‘ಶಿವ’ ಸ್ವಾಮಿ ‘ಚಿನ್ನ’ಸ್ವಾಮಿಯಾದ ಪ್ರಸಂಗ…

ಚಿನ್ನಸ್ವಾಮಿ ವಡ್ಡಗೆರೆ

2016 ಡಿಸೆಂಬರ್ ನ ಯಾವುದೊ ಒಂದು ದಿನ ಬರೆದು ಮರೆತೇ ಹೋಗಿದ್ದ ಈ ಪ್ರಸಂಗವನ್ನ ಅವಧಿಯಲ್ಲಿ ಬಂದಿದ್ದ ಹಳೆ ಪೋಸ್ಟ್ ಲಿಂಕ್ ಓದಿ ಗೆಳೆಯನೊಬ್ಬ ನಕ್ಕಿದ್ದೇ ನಕ್ಕಿದ್ದು….

ಹೆಸರಿನಲ್ಲಿ ಏನಿದೆ…?. ಹೌದು ವ್ಯಕ್ತಿಯ ಗುರುತು ಪತ್ತೆ ಹಚ್ಚಲು, ನಾಲ್ಕಾರು ಜನ ನಿಂತ ಕಡೆ ನಿರ್ಧಿಷ್ಠ ಗುರುತು ಹಿಡಿದು ಕರೆಯಲು ವ್ಯಕ್ತಿಗೊಂದು ಹೆಸರು ಬೇಕು ತಾನೆ. ಸಂಪ್ರದಾಯಸ್ಥ ಕುಟುಂಬದವರಾದರೆ ಪಂಚಾಂಗ,ಶಾಸ್ತ್ರ ನೋಡಿ ಮಕ್ಕಳಿಗೆ ಯಾವ ಅಕ್ಷರದಿಂದ ಹೆಸರು ಕರೆಯಬೇಕೆಂದು ತಿಳಿದವರನ್ನು ಕೇಳಿ ಮಕ್ಕಳಿಗೆ ನಾಮಕರಣ ಮಾಡುತ್ತಾರೆ.

ನಮ್ಮ ಹಳ್ಳಿಯ ಕಡೆ ಮಕ್ಕಳಿಗೆ ಹೇಗೆ ನಾಮಕರಣ ಮಾಡುತ್ತಿದ್ದರು ನಿಮಗೆ ಗೊತ್ತೆ. ಖಂಡಿತಾ ಗೊತ್ತಿರಲಿಕ್ಕೆ ಸಾಧ್ಯವಿಲ್ಲ. ಮಾನಸ ಗಂಗೋತ್ರಿಯಲ್ಲಿ ಕನ್ನಡ ಎಂಎ ಓದುವಾದ ನಮ್ಮ ಕ್ಲಾಸಿನ ಹುಡುಗಿಯರು ನನ್ನ ಹೆಸರು ಕೇಳಿ ಥ್ರಿಲ್ ಆಗಿದ್ದರು. ನಾವು ನಮ್ಮ ಗಂಡಂದಿರನ್ನು ಕೂಡಾ ಚಿನ್ನ ಅಂತ ಕರೆಯಲ್ಲ. ನಿನ್ನ ಮಾತ್ರ ಚಿನ್ನ ಚಿನ್ನ ಅಂತ ಕೂಗಿ ಕರಿತ್ತಿವಲ್ಲಪ್ಪ. ಏನ್ ನಿನ್ನ ಅದೃಷ್ಟ ನೋಡು ಅಂತ ರೇಗಿಸಿದ್ದರು.
ಅದು ಆಗಿದ್ದು ಹೀಗೆ…

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ನಮ್ಮೂರು ವಡ್ಡಗೆರೆ. ನಮ್ಮೂರಲ್ಲಿ ಸಾಮಾನ್ಯವಾಗಿ ಎಲ್ಲಾ ಹೆಸರುಗಳು “ಸ್ವಾಮಿ” ಎಂಬ ಪದದಿಂದಲೇ ಕೊನೆಗೊಳ್ಳುತ್ತವೆ. ಉದಾಹರಣೆಗೆ ಚಿನ್ನಸ್ವಾಮಿ, ಶಿವಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಮಹದೇವಸ್ವಾಮಿ… ಹೀಗೆ.

ಬಹುಶಃ ನಮ್ಮೂರು ತಮಿಳುನಾಡಿನ ಗಡಿಗ್ರಾಮವಾದ್ದರಿಂದ ನಮ್ಮವರ ಮೇಲೆ ತಮಿಳು ಭಾಷಿಕರ ಪ್ರಭಾವ ಹೆಚ್ಚಾಗಿರಬಹುದು. ಅವರಲ್ಲಿ ಪೊನ್ನುಸ್ವಾಮಿ, ರಾಮಸ್ವಾಮಿ, ಕಂದಸ್ವಾಮಿ ಅಂತ ಕರೆಯುತ್ತಾರಲ್ಲ ಹಾಗೆ. ಆ ಕಾರಣದಿಂದ ನಮ್ಮಲ್ಲೂ ಈ “ಸ್ವಾಮಿ” ಮಹಾತ್ಮೆ ಕಾಣಿಸಿಕೊಂಡಿರಬಹುದು.

ಮಹದೇಶ್ವರನಬೆಟ್ಟದ ಆಸುಪಾಸಿನಲ್ಲಿರುವವರು ಮಲ್ಲಪ್ಪ. ಮಾದೇಶ, ಮಹದೇವ, ಮಲ್ಲಿಕಾರ್ಜುನ ಮುಂತಾಗಿ ಮಕ್ಕಳಿಗೆ ನಾಮಕರಣ ಮಾಡುತ್ತಾರೆ. ನಮ್ಮೂರಿನ ಪಕ್ಕ ಬೆಳವಾಡಿ ಎಂಬ ಗ್ರಾಮವೊಂದಿದೆ. ಅಲ್ಲಿ ಗವಿ ದ್ಯಾವರ ದೇವಸ್ಥಾನವಿದೆ. ನಿಮಗೆ ಆಶ್ಚರ್ಯವಾಗಬಹುದು ಆ ಊರಿನ ತುಂಬಾ ಗವಿಯ, ಗವಿ, ಗವಿಸ್ವಾಮಿ, ಗವಿಯಮ್ಮ ಎಂಬ ಹೆಸರಿನ ನೂರಾರು ಜನರೇ ಇದ್ದಾರೆ. ವಿಶೇಷ ಏನು ಗೊತ್ತೆ. ಈ ಊರಿನ ಜನರ ಹೆಸರಿನ ವಿಶೇಷತೆಯನ್ನು ಕುರಿತೆ ಟಿವಿಯಲ್ಲಿ, ಪತ್ರಿಕೆಗಳಲ್ಲಿ ವಿಶೇಷ ಸುದ್ದಿಗಳೇ ಬಂದು ಹೋದವು.

ನನ್ನ ಹೆಸರಿನಲ್ಲಿ ಆದ ಎಡವಟ್ಟು ಪ್ರಸಂಗವನ್ನು ಹೇಳಲು ಹೊರಟವನು ನಿಮಗೆ ಏನೇನೊ ಹೇಳಿ ತಲೆ ತಿನ್ನುತ್ತಿದ್ದೇನೆ. ಕ್ಷಮಿಸಿ. ನಮ್ಮ ಮನೆಯಲ್ಲಿರುವವರಿಗೆ ಮಕ್ಕಳ ಮೇಲೆ ಜವಾಬ್ದಾರಿ ಇರಲಿಲ್ಲವೋ?. ಅಥವಾ ತಮ್ಮ ರೈತಾಪಿ ಕೆಲಸಗಳ ನಡುವೆ ಅವರು ಕಳೆದುಹೋಗಿದ್ದರೋ ನಾ ಕಾಣೆ. ನಮಗೊಂದು ನಾಮಕರಣ ಮಾಡಲು ಕೂಡಾ ಅವರಿಗೆ ಪುರುಸೊತ್ತು ಇರಲಿಲ್ಲ.

ಮನೆಯವರು ಸೇರಿದಂತೆ ಊರಿನಲ್ಲಿ ಎಲ್ಲರೂ ನನ್ನನ್ನು ಸ್ವಾಮಿ , ಸ್ವಾಮಿ ಎಂದೆ ಕರೆಯುತ್ತಿದ್ದರು. ಆಗ ನನಗೆ ನಾನು ಯಾವ “ಸ್ವಾಮಿ” ಅಂತ ಗೊತ್ತಾಗಿರಲಿಲ್ಲ. ಶಾಲೆಗೆ ಹೋಗುವುದೆ ನನಗೆ ದೊಡ್ಡ ಕೆಲಸವಾಗಿದ್ದರಿಂದ ನನ್ನ ಹೆಸರಿನ ಮೇಲೆ ನಿಗಾ ಇರಲಿಲ್ಲ ಅನ್ನಿ.

ನಮ್ಮೂರಿಗೆ ಪ್ರೌಢ ಶಾಲೆ ಬಂದಾಗ ನಾವೇ ಮೊದಲ ಬ್ಯಾಚಿನ ವಿದ್ಯಾರ್ಥಿಗಳು. ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢ ಶಾಲೆ ಊರಿಗೆ ಬಂದಾಗ 8 ನೇ ತರಗತಿಯಿಂದ ಶಾಲೆ ಪ್ರಾರಂಭವಾಯಿತು. ನಮ್ಮದೇ ಮೊದಲ ತಂಡ. ಶಾಲೆಗೊಂದು ಸೂರು ಇರಲಿಲ್ಲ.(ಈಗ ಶಾಲೆಗೆ ಪ್ರತ್ಯೇಕವಾದ ಕಟ್ಟಡ, ಆಟದ ಮೈದಾನ ಎಲ್ಲಾ ಇದೆ). ದನದ ಕೊಟ್ಟಿಗೆಯಲ್ಲಿ ನಮ್ಮ ತರಗತಿಗಳು ನಡೆಯುತ್ತಿದ್ದವು. ರಾತ್ರಿ ದನಗಳನ್ನು ಕಟ್ಟುವ ಜಾಗ ಬೆಳಗ್ಗೆ ತರಗತಿ ನಡೆಸುವ ಕೊಠಡಿಗಳಾಗಿ ಪರಿವರ್ತನೆ ಆಗುತ್ತಿತ್ತು. ಇದೆಲ್ಲಾ ಇರಲಿ. ಆ ಶಾಲೆಯ ಅನುಭವಗಳನ್ನು ಬರೆದರೆ ಅದೇ ಮತ್ತೊಂದು ಮಹಾ ಪ್ರಬಂಧಕ್ಕೆ ವಸ್ತು ಆಗಬಲ್ಲದು.

ಗಣಿತ, ಹಿಂದಿ, ವಿಜ್ಞಾನ ವಿಷಯಗಳಿಗೆ ಶಿಕ್ಷಕರೇ ಇರಲಿಲ್ಲ. ಆಗಾಗ ಡೆಪ್ಯುಟೇಷನ್ ಮೇಲೆ ಬಂದು ನಮಗೆ ಪಾಠ ಹೇಳಿ ಹೋಗಿ ಬಿಡುತ್ತಿದ್ದರು. ಸಮಾಜ, ಕನ್ನಡ, ಇಂಗ್ಲಿಷ್ ವಿಷಯಗಳಿಗೆ ಮಾತ್ರ ನಮ್ಮೂರಿನ ಪಕ್ಕದ ಇಬ್ಬರು ಶಿಕ್ಷಕರೇ ನಮಗೆ ಪರ್ಮನೆಂಟು ಶಿಕ್ಷಕರು. ಇರಲಿ.
ಹೆಸರಿನ ಬಗ್ಗೆ ಹೇಳಲು ಹೊರಟವನ್ನು ಮತ್ತೇನನ್ನೊ ಹೇಳುತ್ತಿದ್ದೇನೆ. ಕ್ಷಮಿಸಿ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶ ಬರುವ ದಿನ ಹತ್ತಿರವಾಗುತ್ತಿದ್ದಂತೆ ನಮಗೆಲ್ಲಾ ಭಯ. ನಾವು ಪಾಸಾಗುತ್ತೇವೆಯೊ, ಫೇಲಾಗುತ್ತೇವೆಯೊ ಎಂಬ ಆತಂಕ. ಫಲಿತಾಂಶ ಪ್ರಕಟಣೆಯ ದಿನ ಬಂದೆ ಬಿಟ್ಟಿತು. ಅಚ್ಚರಿ ಎಂದರೆ ಶಾಲೆಗೆ ನಾನೇ ಮೊದಲಿಗನಾಗಿ ಪಾಸಾಗಿದ್ದೆ. ಸೆಕೆಂಡ್ ಕ್ಲಾಸ್. ನನಗೇ ಹೆಚ್ಚು ಅಂಕ ಬಂದಿತ್ತು. ನನ್ನಂತ ದಡ್ಡ ಬುದ್ಧಿವಂತ ವಿದ್ಯಾರ್ಥಿಗಳು ಎಂದು ಕರೆಸಿಕೊಳ್ಳುತ್ತಿದ್ದ ಹುಡುಗರಿಗಿಂತ ಹೆಚ್ಚು ಅಂಕಗಳಿಸಿದ್ದು ನನ್ನ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿತ್ತು.

ಇದೇ ಸಂಭ್ರಮದಲ್ಲಿ ಅಂಕಪಟ್ಟಿ ಪಡೆದುಕೊಂಡವನೇ ಓಡೋಡಿ ಬಂದು ಮನೆಯವರಿಗೆ, ನಾನು ಹೆಚ್ಚು ಅಂಕಗಳಿಸಿ ಪಾಸಾಗಿರುವುದನ್ನೂ, ನನ್ನ ಅಂಕಪಟ್ಟಿಯನ್ನೂ ತೋರಿಸಿದೆ. ನಾನು ಪಾಸಾದ ಬಗ್ಗೆ ಮನೆಯವರಿಗೆ ಸಂತಸವಾದರೂ ಅಂಕಪಟ್ಟಿಯಲ್ಲಿ ನನ್ನ ಹೆಸರು “ಚಿನ್ನಸ್ವಾಮಿ” ಅಂತ ಇರುವುದರ ಬಗ್ಗೆ ಅವರಿಗೆ ತಕರಾರು ಶುರುವಾಯಿತು.

ನಿನ್ನ ಹೆಸರು “ಶಿವಸ್ವಾಮಿ” ಅಂತ ನಾವು ಕರೆಸಿರುವುದು. ಅಂಕಪಟ್ಟಿಯಲ್ಲೇಕೆ “ಚಿನ್ನಸ್ವಾಮಿ” ಅಂತ ಇದೆ. ನಡಿ ಮೇಷ್ಟ್ರರನ್ನ ಕೇಳೋಣ ಅಂತ ಶಾಲೆಗೆ ಧರಧರನೇ ಎಳೆದುಕೊಂಡು ಹೋದರು. ಪ್ರೌಢಶಾಲೆಯವರನ್ನು ಕೇಳಿದರೆ ಅದು ನಮ್ಮ ಮಿಸ್ಟೇಕ್ ಅಲ್ಲ ಪ್ರಾಥಮಿಕ ಶಾಲೆಯಲ್ಲಿ ವಿಚಾರಿಸಿ ಎಂದು ಕೈತೊಳೆದುಕೊಂಡು ಬಿಟ್ಟರು.

ಸರಿ, ಪ್ರಾಥಮಿಕ ಶಾಲೆಗೆ ಬಂದು ವಿಚಾರಿಸಿದರೆ, ಅಯ್ಯೋ ಏನೋ ಮಿಸ್ಟೆಕ್ ಆಗ್ ಬುಟದೆ ಬಿಡಿ ಅತ್ಲಾಗೆ. ಈ ಹೆಸರು ಚೆನ್ನಾಗೇ ಇದೆಯಲ್ಲಾ ಅಂದು ಬಿಟ್ಟರು. ಹೆಸರಿನ ಜೊತೆಗೆ ಹುಟ್ಟಿದ ದಿನಾಂಕದಲ್ಲೂ ಬಲು ವ್ಯತ್ಯಾಸ ಆಗಿತ್ತು. ಮೂರು ವರ್ಷ ಹೆಚ್ಚು ಮಾಡಿಬಿಟ್ಟಿದ್ದರು. ಈ ಬಗ್ಗೆ ಕೇಳಿದ್ದಕ್ಕೆ , ಅಯ್ಯೋ ಹೋಗಲಿ ಬಿಡಿ, ಸರ್ಕಾರಿ ಕೆಲಸ ಸಿಕ್ಕಿದರೆ ನಿಮ್ಮ ಹುಡುಗ ಮೂರು ವರ್ಷ ಮೊದಲೇ ನಿವೃತ್ತಿ ಆಗ್ತಾನೆ ಅಷ್ಟೇ ಅಂದು ಬಿಟ್ಟರು. ಅಲ್ಲಿಗೆ “ಹೆಸರಿ” ನ ಗೊಂದಲ ಮುಗಿಯಿತು ಅನ್ನಿ.

ಇದೆಲ್ಲಾ ಹೇಗಾಯ್ತು ಅಂತ ವಿಚಾರಿಸಿದಾಗ ಆಶ್ಚರ್ಯ, ಅಚ್ಚರಿಯಾಗುವಂತಹ ಸಂಗತಿಗಳು ಗೊತ್ತಾದವು. ನಾನು ಮೂರನೇ ತರಗತಿವರೆಗೂ “ಶಿವಸ್ವಾಮಿ” ಎಂಬ ಹೆಸರಿನಲ್ಲೇ ಶಾಲಾ ದಾಖಲಾತಿಗಳಲ್ಲಿ ಓದಿಕೊಂಡು ಬಂದಿದ್ದೇನೆ. ನಾಲ್ಕನೇ ತರಗತಿಯಿಂದ ನನ್ನ ಹೆಸರು ” ಚಿನ್ನಸ್ವಾಮಿ” ಅಂತ ಬದಲಾಗಿಬಿಟ್ಟಿದೆ.

ಅದು ಆದದ್ದು ಹೀಗೆ. ನಮ್ಮಪ್ಪನ ಹೆಸರು ಮಲ್ಲಪ್ಪ. ನಮ್ಮ ಪಕ್ಕದ ಮನೆಯ ಹುಡುಗ ಚಿನ್ನಸ್ವಾಮಿ ಅಂತ ಒಬ್ಬ ಇದ್ದ . ಅವರಪ್ಪನ ಹೆಸರು ಮಲ್ಲಪ್ಪ ಅಂತ. ಅವ ನನಗಿಂತ ವಯಸ್ಸಿನಲ್ಲಿ ಮೂರು ವರ್ಷ ದೊಡ್ಡವ. ಆದರೂ ನನ್ನೊಂದಿಗೆ ಶಾಲೆಗೆ ಬರುತ್ತಿದ್ದ. ಮೂರನೇ ತರಗತಿಗೆ “ಚಿನ್ನಸ್ವಾಮಿ”ಶಾಲೆ ಬಿಟ್ಟ. ದನ, ಆಡುಕುರಿ ಕಾಯಲು ಹೊರಟು ಹೋದ.

ನಮ್ಮ ಮೇಷ್ಟ್ರ ದಾಖಲಾತಿ ಪುಸ್ತಕದಲ್ಲಿ ಅವನ ಹೆಸರನ್ನು ಕೈ ಬಿಡುವ ಬದಲು ನನ್ನ ಹೆಸರನ್ನು ಕೈ ಬಿಟ್ಟರು. ನಾನು “ಚಿನ್ನಸ್ವಾಮಿ” ಎಂಬ ಹೆಸರಿನಲ್ಲಿ ಓದಿಕೊಂಡು ಮುಂದೆ ಬಂದೆ. ನಿಜವಾದ ಚಿನ್ನಸ್ವಾಮಿ “ಶಿವಸ್ವಾಮಿ”ಯಾಗಿ ಈಗಲೂ ದನಕಾಯುತ್ತಿದ್ದಾನೆ.

ಹೀಗೆ “ಶಿವ”ನಾಗಿದ್ದ ನಾನು ಎಲ್ಲರ ಬಾಯಲ್ಲೂ “ಚಿನ್ನ”ನಾದೆ. ಹೆಸರು ಬದಲಾಗುವುದರಿಂದ ಆರಂಭವಾದ ನನ್ನ ಬದುಕಿನ ಪಯಣ ಹತ್ತು ಹಲವು ಅಚ್ಚರಿಗಳೊಂದಿಗೆ, ಅನೇಕ ವಿಸ್ಮಯಗಳ ಸರಮಾಲೆಯೊಂದಿಗೆ ತೇಲುತ್ತಾ, ಮುಳುಗುತ್ತಾ ಸಾಗುತ್ತಲೇ ಇದೆ.

ಬರಿಗಾಲ ರೈತನ ಮಗ ದೇಶ ವಿದೇಶ ಸುತ್ತಿದ್ದೇನೆ. ಜೇಬಿನಲ್ಲಿ ನಯಾ ಪೈಸೆಯೂ ಇಲ್ಲದಿದ್ದರೂ ಸಂತೋಷವಾಗಿರುವುದನ್ನು ಕಲಿತ್ತಿದ್ದೇನೆ. ಹಠಮಾರಿಯೂ, ಸ್ವಾಭಿಮಾನಿಯೂ ಆಗಿದ್ದೇನೆ. ಇದರಿಂದ ನಷ್ಟಕ್ಕಿಂತ ಹೆಚ್ಚಾಗಿ ಲಾಭವೇ ಆಗಿದೆ. ಸತ್ಯ ಏನು ಗೊತ್ತಾ ನನ್ನ ಕಷ್ಟಕಾಲದಲ್ಲಿ ಕೈ ಹಿಡಿಯುವ ಗೆಳೆಯರ ಅಪಾರ ಬಳಗವೇ ನನ್ನ ಬೆನ್ನಿಗಿದೆ. ಅದೇ ನನ್ನನ್ನು ಕಾಪಾಡಿದೆ.

ಹಳ್ಳಿಯಿಂದ ಹಿಡಿದುಕೊಂಡು ದಿಲ್ಲಿಯವರೆಗೆ, ಗುಡಿಸಲಿನಿಂದ ಹಿಡಿದುಕೊಂಡು ಮಹಲುಗಳವರೆಗೆ ಎಲ್ಲಾ ಅನುಭವಗಳು ನನ್ನದಾಗಿವೆ. ಇದಕ್ಕಿಂತ ಈ ಬದುಕಿನಿಂದ ಹೆಚ್ಚು ನಿರೀಕ್ಷೆ ಇನ್ನೇನನ್ನೂ ತಾನೇ ನಾನು ಮಾಡಲಿ. ತುಂಬಾ ದಿನಗಳಿಂದ ಇದೆಲ್ಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅಂದುಕೊಂಡಿದ್ದೆ. ಆಗಿರಲಿಲ್ಲ.

ಇಂದು ಯಾಕೋ ಹೇಳಿಕೊಳ್ಳಲ್ಲೇ ಬೇಕೆಂಬ ಆಸೆ ಒಳಗಿನಿಂದಲೇ ಬಂತು. ಹಾಗಾಗಿ ಹೇಳಿಬಿಟ್ಟೆ. ಹೆಸರು ಬದಲಾಯಿತು.ಬದುಕು ಬದಲಾಯಿತು. ಒಟ್ಟಿನಲ್ಲಿ ಆದದ್ದೆಲ್ಲಾ ಒಳಿತೇ ಆಯಿತು. ಏನಂತೀರಿ.

‍ಲೇಖಕರು Admin

January 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: