್‌ಗೆ ಆಡಿದವರೇ ಆಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಗೋಲಿ ಸಂಜೀವ್ ಉಚ್ಚಿಲ್, ಇಂಟರ್‌ನ್ಯಾಶನಲ್ ಫುಟ್ಬಾಲ್ ರೆಫ್ರಿ ನಾರಾಯಣ ಉಚ್ಚಿಲ್ ಮುಂತಾದವರೆಲ್ಲಾ ಉಚ್ಚಿಲದ ಹೆಸರನ್ನು ಜಗದಗಲ ಹರಡಿದ ಫುಟ್ಬಾಲಿಗರು.

ಫುಟ್ಬಾಲ್‌ನಿಂದಾಗಿಯೇ ಹಲವು ಬ್ಯಾಂಕ್, ಪ್ರತಿಷ್ಟಿತ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಧಾರಾಳ ಉಚ್ಚಿಲಿಗರೂ ಇದ್ದಾರೆ.ಮುಂಬೈಯಲ್ಲಿ ಎಲ್.ಐ.ಸಿ.ತಂಡಕ್ಕೆ ಆಡುತ್ತಿದ್ದ ಪೊನ್ನಿಯಣ್ಣ ಉಚ್ಚಿಲ್ ಫುಟ್ಬಾಲ್ ಪೆವಿಲಿಯನ್‌ನಲೇ ಅಸುನೀಗಿದ್ದರು.

ಉಮೇಶ್ ಉಚ್ಚಿಲ್ ಅವರು ಸ್ವಾತಂತ್ರ್ಯ ಹೋರಾಟಗಾರ ಉಚ್ಚಿಲ್ ಸಹೋದರತ್ರಯರ ಸೋದರಳಿಯನೂ ಹೌದು. ಉಮೇಶ್ ಉಚ್ಚಿಲ್‌ರ ತಂದೆ ನಾರಾಯಣ ಮಾಸ್ಟರ್ ಹೆಜಮಾಡಿ ಕೋಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮಹಾಶಿಸ್ತಿನ ಮನುಷ್ಯ ಎಂದೇ ಹೆಸರುವಾಸಿಯಾಗಿದ್ದರು.

ಇಲೆಕ್ಟಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವಿ ಪಡೆದು ಉದ್ಯೋಗ ಅರಸಿಕೊಂಡು ಮುಂಬೈಗೆ ಹಾರಿದ ಉಚ್ಚಿಲ್ ಅಲ್ಲಿ ಅವರ ಹಿರಿಯರಂತೆಯೇ ಫುಟ್ಬಾಲಿನ ಸೆಳೆತಕ್ಕೊಳಗಾದರು.ಮುಂಬೈಯಲ್ಲಿ‌ ಕೆಲವರ್ಷಗಳ ಕಾಲ ವಿವಿಧ ಕಂಪೆನಿಗಳಲ್ಲಿ‌ ದುಡಿದು ಊರಿಗೆ ಮರಳಿದ ಉಚ್ಚಿಲ್‌ರಿಗೆ ಮಂಗಳೂರಿನ ಮೆರಡೋನಾ ಖ್ಯಾತಿಯ ರೆಹಮಾನ್‌ರ ಗೆಳೆತನವಾಯಿತು. ರೆಹಮಾನ್ ಒಂದು ಕಾಲಕ್ಕೆ ರಿಸರ್ವ್ ಬ್ಯಾಂಕ್ ತಂಡದಲ್ಲಿ ಆಡಿದವರು. ಅವರು ತನ್ನದೇ ಆದ ಕೆಲವು ವೈಯಕ್ತಿಕ ಕಾರಣಗಳಿಂದ ರಿಸರ್ವ್ ಬ್ಯಾಂಕಿನ ಉದ್ಯೋಗವನ್ನು ತೊರೆಯಬೇಕಾಗಿ ಬಂದಿತ್ತು.

ಆ ಬಳಿಕ ಮಂಗಳೂರಿನಲ್ಲಿ ಯುವಕ್ರೀಡಾಪಟುಗಳಿಗೆ ತರಭೇತಿ ನೀಡುತ್ತಿದ್ದರು. ಉಮೇಶ್ ಫುಟ್ಬಾಲ್ ಆಟದಲ್ಲಿ ಅಂತಹ ದೊಡ್ಡ ಸಾಧನೆಗೈಯದಿದ್ದರೂ ಫುಟ್ಬಾಲ್‌ನೆಡೆಗಿನ ಅವರ ಸೆಳೆತ ಮಾತ್ರ ಮಾತುಗಳಿಗೆ ನಿಲುಕದ್ದು. ಪ್ರತೀದಿನ ಮಂಗಳೂರಿನ ನೆಹರೂ ಮೈದಾನಕ್ಕೆ ಹೋಗಿ ಅಲ್ಲಿ‌ ಆಡುತ್ತಿದ್ದ ಹುಡುಗರಿಗೆ ಸ್ವ ಇಚ್ಚೆಯಿಂದ ಶುಲ್ಕರಹಿತ ತರಭೇತಿ ನೀಡತೊಡಗಿದರು.

ಅದೇ ರೀತಿ ತನ್ನ ಹುಟ್ಟೂರಿನ ಬೋವಿ ಶಾಲೆಯ ಮೈದಾನದಲ್ಲಿ ಆಡುತ್ತಿದ್ದ ಹುಡುಗರಿಗೆಲ್ಲಾ ತರಭೇತಿ ನೀಡತೊಡಗಿದರು. ಆ ಬಳಿಕ ಉಮೇಶ್ ತನ್ನದೇ ಆದ ಫುಟ್ಬಾಲ್ ಅಕಾಡೆಮಿಯೊಂದನ್ನು ಸ್ಥಾಪಿಸಿದರು. ಅದಕ್ಕೆ ಯು.ಆರ್.ಅಕಾಡೆಮಿ ಎಂದೇ ಹೆಸರಿಟ್ಟರು. ಇದು ಉಮೇಶ್ ಮತ್ತು ರೆಹ್ಮಾನ್‌ರ ಸ್ನೇಹದ ಪ್ರತೀಕ. ಯು=ಉಮೇಶ್ ಮತ್ತು ಆರ್=ರೆಹಮಾನ್. ಈ ಯು.ಆರ್. ಅಕಾಡೆಮಿ ಮಂಗಳೂರಿನಲ್ಲಿ ಸಹಸ್ರಾರು ಫುಟ್ಬಾಲಿಗರನ್ನು ಹುಟ್ಟು ಹಾಕಿತು. ಯು.ಆರ್.ಅಕಾಡೆಮಿ ಮೂಲಕ ಉಮೇಶ್ ಮಂಗಳೂರು ಸುತ್ತು ಮುತ್ತಲ ಶಾಲೆ ಕಾಲೇಜುಗಳಲ್ಲೂ ಸಾವಿರಾರು ಫುಟ್ಬಾಲ್ ಆಟಗಾರರನ್ನು ಸೃಷ್ಟಿಸಿದರು.

ಯು.ಆರ್.ಅಕಾಡೆಮಿ ಮಂಗಳೂರಿನಲ್ಲಿ ಫುಟ್ಬಾಲನ್ನು ಒಂದು ಮೋಸ್ಟ್ ಪಾಪ್ಯುಲರ್ ಗೇಮ್ ಆಗಿ ಬೆಳೆಸಿತು. ಅತ್ಯಂತ ಸೆಕ್ಯುಲರ್ ಮನೋಭಾವದ ಉಮೇಶ್ ಕ್ರೀಡೆಗೆ ಮನಸುಗಳನ್ನು ಬೆಸೆಯುವ ಶಕ್ತಿಯಿದೆ ಎಂದು ಬಲವಾಗಿ ನಂಬಿದವರು. ಮಂಗಳೂರಿನಲ್ಲಿ ಫುಟ್ಬಾಲ್ ಕುರಿತಂತೆ ಅತೀ ಹೆಚ್ಚು ಆಸಕ್ತಿ ಹೊಂದಿರುವ ಸಮುದಾಯ ಮುಸ್ಲಿಂ ಸಮುದಾಯ. ಮತ್ತು ಅತೀ ಹೆಚ್ಚು ಫುಟ್ಬಾಲ್ ಆಟಗಾರರಿರುವುದು ಮುಸ್ಲಿಮ್ ಸಮುದಾಯದವರೇ ಆಗಿದ್ದಾರೆ.

ಉಮೇಶ್ ಉಚ್ಚಿಲ್‌ರ ಸಮುದಾಯದ ಮನೆಭಾಷೆಯನ್ನು ನಾನು ಈಗಾಗಲೇ ಸ್ಥಳೀಯ ಮಲಯಾಳಂ ಎಂದು ಉಲ್ಲೇಖಿಸಿರುವೆ.ಅದು ಮಲಯಾಳಂನ ಛಾಯೆಯಿರುವ ಭಾಷೆಯಾದುದರಿಂದ ಅದನ್ನು ಮಲಯಾಳಂ ಎನ್ನಲಾಗುತ್ತದೆ.‌ ಉಮೇಶ್ ಉಚ್ವಿಲ್‌ರ ಸಹೋದರನೂ ‘ಸಮುದಾಯ’ (ಕಮ್ಯೂನಿಸ್ಟ್ ಪಕ್ಷದ ಸಾಂಸ್ಕೃತಿಕ ಘಟಕ)ಮುಖಂಡರೂ ಆದ ಚಿಂತಕ ವಾಸುದೇವ ಉಚ್ಚಿಲ್ ಈ ಭಾಷೆಯನ್ನು ಮಲಾಮೆ ಭಾಷೆಯೆಂದು ವಾರ್ತಾಭಾರತಿಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೊಮ್ಮೆ ಒಂದು ಲೇಖನ ಬರೆದಿದ್ದರು.

ಆ ಮಲಾಮೆ ಭಾಷೆಯು ಬ್ಯಾರಿಗಳಾಡುವ ಇನ್ನೊಂದು ಭಾಷೆ ನಕ್ – ನಿಕ್ ಭಾಷೆಗೆ ಅತ್ಯಂತ ಸನಿಹದ ಭಾಷೆಯಾದುದರಿಂದ ಉಮೇಶ್ ಉಚ್ಚಿಲ್ ಸುಲಲಿತವಾಗಿ ಬ್ಯಾರಿಗಳ ಭಾಷೆಯನ್ನೂ ಆಡುತ್ತಾರೆ. ಬ್ಯಾರಿಗಳದ್ದೊಂದು ವಿಶೇಷ ಗುಣವಿದೆ ಮುಸ್ಲಿಮೇತರನೊಬ್ಬ ಸೆಕ್ಯುಲರ್ ಆದರೆ ಅವನಿಗೆ ಎದೆಯಲ್ಲಿ ಜಾಗ ಕೊಡುತ್ತಾರೆ. ಈ ಉಮೇಶ್ ಅಪರಂಜಿ ಸೆಕ್ಯುಲರ್ ಆದುದರಿಂದ ಮತ್ತು ಬ್ಯಾರಿಗಳ ಭಾಷೆಯನ್ನು ಸರಾಗವಾಗಿ ಆಡಬಲ್ಲವರಾದುದರಿಂದ ಬ್ಯಾರಿ ಹುಡುಗರಿಗೆ ಉಮೇಶ್ ಉಚ್ಚಿಲ್ ಎಂದರೆ ಬಹಳ ಅಚ್ಚುಮೆಚ್ಚು.ಉಮೇಶ್‌ರ ಈ ಗುಣ ಮಂಗಳೂರಲ್ಲಿ ಫುಟ್ಬಾಲನ್ನು ಅತ್ಯಂತ ಜನಪ್ರಿಯ ಆಟವಾಗಿ ರೂಪಿಸುವಲ್ಲಿ ದೊಡ್ಡ ಕೊಡುಗೆಯನ್ನೇ ನೀಡಿತು.

ಉಮೇಶ್‌ರ ಗರಡಿಯಲ್ಲಿ ಪಳಗಿದ ನೂರಾರು ಹುಡುಗರು ಇಂದು ದೇಶದ ಪ್ರತಿಷ್ಟಿತ ಬ್ಯಾಂಕ್‌ಗಳಿಗೆ, ರೈಲ್ವೇಸ್ ಮುಂತಾದ ದೊಡ್ಡ ದೊಡ್ಡ ತಂಡಗಳಿಗೆ ಮತ್ತು ಪ್ರತಿಷ್ಟಿತ ಕ್ಲಬ್‌ಗಳಿಗೆ ಆಡುತ್ತಿದ್ದಾರೆ.

ಮಂಗಳೂರಿನಲ್ಲಿ ಡಿ.ಎಂ.ಅಸ್ಲಮ್ ಹಲವಾರು ವರ್ಷಗಳಿಂದೀಚೆಗೆ ನಡೆಸುತ್ತಿರುವ ಫುಟ್ಬಾಲ್ ಹಬ್ಬದಲ್ಲಿ ಉಮೇಶ್‌ರ ಪಾತ್ರವೂ ದೊಡ್ಡದಿದೆ. ಹೀಗೆ ಉಮೇಶ್ ಮಂಗಳೂರಲ್ಲಿ ಫುಟ್ಬಾಲ್‌ಗೆ ಕಳೆದ ಮೂರು ದಶಕಗಳಿಂದೀಚೆಗೆ ಜೀವಕಳೆ ತುಂಬಿದ ಮಹಾಗುರು.

‍ಲೇಖಕರು Admin

January 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: