ಒಮ್ಮೆ ಹೀಗಾಯಿತು…

ಪುಟ್ಟರಾಧ್ಯ ಎಸ್

ತಿಪಟೂರಿನ ಬಿಳಿಗೆರೆ ಗ್ರಾಮದ ಬೆಟ್ಟದ ಬುಡವೊಂದರಲ್ಲಿ ನೀಲಗಿರಿ ಮತ್ತು ಅಕೇಶಿಯ ನೆಡುತೋಪಿನ ಬಳಿ ನಿಂತಿದ್ದೆ. ಮೊದಲ ಬಾರಿಗೆ ನಾನು ಎಂದೂ ಕಂಡಿರದ ಒಂದು ಜೋಡಿ ಹಕ್ಕಿ ಅಕೇಶಿಯಾ ಮರದ ಮೇಲೆ ಹಾರಿ ಬಂದು ಕೂತವು. ಅದಾಗಲೇ ಈ ಹಕ್ಕಿಗಳ ಬಗ್ಗೆ ತಿಳಿದ್ದಿದರಿಂದ ಮಂಗಟ್ಟೆಗಳು ಎಂದು ಅರಿವಾಯಿತು. ಆದರೆ ಆಕೇಶಿಯಾ ನೆಡುತೋಪಿನಲ್ಲಿ ಎಂತದೂ ಉಪಯೋಗ ಕಾಣದೆ ಮತ್ತೆರಡು ನಿಮಿಷದಲ್ಲಿ ಹಾರಿ ಹೋದದ್ದು ಕಂಡೆ. ಆಗಿನ್ನು ಬೇಸಿಗೆ ಶುರುವಾಗಿತ್ತು.

ಮುಂದೆ ಬೇಸಿಗೆ ಮುಗಿದು ಊರಿಗೆ ಬಂದಾಗ ನೀಲಗಿರಿ ತೋಪು ಬೇಸಿಗೆಯ ಕಾಡ್ಗಿಚ್ಚಿಗೆ ಉರಿದು ಬೂದಿಯಾಗಿತ್ತು. ಪ್ರಕೃತಿ ಯಾಕೋ ಮಾನವ ನೆಡುತೋಪಾದ ನೀಲಗಿರಿಯನ್ನು ಸಹಿಸಲಿಲ್ಲ. ಆದರೆ ಅಕೇಶಿಯ ಮರಗಳನ್ನು ಇನ್ನೂ ಉಳಿಸಿಕೊಂಡಿದೆ. ಮಾನವನ ಹಸ್ತ ಕ್ಷೇಪ ಕಡಿಮೆಯಾದಲ್ಲಿ ಪ್ರಕೃತಿ ತನ್ನ ಗಾಯಗಳನ್ನು ತಾನು ಬೇಗ ವಾಸಿ ಮಾಡಿಕೊಳ್ಳಬಲ್ಲದು.

ಆದ್ದರಿಂದ ಇದೇ ಬೆಂದು ಹೋದ ತೋಪಿನಲ್ಲಿ ನಾವು ಕೆಲವರು ಸೇರಿ ಮರ ಹಾಕೋಣ ಎಂದು ನಿರ್ಧರಿಸಿ ಮೂವತ್ತು ಹಣ್ಣಿನ ಮರಗಳನ್ನು ತಂದು ನೆಡುವ ಕೆಲಸ ಮಾಡಿದೆವು. ಹಾಗೆ ನೋಡಿದ್ರೆ ಇದೂ ಕೂಡ ಹಸ್ತ ಕ್ಷೇಪವೇ ಆದರೆ ಹಾಗೆ ಬಿಟ್ಟಿದ್ದರೆ ಒತ್ತುವರಿ ಆಗುವ ಸಮಸ್ಯೆ ಒಂದಾದರೆ ಎರಡನೆಯದು ಮಂಗಟ್ಟೆಯನ್ನು ಅಲ್ಲಿ ಕಂಡಿದ್ದರಿಂದ ಮತ್ತು ಕರಡಿಗಳು ಬೆಟ್ಟದಲ್ಲಿ ಇರುವುದರಿಂದ ಊರಿನ ಕಡೆ ಬರುವುದು ನಿಂತು ಅವುಗಳಿಗೆ ಅಲ್ಲೇ ಒಂಚೂರು ನೆಲೆಯಾದೀತು ಎಂಬ ಯೋಚನೆ.

ನೀಲಗಿರಿ ಖಾಲಿಯಾಗಿದ್ದ ಜಾಗದಲ್ಲಿ ಸಸಿಗಳನ್ನು ನೆಟ್ಟು ನೀರು ಹಾಕಿ ಮತ್ತೆ ಬೆಂಗಳೂರಿನ ಕಡೆ ಬಂದ್ದಾದ್ದಾಯಿತು. ಬಯಲಿನಲ್ಲಿ ಬರೀ ಮರಗಳನ್ನು ನೆಟ್ಟರೆ ಸಾಕೆ !? ಉಳಿಸಿಕೊಳ್ಳಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ದನ ಕುರಿ ಕಾಟ, ಕಾಡ್ಗಿಚ್ಚು ಸೇರಿದಂತೆ ಹಲವು ಸಮಸ್ಯೆ ಇರುತ್ತದೆ. ನಾವು ನೆಟ್ಟ ಮೇಲೆ ಮಳೆ ಚೆನ್ನಾಗಿ ಬಂದು ಸಸಿಗಳು ಒಂದು ವರ್ಷದಲ್ಲಿ ಚೆನ್ನಾಗಿಯೇ ಬೆಳೆದವು. ಆದರೆ ಅಷ್ಟೊತ್ತಿಗೆ ಮತ್ತೆ ಇನ್ನೊಂದು ಬೇಸಿಗೆ ಬಂತು ಆಗ ಬೆಟ್ಟದ ಬುಡದಲ್ಲಿ ಒಂದು ಫೈರ್ ಲೈನ್ ಹಾಕಿ ಕಾಡ್ಗಿಚ್ಚನ್ನ ತಡೆಯುವ ಸಾಹಸ ಮಾಡಿದೆವು.

ಮುಂದೆರಡು ವಾರ ಬಂದು ಟ್ಯಾಂಕರ್ ನೀರು ತರಿಸಿ ಬೆಟ್ಟದ ಬುಡದವರೆಗೂ ಹೊತ್ತು ನೀರು ಹಾಕಿ ಮತ್ತೆ ಬೆಂಗಳೂರಿಗೆ ವಾಪಸಾಗಿದ್ದೆ. ಇರುವ ಪ್ರಾಕೃತಿಕ ಕಾಡು ಹಾಳು ಮಾಡಿ ಮೂರು ಮರ ಬೆಳೆಸುವ ಮಾನವರ ಬೂಟಾಟಿಕೆಗೆ ಪ್ರಕೃತಿ ಒಂದು ಕೆಟ್ಟ ನಗು ಬೀರಿರಬೇಕು. ಆದರೆ ಇಂತಹ ದೈತ್ಯ ವ್ಯವಸ್ಥೆಯ ಮುಂದೆ ಇನ್ನೇನು ಮಾಡಲಾದೀತು ಬಿಡಿ.

ಒಂದೆರಡು ತಿಂಗಳು ಊರನ್ನು ಕೆಲಸಗಳ ಮಧ್ಯೆ ಮರೆತು ಹೋದೆ. ಒಂದಿನ ಬಿಳಿಗೆರೆಯಂದ ಫೋನ್ ಕಾಲ್ ಬಂತು. “ಅಣ್ಣ ಬೆಟ್ಟಕ್ಕೆ ಬೆಂಕಿ ಬಿದ್ದಿದೆ. ನಾವು ಹಾಕಿದ್ದ ಅಷ್ಟೂ ಸಸಿಗಳು ಹೊತ್ತಿ ಉರಿದಿರುವಲ್ಲಿ ಯಾವುದೆ ಸಂಶಯವಿಲ್ಲ ಕಾರಣ ಕಾಡ್ಗಿಚ್ಚು ಬಲು ಜೋರಾಗಿದ್ದು ಬೆಟ್ಟದ ಬುಡ ದಾಟಿ ಪಕ್ಕದ ಹೊಲಗಳಿಗೂ ರಾಚಿದೆ.” ಬೇಸರವಾಯ್ತು ಆದರೂ ಇದೆಲ್ಲ ಇದ್ದಿದ್ದೆ ಎಂಬ ಅರಿವಿತ್ತು. ಎಲ್ಲ ಹೋಯ್ತು ಎಂದುಕೊಂಡು ಊರಿಗೆ ಹೋದವನು ನೋಡಲು ಮತ್ತೆ ಬೆಟ್ಟದ ಬುಡದ ಬಳಿ ಹೋದಾಗ ಆಶ್ಚರ್ಯ ಎಂಬಂತೆ ನಾವು ಹಾಕಿದ್ದ ಅಷ್ಟೂ ಗಿಡಗಳು ಬದುಕುಳಿದಿದ್ದವು.

ಪ್ರಕೃತಿ ತನಗೆ ಬೇಕಾದ್ದನ್ನು ಉಳಿಸಿಕೊಂಡು ಬೇಡವಾದದ್ದನ್ನು ಸುಟ್ಟು ಹಾಕಿತ್ತು. ಇದೆಲ್ಲ ಯಾಕೆ ಹೇಳಿದೆ ಎಂದರೆ ಮರ ನೆಟ್ಟೆವು ಎಂಬ ದೊಡ್ಡಸ್ತಿಕೆ ತೋರಿಸಲಲ್ಲ, (ಮರ ನೆಡುವುದು ನಮ್ಮ ಪ್ರತೀ ವರ್ಷದ ಕೆಲಸ ಬಿಡಿ) ಆದರೆ ನಾವು ನೆಟ್ಟ ಮಾತ್ರಕ್ಕೆ ಅದು ಪರಿಸರಕ್ಕೆ ಅದು ಬೇಕು ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಅದು ಪ್ರಕೃತಿಯೇ ನಿರ್ಧರಿಸುತ್ತದೆ.

ನಾವು ಅದೆಷ್ಟೇ ಮರ ನೆಟ್ಟರು ಪ್ರಕೃತಿ ಬೆಳೆಸಿದ ಕಾಡಿನ ತೃಣ ಸಮಾನವೂ ಅಲ್ಲ. ಮರ ನೆಡುವುದಕ್ಕಿಂತ ಹೆಚ್ಚಾಗಿ ಇರುವ ಮರ ಕಾಡುಗಳನ್ನು ಹಾಳು ಮಾಡದೆ ಇದ್ದರೆ ಅದುವೇ ನಾವು ಪರಿಸರಕ್ಕೆ ಮಾಡುವ ಅತೀ ದೊಡ್ಡ ಸಹಾಯ. ಬರೀ ಮೂವತ್ತು ಮರ ನೆಟ್ಟು ನಾವು ನೆಟ್ಟದ್ದು ಸರಿ ಇದೆಯೋ ಇಲ್ಲವೋ ಎಂದು ತಿಳಿಯದೆ , ಪ್ರಕೃತಿ ಅವುಗಳನ್ನು ಆರಿಸುತ್ತದೆಯೋ ಇಲ್ಲವೋ ಅರಿವಿಲ್ಲದೆ, ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿರುವಾಗ ಮೇಕೆದಾಟು ಯೋಜನೆ ಮಾಡಿದರೆ ಪ್ರಾಕೃತಿಕವಾಗಿ ಅಲ್ಲಿನ ಸಾವಿರಾರು ಎಕರೆಯಲ್ಲಿ ಬೆಳೆದಿರುವ ಲಕ್ಷಾಂತರ ಮರಗಳು ಮುಳುಗಿ ಹೋದರೆ ಪರಿಸರಕ್ಕೆ ಎಂತಹ ಹಾನಿಯಾಗಬಹುದು ಯೋಚಿಸಿ.

ಮೊನ್ನೆ ಬಂಡೀಪುರದ ಗಂಡು ಹುಲಿಯೊಂದು ಈಗ ಮೇಕದಾಟು ಅಣೆಕಟ್ಟು ಮಾಡಿದರೆ ಮುಳುಗಡೆ ಆಗಲಿರುವ ಕಾಡಿನೊಳಗೆ ಬಂದಿದೆ ಎಂದು ಸಂಜಯ್ ಗುಬ್ಬಿಯವರ ಅಂಕಣದಲ್ಲಿ ಓದಿದೆ. ಹುಲಿಗಳು ಭಾರತವನ್ನ ಜೀವ ವೈವಿಧ್ಯತೆಯ ವಿಶ್ವ ನಕ್ಷೆಗೆ ಹಾಕಿ ಮೆರಗು ತಂದಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹುಲಿ ಎಂದೊಡನೆ ಒಂದು ಕಥೆ ಹೇಳುತ್ತೇನೆ ಕೇಳಿ. 2005 ರಲ್ಲಿ ಮಧ್ಯ ಪ್ರದೇಶದ ಪೆಂಚ್ ಕಾಡಿನಲ್ಲಿ ಒಂದು ಹೆಣ್ಣು ಹುಲಿ ಜನ್ಮ ತಾಳುತ್ತದೆ. ಮುಂದೆ ಅದು ಮೊದಲ ಬಾರಿ ಮರಿ ಹಾಕಿದಾಗ ಅದಕ್ಕೆ T15 ಕಾಲರ್ ಹಾಕುತ್ತಾರೆ.

ಅಂದಿನಿಂದ ಅದರ ಹೆಸರು ಕಾಲರ್ವಾಲಿ ಎಂದು ನಾಮಾಂಕಿತವಾಗಿ ಹೆಸರು ತಾಳುತ್ತದೆ. ಅಲ್ಲಿನಿಂದ ಈ ಕಾಲರ್ವಾಲಿ ಪೆಂಚ್ ಕಾಡಿನಲ್ಲಿ ತನ್ನ ಅಧಿಪತ್ಯವನ್ನು ಸಾರುತ್ತಾ ತನ್ನ ಸುಧೀರ್ಘ ಹದಿನೇಳು ವರ್ಷದಲ್ಲಿ 8 ಬಾರಿ ತಾಯಿಯಾಗಿ ಒಟ್ಟು 28 ಹುಲಿ ಮರಿಗಳನ್ನು ಹಾಕಿ ಅದರಲ್ಲಿ 25 ಮರಿಗಳನ್ನು ಸಾಕಿ ಸಲುಹಿ ಮುಂದೆ ಅವು ಆರೋಗ್ಯಕರವಾಗಿ ಬೆಳೆದು ಮಧ್ಯಪ್ರದೇಶವನ್ನು ಹುಲಿ ರಾಜ್ಯವನ್ನಾಗಿಸಿ ಭಾರತದ ಭವ್ಯ ಜೀವ ವೈವಿಧ್ಯವನ್ನು ಇಡೀ ಜಗತ್ತಿಗೆ ಸಾರುತ್ತದೆ.

ಒಂದು ಹುಲಿ ಅಷ್ಟು ಸುಧೀರ್ಘ ಬದುಕು ಬಾಳಿ ಟೆರಿಟರಿ ಸಂಘರ್ಷಗಳನ್ನು ಮೆಟ್ಟಿ ನಿಂತು ಯಶಸ್ವಿಯಾಗಿ ಅಷ್ಟೂ ಮರಿಗಳನ್ನು ಸಾಕಿ ಸಲುಹುವುದು ಸಾಮನ್ಯ ವಿಷಯವಲ್ಲ ಬಿಡಿ. ಅದೊಂದು ಮಾನವನ ಇತಿಮಿತಿಗಳನ್ನು ಮೀರಿ ನಡೆದ ಒಂದು ರೋಚಕತೆ. ಅಂತಹ ಹುಲಿ ಮೊನ್ನೆ ವಯೋಸಹಜ ಕಾರಣದಿಂದ ಸಾವನ್ನಪಿದಾಗ ಇಡೀ ಭಾರತ ಕಣ್ಣೀರಿಡುತ್ತದೆ. ಅದರ ಸಾವನ್ನು ಭಕ್ತಿಯಿಂದ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಿ ಕಳುಹಿಸುವ ದೃಶ್ಯಗಳು ನಮ್ಮನ್ನು ಒಮ್ಮೆ ಕಲಕುತ್ತವೆ.

ಇಂತಹ ಉದಾಹರಣೆ ಇರುವ ಭಾರತ ಒಂದು ಕಡೆಯಾದರೆ, ಅದೇ ನಮ್ಮ ರಾಜ್ಯದ ಮೇಕೆದಾಟು ಕಾಡಿನಲ್ಲಿ ಹುಲಿಗಳು ತನ್ನ ಅಧಿಪತ್ಯ ಸಾರಲು ಸಜ್ಜಾಗಿರುವ ಹೊತ್ತಿನಲ್ಲಿ, ಆನೆಗಳು ನೂರಾರು ವರ್ಷಗಳಿಂದ ಬದುಕಿ ನಲಿಯುತ್ತಿರುವ ಸಮಯದಲ್ಲಿ , ಹೊಳೆ ಮತ್ತಿ ಮರಗಳು ನಗು ನಗುತ್ತಾ ತಲೆ ನಿಂತಿರುವಲ್ಲಿ ಇಡೀ ಪರಿಸರವನ್ನು ಮಾರಣಹೋಮ ಮಾಡಲು ಹೊರಟಿರುವ ನಮ್ಮ ವ್ಯವಸ್ಥೆಯು ಎಂತಹ ಮೂರ್ಖ ಕೆಲಸ ಮಾಡುತ್ತಿದೆ ಎಂದನಿಸುವುದಿಲ್ಲವೆ !?

ಕಳೆದ ವರ್ಷ ಕೇರಳದಲ್ಲಿ ಬಸುರಿ ಆನೆಯೊಂದರ ಸೊಂಡಿಲಿನಲ್ಲಿ ಸಿಡಿಮದ್ದು ಸಿಡಿದು ನೋವು ತಾಳಲಾಗದೆ ನೀರಿನಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದು, ಕೊರೋನಾ ಎಂಬ ಜೀವಿ ಮಾನವನಿಗೆ ಹಿಗ್ಗಾ ಮುಗ್ಗಾ ಬಾರಿಸುತ್ತಲೆ ಇರುವುದು, ಮಿಡತೆಗಳ ದಾಳಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು, ಮೊನ್ನೆ ನಾಗರಹೊಳೆಯಲ್ಲಿ ಹುಲಿ ಕಾಡು ದಾಟಿ ರೈತರ ಹೊಲಗಳಿಗೆ ನುಗ್ಗಿ ತಂದಿಟ್ಟ ಆತಂಕವೂ ಸೇರಿದಂತೆ ಈ ಮಾನವ ಪ್ರಾಣಿ ಸಂಘರ್ಷದಿಂದ ಹುಟ್ಟಿಕೊಂಡಿರುವ ಅನಾಹುತಗಳು ಜೀವಂತವಾಗಿರುವಂತೆಯೇ ಇಂತಹ ಅಮೂಲ್ಯ ಕಾಡುಗಳು ನಾಶವಾಗುವಂತಹ ವಿನಾಶಕಾರಿ ಯೋಜನೆಗಳು ಬಂದರೆ ಅದು ಪ್ರಕೃತಿಯ ಒಡಲು ಬಗೆದ ಕೆಲಸಕ್ಕೆ ಸಮ.

‍ಲೇಖಕರು Admin

January 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: