ಧನಂಜಯ ಮೂರ್ತಿ ಓದಿದ ‘ಓದಿನ ಒಕ್ಕಲು’

ಜಿ.ಎನ್. ಧನಂಜಯ ಮೂರ್ತಿ

—–

ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ವಿಮರ್ಶೆ ಬಳಲಿದೆ ಎನ್ನುವ ಕೊರಗು ಈಚೆಗೆ ಹೆಚ್ಚಾಗಿದೆ. ಆದರೆ ಇದನ್ನು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ನಟರಾಜ್ ಹುಳಿಯಾರ್, ಮೇಟಿ ಮಲ್ಲಿಕಾರ್ಜುನ, ವೆಂಕಟೇಶ್ ನೆಲ್ಲಿಕುಂಟೆ, ಎ.ನಾರಾಯಣ, ವಿನಯ ಒಕ್ಕುಂದ, ರಂಗನಾಥ ಕಂಟನಕುಂಟೆ ಮತ್ತು ಸುರೇಶ್ ನಾಗಲಮಡಿಕೆ ಮುಂತಾದವರು ಲೋಕದ ನಡವಳಿಕೆಯನ್ನು ಸಾಹಿತ್ಯ ಪಠ್ಯಗಳ ಮೂಲಕ ನಿಷ್ಠುರವಾಗಿ ನೋಡುತ್ತಿದ್ದಾರೆ.

ಇಲ್ಲಿ ಉಲ್ಲೇಖಗೊಂಡಿರುವ ವ್ಯಕ್ತಿಗಳು ಸಾಹಿತ್ಯವನ್ನು ವರ್ತಮಾನದ ಹಿನ್ನೆಲೆಯಿಂದ ವಿಮರ್ಶೆಗೆ ಹಚ್ಚುವುದರ ಜೊತೆಗೆ ಲೋಕದ ಕ್ರಿಯೆಗಳನ್ನು ಮತ್ತು ಅದರ ಬಿಕ್ಕಟ್ಟುಗಳನ್ನು ಅರಿತವಾಗಿ ವಿಶ್ಲೇಷಣೆ ಮಾಡುವ ಚಿಂತಕರೂ ಆಗಿ ಹೊರಹೊಮ್ಮಿರುವುದು ವಿಶೇಷ. ವರ್ತಮಾನದ ತಲ್ಲಣಗಳಿಗೆ ಸ್ಪಂದಿಸಿ ಬರೆಯುತ್ತಿರವ ಇವರುಗಳ ಬರಹಗಳನ್ನು ಗಮನಿಸಿದಾಗ ಕನ್ನಡ ವಿಮರ್ಶೆ ಮಂಕಾಗಿದೆ ಎಂದು ತೀರ ನಿರಾಶರಾಗುವ ಪ್ರಮೇಯವಿಲ್ಲ.

ಸದ್ಯದ ಸ್ಥಿತಿಯಲ್ಲಿ ಸವ್ಯಸಾಚಿಯಂತೆ ವಿಮರ್ಶೆ ಮತ್ತು ಕಾವ್ಯ ಎರಡೂ ಮಾಧ್ಯಮಗಳ ಮೂಲಕ ವೈಚಾರಿಕತೆಯನ್ನೆ ಅಭಿವ್ಯಕ್ತಿಸುತ್ತಿರುವ ರಂಗನಾಥ ಕಂಟನಕುಂಟೆಯವರ ‘ಓದಿನ ಒಕ್ಕಲು’ ಈ ಕೊರಗನ್ನು ಹೋಗಲಾಡಿಸುವ ದಿಶೆಯಲ್ಲಿ ತನ್ನದೆಯಾದ ಮೈಲಿಗಲ್ಲು ನೆಟ್ಟಿದೆ. ಅವರ ‘ಒದಿನ ಜಾಡು’ ಕೂಡ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಗಮನ ಸೆಳೆದಿತ್ತು. ಅವರ ಈ ಹಿಂದಿನ ಕೃತಿ ‘ಕೊಲುವೆನೆಂಬ ಭಾಷೆ’ ಆಧುನಿಕ ಸಮಾಜಗಳ ಸಂದರ್ಭದಲ್ಲಿ ಆಳುವವರ ಭಾಷೆ ಸಂಪೂರ್ಣ ಮಲಿನವಾಗಿರುವುದನ್ನು ಮತ್ತು ಭಾಷೆಯಲ್ಲಿ ಆಕರ್ಷಕವಾದ ಸುಳ್ಳು ನುಡಿಗಟ್ಟುಗಳನ್ನು ಟಂಕಿಸಿ ಆ ಮೂಲಕ ಸರ್ಕಾರಗಳನ್ನು ರಚಿಸುವುದನ್ನು ದಿಟ್ಟತನದಿಂದ ವಿಶ್ಲೇಷಣೆಗೆ ಒಳಪಡಿಸುವ ಚಿಂತನಾತ್ಮಕ ಬರಹಗಳಿಂದ ಕೂಡಿ ಮುಖ್ಯವಾಗಿತ್ತು.

ಹೀಗೆ ಬೇರೆ ಬೇರೆ ನೆಲೆಗಳಿಂದ ಲೋಕವನ್ನು ಗ್ರಹಿಸುವ ಕಂಟನಕುಂಟೆಯವರು ‘ಸೋರೆ ದೋಣಿಯ ಗೀತ’, ‘ನದಿಯ ತೀರದ ನಡಿಗೆ’, ‘ಗೋಡೆಯ ಚಿತ್ರ’, ‘ದೇವನೇಗಿಲು’ ಮತ್ತು ‘ಹೂವಿನ ಬೇಟೆ’ ಎನ್ನುವ ಕವನ ಸಂಕಲನಗಳನ್ನೂ, ‘ಜನರ ವ್ಯಾಕರಣ’, ‘ಸೇನೆಯಿಲ್ಲದ ಕದನ’, ‘ಅರಿವಿನ ಅಡಿಗೆ’ ಎಂಬ ಚಿಂತನೆಯ ಬರಹಗಳ ಕೃತಿಗಳನ್ನು ರಚಿಸಿದ್ದಾರೆ. ಸದ್ಯಕ್ಕೀಗ ಅವರ ‘ಓದಿನ ಒಕ್ಕಲು’ ಎಂಬ ಕೃತಿ ಪ್ರಕಟಗೊಂಡಿದ್ದು, ವರ್ತಮಾನದ ತಲ್ಲಣಗಳನ್ನು ನಮ್ಮ ಮುಖ್ಯ ಸಾಹಿತ್ಯ ಪಠ್ಯಗಳ ಮೂಲಕ ಅನುಸಂಧಾನ ಮಾಡಲು ಪ್ರಯತ್ನಿಸಿರುವುದು ಗಮನಾರ್ಹವಾಗಿದೆ.

ಲೇಖಕರು ವಿಮರ್ಶೆಯನ್ನೆ ಸಹಿಸದ ಕಾಲದ ಸಮಾಜದಲ್ಲಿ ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಕೊಳ್ಳುವುದು ಬಲು ಕಷ್ಟದ ಕೆಲಸ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಪ್ರಸಕ್ತ ಸಾಮಾಜಿಕ ಪರಿಸ್ಥಿತಿ ವಿಮರ್ಶೆಯನ್ನು ಸ್ವೀಕರಿಸಿ ಅಗತ್ಯವಿರುವ ಕಡೆ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ಎನ್ನುವುದು ಅಂತಹ ಕಾರಣಗಳಲ್ಲಿ ಮುಖ್ಯವಾದುದು. ಎಲ್ಲ ಕಾಲದೇಶಗಳಲ್ಲಿಯೂ ಸತ್ಯವನ್ನು ಅರಗಿಸಿಕೊಳ್ಳಲಾಗದ ಒಂದು ವರ್ಗ ಇರಲು ಸಾಧ್ಯ ಮತ್ತು ಅದು ಇರುತ್ತದೆ. ನ್ಯಾಯನಿಷ್ಠೂರಿಗಳಾಗಿದ್ದ ಶರಣರು ತಮ್ಮ ಕಾಲದ ಬಿಕ್ಕಟ್ಟುಗಳನ್ನು ಮೀರಲು ತಾವು ಲೋಕವಿರೋಧಿಗಳೆಂದು ಹೇಳಿಕೊಂಡರು. ಪ್ರಸ್ತುತ ಕನ್ನಡ ವಿಮರ್ಶೆಯ ಬರಹಗಳು ವೈಚಾರಿಕತೆಯ ಸ್ವರೂಪವನ್ನೂ ಪಡೆದುಕೊಂಡಿರುವುದರಿಂದ ಹಾಗೂ ಈ ಕ್ಷಣಕ್ಕೆ ವಿಮರ್ಶೆಯ ಜವಾಬ್ದಾರಿಯೂ ಅದಾಗಿರುವುದರಿಂದ ಪ್ರಭುತ್ವಗಳಿಗೆ ವಿಮರ್ಶಾತ್ಮಕ ಚಿಂತನೆಗಳು ಅಪರಾಧಗಳಾಗಿ ಕಾಣುತ್ತವೆ. ಇಲ್ಲಿ ಕಂಟನಕುಂಟೆಯವರು ವಿಮರ್ಶಕನ ಸಾಮಾಜಿಕ ಜವಬ್ಧಾರಿಯನ್ನು ಸಮರ್ಥವಾಗಿಯೆ ಯಾವುದೆ ಭಿಡೆಗಳಿಲ್ಲದೆ ನಿಭಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ‘ಓದಿನ ಒಕ್ಕಲು’ ಸಾಹಿತ್ಯ ಪಠ್ಯಗಳ ಮೂಲಕ ಸದ್ಯದ ಬಿಕ್ಕಟ್ಟುಗಳನ್ನು ಬಿಡಿಸುವ ಮತ್ತು ನಮ್ಮ ದೊಡ್ಡ ದೊಡ್ಡ ಲೇಖಕರ ಚಿಂತನೆಗಳನ್ನು ಈ ಹೊತ್ತಿನ ಪರಿಪ್ರೇಕ್ಷ್ಯದಲ್ಲಿಟ್ಟು ನೋಡುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.

ಲೇಖಕರು ಕನ್ನಡ ಕಥನ ಸಾಹಿತ್ಯದಲ್ಲಿ ನಿರೂಪಕರಿಗೆ ಭಾಷಿಕ ಸ್ವಾತಂತ್ರ್ಯವಿರುವುದಿಲ್ಲ ಎನ್ನುವುದರ ಮೇಲೆ ಗಂಭೀರವಾದ ಚರ್ಚೆಯನ್ನು ಮಾಡಿದ್ದಾರೆ. ಇದಕ್ಕೆ ನಮ್ಮ ಸಾಹಿತ್ಯ ವಿಮರ್ಶಕರು ಮಹತ್ವದ ಕಲಾಕೃತಿಗಳೆಂದು ಪರಿಗಣಿಸಿರುವ ಕೃತಿಗಳಲ್ಲಿಯೆ ನಿದರ್ಶನಗಳಿವೆ. ಅಂತಸ್ತು ಇರುವ ವ್ಯಕ್ತಿಗೆ ಬಹುವಚನವನ್ನು ಹಾಗೂ ಸಾಮಾಜಿಕವಾಗಿ ಅಮಾನ್ಯನಾದವನಿಗೆ ಏಕವಚನವನ್ನು ಬಳಸಿರುವ ಉದಾಹರಣೆಗಳು ನಮಗೆ ದಂಡಿಯಾಗಿ ಸಿಗುತ್ತವೆ.

ಉದಾಹರಣೆಗೆ ‘ಮಲೆಗಳಲ್ಲಿ ಮದುಮಗಳ’ಲ್ಲಿ ಸುಬ್ಬಣ್ಣ ಹೆಗ್ಗಡೆಗೂ ಉಳಿದ ದಲಿತ ಪಾತ್ರಗಳಿಗೂ ನಿರೂಪಕರು ಬಳಸುವ ಭಾಷೆಯನ್ನು ನೋಡಿದರೆ ಇದು ಅರಿವಾಗುತ್ತದೆ. ಆದರೆ ಇದು ಕಥನಕಾರರ ಸಮಸ್ಯೆಯಲ್ಲ. ಅದಕ್ಕೆ ಲೇಖಕರು ‘ಭಾಷೆಯ ಬಳಕೆಯನ್ನು ಆಯಾ ಸಮಾಜದ ರಚನೆ ಮತ್ತು ರೂಢಿಗಳು ನಿಯಂತ್ರಿಸುತ್ತಿರುತ್ತವೆ ಇಂತಹ ಕಡೆಗಳಲ್ಲಿ ನಿರೂಪಕರು ಸ್ವಾತಂತ್ರ್ಯವಹಿಸಿ ಬಹುವಚನ ಬಳಸಿದರೂ ಕೂಡ ಅದು ವಸ್ತುನಿಷ್ಟತೆಗೆ ವಾಸ್ತವಕ್ಕೆ ವಿರುದ್ಧವಾಗಿರುತ್ತದೆ’ ಎಂಬ ಸಂದಿಗ್ದವನ್ನು ಗುರುತಿಸುತ್ತಾರೆ.

ಈ ಬಿಕ್ಕಟ್ಟನ್ನು ದಲಿತ ಸಾಹಿತಿಗಳೂ ಗೆಲ್ಲಲು ಸಾಧ್ಯವಾಗಿಲ್ಲ. ಆದಾಗ್ಯೂ ಈ ಸಂದಿಗ್ದವನ್ನು ಮೀರುವ ಭಾಷಿಕ ತಂತ್ರಗಳನ್ನು ಕಥನಕಲೆಯಲ್ಲಿ ನಾವಿನ್ನು ಕಂಡುಕೊಳ್ಳಬೇಕಿದೆ. ‘ನಿಜಾತೀತ ಕಾಲದ ನುಡಿ ಮತ್ತು ಕಾವ್ಯದ ಬಿಕ್ಕಟ್ಟು ಲೇಖನದಲ್ಲಿ ನಾವು ಬದುಕುತ್ತಿರುವ ಕಾಲ ಸುಳ್ಳುಗಳನ್ನೆ ಒಂದು ಮೌಲ್ಯವನ್ನಾಗಿ ಒಪ್ಪಿಸಲು ಹವಣಿಸುತ್ತಿರುವುದನ್ನು ಈಚಿನ ಕವಿತೆಗಳ ಮೂಲಕ ವಿಶ್ಲೇಷಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಹಾಲಿ ಮುಖ್ಯ ನ್ಯಾಯಮೂರ್ತಿಗಳು ಎಂ.ಸಿ.ಛಾಗ್ಲಾರವರ ಮೇಲಿನ ಒಂದು ಉಪನ್ಯಾಸದಲ್ಲಿ ಸದ್ಯದ ಕಾಲವನ್ನು ‘ಸತ್ಯೋತ್ತರ ಕಾಲ’ ಎಂದು ಕರೆದಿರುವುದನ್ನು ಇದರ ಹಿನ್ನೆಲೆಯಲ್ಲಿ ನೋಡಿದರೆ, ನಾವು ಬದುಕುತ್ತಿರುವ ಕಾಲ ಸುಳ್ಳಿನಿಂದ ಅಚ್ಛಾದಿತವಾಗಿರುವುದು ವೇದ್ಯವಾಗುತ್ತದೆ. ಇಂಥಹ ಮಿಥ್ಯಸಂಕಥನಗಳ ಕಾಲದಲ್ಲಿಯೆ ಸಾಹಿತ್ಯ ಮತ್ತು ಕಲೆಗಳ ಹೊಣೆಗಾರಿಕೆ ತೀವ್ರವಾಗಿರುತ್ತದೆ.

ಕನ್ನಡ ಸಾಹಿತ್ಯಕ್ಕೆ ಕಣ್ಣುಕೊಟ್ಟ ವಚನ ಚಳವಳಿಯನ್ನು ಮಠೀಯ ಸ್ವತ್ತನ್ನಾಗಿ ಮಾಡಿಕೊಳ್ಳಲು ತವಕಿಸುತ್ತಿರುವ ಈ ಹೊತ್ತಿನಲ್ಲಿ, ವಚನ ಸಾಹಿತ್ಯವನ್ನು ಯಾವ ದೃಷ್ಟಿಕೋನದ ಹಿನ್ನೆಲೆಯಲ್ಲಿ ಓದಬೇಕೆಂಬ ಸ್ಪಷ್ಟತೆ ‘ಜೇಡರ ದಾಸಿಮಯ್ಯನ ವಚನಗಳಲ್ಲಿ ಲೋಕಸಂವಾದ’ ಲೇಖನ ಹೇಳುತ್ತದೆ. ತರಗತಿಗಳಲ್ಲಿ ಈಗಲೂ ವಚನಗಳನ್ನು ಭಕ್ತಿಗೀತೆಗಳಂತೆ ಗಾನಪಾಡುವ ಅಧ್ಯಾಪಕರಿದ್ದಾರೆ. ಲೇಖಕರೆ ಹೇಳುವಂತೆ ‘ಇಂದು ವಚನಗಳನ್ನು ಷಟ್ಸ್ಥಲಗಳು ಮತ್ತು ಅಶ್ಟಾವರಣಗಳ ಮಠೀಯ ಚೌಕಟ್ಟಿನಲ್ಲಿ ಓದದೆ ಆಳವಾದ ವೈಚಾರಿಕ ತಳಹದಿಯ ಮೇಲೆ ಓದಿ ವಿಶ್ಲೇಷಿಸಬೇಕು’ ಎನ್ನುವುದನ್ನು ಸಾಹಿತ್ಯದ ವಿದ್ಯಾರ್ಥಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಹನ್ನೆರಡನೆ ಶತಮಾನದ ಶರಣ ಚಳವಳಿ ಹಲವು ಜಾತಿಯ ಮರಗಳು ಕೂಡಿ ಸೊಂಪಾಗಿರುವ ಕಾಡಿನಂತೆ ನಳನಳಿಸಿತ್ತು. ವರ್ತಮಾನದ ಕನ್ನಡ ಸಮಾಜ ಶರಣರನ್ನು ಒಂದೊಂದು ಜಾತಿಯ ಹೆಸರಿಗೆ ಬಂಧಿಸಿ ಅವರ ವಿಚಾರಧಾರೆಗಳ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ ವಚನ ಸಾಹಿತ್ಯವನ್ನು ವೈಚಾರಿಕತೆಯ ಹಿನ್ನೆಲೆಯಲ್ಲಿ ಓದದಿದ್ದರೆ ನಾವು ಮತ್ತಷ್ಟು ಕಳೆದುಕೊಳ್ಳುತ್ತೇವೆಂಬ ಎಚ್ಚರವಿರಲೇಬೇಕು. ಯಾಕೆಂದರೆ ವಚನಕಾರರ ಮುಖ್ಯ ಉದ್ದೇಶವೆ ಲೋಕದ ಬಾಳನ್ನು ವೈಚಾರಿಕ ಪಾತಳಿಯ ಮುಖೇನ ಹಸನು ಮಾಡುವುದಾಗಿತ್ತು.

ಇಲ್ಲಿ ವಚನ ಚಳವಳಿಯನ್ನು ದಾಸ ಸಾಹಿತ್ಯಕ್ಕೆ ತಾಳೆ ಹಾಕಿ ನೋಡಿದರೆ ವಚನ ಚಳವಳಿಯ ಮಹತ್ವ ಮನವರಿಕೆಯಾಗುತ್ತದೆ. ದಾಸ ಸಾಹಿತ್ಯ ವಿಷ್ಣುಭಕ್ತಿಯಲ್ಲಿ ಮುಳುಗೇಳುವ ಸಂದರ್ಭದಲ್ಲಿ ಕನಕದಾಸರೊಬ್ಬರೆ ಅಸ್ಪೃಶ್ಯತೆಯ ಬಗ್ಗೆ ಮಾತನಾಡಬೇಕಾಯಿತು. ದಾಸ ಸಾಹಿತ್ಯ ‘ಸಾಮಾಜಿಕ ಒಳಗೊಳ್ಳುವಿಕೆ’ಯನ್ನೆ ಕಡೆಗಣಿಸಿ, ವಚನಕಾರರ ‘ದೇಹದೇಗುಲ’ ಪರಿಕಲ್ಪನೆಯನ್ನು ಮೂದಲಿಸುವಂತೆ ಕಾಣದ ದೇವರನ್ನು ‘ಕೀರ್ತಿಸು’ವುದರಲ್ಲಿಯೆ ದಣಿದಿದ್ದು ಸುಳ್ಳಲ್ಲ. ವಚನ ಸಾಹಿತ್ಯದಲ್ಲಿ ಅಂತ್ಯಜ ಮೊದಲಾಗಿ ಬ್ರಾಹ್ಮಣ ಕಡೆಯಾಗಿ ಎಲ್ಲರೂ ಶಿವಭಕ್ತರೆ. ಆದರೆ ದಾಸ ಸಾಹಿತ್ಯದಲ್ಲಿ ಶೂದ್ರ ಮತ್ತು ದಲಿತರ ಒಳಗೊಳ್ಳುವಿಕೆಯೆ ನಗಣ್ಯವಾಗಿದೆ. ಅಷ್ಟೆ ಅಲ್ಲ ಅದು ‘ಅರಿತವರ ಹರಿಯ ಪೂಜೆ’. ಈ ವಿಷಯದ ಮೇಲೆ ಇಲ್ಲಿ ಮಾಡಿರುವ ಚರ್ಚೆಗಳು ದಾಸ ಸಾಹಿತ್ಯವನ್ನು ಇದೂವರೆಗೂ ಅಧ್ಯಯನ ಮಾಡಿದ್ದ ಬಗೆಯನ್ನು ಛಿದ್ರಗೊಳಿಸಿ, ಇನ್ನೂ ಮುಂದೆ ಅದನ್ನು ನಮ್ಮ ಸಾಮಾಜಿಕ ಹಿನ್ನೆಲೆಯಿಂದ ವಚನ ಚಳವಳಿಯೊಂದಿಗೆ ತುಲನೆ ಮಾಡಿ ನೋಡಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತವೆ. ಈ ವಿಚಾರವಾಗಿ ಇನ್ನೂ ಮಹತ್ವದ ಅಧ್ಯಯನಗಳಾಗಬೇಕಾದ ಅಗತ್ಯವನ್ನು ಕುರಿತು ಲೇಖಕರ ಚಿಂತನೆಗಳು ಓದುಗರನ್ನು ಚೋದಿಸುತ್ತದೆ.

ಕೃತಿಯಲ್ಲಿ ‘ಭರತೇಶ ವೈಭವ’ದ ಹಿನ್ನೆಲೆಯಿಂದ ನಮ್ಮನ್ನಾಳುವವರ ಹಳವಂಡಗಳನ್ನು ಪರೀಕ್ಷೆಗೆ ಒಳಪಡಿಸಿರುವುದು ನಮ್ಮ ಮಹತ್ವದ ಸಾಹಿತ್ಯ ಪಠ್ಯಗಳನ್ನು ವರ್ತಮಾನದ ಕನ್ನಡಿ ಬಳಸಿ ನೋಡಿದಾಗ ಅವುಗಳು ಪ್ರತಿಬಿಂಬಿಸುವ ಚಿತ್ರಗಳು ಹೇಗೆ ಮುಖ್ಯವಾಗುತ್ತವೆ? ಎಂಬುದು ಮನೋಜ್ಞವಾಗಿದೆ. ಭರತ ತನ್ನ ಕೀರ್ತಿಯನ್ನು ಕೆತ್ತಲು ವೃಷಭಾಚಲಕ್ಕೆ ಹೋದಾಗ ಅಲ್ಲಿ ಕಿಕ್ಕಿರಿದಿರುವ ಪೂರ್ವಸೂರಿಗಳ ಹೆಸರುಗಳನ್ನು ನೋಡಿ ಗರ್ವಭಂಗವನ್ನು ಅನುಭವಿಸಬೇಕಾಯಿತು. ಅಲ್ಲಿ ಇದೂವರೆಗೆ ಇದ್ದ ಹೆಸರುಗಳನ್ನು ಅಳಿಸಿ ತನ್ನದನ್ನು ಕೆತ್ತಿಸಬೇಕಾಗುತ್ತದೆ. ಆತನ ನಂತರ ಬಂದವನು ಇವನ ಹೆಸರನ್ನು ನಾಶವಾಗಿಸಿ ತನ್ನದನ್ನು ನೆಡುವುದಿಲ್ಲ ಎನ್ನುವುದಕ್ಕೆ ಭರತನಿಗೆ ಯಾವ ಖಾತ್ರಿಯಿತ್ತು? ಆದರೆ ಅವನು ಅದನ್ನು ಅರ್ಥ ಮಾಡಿಕೊಳ್ಳುವ ಗೊಡವೆಗೆ ಹೋಗುವುದಿಲ್ಲ. ಸರ್ವಾಧಿಕಾರ ಯಾವತ್ತಿಗೂ ತನ್ನ ಆಚೆಗೆ ಯೋಚಿಸುವ ವಿವೇಕವನ್ನು ಕಳೆದುಕೊಂಡಿರುತ್ತದೆ ಅನ್ನಿಸುತ್ತದೆ.

ಭಾರತದಲ್ಲಿ ಜನರು ವಾಸಿಸುವ ನಗರ ಮತ್ತು ಮೊಹಲ್ಲಾಗಳ ಹೆಸರುಗಳು ಧರ್ಮದ ಕಾರಣದಿಂದ ಇಂದಿನ ರಾಜಕಾರಣಕ್ಕೆ ಅಸ್ತ್ರಗಳಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಉತ್ತರ ಪ್ರದೇಶದಲ್ಲಿ ಇದರ ಪ್ರಹಸನವೆ ಪ್ರಭುತ್ವದ ಒಂದು ಭಾಗವಾಗಿದೆ. ಇದು ದಕ್ಷಿಣ ಭಾರತವನ್ನೂ ತಲುಪಿ ಆಂಧ್ರಪ್ರದೇಶದ ‘ಬಾದ್’ ಗಳ ಮೇಲೂ ಕಣ್ಣು ಹಾಕಿದೆ. ಈ ಪ್ರಹಸನ ಮುಂದುವರಿದು ‘ಭಾರತವೋ ಇಂಡಿಯಾವೋ’ ಎನ್ನುವ ಹಂತವನ್ನು ತಲುಪಿದೆ. ಚರಿತ್ರೆಯನ್ನು ಇದ್ದ ಹಾಗೆಯೆ ನೋಡಿ ಅದರಿಂದ ಪಾಠ ಕಲಿಯಬೇಕಾದ ಪ್ರಭುತ್ವಗಳು ತಮಗೆ ಬೇಕಾದ ಹಾಗೆ ಸಂಕಥನಗಳನ್ನು ರೂಪಿಸಲು ಹೊರಟಿರುವುದು ಈಗ ಗುಪ್ತವಾಗಿಯೇನು ಉಳಿದಿಲ್ಲ. ಹೀಗೆ ಹಳೆಯದನ್ನು ಅಳಿಸಿ ನಮಗೆ ಬೇಕಾದ ಹೊಸದನ್ನು ಕೆತ್ತುವ ಆಟ ಅವರ ತರವಾಯವೂ ಮುಂದುವರಿಯಬಹುದಲ್ಲವೆ? ಈ ಬಗೆಗೆ ಪ್ರಭುತ್ವಗಳಿಗೆ ಪರಿಜ್ಞಾನ ಇದ್ದಿದ್ದರೆ, ವೃಥಾ ಕಾಲಹರಣ ಮಾಡುವುದನ್ನು ಬಿಟ್ಟು ಜನಕಲ್ಯಾಣಕ್ಕಾಗಿ ಸಮಯವನ್ನು ವಿನಿಯೋಗಿಸುತ್ತಿದ್ದವು. ವಾರಸುದಾರರು ಬದಲಾದಂತೆ ಪಹಣಿ ಖಾತೆಗಳಲ್ಲಿರುವ ಹೆಸರುಗಳು ಬದಲಾಗುವ ರೀತಿಯಲ್ಲಿ ನಗರ ಮತ್ತು ಮೊಹಲ್ಲಾಗಳ ಹೆಸರುಗಳು ರಾಜಕೀಕರಣಗೊಂಡಿರುವುದು ನಮ್ಮ ಕಾಲದ ದೊಡ್ಡ ವಿಪರ್ಯಾಸ. ಈ ಮರುನಾಮಕಾರಣದ ರಾಜಕಾರಣವನ್ನು ‘ನೃಪಾಲನ ಗರ್ವರಸ ಸೋರಿತೇ’? ಲೇಖನದ ಮೂಲಕ ಮಹತ್ವದ ಚಿಂತನೆಗೆ ಹಚ್ಚಲಾಗಿದೆ.

‘ನೇಗಿಲ ಗೆರೆಯೆ ಸಗ್ಗದ ಹಾದಿ’ ಮತ್ತು ‘ಬೇಂದ್ರೆ ಕಣ್ಣಲ್ಲಿ ಗಾಂಧಿ’ ಎಂಬ ಲೇಖನಗಳಲ್ಲಿ ಕನ್ನಡದ ಇಬ್ಬರು ದೊಡ್ಡ ಕವಿಗಳಾದ ಕುವೆಂಪು ಮತ್ತು ಬೇಂದ್ರೆಯವರ ಕಾವ್ಯಗಳಿಂದ ನಮ್ಮ ಕಾಲದ ಬಿಕ್ಕಟ್ಟುಗಳನ್ನು ಹೇಗೆ ಎದುರುಗೊಳ್ಳಬಹುದೆಂಬುದನ್ನು ವಿಶ್ಲೇಷಣೆ ಮಾಡಲಾಗಿದೆ. ರೈತರ ಹಾದಿಗೆ ಮುಳ್ಳಿನ ಮೊಳೆ, ಗಾಂಧಿಯ ಗೊಂಬೆಗೆ ಬಂದೂಕಿನ ಗುರಿ ಇಟ್ಟ ನಿದರ್ಶನಗಳಿಗೆ ನಾವು ಬದುಕುತ್ತಿರುವ ಕಾಲ ಸಾಕ್ಷಿಯಾಗಿರುವಾಗ, ಈ ಲೇಖನಗಳು ಮಹತ್ವ ಪಡೆದುಕೊಳ್ಳುತ್ತವೆ. ವೈರುಧ್ಯವೆಂದರೆ ಭಾರತದಲ್ಲಿ ಯಾವುದೆ ಸಿದ್ಧಾಂತದ ರಾಜಕೀಯ ಪಕ್ಷಗಳು ಅಧಿಕಾರಕ್ಕೇರಲು ರೈತ ಮತ್ತು ಗಾಂಧಿಯವರ ಹೆಸರನ್ನು ಪಠಿಸಿಯೆ ತೀರುತ್ತವೆ.

ಇನ್ನು ಕನ್ನಡ ದಲಿತ ಸಾಹಿತ್ಯ ವೈದಿಕ ಸಂಸ್ಕೃತಿಗೆ ಬದಲಾಗಿ, ಬಹುಜನರ ಬದುಕಿನ ಭಾಗವಾಗಿರುವುದನ್ನು ಮತ್ತು ಅದು ಚರಿತ್ರೆ ಹಾಗೂ ಪುರಾಣಗಳಿಂದ ಎತ್ತಿಕೊಂಡ ವಸ್ತುಗಳು ಯಾಕೆ ಭಿನ್ನವಾಗಿವೆ? ಎಂಬುದನ್ನು ಸಂವೇದನಾಶೀಲತೆಯಿಂದ ಬಿಡಿಸುವ ಯತ್ನ ಮಾಡಲಾಗಿದೆ. ಈ ವೈದಿಕ ಪುರಾಣಗಳ ಜಾಗವನ್ನು ಬುದ್ಧಪ್ರಜ್ಞೆ ಆವರಿಸಿದ್ದರಿಂದಲೆ ದಲಿತ ಸಾಹಿತ್ಯ ಎಲ್ಲರ ದನಿಯಾಗಲು ಸಾಧ್ಯವಾಯಿತೆಂಬುದನ್ನು ಲೇಖಕರು ಒತ್ತಿ ಹೇಳುತ್ತಾರೆ.

ಕಿ.ರಂ ಅವರ ‘ಕಾಲಜ್ಞಾನಿ ಕನಕ’ ಮತ್ತು ಚೆನ್ನಪ್ಪ ಕಟ್ಟಿಯವರ ಕತೆಗಳ ಮೇಲಿನ ವಿಮರ್ಶೆಗಳು ಸಾಹಿತ್ಯ ಕೃತಿಗಳನ್ನು ಯಾವುದೆ ಪೂರ್ವಗ್ರಹಗಳಿಲ್ಲದೆ ನೋಡಿದಾಗ ಮಾತ್ರ ವಿಮರ್ಶೆಗೆ ನ್ಯಾಯ ಒದಗಿಸಬಹುದು ಎನ್ನುವುದಕ್ಕೆ ಸಾಣೆ ಹಿಡಿದಿವೆ. ವಿಮರ್ಶಕ ಕೃತಿಗೆ ನಿಷ್ಟನಾಗಿದ್ದಾಗಲೆ ಈ ತರದ ಫಲಿತಗಳನ್ನು ಅವನಿಂದ ಹೊರ ತೆಗೆಯಲು ಸಾಧ್ಯ. ಕೃತಿಯಲ್ಲಿ ಚರ್ಚೆಗೆ ಎತ್ತಿಕೊಂಡಿರುವ ಪಠ್ಯಗಳ ಮಿತಿಗಳನ್ನು ಬೊಟ್ಟು ಮಾಡಿ ತೋರುವುದರಿಂದ, ಸಮಕಾಲೀನ ಸಾಹಿತ್ಯಕ್ಕೆ ಆ ಮಿತಿಗಳನ್ನು ಮೀರಬಹುದಾದ ದಾರಿಗಳನ್ನು ಶೋಧಿಸಿಕೊಳ್ಳುವಂತೆ ಪ್ರೇರೇಪಿಸುವ ಕೆಲಸವನ್ನೂ ಮಾಡಲಾಗಿದೆ.

ಕಡಲೆಯನ್ನು ಮೆಲ್ಲುವಾಗ ಸಿಕ್ಕ ಕಲ್ಲಿನಂತೆ ಮುದ್ರಣದೋಷಗಳು ಕಿರಿಕಿರಿಯುಂಟುಮಾಡುತ್ತವೆ. ಲೇಖಕರು ಕನ್ನಡ ಬರವಣಿಗೆಯಲ್ಲಿ ಹೊಸ ಸಾಧ್ಯತೆಗಳನ್ನು ಪ್ರಕಟಪಡಿಸುವವರಾಗಿರುವುದರಿಂದ ಈ ಮಾತನ್ನು ಹೇಳಬೇಕಾಗಿದೆ. ಇದನ್ನು ಹೊರತುಪಡಿಸಿದರೆ ಸಾಹಿತ್ಯ, ಶಿಕ್ಷಣ, ಭಾಷೆ, ಪರಿಸರ, ಜಾಗತೀಕರಣ, ಪ್ರಭುತ್ವ ಮತ್ತು ಪ್ರೇಮ ಇವೇ ಮುಂತಾದ ಆಧುನಿಕ ಮಾನವನ ಆಕರ್ಷಣೆಗಳನ್ನು ಸಾಹಿತ್ಯದ ಪಠ್ಯಗಳ ಮೂಲಕ ವಿಭಿನ್ನವಾಗಿ ನೋಡಬಹುದಾದ ಸಾಧ್ಯತೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ‘ಓದಿನ ಒಕ್ಕಲು’ ಸಮಕಾಲೀನ ಕನ್ನಡ ವಿಮರ್ಶಾ ಕ್ಷೇತ್ರಕ್ಕೆ ಒಂದು ಗಮ್ಯ ಕೊಡುಗೆ.

‍ಲೇಖಕರು avadhi

November 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: